ಆಸರೆ ಮನೆ - ಭಾಗ 14

 ಆಸರೆ ಮನೆ - ಭಾಗ 14

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ 



ನಿಂಗಮ್ಮನಿಗೂ ಒಂದು ಕಥೆ

ನಿಂಗಮ್ಮನಿಗೆ ಕಥೆಯಿಲ್ಲ. ಹಿಂದೊಂದು ವ್ಯಥೆ ಇದೆ. ದಾರುಣ ಬಾಳಿನ ದುರಂತವಿದೆ. ಮನುಷ್ಯರ ಪೈಶಾಚಿಕ ವರ್ತನೆಯ ರುದ್ರನರ್ತನವಿದೆ. ಕರುಣೆಯಿಲ್ಲದ ಜನರ ಅಟ್ಟಹಾಸವಿದೆ. 

ನಿಂಗಮ್ಮ ತಾನಾಗಿ ಆಸರೆ ಮನೆಗೆ ಬಂದವಳಲ್ಲ. ಯಾರೂ ಬಲವಂತವಾಗಿ ತಂದು ಬಿಟ್ಟವರಿಲ್ಲ. ದೇವರ ದಯೆಯಿಂದ ಒಳ್ಳೆಯ ಜನರ ಕರುಣೆಯಿಂದ ಆಸರೆಮನೆಯ ಆಶ್ರಯ ಪಡೆದವಳು ನಿಂಗಮ್ಮ. 

***********

ನಿಂಗಮ್ಮನ ಕಥೆ ಭಾರತದ ಬಹುತೇಕ ಹೆಣ್ಣು ಮಕ್ಕಳಕಥೆಯೇ ಹೌದು. 

ನಿಂಗಮ್ಮ ಹುಟ್ಟಿದ್ದು ಒಂದು ಸ್ಲಮ್ ಜೀವನದ ವಾತಾವರಣವಿರುವ ಬಡ ಗುಡಿಸಲಿನಲ್ಲಿ. ನಿಂಗಮ್ಮ ಎಂದವರ್ಯಾರು ಅಲ್ಲಿಲ್ಲ. ಏ ನಿಂಗಿ ಅವಳ ನಾಮಧೇಯ. ಕುಡುಕ ಅಪ್ಪ ತಂದು ಹಾಕಿದ್ದರಲ್ಲಿ ಮನೆ ನಡೆಸುವ  ಒಪ್ಪತ್ತಿನ ಗಂಜಿ ಕಾಣಿಸುವ ರೋಗಿ ತಾಯಿ. ಮೂರು ವರ್ಷ ತುಂಬಿದ ನಿಂಗಿ ನಲ್ಲಿಯ ಬಳಿ ಕಾದು  ನಿಂತು ದೊಡ್ಡವರೆಲ್ಲ ಹಿಡಿದಾದ ಮೇಲೆ ನೀರು ಬರುತ್ತಿದ್ದರೆ ತನ್ನ ತಗ್ಗು ನುಗ್ಗಾದ ಸಿಲ್ವರ್ ಬೋಸಿಯಲ್ಲಿ ನೀರು ತುಂಬಿಸಿ ತಂದು ಅಮ್ಮನಿಗೆ ಕೊಡುವಳು. ಇದ್ದ ದಿನ ಅಕ್ಕಿಯ ಗಂಜಿ, ಇಲ್ಲದ ದಿನ ರಾಗಿಯ ಗಂಜಿ. ಏನೂ ಇಲ್ಲದ ದಿನ ಸಿಕ್ಕಿದಷ್ಟು ನೀರು ಹೊಟ್ಟೆಯ ಗತಿ ಕಾಣಿಸುತ್ತಿತ್ತು. ದೇವಸ್ಥಾನದಲ್ಲಿ ಪ್ರಸಾದ ಕೊಡುವ ಹೊತ್ತಿಗೆ ಹೋಗಿ ಚಿಕ್ಕ ನಿಂಗಿ ತನ್ನ ಕೈಲಾದಷ್ಟು ಪ್ರಸಾದ ತಂದು ತಾಯಿಗೆ ಕೊಟ್ಟು ತನಗೂ ನಾಲಿಗೆಯ ರುಚಿ ಹತ್ತಿಸುತ್ತಿದ್ದಳು. ಆಯಸ್ಸು ಇರುವವರೆಗೂ ಸಾವು ಬರುವುದಿಲ್ಲವಲ್ಲ. ಹೊಟ್ಟೆಗಿರಲಿ, ಬಟ್ಟೆಗಿರಲಿ, ಇಲ್ಲದಿರಲಿ ಬದುಕು ಸಾಗಿಯೇ ಸಾಗುತ್ತದೆ. ಹಾಗೇ ದಿನ ಉರುಳುತ್ತಿತ್ತು. ಔಷಧಿ ಪಥ್ಯ ಇರಲಿ ಹೊಟ್ಟೆ ತುಂಬಾ ಗಂಜಿಯೂ ಇಲ್ಲದೆ ನರಳಿ ನರಳಿ ನಿಂಗಿಯ ಅಮ್ಮ ಶಿವನ ಪಾದ ಸೇರಿದಳು. ಕುಡುಕ ಅಪ್ಪ ಮನೆಗೆ ಬಂದು ನೋಡಿದಾಗ ಸತ್ತ ಹೆಂಡತಿಯ ಶವ, ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತ ಕುಳಿತಿದ್ದ ಮಗಳು ನಿಂಗಿ. 

