ರಿಯಾಯಿತಿಯ ದರದಲ್ಲಿ!

 ರಿಯಾಯಿತಿಯ ದರದಲ್ಲಿ!

ಹಾಸ್ಯ ಲೇಖನ - ಅಣಕು ರಾಮನಾಥ್ 


ಈ ತಿಂಗಳ ಲೇಖನ   ರಿಯಾಯಿತಿಯ ದರದಲ್ಲಿ!  ಎಂಬ ವಿಷಯದ ಬಗ್ಗೆ ಬರೆಯಲು ಕೋರಿದವರು -  ಶ್ರೀ   ಅಶ್ವಿನ್ ಲಕ್ಷ್ಮಣ್ , ಬೆಂಗಳೂರು 

ಕಿವಿಗೆ ಇಂಪಾದ, ನೋಟಕ್ಕೆ ತಂಪಾದ, ಪರ್ಸಿಗೆ ಹಿತವಾದ, ಈ ಪದದ ಮೋಡಿಗೆ ಒಳಗಾಗದವರಿಲ್ಲ. ಹುಣ್ಣಿಮೆರಾತ್ರಿಯ ಮೋಹಿನಿಯಂತೆ, ಸೀತೆಯ ಮುಂದಿನ ಸ್ವರ್ಣಮೃಗದಂತೆ ಜಾತ್ಯತೀತ, ಲಿಂಗಾತೀತ, ಭಾಷಾತೀತವಾಗಿ ಕಣ್ಸೆಳೆದು, ಮೆದುಳಿಗೆ ಕೈಹಾಕಿ, ನಂತರ ಉಪಾಯವಾಗಿ ಜೇಬಿಗೆ ಕೈಬಿಡುವುದಕ್ಕೆ ಅನುವು ಮಾಡಿಕೊಡುವ ಈ ಪದದ ಸಾಮರ್ಥ್ಯವನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡವರೆಷ್ಟೋ, ಅಚ್ಚರಿಯಿಂದ ಬೆರಳು ಕಚ್ಚಿಕೊಂಡು ರಿಯಾಯಿತಿ ದರದಲ್ಲಿ ಪ್ಲಾಸ್ಟರ್ ಹುಡುಕಿದವರೆನಿತೋ! ನಿಜಾಯತಿಗೆ ವಿನಾಯತಿ ನೀಡಿದರೆ ರಿಯಾಯಿತಿ! 

ರಿಯಾಯಿತಿ ಎಂಬ ಪದವನ್ನು ರಿಯಾಯತಿ ಎಂದು ಬರೆಯುವುದೂ ಉಂಟು. ಪದದಲ್ಲಿ ಯತಿಯನ್ನು ಹೊಂದಿದ್ದು, ಯತಿ ಎಂಬುದಕ್ಕೆ pause, restraint ಎಂಬ ಅರ್ಥಗಳಿದ್ದರೂ ರಿಯಾಯತಿಯಲ್ಲಿರುವ ಯತಿ ಅರ್ಜುನಸಂನ್ಯಾಸಿಯಂತಹ ಯತಿಯೇ ಆಗಿರಬೇಕು ಎಂಬುದಕ್ಕೆ ಬೋರ್ಡು ಕಂಡು without any pause or restraint ಮುಗಿಬೀಳುವ penny wise pound foolish ದಂಡುಗಳೇ ಸಾಕ್ಷಿ. 

