ಕಲ್ಪವೃಕ್ಷ

ಕಲ್ಪವೃಕ್ಷ

ಲೇಖನ - ಕನಕಾಪುರ  ನಾರಾಯಣ 



ಈಗಿನ ಕಾಲದಲ್ಲಿ ರಜೆಯಲ್ಲಿ ಮಕ್ಕಳಿಗೆ ಮನೋರಂಜನೆಗೆಂದು ಸಿನಿಮಾ,ಪಿಕ್ ನಿಕ್, ಬೀಚ್ ವಂಡರ್ಲ್ಯಾಂಡ್ ಈ ಥರದ ಸ್ಥಳಗಳಿಗೆ ಹೋಗಿ ದುಡ್ಡೂ ಖರ್ಚು ಮಾಡಿಕೊಂಡು,ದೇಹಕ್ಕೂ ಮನಸ್ಸಿಗೂ ಆಯಾಸ ಮಾಡಿಕೊಂಡು ಬರುವುದು ಪದೇ ಪದೇ ರಜೆಯಲ್ಲಿ ಮರುಕಳಿಸುತ್ತಿದೆ. ನಾವು ಮಕ್ಕಳಾಗಿದ್ದಾಗ ರಜೆಯಲ್ಲಿ ಅಜ್ಜನ ಊರಿಗೆ ಹೋಗುವುದು,ಅಲ್ಲಿ ಯಾವುದೇ ಪಾರ್ಕ್, ಬೀಚ್ ಇಲ್ಲದಿದ್ದರೂ ಖರ್ಚಿಲ್ಲದೇ ಕೆರೆ,ತೋಟ,ಆಲೆಮನೆಗಳಲ್ಲಿ ಆಡಿದ್ದು ಇಂದಿಗೂ ಮರೆಯಲಾಗದ ಅನುಭವಗಳು.ಸಂಜೆಯವೇಳೆಗೆ ತಾತನ ಜೊತೆಯಲ್ಲಿ ಗುಡಿಗೆ ಹೋಗಿಬರುವುದು,ಹಿಂತಿರುಗಿ ಬರುವಾಗ ಹಣ್ಣು ಕಾಯಿ ಕದ್ದು ತಾತನಿಂದ ಬೈಸಿಕೊಂಡದ್ದು ಇನ್ನೂ ನೆನಪಿದೆ.ಅಲ್ಲಿ ತಂಪಾದ ಸಂಜೆಯ ಹಳ್ಳಿಯ ದಾರಿಯಲ್ಲಿ ನಡೆದು ಬರುವಾಗ ಎತ್ತಿನ ಗಾಡಿಯ ಹಿಂದೆ ಜೋತುಬಿದ್ದು ಮಜ ಮಾಡುತ್ತಿದ್ದ ಸಮಯ ಇವೇ ಮೊದಲಾದ ಸವಿನೆನಪುಗಳು.ದಾರಿಯಲ್ಲಿ ನಡೆದು ಬರುವಾಗ ತಾತ ಹೇಳುತ್ತಿದ್ದ ಚಿಕ್ಕ ಚಿಕ್ಕ ಕಥೆಗಳು ಇನ್ನೂ ಮರೆಯುವಂತಿಲ್ಲ.ಅವುಗಳಲ್ಲಿ ಒಂದು ಸ್ವಾರಸ್ಯಕರವಾದ ಕಥೆಯನ್ನು ಈಗ ಹಂಚಿಕೊಳ್ಳಲು ಇಷ್ಟಪಡುತ್ತೇನೆ.        

