ಬಕುಲ

 ಬಕುಲ 

ಪುಟ್ಟ ಲೇಖನ - ಪಲ್ಲವಿ ಕಟ್ಟಿ, ಸಿಡ್ನಿ 




ಗಂಟೆ ಮಧ್ಯಾ ಹ್ನ 4 ಆಗಿತ್ತು. ಬೆಳಿಗ್ಗೆ ಇಂದ ಮೂರು ಕಪ್ ಚಹಾ ಸೇವಿಸಿ, ಕಂಪ್ಯೂಟರ್ ಮುಂದೆ ಕುಳಿತು ಕೀ ಬೋರ್ಡ್ ಅನ್ನುಕುಟ್ಟುತ್ತಾ ಕಚೇರಿಯ ಕೆಲಸದಲ್ಲಿ ಮಘ್ನಳಾಗಿದ್ದೆ.

ಬೇರೆ ಯಾವ ಸದ್ದೂ ಇರಲಿಲ್ಲ. ಪಕ್ಕದಲ್ಲಿ ಕುಳಿತ ನನ್ನ ಸಹೋದ್ಯೋಗಿಯ ಉಸಿರಾಟ ಕೂಡ ಕೇಳುವಷ್ಟು ಮೌನ. ಸಹೋದ್ಯೋಗಿಯನ್ನು ಭೇಟಿಯಾಗಲು ಹೊರಗಿನಿಂದ ಯಾರೋ ಒಬ್ಬ ಮಹಿಳೆ ಬಂದರು. ಆಕೆ ಬಂದ ಕೂಡಲೇ ಇಡೀ ಕಛೇರಿ ಆಕೆ ಧರಿಸಿದ್ದ ಪರಿಮಳ ದ್ರವ್ಯದಿಂದ ಘಮ ಘಮಿಸುತ್ತಿತ್ತು. ಸ್ವಲ್ಲ ಅತಿಯಾಗಿಯೇ ಇತ್ತು ಎಂದು ಹೇಳಿದರೆ ತಪ್ಪಾಗಲಾದರು. ಆದರೆ ನನಗೆ ಮಾತ್ರ ಪರಿಮಳ ಸ್ವಲ್ಪ ಪರಿಚಿತ ಅನಿಸಿತ್ತು. ಮತ್ತೆ ಮತ್ತೆ ಮನಸ್ಸು ಪರಿಮಳದ ಬಗ್ಗೆ ಯೋಚಿಸಲಾರಂಭಿಸಿತ್ತು. ಎಷ್ಟು ಯೋಚಿಸಿದರೂ ನೆನಪಾಗುತ್ತಿಲ್ಲವೇ ಎ೦ದು ನನ್ನ ನೆನಪಿನ ಶಕ್ತಿಗೆ ಒಂದು ಬೈಗುಳ ಬೈದು ಹಾಗೆ ಕೆಲಸ ಮುಂದುವರಿಸಿದೆ




