ಆಸರೆ ಮನೆ - ಭಾಗ 12

 ಆಸರೆ ಮನೆ - ಭಾಗ 12

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ


ಜನನೀ  ಜನ್ಮ ಭೂಮಿಶ್ಚ

ಗೋಪಾಲ-ಶಾಂಭವಿ ಗಂಡ ಹೆಂಡಿರಾದದ್ದು ಆಕಸ್ಮಿಕ. ಬೇರೆ ಯಾವುದೋ ವಧುವನ್ನು ವೀಕ್ಷಿಸಲು ಒಂದು ಮದುವೆ ಮನೆಗೆ ಬಂದಿದ್ದ ಗೋಪಾಲ ತಾನು ನೋಡಲು ಬಂದಿದ್ದ ಹುಡುಗಿಯನ್ನು ಬಿಟ್ಟು ಶಾಂಭವಿಯನ್ನು ನೋಡುತ್ತಲೇ ತನ್ನ ಸಮ್ಮತಿ ಸೂಚಿಸಿದ.

ಜಾತಕ, ವರಸಾಮ್ಯ ಎಲ್ಲ ಸರಿಹೋದ ಮೇಲೆ ಎರಡೂ ಕಡೆಯ ಹಿರಿಯರು ಮದುವೆಗೆ ಸಮ್ಮತಿಯ ಮುದ್ರೆ ಒತ್ತಿದರು. ಕಾಕತಾಳಿಯವೋ ಎನ್ನುವಂತೆ ಎರಡು ಮನೆಯವರು ದತ್ತ  ಭಕ್ತರು. ದತ್ತ ಜಯಂತಿಯನ್ನು ಎರಡೂ ಮನೆಯವರು ಅದ್ದೂರಿಯಾಗಿ ಆಚರಿಸುವ ಸಂಪ್ರದಾಯವಿದ್ದವರು. ಗೋಪಾಲ ತಾಯಿ ತಂದೆಗೆ ಒಬ್ಬನೇ ಮಗ. ಶಾಂಭವಿಗೆ ಮಾತ್ರ ಒಬ್ಬ ಅಣ್ಣ ಇದ್ದ. ಹುಡುಗ ಒಂದು ಸಾಮಾನ್ಯ ನೌಕರಿಯಲ್ಲಿದ್ದರು ಮರ್ಯಾದವಂತ. ಶಾಂಭವಿಯ ತಂದೆ ತಾಯಿಗಳು ಸಂಭಾವಿತ ಹುಡುಗ, ಒಳ್ಳೆಯ ಮನೆತನ ಎನ್ನುವ ಕಾರಣದಿಂದ ಮದುವೆಗೆ ಒಪ್ಪಿದರು.

*************   

ಒಂದು ಮಧ್ಯಮ ವರ್ಗದವರ ಸಂಪ್ರದಾಯಸ್ಥ ಕುಟುಂಬದ ಮನೆಯವರ ಮದುವೆ ಎಂದರೆ ಜವಾಬ್ದಾರಿ ಜಾಸ್ತಿ. ಅತೀ ಶ್ರೀಮಂತರಾದರೆ ಎಲ್ಲ event manager ಗೆ ವಹಿಸಿ ಆ ಹೊತ್ತಿಗೆ ಹೋದರಾಯಿತು ಎಂದು ಬರಿ shopping ನಲ್ಲೇ ಮುಳುಗಿ ಬಿಡುತ್ತಾರೆ. ಇನ್ನೂ ಬಡವರ ಮದುವೆ  ಎಂದರೆ ಆಟದ ಮದುವೆ.. ಜಮೆಗಿಲ್ಲ. ೧-೨ ಗಂಟೆಯಲ್ಲಿ ಮದುವೆ ಮುಗಿದು ಊಟ ಆಗಿ ಅವರವರ ಮನೆಗೆ ಅವರವರು ಹೊರಟು ಹೋಗಬಹುದು. ಯಾರದೋ ಸೀರೆ, ಯಾರದೋ ಒಡವೆ ಧರಿಸಿ ಹುಡುಗಿ ಧಾರೆಯೆರಿಸಿಕೊಂಡು ಬೇರೆಯವರಿಂದ ಪಡೆದಿದ್ದ ವಸ್ತುಗಳನ್ನು ಅವರಿಗೆ ಹಿಂದಕ್ಕೆ ಕೊಟ್ಟು ಕೈ ಬೀಸಿಕೊಂಡು ಮನೆಗೆ ಹೊರಡುತ್ತಾಳೆ.

