ಮೊದಲು ಸ್ವಾತಂತ್ರ ಬಂದದ್ದು ಯಾವ ಊರಿಗೆ?

ಇಷ್ಟಕ್ಕೂ ಭಾರತಕ್ಕೆ ಮೊದಲು ಸ್ವಾತಂತ್ರ ಬಂದದ್ದು ಯಾವ ಊರಿಗೆ ?


ಲೇಖನ - ಶ್ರೀಮತಿ ಮಂಜುಳಾ ಡಿ

ಭಾರತಕ್ಕೆ ಎಂದು ಸ್ವಾತಂತ್ರ‍್ಯ ಬಂದಿತು ಎಂದು ಎಲ್ಲರಿಗೂ ತಿಳಿದಿದೆ. ಆದರೆ ದೇಶದ ಯಾವ ಗ್ರಾಮ ಮೊದಲು ಸ್ವಾತಂತ್ರ‍್ಯವನ್ನು ಸಂಪಾದಿಸಿತು ಎಂಬುದು ಇತಿಹಾಸದ ಪುಟಗಳನ್ನು ತೆರೆದವರಿಗೆ ಮಾತ್ರ ತಿಳಿದಿದ್ದೀತು! 

ಇತಿಹಾಸದ ವಿಷಯ ಅಂತಿರಲಿ, ದೈನಂದಿನ ಜಂಜಡದಲ್ಲಿ ಯಾರಿಗೂ ಯಾರಿಗಾಗಿಯೂ ಸಮಯವಿಲ್ಲ. ಧಾವಂತದ ಬದುಕು. ಸಮಯ ನೀಡಲೇಬೇಕಾದಂತಹ ಸ್ನೇಹ-ಸಂಬAಧಗಳು ಒತ್ತಡ- ಸಮಯವಿಲ್ಲ ಎಂಬ ನೆಪಗಳಡಿ ಸವೆಯುತ್ತಿರುವ ಕಾಲಘಟ್ಟ. ಇಂದು ಡ್ರೈವಿಂಗ್ ಬೇಸರವಾಗಿ, ಕ್ಯಾಬ್ ಏರಿದೆ. ಕ್ಯಾಬ್ ಸದಾಶಿವ ನಗರದ ಮೇನ್ ರೋಡ್ ಸಿಗ್ನಲ್ ಹತ್ತಿರ ಟ್ರಾಫಿಕ್ ಸಾಗರದ ಮಧ್ಯೆ ಹಿಂದಕ್ಕೆ ಮುಂದಕ್ಕೆ ತೊಯ್ದಾಡುತ್ತಿತ್ತು. ಸದಾಶಿವ ನಗರ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದು ಎಂಬುದು ಬಹುಜನರಿಗೆ ತಿಳಿದಿದೆಯಾದರೂ, ಇದಕ್ಕೆ ಸದಾಶಿವರಾವ್ ಕಾರ್ನಾಡ್ ರವರ ಹೆಸರಿನ ಮೂಲವಿದೆ ಎಂಬುದು ಮಾತ್ರ ಬಹಳಷ್ಟು ಜನರಿಗೆ ತಿಳಿದಿಲ್ಲ. ಬ್ರಿಟಿಷ್ ದಾಸ್ಯದಿಂದ ಈ ಭೂಮಿ ಸ್ವಾತಂತ್ರ‍್ಯದ ಗಾಳಿ ಉಸಿರಾಡಲು ಬಲಿಯಾದ ಅಮರ ಕಥೆಗಳ ಸಾರ ಇವರ ಜೀವನ ಎನ್ನಬಹುದು. 

ನಾವು ನಮ್ಮವೇ ಅತ್ಯಗತ್ಯ ಕೆಲಸಗಳಿಗಾಗಿ ತುಸು ಸಮಯ ಹೊಂದಿಸಿಕೊಳ್ಳಲು ಸಾಹಸಪಡುವಂತಾಗುತ್ತದೆ. ಅಂಥದ್ದರಲ್ಲಿ ಹಲವಾರು ವರ್ಷಗಳ ಕಾಲ ಮನೆ ಊರು ತೊರೆದು ಕಾಡುಮೇಡುಗಳಲ್ಲಿ ಅವಿತು, ಬದುಕಿದ ಆ ಬದುಕಗಳ ಸಾರ್ಥಕತೆ ಮನನೀಯ. ನಾವಿಂದು ಸ್ವತಂತ್ರವಾಗಿ ಉಸಿರಾಡುತ್ತಿರುವ ಪ್ರತಿ ಉಸಿರು ಅವರ ಋಣವೇನೋ ಅನಿಸುತ್ತದೆ. 