ಆ ಸನ್ನಿವೇಶವನ್ನೇ ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಂಡ ನಿಂಗಿಯ ಅಪ್ಪ ಹೆಂಡತಿಯ ಶವ ಸಂಸ್ಕಾರ ಮಾಡಬೇಕಾಗಿದೆಯೆಂದು ಕಣ್ಣೀರು ಹಾಕುತ್ತ ದೈನ್ಯದಿಂದ ಕಂಡಕಂಡವರ ಮುಂದೆ ಕೈಚಾಚಿ ಅಗತ್ಯಕ್ಕೆ ಮೀರಿದ ಹಣ ಸಂಗ್ರಹಿಸಿದ. ಹಾಗೂ ಹೀಗೂ ಒಂದಿಬ್ಬರು ಕುಡುಕ ಗೆಳೆಯರನ್ನು ಸಹಾಯಕ್ಕೆ ಕರೆತಂದು ಹೆಂಡತಿಯ ಶವವನ್ನು ಸ್ಮಶಾನಕ್ಕೆ ಸಾಗಿಸಿ ಅದಕ್ಕೊಂದು ಗತಿ ಕಾಣಿಸಿದ. ಕೈತುಂಬಾ ಹಣ ಇತ್ತಲ್ಲ. ಮೂವರು ಗೆಳೆಯರು ಸೇರಿ ಕುಡಿತದ ಮೋಜುವಾನಿ ಮಾಡಿದರು. ಹೆಂಡತಿ ಬದುಕಿರುವವರೆಗೆ ಅವಳು ದುಡಿದ ಹಣದಿಂದ ಕುಡಿತ. ಅವಳು ಸತ್ತ ನಂತರ ಅವಳ ಶವ ಮುಂದಿಟ್ಟುಕೊಂಡು ಸಂಪಾದಿಸಿದ ಹಣದಿಂದ ಕುಡಿತ. 