ಈಗಿನದೆಲ್ಲವೂ ದರಕ್ಕೆ ಸಂಬಂಧಿಸಿದ ವ್ಯಾಪಾರವಾದರೆ ಹಿಂದಿನದೆಲ್ಲವೂ ಬಾರ್ಟರ್ ಸಿಸ್ಟಮ್ಮು. ‘ತೊಗೋ ಇನ್ನೊಂದು ಹಿಡಿ ಅವಲಕ್ಕಿ’ ಎಂದು ನಾಲ್ಕನೆಯ ಹಿಡಿಯನ್ನು ಕೊಡಲು ಮುಂದಾದ ಸುಧಾಮನಿಂದ ಕೃಷ್ಣನು ಅವಲಕ್ಕಿಯನ್ನು ಪಡೆದರೂ, ರುಕ್ಮಿಣಿಯೋ ಸತ್ಯಭಾಮೆಯೋ ಕೃಷ್ಣನಿಂದ ಅದನ್ನು ಕಸಿದುಕೊಂಡು ‘tax deduction at source’ ಹೇರಿದ ದಿನದಿಂದಲೂ ಈ ರಿಯಾಯಿತಿ ವ್ಯಾಪಾರ ಆರಂಭವಾಯಿತೆನಿಸುತ್ತದೆ. ‘Four fistfuls of bad luck in exchange of four generations of happiness’ ಎಂದು ಕೃಷ್ಣನು ಮನದಲ್ಲೇ ತೀರ್ಮಾನಿಸಿದ್ದನ್ನು ‘three fistfuls for three generations shall suffice’ ಎಂದು ಆಲೋಚಿಸಿ ಒಂದು ಜನರೇಷನ್ನಿನಷ್ಟು ಕಡಿಮೆ ಸಂಪತ್ತನ್ನು, ಎಂದರೆ ಕೃಷ್ಣನೆಂದುಕೊಂಡಿದ್ದರಲ್ಲಿ 25% ರಿಯಾಯಿತಿಯನ್ನು ಘೋಷಿಸದೆಯೇ ಅನುಷ್ಠಾನಕ್ಕೆ ತಂದು, ತನ್ಮೂಲಕ ವರದಲ್ಲಿ ರಿಯಾಯಿತಿ ತೋರಿದ ಕೃಷ್ಣಪತ್ನಿಯೇ ರಿಯಾಯತಿಯ ಹರಿಕಾರಳೆಂದು ತಿಳಿದಿದ್ದೆ – ರಾಮಾಯಣದ ರಾಮಸುಬ್ಬುವನ್ನು ಭೇಟಿಯಾಗುವತನಕ! 

‘ವರದಲ್ಲಿ ರಿಯಾಯಿತಿ ತೋರಿದರೆ ಸುಧಾಮನಿಗೆ ನಷ್ಟವಲ್ಲವೆ? ಬಟ್ಟೆಗಳಲ್ಲಿ, ವಸ್ತುಗಳಲ್ಲಿ ರಿಯಾಯಿತಿ ತೋರಿದರೆ ಗ್ರಾಹಕನಿಗೆ ಲಾಭ. ಕೃಷ್ಣ-ಸುಧಾಮರ ವಿಷಯದಲ್ಲಿ ಸುಧಾಮನಿಗೆ ನಷ್ಟವಾಯಿತಲ್ಲ. ನಷ್ಟವನ್ನು ನೀಡುವುದುನ್ನು ರಿಯಾಯಿತಿ ಎನ್ನುವುದು ಸರಿಯೆ?’ ಎಂಬ ಪ್ರಶ್ನೆಯೊಂದೆದ್ದಿತು. ಆಗ ಧರ್ಮ ಎರಡು ಕಾಲಿನಲ್ಲಿ ನಿಂತಿದ್ದ ಕಾಲ. ಇರುವುದನ್ನು ಇದ್ದಂತೆ ಬಿಂಬಿಸುತ್ತಿದ್ದರು. ನಷ್ಟ ನಷ್ಟದಂತೆ ಕಂಡಿತು. ಈಗ ಧರ್ಮ ಒಂಟಿಕಾಲಿನಲ್ಲಿದೆ. ಈಗ ನಷ್ಟದ ಕ್ವಿನೈನ್‍ಗೆ ಲಾಭದ ಷುಗರ್‍ ಕೋಟಿಂಗ್! 

