ಡಮರುಗ ಪುರಾಣವು

 ಡಮರುಗ ಪುರಾಣವು

ಹಾಸ್ಯ ಲೇಖನ - ಅಣಕು ರಾಮನಾಥ್ 




ದತ್ತ ಕುಲಕರ್ಣಿಯವರನ್ನು ನಾನು ಇಂದಿನವರೆಗೆ ಕಂಡಿಲ್ಲವಾದರೂ ಅವರು ಒಬ್ಬ sound party ಎನ್ನುವುದು ಅವರ ಆಯ್ಕೆಯಿಂದಲೇ ತಿಳಿಯಿತು. ಅವರು ಕೊಟ್ಟಿರುವ ಪದ – ಡಮರುಗ. ಈ ವಿಷಯದ ಆಯ್ಕೆಯೇ ವೈರುದ್ಧ್ಯಗೇಹ – ಅಕ್ಷರಗಳು ಸದ್ದು ಮಾಡುವುದಿಲ್ಲ, ಸದ್ದಿಲ್ಲದೆ ಡಮರುಗವಿಲ್ಲ. ಇರಲಿ. ಅಷ್ಟಾಗಿಯೂ ಅದರ ಬಗ್ಗೆ ಒಂದು sound article ಬರೆದರೆ resounding ಪ್ರತಿಕ್ರಿಯೆಗಳು ಬರುವುದಂತೂ ನಿಶ್ಚಿತ. 

ಡಮರು, ಡಮರುಗ, ಢಮರುಗ ಎಂದೆಲ್ಲ ಕರೆಸಿಕೊಳ್ಳುವ ಈ ಚರ್ಮವಾದ್ಯವನ್ನು ಕಂಡಾಗಲೆಲ್ಲ ನನಗೆ ಕಾಡಿನಲ್ಲಿ ಕಂಡುಬರುವ ಕ್ರಿಕ್‍ಕ್ರೀಕ್‍ಕ್ರಿಕ್‍ಕ್ರಿಕ್ರಿಕ್ರಿಕ್ರಿಕ್ರೀ ಎಂದು ಸದ್ದು ಹೊರಡಿಸುವ ಜೀರುಂಡೆಯ ಜಾತಿಯ ಕೀಟವೊಂದರ ನೆನಪಾಗುತ್ತದೆ. ಆ ಕೀಟದ ಅಳತೆ ಸವಜಾತಶಿಶುವಿನ ಕಿರುಬೆಟ್ಟಿನಷ್ಷೇ. ಆದರೆ ಅದು ಹೊರಡಿಸುವ ಸದ್ದು ಕಡಿಮೆಯೆಂದರೆ ಎರಡು ಹರದಾರಿಗೆ ಕೇಳಿಸೀತು. ಡಮರುಗವೂ ಅಂತೆಯೇ – ಹಿಡಿದರೆ ಕೈಯಳವು; ಸದ್ದು ಹೊರಟರೆ ಸ್ಥಬ್ಧವಾತಾವರಣದಲ್ಲಿ ಮೈಲಿದೂರಕ್ಕೆ ಸಾಗೀತು. Figure ಚಿಕ್ಕದಾದರೂ vigour ದೊಡ್ಡದು! 

