ನಿಜ ಹೇಳ್ಬೇಕೂಂದ್ರೇ...

 ನಿಜ ಹೇಳ್ಬೇಕೂಂದ್ರೇ...

ಹಾಸ್ಯ ಲೇಖನ - ಅಣಕು ರಾಮನಾಥ್


‘ನಿಜ ಹೇಳ್ಬೇಕೂಂದ್ರೇ...’ 

‘ಹಾಗಾದರೆ ಇಷ್ಟು ಹೊತ್ತು ನೀವು ಹೇಳಿದ್ದಲ್ಲವೂ ಸುಳ್ಳೇನು?’ ಎಂದೆ. ದುರ್ದಾನ ತೆಗೆದುಕೊಂಡವರಂತೆ ದಾಪುಗಾಲಿಕ್ಕಿದರು ಯಜಮಾನರು. 


ಸತ್ಯದ ವಿಷಯದಲ್ಲಿ ಈ ವಿಧದ ವಿಚಿತ್ರಗಳು ಅಲ್ಲಲ್ಲಿ ಕಂಡುಬರುತ್ತವೆ. ‘ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ; ಅದು ಏಕೊ ಅಪ್ಪನನ್ನು ಕಂಡರೆ ಭೀತಿ’ ಎಂಬ ಹಾಡಿನಲ್ಲಿ ಸತ್ಯದ ಪ್ರತಿನಿಧಿ ಎಂದು ಕರೆಸಿಕೊಳ್ಳುವ ಮಗುವೇ ಸುಳ್ಳು ಹೇಳುತ್ತದೆಂಬ ಪರೋಕ್ಷ ಅರ್ಥವಿದೆ. ‘ನಿಜವ ನುಡಿಯಲೆ ನನ್ನಾಣೆ ನಲ್ಲೆ; ಪ್ರೀತಿಯ ರಂಗು ಮೂಡಿದೆ’ ಎಂಬ ಗೀತೆಯಂತೂ ಸುಳ್ಳು ಪ್ರೀತಿಸುವವರ ಪ್ರಮುಖ ವಸ್ತುವೆಂದೂ, ನಿಜವನ್ನು ನುಡಿಯಬೇಕಾದರೆ ಪರ್ಮಿಷನ್ ತೆಗೆದುಕೊಳ್ಳಬೇಕೆಂದೂ ಸೂಚಿಸುತ್ತದೆ. 

‘ನೀವು ನಿಜ ಹೇಳಿದರೂ ನಂಬ್ತೀರಿ, ಸುಳ್ಳು ಹೇಳಿದರೂ ನಂಬ್ತೀರಿ’ ಎನ್ನುವುದು ಮತ್ತೊಂದು ನಿಜಸಂಬಂಧಿತ ವಾಕ್ಯ. ನಾವು ಅವರ ಸುಳ್ಳನ್ನೂ ನಂಬುತ್ತೇವೆಂದು ಅವರಿಗೆ ಯಾರು ಹೇಳಿದರೆಂದು ಕೇಳಿನೋಡಿ! ಅವರಪ್ಪರಾಣೆ ಅವರು ನಿಜ ಹೇಳುವುದಿಲ್ಲ! 