ಒಟ್ಟಿನಲ್ಲಿ ಆನೆ ಇದ್ದರೂ ಲಕ್ಷ. ಹೋದರು ಲಕ್ಷ ಎನ್ನುವಂತೆ. ಉಪವಾಸ, ವನವಾಸ, ಅರೆಹೊಟ್ಟೆ ಬರಿಹೊಟ್ಟೆಗಳಲಿ ನಿಂಗಿ ಬೆಳೆದು ಬದುಕಿದಳು. ನಿಂಗಿಯ ಅಪ್ಪ ಮತ್ತೊಂದು ಮದುವೆಯ ಸನ್ನಾಹ ನಡೆಸಿದ. ನಿಂಗಿಯ ತಾಯಿಯ ಒಂದೇ ಒಂದು ಒಡವೆಯಾಗಿದ್ದ ಅರೆಕಾಸಿನಂತಿದ್ದ ತಾಳಿ ಮಾರಿ ಪಕ್ಕದೂರಿನ ಇನ್ನೊಬ್ಬ ಕುಡುಕನ ಮಗಳು ಮಲ್ಲಿ ವಯಸ್ಸು ಮೀರಿ ಮದುವೆ ಇಲ್ಲದೆ ನಿಂತಿದ್ದವಳನ್ನು ತಾನೇ ತಾಳಿಕಟ್ಟಿ ಕರೆತಂದ ಮನೆಗೆ. ಅರೆಹೊಟ್ಟೆಯವನ ಮನೆಗೊಬ್ಬ ಬರಿಹೊಟ್ಟೆಯವನು ಬಂದಂತೆ ಮಲ್ಲಿ ನಿಂಗಿಯ ಮಲತಾಯಿಯಾಗಿ ಬಂದಳು. ಅಪ್ಪನ ಮನೆಯಲ್ಲಿಲ್ಲದ ಸುಖವನ್ನು ಇಲ್ಲಿ ಬಯಸಿ ಬಂದವಳಿಗೆ ಸಿಕ್ಕಿದ್ದು ಖಾಲಿ ಸಿಲ್ವರ್ ತಗ್ಗುನುಗ್ಗಿನ ಪಾತ್ರೆಗಳು. ತಣ್ಣಗೆ ಬೂದಿ ಕಾಣದ ಒಲೆ. ಹಸಿವಿನ ಸಂಕಟ. ಬಡತನದ ನೋವು ಮಲ್ಲಿಯನ್ನು ರೊಚ್ಚಿಗೆಬ್ಬಿಸಿತು. ಅದರ ಪರಿಣಾಮ ಎದುರಿಸುತ್ತಿದ್ದವಳು ಬಡ ನಿಂಗಿ. ಮಲ್ಲಿ ಮಿಜವಾಗಲೂ ಮಲತಾಯಿ ಎಂದರೆ ಮಲತಾಯಿಯೇ. ಮನಸ್ಸಿನಿಂದ ಕಟುಕಿ. ಯಾವಾಗಲೂ ನಿಂಗಿಗೆ ಹೊಡೆತ ಬಡಿತ. ಅವಳು ಯಾವ ಕೆಲಸ ಮಾಡಿದರೂ ತಪ್ಪು. ಹೊಲಗದ್ದೆಗಳಲ್ಲಿ ಹೋಗಿ ಕೆಲಸ ಮಾಡಿ ಬಂದ ನಾಲ್ಕು ಕಾಸು ಚಿಕ್ಕಮ್ಮನ ಕೈಮೇಲೆ ಹಾಕಿದರೆ ಆಯಿತು. ಅವಳು ಮನಸ್ಸು ಮಾಡಿ ಒಂದಿಷ್ಟು ಗಂಜಿ ಕೊಟ್ಟರೆ ಅದೇ ಅವಳ ಪಾಲಿಗೆ ಮೃಷ್ಟಾನ್ನ. ಮನೆಕೆಲಸ ಎಲ್ಲ ಮಾಡಿ ಚಿಕ್ಕಮ್ಮನ ಬೈಗುಳ ಹೊಡೆತವನ್ನೇ ಹೊಟ್ಟೆ ತುಂಬ ತಿಂದು ಕೂಲಿಗೆ ಹೋಗುತ್ತಿದ್ದಳು ನಿಂಗಿ. ತಂದೆ ಎನ್ನುವ ಪ್ರಾಣಿ ಮಗಳು ಇದ್ದಾಳೆ ಎನ್ನುವುದನ್ನು ಮರೆತಿದ್ದ. ಖಾಲಿ ಗುಡಿಸಲಿನಲ್ಲಿ ಮಲ್ಲಿಯದೇ ದರ್ಬಾರು. 

ಯೌವ್ವನಕ್ಕೆ ಕಾಲಿಡುತ್ತಿದ್ದ ನಿಂಗಿಗೆ ಮೈಮುಚ್ಚಲು ಹಳೆಯ ಹರಿದಿಲ್ಲದಿರುವ ಬಟ್ಟೆ ಇಲ್ಲ. ಬಡತನದಲ್ಲೂ ಉಪವಾಸದಲ್ಲೂ ಕಣ್ಸೆಳೆಯುವಂತೆ ಬೆಳೆದಳು. ಅದೇ ಅವಳ ಗ್ರಹಚಾರ ದೌರ್ಭಾಗ್ಯ. ಊರವರ ಪುಂಡ ಹುಡುಗರ ಕಣ್ಣೆಲ್ಲ ನಿಂಗಿಯ ಮೇಲೆ. ಹೆದರಿ ಹೆದರಿ ಹೊರಗೆ ಹೋಗುತ್ತಿದ್ದ ನಿಂಗಿ ಮನೆಗೆ ಬಂದರೆ ಸಾಕು ಎಂದು ಹೆದರಿದ ಗುಬ್ಬಿಯಂತೆ ಕೂಲಿ ಮಾಡಿ ಗುಡಿಸಲಿಗೆ ಓಡಿ ಬರುತ್ತಿದ್ದಳು. ಅಲ್ಲಿ ನೆಮ್ಮದಿ ಇಲ್ಲದಿದ್ದರೂ  ಯಾರ ಕಾಮುಕ ಕಣ್ಣು ತನ್ನ ಮೇಲಿರುವುದಿಲ್ಲ ಎಂಬ ಧೈರ್ಯ ಅಷ್ಟೆ. 

