ಚಪಲತೆ

ಚಪಲತೆ

  ಲೇಖಕರು : ಎಂ ಆರ್ ವೆಂಕಟರಾಮಯ್ಯ        

    ಚಪಲತೆ ಎಂ¨ ಪದಕ್ಕೆ ಚಂಚಲತೆ, ಅಸ್ಥಿರತೆ, ತೀವ್ರ ಆಸೆ, ವಿಶೇಷ ಆಸಕ್ತಿ, ಅತ್ತಿತ್ತ ಚಲಿಸುವ, ಹಿಂದೆ ಮುಂದೆ ನೋಡದೆ ನುಗ್ಗುವ, ಮುನ್ನುಗ್ಗುವ ಎಂಬ ಕನ್ನಡ ಭಾಷೆಯ ಅರ್ಥಗಳಿದ್ದರೆ ಇದೇ ಚಪಲತೆ ಎಂಬ ಪದಕ್ಕೆ fraility, fickleness,  inconsistence, vacillating,  oscillating, swaying, wavering, unsteady,  agility, nimbleness ಇತ್ಯಾದಿ ಇಂಗ್ಲಿಷಿನ ಪರ್ಯಾಯ ಪದಗಳಿವೆ. ಚಪ¯ತೆಗಿರುವ ಇಷ್ಟು ಗುಣ : ಮುಖಗಳ ಪೈಕಿ, ಮೊದಲು ಚಪಲತೆ ಎಂಬುದು ಚಂಚಲತೆಯಾದರೆ ಇದರಿಂದ ಸಂಭವಿಸಬಹುದಾದ ಕೆಲವು ಪರಿಣಾಮಗಳ ಬಗ್ಗೆ ಒಂದು ನೋಟ: 


     ಚಂಚಲತೆಯ ಪ್ರಮುಖ ಗುಣ ಅಸ್ಥಿರತೆ. ವ್ಯಕ್ತಿಯಲ್ಲಿ ಇರಬಹುದಾದ ಒಂದು ಮಾನಸಿಕ ಸ್ಥಿತಿ. ಮನುಷ್ಯನ ಎಲ್ಲಾ ಜಯ, ಅಪಜಯ, ಸಫಲತೆ ವಿಫಲತೆಗಳಿಗೂ ಅವನ ಮನಸ್ಸೇ ಕಾರಣವಾಗಿದೆ. ಅದಕ್ಕಾಗಿಯೆ ಮನಸ್ಸನ್ನು  “ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್“ ಎಂಬುದಾಗಿ ಆನೆಗೆ ಹೋಲಿಸಿದ್ದಾರೆ. ಇದಕ್ಕೆ ಪರಿಹಾರವೆಂದರೆ ಮಾವುಟಿಗನು ತನ್ನ ಅಂಕುಶದಿಂದ ಹೇಗೆ ಆನೆಯನ್ನು  ನಿಯಂತ್ರಿಸುವನೋ ಹಾಗೇನೇ, ಮನುಷ್ಯ ತನ್ನ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂಬುದಾಗಿದೆ. ಇಂತಹಾ ಹೋಲಿಕೆಯನ್ನೇ ಮುಂದುವರಿಸುತ್ತಾ, “ಮತಯೋ ಯತ್ರ ಗಚ್ಛಂತಿ ತತ್ರ ಗಚ್ಛಂತಿ ವಾನರಾ ಃ “ ಮನಸ್ಸು ಹೋದಂತೆಲ್ಲಾ ಹೋಗುವುವು ಮಂಗಗಳು ಎಂದಿದೆ ಸುಭಾಷಿತಗಳು. ಮಂಗ ಒಂದು ಚಂಚಲ ಪ್ರಾಣಿ., ಒಂದು ಕ್ಷಣವಾದರೂ ಇದು ಸುಮ್ಮನಿರುವುದಿಲ್ಲ. ಚಂಚಲತೆ ಎಂಬುದು ದುರ್ಬಲತೆ, ದೋಷ, ನ್ಯೂನತೆ. 