ಸತ್ಯ, ನಿಜ, ದಿಟ, ಖರೆ ಎಂದೆಲ್ಲ ಪರ್ಯಾಯಪದಗಳನ್ನು ಹೊಂದಿರುವ ಈ ಪದದ ಬಳಕೆಯೇ ವಿಚಿತ್ರ. ‘ನಿಜಜೀವನದಲ್ಲಿ’ ಎಂದು ಬಳಸಿದಾಗ ಸುಳ್ಳುಜೀವನವೂ ಇದೆಯೆಂದು ಘೋಷಿಸಿದಂತಾಯಿತಲ್ಲ. ಆದರೆ ‘ನಿನ್ನದು ಸುಳ್ಳು ಜೀವನ’ ಎಂದು ಆರೋಪಿಸಿದರೆ ಶ್ರೀಸಾಮಾನ್ಯನಿರಲಿ, ವಕೀಲನೂ ಒಪ್ಪುವುದಿಲ್ಲ. ಸತ್ಯದ ದಾರಿಯಲ್ಲಿಯೇ ನಡೆಯಬೇಕಾದ, ನಡೆಯುತ್ತಾ ಎಡವಬೇಕಾದ ಕೋರ್ಟಿನಲ್ಲಿ ದೊರೆಯುವಷ್ಟು ಸತ್ಯವಾದ ಸುಳ್ಳು ಇನ್ನೆಲ್ಲಿಯೂ ಸಿಗುವುದಿಲ್ಲ. ಪವಿತ್ರಗ್ರಂಥವನ್ನು ಮುಟ್ಟಿ ‘ಸತ್ಯವನ್ನು ಹೇಳುತ್ತೇನೆ’ ಎನ್ನುವಾಗಲೇ ಸತ್ಯವನ್ನು ಬಿಟ್ಟು ಬೇರೆಲ್ಲವನ್ನೂ ಹೇಳಿತ್ತೇನೆಂದು ಮನದಲ್ಲಿಯೇ ಹೇಳಿಕೊಳ್ಳುವ ಮಂದಿಯೇ ಕಟಕಟೆಯಲ್ಲಿ ಹೆಚ್ಚಾಗಿ ಕಂಡುಬರುವುದು. ಸುಳ್ಳಿನ ಪರದೆಯಲ್ಲಿ ಅಡಗಿ ಕುಳಿತ ಸತ್ಯವು ಎದುರಾದರೂ ಅದನ್ನು ಹಾಗೆ ಸ್ವೀಕರಿಸುವುದು ಕಷ್ಟ, ವಿರಳ. 

‘ಸುಮ್ಮಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಡಯ್ಯ. ಸತ್ಯದ ಬೆಲೆಯೇನೆಂದು ನಿನಗೆ ಗೊತ್ತೇನು?’ ಖಾರವಾಗಿ ನುಡಿದರೊಬ್ಬ ನ್ಯಾಯಾಧೀಶರು. 

‘ಗೊತ್ತು ಸ್ವಾಮಿ. ಐವತ್ರುಪಾಯಿ. ವಕೀಲರು ಆಗಲೇ ಕೊಟ್ಟಿದ್ದಾರೆ’ ಎಂದ ಬಾಡಿಗೆ ಸಾಕ್ಷಿದಾರ. ಸತ್ಯದ ಮಜಲುಗಳನ್ನು ಎಲ್ಲ ಕಾಲದಲ್ಲಿಯೂ ಹತ್ತುವುದೂ ಸಾಧ್ಯವಿಲ್ಲವೆಂದು ಲಾಂಗೂಲಾಚಾರ್ಯರು ಹೇಳುತ್ತಿದ್ದರು. ‘ನೀನು ನಿನ್ನ ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿರುವೆಯಾ ಎಂದು ಒಂದೇ ಪದದಲ್ಲಿ ಉತ್ತರಿಸು’ ಎಂದು ಸವಾಲೆಸೆದರೆ ‘ಹೂ’ ಎಂದರೆ ಮುಂಚೆ ಹೊಡೆಯುತ್ತಿದ್ದನೆಂದೂ, ‘ಊಹೂ’ ಎಂದರೆ ಇನ್ನೂ ಹೊಡೆಯುತ್ತಿದ್ದಾನೆಂದೂ ಅರ್ಥ ಬರುವುದರಿಂದ ಹೆಂಡತಿಯನ್ನು ರೇಗಿಯೂ ತಿಳಿದಿಲ್ಲದ ಸಿಂಪಥೆಟಿಕ್ ಪತಿ ಹೇಗೆ ಉತ್ತರಿಸಿದರೂ ಸುಳ್ಳೇ ಆಗುವುದಲ್ಲ! 

ಸತ್ಯವು ಸುಳ್ಳಿನ ಕವಚದಿಂದ ತಾನಾಗಿಯೇ ಹೊರಬರುವ ಸಂದರ್ಭಗಳು ಸ್ವಾರಸ್ಯಕರವಾಗಿರುತ್ತವೆನ್ನಲು ಈ ಪುರಾತನ ಪ್ರಸಂಗವು ಒಳ್ಳೆಯ ಉದಾಹರಣೆಯಾಗಿದೆ. 