Good things come in small packages ಎಂಬ ಮಾತೊಂದಿದೆ. ಢಮರುಗ is a good thingಉ ಎನ್ನುವುದಕ್ಕೆ ಅದು ಪಡೆದಿರುವ ಸ್ಥಾನವೇ ಸಾಕ್ಷಿ. ತ್ರಿಮೂರ್ತಿಗಳ ಒಟ್ಟಾರೆ ಹನ್ನೆರಡು ಕೈಗಳಲ್ಲಿ ಕಂಡುಬರುವ ಬಾರಿಸಬಲ್ಲ ಏಕೈಕ ವಾದ್ಯವೆಂದರೆ ಡಮರುಗವೇ. ವಿಷ್ಣುವಿನ ಕೈಯಲ್ಲಿ ಶಂಖವಿದ್ದರೂ ಅದು ಊದುವುದಕ್ಕಷ್ಟೇ ಸೀಮಿತ.  ಸರ್ಗಮ್ ಎಂಬ ಹಿಂದಿ ಚಿತ್ರವೊಂದು ಬಂದಿತ್ತು. ರಿಶಿಕಪೂರ್-ಜಯಪ್ರದಾ ಜೋಡಿಯ ಚಿತ್ರದಲ್ಲಿ ‘ಡಫಲೀವಾಲೇ... ಡಫಲಿ ಬಜಾ... ಮೇರೆ ಗುಂಗುರೂ ಬುಲಾತೇ ಹೈ...’ ಎಂಬ ಸೊಗಸಾದ ಹಾಡಿದೆ. ಹಿಂದೊಮ್ಮೆ ಶಿವನು ವೀರವೇಶದಿಂದ ರಭಸನಾಟ್ಯದಲ್ಲಿ ತೊಡಗಿದ್ದುದನ್ನು ಶಿವೆಯು ಕಂಡಿದ್ದಿದ್ದರೆ ಅವನ ಕೋಪಶಮನಕ್ಕಾಗಿ ‘ಢಮರೂವಾಲೇ ಢಮರು ಬಜಾ’ ಎಂದು ಹಾಡಿರುತ್ತಿದ್ದಳೇನೋ. ಇದರಿಂದ ಶಿವನಿಗೆ ಡೈವರ್ಷನ್, ಶಿವೆಗೆ ಡಮರುವಿನ ಸದ್ದಿನ ನಡುವೆಯೂ ನೆಮ್ಮದಿ ಸಿಗುತ್ತಿತ್ತು. ಹಾಗೆಂದಮಾತ್ರಕ್ಕೆ ಯಾವುದನ್ನೇ ಆದರೂ ವಿಜೃಂಭಣೆಯಿಂದ ಮಾಡುವ ಅಭ್ಯಾಸವಿದ್ದ ಶಿವ ನಲ್ಲೆ ಕೇಳಿದಳೆಂದು ತುಂಬುಉತ್ಸಾಹದಿಂದ ಢಮರುಗವನ್ನು ಆಡಿಸಿದ್ದಿದ್ದರೆ ಹಿಮವತ್ಪರ್ವತದ ಎಷ್ಟು ಹಿಮಗಡ್ಡೆಗಳು ಕಂಪನಕ್ಕೊಳಗಾಗಿ ಸ್ಕೇಟ್ ಮಾಡಿ ತಪ್ಪಲು ಸೇರುತ್ತಿದ್ದವೋ, ಎಷ್ಟು ಸ್ನೋಸ್ಲೈಡ್‍ಗಳು ಆಗುತ್ತಿದ್ದವೋ! 

ಎರಡು ಪಕ್ಕಗಳಲಿ ಚರ್ಮ

ನಡುವೆ ರಜ್ಜುಗ್ರಹಣಮರ್ಮ

ಕಡೆಯಲಿರುವ ಮಣಿಗಳಿಂದ

ಭಢಭಢಗಳ ರವವಸೀಮ 

ಎಂದು ವರ್ಣಿಸಬಹುದಾದ ಢಮರುಗದ ಪ್ರತಿ ಅಂಗವೂ ಒಂದೊಂದು ವಿಷಯವನ್ನು ಪ್ರತಿಪಾದಿಸುತ್ತದೆ. ಅತ್ತಣಿತ್ತಣ ಚರ್ಮಗಳನ್ನು ಗಮನಿಸಿ. ಊಹೂಂ. ಹುಡುಕಿದರೂ ಎಲ್ಲಿಯೂ ಸುಕ್ಕಿಲ್ಲ. ಸುಕ್ಕು ಇಲ್ಲದಿರುವಿಕೆಗೂ, ಸದ್ದು ಹೊರಡುವಿಕೆಗೂ ಸಂಬಂಧ ಸುಸ್ಪಷ್ಟ – ಸುಕ್ಕಿಲ್ಲದ ಕಾಲವೆಂದರೆ ಟೀನೇಜು. ಆಗಲೇ ಢಕ್ಕಢಕ್ಕಾ ಢಮ್ಮಢಮ್ಮ ಢಭ್ಭಢಭಾ ಸದ್ದನ್ನು ಹೊರಡಿಸುವ, ಆ ಸದ್ದನ್ನು ಪ್ರೀತಿಸುವ ಹುಚ್ಚು. ವಯಸ್ಸಾಗುತ್ತಿದ್ದಂತೆ ಮಾಧುರ್ಯದತ್ತ ವಾಲುವ ಮನಸ್ಸು ಹದಿಹರೆಯದಲ್ಲಿ sound is beautiful; more sound is more beautiful ಎನ್ನುತ್ತದೆ. ಇದಕ್ಕೆ ಅಪವಾದವೆಂದರೆ ಆರ್‍.ಡಿ. ಬರ್ಮನ್. ತಮ್ಮ 36ನೆಯ ವಯಸ್ಸಿನಲ್ಲಿಯೂ ಅವರು ಕಿಲೋಮೀಟರ್ ದೂರದಿಂದಲೂ ಕೇಳಿಸುವಂತಹ ‘ಮೆಹಬೂಬಾ ಮೆಹಬೂಬಾ ಉಉಊಉಉಉಊ ಗುಲ್ಷನ್ ಮೇ ಫೂಲ್ ಖಿಲ್ತೇ ಹೈ.... ಅಥೂ...ಉಉಊ’ ಹಾಡನ್ನು ಹಾಡಿದ್ದರವರು. 