   ಇಂದ್ರಿಯ ಪ್ರವೃತ್ತಿಗೆ ಮನಸೇ ಮೂಲ ಕಾರಣ. ಪಾಪ ಪುಣ್ಯಗಳಿಗೆ ಇದೇ ನಿಮಿತ್ತ. ಮನಸ್ಸಿನ ಪ್ರಸನ್ನತೆ, ಸೌಮ್ಯತೆ, ಮಿತಭಾಷಣ, ಮನಶ್ಯುದ್ಧಿ ಇವನ್ನು ಮಾನಸ ತಪÀಸ್ಸು ಎಂದು ಪರಿಗಣಿಸಲಾಗಿದೆ. ಇವೆಲ್ಲಾ ಮನಸ್ಸಿನ ವಿಚಾರವಾಯಿತು, ಮನುಷ್ಯನ ವಿಚಾರ. . . ! ಮನಸ್ ಚಂಚÀಲತೆ ಇದ್ದವನು ಒಂದು ನಿಮಿಷವಾದರೂ  ಸ್ಥಿರವಾಗಿ ಒಂದೆಡೆ ಕುಳಿತು ತನ್ನ ಕೆಲಸದಲ್ಲಿ ಮನವಿರಿಸುವುದಿಲ್ಲ. ಹತ್ತು ಹಲವು  ವಿಷಯಗಳ ಬಗ್ಗೆ ಚಿಂತಿಸುತ್ತಿರುತ್ತಾನೆ. ಇವನಿಗೆ ಎಲ್ಲವೂ ಸಂಶಯಾತ್ಮಕವಾಗಿಯೇ ಕಾಣಿಸುತ್ತದೆ ಹೀಗೆ ಮಾತನಾಡಿದರೆ ಏನಾಗುತ್ತೋ, ಆ ಕೆಲಸ  ಹಾಗೆ ಮಾಡಿದರೆ ಕೆಡುತ್ತದೇನೋ,  ಒಂದು ವೇಳೆ ಕಷ್ಟ ನಷ್ಟವಾದರೆ,  ನನ್ನ ಸುತ್ತಲೂ ಇರುವ ಮಿತ್ರರು ಶತ್ರುಗಳಾದರೆ,  ಅವರು ನನಗೆ ಮೋಸ ಮಾಡಿದರೆ ಇತ್ಯಾದಿಯಾಗಿ ಇವನ ಮನ ಅತ್ತಿತ್ತ ಹೊಯ್ದಾಡುತ್ತಿರುತ್ತದೆ.

   ಕೊಟ್ಟ ಕೆಲಸದಲ್ಲಿ ಇವನು ಶ್ರದ್ದಾಸಕ್ತಿ ತೋರದ ಕಾರಣ ಅದನ್ನು ಸಮರ್ಪಕವಾಗಿ ಮಾಡಲಾರ, ಯಾವುದೇ ಹೊಣೆ ಜವಾಬ್ದಾರಿ ತೆಗೆದುಕೊಳ್ಳಲಾರ. ಹೀಗಾಗಿ ಇವನು ಎಲ್ಲರ ದೃಷ್ಟಿಯಲ್ಲಿ ಅನುಮಾನ, ಸಂಶಯದವನು,  ಅಪ್ರಯೋಜಕ ಎಂಬ ಹಣೆಪಟ್ಟಿಕಟ್ಟಿಸಿಕೊಂಡು  ಮೂಲೆಗುಂಪಾಗುತ್ತಾನೆ.  ಹೀಗಾಗಿ ಮನಸ್ ಚಂಚಲತೆ ವ್ಯಕ್ತಿಗೆ ಬಹಳ ಹಿನ್ನೆಡೆ  ತರುತ್ತದೆ.  ಚಂಚಲತೆ ವಿಷಯ ಚರ್ಚೆಗೆ ಬಂದಾಗ ನೆನಪಾಗುವುದು “ಚಂಚಲ ಹಿಂ ಮನಃ ಕೃಷ್ಣ” (ಭ ಗೀ ೬. ೩೪)   ಎಂಬ ಭಗವದ್ಗೀತೆಯಲ್ಲಿನ ಅರ್ಜುನನ  ಅಸಹಾಯಕ, ದುಃಖ ಪೂರಿತ ಮಾತು. ಇದಕ್ಕೆ ಉತ್ತರವಾಗಿ, ಮಹಾಬಾಹು ! ಮನಸ್ಸು ಚಂಚಲವಾದದ್ದು ನಿಜ. ಇದನ್ನು ನಿಗ್ರಹಿಸುವುದು ಕಷ್ಟವೆಂಬುದೂ ಸುಳ್ಳಲ್ಲ. ಆದರೂ ಕುಂತೀ ಕುಮಾರ, ಅಭ್ಯಾಸ, ವೈರಾಗ್ಯದಿಂದ ಮನವನ್ನು ಸ್ವಾಧೀನ ಮಾಡಿಕೊಳ್ಳಬಹುದು ಎಂದಿರುವ ಶ್ರೀಕೃಷ್ಣನ ಸಮಯೋಚಿತ ಮಾರ್ಗದರ್ಶನ ಚಂಚಲ ಮನದವರಿಗೆ  ದಾರಿ ದೀ:ಪವಾಗಿದೆ.       

 ಇನ್ನು ’ಚಪಲತೆ’ ಎಂಬುದು ತೀವ್ರ ಆಸೆ, ವಿಶೇಷ ಆಸಕ್ತಿ ಎಂಬ ಗುಣಗಳಾದರೆ ಇದರಿಂದ ಸಂಭವಿಸಬಹುದಾದ ಪರಿಣಾಮದ ಬಗ್ಗೆ ಪರಿಶೀಲಿಸೋಣ.

