ಮೇಲಾರಕೋಟ್ಲಾ ಎಂಬ ಓಯಸಿಸ್...

ಮೇಲಾರಕೋಟ್ಲಾ ಎಂಬ ಓಯಸಿಸ್...

ಲೇಖನ - ಶ್ರೀಮತಿ ಮಂಜುಳಾ ಡಿ

ಭಾರತ  ಸ್ವತಂತ್ರವಾದ ಕೇವಲ ಎರಡು ದಿನಗಳಲ್ಲಿ,  ಅಂದರೆ ಆಗಸ್ಟ್-17 ರಂದು, ಅಖಂಡ ಭಾರತ  ಹೋಳಾಗಿ ಎರಡು ದೇಶಗಳ ಜನನವಾಯ್ತು. ವಿಸ್ತಾರವಾದ  ಪ್ರಾಂತ್ಯಗಳಾದ ಬಂಗಾಲ ಮತ್ತು ಪಂಜಾಬ್ ಗಳನ್ನು ಸೀಳಿ, ಪೂರ್ವ- ಪಶ್ಚಿಮ ಬಂಗಾಲ ಮತ್ತು ಪೂರ್ವ-ಪಶ್ಚಿಮ ಪಂಜಾಬ್ ಗಳಾಗಿ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಹಂಚಿಕೆಯಾಯಿತು. ನೋಡುವುದರೊಳಗೇ ಜನಿಸಿದ್ದ ಎರಡು ದೇಶಗಳ ಹುಟ್ಟು ತಂದ ಸಾವು-ನೋವು ಮಾತ್ರ ಅಪಾರ. ಆಘಾತ ಮತ್ತು ಎಚ್ಚರಗಳ ನಡುವಿನ ಅರ್ಥವಾಗದ ತಳಮಳದ ವಲಯದಲ್ಲಿ ನಿಂತ ಜನಸಮೂಹ!  ಹಿಂದಿನ ದಿನದವರೆಗೂ ಸಹೋದರರಂತೆ ಬದುಕಿದ್ದವರು ರಾತ್ರೋರಾತ್ರಿ ವೃರಿಗಳಾಗಿ ಪರಿಣಮಿಸಿದ್ದರು. ಕನಸಿನಲ್ಲೂ ಯಾರೂ ಯೋಚಿಸದ ಕ್ರೂರತನಕ್ಕಿಳಿದು ಪರಸ್ಪರ ಹತ್ಯೆಗಳು ತಾಂಡವವಾಡತೊಡಗಿತು. ಕಣ್ಣು ಸಾಗಿದಷ್ಟು ದೂರವೂ ಗೋಚರಿಸುವ ಹೆಪ್ಪುಗಟ್ಟಿದ ರಕ್ರ.



ಅಖಂಡ ಭಾರತದ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ ಆ ಕೈಗಳು ಎಷ್ಟು ಅಪರಿಣಿತವಾಗಿದ್ದವೆಂದರೆ, ಈ ಪ್ರಕ್ರಿಯೆಯಲ್ಲಿ ಹಲವಾರು ತಲೆಮಾರುಗಳೇ ನಾಶವಾಗಿ ಹೋಗಿದ್ದವು. ಅಖಂಡ ಭಾರತದ ಮೇಲೆ ರಾಡ್ ಕ್ಲಿಫ್ ಎಳೆದ ಆ ಗೆರೆ ಸಹಸ್ರಾರು ವರ್ಷಗಳ ಸುದೀರ್ಘವಾದ ಸಮುದಾಯದ ಸಮಭಾವವನ್ನು ಸೃಷ್ಟಿಸಿದ್ದ ಚರಿತ್ರೆಯನ್ನು ಏಕಾಏಕಿ ಅಳಿಸಿ ಹಾಕಿತ್ತು.

"ದೇಶವೆಂದರೆ ಯಾವುದು? ಅದು ಎಲ್ಲಿದೆ? ಹುಟ್ಟಿರುವುದು-ಬೆಳೆದಿರುವುದು-ಉಸಿರಾಡಿರುವುದು, ಇಲ್ಲೇ, ಅಂದಮೇಲೆ ಇನ್ನೆಲ್ಲೋ ಹೋಗೆ ನೆಲೆಯೂರಬಹುದಾದ ನೆಲ ತಮ್ಮದು ಹೇಗಾಗುವುದು? ಅಲ್ಲಿಂದಲೂ ಹೀಗೆಯೇ ಹೊರನೂಕಲಾರರು? ಎಂದು ನಂಬುವುದು ಹೇಗೆ? ಎಂಬ ನಿರಾಶ್ರಿತನಾಗಿ ನಿಂತ ಜನಸಾಮಾನ್ಯರ ಪ್ರಶ್ನೆಗಳು ಆಕ್ರಂದನವಾಗಿ ಮುಗಿಲು ಮುಟ್ಟುತ್ತಿದ್ದವು. ತಾರಕಕ್ಕೇರಿದ ಧರ್ಮ್ಮೋನ್ಮಾದತೆ, ಎರಡೂ ದೇಶಗಳಿಗೆ ಹರಿದ ನಿರಾಶ್ರಿತರ ಹರಿವು, ವಿವೇಕ ಕಳೆದುಕೊಂಡ ರಾಜಕಾರಣ...ಇದೆಲ್ಲದರ ನಡುವೆ ನಲುಗಿ ಹೋದ ಜನಸಾಮಾನ್ಯರು!?