 ಕಥೆ - ಹಿಂದೊಮ್ಮೆ ಬಸ್ಸು ಕಾರು ಇಲ್ಲದ ಕಾಲದಲ್ಲಿ ಯಾತ್ರಿಕನೊಬ್ಬ ನಡೆದು ಹೋಗುತ್ತಿದ್ದ.ಬಿಸಿಲಿನ ಬೇಗೆಯಿಂದ ಸುಸ್ತಾಗಿದ್ದ ಆತ ಒಂದು ಆಲದ ಮರದ ನೆರಳಿನಲ್ಲಿ ವಿಶ್ರಾಂತಿಗೆಂದು ಕುಳಿತ.ಹಾಯೆನಿಸಿತು.ತಂಪಾದ ನೆರಳೇನೋ ಸಿಕ್ಕಿತು ಆದರೆ ಸ್ವಲ್ಪ ನೀರು ಸಿಕ್ಕರೆ ಬಾಯಾರಿಕೆ ನಿವಾರಿಸಿಕೊಳ್ಳಬಹುದು ಎಂದು ಮನಸ್ಸಿನಲ್ಲಿ ಅಂದುಕೊಂಡ.ಕೂಡಲೇ ಒಂದು ಮಡಕೆಯಲ್ಲಿ ತಂಪಾದ ನೀರು! ಹಿಂದೆ ಮುಂದೆ ನೋಡದೆ "ಅರೆ ಇಲ್ಲೇ ನೀರೂ ಇದೆ"ಎಂದು ಕುಡಿದ,ಕೆಲ ನಿಮಿಷಗಳ ಕಾಲ ಸುಮ್ಮನಿದ್ದು ಹೊರಡಲು ಎದ್ದುನಿಂತ.ಹೊಟ್ಟೆಗೆ ಬಹಳ ಹಸಿವಾಗಿತ್ತು."ಅಯ್ಯೋ ಇನ್ನಷ್ಟು ದೂರ ನಡೆಯಬೇಕು ಹಸಿವೆ ಆಗುತ್ತಿದೆ ಎಲ್ಲಾದ್ರೂ ಊಟ ಸಿಕ್ಕರೆ? ಅನ್ನುವಷ್ಟರಲ್ಲಿ ಕಣ್ಮುಂದೆ ಭಾರೀ ಭೋಜನ! ’ಹಾ! ಇದೇನಿದು? ಅಂದುಕೊಂಡದ್ದೆಲ್ಲಾ ಕಣ್ಣಮುಂದೆ ಬರುತ್ತಿದೆಯಲ್ಲ?"ಎಂದು ಮೆಲ್ಲಗೆ ಅದನ್ನು ನಿಜವಾದ ಊಟವೇ ಎಂದು ಪರೀಕ್ಷಿಸಲು ಮುಟ್ಟಿ ನೋಡಿದ.ನಿಜ!!ನಿಜವಾಗಿಯೂ ಊಟ! ಚೆನ್ನಾಗಿ ಹೊಟ್ಟೆಭರ್ತಿ ತಿಂದ.ಇನ್ನೇನು? ಊಟದ ನಂತರ ನಿದ್ದೆ ಬರುವಹಾಗಾಯ್ತು,ತೂಕಡಿಕೆ ಶುರುವಾಯ್ತು."ಒಂದು ಹಾಸಿಗೆ ಇದ್ದಿದ್ದ.....ರೆ ಅನ್ನುವಷ್ಟರಲ್ಲಿ ಧೊಪ್ಪೆಂದು ಮೆತ್ತನೆಯ ಹಾಸಿಗೆ ಮೇಲಿಂದ ಬಿತ್ತು! ಅರೆ ಹಾಸಿಗೆ? ಇಂಥಾ ವೇಳೆಯಲ್ಲಿ..... ನನ್ನ ಸಂಗಾತಿಯೂ ಹತ್ತಿರ ಇದ್ದಿದ್ದ......ರೆ ಎನ್ನುವಾಗಾಗಲೇ ರೀ! ಎಂದು ಪಕ್ಕದಲ್ಲಿ ಪತ್ನಿ! ಆಶ್ಚರ್ಯ! ಭಯ! ಎರಡೂ ಒಟ್ಟಿಗೇ ಆಗೋಕ್ಕೆ ಶುರುವಾಯ್ತು "ಏನಿದು ಈ ಮರವೇನಾದರೂ ಕಲ್ಪವೃಕ್ಷವೇ?ಕೇಳಿದ್ದೆಲ್ಲಾ ಕೊಡುತ್ತಿದೆ"ಎಂದು ಮನಸ್ಸಿನಲ್ಲಿ ಯೋಚಿಸುವಹೊತ್ತಿಗೆ ಪಕ್ಕದಲ್ಲಿದ್ದ ತನ್ನ ಪತ್ನಿ ರಾಕ್ಷಸಿಯಾಗಿ ಪರಿವರ್ತನೆಯಾದಳು.ಅಯ್ಯೋ ಇದೆಲ್ಲಾ ಈ ರಾಕ್ಷಸಿಯ ಮಾಯೆ!ಇಲ್ಲೇ ಇದ್ದರೆ ಇವಳು ನನ್ನನ್ನೇ ತಿಂದುಬಿಡುತ್ತಾಳೆ ಎಂದು ಓಡಲು ಆರಂಭಿಸಿದ,ಆದರೆ ಅವನು ಅಂದುಕೊಂಡಂತೆ ಏನೇನು ನಡೆಯಿತೋ ಹಾಗೇ ಆ ರಾಕ್ಷಸಿ ಅವನನ್ನು ಹಿಡಿದು ತಿಂದೇ ಬಿಟ್ಟಳು.ಅಲ್ಲಿಗೆ ಕಥೆ ಮುಗಿಯಿತು. ನಮಗೆ ಆ ಕ್ಷಣಕ್ಕೆ ಕಣ್ಣರಳಿಸುವ ಆ ಕಥೆ ಬಹಳ ವರ್ಷಗಳ ನಂತರ ಅದರ ಒಳಾರ್ಥ ತಿಳಿಯಲು ಸಾಧ್ಯವಾಯಿತು.       

