ಆಂಬೊಡೆ ಆರ್ಡರ್ ಪ್ರಕರಣವು

ಆಂಬೊಡೆ ಆರ್ಡರ್ ಪ್ರಕರಣವು

ಹಾಸ್ಯ ಲೇಖನ - ಅಣಕು ರಾಮನಾಥ್ 


 
‘ಗೌರಿಹಬ್ಬಕ್ಕೆ ಆಂಬೊಡೆ ಬೇಕೆ? ಈ ಕೆಳಕಂಡ ನಂಬರ್‌ಗೆ ಕರೆ ಮಾಡಿ’ ಎಂದಿತೊಂದು ಬೈಕ್‌ನ ಹ್ಯಾಂಡಲಿಗೂ ಹೆಡ್‌ಲೈಟಿಗೂ ಮಧ್ಯೆ ಸಿಕ್ಕಿಸಿದ್ದ ಪಾಂಪ್ಲೆಟ್. ಫೋನಾಯಿಸಿದೆ.
‘ಆನ್‌ಲೈನ್ ಆಂಬೊಡೆ ಅಸೋಸಿಯೇಟ್ಸ್ಗೆ ಸ್ವಾಗತ. ರುಚಿಕರ ಆಂಬೊಡೆಗಳ ತಾಣ ನಿಮ್ಮ ಸೇವೆಯಲ್ಲಿ. ಕನಿಷ್ಠ ಐವತ್ತು ಆಂಬೊಡೆಗಳಿಗೆ ಆರ್ಡರ್ ಕೊಡುವುದಾದರೆ ಒಂದನ್ನು ಒತ್ತಿ. ಕಡಿಮೆಯಾದರೆ ನಿರ್ಗಮನ ಗುಂಡಿಯನ್ನು ಒತ್ತಿ’ ಎಂದಿತು ಅತ್ತಲಿನ ಧ್ವನಿ. ಅಕ್ಕಪಕ್ಕದ ಅಪಾರ್ಟ್ಮೆಂಟಿನವರೂ ಇಪ್ಪತ್ತೈದೋ ಮೂವತ್ತೋ ಕೊಳ್ಳುವ ಖಾತ್ರಿ ಇದ್ದುದರಿಂದ ಒಂದನ್ನು ಒತ್ತಿದೆ.
‘ಮೇಡ್ ಟು ಆರ್ಡರ್ ಆಂಬೊಡೆ ಸರ್ವೀಸ್‌ಗೆ ಸ್ವಾಗತ. ನಿಮ್ಮ ಆಂಬೊಡೆಗೆ ಬಳಸುವ ಕಡಲೆಬೇಳೆ ಶಿವಲಿಂಗು ಆಗಬೇಕಾದರೆ ಒಂದನ್ನು ಒತ್ತಿ, ಆತ್ಮಲಿಂಗು ಆಗಬೇಕಾದರೆ ಎರಡನ್ನು ಒತ್ತಿ’ ಎಂದಿತು ಧ್ವನಿ. ಒಂದನ್ನು ಒತ್ತಿದೆ.
‘ಕಡಲೆಬೇಳೆಯನ್ನು ತಣ್ಣೀರಿನಲ್ಲಿ ನೆನೆಸಬೇಕಾದರೆ ಒಂದನ್ನು ಒತ್ತಿ. ಬಿಸಿನೀರಿನಲ್ಲಿ ನೆನೆಸಬೇಕಾದರೆ ಎರಡನ್ನು ಒತ್ತಿ.’ ಎರಡನ್ನು ಒತ್ತಿದೆ.
‘ನೀರು ಸುಡುಬಿಸಿ ಇರಬೇಕಾದರೆ ಒಂದನ್ನು ಒತ್ತಿ. ಉಗುರುಬೆಚ್ಚಗೆ ಇರಬೇಕಾದರೆ ಎರಡನ್ನು ಒತ್ತಿ’. ಗೊಂದಲದಲ್ಲಿ ಬಿದ್ದೆ. ‘ಹೆಚ್ಚಿನ ವಿಷಯ ಬೇಕಿದ್ದಲ್ಲಿ ಈ ಬಟನ್ ಒತ್ತಿ ಎಂಬ ಸಲಹೆಯ ಜೊತೆಜೊತೆಗೇ ಒಂದು ಬಟನ್ ಫ್ಲ್ಯಾಷ್ ಆಗುತ್ತಿತ್ತು. ಫ್ಲ್ಯಾಷ್ ಬಟನ್ ಒತ್ತಿದೆ.