   ‘ಎ ಬರ್ಡ್ ಇನ್ ದಿ ಹ್ಯಾಂಡ್ ಈಸ್ ವರ್ತ್ ಟೊ ಇನ್ ದಿ ಬುಷ್’ ಮುಂದೆ ಸಿಗಬಹುದಾದ ಎರಡು ಹಕ್ಕಿಗಳಿ ಗಿಂತಾ ಕೈಲಿರುವ  ಒಂದನ್ನು ಭದ್ರಪಡಿಸಿಕೊಳ್ಳುವುದು ಬುದ್ದಿವಂತಿಕೆ ಎಂಬ ಇಂಗ್ಲಿಷ್ ಗಾದೆ ಈ ಚಪಲತೆ ಸಂದರ್ಭದಲ್ಲಿ ಸ್ಮರಣಾರ್ಹ. ಕೈಗಿ ಸಿಕ್ಕಿದ ಅವಕಾಶ ಬಳಸದ, ಬಂದ ಸುಖವನ್ನು ಅನುಭವಿಸದೆ ಇದಕ್ಕಿಂತಾ ಹೆಚ್ಚಾದ್ದು ಸಿಗಬಹುದೇನೋ ಎಂದು ಕೈಲಿರುವುದನ್ನು ಬಿಟ್ಟು ಭವಿಷ್ಯದಲ್ಲಿ ಸಿಗಬಹುದಾದ ಅವಕಾಶ,  ಸುಖದ ಬಗ್ಗೆ ಕನಸು ಕಾಣುವವರು ಹಲವು ಚಪಲಚಿತ್ತರು. ಇಂತಹವರನ್ನು ಕಂಡು “ಅಪರಮಿತವೇನಲ್ಲ ಜೀವನಕೆ ಲಭ್ಯ ಸುಖ,\ ಚಪಲದಿಂ ಕಣ್ಣನತ್ತಿತ್ತಲಲಸುತಿರೆ\ ಸ್ವಪರಿಸ್ಥಿತಿಯ ಧರ್ಮ ನಷ್ಟವಹುದೊಂದೆ ಫಲ\ವಿಫಲ ವಿಪರೀತಾಶೆ ಮಂಕುತಿಮ್ಮ” ನಾವು ಸುಖವಾಗಿ ಜೀವನವನ್ನು ನಡೆಸಲು  ಹೆಚ್ಚೇನು ಸೌಕರ್ಯಗಳು ಬೇಕಾಗುವುದಿಲ್ಲ. ಆದರೆ ನಾವು  ಸಿಕ್ಕಿದ ಸೌಕರ್ಯ, ಅನುಕೂಲಗಳನ್ನು  ನಿರ್ಲಕ್ಷಿಸಿ ಏ, ಇದಕ್ಕಿಂತಾ ಹೆಚ್ಚಿನದು ಮುಂದೆ ಸಿಗಬಹುದು ಎಂಬ ಚಪಲದಿಂದ  ಒಂದನ್ನು  ಬಿಟ್ಟು ಇನ್ನೊಂದನ್ನು ಹಿಡಿಯಲು ಹೊರಟರೆ  ಇರುವುದನ್ನೂ ಕಳೆದುಕೊಂಡು ವಿಪರೀತ ಆಶೆಯ ವಿಫಲವನ್ನು ಅನುಭವಿಸುತ್ತೇವೆ ಎಂದಿದ್ದಾರೆ ಡಿ ವಿ ಜಿ ಯವರು ತಾವು ರಚಿಸಿದ ಕಗ್ಗದಲ್ಲಿ.

     ಚಪಲತೆ ಎಂಬುದು ಕಣ್ ಚಪಲತೆಯಾಗಿರಬಹುದು, ಬಾಯಿ ಚಪಲತೆಯಾಗಿರಬಹುದು. ಈ ಗುಣಗಳಿರುವ ಮನುಷ್ಯನಲ್ಲಿ ಆಸೆಯ ತೀವ್ರತೆ ಹೆಚ್ಚಿರುತ್ತದೆ. ಅಂದರೆ  ಕಣ್ಣಿಗೆ ಕಾಣಿಸಿದೆಲ್ಲಾ ತನದಾಗಬೇಕು, ಕಂಡ ಪದಾರ್ಥಗಳನ್ನೆಲ್ಲಾ  ಹೆಚ್ಚು ಹೆಚ್ಚಾಗಿ ಸವಿಯುತ್ತಿರಬೇಕು.  ಯಾವುದನ್ನೂ ನನಗೆ ಬೇಡ ಎನ್ನುವ ಮಾತೇಯಿಲ್ಲ. ಇದರ ದುಷ್ಪರಿಣಾಮ ಎಂದರೆೆ ಆಸೆಯ ತೀವ್ರತೆ ಹೆಚ್ಚಿಸಿಕೊಂಡಷ್ಟೂ ಅಪಾಯ ಹೆಚ್ಚು.  ಅದಕ್ಕಾಗಿಯೇ ‘ಅತಿ ಸರ್ವತ್ರ ವರ್ಜಯೇತ್’ ಎಂದಿದ್ದಾರೆ ಅಧ್ಯಾತ್ಮಿಗಳು. 



     ಈಗ ‘ಬಾಯಿ ಚಪಲ’ತೆಯ ಬಗ್ಗೆ ಚರ್ಚೆ. ತಮಗಿಷ್ಟ ಎಂಬ ಕಾರಣವೊಡ್ಡಿ ಕಂಡಿದ್ದನ್ನೆಲ್ಲಾ ಇತಿಮಿತಿಗಳಿಲ್ಲದೆ ತಿನ್ನುತ್ತಲೇ ಇರುವ ಅಭ್ಯಾಸ ಇವರದು. ಇದರ ಜೊತೆಗೆ ಎದುರಿಗೆ ಕಂಡವರ ಬಳಿ ತಮಗೆ ತೋಚಿದಂತೆ ಮಾತನಾಡುತ್ತಲೇ ಇರುವ ಅಭ್ಯಾಸ, ಈ ಅಭ್ಯಾಸ : ದುರಭ್ಯಾಸದಿಂದ ದುಷ್ಪರಿಣಾಮ ಅನುಭವಿಸಿದ್ದರೂ ಇವರು ಎಚ್ಚರಿಕೆ ವಹಿಸುವುದಿಲ್ಲ.. ಬಾಯಿ ಚಪಲದವರ  ಸಾಮಾನ್ಯ ವರ್ತನೆ ಕುರಿತಂತೆ  ನನ್ನ ಮಿತ್ರನ ಅನುಭವ ಇಲ್ಲಿ ತಿಳಿಸುತ್ತಿದ್ದೇನೆ. 

