ದೇವಿಯ ಪ್ರಸಾದ

ದೇವಿಯ ಪ್ರಸಾದ  

ಲೇಖನ - ಪಲ್ಲವಿ ಕಟ್ಟಿ, ಸಿಡ್ನಿ



ಎರಡು ಮೂರು ವರ್ಷಗಳ ಹಿಂದಿನ ಮಾತು. ಅಂದು ಶನಿವಾರ ರಜಾ ದಿನ. ಮನೆಯಲ್ಲಿ ನನ್ನ ಗಂಡ ಮಗಳಿಗೆ ಏನಾದರೂ ವಿಶೇಷವಾದ ಅಡುಗೆ ಬೇಕಾಗಿತ್ತು ಮಧ್ಯಾಹ್ನದ ಊಟಕ್ಕೆ . ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ತರಲು ಪಕ್ಕದ ಬೀದಿಯಲ್ಲಿರುವ ಅಂಗಡಿಗೆ ಹೊರಟು ನಿಂತೆ. ನನ್ನ ಮಗಳು ಸಿಯಾ ಅಮ್ಮಾ ನಾನೂ ಬರುತ್ತೇನೆ ಅಂದವಳೇ ಕಾಲಿಗೆ ಚಪ್ಪಲಿ ಏರಿಸಿಕೊಂಡು ಸಿದ್ಧಳಾಗಿ ನಿಂತಳು. ನಾನು ಸರಿ ಎಂದು ಅವಳನ್ನು ಕರೆದುಕೊಂಡು ಹೊರಟೆ. 

ಅಂಗಡಿ ನಮ್ಮ ಮನೆಯಿಂದ ಒಂದು 100 ಮೀಟರ್ ದೂರದಲ್ಲಿದೆ. ನಾವು ಮನೆಯಿಂದ ಹೊರಗೆ ಬಂದಾಕ್ಷಣ ನನ್ನ ಮಗಳಿಗೆ ಅರ್ಥವಾಯಿತು ನಾವು ನಡೆದುಕೊಂಡು ಅಂಗಡಿಗೆ ಹೊರಟಿದ್ದೇವೆ ಎಂದು. ಅಮ್ಮ ನಾವು ಕಾರಿನಲ್ಲಿ ಹೋಗೋಣ ನಡೆದುಕೊಂಡು ಬೇಡ ಅಂದಳು. ಅದಕ್ಕೆ ನಾನು ಇಲ್ಲಾ ಪುಟ್ಟಿ ಪಕ್ಕದಲ್ಲೇ ಇರುವ ಅಂಗಡಿ ಅದಕ್ಕೇಕೆ ಕಾರು ಎಂದೆ. ಅದಕ್ಕೆ ಅವಳು ಓ ಹೌದಾ ಸರಿ ಹಾಗಾದರೆ ಎಂದು ಸುಮ್ಮನಾದಳು. 

ನನ್ನ ಮನಸ್ಸು ಇದೇನಪ್ಪಾ ಎರಡನೇ ಮಾತಾಡದೇ ಒಪ್ಪಿಕೊಂಡಳಲ್ಲಾ ಎಂದು ಸಂತೋಷಪಟ್ಟಿತ್ತು. ಆದರೇ ಆ ಸಂತೋಷ ಬಹಳ ಹೊತ್ತು ಇರಲಿಲ್ಲ. ಸ್ವಲ್ಪ ಸಮಯದ ನಂತರ ಹೇಳಿದಳು ಮುಂದಿನ ಸಲ ದೂರದ ಅಂಗಡಿಗೆ ಹೋಗೋಣ ಅಂದರೆ ಕಾರು ತೊಗೊಂಡು ಹೋಗ ಬಹುದು. ಆಕೆಯ ಆ ಸಲಹೆಗೆ ಖುಷಿ ಪಡಲೋ ಅಥವಾ ಸಣ್ಣ ವಯಸ್ಸಿನಲ್ಲೇ ಸಿಕ್ಕ ಎಲ್ಲಾ ಸೌಲಭ್ಯಗಳಿಂದ ನಾಲ್ಕು ಹೆಜ್ಜೆ ನಡೆಯಲೂ ಇಷ್ಟವಿಲ್ಲದ ಮಗುವನ್ನು ನೋಡಿ ಬೇಸರ ಪಡಬೇಕೋ ಗೊತ್ತಾಗದಾಗಿತ್ತು. ಇದೇ ವಿಚಾರಗಳಿಂದ ತುಂಬಿದ ನನ್ನ ಮನಸ್ಸು ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿತ್ತು. 