‘ಸುಡುಬಿಸಿ ನೀರು ಲೀಟರ್‌ಗೆ ಇಪ್ಪತ್ತು ರೂಪಾಯಿ. ಉಗುರುಬೆಚ್ಚಗಿನದು ಲೀಟರ್‌ಗೆ ಹತ್ತು. ಮತ್ತಷ್ಟು ಮಾಹಿತಿ ಬೇಕಾದರೆ ಸ್ಟಾರನ್ನು ಒತ್ತಿ’ ಎಂದಿತದು. ಸ್ಟಾರ್ ಒತ್ತಿದೆ. ‘ಉಗುರುಬೆಚ್ಚಗಿನ ನೀರು ರೀಸೈಕಲ್ ಆದಂತಹದ್ದು. ಇನ್ನಾರೋ ಬಳಸಿ ಬಿಟ್ಟ ನೀರನ್ನು ಕಡಿಮೆ ಬೆಲೆಗೆ ಕಡಿಮೆ ಬಿಸಿಯಲ್ಲಿ ಕೊಡುತ್ತೇವೆ’ ಎಂಬ ವಿವರಣೆ ಇತ್ತು. ಸುಡುಬಿಸಿನೀರಿಗಾಗಿ ಒಂದನ್ನು ಒತ್ತಿದೆ.
‘ಕೆಟಲ್‌ನಲ್ಲಿ ಬಿಸಿ ಮಾಡಿದ ನೀರಿಗಾದರೆ ಒಂದನ್ನು ಒತ್ತಿ. ತಾಮ್ರದ ಚೊಂಬಲ್ಲಿ ಬಿಸಿ ಮಾಡಿದ್ದಾದರೆ ಎರಡನ್ನು ಒತ್ತಿ’ ಎಂದುದಲ್ಲದೆ ಪಕ್ಕದಲ್ಲಿ ಫ್ಲ್ಯಾಷೂ ಕಾಣುತ್ತಿತ್ತು. ಫ್ಲ್ಯಾಷ್ ಒತ್ತಿದೆ.
‘ನೀವು ಇಂದಿನವರಾದರೆ ಒಂದನ್ನು ಒತ್ತಿ. ಹಿಂದಿನವರಾದರೆ ಮಡಿಗೆ ಪ್ರಾಮುಖ್ಯತೆ ಕೊಡಬೇಕಾದ್ದರಿಂದ ಎರಡನ್ನು ಒತ್ತಿ’ ಎಂದಿತ್ತು ವಿವರಣೆ. ಎರಡನ್ನು ಒತ್ತಿದೆ.
‘ಅಭಿನಂದನೆಗಳು. ಇಷ್ಟು ಶೀಘ್ರವಾಗಿ ಬೇಳೆ ಮತ್ತು ನೀರನ್ನು ಆಯ್ಕೆ ಮಾಡಿದ್ದಕ್ಕಾಗಿ ನಿಮಗೆ ಒಂದು ಆಂಬೊಡೆ ಕೂಪನ್ ನೀಡಲಾಗುತ್ತದೆ. ಬೀಪ್‌ನ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ’ ಎಂದಿತದು. ಬೀಪ್‌ಗೆ ಕಾದು, ನಂಬರ್ ದಾಖಲಿಸಿದೆ.
‘ಆಆಅಗೆ ಮತ್ತೆ ಸ್ವಾಗತ. ನಿಮ್ಮ ಆಂಬೊಡೆಗೆ ಹಾಕುವ ತೆಂಗಿನಕಾಯಿ ಪೂರ್ಣ ಬಿಳಿಯದ್ದಾಗಿರಬೇಕಾದರೆ ಒಂದನ್ನು ಒತ್ತಿ. ಜುಂಗುವರ್ಣ ಮಿಶ್ರಿತವಾಗಿರಬೇಕಾದರೆ ಎರಡನ್ನು ಒತ್ತಿ.’
ವೈದ್ಯರು ನಾರಿನ ಅಂಶವಿರುವ ಪದಾರ್ಥವನ್ನು ತಿನ್ನಿ ಎಂದು ಹೇಳಿದ್ದುದು ನೆನಪಾಗಿ ಎರಡನ್ನು ಒತ್ತಿದೆ. 


