ಪ್ರೇಮ್ ಜೋಗನ್ ಬನ್ ಕೇ...

 ಪ್ರೇಮ್ ಜೋಗನ್ ಬನ್ ಕೇ...

ಲೇಖನ - ಶ್ರೀಮತಿ ಮಂಜುಳಾ ಡಿ

ಚುಪ್ ನಾ ಸಕೇಗಾ ಇಷ್ಕ್ ಹಮಾರಾ
ಚಾರೋ ತರಫ್ ಹೈ ಇನಕಾ ಉಜಾಲಾ... 



ಟಿ ವಿ ಯಲ್ಲಿ ಸಾಗುತ್ತಿದ್ದ ಹಾಡಿಗೆ ಮಧೂಬಾಲ ಅದ್ಭುತ ಭಾವ ಪ್ರದರ್ಶಿಸುತ್ತಿದ್ದಳು. ಮುಘಲ್ ಆಜóಮ್ ಸಿನೆಮಾದ ಗೀತೆಯಲ್ಲಿ ಸಾಲಿನೊಂದಿಗೆ ಅನಾರ್ಕಲಿಯ  ಚಹರೆ ಸಹಸ್ರ ಕನ್ನಡಿಯ ಗೋಡೆಯ ಒಂದು ಬದಿಯಲ್ಲಿ ಪ್ರತಿಫಲಿಸಿದರೆ, ಇನ್ನೊಂದು ಬದಿಯಲ್ಲಿ ಸಲೀಂನ ಚಹರೆ. ನಂತರ ಇಬ್ಬರದೂ ಸೇರಿ ಪ್ರತಿಫಲಿಸುತ್ತದೆ. ಬಲಿಷ್ಠ ಸಂವಾದಗಳು, ವೈಭವಯುತ ಚಿತ್ರೀಕರಣ, ಮಹಾನ್ ನಟರ ಮೇಳ ಇವೆಲ್ಲದರೊಂದಿಗೆ ಅತ್ಯದ್ಬುತ ಎನಿಸುವ ನೌಷಾದ್ ಅವರ ಸಂಗೀತ, ಏಕಮೇವವಾಗಿ ಮೇಳೈಸಿ ಸಿನೆಮಾ ಆದಂತಿದೆ. ಸುಮ್ಮನೇ ಸತ್ವವನ್ನಷ್ಟೇ ಮನಸ್ಸಿನಲ್ಲಿ ಹೀರಿಕೊಳ್ಳುತ್ತಾ ಆಸ್ವಾದಿಸುವಂತಹ ತುಂತುರು ಮಳೆಮುಘಲ್ ಆಜóಮ್ ಒಂದು ಸಿನೆಮಾ ಅನ್ನುವುದಕ್ಕಿಂತ ಭಾರತೀಯ ಸಿನೆಮಾ ಕ್ಷೇತ್ರದ  ಸದಾಕಾಲದ ಮಹಾಕಾವ್ಯವಾಗಿದೆ. ಸಿನೆಮಾದ ಹೆಸರಿನೊಂದಿಗೆ ಹಲವು ಪ್ರಶ್ನೆಗಳು ಏಳುತ್ತವೆ. ಆಕಾರದಾಚೆಗಿನ ಧಾರಾಕಾರ ಮಳೆಯೊಂದು ನಮ್ಮೊಳಗಿನ ಚಿಲುಮೆಗಳನ್ನು ಮೀಟಿದಂತೆ. ಸಿನೆಮಾ ನಿರ್ಮಿಸಿಲು ವ್ಯಯಿಸಿದ ಭರ್ಜರಿ 16 ವರ್ಷಗಳು!!! ನಿಜಕ್ಕೂ ಅಷ್ಟು ವರ್ಷ ಒಂದು ಸಿನೆಮಾದ ಮೇಲೆ ಹೆಚ್ಚು-ಕಡಿಮೆ ಜೀವಿತದ ಮುಖ್ಯ ಕಾಲಾವಧಿ! ವ್ಯಯಿಸುವ ಅಗತ್ಯವಿತ್ತಾ!!!  ಎನ್ನುವುದಕ್ಕೆ ಅರ್ಥ ಹುಡುಕುವಂತಾಗುತ್ತದೆ.