    ಈ ಕುಟುಂಬದಲ್ಲಿನ ಒಬ್ಬ ಹಿರಿಯ ಜೀವಿ, ಸಹಸ್ರ ಚಂದ್ರ ದರ್ಶನ ಮಾಡಿದವರು. ಶಾರೀರಿಕ ಶಕ್ತಿ ಕುಗ್ಗಿರುವುದರಿಂದ ಶರೀರಕ್ಕೆ  ವ್ಯಾಯಾಮ ಇಲ್ಲ. ಇವರಿಗೆ  ಜೀರ್ಣಶಕ್ತಿ ಬಹಳ ಕಡಿಮೆ. ಶರೀರ ಹಲವು ತೊಂದರೆಗಳ ಗೂಡಾಗಿದೆ. ಈ ಕಾರಣಗಳಿಂದ ಇವರ ಆಹಾರದಲ್ಲಿ ಉಪ್ಪು ಖಾರ ಕಡಿಮೆ ಮಾಡಿ, ಖರಿದ ತಿಂಡಿ, ಎಣ್ಣೆ ಪದಾರ್ಥಗಳನ್ನು ಕೊಡಬೇಡಿ ಎಂದು ಕಟ್ಟುನಿಟ್ಟಾಗಿ ವೈದ್ಯರು ಕುಟುಂಬದವರನ್ನು ಎಚ್ಚರಿಸಿದ್ದಾರೆ. ಆದರೆ ಈ ಹಿರಿಯ ಇದನ್ನು ಡೋಂಟ್ ಕೇರ್. ಉಪ್ಪು ಖಾರ ಹಾಕದಿದ್ದರೆ ಸಪ್ಪೆ ಊಟ ನನಗೆ ಬೇಡ, ಎಂದು ಮುಷ್ಕರ.  ಮಧ್ಯಾಹ್ನ ಕುರುಕಲು ತಿಂಡಿ ಕೊಡಿ ಅನ್ನೋದು ಈತನ ಅಡೀಶನಲ್ ಡಿಮೇಂಡ್.  ಕೊಡದೆಯಿದ್ರೆ ಬೀದೀಲಿ ಓಡಾಡುವರ ಕೈಲಿ ದುಡ್ಡು ಕೊಟ್ಟು, ಅಪ್ಪಾ, ನಮ್ಮ ಮನೆಯವರು ನನಗೆ ತಂದುಕೊಡೊಲ್ಲ ನೀ ತಂದ್ ಕೊಡಪ್ಪಾ ಎಂದು ಅವರಿಗೆ ದುಂಬಾಲು ಬೀಳೋದು, ಹೀಗಾದರೆ ಈ ಕುಟುಂಬದವರ ಮರ್ಯಾದೆ ಬೀದಿಗೆ ಹರಾಜಾಗೊಲ್ವೆ ! ಮನೆಯವರು ಕೊಡದಿದ್ದರೆ ಅವರ ಮೇಲೆ  ಹೀಗೆ ಸೇಡು ತೀರಿಸಿಕೊಳ್ಳೋದು.  ಹಿರಿಯ ಕೇಳಿದ್ದು ಕೊಟ್ಟರೆ ಕಾಯಿಲೆ ಜಾಸ್ತಿ ಆಗುತ್ತೆ. ಕೊಡದೆಯಿದ್ದರೆ ಹಿರಿಯನ ಹಠಮಾರಿತನ, ಮುಷ್ಕರ. ‘ಇತ್ತ ದರಿ ಅತ್ತ ಪುಲಿ’ ಎಂಬ ಸಂದಿಗ್ದ ಮನೆಯವರಿಗೆ, ಇದು ಬಾಯಿ ಚಪಲದ ಸಮಸ್ಯೆ. 