‘ಮರ್ಸಿಡಿಸ್ ಕದ್ದಿದ್ದೀನೀಂತ ಆರೋಪ ಇದೆ ವಕೀಲರೆ. ನನ್ನನ್ನು ಬಚಾವ್ ಮಾಡಿ.’ ನುಡಿದ ಆರೋಪಿತ.

‘ನೀನು ಕದ್ದಿದ್ದೀಯಾ?’

‘ನಿಮ್ಮಾಣೆಗೂ ಇಲ್ಲ’

‘ಸರಿ. ಕೇಸ್ ನಡೆಸಿ ಗೆಲ್ಲಿಸುತ್ತೇನೆ. ಐನೂರು ಡಾಲರ್ ಫೀಸ್ ತತ್ತಾ’

‘ದುಡ್ಡಿನ ಬದಲು ಐಟಮ್ ಕೊಡಬಹುದೆ?’

‘ಆಗಬಹುದು. ಏನು ಕೊಡುತ್ತೀಯಾ?’

‘ಮರ್ಸಿಡಿಸ್ ಕಾರ್!’

ಸತ್ಯದ ಬಗ್ಗೆ ಸುಭಾಷಿಗಳೂ ಸಾಕಷ್ಟಿವೆ. ‘ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್’ ಎನ್ನುವುದನ್ನು ಸತ್ಯಂ ಕಂಪನಿಯವರಿಗೆ ಅನ್ವಯಿಸಲು ಸಾಧ್ಯವಾಗಲಿಲ್ಲ! ಸುಳ್ಳುಲೆಕ್ಕದ ಶಿಖರದಲ್ಲಿ ಮುಳುಗಿದ ಅದನ್ನು ಸತ್ಯದ ತಕ್ಕಡಿಯಲ್ಲಿ ತೂಗಲು ಆಗಲೇಯಿಲ್ಲ. 

‘ಸತ್ಯಮೇವ ಜಯತೇ’ ಎಂಬುದೂ ‘ಸತ್ಯಂ ಏವ ಜಯತೇ’ ಎಂದಾಗ ಸುಳ್ಳಾಯಿತು! ಕೋವಿಡ್ ಕಾಲದಲ್ಲಿ ಮನುಕುಲ ತರಗೆಲೆಗಳಂತೆ ಉದುರಿದಾಗ ಅದಕ್ಕೊಂದು ಹೊಸ ಅರ್ಥ ಅನ್ವಯವಾಗಿ ‘ಸತ್ ಯಮ ಏವ ಜಯತೇ – ನಿಜ. ಯಮನೊಬ್ಬನೇ ಜಯಿಸುತ್ತಾನೆ – ಎಂಬ ಸಾರ್ವಕಾಲಿಕ ಸತ್ಯ ಹೊಮ್ಮಿತು. 

ಬ್ರೂಯಾತ್ ಪದದಲ್ಲಿ ಬ್ರೂ ಪದಕ್ಕೆ ಬಿಸಿನೀರಿನೊಡನೆ ಸೇರಿಸಿ ತಯಾರಿಸು ಎಂಬ ಅರ್ಥವನ್ನು ಅನ್ವಯಿಸಿದರೆ ಈ ಪದಪುಂಜಕ್ಕೆ ಮತ್ತಷ್ಟು ವಿಸ್ತೃತವಾದ ಅರ್ಥ ದೊರಕುತ್ತದೆ. ನಿಜವನ್ನು ನುಡಿದರೆ ಸಿಕ್ಕಿಬೀಳುವ ಸಾಧ್ಯತೆ ಇರುವ ವ್ಯಕ್ತಿಯು ಆಗಲೇ hot waters ನಲ್ಲಿ ಇರುತ್ತಾನೆ. ಬ್ರೂಯಾತ್ ಎಂದರೆ ಬ್ರೂ ಮಾಡು - place truth itself in hot waters or, in otherwards, jeopardize the truth  ಎಂಬ ವ್ಯತಿರೇಕಾರ್ಥ ದೊರಕುತ್ತದೆ! ‘ಸತ್ಯಂ ಬ್ರೂಯಾತ್’ ನ ಸಂಸ್ಕೃತಾಂಗ್ಲ ಅರ್ಥ destroy the truth ಎಂದಾಗುವುದು ‘ನಿಜಜೀವನದ ನಿತ್ಯಸತ್ಯ’! 