    ಹೀಗೆ ಪಂಜಾಬಿನ ಧರೆ ಹೊತ್ತಿ ಉರಿಯುವಾಗ,  ರಕ್ತ-ಸಿಕ್ತ ಚಿತ್ರಣದಲ್ಲಿ ಪಂಜಾಬದ ಚರಿತ್ರೆ ಮೂಡುತ್ತಿದ್ದರೆ, ಇದ್ಯಾವ ಹೋರಾಟಗಳು ಚೂರೂ ತಾಕದೇ,  ಎಂದಿನ ಸಹಜ ಬೈಗು ಬೆಳಗು ಉಣ್ಣುತ್ತಿದ್ದ ಇದೇ ಪಂಜಾಬದ ಏಕಮಾತ್ರ ಸ್ಥಳ ಮೇಲಾರ್ ಕೋಟ್ಲಾ!  ಅದೂ ಅತೀ ಹೆಚ್ಚು 68.50%  ಮುಸಲ್ಮಾನ ಜನವಸತಿಯಿರುವ  ಪ್ರದೇಶದಲ್ಲಿ!!!  ಸಿಖ್ಖರು ದಂಗೆಯೆದ್ದ ರೀತಿಗೆ, ಈ ಪ್ರದೇಶದ ಮುಸ್ಲಿಂರನ್ನು ತಾಕದೇ ಬಿಟ್ಟದ್ದು ಹೇಗೆ...!!!

ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಅರಿಯಬೇಕಾದರೆ ಮೇಲಾಕೋಟ್ಲಾದ ಇತಿಹಾಸ ಅರಿಯಬೇಕಾಗುತ್ತದೆ. ಮೇಲಾರ ಕೋಟ್ಲಾ, ಔರಂಗಜ಼ೇಬ್ ಸಾಮ್ರಾಟನಿಂದ ನವಾಬ್ ಬೈಯಾಜಿದ್ ಖಾನ್ ಗೆ,  ಅಲ್ಲಿ ಕೋಟೆ ನಿರ್ಮಿಸಲು ಅನುಮತಿಯೊಂದಿಗೆ ಬಳುವಳಿಯಾಗಿ ದೊರೆತ ಸ್ಥಳ. ಇಲ್ಲಿ ಕೋಟೆ ನಿರ್ಮಿಸುವ ಮೊದಲು ನವಾಬ ಬೈಯಾಜಿದ್ ಖಾನ್, ಸೂಫಿ ಸಂತ ಷಾ ಫಜಲ್ ಮತ್ತು ಹಿಂದೂ ಮಹಾತ್ಮ ಶಾಮ್ ದಾಮೋದರ ಅವರನ್ನು ಆಹ್ವಾನಿಸುತ್ತಾನೆ. ಈ  ಇಬ್ಬರು ಮಹಾತ್ಮರ ಕೃಪೆಯಿಂದ ಬೆಳೆದ ಮೇಲಾರಕೋಟ್ಲಾ, ಎರಡೂ ಧರ್ಮಗಳ ಸಹಬಾಳ್ವೆಗೆ ಮೊದಲ ಅಡಿಪಾಯವಾಗುತ್ತದೆ.

ಇದು ಮೇಲಾರ ಕೋಟ್ಲಾದ ಹಿಂದೂ ಮುಸ್ಲಿಂ ಬಾಂದವ್ಯಕ್ಕೆ ಮೊದಲ ಬುನಾದಿಯಾದರೆ, ಇನ್ನೊಂದು ಘಟನೆ ಇಡೀ ಮೇಲಾರಕೋಟ್ಲಾದ ಬಾಂಧವ್ಯ ಸದಾಕಾಲಕ್ಕೂ ಕಾಯುವ ಘಟನೆ...