   ಇನ್ನು ಹರಕು ಬಾಯಿ, ಕಂಡವರ ಜೊತೆಯಲ್ಲೆಲ್ಲಾ ಸದಾ ಮಾತನಾಡುವ ಬಾಯಿ ಚಪಲದ ಚನ್ನಿಗರಾಯನ ಪ್ರಸಂಗ ನೋಡೋಣ ಬನ್ನಿ. ಇವರು ಒಂದು ಕ್ಷಣವಾದರೂ ಬಾಯಿಗೆ ಬೀಗ ಹಾಕುವವರಲ್ಲಾ. ಮನೆಯವರು ತಮ್ಮ ಕೆಲಸ ಕಾರ್ಯಗಳಲ್ಲಿ ಬಿಜಿಯಾಗಿರುವ ಕಾರಣ ಇವರೊಡನೆ ಮಾತನಾಡುವವರಿಲ್ಲ.,  ಮಾತನಾಡದೆ ಸುಮ್ಮನಿರಲಾರದ ಈತ ಇದಕ್ಕಾಗಿ À ಅತ್ತಿತ್ತಲಿರುವ ನೆರೆ ಮನೆಗಳಿಗೆ ನುಗ್ಗಿ, ಹಲೋ, ಹೇಗಿದ್ದೀರಾ ರ‍್ರ\ಮೇಡಮ್, ಇವತ್ತಿನ ತಿಂಡಿಗೆ ಸ್ಲೆಶಲ್ ಏನ್ ಮಾಡಿದ್ರಿ, ಅಡಿಗೆಗೆ ತರಕಾರಿ ಸೆಲೆಕ್ಷನ್ ಇನ್ನೂ ಆಗಿಲ್ವಾ, ತರಕಾರಿ ಬೇಕಿದ್ರೆ ಹೇಳಿ ನಾ ತಂದ್ ಕೊಡ್ತೀನಿ ಅನ್ನೋ ಮೂಲಕ  ಈ ಮನೆಯವರನ್ನು ಈತ ಮಾತಿಗೆ ಸೆಳೀತಾರೆ. ಆ ಮೇಲೆ ತಗೊಳ್ಳಿ, ಶುರು ಮಾಡ್ತಾರೆ, ತಮ್ಮ ಸ್ವಂತ ಮನೆಯವರ ಚರಿತ್ರೆ ಭೂಗೋಳ, ಗಣಿತದ ವಿವರಗಳು, ಜೊತೆಗೆ ಅತ್ತಿತ್ತಲಿರುವ ಮನೆಗಳ ಆಗುಹೋಗುಗಳ ಅಪ್ಡೇಟೆಡ್ ಪುರಾಣಗಳನ್ನು ಬಿಚ್ಚಿಡ್ತಾ ಹೋಗತಾರೆ. ಇದರಿಂದ ನಮ್ಮ ಮನೆಯವರ ಮರ್ಯಾದೆಯೇ ಪಬ್ಲಿಕಾಗುತ್ತಲ್ವಾ ಅನ್ನೋ ಅರಿವೇ ಇವರಿಗಿರೋದಿಲ್ಲ. 

    ಯಾಕಪ್ಪಾ ಹೀಗ್ ಮಾಡ್ತೀಯ ! ನೆಮ್ಮದಿಯಾಗಿ ಮನೇಲಿರೋಕಾಗೊಲ್ವಾ ಅಂದ್ರೆ,  ಸುಮ್ಮನೆ ಕೂತುಕೊಳ್ಳೋಕೆ ನಾ ಏನ್ ಜೀವವಿಲ್ಲದ ಬೊಂಬೇನೇನೋ ! ಮನೆಯರ‍್ಯಾರಿಗೂ ನನ್ನ ಜೊತೇಲಿ  ಮಾತಾಡಲು ಪುರುಸೊತ್ತಿಲ್ಲ, ಸುಮ್ಮನಿರೋಕೆ ನನಗೆ ಬೇಜಾರು. ಅದಕ್ಕೆ  ಆ ಮನೆಗಳಿಗೆ ಹೋದೆ. ನೆರೆ ಹೊರೆ ಜೊತೆ ನಾವ್ ಮಧುರ ಸಂಬAಧ ಇಟ್‌ಕೊಳ್ಳದೆ ಎಲ್ರ ಜೊತೆ ಜಗಳ ಗಂಟಿಗಳಾಗಿರಬೇಕೇನೋ ? ಅದಿರ್ಲಿ, ಅತ್ಲಾ ಕಡೆ ಮನೆಯವರ ಮಗನದು ಇಂಟರ್ ಕಾಸ್ಟ್ ಮದುವೆನಂತೆ,  ಎದುರು ಮನೆಯವರ ಮಗಳು  ಅದ್ಯಾವೋನೋ ಆಟೊದವನ ಜೊತೆ ಓಡ್ ಹೋದಳಂತೋ ! ಮೂರನೆಯ ಮನೆಯ ಯಜಮಾನನಿಗೆ ಈಗಿರೋದು ಮೂರನೆಯ ಸಂಬಂಧವಂತೆ  ! ಉಳಿದಿಬ್ಬರು ಇವನ ಮೇಲೆ ಮೈಟೆನೆನ್ಸ್ಗೆ ಕೇಸ್ ಹಾಕಿ ಅದು ನಡೀತಿದೆಯಂತೆ ! ನಾ ಅವರಿವರ ಮನೆಗಳಿಗೆ ಹೋಗದೇನೇ ಇದ್ದಿದ್ರೆ  ಇವೆಲ್ಲಾ ನಿಮಗ್ಗೊತ್ತಾಯಿತ್ತಾ !  ಎನ್ನುತ್ತಾ  ತಮ್ಮ ನೆರೆ ಮನೆಗಳಿಗೆ ಭೇಟಿ ಸಮರ್ಥಿಸಿಕೊಳ್ತಾರೆ ಈ  ಬಾಯಿ ಚಪಲದ ಚೆನ್ನಿಗರಾಯರು. 