ಸುಭಾಷಿತದ ಅರ್ಥವನ್ನು ಹೀಗೆ ಕುಭಾಷಿತಗೊಳಿಸುವುದು ಒಂದು ಪರಿಯಾದರೆ, ಆ ಹೇಳಿಕೆಯನ್ನು ಕೊಂಚವೇ ಟ್ವಿಸ್ಟ್ ಮಾಡಿ ‘ಸತ್ಯಂ ಬ್ರೂಯರಿ ಪ್ರಿಯಂ ಬ್ರೂಯರಿ’ ಎಂದಿದ್ದಾರೆ ಬೀಚಿ. ನಿಜವನ್ನು ಹೊರಡಿಸುವುದರಲ್ಲಿ ಬ್ರೂಯರಿಯು ನ್ಯಾಯಾಲಯಕ್ಕಿಂತಲೂ ಮಿಗಿಲಾದುದು. (ಆದರೆ ಬ್ರೂಯರಿಯ ಒಡೆಯನಾದ ಮಲ್ಯನಿಗೇ ಇದು ಅನ್ವಯಿಸದಿದ್ದುದು ವಿಪರ್ಯಾಸವೇ ಸೈ!) ಬ್ರೂಯರಿಯ ಪ್ರಾಡಕ್ಟು ಒಳಹೋಗುತ್ತಿದ್ದಂತೆಯೇ ಸತ್ಯವು of its own free will and accord ಹೊರಬರುತ್ತದೆ. ‘ಏಕೆ ಹೀಗೆ?’ ಎಂದು ಮಾಸ್ಟರ್ ಹಿರಣ್ಣಯ್ಯನವರನ್ನು ಕೇಳಿದಾಗ ‘ಲಕ್ಷ್ಮಿ ಇದ್ದಕಡೆ ಸರಸ್ವತಿ ಇರಲ್ಲ ಸಾರ್. ಹೆಂಡ ಲಕ್ಷ್ಮಿ. ಅದು ಲಕ್ಷ್ಮಿ ಎನ್ನುವುದಕ್ಕೆ ಬ್ರೂಯರಿಗಳ ಮಾಲೀಕರ ಆಸ್ತಿಯೇ ಸಾಕ್ಷಿ. ಸತ್ಯ ಸರಸ್ವತಿ. ಹೆಂಡ ಒಳಗೆ ಹೋಗುತ್ತಿದ್ದಂತೆಯೇ ಸತ್ಯಕ್ಕೆ ಎಕ್ಸಿಟ್’ ಎಂದುತ್ತರಿಸಿದ್ದರು. ಸತ್ಯಂ ಬ್ರೂಯರಿ ಎನ್ನುವುದರ ಸತ್ಯಾಸತ್ಯತೆಗಳು ಹೇಗೆಯೇ ಇರಲಿ, ಪ್ರಿಯಂ ಬ್ರೂಯರಿ ಎನ್ನುವುದು ವಿಶ್ವಕ್ಕೇ ಅನ್ವಯವೆನ್ನಲು ಕೋವಿಡ್ ಸಮಯದಲ್ಲಿ ‘ಫೇಸ್‍ ಮಾಸ್ಕ್ ಹಾಕ್ಸಿ ಡಿಸ್ಟೆನ್ಸ್ ನಿಲ್ಸಿ ರಿಸ್ಟ್ರಿಕ್ಟ್ ಮಾಡಿದ್ರೂನೂ ಹೆಂಡ ಕೊಳ್ಳಕ್ ಮೇಲ್ಮೇಲ್ ಬೀಳ್ತೀನ್ ನನ್ಮನ್ಸನ್ ನೀನ್ ಕಾಣೆ’ ಎನ್ನುತ್ತಾ ಗುಡ್ ಓಲ್ಡ್ ದಿನಗಳಲ್ಲಿ ರೇಷನ್ ಅಂಗಡಿಯ ಮುಂದೆ ಸೀಮೆಯೆಣ್ಣೆಗೆ ನಿಂತ ಕ್ಯೂವನ್ನೂ ಮೀರಿಸಿ ನಿಂತಿದ್ದ ಹೆಣ್ಣೈಕ್ಳು, ಗಂಡೈಕ್ಳೇ ಸಾಕ್ಷಿ.