ರಿಯಾಯಿತಿಯ ಪರಾಕಾಷ್ಠೆಯನ್ನು ಕಾಣುವುದು ಬಲಿಪಾಡ್ಯಮಿಯ ದಿನದಂದು. ಹಿಂದಿನ ರಾತ್ರಿ ಪಟಾಕಿಗಳ ಮೂಲಕ ನಿಶೆಗೆ ಉಷೆಯ ಅಲಂಕಾರ ನೀಡುವ ಮಂದಿ ಪಟಾಕಿಗಳ ಲಾಸ್ಟ್ ಮಿನಿಟ್ ಶಾಪಿಂಗಿಗೆ ಹೋದರೆ ದೊರೆಯುವುದು 90%ವರೆಗೆ ರಿಯಾಯಿತಿ! ಮೂರು ವರ್ಷಗಳ ಹಿಂದಿನ ದೀಪಾವಳಿಯ ಕಡೆಯ ದಿನದ ವೈಭವವನ್ನೆಂತು ಬಣ್ಣಿಪುದೋ! 



90% ರಿಯಾಯತಿಯಲ್ಲಿ ಫ್ಲವರ್ ಪಾಟ್, ಲಕ್ಷ್ಮೀ ಪಟಾಕಿ, ಆಟಂಬಾಂಬ್, ಭೂಚಕ್ರ, ರಾಕೆಟ್‍ ಇತ್ಯಾದಿಗಳನ್ನು ಮೋಟರ್‍ಬೈಕಿನ ಪಿಲಿಯನ್ ರೈಡರ್‍ನ ಹೊಟ್ಟೆಯ ಮೇಲೆ ಹೇರಿತಂದು ಸಂಜೆಯಾಗುತ್ತಿದ್ದಂತೆ ಒಂದೊಂದಾಗಿ ಅಗ್ನಿಸ್ಪರ್ಶ ಮಾಡತೊಡಗಿದೆವು. ಆಟಂಬಾಂಬ್‍ಗಳು ರಾಜಕಾರಣಿಗಳ ಆಶ್ವಾಸನೆಗಳಂತೆ ಠುಸ್ ಎಂದವು; ಕೆಲವು ಲಕ್ಷ್ಮೀ ಪಟಾಕಿಗಳು ಸಿಬಿಐ ರೈಡ್‍ ಆದ ಸಿರಿವಂತನ ಮುಖದಂತೆ ನಿಸ್ತೇಜವಾದರೆ, ಇನ್ನು ಕೆಲವು ಸುರುಸುರುಬತ್ತಿಯಂತೆ ಕಿಡಿ ಕಾರಿ ಸುಮ್ಮನಾದವು. ಭೂಚಕ್ರಗಳು ತಿರುಗುವುದರ ಬದಲು ಸ್ಟ್ರೈಟ್‍ ಲೈನಿನಲ್ಲಿ ಬೆಳಕಿನ ದಪ್ಪ ಗೆರೆಗಳನ್ನು ಎಳೆದವು. ವಿಷ್ಣುಚಕ್ರವು ಕಡ್ಡಿಯಿಂದ ಕೆಳಗುರುಳಿ ಭೂಚಕ್ರದಂತೆ ತಿರುಗುವ ವಿಫಲ ಪ್ರಯತ್ನ ನಡೆಸಿತು. ರಾಕೆಟ್‍ಗಳು ಇಟ್ಟ ಬಾಟಲಿಯನ್ನು ರಭಸದಿಂದ ಕೆಳಗುರುಳಿಸಿ ಬೀದಿನಾಯಿಗಳ ಕಾಲುಗಳ ಕೆಳಗೆ ತೂರಿದವು, ಪುಟ್ಟ ಮಕ್ಕಳನ್ನು ದಿಕ್ಕಾಪಾಲಾಗಿಸಿದವು, ದೊಡ್ಡವರ ಪಾದಗಳ ಕಡೆಗೆ ಕಬಡ್ಡಿ ಆಟಗಾರರು ಕಾಲೆಳೆಯಲು ಮುನ್ನುಗ್ಗುವ ರಭಸದಲ್ಲಿ ನುಗ್ಗಿದವು. ಎಲ್ಲಕ್ಕಿಂತ ಸೊಗಸಾಗಿದ್ದವು ಫ್ಲವರ್ ಪಾಟ್‍ಗಳೇ. ಪ್ರತಿಯೊಂದು ಫ್ಲವರ್‍ ಪಾಟೂ ವೆಸ್ಟಿಂಡೀಸಿನ ಬ್ಯಾಟ್ಸ್‍ಮನ್‍ಗಳಂತೆ ಉತ್ತಮ ಆರಂಭ ತೋರಿಸುತ್ತಿದ್ದವು. ಸುರುಸುರುಬತ್ತಿಯ ಕಿಡಿಗೆ ಕಾದ ಬತ್ತಿಗಳು ಕೊಂಚಕೊಂಚವಾಗಿ ಸುಂದರಿಯರ ಪ್ರಫುಲ್ಲ ವದನವನ್ನು ನೆನೆಸುವಂತೆ ಫ್ಲವರ್‍ಗಳನ್ನು ಹೊರಬಿಡುತ್ತಿದ್ದವು. ‘ವಾಹ್! ಚಿಗುರೇ ಸೊಗಸಾಗಿರುವಾಗ ಚಿಮ್ಮು ಇನ್ನೆಷ್ಟು ಸೊಗಸಾಗಿದ್ದೀತು’ ಎನ್ನುತ್ತಾ ಹಿಂದಕ್ಕೆ ಸರಿದು ನಿಂತರೆ ದೆಹಲಿಯ ಪ್ರತಿ ಕಾಯಿದೆಯನ್ನೂ ಧಿಕ್ಕರಿಸುವ ಪಡೆಯ ಪ್ರಮುಖ ನಾಯಕನಂತೆ ಢಂ ಢಮಾರ್ ಢಭ್ ಎಂದು ಸದ್ದು ಮಾಡುತ್ತಾ ಸ್ಫೋಟಿಸುತ್ತಿದ್ದವು. ‘ಏನ್ರೀ ನಿಮ್ಪಟಾಕಿಗ್ಳೂ...!’ ಎಂದು ಮರುದಿನ ಅಂಗಡಿಯವರನ್ನು ಜರಿಯಲು ಹೋದರೆ ‘ಕೊಡೋದ್ಮೂರ್ಕಾಸು, ಕೋಣೆ ತುಂಬ ಹಾಸು ಅಂದ್ರೆ ಆಗತ್ತಾ ಸಾರ್! ಪಟಾಕಿಗಳ ಕಾರ್ಯಕ್ಷಮತೆಯಲ್ಲೂ 90% ರಿಯಾಯಿತಿ!’ ಎಂದು ಮೀಸೆ ತಿರುವಿದನವ. 