    ತನ್ನನ್ನು ಎಲ್ಲರೂ ಗುರುತಿಸಬೇಕು, ಗೌರವ  ಮರ್ಯಾದೆ ಕೊಡಬೇಕು ಇತ್ಯಾದಿ ಚಪಲ ಹಲವರಿಗಿರುವುದು ಸಾಮಾನ್ಯ.  ಈ ವರ್ಗದವರ ಕುರಿತಂತೆ :   

     “ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೋ ಕೊನೆಗೆ ಕಾಡೊಳೋ ಮಸಾಣದೊಳೋ ಮತ್ತೆಲ್ಲೋ ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು ನೆನೆಯದಾತ್ಮವ ಸುಖವ- ಮಂಕುತಿಮ್ಮ” ಮನೆ ಮಠ ಸಭೆ ಸಮಾರಂಭ ಗಳು, ಸಂತೆ ಜಾತ್ರೆ ಅರಣ್ಯ, ಕೊನೆಗೆ ಸ್ಮಶಾನದಲ್ಲಿಯೂ ತನ್ನನ್ನು ಎಲ್ಲರೂ ಗುರುತಿಸಬೇಕು, ತನಗೇ ಮಾನ್ಯತೆ, ಆದ್ಯತೆ ದೊರಕಬೇಕೆಂಬ ಚಪಲ ಕೆಲವರನ್ನು ಕಾಡುತ್ತಿರುತ್ತದೆ. ಇದಕ್ಕಾಗಿ ಇವರು ಸದಾ ಹಪಹಪಿಸುತ್ತಿರುತ್ತಾರೆ. ಆದರೆ ಇಂತಹಾ ಹಪಹಪಿಯಲ್ಲಿ ಆತ್ಮಸುಖದತ್ತ ಇವರ ಗಮನವಿಲ್ಲದಾಗುತ್ತದೆ. ಜೀವಿತದ ಉದ್ದೇಶವೇ ಮರೆಯಾಗಿ ಸಾಧ್ಯವಾಗಬಹುದಾದ ಸಾಧನೆಯೂ ಅಸಾಧ್ಯವಾಗಬಹುದು ಎಂದಿದ್ದಾರೆ ಡಿ ವಿ ಜಿ ಯವರು ತಮ್ಮ ರಚಿತ ಮಂಕುತಿಮ್ಮನ ಕಗ್ಗದಲ್ಲಿ. 

     ಇನ್ನು ಹೆಸರು, ಹೊಗಳಿಕೆ, ಬಿರುದು, ಪ್ರಶಸ್ತಿಗಳನ್ನು ಗಳಿಸಬೇಕೆಂಬ ಚಪಲ ಕೆಲವರದಾಗಿರುತ್ತದೆ. ಇವರನ್ನು ಕಂಡು “ ಹೆಸರು ಹೆಸರೆಂದು ನೀಂ ಬಸವಳಿಯುವುದೇಕಯ್ಯಾ \ಕಸದೊಳಗೆ ಕಸವಾಗಿ ಹೋಹನಲೆ ನೀನು ?\ ಮಂಕುತಿಮ್ಮ” ಹೆಸರು ಹೆಸರು ಎಂದು  ಏತಕ್ಕಾಗಿ ಮೈ ಮರೆತು (ಬಸವಳಿದು) ಕೊರಗುವೆ ? ಒಂದಲ್ಲ ಒಂದು ದಿನ ನೀನು ಜಗತ್ತಿನ ಕಸದೊಳಗೆ ಕಸವಾಗಿ ನಿನ್ ಇರುವಿಕೆಯ ಕುರುಹೇ ಇಲ್ಲದಂತೆ ಹೊರಟುಹೋಗುತ್ತಿಯೆ ಎಂದು  ಹೆಸರು ಹೊಗಳಿಕೆಗಾಗಿ ಬಾಯಿ ಬಿಟ್ಟು ಅಲೆದಾಡುವವರನ್ನು ಎಚ್ಚರಿಸಿದ್ದಾರೆ ಡಿ ವಿ ಜಿ ಯವರು.  

    ಹೆಸರು ಹೊಗಳಿಕೆ ಪ್ರಶಸ್ತಿಗಾಗಿ ಹೆಚ್ಚು ಕಿರಿಯರು ಅಲೆದಾಡುವುದನ್ನು  ಜನ ಕಂಡಿರುತ್ತಾರೆ, ಆದರೆ ಈ ಚಪಲ ಗೀಳು ಭ್ರಮೆಗೆ  ವಯಸ್ಸಾದವರು,  ಜೀವಾನುಭವ ಸಾಕಷ್ಟು ಕಂಡು ಉಂಡವರೂ ಒಳಗಾಗುತ್ತಾರೆ ಎಂದರೆ ಬಹಳಷ್ಟು ಜನ ನಂಬಲಾರರು. ಆದರೆ ಇಲ್ಲಿರುವ ಪ್ರಸಂಗ ಹಿರಿಯರೂ ಈ ಗೀಳಿನಿಂದ ಮುಕ್ತರಲ್ಲ ಎಂಬುದನ್ನು ಸಮರ್ಥಿಸಿದೆ :