     “
ರೋಮ್ ವಾಸನ್ಟ್ ಬಿಲ್ಟ್ ಇನ್ ಡೇಎನ್ನುವುದನ್ನು ಹಠ-ಸುಧೀರ್ಘ ಪ್ರಯತ್ನಗಳ ಮಧ್ಯೆ ಮಧ್ಯೆ ತೂರುವ ಅನುಮಾನಗಳನ್ನು ದೂರಪಡಿಸಿಕೊಳ್ಳುವ ಸಂಧರ್ಭಗಳಲ್ಲಿ. ಸಮಾಧಾನಪಡಿಸಿಕೊಳ್ಳಲು ಹೇಳಿಕೊಳ್ಳುತ್ತೇವಾದರೂ, ಪಾಲಿಸುವುದು ಅಷ್ಟೇ ದುಸ್ತರ ಅಸಹನೀಯ. ಬೆಳಕಿನ ವೇಗದಲ್ಲಿ ಓಡುತ್ತಿರುವ ಜಗತ್ತಿನಲ್ಲಿ ತುಸು ನಿಂತರೂ ರೇಸಿನಲ್ಲಿ ಹಿಂದೆ ಉಳಿದಂತೆ ಎಂದೇ ಭಾವಿಸಲಾಗುತ್ತದೆ. ತಾಂತ್ರಿಕ ಶಿಕ್ಷಣ-ವೈದ್ಯದಂತಹ ಓದುಗಳನ್ನು ಓದುವುದು, ಫಾರಿನ್ ನತ್ತ ಹಾರುವುದು ಎಂಬಂತ ಒನ್ ಲೈನ್ ಸ್ಟೋರಿಯ ಜೀವಿತಗಳ ಕಾಲದಲ್ಲಿ, ಕಲೆ-ಸಾಹಿತ್ಯ-ಸಿನೆಮಾ-ನಟನೆ-ಕೃಷಿ-ರಾಜಕೀಯ ಇಂತಹ ಕ್ಷೇತ್ರಗಳ ಆಯ್ಕೆಯನ್ನು ರೇಸ್ ನಲ್ಲಿ ಹಿಂದೆ ಬಿದ್ದವರೆಂದೇ ಭಾವಿಸಲಾಗುತ್ತದೆ. ಏಕೆಂದರೆ  ಇಂಥಹ ಹಾದಿಯಲ್ಲಿ ತುಸು ದೂರ ಸಾಗಲು ಕನಿಷ್ಠ 10-15 ವರ್ಷ ಕಾಲಾವಕಾಶ ಬೇಕಾಗುತ್ತದೆ. ಹಾದಿ ದುಸ್ತರ-ದುರ್ಗಮ-ಕಡಿದಾದ ಹಾದಿ ಏಕೆಂದರೆ ಅಲ್ಲಿ ಒಬ್ಬರೇ ಚಲಿಸಬೇಕಾಗುತ್ತದೆ. ಇಷ್ಟೊಂದು ಶ್ರಮದ ಅಗತ್ಯವಾದರೂ ಏನು ಎಂಬ ಪೆಂಡಭೂತ ಪ್ರಶ್ನೆಗಳು ಮನುಷ್ಯಾಕಾರದಲ್ಲಿ ಸದಾ ಬೆನ್ನತ್ತಿರುತ್ತವೆ. ಆದರೂ ನಡೆದ ನಂತರ ಹೊಸ ಹಾದಿ ನಿರ್ಮಾಣವಾಗಿ ಶಾಶ್ವತತೆಗೆ ತೆರೆದುಕೊಳ್ಳುತ್ತದೆ. ಇದಕ್ಕೆ ಪ್ರಸ್ತುತ ಜಗತ್ತಿನ ಅರವಿಂದ ಕೇಜ್ರೀವಾಲ್ ಮತ್ತು ಮೊದಲ ಮಹಿಳಾ ಕುಸ್ತಿಪಟು ಫೋಗಟ್ ಅತ್ಯಂತ ಉತ್ತಮ ನಿದರ್ಶನಗಳೆನಿಸುವುದು.