ಮೊಘಲರು ಮತ್ತು ರಜಪೂತರ ಸಂಘಟಿತ ಸೇನೆಯನ್ನು ಚಮಕೌರ್ ಸಾಹಿಬ್ ಕದನದಲ್ಲಿ 1704 ರಲ್ಲಿ ಸಿಖ್ಖರ ಹತ್ತನೇ ಗುರು, ಗುರು ಗೋಬಿಂದ್ ಸಿಂಗ್ ಅವರ ಸಾರಥ್ಯದಲ್ಲಿ, ಎದುರಿಸಿದ ರೀತಿ ಒಂದು ಚಮತ್ಕಾರವೇ ಸರಿ. ಹತ್ತು ಲಕ್ಷ ಮೊಘಲ್ ಸೇನೆ ಎದುರು ನಿಂತದ್ದು ಕೇವಲ ನಲವತ್ತು ಸಿಖ್ಖರು!!! ಅರೆಗಳಿಗಯಲ್ಲಿ ಹೊಸಕಿ ಹಾಕಬಹುದಾದ ಸಂಖ್ಯೆಯದು! ಆದರೆ ಜರುಗಿದ್ದು ಬೇರೆಯೇ! ಕೋಟೆ ಬಾಗಿಲು ತೆಗೆದು ಪ್ರತೀ ಬಾರಿ ಹೊರಬರುತ್ತಿದ್ದ ಗೆರಿಲ್ಲಾ ಯುದ್ಧ ನೀತಿಯಲ್ಲಿ ಪಳಗಿದ್ದ ಐದು ಜನ ಸಿಖ್ಖರು ಸಾವಿರಾರು ಮಫಲ್ ಸೈನಿಕರನ್ನು ಹೊಡೆದು ಹಾಕುತ್ತಿದ್ದರು. ಕೊನೆಗೆ ಉಳಿದ ಕೆಲವು ಸಿಖ್ ಸೈನಿಕರ ಮನವಿಯ ಮೇರೆಗೆ ಗುರು ಗೋಬಿಂದ ಸಿಂಗ್ ಅವರು, ಆ ಕೋಟೆಯಿಂದ ಹೊರಡುತ್ತಾರೆ. ಹೀಗೆ ಹೊರಡುವ ಮುನ್ನ ನಲವತ್ತು ಸಿಖ್  ಮತ್ತು ಲಕ್ಷ ಮೊಘಲ್ ಸೈನಿಕರನ್ನು ಎದುರಿಸಿದ ರೀತಿಯನ್ನು, ಔರಂಗಜೇಬನಿಗೆ "ಜ಼ಾರ್ ನಾಮ " ಬರೆದು ಹೊರಡುತ್ತಾರೆ. ಈ ಜ಼ಾರ್ ನಾಮ ಸಿಖ್ಖರ ಇತಿಹಾಸದಲ್ಲಿ ದೊಡ್ಡ ಉದ್ಘರಿಸಬಹುದಾದ ಯುದ್ಧವೊಂದಕ್ಕೆ ದೊಡ್ಡ ದಾಖಲೆಯಾಗಿ ನಿಲ್ಲುತ್ತದೆ.

ಚಾಮಕೌರ್ ಕದನದ ಪ್ರತೀಕಾರವಾಗಿ, ಗುರುಗೋಬಿಂದ್ ಸಿಂಗ್ ಅವರ ಕುಟುಂಬವನ್ನು ಮೊಘಲ್ ಸಾಮ್ರಾಟ ಔರಂಗಜೇಬ್  ಜೀವಂತ ಸಮಾಧಿ  ಆದೇಶಿಸುತ್ತಾನೆ. ಇದರ ವಿರುದ್ಧ ಆಗಿನ ಮೇಲಾರ್ ಕೋಟ್ ನ ಪ್ರಖ್ಯಾತ ನವಾಬ ಷೇರ್ ಎ ಮೊಹಮ್ಮದ್ ತೀವ್ರವಾದದಿಂದ ಪ್ರತಿಭಟಿಸುತ್ತಾನೆ. ಈ ಪ್ರತಿಭಟನೆಯ ವಿಷಯ ತಿಳಿದ ಗುರು ಗೋಬಿಂದ್ ಸಿಂಗ್, ಮೇಲಾರ್ ಕೋಟ್ ನ ಬೇರುಗಳು ಎಂದಿಗೂ ಹಸಿರಾಗಿರುತ್ತವೆ ಎಂದು ಕೃಪೆದೋರುತ್ತಾರೆ.

