ತಿಪಟೂರು ರಾಮಸ್ವಾಮಿ

ತಿಪಟೂರು ರಾಮಸ್ವಾಮಿ 

ಲೇಖನ -  ಕನಕಾಪುರ ನಾರಾಯಣ  


ಯಾರಿದು? ಬಹಳ ಜನ ಇವರ ಹೆಸರು ಕೇಳಿರರಾರರು.ಡಾ ರಾಜ್ಕುಮಾರ್ ಅವರ ಅದೆಷ್ಟೋ  ಚಿತ್ರಗಳನ್ನು ನೋಡಿದ್ದರೂ ಎಲೆಮರೆಯ ಕಾಯಿಯಂತಿರುವ ಇವರ ಬಗ್ಗೆ ಕೇಳಿರಲೇ ಇಲ್ಲ ಬಿಡಿ.  

ಮೂರು ವರ್ಷದ ನಂತರ ನನ್ನ ಅಮ್ಮನನ್ನು ನೋಡುವ ಹಂಬಲದಿಂದ ಬೆಂಗಳೂರಿಗೆ ಮಾರ್ಚ್ ೨೮ಕ್ಕೆ ಸುಮಾರು ಇಪ್ಪತ್ತು ದಿನಗಳ ಪ್ರವಾಸ ಹೊರಟೆ. ಬೇಸಿಗೆಯ ಬಿಸಿಲಿನ ಬೇಗೆ ಹೆಚ್ಚಿತ್ತು. ಆದರೂ ಬಿಡುವು ಮಾಡಿಕೊಂಡು ಹತ್ತಿರದ ಹೊಸ ದೇವಸ್ಥಾನಗಳು ಮತ್ತು ಕೆಲವು ಅಪರೂಪದ ಸ್ಥಳಗಳಿಗೆ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ಸಿಕ್ಕಿತು.  ಬೆಂಗಳೂರು ಸುತ್ತ ಮುತ್ತ ಮತ್ತು ಮೈಸೂರು, ಅರಸೀಕೆರೆ ಇಲ್ಲಿಗೆ ಕಾರ್ ಬುಕ್ ಮಾಡಿ ಹೋಗಿ ಬಂದೆವು.  ಇತ್ತೀಚಿನ ಭಾರತ ಪ್ರವಾಸದಲ್ಲಿ ಕೆಲವು ಹೊಯ್ಸಳ ದೇವಾಲಯಗಳು ಬಿಟ್ಟರೆ   ಉತ್ತರ ಭಾರತದ ಕಾಶಿ ಅಯೋಧ್ಯೆಗೆ ಭೇಟಿನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ನಾನು ಮರಳಿ ಸಿಡ್ನಿಗೆ ಬಂದಮೇಲೆ ನನ್ನ ಮಡದಿ ತನ್ನ ಗೆಳತಿಯರೊಡನೆ ಹಿಮಾಲಯದ ತಪ್ಪಲಿನ ಚಂದ್ರಶಿಲಾ ಎನ್ನುವ ಶಿಖರಕ್ಕೆ ಪರ್ವತಾರೋಹಣ ಸಾಹಸ ಯಶಸ್ವಿಯಾಗಿ ಮುಗಿಸಿ ಹಿಂದಿರುಗಿದಳು. 