ಆದರೆ ಮಧ್ಯಮ ವರ್ಗಕ್ಕೆ ಹಾಗಲ್ಲ. ಶ್ರೀಮಂತರ ಜರ್ಬು ದೌಲತ್ತು ಇಲ್ಲ, ಬಡವರ ಕಂಗಾಲುತನ, ನಿರ್ಭೀತಿ ಇಲ್ಲ. ಮರ್ಯಾದೆಗೆ ಜೀವ ಬಿಡುವವರು. ಹೀಗೆ ಪೂರ್ವ ಸಿದ್ಧತೆ ನಡೆಸಿ ಶಾಂಭವಿ ಗೋಪಾಲನ ತಂದೆ ತಾಯಿಗಳು ತಮ್ಮ ಮಟ್ಟಕ್ಕೆ ಮರ್ಯಾದೆ ಮೀರದಂತೆ ಮದುವೆ ನಡೆಸಿದರು. ಮೂರು ದಿನಗಳು ಛತ್ರದ ತುಂಬಾ ಗಲಾಟೆ ಗೌಜು ಗದ್ದಲ, ನಂತರ ತಾನೇ ಲೆಕ್ಕಾಚಾರ. ಗೋಪಾಲನ ಮನೆಯವರು ಬೀಗರ ಬಿಂಕ ಇಲ್ಲದವರು. ಕೊಡುಬಿಡುವ ಬಗ್ಗೆ ಏನೇನು ತಕರಾರಿಲ್ಲ. ಹೂವಿನ ಸರ ಎತ್ತಿದಂತೆ ಲಗ್ನ ಕಾರ್ಯ ನಡೆದು ಹೋಯಿತು.

************   

ಶಾಂಭವಿ ಅತ್ತೆಯ ಮನೆಯಿಂದ ಗಂಡನ ಮನೆಗೆ ಬಂದಳು. ಆದರೆ ಎಲ್ಲೂ ಏನೂ ವ್ಯತ್ಯಾಸವಿಲ್ಲ. ಗೋಪಾಲನ ತಂದೆ ತಾಯಿಗಳು ಶಾಂಭವಿಯನ್ನು ಮಗಳಂತಲ್ಲದೆ ಸೊಸೆ ಎಂದು ನೋಡಲಿಲ್ಲ. ದತ್ತನ ಧ್ಯಾನದಿಂದ ಅವರು ವಿಮುಖರಾಗದೆ ಶಾಂಭವಿಗೆ ಮನೆ ಜವಾಬ್ದಾರಿಯನ್ನು ವಹಿಸಿದರು.