ಆದರೆ ಮನಸ್ಸು ಕೇಳಬೇಕಲ್ಲಾ!! ಇನ್ನೂ ಎಲ್ಲೂ ಒಂದು ಕಡೆ ಸುಗಂಧದ ಬಗ್ಗೆಯೇ ಯೋಚಿಸತೊಡಗಿತ್ತು. ಸುಗಂಧ ಯಾವುದು ಎಂಬುದು ಮಾತ್ರ ತಿಳಿಯಲ್ಲಿಲ್ಲ ಆದರೆ ಮತ್ತೆ ನನ್ನ ಮನಸ್ಸು ನನ್ನ ಬಾಲ್ಯದ ದಿನಗಳನ್ನು ಮರುಕಳಿಸಿತ್ತು. ಧಾರವಾಡದಲ್ಲಿ ನಮ್ಮ ಅಜ್ಜಿ ಮನೆಯ ಎರಡು ಮೂರು ರಸ್ತೆಗಳಿಂದಾಚೆ ಶಂಬಾ ಜೋ ಶಿಯವರ ಮನೆ. ಶಂಬಾ ಜೋಶಿಯವರು ದೊಡ್ಡ ಸಾಹಿತಿ ಹಾಗೂ ಕನ್ನಡ ವಿದ್ವಾಂಸರು ಎಂದು ಕೇಳಿ ಪಟ್ಟಿದ್ದೆ. ಅವರ ಮನೆಯಲ್ಲಿ ಬಕುಲದ ಹೂವಿನ ಮರವೊಂದಿತ್ತು. ಕಂದು ಬಣ್ಣದ ನಕ್ಷತ್ರಾಕಾರದ ಪುಟ್ಟ ಪುಟ್ಟ ಹೂಗಳು ಸಂಜೆಯ ಹೊತ್ತಿಗೆ ನೆಲದ ಮೇ ಲೆ ಬಿದ್ದಿರುತ್ತಿದ್ದವು. ಗಾತ್ರದಲ್ಲಿ ಸಣ್ಣವಾಗಿದ್ದರೂ ಅವುಗಳ ಸುಗಂಧ ಮಾತ್ರಾ ಅಪ್ರಮೇಯವಾದದ್ದು. ನಾನು, ನನ್ನ ಅಕ್ಕ ಶಂಬಾ ಜೋಶಿಯವರು ಮನೆಗೆ ಹೋಗಿ ಸಂಜೆಯ ಸಮಯ ಹೂವುಗಳನ್ನು ಆರಿಸಿ ಮನೆಗೆ ತರುತ್ತಿದ್ದೆವು. ಮನೆಗೆ ತಂದು ಅವುಗಳನ್ನೆಲ್ಲ ಬಾಳೆ ನಾರಿನಲ್ಲಿ ಪೋಣಿಸಿ ಮಾರನೆಯ ದಿನ ಅಜ್ಜನ ಪೂಜೆಗೆ ಮಾಲೆ ತಯಾರಿಸಿ ಕೊಡುತ್ತಿದ್ದೆವು. ಅಮ್ಮ ಹಾಗೂ ಅಜ್ಜಿ ಅದರ ಮಾಲೆಗಳನ್ನು ಮುಡಿಯುತ್ತಿದ್ದರು. ಒಂದು ವಾರ ಆದರೂ ಬಾಡಿದ ಹೂವುಗಳ ಸುಗಂಧ ಕಡಿಮೆಯಾಗುತ್ತಿರಲ್ಲಿ. ಬಕುಲದ ಹೂವುಗಳ ಸುಗಂಧ ಮನಸ್ಸಿಗೆ ಮುದ ನೀಡುತ್ತಿತ್ತು. ಆದರೆ ಈಗಿನ ದಿನಗಳಲ್ಲಿ ಮರಗಳು ಕಾಣುವುದು ಅತಿ ವಿರಳವಾಗಿ ಬಿಟ್ಟಿದೆ. ಧಾರವಾಡದಲ್ಲಿ ಶಂಬಾ ಜೋ ಶಿಯವರ ಮನೆಯಲ್ಲಿ ಇನ್ನೂ ಬಕುಲದ ಮರ ಇರಬಹುದೇನೋ? ಬೇರೆ ಬೇರೆ ದೇಶಗಳಲ್ಲಿ ವಾಸವಾಗಿರುವ ನಾನು, ನನ್ನ ಅಕ್ಕ ಎಂದಾದರೂ ಹೂವುಗಳನ್ನು ಹೆಕ್ಕಲು ಹೋಗ ಬಲ್ಲೆವೋ

ಪ್ರಶ್ನೆಗಳು ನನ್ನನ್ನು ಕಾಡುತ್ತವೆ. ಧಾರವಾಡದಲ್ಲಿ ಈಗ ಅಜ್ಜ ಇಲ್ಲ, ಅಜ್ಜನ ಮನೆ ಇಲ್ಲ. ಯಾವುದೂ ಮುಂಚಿನ ಹಾಗೆ ಉಳಿದಿಲ್ಲ. ಆದರೆ ಬಾಲ್ಯದ ನೆನಪುಗಳು ಮಾತ್ರ ನನ್ನ ಹೃದಯದಲ್ಲಿ ಸದಾ ಬಕುಲದ ಹೂವಿನ ಹಾಗೆಯೇ ಘಮ ಘಮಿಸುತ್ತಿರತ್ತದೆ.

 


Comments