ರಾಮಾಯಣದ ರಾಮಸುಬ್ಬುವನ್ನು ಮರೆತೆನಲ್ಲ! ‘ರಿಯಾಯಿತಿ – ಒಂದು ಅಧ್ಯಯನ’ ಎಂಬ ಕಿತಾಬ್ ಬರೆದಿರುವ ರಾಮಸುಬ್ಬುವಿನ ಪ್ರಕಾರ ಬಾರ್ಟರ್ ರಿಯಾಯಿತಿ ಈಸ್ ದ ಓಲ್ಡೆಸ್ಟ್ ರಿಯಾಯಿತಿ ಮತ್ತು ದೇರ್‍ಫೋರ್ ಬೆಸ್ಟ್ ರಿಯಾಯಿತಿ. ಇದನ್ನು ಆರಂಭಿಸಿದ್ದು ದೇವಲೋಕದವರು ಮತ್ತು ಋಷಿಗಳಂತೆ. ‘ನನ್ನನ್ನೇ ಒಲ್ಲೆನೆಂಬೆಯಾ? ಶಿಖಂಡಿಯಾಗು’ ಎಂದು ಶಪಿಸಿದ ಊರ್ವಶಿ ಅರ್ಜುನನ ಪ್ಲೀ ಫಾರ್ ಮರ್ಸಿಯನ್ನು ಮನ್ನಿಸಿ ‘ಏಕ್ ಸಾಲ್ ಕಾ ಶಿಖಂಡಿ’ ಆಗೆಂದಳು. ‘ಏಳು ಜನ್ಮ ನನ್ನ ಭಕ್ತರಾಗಿ ಜನ್ಮ ತಾಳಿ’ ಎಂದ ವಿಷ್ಣು. ‘ಮರ್ಸಿ ಮೈ ಲಾರ್ಡ್‍’ ಎಂದಾಗ ‘Three births of utter enmity’ ಎನ್ನುತ್ತಾ ಸುತ್ತಿಗೆಯನ್ನು ಮೇಜಿಗೆ ಕುಟ್ಟಿದ್ದನಂತೆ ಕಮಲನಯನ. ‘ಜೀವಮಾನವಿಡೀ ಕಲ್ಲಾಗು’ ಎಂದ ಗೌತಮರೇ ‘ಕಲ್ ಕ್ಯಾ ಹೋಗಾ? ಪತ್ಥರ್‍ ಕೆ ಸನಮ್‍ ಕಾ ರಿಹಾಯೀ ಕೈಸೆ?’ ಎಂದು ಕೊಶ್ಚೆನ್ನಿಸಿದಾಗ ‘ರಾಮಪಾದಸ್ಪರ್ಶದಿಂದ ಸ್ಟೇಟಸ್ ಕೋ ಮೇಂಟೇನ್ ಆಗಲಿ’ ಎಂಬ ವಿಶೇಷ ಡಿಸ್ಕೌಂಟ್ ನೀಡಿದರಂತೆ. ಹರಿಶ್ಚಂದ್ರನ ಸತ್ಯಕ್ಕೆ ಮೆಚ್ಚಿ ತನ್ನ ಕಂಡೀಷನ್ನನ್ನೆಲ್ಲ ಡಿಸ್ಕೌಂಟ್ ಮಾಡಿದ್ದೂ ಒಂದು ರೀತಿಯ ಆದರದ ರಿಯಾಯಿತಿಯಂತೆ. 

