ಅರಸೀಕೆರೆಯ ಈಶ್ವರ ದೇವಾಲಯ

ಅರಸೀಕೆರೆಯ ಈಶ್ವರ ದೇವಾಲಯ

ಲೇಖಕರು: ಮೈಸೂರು ಆರ್ ಶ್ರೀನಿವಾಸ ಪುಟ್ಟಿ



ಚಾಲುಕ್ಯ ಅರಸಿಯೊಬ್ಬಳ ಹೆಸರಿನಲ್ಲಿ ಕಟ್ಟಿಸಿದ ಕೆರೆಯಿಂದ ಹೆಸರು ಪಡೆದಿರುವ ಅರಸೀಕೆರೆಯು ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದೊಂದು ಮುಖ್ಯ ರೈಲ್ವೆ ಜಂಕ್ಷನ್ ಆಗಿದ್ದು ಇಲ್ಲಿಂದ ಬೆಂಗಳೂರು, ಮೈಸೂರು ಹಾಗೂ ಶಿವಮೊಗ್ಗೆಗಳಿಗೆ ರೈಲು ಹಾಗೂ  ಬಸ್ ಸಂಪರ್ಕಗಳಿವೆ. ಜಿಲ್ಲಾ ಕೇಂದ್ರ ಹಾಸನವು ಕೇವಲ 45 ಕಿ.ಮೀ. ದೂರದಲ್ಲಿದ್ದು, ಅಲ್ಲಿಗೆ ಅಸಂಖ್ಯ ಬಸ್ ಗಳು ಹಾಗೂ ಸಾಕಷ್ಟು ರೈಲುಗಳು ಲಭ್ಯವಿದೆ. ತ್ರಿಭುವನಮಲ್ಲ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ (ಕ್ರಿಸ್ತ ಶಕ 1220 ಕ್ಕೂ ಮುಂಚೆ) ಸಾಕಷ್ಟು ಪ್ರಸಿದ್ಧಿಗೆ ಬಂದಿದ್ದ ಊರು ಅರಸೀಕೆರೆ. ಸರಿಸುಮಾರು ಈ ಕಾಲದಲ್ಲಿಯೇ, ಅಂದರೆ ಹೊಯ್ಸಳ ದೊರೆ ಎರಡನೇ ವೀರಬಲ್ಲಾಳನ ಮಗ ಎರಡನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ  (ಕ್ರಿಸ್ತ ಶಕ 1220-1235) ನಿರ್ಮಾಣಗೊಂಡ ಸುಂದರ ಈಶ್ವರ ದೇವಾಲಯವೊಂದು ಅರಸೀಕೆರೆಯಲ್ಲಿ ಇದೆ. ಇತರ ಹಲವಾರು ಹೊಯ್ಸಳ ದೇವಾಲಯಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಸ್ವಲ್ಪ ಚಿಕ್ಕದು ಎನಿಸುವ ಈ ದೇವಾಲಯವನ್ನು ಶಿವಾಲಯ ಎಂದೂ ಕರೆಯುತ್ತಾರೆ.

ಬಹುತೇಕ ಬಳಪದ ಕಲ್ಲಿನಿಂದಲೇ ನಿರ್ಮಾಣವಾಗಿರುವ ಶಿವಾಲಯವು,  ಹೊಯ್ಸಳ ದೇವಾಲಯವೊಂದರ ಬಹುಪಾಲು ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಈ ದೇವಾಲಯಕ್ಕೆ ಒಂದು ಗರ್ಭಗೃಹ, ಶುಕನಾಸೀ, ನವರಂಗ, ದ್ವಾರಮಂಟಪ ಹಾಗೂ ಅತ್ಯಂತ ವಿಶಿಷ್ಟವಾದ ಮುಖಮಂಟಪಗಳಿವೆ. ದೇವಾಲಯದ ಗರ್ಭಗೃಹ ಹಾಗೂ ಮುಖಮಂಟಪಗಳು ನಕ್ಷತ್ರಾಕಾರವನ್ನು ಹೊಂದಿದ್ದು, ನವರಂಗ ಚೌಕಾಕಾರವಾಗಿದೆ. ಈ ದೇವಾಲಯಕ್ಕೆ ದ್ವಾರಮಂಟಪದ ಬಳಿ ಉತ್ತರ ದಕ್ಷಿಣಗಳಿಂದ ಪ್ರವೇಶವಿದೆ. ದ್ವಾರಮಂಟಪದ ಪೂರ್ವಕ್ಕೆ ಮುಖಮಂಟಪವೂ, ಮತ್ತು ಪಶ್ಚಿಮಕ್ಕೆ ನವರಂಗಗಳೂ ಇವೆ. 