    ಈಗ ನಾ ಹೇಳ ಹೊರಟಿರುವ ಪ್ರಸಂಗ ಸುಮಾರು ೬-೭ ದಶಕಗಳ ಹಿಂದಿನದು. ಅದು ಗ್ರಾಮೀಣ ಪ್ರದೇಶದ ಒಂದು ಜಂಟಿ ಕುಟುಂಬ. ಅಂದರೆ ಇದರಲ್ಲಿ  ಯಜಮಾನ, ಈತನ ಕುಟುಂಬ, ಯಜಮಾನನ  ಸೋದರರು, ಇವರ ಹೆಂಡAದಿರು  ಮಕ್ಕಳು , ಇಷ್ಟೇ ಸಾಲದು ಎಂಬಂತೆ ಪ್ರತಿ ದಿನವೂ ಕೆಲವು ಹತ್ತಿರದ ಬಂಧುಗಳು ಇವರ ಮನೆಯಲ್ಲಿ ಊಟಕ್ಕೆ ಸಿದ್ಧ ವಾಗಿರುತ್ತಿದ್ದರು. ಹೀಗಾಗಿ ಇಲ್ಲಿ ಒಂದು ಹೊತ್ತಿಗೆ ೨೦-೨೫- ಕ್ಕೆ ಕಡಿಮೆಯಿಲ್ಲದಷ್ಟು  ಎಲೆಗಳನ್ನು ಹಾಸಲಾಗುತ್ತಿತ್ತು. ಅಂದಿನ ಹಳ್ಳಿಯ ಮನೆಗಳು ಅಂದರೆ ಇಂದಿನ ನಗರದ  ೧೨’ * ೨೫’-೨೬’ ರ ಚದರಡಿ ವಿಸ್ತೀರ್ಣದ ನಿವೇಶನದಲ್ಲೇ ಸಣ್ಣ ಸಣ್ಣ ಹಾಲ್ ಅಡುಗೆ ಮನೆ ರೂಮು ಬಾತ್ ರೂಮು ಎಲ್ಲವೂ ಅಡಗುವಂತಿರಲಿಲ್ಲ. ಪಡಸಾಲೆ ಎಂದರೆ ಕನಿಷ್ಠ ೩೦ ಜನರಾದರೂ ಆರಾಮಾಗಿ ಕುಳಿತು ಊಟ ಮಾಡುವಷ್ಟು ದೊಡ್ಡದಾಗಿರುತ್ತಿತ್ತು,  ನಮ್ಮೀ ಯಜಮಾನರ ಮನೆಯೂ  ಇಷ್ಟೇ ದೊಡ್ಡದಿತ್ತು. ಎಲೆಗಳ ಮೇಲೆ ಅಂದು ಮಾಡಿದ ಅಡುಗೆ ಬಡಿಸಿದ ಮೇಲೇ  ಯಜಮಾನ ಉಳಿದವರನ್ನು ಎಲ್ಲಾ ಊಟ ಶುರುಮಾಡಿ ಎಂಬ ಕ್ಲಿಯರೆನ್ಸ್ ಕೊಟ್ಟ ಮೇಲೆ ತುತ್ತು ಬಾಯಿಗೆ ಹೋಗುವ ಪದ್ದತಿ ಅಂದಿನದು. ಇದಾದ ಕೆಲವೇ ನಿಮಿಷಗಳಲ್ಲಿ ಯಜಮಾನ ಮಾತು ಶುರುಮಾಡುತ್ತಿದ್ದ. “ಲೇ, ಕೃಷ್ಣ, ಹೇಗಿದೆಯೋ  ಹುಳಿ ? ಎಂದಾಗ, ಆ ಕೃಷ್ಣ, ಅಣ್ಣಾ , ದಿವ್ಯವಾಗಿದೆ, ಆಹಾ ! ಉಪ್ಪು ಕಾರ ಹುಳಿ ಎಲ್ಲಾ ಸರಿಯಾದ ಪ್ರಮಾಣದಲ್ಲಿದೆ, ತರಕಾರಿ ಚೆನ್ನಾಗಿ ಬೆಂದಿದೆ ಎಂದು ಹೊಗಳಿದಾಗ ಯಜಮಾನನಿಗೆ ತೃಪ್ತಿ, ಈಗ  ಅಡುಗೆಯ ವರ್ಣನೆಗೆ ಮತ್ತೊಬ್ಬನ ಸರದಿ. ಏ ಗೋವಿಂದ,  ಸಾರು ಹೇಗಿದೆಯೋ ? ಎಂಬ ಯಜಮಾನನ ಮಾತಿU,É  ಅಣ್ಣಾ, ಇಂತಹಾ ಸಾರು ನಾ ತಿಂದು ಎಷ್ಟು ಕಾಲವಾಗಿತ್ತೋ ! ಆಹಾ ! ಬೇರೇ ಪಾದಾರ್ಥ ತಿನ್ನೋದೇ ಬೇಡ. ಈ ಸಾರನ್ನೇ ೩ ಲೋಟ ಕುಡಿಯೋಣ ಅನ್ನಿಸ್ತಾಯಿದೆ. ಸೊಗಸಾಗಿದೆ ಅಣ್ಣಾ ಅಂದಾಗ ಯಜಮಾನರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು.  ಶಂಕರ, ನೀ ಏನೂ ಹೇಳಲೇಯಿಲ್ಲವಲ್ಲೋ  ? ಎಲೆಗೆ ಹಾಕಿರೋ ಗೊಜ್ಜು  ಚಟ್ನಿ ಬಗ್ಗೆ, ಥೂ, ..,..  ಮಕ್ಕಳಾ , ರುಚಿ ಗೊತ್ತಾಗೊಲ್ಲ, ಪಾಕ ಗೊತ್ತಾಗೊಲ್ಲ, ಎಮ್ಮೆ ಮೇಯ್ದ ಹಾಗೆ ಮೇಯ್ತಿದ್ದೀರಲ್ವೋ ! ಎಂಬ ಅಣ್ಣನ ಅಸಮಾಧಾನದ ಮಾತಿಗೆ,  ಶಂಕರ  ಎಚ್ಚೆತ್‌ಕೊಂಡು, ಅಣ್ಣಾ, ಗೊಜ್ಜು  ಚಟ್ನಿ ರುಚಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇನ್ನೊಂದ್ ದಿನ ಬರೀ ಗೊಜ್ಜು ಚಟ್ನೀಲೇ ಊಟ ಮುಗಿಸಬೇಕಣ್ಣ ಅಷ್ಟು  ಪಸಂದಾಗಿದೆಯಣ್ಣ ಎಂದು ಅಣ್ಣನ ಅವಕೃಪೆಗೆ ಪಾತ್ರನಾಗೋದನ್ನ ತಪ್ಪಿಸಿಕೊಂಡಿದ್ದ ಶಂಕರ,  ಯಾಕೆ ಆ ಯಜಮಾನ ಹೀಗೆ  ! ಎಂದರೆ ತನ್ನ  ಪತ್ನಿಯ ಕೈ ಪಾಕ ಎಲ್ಲರೂ ಹೊಗಳಿದ್ದನ್ನ ತಾ ಕೇಳಿ ಆನಂದಿಸಬೇಕು, ಜೊತೆಗೆ ಹೇಗೆ ನನ್ನ ಯಜಮಾನತ್ವ ? ಹೀಗಿರಬೇಡವೇ ಮನೆ ಯಜಮಾನ ಅಂದ್ರೆ !  ಹೀಗಿರದೆ, ತಲೆ ಬಗ್ಗಿಸಿ ಎತ್ತಿನ ತರಹಾ ಬುಸುಗುಡುತ್ತಾ ಮೇಯುವುದು ಊಟ ಅನ್ನಿಸಿಕೊಳ್ಳುತ್ತಾ ? ಎಂಬುದು ಆ ಯಜಮಾನನ ಅನಿಸಿಕೆ. ಹೀಗಿತ್ತು, ಎಲ್ಲರಿಂದಲೂ ಹೊಗಳಿಸಿಕೊಳ್ಳಬೇಕೆಂಬ ಚಪಲ, ಬಾಯಿ ಚಪಲ ಆ ಯಜಮಾನನದು.  ಯಜಮಾನನ ಈ ಮನಸ್ಥಿತಿ ಮೊದಲೇ ಅರಿತಿದ್ದವರು ತುತ್ತು ಬಾಯಿಗೆ ಇಡುತ್ತಿದ್ದ ಹಾಗೇ ಅಡುಗೆ ವರ್ಣನೆ ಶುರು ಮಾಡಿದರೆ ಆತನಿಗೆ ಯಜಮಾನನಿಂದ ಶಹಬಾಸ್‌ಗಿರಿ ಸಿಗ್ತಿತ್ತು. 