ದೊಡ್ಡ ಸಂಗತಿಗಳು ಘಟಿಸಲು ಬಹಳಷ್ಟು ಕಾಲಾವಕಾಶ ಬೇಕಾಗುತ್ತದೆ. ಇಂತಹ ಹಾದಿ ಕ್ರಮಿಸಲು ಒಂದೇ ಇಂಧನಬರ್ನಿಂಗ್ ಡಿಸೈರ್”. ಇಂತಹ ಬಯಕೆಯ ಕಿಚ್ಚಿನ ಕಾವು ಸದಾ ಏಳಿಸಿ ಹಾದಿ ನಡೆಸುತ್ತದೆ. ಮುಘಲ್ ಆಜóಮ್ ಸಿನೆಮಾದ ಹಿಂದೆ ಇದ್ದ ಅಂತಹ ಕಿಚ್ಚು ಕೆ ಆಸೀಫ್ ಅವರದ್ದು. ಆಗಸ್ಟ್-5 1960 ರಂದು ತೆರೆಕಂಡ ಸಿನೆಮಾ 2020 ರಲ್ಲಿ 60ನೇ ವರ್ಷದ ಆಚರಣೆ ಸಂಧರ್ಭದಲ್ಲಿ ರಾಜ್ ಕುಮಾರ್ ಕೇಸ್ವಾನಿ ಅವರಿಂದ ವಿರಚಿತ, ಖ್ಯಾತ ಚಿತ್ರಕಾರ ಎಂ ಎಫ್ ಹುಸೇನ್ ಅವರ 15 ಚಿತ್ರಗಳನ್ನೊಳಗೊಂಡದಾಸ್ತಾ--ಮುಘಲ್--ಆಜಮ್ಪುಸ್ತಕ ಪ್ರಕಟಗೊಂಡಿತು. ಮುಘಲ್ ಆಜóಮ್ ತೆರೆಗೆ ಬರುವವರೆಗೂ ಹಾದ ವಿವಿಧ ಮಜಲುಗಳ ಹಾದಿಯನ್ನು ಬಹು ಸೊಗಸಾಗಿ ಅಕ್ಷರಗಳಲ್ಲಿ ಮೂಡಿಸಿದ್ದಾರೆ ಕೇಶ್ವಾನಿ ಅವರು.


ಇಡೀ ಪುಸ್ತಕ ಹಾದ ನಂತರ ಮನಸ್ಸಿನಲ್ಲಿ ಉಳಿಯುವುದು ಒಂದೇ ಚಿತ್ರ ಅದು ಕೆ.ಆಸೀಫ್ ಅವರದ್ದು. ಒಂದು ಅಮೋಘ ವ್ಯಕ್ತಿತ್ವವಾಗಿ, ಪ್ಯಾಷನ್-ಹುಚ್ಚುತನ-ಜೀವೋನ್ಮಾದತೆಗೆ ದ್ಯೋತಕವಾಗಿ ಬಹುವಾಗಿ ಆವರಿಸಿಬಿಡುತ್ತಾರೆ. ಭಾರತೀಯ ಸಿನೆಮಾ ಕ್ಷೇತ್ರ ಕಂಡ ಘನ ನಿರ್ಮಾಪಕ ನಿರ್ದೇಶಕರಾದ ಇವರು 3 ದಶಕಗಳ ಹಿಂದಿ ಸಿನೆಮಾ ಕ್ಷೇತ್ರದ ಹಾದಿಯಲ್ಲಿ ನಿರ್ದೇಶಿಸಿದ್ದು ಕೇವಲ ನಾಲ್ಕು ಸಿನೆಮಾಗಳು. ಅದರಲ್ಲೂ ಒಂದು ಅಪೂರ್ಣ. ಆದರೆ ಅವರು ನಿರ್ಮಿಸಿ -ನಿರ್ದೇಶಿಸಿ-ಸ್ಕ್ರಿಪ್ಟ್ ಬರೆದ ಮುಘಲ್ ಆಜóಮ್ ಭಾರತೀಯ ಚಿತ್ರರಂಗದ ಮಹಾಕಾವ್ಯವಾಗಿ ಪ್ರಖರಗೊಂಡಿರುವ ಆವರಣ.
ಮುಘಲ್ ಆಜóಮ್ ನಿರ್ಮಾಣದ ವೇಳೆ ಎರಡು ಘಟನೆಗಳು ಸಿನೆಮಾ ಯಾಕೆ ಸದಾ ಕಾಲದ ಮಹಾಕಾವ್ಯವಾಗಿದೆ ಎಂಬುದನ್ನು ಸರಳವಾಗಿ ಸ್ಪಷ್ಟಪಡಿಸುತ್ತವೆ.