ಸದಾಶಿವರಾವ್ ಕಾರ್ನಾಡ್ ಅವರು ಪ್ರತಿಷ್ಠಿತ - ಶ್ರೀಮಂತ ವಕೀಲ ಕುಟುಂಬದಲ್ಲಿ ಮಂಗಳೂರಿನಲ್ಲಿ ಜನಿಸಿದರು. ಅವರ ಪ್ರತಿ ನಡೆ ಮನುಕುಲಮುಖಿಯಾಗಿತ್ತು. ಮಹಿಳಾ ಸಭಾವೊಂದನ್ನು ಸ್ಥಾಪಿಸಿದ ಅವರು ಎಷ್ಟೋ ವರ್ಷ ಮನೆತೊರೆದು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡು, ದಕ್ಷಿಣಕನ್ನಡದ ಗಾಂಧಿ ಎಂದೇ ಹೆಸರಾದರು. ದೇಶಕ್ಕಾಗಿ ಇವರ ಸಮರ್ಪಣೆಯ ಮಟ್ಟ ಎಷ್ಟು ಆಳವಾಗಿತ್ತೆಂದರೆ, ಚಿನ್ನದ ಚಮಚೆಯನ್ನು ಬಾಯಲಿಟ್ಟುಕೊಂಡು ಜನಿಸಿದ ಇವರು ಹೊದೆಯಲು ಬೆಚ್ಚಗಿನ ಬಟ್ಟೆ ಇಲ್ಲದೇ, ಶೀತದಿಂದ ಅಸುನೀಗಿಸರು!

ಸ್ವಾತಂತ್ರ‍್ಯ ಹೋರಾಟದಲ್ಲಿ ತಮ್ಮ ಬದುಕುಗಳನ್ನು ಬಲಿದಾನವಾಗಿ ನೀಡಿದ ಇಂತಹ ಕೋಟ್ಯಂತರ ಭಾರತೀಯರ ಶ್ರಮದಿಂದ ಗಳಿಸಿದ ಸ್ವಾತಂತ್ರ‍್ಯ ಗಾಳಿಯನ್ನು ನಾವೀಗ ಉಸಿರಾಡುತ್ತಿದ್ದೇವೆ. ಇಂದು ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಇಡೀ ದೇಶ ಕೇಸರಿ ಬಿಳಿ ಹಸಿರು ಬಣ್ಣವಾಗಿ ಮಾರ್ಪಟ್ಟಿದೆ. ಆದರೆ ನಿಜಕ್ಕೂ ದೇಶದಲ್ಲಿ ಮೊದಲು ಸ್ವಾತಂತ್ರ‍್ಯವಾದ ಸ್ಥಳ ಯಾವುದು...!?