 ನಾನರಿತದ್ದು  ಇಷ್ಟೆ, ಕೇಳಿದ್ದನ್ನು ಕೊಡುವ,ಬಯಸಿದ್ದನ್ನು ನಡೆಸಿಕೊಡುವ ಕಲ್ಪವೃಕ್ಷದ ಕೆಳಗೇ ನಾವು ಬದುಕುತ್ತಿದ್ದೇವೆ.ಆ ಕಲ್ಪವೃಕ್ಷ ಮತ್ತಾವುದೂ ಅಲ್ಲದೆ "ನಮ್ಮ ಮನಸ್ಸು" ನಾವು ಅಂದುಕೊಡದ್ದನ್ನು, ಬಯಸಿದ್ದನ್ನು ದೊರಕಿಸಿಕೊಡುವ ಅಪಾರ ದಿವ್ಯ ಶಕ್ತಿ ಈ ಮನಸ್ಸಿಗೆ ಇದೆ.ನಾವು ಏನನ್ನು ತಪಸ್ಸಿನಂತೆ ಸದಾ ಬಯಸುತ್ತೇವೋ ಅದು ಖಂಡಿತವಾಗಿ ನೆರವೇರುತ್ತದೆ. ಕೆಲವರಿಗೆ ಬೇಗ, ಇನ್ಕೆಲವರಿಗೆ ನಿಧಾನ,ಅವರವರ ಕರ್ಮಾನುಸಾರವಾಗಿ ಈಡೇರುತ್ತದೆ.ಆದರೆ ಪ್ರತಿಯೊಬ್ಬರ ಮನದಾಳದ ನಿರಂತರ ಇಚ್ಚೆಗಳು ಪೂರೈಸುವುದು ನಿಶ್ಚಿತ.ಬಯಕೆಗಳು ಒಳ್ಳೆಯದಾಗಿರಲಿ, ಕೆಟ್ಟದ್ದಾಗಿರಲಿ ಅದು ಆಳವಾಗಿ ಮನಸ್ಸಿನಲ್ಲಿ ಬೇರೂರಿದ್ದರೆ ಸತತ ಪ್ರಯತ್ನ ತಾನೇ ಶುರುವಾಗಿ ಸಫಲತೆ-ಜಯ ಕಾಣುತ್ತದೆ. ಇದನ್ನೇ ಮೈಂಡ್ ಪವರ್ ಎನ್ನುತ್ತಾರೆ ಎಂದು ಸಿಡ್ನಿಯಲ್ಲಿ  ಡಾ ಕೃಷ್ಣನ್ ಅವರ ಎರಡು ಮನಃಶಾಸ್ತ್ರ ತಜ್ಞರ ಕಾರ್ಯಾಗಾರದಲ್ಲಿ ಭಾಗವಹಿಸಿದಾಗ ತಿಳಿದದ್ದು.  ಡಾಕ್ಟರೇಟ್ ಪಡೆಯುವವರು ಋಷಿಗಳೂ ಹಾಗೆ ಅಲ್ಲವೇ. ನಿರಂತರ ಏಕಾಗ್ರತೆಯಿಂದ ಮನಸ್ಸಿಟ್ಟು ಧ್ಯಾನಿಸಿ ಸಿದ್ಧಿ ಪಡೆಯುತ್ತಾರೆ. 