ಇವೆಲ್ಲವೂ ಒಂದು ತೂಕವಾದರೆ ಬಾರ್ಟರ್ ಆಫ್ ಪೀಪಲ್ಲು ಮತ್ತೊಂದು ತೂಕ! ‘ಏರಿಸು ಹೆದೆ; ಹೂಡು ಬಿಲ್ಲು’ ಎಂದ ಜನಕರಾಜ ರಾಮನಿಗೆ ಸೀತೆಯನ್ನು ಒಪ್ಪಿಸಿದ್ದು ಸರಿಯೇ. ಆದರೆ ಒಂದು ತೊಗೊಂಡ್ರೆ ಮೂರು ಉಚಿತ ಎಂದು ಜನಕನೂ, ಏಕಪತ್ನೀವ್ರತಮೇ ವ್ರತಮು ಎಂದು ಅಂದಿನವರು ನುಡಿದಿದ್ದರಿಂದ ‘ಮೂರಕ್ಕೆ ಮೂರು ಉಚಿತ’ ಎಂದು ದಶರಥನೂ ನಿರ್ಧರಿಸಿದ ಕಾರಣದಿಂದಲೇ ಊರ್ಮಿಳೆ, ಮಾಂಡವಿ ಶೃತಕೀರ್ತಿಯರು ವಿತೌಟ್ ಬಿಲ್ ಮುರಿಯಿಂಗ್ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಮುಫತ್ತಾಗಿ ದೊರಕಿದುದಂತೆ. ಉತ್ತರರಾಮಾಯಣದಲ್ಲಿ ಸೀತೆ ಲವನನ್ನು ಹೊರಗೆ ಕರೆದೊಯ್ದಿದ್ದಾಗ ವಾಲ್ಮೀಕಿಗಳು ಆಶ್ರಮಕ್ಕೆ ಆಗಮಿಸಿ, ಲವನಿಲ್ಲದ್ದನ್ನು ಕಂಡು, ಮಗು ಕಳೆದುಹೋಯಿತೆಂದು ಸೀತೆ ಮಮ್ಮಲ ಮರುಗಿಯಾಳೆಂದು ದರ್ಭೆಯಿಂದ ಮಗುವೊಂದನ್ನು ಸೃಜಿಸಿದರಂತೆ. ಸೀತೆ ಲವನೊಡನೆ ಬಂದಾಗ ‘ಲವ ತೊಗೊಂಡ್ರೆ ಕುಶ ಉಚಿತ’ ಎಂದು ನೀಡಿದರೋ ಏನೋ! ರಿಯಾಯಿತಿ ದರ ಅಥವಾ ಒಂದು ತೊಗೊಂಡ್ರೆ ಒಂದಷ್ಟು ಉಚಿತ ಎನ್ನುವುದರ ನಿಜ ಪಿತಾಮಹ (ಬ್ರಹ್ಮಚಾರಿಯನ್ನು ಪಿತಾಮಹ ಎನ್ನಬಹುದೆ? ಪ್ರಾಜ್ಞರೇ ತಿಳಿಸಬೇಕು) ಹನುಮಂತನಂತೆ. ‘ಒನ್ ಟ್ವಿಗ್ ಆಫ್ ಸಂಜೀವಿನಿ ಪ್ಲೀಸ್’ಎಂದು ರೀಟೈಲಲ್ಲಿ ಕೇಳಿದರೆ ಸಂಜೀವಿನಿ ಪರ್ವತವನ್ನೇ ಹೋಲ್‍ಸೇಲ್‍ ಆಗಿ ತಂದುದು ಬಿಗ್ಗೆಸ್ಟ್ ಎವರ್ ಮಾರ್ಕೆಟಿಂಗ್ ಆಫರ್ ಎಂದಿದ್ದಾರೆ ರಾಮ್ಸುಬ್. ಮಹಾಭಾರತದಲ್ಲಿ ದ್ರೌಪದಿಗೆ ಒಂದು ತೊಗೊಂಡರೆ ನಾಲ್ಕು ಉಚಿತ ಎಂಬ ಆಫರ್ ದೊರೆತದ್ದು ಇಂದಿನ ‘ಬೈ ಒನ್ ಟೇಕ್ ಫೈವ್‍’ಗೆ ಈಕ್ವಿವಲೆಂಟೆನ್ನುತ್ತಾರವರು. ರಕ್ತಬೀಜಾಸುರನು ಪಡೆದ ಆಫರ್ರೂ ಸೂಪರ್ರೇ. ಒಂದು ಡ್ರಾಪ್ ಬ್ಲಡ್ಡಿಗೆ ಒನ್ ಫುಲ್ಲಿ ಗ್ರೋನ್ ಅಡಲ್ಟು ವಿತ್ ಸಿಮಿಲರ್ ಪ್ರಾಪರ್ಟೀಸು ಅನ್ನೋದು ‘ಮುನ್ನೂರು ರೂಪಾಯಿಗೆ ಕ್ರೇಪ್ ಸಿಲ್ಕ್’ ಎನ್ನುವುದಕ್ಕಿಂತ ಉತ್ತಮ ಆಫರ್ ಆಗಿತ್ತಂತೆ. 