ಬರ್ಮನ್‍ರನ್ನು ಅತ್ತ ಬಿಟ್ಟು ಢಮರುಗವನ್ನು ಕೈಗೆತ್ತಿಕೊಳ್ಳೋಣ. ಢಮರುಗ ಪ್ರಾಯಶಃ ವಾದನಗಳಲ್ಲಿ size zero figure ಹೊಂದಿರುವ ಏಕೈಕ ವಾದನ. ಶಿರದತ್ತ ಅಗಲವಾಗಿ, ನಡುವಿನಲ್ಲಿ ಕಿರಿದಾಗಿ, ಬುಡದತ್ತ ಮತ್ತೆ ಅಗಲವಾಗಿರುವ ಇದು ‘ಮಲೆನಾಡ ಹೆಣ್ಣ ಮೈಬಣ್ಣ ಬಲು ಚೆನ್ನ ಆ ನಡು ಸಣ್ಣ ಮನಸೋತೆ ನಾ ಚಿನ್ನ’ ಎಂಬ ಹಾಡನ್ನು ನೆನಪಿಸುತ್ತದೆ. ಡಮರುಗದ ಮೈಬಣ್ಣವೂ ಚೆನ್ನ, ನಡುವೂ ಸಣ್ಣ. ನಾರಿಗೂ ಈ ಮಿನಿಡ್ರಮ್ಮಿಗೂ ಒಂದು ಪ್ರಮುಖ ವ್ಯತ್ಯಾಸ – ಡಮರುಗದಂತೆ ಸದ್ದು ಹೊರಡಿಸುವ ಯಾವುದೇ ಹೆಣ್ಣು ಗಂಡಿಗೆ ಪ್ರಿಯಳಾಗುವುದು ಅನುಮಾನ. 

ಝೀರೋ ಸೈಝ್‍ ಹೆಣ್ಣು I want new threads ಎನ್ನುವಂತೆಯೇ ಡಮರುಗಕ್ಕೂ ಸಾಕಷ್ಟು ದಾರಗಳು ಬೇಕಾಗುತ್ತವೆ. ಈಗಿನ ಟೋರ್ನ್ ಜೀನ್ಸ್ ವಸ್ತ್ರಗಳನ್ನು ಹೋಲುವಂತೆ ದಾರಗಳನ್ನೇ ವಸ್ತ್ರವಾಗಿ ಧರಿಸುವ ಡಮರುಗದಲ್ಲಿ ಆ ದಾರಗಳ ಪಾತ್ರವೂ ಪ್ರಮುಖವೇ. ಎರಡೂ ಬದಿಗಳಲ್ಲಿರುವ taught leather ಅದನ್ನು ಬಡಿಯುವವನಿಗೆ ಅವಶ್ಯವಾದ ಲಯ ಹೊರಡಿಸಬೇಕಾದರೆ ಈ ದಾರಗಳನ್ನು ಅಡ್ಜಸ್ಟ್ ಮಾಡಬೇಕಾಗುತ್ತದೆ. ಸರಿಯಾದ threads ಇಲ್ಲವಾದರೆ ಅಪಸ್ವರ ಹೊರಡಿಸುವುದು, ಕರ್ಕಶ ಧ್ವನಿ ಹೊರಡಿಸುವುದು ಸಹ ಹದಿಬೆಡಗ/ಬೆಡಗಿಯರ ಲಕ್ಷಣವಾಗಿದ್ದು ತತ್ಕಾರಣ ಡಮರುಗ ಟೀನೇಜಿನ ಸಂಕೇತವಾಗಿದೆ. 