ನಾನು ತುಂಬಾ ಸಣ್ಣವಳಿದ್ದಾಗಿನ ಸಂಗತಿ.  ಅಮ್ಮ ಶಾಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದರು. ಹೀಗಾಗಿ ನಾನು ಹೆಚ್ಚು ಸಮಯ ಅಪ್ಪನ ಜೊತೆಗೆ ಇರುತ್ತಿದ್ದೆ. ಅಪ್ಪ ವೃತ್ತಿಯಲ್ಲಿ ವೈದ್ಯರು ಹೀಗಾಗಿ ಎಷ್ಟೋ ಬಾರಿ ನಾನು ನನ್ನ ಅಪ್ಪನ ಜೊತೆ ಅವರ ದವಾಖಾನೆಗೆ ಹೋಗುತ್ತಿದ್ದೆ. ಮಧ್ಯಾಹ್ನನದವರೆಗೂ ಅಲ್ಲಿ ಇದ್ದು ನಂತರ ಮನೆಗೆ ಬರುತ್ತಿದ್ದೆವು .  ನಮ್ಮ ಮನೆಯಿಂದ ದವಾಖಾನೆ 2-3 ಕಿಮೀ ದೂರ ಇದ್ದಿತ್ತು. ದಾರಿಯ ಮಧ್ಯದಲ್ಲಿ ಒಂದು ದೇವಸ್ಥಾನ ಇತ್ತು. ಅದು ಅಲ್ಲಿಯ ಗ್ರಾಮ ದೇವತೆ ಕರು ಮಾರಿಯಮ್ಮನ ದೇವಸ್ಥಾನ.  

ದವಾಖಾನೆಯಿಂದ ಮಧ್ಯಾಹ್ನ ಮನೆಗೆ ಬರುವಾಗ ನಾನು ಅಪ್ಪನನ್ನು ನನ್ನ ಎತ್ತಿಕೋ ಎಂದು ಪೀಡಿಸುತ್ತಿದ್ದೆ. ಅದಕ್ಕೆ ಅಪ್ಪ ಸ್ವಲ್ಪ ದೂರ ನಡೆದ ಮೇಲೆ ಎತ್ತಿಕೋತೀನಿ ಅಂತ ನನ್ನನ್ನು ಮರೆಸಲು ಪ್ರಯತ್ನಿಸುತ್ತಿದ್ದರು. ಆದರೆ ನಾನು ಪದೇ ಪದೇ ಕೇಳುತ್ತಿದ್ದೆ. ಅದಕ್ಕೆ ಅಪ್ಪ ದೇವಸ್ಥಾನದ ವರೆಗೂ ನಡೆದರೆ ಅಲ್ಲಿಯ ಜಗುಲಿಯ ಮೇಲಿನ ಹೂವುಗಳನ್ನು ಆರಿಸಿಕೊಳ್ಳಲು ಬಿಡುತ್ತೇನೆ ಎಂದು ಹೇಳುತ್ತಿದ್ದರು. 

ಕರುಮಾರಿಯಮ್ಮನ ದೇವಸ್ಥಾನದ ಹೊರಗೆ ಹೊಸ್ತಿಲಿನ ಮೇಲೆ ದೇವಿಗೆ ಹಾಕಿ ತೆಗೆದಿದ್ದ ಹೂವುಗಳನ್ನು ಜನರಿಗೆ ಪ್ರಸಾದವಾಗಿ ಇಟ್ಟಿರುತ್ತಿದ್ದರು. ಹೋಗೋ ಬರೋ ಜನ ಅದನ್ನು ಪ್ರಸಾದವಾಗಿ ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಹೋಗುತ್ತಿದ್ದರು. ನನಗೆ ಆ ಹೂವುಗಳ ಮೇಲೆ ಆಸೆ. ಅಪ್ಪ ಆ ಹೂವುಗಳನ್ನು ಹೆಕ್ಕಲು ಬಿಡುವರೆಂದು ನಡೆಯಲು ಸಿದ್ಧಳಾಗುತ್ತಿದ್ದೆ. 