ಮುಘಲ್ ಆಜóಮ್, ಅಕ್ಬರ ಕಾಲದ ಕುರಿತಾದ ಸಿನೆಮಾತಾನ್ ಸೇನ್ ಇಲ್ಲದಿದ್ದರೆ ಹೇಗೆ? ಸರಿ ಸಿನೆಮಾದ ಸಂಗೀತ ನಿರ್ದೇಶಕ ನೌಷಾದ್ ತಾನ್ ಸೇನ್ ಹಾಡಿಗಾಗಿ ಗಾಯಕರನ್ನು ಗುರುತು ಮಾಡುವ ಬಗ್ಗೆ ಆಸೀಫ್ ಅವರೊಂದಿಗೆ ಚರ್ಚಿಸುತ್ತಾ, ಇದನ್ನು ಇಡೀ ಭಾರತದಲ್ಲಿ ಒಬ್ಬ ಸಂಗೀತ ಕಲಾವಿದರಿಂದ ಮಾತ್ರ ಹಾಡಲು ಸಾಧ್ಯ.! ಆದರೆ ಅವರು ಸಿನೆಮಾಗಳಿಗೆ ಹಾಡುವುದಿಲ್ಲ! ಎಂದು ಉದ್ಗರಿಸುತ್ತಾ ಮಹಾನ್ ಕಲಾವಿದರೆ, ಉಸ್ತಾದ್ ಗುಲಾಂ ಅಲಿ ಖಾನ್!!! ಇವರ ನಿಯಮ ಸಂಗಿತ ಕಛೇರಿಗಳನ್ನು ಹೊರತುಪಡಿಸಿ ಇನ್ನೆಲ್ಲೂ ಹಾಡುವುದಿಲ್ಲವೆಂಬುದರ  ಬಗ್ಗೆ ವಿವರಿಸುತ್ತಾರೆ. ಉಸ್ತಾದ್ ಖಾನ್ ಸಾಬ್ ಬಗ್ಗೆ ಅರಿತ ಕೂಡಲೇ ಆಸೀಫ್ ಅವರಿಂದ ಬಂದ ಒಂದೇ ಮಾತು,


ಖಾನ್ ಸಾಬ್ ಹಾಡುತ್ತಾರೆ”!


ಸರಿ, ನೌಷಾದ್ ಅವರು, ಆಸೀಫ್ ಮತ್ತು ಖಾನ್ ಸಾಬ್ ಅವರ ಭೇಟಿಗಾಗಿ ದಿನಾಂಕ ನಿಗದಿ ಮಾಡುತ್ತಾರೆ. ಭೇಟಿಯ ವೇಳೆಕುಶಲೋಪರಿ ನಂತರ ಮುಘಲ್ ಆಜóಮ್ ಸಿನೆಮಾಗಾಗಿ ತಾನ್ ಸೇನ್ ಹಾಡುವ ಹಾಡಿಗಾಗಿ ಹಾಡುವಂತೆ  ಖಾನ್ ಸಾಬ್ ಅವರನ್ನು ಕೋರಿದರು ನೌಷಾದ್. ಅತ್ಯಂತ ವಿನಯವಾಗಿ ಖಾನ್ ಸಾಬ್ ತಾವು ಸಿನೆಮಾಗಳಿಗೆ ಹಾಡುವುದಿಲ್ಲವೆಂದು ನಿರಾಕರಿಸಿದರು. ಆಸೀಫ್ ಅವರಿಗೆ ಎರಡು ಮತ್ತು ಮೂರನೇ ಬೆರಳ ಮಧ್ಯೆ ಸಿಗಾರ್ ಹಿಡಿದು ಸೇದುವ ಅಭ್ಯಾಸವಿತ್ತು. ನೌಷಾದ್ ಮಾತಾಡುವಷ್ಟರಲ್ಲೇ, ಒಮ್ಮೆ ಸಿಗಾರ್ ಎಳೆದು, ಆಸೀಫ್, ಒಂದೇ ಮಾತು ಹೇಳಿದರು.