   ಎಲ್ಲರಿಂದಲೂ ಹೊಗಳಿಕೆ, ಸ್ತುತಿ ಕೇಳಬೇಕೆಂಬ ಹಪಹಪಿ, ಚಪಲ ಎಲ್ಲರಿಗೂ ಸಹಜವಾಗಿ ಇರಬಹುದಾದರೂ ಈ ಚಪಲತೆ ಅತಿಯಾದಾಗ ಹೇಳುವವರಿಗೆ, ಕೇಳುವವರಿಗೆ, ಎಲ್ಲರಿಗೂ ಅಸಹ್ಯ ಎನಿಸುತ್ತದೆ, ಹೇಳಲಾಗದ ಹಿಂಸೆಯೂ ಆಗುತ್ತದೆ. ಆದ್ದರಿಂದಲೇ ‘ಅತಿ ಸರ್ವತ್ರ ವರ್ಜಯೇತ್’ ಎಂದಿದ್ದಾರೆ ಹಿರಿಯರು. ಅತಿಯಾದಾಗ ಅಮೃತವೂ ಅಸಹ್ಯ, ವಿಷ ಎನಿಸುತ್ತದೆ. ಇದುವರೆಗಿನ ಈ ಚರ್ಚೆಯ ಹಿನ್ನೆಲೆಯಲ್ಲಿ, ಸಮೂಹ, ಸಮಾಜದಲ್ಲಿ ನಾವು ಹೇಗಿರಬೇಕು ? .. . .  ಉತ್ತರ ಈಗಾಗಲೇ ಓದುಗರಿಗೆ ತಿಳಿದಿರುವುದರಿಂದ ನಾ ಹೇಳುವುದು ಅನಗತ್ಯ.      

    

Comments