ಶಿವಾಲಯವು ಜಗತಿಯೊಂದರ ಮೇಲೆ ನಿರ್ಮಾಣವಾದಂತೆ ಕಾಣುವುದಿಲ್ಲ ; ಬದಲಾಗಿ ನೆಲದ ಮೇಲಿನ ಹಾಸುಗಲ್ಲುಗಳ ಮೇಲೆ ನಿರ್ಮಾಣವಾದಂತೆ ಕಾಣುತ್ತದೆ. ದೇವಾಲಯವು ಸುಮಾರು ಮೂರು ಅಡಿ ಎತ್ತರದ ಅಧಿಷ್ಠಾನವನ್ನು ಹೊಂದಿದ್ದು, ಅದರ ಮೇಲ್ಭಾಗದಲ್ಲಿ ಯಕ್ಷ , ಹಂಸ ಮತ್ತು ಗೋಪುರಗಳ ಸಾಲು ಇದೆ. ಇದರ ಮೇಲೆ ಸುಮಾರು 120 ವಿಗ್ರಹಗಳು ದೇವಾಲಯವನ್ನು ಸುತ್ತುವರೆದಿದೆ. ಈ ವಿಗ್ರಹಗಳಲ್ಲಿ ಪ್ರಮುಖವಾದವುಗಳೆಂದರೆ : ಲಕ್ಷ್ಮೀ, ವಿಷ್ಣು, ಸಪ್ತಮಾತೃಕೆಯರು, ಪಾರ್ವತೀ, ಶಿವ, ವಿಷ್ಣುವಿನ ದ್ವಾದಶ ಮೂರ್ತಿಗಳು, ಸರಸ್ವತೀ ಮತ್ತು ಕೇಶವ. ಕೆಲವು ವಿಗ್ರಹಗಳ ಕೆಳಗೆ ಅವುಗಳ ಹೆಸರುಗಳನ್ನು ಕಾಣುತ್ತೇವೆ.

ಮೇಲ್ಚಾವಣಿಯ ಬೋದಿಗೆಯ ಮೇಲೆ ಮಣಿಸರ, ಮಕರ, ಕೀರ್ತಿಮುಖ ಮತ್ತು ಶಿಖರಗಳಿವೆ.



ಶಿವಾಲಯದ ಶಿಖರವು ಐದು ಅಂತಸ್ತುಗಳನ್ನು ಹೊಂದಿದ್ದು ೧೬ ಕೋನಗಳ ನಕ್ಷತ್ರಾಕಾರದ ರಚನೆಯಾಗಿದೆ. ಶಿಖರದ ಚಾಚಿದ ಮುಂಭಾಗದಲ್ಲಿ ಹಿಂದೆ ಸಳ ನ ವಿಗ್ರಹವಿದ್ದಿತೆಂದು ತಿಳಿದುಬರುತ್ತದೆ ಆ ಜಾಗದಲ್ಲಿ ಈಗ ಗಾರೆಯ ನಂದಿಯನ್ನು ಕಾಣಬಹುದು.  ಇದರ ಮುಂಭಾಗದಲ್ಲಿ ತಾಂಡವೇಶ್ವರನ ವಿಗ್ರಹವನ್ನು ಕಾಣುತ್ತೇವೆ.