‘ನಾರು ಹೆಚ್ಚು ತುರಿ ಕಡಿಮೆ ಬೇಕಿದ್ದರೆ ಒಂದನ್ನು ಒತ್ತಿ. ನಾರು ಕಡಿಮೆ ತುರಿ ಹೆಚ್ಚು ಬೇಕಿದ್ದರೆ ಎರಡನ್ನು ಒತ್ತಿ.’ ಎರಡನ್ನು ಒತ್ತಿದೆ.
‘ಜಸ್ಟ್ ಗ್ರೇಟೆಡ್ ತುರಿ ಬೇಕಿದ್ದರೆ ಒಂದನ್ನು ಒತ್ತಿ. ಮೊದಲೇ ತುರಿದು ಪ್ಯಾಕ್ ಮಾಡಿರುವುದು ಬೇಕಿದ್ದರೆ ಎರಡನ್ನು ಒತ್ತಿ.’ ಒಂದನ್ನು ಒತ್ತಿದೆ.
‘ಕ್ಷಮಿಸಿ. ಹಬ್ಬದ ದಿನ ಹತ್ತಿರವಿರುವುದರಿಂದ ಜಸ್ಟ್ ಗ್ರೇಟೆಡ್‌ಗೆ ಬೇಕಾದ ಜನರು ಲಭ್ಯವಿಲ್ಲ. ಅನ್ಯ ಆಯ್ಕೆಗಳಿಗಾಗಿ ಫ್ಲ್ಯಾಷ್ ಬಟನ್ ಒತ್ತಿರಿ.’
ಫ್ಲ್ಯಾಷ್ ಬಟನ್ ಒತ್ತಿದೆ. ‘ನೀವೇ ಕೈಯಾರೆ ತುರಿದ ತುರಿ ಕಳುಹಿಸಿದರೆ ಆರು ಆಂಬೊಡೆಗಳ ಟಾಪಪ್ ಆಫರ್ ದೊರೆಯುತ್ತದೆ. ತುರಿ ಕಳುಹಿಸುವುದಾದರೆ ಒಂದನ್ನು ಒತ್ತಿ. ಆಗುವುದಿಲ್ಲವೆಂದರೆ ಎರಡನ್ನು ಒತ್ತಿ.’
ಒಂದನ್ನು ಒತ್ತಿದೆ.
‘ಉತ್ತಮ ಆಯ್ಕೆ. ನೀವೇ ಅಂಗಡಿಯಿಂದ ಕಾಯಿ ತರುವುದಾದರೆ ಒಂದನ್ನು ಒತ್ತಿ. ನಾವೇ ಕಳುಹಿಸಬೇಕಾದರೆ ಎರಡನ್ನು ಒತ್ತಿ.’ ಎರಡನ್ನು ಒತ್ತಿದೆ.
‘ಕ್ಷಮಿಸಿ. ನಮ್ಮ ಎಲ್ಲ ಎಕ್ಸಿಕ್ಯುಟಿವ್ ಕೋಕೋನಟ್ ಸಪ್ಲೈಯರ್ಸ್ ಕಾರ್ಯನಿರತರಾಗಿದ್ದಾರೆ. ಕೊಂಚ ಸಮಯದ ನಂತರ ಪ್ರಯತ್ನಿಸಿ’ ಎನ್ನುತ್ತಾ ಮ್ಯೂಸಿಕ್ ಹಾಕಿ ಕುಳ್ಳಿರಿಸಿತು. ಹದಿಮೂರು ನಿಮಿಷ ಏಳೂವರೆ ಸೆಕೆಂಡುಗಳ ನಂತರ ‘ಕರಿವಾಟೆಕಾಯಿ ಬೇಕಾದರೆ ಒಂದನ್ನು ಒತ್ತಿ. ಎಳೆಯದಾದರೆ ಎರಡನ್ನು ಒತ್ತಿ’ ಎಂಬ ಧ್ವನಿ ಮೂಡಿತು. ಒಂದನ್ನು ಒತ್ತಿದೆ.
‘ಕಾಯಿ ಒಡೆದಾಗ ಬಂದ ಎಳನೀರನ್ನು ನೀವೇ ಕುಡಿಯುವುದಾದರೆ ಒಂದನ್ನು ಒತ್ತಿ. ನಮಗೆ ಕಳುಹಿಸುವುದಾದರೆ ಅರ್ಧ ಆಂಬೊಡೆ ಟಾಪಪ್ ಆಫರ್ ಬಳಸಿಕೊಳ್ಳಲು ಎರಡನ್ನು ಒತ್ತಿ.’ ಎರಡನ್ನು ಒತ್ತಿದೆ.