ಖಾನ್ ಸಾಬ್ ಹಾಡುತ್ತಾರೆ”!


ಇವರ ಅತಿಯಾದ ಆತ್ಮವಿಶ್ವಾಸ ಕಂಡು, ಖಾನ್ ಸಾಬ್, ತುಸು ಹಿಂದೆಗೆದರು. ಇವರು ಯಾರು- ಇತ್ಯಾದಿ ಮಾಹಿತಿ ನೌಷಾದ್ ಅವರಲ್ಲಿ ವಿಚಾರಿಸಿದರುಅವರು ಭಾರತದ ಪ್ರಖ್ಯಾತ ಸಿನೆಮಾ ನಿರ್ಮಾಪಕ-ನಿರ್ದೇಶಕರೆಂದು ನೌಷಾದ್ ಪರಿಚಯ ಹೇಳಿದರು. ಅವರ ಬಗ್ಗೆ ತಿಳಿದ ಮೇಲೂ  ತುಸು ಕೂಡ ಕದಲದ ಖಾನ್ ಸಾಬ್, ಮತ್ತೊಮ್ಮೆ ವಿನಯದಿಂದಲೇ, ತಾವು ಸಿನಮಾಗೆ ಹಾಡುವುದು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಮತ್ತೆ ಅದೇ ರೀತಿಯಲ್ಲಿ ಸಿಗಾರ್ ಎಳೆದು ಬಿಟ್ಟ ಆಸೀಫ್ ಹೇಳಿದರು,


ಖಾನ್ ಸಾಬ್ ಹಾಡುತ್ತಾರೆ”!


   
ನೌಷಾದ್ ಅವರನ್ನು ಒಳಗೆ ಕರೆದುಕೊಂಡು ಹೋದ ಖಾನ್ ಸಾಬ್, ಇವರಿಗೆ ಒಮ್ಮೆ ಹೇಳಿದರೆ ತಿಳಿಯುವುದಿಲ್ಲವಾ, ನಾನು ಸಿನೆಮಾಗಳಿಗೆ ಹಾಡುವುದಿಲ್ಲವೆಂದು ಹೇಳಿದರೆ. ಈಗ ನೋಡಿ, ಇವರು ಹೇಗೆ ಓಡಿ ಹೋಗುವಂತೆ ಮಾಡುತ್ತೇನೆ... ಎಂದು ಹೇಳಿ, ನೌಷದ್  ಅವರೊಂದಿಗೆ ಮತ್ತೆ ಆಸೀಫ್ ಅವರ ಬಳಿ ಹಿಂದಿರುಗಿದರು.


   
ನಾನು ನಿಮ್ಮ ಸಿನೆಮಾಗೆ ಹಾಡಬಹುದು. ಆದರೆ ನನ್ನ ಸಂಭಾವನೆ ನೀವು ಭರಿಸುವುದು ಸಾಧ್ಯವೇ? ನಾನು ಒಂದು ಹಾಡಿಗೆ 25000/- ಸಂಭಾವನೆ ಪಡೆಯುತ್ತೇನೆ ಎಂದರು!. ಆಗ ಖ್ಯಾತ ಗಾಯಕರು ಒಂದು ಹಾಡಿಗ ಪಡೆಯುತ್ತಿದ್ದ ಸಂಭಾವನೆ500-1000 ರೂ ಮಾತ್ರ!!!
ನಿಶ್ಯಬ್ದದಲ್ಲಿ ಜೀವಂತಿಕೆಯೊಂದು ಚೇತನಗೊಳ್ಳುವಂತೆ, ಅರೆಗಳಿಗೆಯ ಮೌನ ಆವರಿಸಿತು. ಖಾನ್ ಸಾಬ್ ಅವರಿಗೆ ತಾವು ಗೆದ್ದಂತೆ ತೋಚಿತು. ನೌಷಾದ್ ಗೆ ಮಹಾನ್ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶ ತಪ್ಪಿತೆಂದು ಕಳವಳವಾಯಿತು.