ಬೆಂಗಳೂರು ಸುತ್ತ ಮುತ್ತಲಿನ ಸ್ಥಳಗಳನ್ನು ನೋಡಿ ಮುಗಿಸಿ ಯುಗಾದಿಯ ಹಿಂದಿನ ದಿನ ನಾವು ಹೊರಟಿದ್ದು ಅರಸೀಕೆರೆ ಕಡೆಗೆ. ಹಾರನ ಹಳ್ಳಿ ಹೊಯ್ಸಳ ದೇವಸ್ಥಾನ. ನಮ್ಮ ಹೊರನಾಡ ಪತ್ರಿಕೆಯಲ್ಲಿ ಆಗಿಂದಾಗ್ಗೆ ಆಕರ್ಷಣೀಯ ವಾಸ್ತು ಶಿಲ್ಪಾಗಳ ಬಗ್ಗೆ ಲೇಖನ ಬರೆಯುವ ಪ್ರೊ ಶ್ರೀನಿವಾಸ ಪುಟ್ಟಿ ಅವರ ಶಿಫಾರಸಿನ ಮೇರೆಗೆ ಹಾರನಹಳ್ಳಿ ಚೆನ್ನಕೇಶವನ ದೇವಾಲಯ ಮತ್ತು ಅರಸೀಕೆರೆಯ ಚಂದ್ರಮೌಳೇಶ್ವರ ದೇವಸ್ಥಾನದ ಅದ್ಭುತ ಶಿಲ್ಪಕಲೆ ವೀಕ್ಷಿಸಿ ತಿಪಟೂರಿನ ಮೂಲಕ ಪ್ರಯಾಣ ಮಾಡುವ ಹಾದಿಯಲ್ಲಿ ಶ್ರೀ ರಾಮಸ್ವಾಮಿ ಎನ್ನುವ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವುದು ಸಾಧ್ಯವಾದರೆ ಖಂಡಿತ ಮಾಡಿ ಎಂದು ಪ್ರೊ  ಶ್ರೀನಿವಾಸ ಪುಟ್ಟಿ  ತಿಳಿಸಿದ್ದರು. ಅವರ ವಿಳಾಸ ಮೊಬೈಲ್ ಸಂಖ್ಯೆ ಎಲ್ಲವನ್ನು ವಾಟ್ಸಾಪ್ ಮೂಲಕ ಕಳಿಸಿದ್ದರು.  ಶ್ರೀ ರಾಮಸ್ವಾಮಿಯವರಿಗೂ ನಮ್ಮ ಬರುವುಕೆಯ ಸುದ್ದಿ ಕೊಟ್ಟಿದ್ದರು. ಅಂತೆಯೇ ನಾವು ಅವರ ಮನೆಯ ಮುಂದೆ ಬಂದು ಕಾರ್ ನಿಲ್ಲಿಸಿದಾಗ ಅವರು ನಮ್ಮನ್ನೇ ಎದಿರು ನೋಡುತ್ತಾ ಮನೆಯ ಮುಂಬಾಗಿಲಿನಲ್ಲೇ ಕುರ್ಚಿ ಹಾಕಿ ಕುಳಿತಿದ್ದರು. 

ಅವರು ನಮಗಾಗಿ ಕಾಯುವಂತಾಯಿತೇನೋ ಎನ್ನುವ ಭಾವನೆ ಆಯಿತು. ತೊಂಭತ್ತೆರೆಡು ವರ್ಷದ ವೃದ್ಧರು ನಮಗಾಗಿ ಎದಿರು ನೋಡುತ್ತಿದ್ದರೆ ಯಾರಿಗಾದರೂ ಹಾಗನ್ನಿಸುವುದು ಸಹಜ. ಮೊದಲಬಾರಿಗೆ  ಅವರಬಗ್ಗೆ ಕೇಳಿದಾಗ ಎಷ್ಟು ಖುಶಿ ಆಯಿತೋ ಅದಕ್ಕೂ ಹತ್ತರಷ್ಟು ಆನಂದ ಅವರನ್ನು ಭೇಟಿಮಾಡಿದಾಗ ಅನ್ನಿಸಿತು. ಅಂದಹಾಗೆ ತಿಪಟೂರು ರಾಮಸ್ವಾಮಿಯವದರೂ ಯಾರು? ಕ್ಷಮಿಸಿ ಅದು ಮೊದಲು ಹೇಳಬೇಕಿತ್ತು. 


ಕನ್ನಡ ಚಿತ್ರರಂಗದ ಮೇರುನಟ ಡಾ ರಾಜಕುಮಾರ್ ಅವರ ದಶಕಗಳ ಆಪ್ತ ಗೆಳೆಯ ಶ್ರೀ ತಿಪಟೂರು ರಾಮಸ್ವಾಮಿಯವರು , ಇವರಿಗೂ ಅಣ್ಣಾವ್ರಿಗೂ ವರ್ಣಿಸಲಾಗದ ಗೆಳೆತನ. ಇದಕ್ಕೂ ಮೊದಲು ನಮಗೆ ರಾಜಕುಮಾರ್ ಅವರ ಬಗ್ಗೆ ಅಲ್ಪ ಸ್ವಲ್ಪ ತಿಳಿಯುತ್ತಿದ್ದುದು ನನ್ನ ಆತ್ಮೀಯ ಹಿತೈಷಿಗಳಾದ,  ಮತ್ತೊಬ್ಬ ರಾಜ್ ಮನೆಗೆ ಆಗಾಗ್ಗೆ ಹೋಗಿಬಂದು ಮಾಡುತ್ತಿದ್ದ ಮೈಸೂರಿನ ಚೆಲುವರಾಜು ಎನ್ನುವವರು. ತಿಪಟೂರಿಗೆ ಹೋದ ತಕ್ಷಣ ಒಂದು ವಿಡಿಯೋ ಕಾಲ್ ಮಾಡಿ ಚೆಲುವರಾಜು ಅವರಿಗೆ ನೋಡಿ ಯಾರ ಮನೆಗೆ ಬಂದಿರುವೆ? ಎಂದಾಗ ಒಂದೇ ಕ್ಷಣಕ್ಕೆ ಅರೆ! ತಿಪಟೂರು ರಾಮಸ್ವಾಮಿ ಎನ್ನಬೇಕೇ. ಅಣ್ಣಾವ್ರ ಮೂಲಕ ಅವರನ್ನು ಕೂಡಲೇ ಗುರುತಿಸಿ ಬಿಟ್ಟರು. 