ಸ್ವಾತಂತ್ರ‍್ಯಸಂಗ್ರಾಮದಲ್ಲಿ ಹಲವಾರು ಪ್ರಮುಖ ಮಜಲುಗಳಿದ್ದವು. ‘ಬ್ರಿಟೀಷರೇ, ಭಾರತ ಬಿಟ್ಟು ತೊಲಗಿ’ ಎಂದು ಗಾಂಧಿ ೧೯೪೨ ರ ಆಗಸ್ಟ್ ೯ ರಂದು ಕರೆಕೊಟ್ಟದ್ದು ಅಂತಹ ಪ್ರಮುಖ ಮಜಲುಗಳಲ್ಲೊಂದು. ಇಡೀ ದೇಶ ಈ ಕರೆಯ ಮೇರೆಗೆ ಭುಗಿಲೆದ್ದಿತು. ತತ್ಸಮಯದಲ್ಲೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಮಹಿಳೆ-ಮಕ್ಕಳು-ವಯಸ್ಸಾದವರು ಎಂಬ ಭೇದವಿಲ್ಲದೇ ಎಲ್ಲಾ ಒಂದಾಗಿ ಬ್ರಿಟಿಷರ ವಿರುದ್ದ ಹೋರಾಟಕ್ಕೆ ಮೊದಲಿಟ್ಟರು. ಇವರ ಹೋರಾಟದ ಮನಸ್ಥಿತಿ, ಒಗ್ಗಟ್ಟು ಎಷ್ಟು ಆಳವಾಗಿತ್ತೆಂದರೆ, ಸೆಪ್ಟೆಂಬರ್ ೨೬ ರಂದು, ಊರ ಹೆಬ್ಬಾಗಿಲಿಗೆ "ಈಸೂರು ಸ್ವತಂತ್ರ ಗ್ರಾಮ- ಬ್ರಿಟಿಷರಿಗೆ ಪ್ರವೇಶವಿಲ್ಲ" ಎಂಬ ಫಲಕ ತಗುಲಿ ಹಾಕಿದರು. ವೀರಭದ್ರ ದೇವಸ್ಥಾನದ ಮೇಲೆ ತ್ರಿವರ್ಣ ಧ್ವಜ ಏರಿಸಿದರು. ಶ್ಯಾನುಭೋಗ -ಪಟೇಲರುಗಳ ದಫ್ತರುಗಳನ್ನು ಕಸಿದು ಸುಟ್ಟು ಹಾಕಿದರು. ತಮ್ಮ ಹಳ್ಳಿಗೆ ತಮ್ಮದೇ ಸರ್ಕಾರ ರಚಿಸಿ ಆಡಳಿತ ಆರಂಭಿಸಿದರು. ಹೀಗೆ ಸ್ವತಂತ್ರ ಸರ್ಕಾರ ರಚಿಸಿಕೊಂಡ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಬ್ರಿಟಿಷ್ ಆಡಳಿತ ಅಧಿಕಾರಿಗಳನ್ನು ಕಳುಹಿಸಿತು. ಗ್ರಾಮಕ್ಕೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ಗಾಂಧಿ ಟೋಪಿ ಧರಿಸುವಂತೆ ತಾಕೀತು ಮಾಡಿದರು. ಇದರಿಂದ ರೊಚ್ಚಿಗೆದ್ದ ಪೋಲಿಸರು ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದರು. ಉದ್ರಿಕ್ತಗೊಂಡ ಗ್ರಾಮಸ್ಥರು  ಇನ್ಸ್ಪೆಕ್ಟರ್ ಕೆಂಚನಗೌಡ, ಅಮಾಲ್ದರ್ ಚನ್ನಕೃಷ್ಣಪ್ಪ ಇವರ ಹತ್ಯೆಗೈದರು.  ಈ ಹಳ್ಳಿಯ ಗ್ರಾಮಸ್ಥರ ಸ್ವಾತಂತ್ರ‍್ಯ ಹೋರಾಟದ ಕಿಚ್ಚು ಎಷ್ಟು ಪ್ರಬಲವಾಗಿತ್ತೆಂದರೆ, "ಏಸೂರು ಕೊಟ್ಟರೂ ಈಸೂರು ಕೊಡೆವು....." ಎಂಬ ಘೋಷಣೆ ಗಗನಕ್ಕಡರಿ, ಇತಿಹಾಸದಲ್ಲಿ ಚಿರಸ್ಥಾಯಿಯಾಯಿತು.



ಇಲ್ಲಿಯವರೆಗೂ ರೋಚಕವಾಗಿ ಮೈನವಿರೇಳಿಸುವಂತೆ  ಸಾಗಿದ ಸ್ವಾತಂತ್ರ‍್ಯ ಹೋರಾಟದ ಈ ಗ್ರಾಮ ಕಥೆ ರಕ್ತವರ್ಣ ಪಡೆದುದು ಬ್ರಿಟಿಷ್ ಪಡೆ ಗ್ರಾಮ ಪ್ರವೇಶಿಸಿದ ನಂತರ.  ಇಡೀ ದೇಶದಲ್ಲಿ ಸ್ವಾತಂತ್ರ‍್ಯದ ಭೇರಿ ಮೊಳಗಿ ಗ್ರಾಮಗ್ರಾಮದಲ್ಲೂ ಭಾರತಾಂಬೆಯ ಮಕ್ಕಳಿಂದ ಆಡಳಿತ ಆರಂಭವಾಯಿತು. ಇದರಿಂದ ರೊಚ್ಚಿಗೆದ್ದ ಆಂಗ್ಲರಿಂದ ಮಹಿಳೆಯರು-ಮಕ್ಕಳು-ವೃದ್ದರು ಎನ್ನುವ ಭೇಧವಿಲ್ಲದೇ ಹಲ್ಲೆಗಳದವು. ಗ್ರಾಮಸ್ಥರ, ಅದರಲ್ಲೂ ಮುಖ್ಯವಾಗಿ ಹೋರಾಟಕ್ಕೆ ಮೂಲ ಬೆಂಬಲ ನೀಡಿದರು ಎಂಬ ಕಾರಣಕ್ಕೆ ಸಾಹುಕಾರ್ ಬಸವಣ್ಯಪ್ಪ  ಅವರ ಮನೆಯನ್ನು, ಸುಟ್ಟು ಹಾಕಲಾಯಿತು. ಹಲವಾರು ಹೋರಾಟಗಾಗರು ಹತ್ತಿರದ ಕಾಡುಗಳಿಗೆ ಪಲಾಯನ ಮಾಡಿದರು.  ಹಲವರನ್ನು ಶಿಕ್ಷಿಸಲಾಯ್ತು. ಪ್ರಾಣ ತೊರೆದವರೆಷ್ಟೋ.

