ಸಿಡ್ನಿ ಕನ್ನಡಿಗರ ದೋಣಿ ವಿಹಾರ

 ಸಿಡ್ನಿ ಕನ್ನಡಿಗರ ದೋಣಿ ವಿಹಾರ

ವರದಿ : ಶ್ರೀ ದತ್ತು ಕುಲಕರ್ಣಿ ಸಿಡ್ನಿ 


ಕಳೆದ ಶನಿವಾರ ಸಿಡ್ನಿಯ ಕನ್ನಡಿಗರು ಒಂದು ಅಭೂತಪೂರ್ವ ಸುಂದರ ಸಂಜೆಯ ಕ್ಷಣಗಳಲ್ಲಿ ತೇಲಿ ವಿಹರಿಸಿದರು. ಹೌದು ಅದು ನಿಜವಾಗಿಯೂ ತೇಲಿ ವಿಹರಿಸಿಸುವಂತಹ  ಕಾರ್ಯಕ್ರಮವಾಗಿತ್ತು. ಅಂದು ಸಿಡ್ನಿಯ ಸುಪ್ರಸಿದ್ಧ ಒಪೇರಾ ಹೌಸ್ ಮತ್ತು ಹಾರ್ಬರ್ ಬ್ರಿಡ್ಜ್ ನ ಹಿನ್ನೀರಿನಲ್ಲಿ ಸಿಡ್ನಿ ಕನ್ನಡ ಶಾಲೆಯವರು ದೋಣಿ ವಿಹಾರದ ಕಾರ್ಯಕ್ರಮವನ್ನು ಆಯೋಜಿಸಿದ್ದರು,

ಸುತ್ತಲೂ ಜಗಮಗಿಸುವ  ಸಿಟಿ ಲೈಟುಗಳು, ಪ್ರಶಾಂತವಾದ ಸಮುದ್ರದ ಹಿನ್ನಿರಿನ ಸದ್ದು, ಆಕಡೆ ಮತ್ತು ಈ ಕಡೆ ಕಾಣಿಸುವ ಒಪೇರಾ ಹೌಸ್ ಮತ್ತು ಹಾರ್ಬರ್ ಬ್ರಿಡ್ಜ್ ನ ಸುಂದರ ದೃಶ್ಯಗಳು. ಮತ್ತು ಎಂದಿನಂತೆ ಸಿಡ್ನಿಯ ಚಳಿ ವಾತಾವರಣ ಇವೆಲ್ಲಾವುಗಳ ನಡುವೆ ಕನ್ನಡ ಕಲರವ ಮಾಡುತ್ತಿರುವ ದೋಣಿ. ಇಂತಹ  ದೋಣಿಯಲ್ಲಿ   ವಿಹಾರ ಮಾಡುತ್ತಾ  ಮಕ್ಕಳೊಂದಿಗೆ ಹಿರಿಯರು ಭಾಗವಹಿಸಿ ಪುಳಕಿತರಾದರು. 



ಎರಡು ಅಂತಸ್ತನ್ನು ಹೊಂದಿದ ದೋಣಿ ಬಹಳ ಸುಸಜ್ಜಿತವಾಗಿ ಹಾಡು ಕುಣಿತ  ಮತ್ತು ಮನೋರಂಜನೆಗಾಗಿ ಹೇಳಿ ಮಾಡಿಸಿದದಂತಿತ್ತು.   ಅಂದು ಸಂಜೆ ಐದು ಗಂಟೆಗೆ ಶುರುವಾದ ಮನೋರಂಜನೆಯ ಕಾರ್ಯಕ್ರಮದಲ್ಲಿ ಮೊದಲು ಸಿಡ್ನಿಯ ಯುವ ಕಲಾವಿದ ಸೂರಜ್ ಅವರು ‘ಪರವಶನಾದೆನು’ ಹಾಡನ್ನು ಪಿಟಿಲಿನಲ್ಲಿ ಬಾರಿಸಿ ಎಲ್ಲರನ್ನೂ ಪರವಶಗೊಳಿಸಿದರು. ನಂತರ ಅವರು ಬಾರಿಸಿದ ‘ಹಾಡು ಸಂತೋಷಕ್ಕೆ’ ಎಲ್ಲರನ್ನು ಕುಣಿಯುವಂತೆ ಮಾಡಿತು. ನಂತರ ಶ್ರೇಯಸ್ ಕೊಳಲಿನಲ್ಲಿ ಮೂಡಿಬಂದ ಕರ್ನಾಟಕದ ಸಂಗೀತದ ವಾದ್ಯ ಸಂಗೀತ ಬಹಳ ಇಂಪಾಗಿತ್ತು. ಹಾಗೆಯೆ ಸಮನ್ವಿತ ಹಾಡಿದ ಬೇಂದ್ರೆ ಯವರ ‘ಬಂಗಾರ ನೀರ ಕಡಲಾಚೆಗಿದೆ ನೀಲ ನೀಲ ತೀರ.’ ಅತ್ಯಂತ ಸಮಯೋಚಿತವಾಗಿತ್ತು. ಆಮೇಲೆ ವಿಜಯೆಂದ್ರ, ದೀಪಕ್ ಮತ್ತು ಅರ್ಚನಾ ಹಾಡಿದ ಸಿನಿಮಾ ಹಾಡುಗಳಿಗೆ ಎಲ್ಲರೂ ತಲೆದೂಗಿ ಕುಣಿದು ಕುಪ್ಪಳಿಸಿದರು. 



ನಂತರ ನಡೆದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಕನ್ನಡ ಕರ್ನಾಟಕ ಮತ್ತು ಆಸ್ಟ್ರೇಲಿಯಾಕ್ಕೆ ಸಂಬಂಧ ಪಟ್ಟ  ಪ್ರಶ್ನೆಗಳನ್ನು ಕೇಳಲಾಯಿತು. ಈದರಲ್ಲಿ ಎಲ್ಲರೂ ಬಹಳ  ಆಸಕ್ತಿಯಿಂದ ಭಾಗವಹಿಸಿದರು. 

ಈ ಕಾರ್ಯಯಕ್ರಮಗಳ ಮಧ್ಯ ಸಮೋಸ ಮತ್ತು ರುಚಿಯಾದ ಕರ್ನಾಟಕದ ಊಟವನ್ನು ಕೊಡಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಸೇರಿ ಕುವೆಂಪು ಅವರ ‘ದೋಣಿ ಸಾಗಲಿ’ ಹಾಡನ್ನು ಒಕ್ಕೊರಲಿನಿಂದ ಹಾಡಿದ್ದು ಅತಿ ವಿಶೇಷವಾಗಿತ್ತು. ಹಾಡಿನ ಸಾಹಿತ್ಯ ನಮ್ಮ ದೋಣಿ ವಿಹಾರಕ್ಕೆ ಪೂರಕವಾದದ್ದರಿಂದ ಎಲ್ಲರೂ ಒಂದು ರೀತಿಯ ಅನುಭೂತಿಯನ್ನೆ ಅನುಭವಿಸಿದರು ಎಂದು ಹೇಳಬಹುದು. 

ಇಂತಹ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ ಸಿಡ್ನಿ ಕನ್ನಡ ಶಾಲೆಯ ಶ್ರೀ ನಾರಾಯಣ ಕನಕಾಪುರ ಮತ್ತು ತಂಡದವರಿಗೆ  ಎಲ್ಲರೂ ಧನ್ಯವಾದಗಳನ್ನು ಹೇಳಿದರು. 





Comments

Post a Comment