  
ಕ್ಷಣದ ನಂತರ ಆಸೀಫ್ ಅವರ ಉತ್ತರ ಮೂಡಿಸುವ ಪುಳಕ-ರೋಮಾಂಚನ ಎಂದಿಗೂ ಸ್ಮರಣೀಯ.
ಆಸೀಫ್ ಮತ್ತೊಮ್ಮೆ ಸಿಗಾರ್ ಎಳೆದರು. ಹತ್ತು ಸಾವಿರರೂಗಳನ್ನು  ಟೇಬಲ್ ಮೇಲೆ ಇಟ್ಟವರೇ,

 

 “ಖಾನ್ ಸಾಬ್ ಆಪ್ ಅನ್ಮೋಲ್ ಹೈ, ಆಫ್ ಹೀ ಗಾಯೇಂಗೆ!!!” ಎಂದರು.


ಇದಾದ ನಂತರ ತಾನ್ ಸೇನ್ ಹಾಡುವ ಹಾಡಿಗಾಗಿ ಉಸ್ತಾದ್ ಖಾನ್ ಸಾಬ್ ಅವರು ಸಿನೆಮಾ ಸೀನ್ ನೋಡುತ್ತಲೇ ಹಾಡುತ್ತೇನೆ ಎನ್ನುತ್ತಾರೆ. ಅವರ ಸೂಚನೆಗಳಂತೆಯೇ ಹಾಡು ರೆಕಾರ್ಡ ಆಗುತ್ತದೆ. ಅದೇ ಮುಘಲ್ ಅಜóಮ್ ಪ್ರೇಮ್ ಜೋಗನ್ ಬನಕೇ...ಎಂಬ ಅದ್ಭುತ ಗಾಯನ.
ಇನ್ನೊಂದು ಚಿಕ್ಕ ಘಟನೆ. ಅಕ್ಬರ್ ಪಾತ್ರಧಾರಿ, ಪೃಥ್ವಿರಾಜ್ ಕಪೂರ್ ಗೆ 4000/- ರೂ ಷೂ ತೊಡಿಸಲಾಗಿತ್ತು. ಕ್ಯಾಮೆರಾ ಯಾವ ಆಂಗಲ್ ನಲ್ಲಿ ಹಿಡಿದರೂ ಷೂ ಸೀನ್ ನಲ್ಲಿ ಬರಲಿಲ್ಲ. ಪೃಥ್ವೀರಾಜ್ ಕಪೂರ್ ನಾನು ಅಷ್ಟೊಂದು ಬೆಲೆಯ ಷೂ ಧರಿಸಿದ್ದೆ. ಅದು ಸೀನ್ ನಲ್ಲಿ ಬರಲಿಲ್ಲ! ಎಂದು ವಿಷಾದದಿಂದ ನಕ್ಕರು!

ಇದಕ್ಕೆ ಆಸೀಫ್ ಬಹು ಸೊಗಸಾಗಿ ಉತ್ತರಿಸಿದರು. “ನೀನು ಷೂ ಧರಿಸಿದ್ದಾಗ, ನಾನು ಇಷ್ಟು ಬೆಲೆಯ ಷೂ ಧರಿಸಿದ್ದೇನೆ ಎಂಬ ಭಾವದಿಂದ ನಿನ್ನ ಚೆಹರೆಯಲ್ಲಿ ಮೂಡಿದ ರಾಜನ ದರ್ಪ ವಿಶೇಷವಾಗಿತ್ತು! ಹಾಗಾಗಿ ಇಡೀ ಸೀನ್ ನಲ್ಲಿ ನಿನ್ನ ರಾಜ ದರ್ಪದ ನಟನೆ ಅತ್ಯದ್ಬುತವಾಗಿ ಹೊಮ್ಮಿದೆಎಂದು ನಕ್ಕರು