‘ನಮ್ಮ ಎಕ್ಸಿಕ್ಯುಟಿವ್ ನಿಮ್ಮ ಮನೆಗೆ ಕಾಯಿ ತಂದು, ನೀವು ತುರಿಯನ್ನು ನಮಗೆ ಡನ್ಝೋ ಮೂಲಕ ಪಾರ್ಸಲ್ ಮಾಡಿದ ನಂತರ ಮತ್ತೊಮ್ಮೆ ಕರೆ ಮಾಡಿ. ಕರೆ ಈ ಹಂತದಿಂದಲೇ ಮುಂದುವರಿಯುತ್ತದೆ’ ಎನ್ನುತ್ತಾ ಲೈನ್ ಡಿಸ್‌ಕನೆಕ್ಟ್ ಆಯಿತು.
ಕಾಯಿ ಬಂದಿತು. ‘ಹಬ್ಬಕ್ಕೆ ಮನೆ ಕ್ಲೀನ್ ಮಾಡಿಸೋದನ್ನ ಸೂಪರ್‌ವೈಸ್ ಮಾಡ್ಬೇಕು. ಟೈಮಿಲ್ಲ. ನೀವೇ ತುರೀರಿ’ ಎಂದಿತು ಕಿಚನ್‌ಟಂಗ್. ತುರಿದೆ. ಪಾರ್ಸಲಿಸಿ ಮತ್ತೆ ಡಯಲ್ ಒತ್ತಿದೆ.
‘ಹಸಿಮೆಣಸಿನಕಾಯಿ ಬೇಕಾದರೆ ಒಂದನ್ನು ಒತ್ತಿ. ಒಣಮೆಣಸಿನಕಾಯಿ ಬೇಕಾದರೆ ಎರಡನ್ನು ಒತ್ತಿ.’
ನನಗೆ ಆಂಬೊಡೆಯೆಂದರೆ ಕೆಂಬಣ್ಣವೇ ಇರಬೇಕಾದ್ದರಿಂದ ಎರಡನ್ನು ಒತ್ತಿದೆ.
‘ಗುಂಟೂರಿನದು ಬೇಕಾದರೆ ಒಂದನ್ನು ಒತ್ತಿ, ಬ್ಯಾಡಗಿಯದಾದರೆ ಎರಡನ್ನು ಒತ್ತಿ.’ ಒಂದನ್ನು ಒತ್ತಿದೆ.
‘ತೊಟ್ಟು ಬಿಡಿಸಿದ್ದು ಬೇಕಾದರೆ ಒಂದನ್ನು ಒತ್ತಿ. ತೊಟ್ಟು ಇರುವುದು ಬೇಕಾದರೆ ಎರಡನ್ನು ಒತ್ತಿ.’ ಒಂದನ್ನು ಒತ್ತಿದೆ.
‘ಮೆಣಸಿನಕಾಯನ್ನು ಮಿಶ್ರಣಕ್ಕೆ ಸೇರಿಸುವುದಕ್ಕೆ ಮುಂಚೆ ತೊಳೆಯಬೇಕಾದರೆ ಒಂದನ್ನು ಒತ್ತಿ. ಪ್ಯಾಕೆಟ್ಟನಿನ ಹಾಗೆಯೇ ಪಾತ್ರೆಗೆ ಸುರಿಯುವುದಾದರೆ ಎರಡನ್ನು ಒತ್ತಿ.’ ಒಂದನ್ನು ಒತ್ತಿದೆ.
‘ತೊಳೆಯಲು ಬಿಸಿನೀರು ಬಳಸಬೇಕಾದರೆ ಒಂದನ್ನು ಒತ್ತಿ...’