ಹಣದ ಬದಲು ವಸ್ತುವನ್ನು ರಿಯಾಯಿತಿಯ ರೂಪದಲ್ಲಿ ನೀಡುವುದರಲ್ಲಿ ಎರಡು ವಿಧ – ಸೆನ್ಸಿಬಲ್ಲು, ನಾನ್‍ಸೆನ್ಸು. ಟೂತ್‍ಪೇಸ್ಟ್ ಕೊಂಡಾಗ ಬ್ರಷ್ ಕೊಟ್ಟರೆ ಸೆನ್ಸಿಬಲ್ಲು; ‘ದಂತ ಕಿತ್ಸಾಲಯ’ವೊಂದ ವಿಳಾಸ ನೀಡಿ ‘ಮೂರು ಹಲ್ಲು ಕೀಳಿಸಿಕೊಂಡರೆ 30% ಕಡಿತ’ ಎನ್ನುವುದು ನಾನ್ಸೆನ್ಸು. ‘ನಮ್ಮಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ ವೇದಾಂತಂ ವೈದಿಕ ಶಾಲೆಯಲ್ಲಿ ನಡೆಸಿಕೊಡಲಾಗುವ ಶ್ರಾದ್ಧದ ಖರ್ಚಿನಲ್ಲಿ 40% ಕಡಿತ’ ಎಂಬ ಬೋರ್ಡೊಂದು ‘ಸಾಯಿ ಕ್ಲಿನಿಕ್‍’ ನ ಹೊರಭಾಗದಲ್ಲಿ ಇದೆಯಂತೆ. ‘ನಮ್ಮ ವಾಹನವನ್ನೇ ಕೊಳ್ಳಿರಿ, ಮೊದಲ ಎರಡು ವರ್ಷದ ರಿಪೇರಿಗಳಲ್ಲಿ 30% ರಿಯಾಯಿತಿ ಪಡೆಯಿರಿ’ ಎನ್ನುವ ಭೂಪರಿದ್ದಾರು. 