೧೦ ವರ್ಷಗಳ ವೈವಾಹಿಕ ಜೀವನದಲ್ಲಿ ಶಾಂಭವಿ ಗೋಪಾಲರ ಬದುಕಿನಲ್ಲಿ ಬಂದ ಎರಡು ಹೆಣ್ಣುಮಕ್ಕಳು, ಪ್ರಮತಿ, ಪ್ರಣತಿ. ಮುಂದೆ ಮಕ್ಕಳ ಯೋಚನೆ ಗಂಡ ಹೆಂಡತಿಯರಿಗಿರಲಿಲ್ಲ. ಹೆಣ್ಣಾದರೇನು? ಗಂಡಾದರೇನು? ಮಕ್ಕಳಿಬ್ಬರು ಸಾಕೇ ಸಾಕು ಎಂದು ನಿರ್ಧರಿಸಿದರು. ಮಕ್ಕಳು ಮುದ್ದಾಗಿ ಸುಟಿಯಾಗಿ ಬುದ್ಧಿವಂತೆಯರಾಗಿದ್ದರು. ಅಜ್ಜಿ ತಾತ, ಮಾವ ಅತ್ತೆ ಎಲ್ಲರಿಗೂ ಪ್ರಮತಿ, ಪ್ರಣತಿ ಎಂದರೆ ಅಭಿಮಾನ, ಮುದ್ದು ಎಲ್ಲ ಜಾಸ್ತಿ. ಹೆಣ್ಣು ಮಕ್ಕಳೆಂದು ಮನೆಯವರ್ಯಾರು ಎಂದೂ ಬೇಸರಿಸಲಿಲ್ಲ. ಹೆಣ್ಣು ಗಂಡು ಎಲ್ಲ ಒಂದೇ ಎನ್ನುವಂತೆ ಸ್ವತಂತ್ರ ಮನೋಭಾವ ರೂಢಿಸಿಕೊಳ್ಳುವ ತರಹ ಬೆಳೆಸಿದರು. ಪ್ರಮತಿ ಚೂಟಿ ಚುರುಕು. ಯಾವ ಸ್ಪರ್ಧೆಯಲ್ಲೂ ಬಹುಮಾನ ಪಡೆಯದೇ ಬಂದವಳಲ್ಲ. ಪ್ರಣತಿ ಬರೆಯುವುದರಲ್ಲಿ ಎತ್ತಿದ ಕೈ. ಕಥೆ, ಕವನ, ಕವಿತೆ ಎಂದು ಯಾವಾಗಲೂ ಬರೆದು ಬರೆದು ಪತ್ರಿಕೆಗೆ ಕಳುಹಿಸುವುದು, ಪ್ರಕಟಣೆ ಕಂಡ ಬರಹಗಳನ್ನು ಜೋಪಾನವಾಗಿ file ಮಾಡಿಟ್ಟು ಅಜ್ಜಿ, ತಾತ , ತಾಯಿ ತಂದೆಯರಿಗೆ ತೋರಿಸುತ್ತಿದ್ದಳು. ಅಕ್ಕ ತಂಗಿಯರು ಪರಸ್ಪರ ಒಗ್ಗಟ್ಟು, ವಿಶ್ವಾಸ ಪ್ರೀತಿಯಿಂದ ಅಕ್ಕ ತಂಗಿ ಎಂದರೆ ಹೀಗಿರಬೇಕು ಎನ್ನುವಂತಿದ್ದರು.

ಇಷ್ಟಾದರು ಅವರಿಬ್ಬರಲ್ಲಿ ತಂದೆಗಿದ್ದ ಒಂದೇ ಅಸಮಾಧಾನವೆಂದರೆ ಅವರ ವಸ್ತ್ರ ವಿನ್ಯಾಸ, ಟೈಟ್ ಪ್ಯಾಂಟ್, ಜೀನ್ಸ್, ಮಿನಿಮಿಡಿ, ಬಿಗಿಯಾದ ಟೀ ಶರ್ಟ್ ಗಳು ಮೈ ಮುಚ್ಚುವ ಬಟ್ಟೆ ಎಂದರೆ ಇಬ್ಬರಿಗೂ ಅಲರ್ಜಿ. ತಂದೆಗೆ ಇಷ್ಟವಿಲ್ಲ. ಆಡಲಾರರು ಆಡಿದರು ಆ ವಿಷಯದಲ್ಲಿ ಮಕ್ಕಳು ಕೇಳುವವರೂ ಅಲ್ಲ.