ಇಷ್ಟು ಹಿಂಸೆಯಲ್ಲಿ ಕೊನೆಗೊಂಡ ಈ ಹೋರಾಟ, ಅಕ್ಕ-ಪಕ್ಕದ ಗ್ರಾಮಗಳ ಗ್ರಾಮಸ್ಥರ ಧೈರ್ಯ ಕೆಳೆದು ಹಾರಾಟದ ಕಿಚ್ಚು  ತಣ್ಣಗಾಗಿಸಬೇಕಿತ್ತು. ಸ್ವಾರಂತ್ರ‍್ಯ ಸಂಗ್ರಾಮದ ಕುರಿತು ಅಚ್ಚರಿ-ಕಂಪನ, ನಮ್ಮ ನೆಲಕ್ಕಾಗಿ ಜೀವ ಬಿಡುವಂತಹ ನಮ್ಮ ಹಿರಿಯರಿಗಿದ್ದ ಸ್ಥೈರ್ಯಕ್ಕೆ ದಿಗ್ಬ್ರಮೆಯ ಬೆವರ ಸಾಲು ಮೂಡುವುದೇ ಇಲ್ಲಿ. ಇಡೀ ದೇಶಕ್ಕೆ ಈಸೂರ ಹೋರಾಟ ಹೊಸದೊಂದು ಕಿಡಿ ಹೊತ್ತಿಸಿ, ಹೋರಾಟದ ಜ್ವಾಲೆ ಇನ್ನೂ ಪ್ರಖರವಾಯಿತು. 

ಕ್ಯಾಬ್ ಮುಖ್ಯ ರಸ್ತೆಯಿಂದ ತಿರುವು ತೆಗೆದುಕೊಳ್ಳುವಾಗ ಹಳದಿ ಬೋರ್ಡ್ ಮೇಲಿದ್ದ ಸದಾಶಿವ ನಗರ ಎಂಬ ಹೆಸರು ಕಂಡು, ಅಂದು ಈಸೂರಿನ ಗ್ರಾಮದಲ್ಲಿ, ಬ್ರಿಟಿಷ್ ತುಕಡಿ  ದಾಟಿ ಹೋದ ಶವಗಳು, ಸುಟ್ಟು ಬೆಂದ ಮನೆಗಳು, ಅಡವಿಗೆ ಮತ್ತೆ ಹೋರಾಟಕ್ಕೆಂದೇ ಜೀವ ಉಳಿಸಿಕೊಳ್ಳಲು ಪಲಾಯನಗೈದ ಆ ಜೀವಗಳು ಕಣ್ಮುಂದೆ ಬಂದವು. ವೈಯಕ್ತಿಕ ಸಿರಿಯನ್ನು ಸ್ವಾತಂತ್ರ‍್ಯಸಿರಿಗಾಗಿ ತೊರೆದ ಸದಾಶಿವರಾವ್, ಜೀವಸಿರಿಯನ್ನು ದೇಶಸಿರಿಗಾಗಿ ಬಲಿಕೊಟ್ಟ ಈಸೂರಿನ ಮಂದಿ, ಇಂತಹ ಎನಿತು ದೇಶಭಕ್ತರಿಗೆ ನಾವು ಋಣಿಯೋ ಎಂಬ ಭಾವದಿಂದ  ಕಣ್ಣು ಗಳು ಅರಿವಿಲ್ಲದೇ ತುಂಬಿ ಬಂದವು.

ಕ್ಯಾಬ್ ಅಪಾರ್ಟ್ಮೆಂಟ್ ಆರ್ಚ್ ಒಳ ಸೇರಿತು. ಆರ್ಚ್ ಮೇಲೆ ಆಜಾದಿ ಕಾ ಅಮೃತ ಮಹೋತ್ಸವ ಎಂಬ ತ್ರಿವರ್ಣ ಆಗಸದಲ್ಲಿ ಲೀನವೆಂಬಂತೆ ತೇಲುತ್ತಿತ್ತು. 

  

Comments

  1. ಲೇಖನ ಬಹಳ ಚೆನ್ನಾಗಿದೆ. ಈಸೂರಿನ ಬಗ್ಗೆ ತಿಳಿಸಿಕೊಟ್ಟದಕ್ಕೆ ಧನ್ಯವಾದಗಳು.

    ReplyDelete

Post a Comment