ರಾಮಸ್ವಾಮಿ ಅವರಿಗೆ  ಈಗ ತೊಂಭತ್ತೆರೆಡು ವರ್ಷ ವಯಸ್ಸಾಗಿಗೆ ಅನ್ನಿಸುವುದಿಲ್ಲ ಅವರು ಹೇಳಿದ ಮೇಲೇ  ನಮಗೆ ತಿಳಿದದ್ದು. ಅವರೂ ಅವರ ಮಕ್ಕಳು ಅಗಲಿದರೂ ಅದೇ ವಿಶಾಲವಾದ ಮನೆಯಲ್ಲಿ ಹುಟ್ಟಿದಾಗಿನಿಂದಲೂ ಧರ್ಮಪತ್ನಿಯವರ ಜೊತೆ ವಾಸವಾಗಿದ್ದಾರೆ. ಹಿಂದೆ ನಾಟಕದ ಕಂಪನಿಗಳು ಬೇರೆ ಬೇರೆ ಊರುಗಳಲ್ಲಿ ತಿಂಗಳು ಗಟ್ಟಲೆ ಉಳಿದುಕೊಳ್ಳುತ್ತಿದ್ದ ಕಾಲ. ಆಗ ಗುಬ್ಬಿ ಹಾಗು ಇನ್ನೂ ಕೆಲವು ಕಂಪನಿಗಳು ಉಳಿದು ಕೊಳ್ಳುತ್ತಿದ್ದದ್ದು ಇವರ ಮನೆಯಲ್ಲೇ. ಹಾಗೆ ರಾಜ್ ಸಹ ಕುಟುಂಬ ಸಮೇತ ಇವರ ಮನೆಯಲ್ಲಿ ಬಂದುಳಿಯಿತ್ತಿದ್ದುದು, ಹತ್ತಿರದ ಕಲ್ಯಾಣಿಯಲ್ಲಿ ಬೆಳಗ್ಗೆ ತಿಂಡಿ ತಿಂದು ಹೊರಟರೆ ಅಲ್ಲೇ ಈಜುತ್ತಾ ಮಧ್ಯಾಹ್ನ ಹುಳಿಯನ್ನ ತಿಂದು ಮತ್ತೆ ಕಲ್ಯಾಣಿಯಲ್ಲಿ ಈಜುತ್ತಾ ಸಂಜೆವರೆಗೂ ಕಾಲ ಕಳೆಯುತ್ತಿದ್ದ ನೆನಪು ಮಾಡಿಕೊಟ್ಟರು. ಒಮ್ಮೆ ಸದಾಶಿವ ನಗರದ ಮನೆಗೆ ರಾಮಸ್ವಾಮಿ ಅವರು ಹೋಗಿದ್ದಾಗ ರಾತ್ರಿ ತಡವಾಗಿ ಅಲ್ಲೇ ಉಳಿಯುವಂತಾಗಿ ಅಣ್ಣಾವ್ರು ಅವರ ಅಲ್ಲಿಗೆ ಹಾಸಿಗೆ ತರಲು ಹೇಳಿದರಂತೆ. ಆತ ಒಂದೇ ಹಾಸಿಗೆ ತಂದನಂತೆ. ರಾಮಸ್ವಾಮಿಯವರು ಸಂಕೋಚದಿಂದ ಯೋಚಿಸುತ್ತಿರಲು, ಸ್ವಲ್ಪ ಸಮಯದ ನಂತರ ನೋಡಿದಾಗ ಅಚ್ಚರಿ ಎದಿರಾಯಿತು ಎನ್ನುತ್ತಾರೆ,. ಅದೇನೆಂದರೆ ಸ್ವತಃ ರಾಜಕುಮಾರರೇ ರಾಮಸ್ವಾಮಿಯವರಿಗೆ ಹಾಸಿಗೆ ಹೊತ್ತು ತಂದರಂತೆ, ಇದನ್ನು ನಮಗೆ ಹೇಳುವಾಗ ಭಾವುಕರಾಗಿ ಅವರ ಕಣ್ತುಂಬಿ ಬಂದವು. ಮತ್ತೊಮ್ಮೆ ಅದೇ ಮನೆಯಲ್ಲಿ ಮಾತಾಡುತ್ತಾ ಕುಳಿತಿರಲು ಇಬ್ಬರು ವಿಪ್ರರು ಅಣ್ಣಾವ್ರ ಮನೆಗೆ  ಪ್ರವೇಶಿಸಿದರಂತೆ. ರಾಮಸ್ವಾಮಿಯವರು ಮೈಮನದಲ್ಲಿ ಯಾರೋ ಧನ ಸಹಾಯಕ್ಕಾಗಿ ಬಂದಿರಬಹುದು ಎಂದುಕೊಂಡರೆ ಸತ್ಯ ಅದಾಗಿರಲಿಲ್ಲ. ಕವಿರತ್ನ ಕಾಳಿದಾಸ ಚಿತ್ರದ  ರಾಗಮಾಲಿಕೆಯಲ್ಲಿ ಹಾಡಿರುವ  ಮಾಣಿಕ್ಯವಿಣಾಮ್ ಶ್ಲೋಕದ ಸ್ಪಷ್ಟತೆ ಉಚ್ಚಾರಣೆ ಅಣ್ಣಾವ್ರಿಗೆ ಹೇಗೆ ಸಾಧ್ಯವಾಯ್ತು ಎಂದರೆ ತಕ್ಷಣ ರಾಜ್ ಪಕ್ಕದಲ್ಲಿದ್ದ ರಾಮಸ್ವಾಮಿಯವರನ್ನು ತೋರಿಸಿ ಎಲ್ಲ ಇಂಥಾವ್ರ  ಸಹವಾಸ ಎನ್ನಬೇಕೇ ಎಂದು ಅಚ್ಚರಿ ಪಟ್ಟರು.  ಆ ಹಾಡಿಗೆ ರಾಮಸ್ವಾಮಿ ಅವರ ಕಾಣಿಕೆ ಏನು ಇಲ್ಲವಾದರೂ ಆ  ಸಮಯಕ್ಕೆ ರಾಜ್ ನನ್ನದೇನೂ ಇಲ್ಲ ಎಲ್ಲಾ ಬೇರೆಯವರ ಬೆಂಬಲ ಎನ್ನುವುದು ಎಷ್ಟು ದೊಡ್ಡಗುಣ ಎಂದು ತೋರಿಸುತ್ತದೆ  ಎನ್ನುವುದೇ ಅವರ ಅಭಿಪ್ರಾಯ. 