Generation gap ಎಂದರೆ ಹೀಗೆ ತಾನೇ ''ಕಾಲಾಯ ತಸ್ಮೈ ನಮಃ'' ಎಂದು ಹೊರಗಿನ ಪ್ರಪಂಚ ಕಂಡ ಗೋಪಾಲ ಸುಮ್ಮನಾಗುತ್ತಿದ್ದ. ಶಾಂಭವಿ ಮಾತ್ರ ಮಕ್ಕಳ ಈ ಆಧುನಿಕತೆಯನ್ನು ಮನದಣಿಯೆ ಮೆಚ್ಚುಗೆಯಿಂದ ಸ್ವಾಗತಿಸಿದಳು.

ತಾಯಿಯ ಬೆಂಬಲ ದೊರಕಿದ  ಮೇಲೆ ಇನ್ನೇನು. ಇಬ್ಬರೂ ಪೂರ್ಣ ಹೊಸತನದ ಹುಡುಗಿಯರಾಗಿ ಬೆಳೆದರು. ಓದಿನಲ್ಲಿ ಮಾತ್ರ ಹಿಂದಿದ್ದವರಲ್ಲ. ಪ್ರಮತಿ ಪಿಯುಸಿ ಮುಗಿಸಿ ಸರ್ಕಾರಿ ಕೋಟಾದಲ್ಲಿ ಯಾರ ಹಂಗೂ ಇಲ್ಲದೆ ಎಂಜಿನಿಯರಿಂಗ್ ಸೀಟು ಗಿಟ್ಟಿಸಿದಳು. ತಂದೆಗೆ ದುಂಬಾಲು ಬಿದ್ದು ಮನೆಯ ಆಧುನೀಕರಣಕ್ಕೆ ಹಟ  ಹಿಡಿದಳು.  

''ಡ್ಯಾಡ್ ಈ ಮನೆಗೆ ನನ್ನ friends ನ ಕರೆದುಕೊಂಡು ಬರುವುದು ಹೇಗೆ ಮೊದಲು ಮನೆ ನವೀಕರಣ ಮಾಡಿ'' ಎಂದು ಗೋಳು ಹುಯ್ದುಕೊಳ್ಳಲು ಪ್ರಾರಂಭಿಸಿದಳು.

''ರೀ ಪ್ರಮತಿ ಹೇಳುವುದು ಸರಿ. ನಾವಿನ್ನು ಈ ಹಳೆ ಮನೆಯಲ್ಲಿರುವುದು ಹೇಗೆ. ಮಕ್ಕಳು ದೊಡ್ಡ ವಿದ್ಯಾವಂತರಾಗುತ್ತಿದ್ದಾರೆ. ಅವರು ಹೇಳಿದಂತೆ ಮಾಡ್ರಿ''

''ಏನೇ ಹುಡುಗಿಯರಿಗೆ ಅನುಭವ ಇಲ್ಲ ಹೇಳ್ತಾರೆ ಎಂದರೆ ನಿನಗೆ ಬುದ್ಧಿ ಇಲ್ವೇನೆ, ಪ್ರಮತಿ ಪ್ರಣತಿಯರ ಮದುವೆಗಿಟ್ಟಿರುವ ಹಣ ಮನೆಯ ಮೇಲೆ ಹಾಕಿದರೆ ಮುಂದಕ್ಕೆ ಏನು ಮಾಡುವುದು''

''ಮುಂದೆ ನಾವು ಕೆಲಸಕ್ಕೆ ಸೇರಿ ಸಂಪಾದಿಸುತ್ತೇವೆ. ಅದಕ್ಕೆ ಯಾಕೆ  ಚಿಂತೆ ಡ್ಯಾಡ್'' .ಎಂದಳು ಪ್ರಣತಿ.