ಓಹ್! ಇದು ಮೊದಲಿನ ಹಂತಕ್ಕೇ ಬಂದಿತು. ಹೀಗೆಯೇ ಮುಂದುವರಿದರೆ ಗಣೇಶನ ಬದಲು ಅನಂತನ ಹಬ್ಬಕ್ಕೆ ಆಂಬೊಡೆಗೆ ಆರ್ಡರ್ ಪ್ಲೇಸ್ ಮಾಡಬಹುದಷ್ಟೆ ಎನ್ನಿಸಿ ಕಾಲ್ ಕಟ್ ಮಾಡಿ ಸಮೀಪದ ‘ಗುಂಡಣ್ಣ ಕ್ಲೀನ್ ಬ್ರಾಹ್ಮಿನ್ಸ್ ಕುಕ್ಸ್ ಗಿಲ್ಡ್’ನಿಂದ ಆಂಬೊಡೆ ತರುವುದೆಂದು ನಿರ್ಧರಿಸಿ ಎದ್ದೆ. ಫೋನ್ ರಿಂಗ್ ಆಯಿತು.
‘ವಿ ನೋಟೀಸ್ ದಟ್ ಯೂ ಹ್ಯಾವ್ ಲೆಫ್ಟ್ ಯುವರ್ ಆರ್ಡರ್ ಹಾಫ್ ವೇ ಸರ್. ನಮ್ಮಿಂದ ತೊಂದರೆ ಆಗಿದ್ದರೆ ಕ್ಷಮಿಸಿ. ಮೆಣಸಿನಕಾಯಿ ತೊಳೆಯುವುದರ ಬಗ್ಗೆ ನಾವೇ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇನ್ನು ಕೆಲವೇ ಪ್ರಶ್ನೆಗಳಷ್ಟೆ’ ಜೇನಿನಲ್ಲಿ ಅದ್ದಿದ ಹಲಸಿನ ತೊಳೆಯ ಧ್ವನಿಯಲ್ಲಿ ನುಡಿಯಿತೊಂದು ಅರಗಿಣಿ. ನಾನು ವೆಸ್ಲಿ ಹಾಲ್ ಚೆಂಡಿಗೆ ಬೌಲ್ಡ್ ಆದ ನಂಬರ್ ಲೆವೆನ್‌ನಂತೆ ಶರಣಾದೆ.
‘ಆಂಬೊಡೆಗೆ ಬೆಳ್ಳುಳ್ಳಿ ಹಾಕಬೇಕಾದರೆ ಒಂದನ್ನು ಒತ್ತಿ. ಬೇಡವಾದರೆ ಎರಡನ್ನು ಒತ್ತಿ.’ ಒಂದನ್ನು ಒತ್ತಿದೆ.
‘ಈ ಮೊದಲು ನೀವು ಮಡಿಯವರೆಂದು ಬಟನ್ ಒತ್ತಿದ್ದೀರಿ. ಈಗ ಬೆಳ್ಳುಳ್ಳಿಗೆ ಬಟನ್ ಒತ್ತಿರುವುದರಿಂದ ನಿಮ್ಮ ಆರ್ಡರ್ ಸ್ವೀಕೃತವಾಗುವುದಿಲ್ಲ. ನಿಮ್ಮ ಆಯ್ಕೆಯನ್ನು ಮಡಿಯಲ್ಲಿ ಬದಲಿಸುವುದಾದರೆ ಒಂದನ್ನು ಒತ್ತಿ. ಬೆಳ್ಳುಳ್ಳಿಯಲ್ಲಿ ಬದಲಿಸುವುದಾದರೆ ಎರಡನ್ನು ಒತ್ತಿ.’ ಎರಡನ್ನು ಒತ್ತಿದೆ.
‘ಹಿಟ್ಟಿಗೆ ಕಲ್ಲುಪ್ಪನ್ನು ಹಾಕಬೇಕಾದರೆ ಒಂದನ್ನು ಒತ್ತಿ. ಪುಡಿ ಉಪ್ಪನ್ನು ಹಾಕಬೇಕಾದರೆ ಎರಡನ್ನು ಒತ್ತಿ.’ ಎರಡನ್ನು ಒತ್ತಿದೆ.
‘ಸೈಂಧವಲವಣದ ಪುಡಿಯನ್ನಾದರೆ ಒಂದನ್ನು ಒತ್ತಿ. ಸಮುದ್ರದಿಂದ ಪಡೆದದ್ದಾದರೆ ಎರಡನ್ನು ಒತ್ತಿ.’ ಎರಡನ್ನು ಒತ್ತಿದೆ.
‘ಅಯೋಡೈಸ್ಡ್ ಆದರೆ ಒಂದನ್ನು ಒತ್ತಿ. ನಾನ್-ಅಯೋಡೈಸ್ಡ್ ಆದರೆ ಎರಡನ್ನು ಒತ್ತಿ.’ ಒಂದನ್ನು ಒತ್ತಿದೆ.