ಕೆಟ್ಟ ಹಾಗೂ ಬೇರೊಬ್ಬರಿಗೆ ಮಾರಕ ಎನ್ನುವ ಬಯಕೆಗಳು ಅಧರ್ಮದ ಸಂಕೇತ. ತಾನೂ ಬೆಳಗಿ ಮತ್ತೊಬ್ಬರಿಗೂ ಬೆಳಕು ಚೆಲ್ಲುವುದು ಒಳ್ಳೆಯ ಬಯಕೆ.ಹಾಗೇ ಸ್ವಾರ್ಥ ಬಯಕೆಗಳೂ ಶಾಂತಿಗೆ ಮಾರಕ. ಉದಾಹರಣೆ ಡಿ ವಿ ಜಿ ಅವರ ಕಗ್ಗದಲ್ಲಿ ಹೇಳುವಹಾಗೆ 

"ಜನಕಜೆಯ ದರುಶನದಿನಾಯ್ತು ರಾವಣ ಚಪಲ| 

ಕನಕಮೃಗದರುಶನದೆ ಜಾನಕಿಯ ಚಪಲ|| 

ಜನವವನ ನಿಂದಿಪುದು, ಕನಿಕರಿಪುದಾಕೆಯಲಿ| 

ಮನದ ಬಗೆಯರಿಯದದು - ಮಂಕುತಿಮ್ಮ||"  



ಇಲ್ಲಿ ರಾವಣ ಮತ್ತು ಜಾನಕಿ ಇಬ್ಬರಿಗೂ ಆಯಿತು ಚಪಲ(ಬಯಕೆ). ಜಾನಕಿಯ ಬಯಕೆ ಮತ್ತೊಬ್ಬರಿಗೆ ಕೆಡಕು ಅಗುವಂಥದ್ದಾಗಿರಲಿಲ್ಲ, ಆದರೆ ರಾವಣನ ಬಯಕೆ ಮತ್ತೊಬ್ಬರಿಗೆ ಕೆಡಕು ಮಾಡುವಂಥದ್ದಾಗಿತ್ತು.ಆದ್ದರಿಂದ ಜನ ಅವನ ಪಾತ್ರವನ್ನು ನಿಂದಿಸುತ್ತಾರೆ. 

ಕೆಟ್ಟ ಯೋಚನೆಗಳಿಂದ ಭಯ, ಆತಂಕ, ದುಗುಡ ಇನ್ನೂ ಅನೇಕ ಅನಾವಶ್ಯಕ ತೊಂದರೆಗಳ ಉದ್ಭವಕ್ಕೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ನಮ್ಮ ಮನಸ್ಸು ಸದಾ ಒಳ್ಳೆಯದನ್ನೇ ಬಯಸುತ್ತಿರಲಿ.

 

Comments

  1. ಚೆನ್ನಾಗಿದೆ. ಅಭಿನಂದನೆಗಳು. ಕಡೆಯಲ್ಲಿ, ವೇದೋಪನಿಷತ್ತುಗಳು ಸಹ ಇದನ್ನೇ ಹೇಳುವುದು ಎಂದು ಸೇರಿಸಬಹುದು ಭದ್ರಂ ಕರ್ಣೇಭಿ: ಶೃಣುಯಾಮದೇವಾ: ....

    ReplyDelete

Post a Comment