ಢಮರುಗದ ವಸ್ತ್ರವಿನ್ಯಾಸದ ಬಾಬ್ತಿಗೆ ಮತ್ತೆ ಬರೋಣ. ಇಂದಿನ ತರುಣಿಯರು ತಮ್ಮ ಲೆಹೆಂಗಾಗೋ, ಬ್ಲೌಸಿನ ತುದಿಗೋ ಬೀಡಿಂಗ್‍ಗಳ ಚೌಕಟ್ಟುಗಳನ್ನು ಅಳವಡಿಸಿಕೊಳ್ಳುವಂತೆಯೇ ಡಮರುಗವೂ ತನ್ನ ದಾರವಸ್ತ್ರದ ತುದಿಗೆ ಮಣಿಗಳನ್ನು ಅಳವಡಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ವಿದೇಶದಲ್ಲಿ ಹೆಚ್ಚಾಗಿ ಕಂಡುಬರುವ ಬಾಡಿ ಪೇಂಟಿಂಗ್ ಅಥವಾ ಟ್ಯಾಟೂಗಳ ಫ್ಯಾಷನ್ ಕೂಡ ಡಮರುಗಕ್ಕೆ ಒಪ್ಪುತ್ತದೆ. ಜನಪದಶೈಲಿಯ ವರ್ಣಗಾರಿಕೆಯಿಂದ ಹಿಡಿದು ಕಲಾತ್ಮಕ ಚಿತ್ರಣಗಳವರೆಗೆ ಕಂಡುಬರುವ ಡಮರುಗ quiet a stylish instrument ಎಂಬ ಕೀರ್ತಿಗೆ ಭಾಜನವಾಗಿದೆ. 

ಇಷ್ಟುಹೊತ್ತಿಗೆ ಡಮರುಗ ಹೆಣ್ಣೋ ಗಂಡೋ ಎಂದು ತಿಳಿಯುವ ಕುತೂಹಲ ನಿಮ್ಮಲ್ಲೂ ಮೂಡಿರಬಹುದು. ಇದು ಟೀನೇಜರ್‍ಗಳ ಸಂಕೇತವಾದ್ದರಿಂದ ಅವನ ಉಡುಪು ಇವಳು ತೊಟ್ಟು ಇವಳ ತೊಡುಗೆ ಅವನು ತೊಟ್ಟು ಲಿಂಗಗೊಂದಲ ಉಂಟಾಗುವುದು ಸಹಜ. ಈಗ ಗಂಡುಹೆಣ್ಣಿನ ವ್ಯತ್ಯಾಸ ತಿಳಿಯಬೇಕಾದರೆ ತಲೆಯನ್ನು ನೋಡಬೇಕು. ಎಳನೀರನ್ನು ಕುಡಿದಮೇಲೆ ಒಳಗಿನ ತಿರುಳನ್ನು ತಿನ್ನಲು ಅನುವಾಗುವಂತೆ ಎಳನೀರಿನವನು ಬುರುಡೆಯಿಂದಲೇ ಕೊಚ್ಚಿ ನೀಡುವ ಕಾಯಿಚಮಚದಂತೆ ಕಾಣುವ ಸೈಡ್ ಹೆಡ್ ಇರುವ ಆಕೃತಿ ಗಂಡು. ಒಂದು ಕಣ್ಣು ಮುಚ್ಚುವಷ್ಟು ಕೂದಲನ್ನು ಬಿಟ್ಟುಕೊಂಡು ಎಡಗೈಯನ್ನು ವಿಂಡ್‍ಫೀಲ್ಡ್ ವೈಪರ್‍ನಂತೆ ಬಳಸುತ್ತಾ ಕೂದಲನ್ನು ಆಗಾಗ್ಗೆ ಹಿಂದಕ್ಕೆ ತಳ್ಳುವ ಆಕೃತಿ ಹೆಣ್ಣು. ಇದು ಒಂದು general categorization ಅಷ್ಟೆ. ಅವನ ಶೈಲಿ ಕೂದಲಿವಳು ಇವನ ಶೈಲಿ ಕ್ರಾಪನವಳು ಹೊಂದಿದವರು ಕಂಡುಬಂದರೆ ಅಚ್ಚರಿಯಿಲ್ಲ. 