 ಹೀಗಿತ್ತು ಮುಘಲ್--ಆಜóಮ್ ಸಿನೆಮಾದೆಡೆಗಿನ ಜೀವೊನ್ಮಾದತೆ. ಇಡೀ ಸಿನೆಮಾ ತನ್ಮಯತೆ-ಮಾರ್ದವತೆ-ಸ್ಪರ್ಶ-ಸಾನಿಧ್ಯ ತಳಮಳ ಬೇಗುದಿ ನಿರಾಶೆಗಳನ್ನು ಸಮನಾಗಿ ಬೆರೆಸಿ ತಯಾರಿಸಿದ ಆಸೀಫ್ ಅವರ 16 ವರ್ಷದ ಒಂದೇ ಧ್ಯಾನದಂತಹ ಪ್ರತಿಫಲ ಮುಘಲ್ ಆಜóಮ್ ಸಿನೆಮಾ ಆದ್ದರಿಂದಲೇ ಅದೊಂದು ಮಹಾಕಾವ್ಯವಾಗಿದೆ. ಕಲೆಯಲ್ಲಿ ಮಾತ್ರ ಕಲಾತೀತತೆ ಸಾಧ್ಯವೆನಿಸುವ ನಿದರ್ಶನ.


ಬೆಕ್ಕು-ನಾಯಿ ಇತ್ಯಾದಿ ಪ್ರಾಣಿಗಳು  ವರ್ಷಕ್ಕೆ  ಮೂರ್ನಾಲ್ಕು ಬಾರಿ ಪ್ರತಿಸಲಕ್ಕೂ ಹತ್ತಾರು ಮರಿಗಳನ್ನು ಹಾಕಿದರೆ, ಆನೆಗೆ ಒಂದು ಮರಿ ಹಾಕಲು ಎರಡು ವರ್ಷ ಬೇಕಾಗುತ್ತದೆ. ಆನೆ ನಡೆಯುತ್ತಿದ್ದರೆ ಎಲ್ಲಾ ಪ್ರಾಣಿಗಳು ಸರಿದು ಜಾಗ ಮಾಡಿಕೊಡುತ್ತವೆ. ಅದು ಅದರ ಘನತೆ. ಭೂಮಿಯಿಂದ 150 ಕ್ಕೂ ಕಿಮಿಗಿಂತ ಕೆಳಗೆ ಅತ್ಯಂತ ಘೋರ ಕಾವು- ವಿಪರೀತ ಒತ್ತಡದಲ್ಲಿಯೇ ಶತಮಾನಗಳ ನಂತರ ಕಾರ್ಬನ್ ವಜ್ರವಾಗುತ್ತದೆ. ಮುಚ್ಚದ ಬಾಗಿಲುಗಳ ಹಿಂದೆ ಒಂದೇ ಟೆಸ್ಟ್ ನ್ನು ನೂರಾರು ಬಾರಿ  ಮಾಡುತ್ತಲೇ ಜೀವಿತ ಕಳೆಯುವ ವಿಜ್ಞಾನಿಗಳು... ಸಮಯ, ತಾಳ್ಮೆ ಎರಡು ಪ್ಯಾಷನ್- ಹುಚ್ಚುತನ ದೊಂದಿಗೆ ಸೇರಿದಲ್ಲಿ ಮಾತ್ರ ಹೀಗೆ ಮಹಾನ್ ಘಟನೆಗಳು ಮಹಾಕಾವ್ಯ ಜನ್ಮತಳೆಯಲು ಸಾಧ್ಯ ಥೇಟ್ ಸಲೀಂ-ಅನಾರ್ಕಲಿಯ ಬದುಕಿನ ಹಾಗೆ. ಮೂಡಿದ ಭಾವವೊಂದಕ್ಕೆ ಜೀವಮಾನ ಸಮರ್ಪಣೆಯಾದ್ದರಿಂದಲೇ ಜಗತ್ತು ಕಂಡ ಅತ್ಯುನ್ನತ ಪ್ರೇಮಕಥೆಯಾದಂತೆ...