ಮಲ್ಲಿ ಎಷ್ಟೆ ಕೆಟ್ಟವಳಾದರು ಬೆಳೆದ ನಿಂಗಿಯ ದೇಹ ಮುಚ್ಚಿಕೊಳ್ಳಲು ತನ್ನದೇ ಎರಡು ಹರಕು ಸೀರೆ ತುಂಡನ್ನು ನಿಂಗಿಗೆ ಉದಾರವಾಗಿ ಕೊಟ್ಟಿದ್ದಳು. ಅರ್ಧ ತಟ್ಟೆ ಗಂಜಿ, ಮಲಗಲು ಒಂದು ಮುರುಕು ಸೂರು ನಿಂಗಿಗೆ ತೌರಿನ ಸೌಭಾಗ್ಯ. 

************

ಹಳ್ಳಿಯಲ್ಲಿದ್ದ ಮಲ್ಲಿಯ ಅಪ್ಪ ಸತ್ತ ಸುದ್ದಿ ಬೆಳಗಾಗುವ ಹೊತ್ತಿಗೆ ಬಂದಿತು. ಮಲ್ಲಿ ಲಬೋ ಲಬೋ ಬಾಯಿ ಬಡಿದುಕೊಂಡು ಹಳ್ಳಿಗೆ ಹೊರಡುವ ತಯಾರಿ ನಡೆಸಿದಳು. ನಿಂಗಿಗೆ ಸಾಕಷ್ಟು ಎಚ್ಚರಿಕೆ ಹೇಳಿ ತಾನು ಎರಡು ದಿನಕ್ಕೆ ವಾಪಸ್ಸು ಬರುವುದಾಗಿ ಹೇಳಿ ಮನೆಯಲ್ಲಿಲ್ಲದ ಗಂಡನಿಗೆ ಸುದ್ದಿ ತಿಳಿಸಲು ಹೇಳಿ ಹೊರಟುಬಿಟ್ಟಳು. 

ಸಂಜೆಗತ್ತಲು ತುಂಬಿದಾಗ ನಿಂಗಿಯ ಅಪ್ಪ ಕುಡಿದು ತೂರಾಡುತ್ತ ಮನೆಗೆ ಬಂದಾಗ ದೀಪ ಹಚ್ಚಲು ಎಣ್ಣೆಯೂ ಇಲ್ಲದೆ ಕತ್ತಲಿನಲ್ಲಿ ನಿಂಗಿ ಮೂಲೆಯಲ್ಲಿ ಮುದುರಿ ಮಲಗಿದ್ದಳು. 