ವರದಾಚಾರ್ಯರ ನಾಟಕಕಂಪನಿಯಲ್ಲಿ ನಡೆದ ಪ್ರಸಂಗವೂ ಉಲ್ಲೇಖಾರ್ಹವೇ. ‘ಸತ್ಯಹರಿಶ್ಚಂದ್ರ’ ನಾಟಕವು ರಾತ್ರಿಯಿಡೀ ನಡೆದು ಬೆಳಗಿನಜಾವಕ್ಕೆ ಮುಗಿಯಿತು. ಪ್ರೇಕ್ಷಕರೆಲ್ಲ ಎದ್ದುಹೋದರೂ ವೃದ್ಧನೊಬ್ಬ ಕಣ್ಣೀರ್ಗರೆಯುತ್ತಾ ಅಲ್ಲಿಯೇ ಕುಳಿತಿದ್ದ. ‘ನಾಟಕದ ಪ್ರಭಾವವನ್ನು ಕಾಣಿ ಕೈಲಾಸಂ. ನಾಟಕದಿಂದ ಒಬ್ಬ ವ್ಯಕ್ತಿ ಬದಲಾದರೆ ಅದೊಂದು ದೊಡ್ಡ ಸಾಧನೆ’ ಎಂದರು ವರದಾಚಾರ್ಯರು. 

‘Maybe so. But, ಅವನಮೇಲೆ ಪ್ರಭಾವ ಯಾವ ರೀತಿ ಆಗಿದೇಂತ ತಿಳ್ಕೊಳೋದು ಸರಿಯನ್ಸತ್ತೆ’ ಎಂದರು ಕೈಲಾಸಂ. ಇಬ್ಬರೂ ವೃದ್ಧನ ಬಳಿ ಹೋದರು. 

‘ತುಂಬಾ ತಪ್ಮಾಡ್ಬಿಟ್ಟಿದ್ದೆ ಯಜಮಾನರೇ; ನನ್ನ ಜೀವನವನ್ನೇ ನಾಶ ಮಾಡಿಕೊಂಡುಬಿಟ್ಟಿದ್ದೆ. ನಿಮ್ಮ ನಾಟಕವು ನನ್ನ ಕಣ್ತೆರೆಸಿತು’ ಗದ್ಗದವೃದ್ಧ ನುಡಿದ. 

‘ಅಂದರೆ... ಇನ್ಮುಂದೆ ಸುಳ್ಹೇಳಲ್ಲಾನ್ನೂ...?’ ಕೇಳಿದರು ಕೈಲಾಸಂ. 

‘ಬಿಡ್ತು ಅನ್ನಿ. ಇಷ್ಟ್ವೊರ್ಷ ನಿಜ ಹೇಳೀ ಹೇಳೀ ಕೆಟ್ಟೆ. ಹರಿಶ್ಚಂದ್ರನ ತರಹಾನೇ ಎಲ್ಲವನ್ನೂ ಕಳ್ಕೊಂಡೆ. ಇನ್ನೆಷ್ಟು ದಿವಸ ಇದ್ದೇನು! ಇರುವಷ್ಟು ದಿವಸವೂ ನಿಜ ಹೇಳಲ್ಲಾಂತ ಶಪಥ ಮಾಡ್ತೀನಿ. ಇದೇ ನಾನು ಹೇಳ್ತಿರೋ ಲಾಸ್ಟ್ & ಫೈನಲ್ ನಿಜ’ ಎಂದನವ. 