ಪರಿಸ್ಥಿತಿ ಇಂತಿರುವಾಗ ಹೊರಮೈ ಲಕ್ಷಣದಿಂದ ಡಮರುಗದ ಲಿಂಗಪತ್ತೆಕಾರ್ಯ ಸೂಕ್ತವಲ್ಲ. ಒಳಗೆಲ್ಲ ಖಾಲಿ ಇರುವುದರಿಂದ ಇದನ್ನು blonde girlಗೆ ಹೋಲಿಸಬಹುದಾದ್ದರಿಂದ ಹೆಣ್ಣು ಎನ್ನಬಹುದು. ಹೆಚ್ಚಾಗಿ ಗಂಡಿನ ಕೈಯಲ್ಲಿಯೇ ಇದ್ದು, ಅವನು ಆಡಿಸಿದಂತೆ ಆಡಿ, ಆ ಆಡಿಡುವಿಕೆಯನ್ನು ತಾಳೆನೆಂಬಂತೆ ಸದ್ದು ಹೊರಡಿಸುವುದರಿಂದ ಡಮರುಗ ಹೆಣ್ಣೇ ಎಂದು women’s liberation association ಇತ್ತೀಚೆಗೆ ಜೋರಾಗಿ ಪಿಸುಗುಟ್ಟಿದೆಯೆಂಬ ವರದಿಯಿದೆ. ಆದರೆ ಶಿವನ ಕೈಯಲ್ಲಿರುವ ಈ ವಸ್ತುವನ್ನು ಕುರಿತು ಗಂಗೆ, ಶಿವೆ ಇಬ್ಬರೂ ಮತ್ಸರವನ್ನು ವ್ಯಕ್ತಪಡಿಸಿಲ್ಲವಾದ್ದರಿಂದ ಇದು ಗಂಡೇ ಆಗಿರಬೇಕೆಂಬ ಗುಮಾನಿಯೂ ಇದ್ದಿತಂತೆ. ಆದರೆ ಯಾವುದರ ದನಿಯನ್ನು ಕೇಳಿದಾಕ್ಷಣ ಎಂತಹ ದೊಡ್ಡ ಗುಂಪೇ ಇದ್ದರೂ ಅತ್ತ ಗಮನ ಹರಿಸುತ್ತದೋ ಅದು ಹೆಣ್ಣೇ ಎಂದು habitual women watching men’s association ಸುಸ್ಪಷ್ಟವಾಗಿ ನುಡಿದಿದೆಯಂತೆ. 