ದೇವಾಲಯದ ಒಳಭಾಗದಲ್ಲಿ ನವರಂಗದಲ್ಲಿ ಸುಂದರವಾದ ಭುವನೇಶ್ವರಿ ಗಳೂ ಮತ್ತು ಸ್ತಂಭಗಳನ್ನು ಕಾಣಬಹುದು. ಇಲ್ಲಿ ಕಾಣುವ ಮಹಿಷಮರ್ದಿನಿ ಮತ್ತು ನಂದಿ ವಿಜಯನಗರ ಕಾಲದ ವಿಗ್ರಹಗಳು. ನವರಂಗದ ನಂತರ ಪಶ್ಚಿಮಕ್ಕೆ ಕಾಣಬರುವ ಶುಕನಾಸಿಯೂ ಒಂದು ಅದ್ಭುತ ರಚನೆ. ನಂತರ ಕಂಡುಬರುವ ಗರ್ಭಗುಡಿಯಲ್ಲಿ ಸುಮಾರು ಎರಡು ಅಡಿ ಎತ್ತರದ ಲಿಂಗ ಇದೆ.


ದೇವಾಲಯ ಹಾಗೂ ಅದರ ಮುಖಮಂಟಪದ ನಡುವೆ, ಅವೆರಡರ ಸೇತುವಾಗಿ ಒಂದು ಪುಟ್ಟ ದ್ವಾರಮಂಟಪವಿದೆ. ಈ ದ್ವಾರಮಂಟಪದ ಪೂರ್ವಕ್ಕೆ ಅತ್ಯಂತ ವಿಶಿಷ್ಟವಾದ ಮುಖಮಂಟಪ ಇದೆ. ಈ ರೀತಿಯ ಮುಖಮಂಟಪ ಹೊಯ್ಸಳ ಶೈಲಿಯ ಇನ್ನಾವ ದೇವಾಲಯಲ್ಲಿಯೂ ಕಂಡುಬರುವುದಿಲ್ಲ.

ಶಿವಾಲಯದ ಉತ್ತರದಲ್ಲಿ ಒಂದು ಅವಳಿ ದೇವಾಲಯ ಕಂಡುಬರುತ್ತದೆ. ಈ ದೇವಾಲಯದಲ್ಲಿ ಗಮನಿಸಬೇಕಾದಂತಹ ರಚನೆಗಳೇನೊ ಕಂಡುಬರುವುದಿಲ್ಲ. ಈ ಅವಳಿ ದೇವಾಲಯದ ಗರ್ಭಗುಡಿಗಳ ದ್ವಾರಬಂಧದ ಮೇಲೆ ದ್ವಾರಪಾಲಕರನ್ನೂ ಮತ್ತು ಸ್ತ್ರೀ ಚಾಮರ ಧಾರಿಗಳನ್ನೂ ಕಾಣಬಹುದು.

ಈಶ್ವರ ದೇವಾಲಯದ ಶಿಲ್ಪಗಳನ್ನು ನೋಡುವ ದೃಷ್ಟಿಯಿಂದ , ದೇವಾಲಯವನ್ನು ಎಂಟು ಭಾಗಗಳಾಗಿ ವಿಂಗಡಿಸಿಕೊಂಡು ನೋಡುವುದು ಸೂಕ್ತ. ಈ ಎಂಟು ಭಾಗಗಳೆಂದರೆ :

  I.  ದೇವಾಲಯದ ಹೊರ ಭಿತ್ತಿ

 II. ಮೇಲ್ಚಾವಣಿ ಮತ್ತು ಕೈಪಿಡಿ ಗೋಡೆ

 III. ಶಿಖರ

IV. ಮಂಟಪ

   V. ಮುಖಮಂಟಪ

  VI. ನವರಂಗ

 VII. ಶುಕನಾಸಿ ಮತ್ತು 

VIII. ಗರ್ಭಗುಡಿ.


ಹೊರಭಿತ್ತಿಯಲ್ಲಿನ ವಿಗ್ರಹಗಳು

ನವರಂಗದ ದಕ್ಷಿಣಗೋಡೆಯಿಂದ ಪ್ರಾರಂಭಮಾಡಿ ಪ್ರದಕ್ಷಿಣಾಕಾರವಾಗಿ ಚಲಿಸಿದರೆ ಕಂಡುಬರುವ ವಿಗ್ರಹಗಳು ಇಂತಿವೆ : 