ಅಲ್ಲಿಯವರೆಗೂ ನಡೆದು, ಹೂವುಗಳನ್ನು ಆರಿಸಿಕೊಂಡ ಮೇಲೆ ಅಪ್ಪ ನನ್ನನ್ನು ಎತ್ತಿಕೊತಾರೆ ಎನ್ನುವುದನ್ನೇ ಮರೆತು ಮನೆಯವರೆಗೂ ನಡೆಯುತ್ತಿದ್ದೆ. ಅಪ್ಪನ ಉಪಾಯ ಕೆಲಸ ಮಾಡಿತ್ತು.ಅಪ್ಪನ ಬಳಿ ಕಾರು ಇರಲಿಲ್ಲ. ಅಪ್ಪ ಮಗಳಿಗೆ ಬಿಸಿಲಿನಲ್ಲಿ ನಡೆಯುವುದು ಅನಿವಾರ್ಯವಾಗಿತ್ತು. ಆದರೂ ದೇವಿಯ ನಿರ್ಮಾಲ್ಯೆಯಲ್ಲೇ ಖುಷಿ ಕಂಡುಕೊಂಡಿದ್ದೆ. 

ಎಷ್ಟು ಸುಂದರ ವಾದ ದಿನಗಳು. ಸಣ್ಣ ಸಣ್ಣ ವಿಷಯಗಳಲ್ಲೇ ಖುಷಿ ಹುಡುಕುತ್ತಿದ್ದ ಸಮಯ  ಅದು. ಆದರೆ ಈಗಿನ ಪೀಳಿಗೆಗೆ ತಂದೆ ತಾಯಿಯಂದಿರು ಎಲ್ಲಾ ಸೌಲಭ್ಯಗಳನ್ನು  ಕೊಟ್ಟು ಮಕ್ಕಳಿಗೆ ಕಷ್ಟವೇ ಏನು ಎಂದು ತಿಳಿಸಿಕೊಡದಂತಹ  ಸಮಯ. ನಮ್ಮ ಮಕ್ಕಳಿಗೂ ಸುಂದರವಾದ ನೆನಪುಗಳನ್ನು ಸೃಷ್ಟಿ ಮಾಡಿ ಕೊಡುವ ಪ್ರಯತ್ನದಲ್ಲಿ ನಾವು ಸಫಲರಾಗಬಲ್ಲೆವೋ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನನ್ನ ಅಡುಗೆಯನ್ನ ಮುಂದುವರೆಸಿದ್ದೆ. 


Comments

  1. ನಿಜ, ಇಂದಿನ ಮಕ್ಕಳಿಗೆ ಪೋಷಕರು ಕೊಡುವ ಸೌಕರ್ಯ ತಾವು ಕಾಣದ್ದನ್ನು ಅವರಿಗೆ ಲಭಿಸುವುದು, ತಾವು ಅನುಭವಿಸದ್ದನ್ನು ಮಕ್ಕಳಿಗೆ ಸುಲಭವಾಗಿ ಎಟುಕುವಂತೆ ಮಾಡುವುದು ಅವರ ನಡುವಳಿಕೆ ಮತ್ತು ಹಿರಿಯರ ಬಗೆಗೆ ಬೇರೆಯೇ ದೃಷ್ಟಿ ಕೋನಕ್ಕೆ ಎಡೆಮಾಡಿದೆ. ಹಿಂದಿನ ಸವಿನೆನಪು ಬಹಳ ಚೆನ್ನಾಗಿ ವರ್ಣಿಸಿದ್ದೀರಿ

    ReplyDelete

Post a Comment