ಢಮರುಗವನ್ನು ಢಂ ಅರುಗ ಎಂದು ವಿಭಜಿಸಿದರೆ ಯಾರಾದರೂ ಹೋಗಿಬಿಟ್ಟಿದ್ದನ್ನು ಅರುಹುವಂತಹವನು ಎಂದು ಅರ್ಥೈಸಿಕೊಳ್ಳಬಹುದು. ಕೋವಿಡ್ ಕಾಲದಲ್ಲಿ ಇಂತಹ ನೂರಾರು ಢಂ ಅರುಗರು ವಾಹಿನಿಗಳ ತುಂಬಾ ತುಂಬಿಕೊಂಡಿದ್ದರು. ಡಮರುಗ ಎಂಬ ಆಯುರ್ವೇದದಲ್ಲಿ ಬಳಸುವ ಸಸ್ಯವೂ ಒಂದಿದೆ. ವೃಂದಗಾನದಲ್ಲಿ ಹಿಮ್ಮೇಳವಾಗಿ, ಶಿವನ ರೌದ್ರರೂಪದಲ್ಲಿ ಮುನ್ನೆಲೆಯಲ್ಲಿ ರಾರಾಜಿಸುವ ಡಮರುಗ ಪ್ರಾಕೃತಭಾಷೆಯ ಕಾಲದಿಂದ ಅಸ್ತಿತ್ವದಲ್ಲಿರುವ ವಾದ್ಯವಾದ್ದರಿಂದ ‘Father of all percussion instruments’ ಎನ್ನಬಹುದು. ಹಿತದ ಕಂಪನದಿಂದ ಇಡೀ ಭೂಮಂಡಲವೇ ಅದುರುವ ಮಟ್ಟಕ್ಕೆ ಸದ್ದನ್ನು ಹೊರಡಿಸಬಲ್ಲ ಇದರ range ಬೇರೆ ವಾದ್ಯಗಳಲ್ಲಿ ಕಾಣಲಾರೆವು. ವಿದೇಶದ bass drum ಇದರ ಡಿಸ್ಟೆಂಟ್ ಕಸಿನ್ ಆಗಿದ್ದು, ಸದ್ದಿನಲ್ಲಿ ಎತ್ತಿದ ಕಂಠವಾಗಿದ್ದರೂ, manhandlingಗೆ... ಕ್ಷಮಿಸಿ.. ಮನುಷ್ಯನು ತನ್ನ ಕೈಯಲ್ಲಿಟ್ಟುಕೊಂಡು ನುಡಿಸುವುದಕ್ಕೆ ಅದು  ಅನುಕೂಲಕರವಲ್ಲವಾದ್ದರಿಂದ ಡಮರುಗಕ್ಕೇ ಈ ನಿಟ್ಟಿನಲ್ಲಿ ಆದ್ಯಸ್ಥಾನ ಲಭಿಸುತ್ತದೆ. 

ಪುರಾಣ ಎಂದರೆ ಪುರಾ-ನವ ಎರಡೂ ಕಾಲಕ್ಕೆ ಸಲ್ಲುವಂಥದ್ದೆಂದು ಅರ್ಥ. ಪುರಾ ಮತ್ತು ನವಕ್ಕೆ ಸಲ್ಲುವ ಡಮರುಗ product of Indian origin ಮತ್ತು used exclusively by Indians ಎನ್ನುವುದೇ ನಮ್ಮ ಹೆಮ್ಮೆ.  


Comments

  1. ಎಂದಿನಂತೆ ನಿಮ್ಮ ವಿಶ್ಲೇಷಣೆ ಅದ್ಭುತ. ಢಮರು ಒಳಗೆ ಖಾಲಿ ಇದ್ದ ಮಾತ್ರಕ್ಕೆ ಅದನ್ನು blonde ಹುಡುಗಿಗೆ ಹೋಲಿಸುವುದು politically incorrect (both sex-wise and colour-wise) ಎಂದು ಮೊದಲಿಗೆ ಅನಿಸಿದರೂ, ಶಿವನ ಢಮರುವಿನಿಂದ ಹೊರಟ ಶಬ್ದಗಳು ಎಷ್ಟು ಅರ್ಥ ಪೂರ್ಣವಾಗಿವೆ ಎಂಬುದನ್ನು ನೆನಪಿನಲ್ಲಿಡಬೇಕು. ಏಕೆಂದರೆ ಸಂಸ್ಕೃತದ ಎಲ್ಲ ಅಕ್ಷರಗಳೂ 'ಅಇಉಣ್', 'ಋಲೃಕ್' ಮುಂತಾದ ಆ ಶಬ್ದಗಳಲ್ಲಿ ಅಡಕವಾಗಿವೆ, ಮಾತ್ರವಲ್ಲ ಸಂಸ್ಕೃತ ವ್ಯಾಕರಣದ ಹಲವಾರು ನಿಯಮಗಳೂ ಈ ಶಬ್ದಗಳ ಗುಂಪುಗಳನ್ನೇ ಅನುಸರಿಸಿವೆ. ಹೀಗೆ ನೋಡಿದಾಗ, ಢಮರುವಿನ ಹೋಲಿಕೆ blonde ಹುಡುಗಿಯರಿಗೆ ಒಂದು ಬಗೆಯ ಪ್ರಶಂಸೆಯೇ.

    ReplyDelete

Post a Comment