ವಿಷಯ ಏನೇ ಇರಲಿ, ವಸ್ತು ಯಾವುದೇ ಆಗಿರಲಿ, ಹಬ್ಬಗಳು ಬಂದವೆಂದರೆ ರಿಯಾಯಿರಿ ಇರಲೇಬೇಕು. ಗೌರಿ ಕೊಂಡರೆ ಗಣೇಶನಿಗೆ ಡಿಸ್ಕೌಂಟ್; ಗಣೇಶ ಕೊಂಡರೆ ಇಲಿಗೆ ಡಿಸ್ಕೌಂಟ್; ಇಲಿ ಕೊಂಡರೆ ಇನ್ನೊಂದು ಇಲಿ ರಿಯಾಯಿತಿ ದರದಲ್ಲಿ! ‘ನೂರು ರೂಗಳಿಗೆ ಅಮೆರಿಕನ್ ಡೈಮಂಡ್’ ಎಂದು ಬೋರ್ಡ್ ಇದ್ದರೆ ಅದರ ಮುಂದೆ ದೊಡ್ಡದೊಂದ ಕ್ಯೂ. ಅಲ್ಲಿನವರಿಗೂ ಡೈಮಂಡಿನ ಫೋಟೋ ಸಹ ನೂರು ರೂಪಾಯಿಗಳಿಗೆ ಸಿಗದೆಂದು ಒಳಗೊಳಗೇ ಗೊತ್ತು. ಆದರೆ ಬೋರ್ಡ್ ಕಂಡಾಕ್ಷಣ ಕೆಂಪು ಕಂಡ ಗೂಳಿಯಂತೆ ನುಗ್ಗುವುದೇ! ಕೊಂಡು ಮಾರಿದವನನ್ನು ಶಪಿಸುವುದೇ! 