ರಾಮಸ್ವಾಮಿಯವರು ಅಪಾರ ಸಂಗೀತಾಸಕ್ತರು. ಸಾವಿರಾರು ಗಾಯಕರ ಧ್ವನಿ ಮುದ್ರಣ ಸಂಗ್ರಹವನ್ನೂ ಮಾಡಿದ್ದಾರೆ. ಅವರ ಮತ್ತೊಂದು ವೈಶಿಷ್ಟ್ಯ ಎಂದರೆ ಚಿತ್ರ ಬಿಡಿಸುವುದು, ಮುದ್ರಣದಂತೆ ಕಾಣುವ ಅಚ್ಚೊತ್ತಿದಂತೆ ತೋರುವ ಅಕ್ಷರಗಳು. ದಶಕಗಳಿಂದಲೂ ಅವರ ಸಹಾಯ ಪಡೆದು ಆಹ್ವಾನ ಪಾತ್ರಗಳು, ಪ್ರಶಂಸಾ ಪಾತ್ರಗಳು ಜನ ಉಪಯೋಗಿಸಿಕೊಳ್ಳುತ್ತಿದ್ದರು. ಅವುಗಳ ಪ್ರತಿಗಳಲ್ಲಿ ಕೆಲವನ್ನು ನೋಡುವ ಭಾಗ್ಯ ನಮ್ಮದಾಗಿತ್ತು. 