ಕುಡುಕನಿಗೆ ಅಮಲೇರಿದ ಮತ್ತು ಇಹದ ಪ್ರಜ್ಞೆ ಇಲ್ಲವೇ ಇಲ್ಲ, ಇದ್ದರೂ ಅರೆಬರೆ. ದೈಹಿಕ ತೃಷೆ ತೀರಿಸಿಕೊಳ್ಳುವ ಬಯಕೆ. ಮೂಲೆಯಲ್ಲಿದ್ದ ಹೆಂಗಸು ಮಗಳೋ, ಹೆಂಡತಿಯೋ ಅವನಿಗೇನು ಗೊತ್ತು. ತನ್ನ ಕೆಲಸ ಮುಗಿಸಿ ಮೇಲೆದ್ದ. ನಿಂಗಿಯ ಒದ್ದಾಟ ಗುದ್ದಾಟಗಳೊಂದು ಅವನ ರಾಕ್ಷಸ ಶಕ್ತಿಯ ಮುಂದೆ ನಿಲ್ಲಲಿಲ್ಲ. ನಿಂಗಿ ತನ್ನ ಹಾಳು ಅದೃಷ್ಟಕ್ಕೆ ದೇವರನ್ನು ನಿಂದಿಸಿದಳು. ಸತ್ತ ತಾಯಿಯನ್ನು ನೆನೆಸಿಕೊಂಡು ಗೋಳಾಡಿದಳು. ಎಲ್ಲ ಅಪಲಾಪ ಪ್ರಲಾಪ. ಬೆಳಗಾಯಿತು. ಲೋಕಕ್ಕೆ ನಿಂಗಿಯ ಅಪ್ಪನೆಂಬ ರಾಕ್ಷಸ ಇನ್ನೂ ಮೈಮರೆತು ಮಲಗಿದ್ದ. ನಿಂಗಿ ಯಾರಿಗೂ ಹೇಳದೆ ಚಿಕ್ಕಮ್ಮನದೊಂದು ಗಟ್ಟಿಯಾದ ಸೀರೆಯನ್ನು ಉಟ್ಟು ಮೈ ಮುಚ್ಚಿಕೊಂಡಳು. ಗುಡಿಸಿಲಿನಿಂದ ಹೊರಬಂದಳು. ಯಾರಿಗೂ  ಸಿಗದಂತೆ ನಡೆದು ಬಿಟ್ಟಳು. 

**************

ಇದು ನಿಂಗಿ ಬೀದಿ ಪಾಲಾದ ಕಥೆ. ಅಲ್ಲಿ ಇಲ್ಲಿ ಅಲೆದು ಭಿಕ್ಷೆ ಸಿಕ್ಕಿದಾಗ ಹೊಟ್ಟೆ ತುಂಬಿಸಿಕೊಂಡು ಇಲ್ಲದಿದ್ದಾಗ ನೀರು ಕುಡಿದು ಯಾವುದಾದರೂ ಪಾಳು ಜಗಲಿ, ಮಂಟಪದಲ್ಲಿ ಯಾವ ಕಾಮುಕರ ಕಣ್ಣಿಗೆ ಕಾಣುತ್ತೇನೊ ಎಂದು ಹೆದರಿ ಮಲಗುತ್ತಿದ್ದಳು. 

ಹೀಗೆ ಸುತ್ತಿ ಬಳಲಿ ಒಮ್ಮೆ ಅಕಸ್ಮಾತ್ ವಿಜಯನ ಅಣ್ಣ ಸುಬ್ಬಣ್ಣನವರು ಕೆಲಸ ಮಾಡಿಸುತ್ತಿದ್ದ ಕಟ್ಟಡದ ಹತ್ತಿರ ಬಂದು ಕೆಲಸ ಬೇಡಿ ನಿಂತಳು. ಅಲ್ಲಿ ಏನೂ ಕೆಲಸ ಇಲ್ಲವೆಂದು ಮೇಸ್ತ್ರಿ ಅವಳನ್ನು ಗದರಿಸಿ ಕಳುಹಿಸುತ್ತಿದ್ದ. ಅದೇ ವೇಳೆಗೆ ಅಲ್ಲಿಗೆ ಬಂದ ಸುಬ್ಬಣ್ಣ ''ಯಾಕಯ್ಯ ಏನಾದರೂ ಕೆಲಸ ಇದ್ದರೆ ಕೊಡು. ಪಾಪ ಹೆಂಗಸು ಹೊಟ್ಟೆಪಾಡು ಎಂದರು. ಯಜಮಾನರ ಮಾತಿಗೆ ಪ್ರತಿ ಹೇಳದೆ ಮೇಸ್ತ್ರಿ ಕೆಲಸವೇನೋ ಕೊಟ್ಟ. ಆದರೆ ಅಲ್ಲಿ ಕೆಲಸ ಮಾಡುವಷ್ಟು ಶಕ್ತಿ ಇಲ್ಲದೆ ಕುಸಿದು ಬಿದ್ದ ನಿಂಗಿಗೆ ಅಲ್ಲಿದ್ದ ಆಳುಗಳೇ ನೀರು ಚುಮುಕಿಸಿ ಎಚ್ಚರಗೊಳಿಸಿ ತಮ್ಮ ಪಾಲಿನಲ್ಲಿದ್ದ ಹಿಟ್ಟನ್ನೇ ಅವಳಿಗೆ ಕೊಟ್ಟು ಸಂತೈಸಿದರು. ಎಲ್ಲವನ್ನು ನೋಡುತ್ತಿದ್ದ ಸುಬ್ಬಣ್ಣನವರು ನಿಧಾನವಾಗಿ ನಿಂಗಿಯನ್ನು ಹತ್ತಿರ ಕರೆದು ಅವಳ ಹಿನ್ನೆಲೆಯನ್ನು ವಿಚಾರಿಸಿದರು. ನಿಂಗಿ ತನ್ನ ಗೋಳಿನ ಕಥೆಯನ್ನು ಅಳುತ್ತಳುತ್ತ ಯಜಮಾನರ ಮುಂದೆ ಹೇಳಿದಳು. ಆ ವೇಳೆಗೆ ಮೂರ್ತಿ-ವಿಜಯ ಸಿಂಧ್ರಿಯಿಂದ ಬರುವವರಿದ್ದರಿಂದ ಸುಬ್ಬಣ್ಣ ನಿಂಗಿಯನ್ನು ಆ ಮನೆಗೆ ಕರೆತಂದುಬಿಟ್ಟ. ಅದು ನಿಂಗಿಯ ಜೀವನಕ್ಕೊಂದು ತಿರುವು ತಂದ  ಘಟನೆಯಾಯಿತು.  