‘History repeats because man never learns’ ಎನ್ನುತ್ತಿದ್ದರು ಹ್ಯೂಮರ್ ಕ್ಲಬ್ಬಿನ ವೈಎಮ್ಮೆನ್ ಮೂರ್ತಿ. ರಿಯಾಯಿತಿ ಚಿರಾಯು. ರಿಯಾಯಿತಿಯ ದರದಲ್ಲಿ ಎಂಬ ಪದಪುಂಜದ ಬಗ್ಗೆ ಲೇಖನ ಬರೆಯಲು ಆದೇಶಿಸಿದ ಅಶ್ವಿನ್ ದೀರ್ಘಾಯು. ಈ ಲೇಖನವನ್ನು ಓದಿಯೂ ಅಶ್ವಿನ್ ತಮ್ಮ ಗುಂಪಿನೊಂದಿಗೆ ಸಿಬಿಡಿಗೆ ಹೋಗಿ ಗ್ರ್ಯಾಂಡ್ ಡಿಸ್ಕೌಂಟ್ ಸೇಲಿನಲ್ಲಿ ಟೋಪಿ ಹಾಕಿಸಿಕೊಂಡು ಬಂದು, ಆ ಟೋಪಿ ಮಳೆಯಲ್ಲಿ ನೆಂದು ಅವರ ಮಗುವಿನ ಕುಲಾವಿಯ ಸೈಝಿಗೆ ಕುಗ್ಗಿದರೆ ಈ ಲೇಖನ ಸಾರ್ಥಕ.  

     

Comments

  1. ಎಂದಿನಂತೆ ನಿಮ್ಮ ಕಲ್ಪನಾಸರಣಿ ಅಚ್ಚರಿಗೊಳ್ಳುವಂತಿದೆ. ರಾಮಾಯಣ, ಭಾಗವತ ಇತ್ಯಾದಿ ಗ್ರಂಥಗಳಿಂದಲೂ ಆಖ್ಯಾನಗಳನ್ನು ಉದ್ಧರಿಸಿ, ಅವು barter ಕಾಲದ್ದೇ ಆಗಿರಲಿ, ಅವನ್ನು ರಿಯಾಯತಿ ಹಿನ್ನೆಯಲ್ಲಿ ಬಣ್ಣಿಸಿರುವ ಚಮತ್ಕಾರ ನಿಮಗೆ ಮಾತ್ರ ಸಾಧ್ಯ ಎಂದು ಅನಿಸುತ್ತದೆ. ಜಯ- ವಿಜಯರಿಗೆ Three births of utter enmity ಎಂಬುದನ್ನು Two births of utter enmity ಎಂದು ಮಾರ್ಪಾಡು ಮಾಡಿ ಅದರಲ್ಲೂ bonus discount ಕೊಟ್ಟುಬಿಟ್ಟಿದ್ದೀರಲ್ಲ?

    ReplyDelete
    Replies
    1. Dr Madhu sir ತಮ್ಮ ಕಾಮೆಂಟ್ ಓದಿದನಂತರ ಲೇಖರನ್ನು ಪರಿಶೀಲಿಸಿ ತಿದ್ದುಪಡಿ ಮಾಡಲಾಗಿದೆ. ತಮ್ಮ ಜ್ಞಾನ ದೃಷಿಗೆ ಅಭಿಪ್ರಾಯ ಸಲಹೆಗಳಿಗೆ ಧನ್ಯವಾದಗಳು

      Delete
  2. ಗತಕಾಲದಿಂದ ಹಿಡಿದು‌ ಪ್ರಸ್ತುತವರೆಗೂ "ಎವಲ್ಯೂಷನ್ ಆಫ್ ಡಿಸ್ಕೌಂಟ್ಸ್" ಬಗ್ಗೆ ಬರೆದು, ಹಿಸ್ಟರಿ ಮಾಡಿದ್ದೀರಿ. ತಮ್ಮ ಜ್ಞಾನ ಹಾಗೂ ಕಲ್ಪನಾಶಕ್ತಿಗೆ ಯಾವುದೇ ರಿಯಾಯಿತಿ ಇಲ್ಲದೆ ನಮ್ಮೊಂದಿಗೆ ಹೀಗೆ ಹಂಚಿಕೊಳ್ಳುವ ಕಾರ್ಯ ಮುಂದುವರೆಯಲಿ.

    ಕುಲಾವಿ ಕುಂಚಿಗೆಗಳು ಕೆ.ಆರ್.ಎಸ್. ನಂತೆ ಹೇರಳವಾಗಿ ತುಂಬಿವೆ, ಧನ್ಯವಾದಗಳು.

    ReplyDelete

Post a Comment