‘ಕೊನೆಯಲ್ಲಿ ಹರಿಶ್ಚಂದ್ರನಿಗೆ ಎಲ್ಲವೂ ಮರಳಿ ಬಂತಲ್ಲಯ್ಯಾ...’ ಬೆರಗಾಗಿದ್ದ ವರದಾಚಾರ್ಯರು ಹೇಳಿದರು. 

‘ಅದೇನೋ ಗೊತ್ತಿಲ್ಲ ಯಜಮಾನ್ರೇ; ಅಷ್ಟು ಹೊತ್ತಿಗೆ ನನಗೆ ನಿದ್ರೆ ಬಂದ್ಬಿಟ್ಟಿತ್ತು’ ಎಂದುತ್ತರಿಸಿದ ವೃದ್ಧ. 

ಜಗದಲ್ಲಿ ಪ್ರಾಯಶಃ ಗಾಂಧೀಜಿಯ ಹೊರತಾಗಿ ಸಂಪೂರ್ಣ ಸತ್ಯವನ್ನೇ ಹೇಳಿಕೊಂಡು ಬದುಕಿದವರು ಒಬ್ಬರೂ ಇಲ್ಲ. ಧರ್ಮರಾಯ ‘ಕುಂಜರಃ’ ಎಂದು veiled truth ನುಡಿದ. ಕರ್ಣ ಪರಶುರಾಮನಿಗೆ ಸುಳ್ಳು ಹೇಳಿದ್ದ. ಹರಿಶ್ಚಂದ್ರನೂ ಸುಳ್ಳು ಹೇಳಿದ್ದನಂತೆ. ವಿಶ್ವಾಮಿತ್ರನು ‘ಕೊಡು ನನ್ನ ಹಣ’ ಎಂದು ಡಿಮ್ಯಾಂಡಿಸಿದಾಗ ‘ಹೇ ಪ್ರಭೋ, ದಯಾನಿಧೇ, ಕೊಂಚ ಸಮಯಾವಕಾಶವನ್ನು ನೀಡಿರೆಂದು ಬಿನ್ನಹ’ ಎಂದ ತಕ್ಷಣ ವಿಶ್ವಾಮಿತ್ರನ ಶಿಷ್ಯನು ದೂಲದವರೆಗೆ ಹಾರುತ್ತಾ ‘ಮುನಿವರ್ಯರೇ ಹರಿಶ್ಚಂದ್ರ ಸುಳ್ಳು ಹೇಳಿಬಿಟ್ಟ. ನೀವು ಗೆದ್ದಿರಿ’ ಎಂದು ಕುಣಿದಾಡಿದ. 

‘ಯಾವಾಗ ಸುಳ್ಳು ನುಡಿದನೋ?’ ಅಚ್ಚರಿಯಿಂದ ಕೇಳಿದರು ಋಷಿವರ್ಯರು. 

‘ನಿಮ್ಮನ್ನು ದಯಾನಿಧೇ ಎಂದನಲ್ಲ... ಲವಲೇಶವೂ ದಯೆಯಿಲ್ಲದ ನಿಮ್ಮನ್ನು ದಯಾನಿಧೇ ಎಂದದ್ದು ಸುಳ್ಳಲ್ಲವೇ?’ ಸವಾಲೆಸೆದ ಶಿಷ್ಯ! 

‘ನಿಜ ಹೇಳ್ಬೇಕೂಂದ್ರೇ...’ ಎಂದು ಆ ಸಂದರ್ಭದಲ್ಲಿ ಋಷಿವರ್ಯರೂ ನುಡಿದಿದ್ದಾರು. 

ಗಾಂಧೀಜಿಯ ಕಾಲದಲ್ಲಿ truth & nonviolence ಇದ್ದವು. ಈಗ truth ಎಂದರೆ ನಾನು violent ಆಗುತ್ತೇನೆ ಎನ್ನುವವರೇ ಹೆಚ್ಚು ಎಂದು ನಾನು ನಿಜ ಹೇಳಿದರೂ, ಸುಳ್ಳೇ ಹೇಳಿದರೂ ನೀವು ನಂಬ್ತೀರಿ ಅಲ್ವೇ? 


Comments