ಆವ ಋಣಕೋಸುಗವೋ, ಆರ ಹಿತಕೋಸುಗವೋ ।

ಆವಾವ ಕಾರಣಕೊ, ಯಾವ ಯೋಜನೆಗೋ|| 

ನೋವ ನೀಮ್ ಪಡುವುದೇ ದೈವೇಚ್ಛೆಯಾಗಿರದೆ?।

ದೈವ ಕುರುಡೆನ್ನದಿರು ಮಂಕುತಿಮ್ಮ|| 

ಅಲ್ಲಿಂದ ಮುಂದೆ ನಿಂಗಿ ಏ ನಿಂಗಿಯಾಗದೆ ನಿಂಗಮ್ಮ ಆದಳು. ಇರಲೊಂದು ವಿಶ್ವಾಸದ ಗೂಡು, ಮೈಮುಚ್ಚಲು ಹರಕಿಲ್ಲದ, ಬಣ್ಣಗೆಡದ ಸೀರೆಗಳು, ಪ್ರೀತಿಸುವ ಜನ ಮರ್ಯಾದೆಗೊಂದು ಹೆಸರು ಹೀಗೆ ಏ ನಿಂಗಿ ನಿಂಗಮ್ಮನಾದಳು.

ವಿಜಯ-ಮೂರ್ತಿಯವರೊಡನೆ ಆಸರೆಮನೆಗೂ ಬಂದು ಅಲ್ಲಿ ಎಲ್ಲರ ಪ್ರೀತಿಯ ನಿಂಗಮ್ಮ ಆದಳು. ಆಸರೆಮನೆಯಲ್ಲಿ ಎಲ್ಲರಿಗೂ ಸಮಾನ ಪ್ರೀತಿ. ಸಮಾನ ಸ್ಥಾನಮಾನ, ಸನ್ಮಾನ. ಯಾರು ದೊಡ್ಡವರಲ್ಲ, ಯಾರು ಚಿಕ್ಕವರಲ್ಲ. ಸ್ವಾಮಿ ಆತ್ಮವಿದಾನಂದಜೀಯಷ್ಟೇ ಗೌರವ ನಿಂಗಮ್ಮನಿಗೂ ಆಸರೆ ಮನೆಯಲ್ಲಿ. ಎಲ್ಲರಿಗೂ ಕೈಗೆ ಬಂದ ಕೆಲಸ. ಹೊಟ್ಟೆ ತುಂಬಾ ಊಟ. ಸ್ನೇಹದ ಮಾತು. ಕಲ್ಯಾಣಿಯಿಂದ ನಿಂಗಮ್ಮನವರೆಗೂ ಎಲ್ಲರೂ ಸಮಾನರು. 

ಇದು ನಿಂಗಮ್ಮನ ಕಥೆ-ವ್ಯಥೆ ಮರೆತ ಕಥೆ. 


Comments