ವಿ. ಸೂ : ಚತುರ್ವಿಂಶತಿ ಮೂರ್ತಿಗಳನ್ನು ಹೊರತುಪಡಿಸಿ , ಇತರ ಮೂರ್ತಿಗಳ ಕೈನಲ್ಲಿ  ಕಂಡುಬರುವ ಆಯುಧಗಳನ್ನು ಕ್ರಮವಾಗಿ ಬಲಕೆಳಗೈನಿಂದ ಪ್ರಾರಂಭಿಸಿ ಮೇಲಕ್ಕೆ ಹೋಗುತ್ತಾ, ಎಡಮೇಲುಗೈ , ನಂತರ ಅದರ ಕೆಳಗಡೆಯ ಕೈಗಳಲ್ಲಿ ಇರುವಂತೆ ನಮೂದಿಸಲಾಗಿದೆ. 

 

1 - 4  ಇಕ್ಕೆಲಗಳಲ್ಲಿ ಪರಿಚಾರಿಕೆಯರ ನಡುವೆ ಲಕ್ಷ್ಮೀ ಮತ್ತು ವಿಷ್ಣು 

5  ಭಗ್ನಗೊಂಡಿರುವ ಸ್ಥಾನಕ ದೇವತೆ

6 ಮೂರು ಮುಖಗಳು ಮತ್ತು ನಾಲ್ಕು ಕೈಗಳನ್ನು ಹೊಂದಿರುವ ಸ್ಥಾನಕ ಬ್ರಾಹ್ಮೀ ನಾಲ್ಕು ಕೈಗಳಲ್ಲಿ ಮೂರು ಮುರಿದಿದ್ದು, ಉಳಿದಿರುವ ಒಂದು ಕೈನಲ್ಲಿ ಪಾಶವನ್ನು ಕಾಣಬಹುದು.

7,8  ಸ್ಥಾನಕ ಮಾಹೇಶ್ವರೀ ( ಚಿಹ್ನೆಗಳು ಮುರಿದಿವೆ ) ಪಕ್ಕದಲ್ಲಿ ಪರಿಚಾರಿಕೆ.

9,10 ಅಕ್ಷಮಾಲ, ಅಂಕುಶ, ಶಕ್ತಿ ಮತ್ತು ಫಲಗಳನ್ನು ಹಿಡಿದಿರುವ ಮೂರು ಮುಖಗಳ ಕೌಮಾರೀ. ದೇವತೆಯ ಬಲಗಡೆಯಲ್ಲಿ ಪರಿಚಾರಿಕೆ.

11,12 ಪದ್ಮ, ಶಂಖ, ಚಕ್ರ ಮತ್ತು ಫಲಗಳನ್ನು ಹಿಡಿದಿರುವ ಸ್ಥಾನಕ ವೈಷ್ಣವೀ. ದೇವತೆಯ ಎಡಗಡೆಯಲ್ಲಿ ಪರಿಚಾರಿಕೆ.

13,14 ಗದಾ, ಚಕ್ರ, ಶಂಖ ಮತ್ತು ಫಲಗಳನ್ನು ಹಿಡಿದಿರುವ ಸ್ಥಾನಕ ವಾರಾಹೀ. ದೇವತೆಯ ಬಲಗಡೆಯಲ್ಲಿ ಪರಿಚಾರಿಕೆ.

15,16 ಇಕ್ಕೆಲಗಳಲ್ಲಿ ಪರಿಚಾರಿಕೆಯರನ್ನು ಹೊಂದಿರುವ ದಕ್ಷಿಣದ ಖಾಲಿ ಗೂಡು



ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ 

Comments