ರಾಜಕುಮಾರ್ ಅವರ ಈ ಚಿತ್ರವನ್ನು ಬರೆದು ಅವರ ಕುಟುಂಬದವರಿಗೆ ಅದನ್ನು ತೋರಿಸಿದಾಗ ಪಾರ್ವತಮ್ಮ ರಾಜಕುಮಾರ್ ಅವರು ದಯವಿಟ್ಟು ಈ ಚಿತ್ರ ನಮಗೆ ಕೊಡಿ ಎಷ್ಟೋ ಬಣ್ಣದ ಚಿತ್ರಗಳು ನಮಗೆ ಸಿಕ್ಕಿವೆ ಆದರೆ ಪೆನ್ಸಿಲ್ ಡ್ರಾಯಿಂಗ್ ನಮಗೆ ಬೇಕು ಎಂದರಂತೆ. ಆಗ ರಾಜ್ ಹ್ಹೆ ಹ್ಹೆ ಅದೇನ್ ಆಮುಖ ನೋಡ್ತೀರಾ ಅಲ್ಲಿದೆ ನೋಡಿ ಎಂದು ಮೈಸೂರು ಮಹಾರಾಜರ ಚಿತ್ರದ ಕಡೆ ಕೈತೋರಿಸಿದರಂತೆ.  



ಹೀಗೆ ಅವರೊಡನೆ ಮಾತಾಡುತ್ತಾ ಸಂಜೆ ಕಳೆದು ಕತ್ತಲಾದದ್ದೂ ಅರಿಯಲಿಲ್ಲ. ಅವರ ವಿವರಣೆಗಳಲ್ಲಿ ಒಮ್ಮೆ ನಗು,ಒಮ್ಮೆ ಮನತುಂಬುವ ಭಾವನೆ, ಮತ್ತೊಮ್ಮೆ ಕಣ್ತುಂಬುವ ಅನುಭವ. ಹೊತ್ತು ಹೋದದ್ದೇ ತಿಳಿಯಲಿಲ್ಲ. 

ಪ್ರತಿಬಾರಿ ನಮ್ಮೂರಿಗೆ ಹೋದಾಗ ಕವಿಗಳು ಕಲಾಕಾರರು ಭೇಟಿ ಮಾಡುವುದು ಅಭ್ಯಾಸವಾಗಿತ್ತು ಆದರೆ ಈ ಬಾರಿ ಶ್ರೀ ರಾಮಸ್ವಾಮಿಯವರಂಥಾ ವಿಶೇಷ ವ್ಯಕ್ತಿಯನ್ನು ಭೇಟಿಯಾಗಲು ಸೂಚಿಸಿದ ಪ್ರೊ ಶ್ರೀನಿವಾಸ ಪುಟ್ಟಿ ಅವರಿಗೆ ಅನಂತ ಧನ್ಯವಾದಗಳು


Comments

  1. ಎಲೆ ಮರೆಯಲ್ಲಿರುವ ಕಾಯಿಯಂತಿರುವ ಈ ಮಹನೀಯರನ್ನು ನೋಡಲು ಸಾಧ್ಯವಾದದ್ದು ನಿಮ್ಮ ಸುಯೋಗವೇ ಸರಿ. ಅಣ್ಣಾವರ ಮನೆಗೆ ದಯಮಾಡಿದ ವಿಪ್ರವರ್ಯರು ,ಯಾರು ಎಂದು ಸರಿಯಾಗಿ ತಿಳಿಯಲಿಲ್ಲ. ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
    Replies
    1. ಶೃಂಗೇರಿಯಿಂದ ಬಂದ ಆ ಇಬ್ಬರು ವೇದ ಪಾರಂಗತರು ಸುಮಾರು ೫೦-೬೦ ಬಾರಿ ರಾಜ್ ಹಾಡಿದ ಆ ಶ್ಲೋಕವನ್ನು ಆಲಿಸಿ ಅಚ್ಚರಿಗೊಂಡು ಅಷ್ಟು ಸ್ಪಷ್ಟತೆ - ಉಚ್ಚಾರಣೆ ಹೇಗೆ ಸಾಧ್ಯವಾಯಿತು ಎಂದು ಕೇಳಲು ಯಾವುದೇ ಬೇರೆ ಅಪೇಕ್ಷೆ ಇಲ್ಲದೆ ಬಂದವರಾಗಿದ್ದರು.

      Delete

Post a Comment