ಇದನ್ನು ನಂಬುವುದು ಹೇಗೆ ಎಂಬುದು ಚಕಿತಗೊಳಿಸವುದಷ್ಟೇ ಅಲ್ಲ! ಯೋಚನೆಗೂ ದೂಡುತ್ತದೆ. ಆದರೆ ಪಿಪ್ಪಾ ವ್ರಿದ್ದೀ ವಿರಚಿತ " ಫ್ರಮ್ ದ ಆಶ್ಯಸ್ ಆಫ್ 1947; ರಿಮೈನಿಂಗ್ ಪಂಜಾಬ್"  ಪುಸ್ತಕದಲ್ಲಿ  " ಸೇಕ್ರಡ್ ಮೇಲಾರ್ ಕೋಟ್ಲಾ" ಎಂಬ ಅಧ್ಯಾಯವಿದೆ. ಇಡೀ ಮೇಲಾರ್ ಕೋಟ್ಲಾ ದಲ್ಲಿನ‌ ಜನರನ್ನು, ಭೇಟಿ ಮಾಡಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ಬರೆದ ಲೇಖನ ಎಂಬುದಾಗಿ ಲೇಖಕಿ ವ್ಯಕ್ತಪಡಿಸುತ್ತಾರೆ. ಇದಕ್ಕೆ ನಿದರ್ಶನವಾಗಿ ಮೇಲಾರ್ ಕೋಟ್ಲಾದ ಶಾಲೆಗಳಲ್ಲಿ ಮಕ್ಕಳು ಪಂಜಾಬಿ-ಉರ್ದು ಎರಡೂ ಭಾಷೆ ಕಲಿಯುತ್ತಾರೆ. ತಲೆಮಾರುಗಳಿಂದ ಇಲ್ಲಿ ಎರಡೂ ಧರ್ಮ ಬೇರೆ ಎಂದು ಎಂದಿಗೂ ಭಾವಕ್ಕೆ ಬರದಂತೆ ಸಾಗಿದ ಬದುಕಿನ ಬಗ್ಗೆ ಜನರು ನೀಡಿದ ಮಾಹಿತಿ ಮತ್ತು ಇತಿಹಾಸ ಒಂದಾಗಿ ಹೇಳುವುದನ್ನೇ ದಾಖಲಿಸಿರುವುದಾಗಿ ಲೇಖಕಿಯ ಅಭಿಪ್ರಾಯ.

ಸ್ವಾತಂತ್ರ್ಯದ ನಂತರದ ಬೆಳಗು ಇಡೀ ಪಂಜಾಬನ್ನು, ರಕ್ತ ವರ್ಣಕ್ಕೆ ತಿರುಗಿಸಿದರೆ, ಇದರ ತುಸು ಛಾಯೆಯೂ ಮೇಲಾರಕೋಟ್ಲಾದ ಮೇಲೆ ಆಗಲಿಲ್ಲ. ಇಂದಿಗೂ ಮೇಲಾರ್ ಕೋಟ್ಲಾದಲ್ಲಿ  ವರ್ಷದ ಎಲ್ಲಾ ಕಾಲಗಳಲ್ಲೂ   ತರಕಾರಿ ಬೆಳೆ ಇಲ್ಲಿ ಯಥೇಚ್ಛ! ಇದುವರೆಗೂ ಕೋಮು ಗಲಭೆ ಎಂಬ ಚಿಕ್ಕ ಕಲಹ ಕಂಡಿಲ್ಲ! ಇಡೀ ಪಂಜಾಬ್ ಹೊತ್ತಿ ಉರಿಯುತ್ತಿದ್ದರೂ ಮೇಲಾರ್ ಕೋಟ್ಲಾ ಮಾತ್ರ ಶಾಂತ ಹಣತೆಯ ಬೆಳಕಿನಲ್ಲಿ ಎಂದೂ ನಂದದ ಸಹಬಾಳ್ವೆಯಲ್ಲಿ ಸಾಗಿದೆ!


Comments

  1. ತುಂಬ ಉಪಯುಕ್ತ ಲೇಖನ. ಈ ಒಂದು ಆದರ್ಶ ಗ್ರಾಮದ ಪರಿಚಯಿಸುವ ನಿಮ್ಮ ಯತ್ನ ಪ್ರಶಂಸನೀಯ. ಕೋಮು ಸೌಹಾರ್ದತೆಯ ಮಹತ್ವವನ್ನು ಬಿಂಬಿಸುವ ಈಂಥ ಲೇಖನಗಳು ಈಗಿನ ಪರಿಸ್ಥಿತಿಗೆ ಅತ್ಯಾವಶ್ಯಕ. ಶುಭವಾಗಲಿ.

    ReplyDelete
  2. ಆಂಗ್ಲ ಮತ್ತು ಹಿಂದೀ ಎರಡೂ ಭಾಷೆಗಳ ಚಲನಚಿತ್ರಗಳಲ್ಲಿ ಪ್ರಖ್ಯಾತರಾಗಿದ್ದ ಸಯೀದ್ ಜಾಫ್ರಿ ಅವರ ಜನ್ಮ ಸ್ಥಳವೂ ಮೇಲಾರ್ ಕೋಟ್ಲಾ ಎಂಬುದು ಗಮನಾರ್ಹ.

    ReplyDelete

Post a Comment