‘ಕರಿದದ್ದಾದರೆ ಒಂದನ್ನು ಒತ್ತಿ; ಆವಿಯಲ್ಲಿ ಬೇಯಿಸಿದ್ದಾದರೆ ಎರಡನ್ನು ಒತ್ತಿ.’
ಬೇಯಿಸಿದ್ದನ್ನು ಆಂಬೊಡೆಯೆಂದು ಕರೆಯುವರೆಂದು ಅಂದಿನವರೆಗೆ ಕೇಳಿಯೇ ಇರಲಿಲ್ಲ. ಎರಡನ್ನು ಒತ್ತಿದೆ.
‘ಕಡಲೆಕಾಯಿಯೆಣ್ಣೆಯಲ್ಲಿ ಕರಿಯಬೇಕಾದರೆ ಒಂದನ್ನು ಒತ್ತಿ. ರಿಫೈನ್ಡ್ ಆಯಿಲ್‌ನಲ್ಲಿ ಕರಿದಿದ್ದಾದರೆ ಎರಡನ್ನು ಒತ್ತಿ.’ ಒಂದನ್ನು ಒತ್ತಿದೆ.

‘ನಿಮ್ಮ ಕೊಲೆಸ್ಟ್ರಾಲ್ ಲೆವೆಲ್ ಜಿಡ್ಡು ತಿನ್ನಲು ಅನುಮತಿಸುತ್ತೆನ್ನುವ ಸರ್ಟಿಫಿಕೇಟನ್ನು ಅಪ್‌ಲೋಡ್ ಮಾಡಿ’ ಎಂದಿತು ಧ್ವನಿ. ಸರ್ಟಿಫಿಕೇಟ್ ಹುಡುಕಲೆಂದು ಮೇಲೆದ್ದೆ.
ಬಾಗಿಲ ಬಳಿ ನೆರಳಾಡಿತು. ಭಾವಮೈದ ನಿಂತಿದ್ದ. ಕೈಯಲ್ಲೊಂದು ಪಾರದರ್ಶಕ ಡಬ್ಬಿ, ಒಳಗೆ ಸೊಗಸಾಗಿ ಜೋಡಿಸಿದ ಆಂಬೊಡೆಗಳ ಸಾಲು.
ಫೋನ್ ಡಿಸ್‌ಕನೆಕ್ಟಿಸಿ ಬಾಗಿಲಿನತ್ತ ಉಸೇನ್ ಬೋಲ್ಟ್ ನ ಸ್ಪೀಡಿನಲ್ಲಿ ಧಾವಿಸಿದೆ. 


Comments

  1. ಈ ಆಂಬೊಡೆ ಮಾರಾಟದವರ ಕೊನೆಯಿಲ್ಲದ ಪ್ರಶ್ನೆಗಳನ್ನು ಕೇಳಿ, ಉತ್ತರಿಸುವ ತಾಳ್ಮೆ, ಸಹನೆ ಯಾವ ಜೀಮೂತವಾಹನನಲ್ಲೂ ಇರಲಾರದು! ಎಂದಿನಂತೆ ನಿಮ್ಮ ಊಹಾತೀತ ಉತ್ಪ್ರೇಕ್ಷೆಯಿಂದ ಕೂಡಿದ ಹಾಸ್ಯಕ್ಕೆ ಎಣೆಯಿಲ್ಲ.

    ReplyDelete
  2. ಬಹಳ ಹಾಸ್ಯಮಯವಾದ ಲೇಖನ ಈ ಆಂಬೊಡೆ ಆರ್ಡರ್ ಪ್ರಕರಣ. ಅಬ್ಬಬ್ಬಾ ಅದಿನ್ನೇನೇನೂ ಊಹೆಗಳು ಸಾಧ್ಯವೋ ಎಲ್ಲವೂ ಅಳವಡಿಸಿದ್ದೀರಿ. ತಡೆಯಲಾರದ ನಗು ಎಂದರೆ ತೊಟ್ಟು ಬಿಡಿಸಿದ ಮೆಣಸಿನ ಕಾಯಿ ಮತ್ತು ಈ ಮೊದಲು ತಾವು ಮಡಿಯವರೆಂದು ಬಟನ್ ಒತ್ತಿದ್ದೀರಿ. ಎಂದದ್ದು.

    ReplyDelete

Post a Comment