 

Comments

  1. ಲೇಖನ ಉತ್ತಮವಾಗಿದೆ.
    ಮುಘಲ್ ಎ ಅಜ಼ಮ್ ಚಿತ್ರವನ್ನು ನಿರ್ಮಿಸಲು, ಅಸೀಫ಼ರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. 1940 ರ ದಶಕದಲ್ಲೇ ಚಿತ್ರವನ್ನು ಮಾಡಲು ನಿರ್ಧರಿಸಿದ್ದರೂ ನಿರ್ಮಾಣವನ್ನು ಮುಂದೂಡ ಬೇಕಾಯಿತು. ಇದಕ್ಕೆ ಮುಖ್ಯ ಕಾರಣ ಭಾರತದ ವಿಭಜನೆಯಾಗಿ, ಚಲನಚಿತ್ರದ ಹಣಕಾಸಿನ ಜವಾಬ್ದಾರಿ ವಹಿಸಿಕೊಂಡಿದ್ದ ಶಿರಾಜ್ ಅಲಿಯವರು ಪಾಕಿಸ್ತಾನಕ್ಕೆ ತೆರಳಿದ್ದು. ಅಸೀಫ಼ರು ಬೇರೊಬ್ಬ ಬಂಡವಾಳದಾರರನ್ನು ಹುಡುಕಬೇಕಾಗಿ ಬಂತು. ಅಲ್ಲದೆ ಪ್ರಮುಖ ಪಾತ್ರಗಳನ್ನು ವಹಿಸಬೇಕಿದ್ದ ಚಂದ್ರ ಮೋಹನ್ (ಅಕ್ಬರ್), ದಯಾ ಕಿಶನ್ ಸಪ್ರು ( ಸಲೀಂ) ಮತ್ತು ನರ್ಗಿಸ್ ( ಅನಾರ್ಕಲಿ) ಇವರು ಯಾರೂ ನಟಿಸಲಾಗಲಿಲ್ಲ. ಇವರ ಬದಲು ಪೃಥ್ವೀರಾಜ ಕಪೂರ್, ದಿಲೀಪ್ ಕುಮಾರ್ ಮತ್ತು ಮಧುಬಾಲಾ ಅವರನ್ನು ಆಯ್ಕೆ ಮಾಡಲಾಯಿತು. ಒಟ್ಟಿನಲ್ಲಿ ಚಿತ್ರದ ನಿರ್ಮಾಣ ಶುರುವಾದದ್ದು 1950 ರಲ್ಲಿ.
    ಅಂದಹಾಗೆ "ಚಾರೋ ತರಫ್ ಹೈ ಇನಕಾ ನಜ಼ಾರಾ" ಎಂದಿರ ಬೇಕಲ್ಲವೇ? "ಉಜಾಲಾ" ಅಲ್ಲ

    ReplyDelete
  2. ಈ ಲೇಖನವನ್ನು ನಿನ್ನೆ ಓದಿದೆ. ಇವತ್ತು YouTube ನಲ್ಲಿ ಪ್ರೇಮ್ ಜೊಗನ್ ಬನಕೆ ಹಾಡು ಕೇಳಿದೆ. ಅದ್ಭುತ ಹಾಡುಗಾರಿಕೆ. ಹಾಗೆ‌ ಇತರ ಹಾಡುಗಳನ್ನೂ ಕೇಳಿದೆ. ಮುಂದೊಮ್ಮೆ ಸಮಯ ಸಿಕ್ಕಾಗ ಈ ಸಿನೆಮಾ ನೋಡುವೆ. ಬೆಳ್ಳಿ ಪರದೆಯ ಹಿಂದಿನ ಘಟನೆಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು.

    ReplyDelete
  3. ಲೇಖನ ಸೊಗಸಾಗಿ ಮೂಡಿಬಂದಿದೆ. ಒಳ್ಳೆಯ ಮಾಹಿತಿ ಕೂಡಾ ಕಲೆಹಾಕಿದ್ದೀರಿ. ಹಾಗೆ ಪ್ಯಾರ್ ಕಿಯಾ ತೋ ಹಾಡಿನ ಸಾಹಿತ್ಯವನ್ನು ೧೦೫ ಬಾರಿ ತಿದ್ದಲಾಯಿತು. ಕಡೆಗೆ ಖ್ಯಾತ ಗಾಯಕಿ ಲತಾ ಮಂಗೇಶ್ವರ್ ಆ ಹಾಡನ್ನು ಬಾತ್ ರೂಮಿನಲ್ಲಿ ಹಾಡಿದ್ದರು ಎಂಬ ಮಾಹಿತಿಯೂ ಇದೆ. ಒಟ್ಟಾರೆ ದಾಖಲೆ ಸೃಷ್ಟಿಸಿದ ಸಿನಿಮಾ.

    ReplyDelete

Post a Comment