''ಹೌದ್ರೀ ಮುಂದೆ ಮಕ್ಕಳು ಕೆಲಸಕ್ಕೆ ಸೇರಿದಾಗ ಅವರ ಮದುವೆ  ಹಣ ಅವರದೇ ಸಂಪಾದನೆಯಿಂದ ಬರತ್ತೆ'' ಎಂದು ಆಧುನಿಕತೆಗೆ ಮರುಳಾದ ಶಾಂಭವಿಯ ಒತ್ತಾಯ. ಮನೆಯಲ್ಲಿ ಮೂವರು ಒಂದು ಪಾರ್ಟಿ, ತಾನೊಬ್ಬ

ಒಂದು. ತನಗೆ ಸಹಮತ ಕೊಡಲು ತಂದೆ ತಾಯಿಗಳು ಎಂದೋ ಕಣ್ಮರೆಯಾಗಿದ್ದರು.

ವಿಧಿ ಇಲ್ಲದೆ ಗೋಪಾಲ ಮನೆ ನವೀಕರಣಕ್ಕೆ ಸಮ್ಮತಿಸಿ ಮನೆ ಕೆಲಸಕ್ಕೆ ಕಂಟ್ರ್ಯಾಕ್ಟರ್ ನನ್ನ ಗೊತ್ತು ಮಾಡಿದ. ಮನೆ ಸಿದ್ಧವಾಗುವ ತನಕ ಬಾಡಿಗೆ ಮನೆಗೆ ಸಂಸಾರ ಸಾಗಿಸಿದ್ದಾಯಿತು. ಆರು ತಿಂಗಳು ವರ್ಷವಾಯಿತು. ಖರ್ಚು ಎರಡೂ ಕಡೆ ಮೇಲೇರಿತು. ಇದ್ದಬದ್ದ ಉಳಿತಾಯದ ಜೊತೆಗೆ ಸಾಲ ತೆಗೆದು ಮನೆ ಪೂರ್ತಿ ಮಾಡುವ ಹೊತ್ತಿಗೆ ಪ್ರಮತಿಯ ವಿದ್ಯಾಭ್ಯಾಸ ಮುಗಿದು ಒಳ್ಳೆಯ ಕಂಪನಿಯಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿ ಸೇರಿದಳು.

ಒಂದೇ ಬಾರಿ ೬೦ ಸಾವಿರ ಸಂಬಳ ಕೈಗೆ ಬಂಡ ಕೂಡಲೇ ಅವಳ ಮನೋಧರ್ಮವೇ ಬದಲಾಯಿಸಿತು. ಬೆಳಿಗ್ಗೆ ಕೆಲಸ, ರಾತ್ರಿ ಸ್ನೇಹಿತರೊಡನೆ ಸುತ್ತಾಟ. ಮನೆ ಸೇರುವುದು ಯಾವಾಗಲೋ , ಊಟ ನಿದ್ರೆ ಯಾವುದೂ ಕಾಲ ಪರಿಮಿತಿಯೊಳಗಿಲ್ಲ.

ಪ್ರಣತಿ ಸಹ ಎಂಜಿನಿಯರಿಂಗ್ COURSE ಗೆ ಸೇರಿದಳು. ಪ್ರಣತಿ ಅಕ್ಕನನ್ನು ಮೀರಿಸಿದ ಬುದ್ಧಿವಂತೆ. ಹೊಸ ಮನೆಯ ವಾಸ, ಕಾಲೇಜಿನ ಓಡಾಟ, ಅಕ್ಕ ನೀಡುವ ಪಾಕೆಟ್ ಮನಿಯ ಬೆಲೆಯಿಲ್ಲದ ಖರ್ಚು, ಹೀಗಾಗಿ ಪ್ರಣತಿ ಮತ್ತಷ್ಟು ಆಧುನಿಕಳಾದಳು. ಶಾಂಭವಿಗೆ ಇದು ತುಂಬಾ ಸಂತೋಷ. ಗೋಪಾಲ ಮಾತ್ರ ತನ್ನ ಕೈ ಮೀರಿ ನಡೆಯುತ್ತಿರುವ ಯಾವ ಅವಾಂತರಗಳು ಅವನಿಗೆ ಇಷ್ಟವಿಲ್ಲ.

ಕಾಲ ಯಾರ ಕೈಗೂ ಸಿಗುವಂತಹುದಲ್ಲವಲ್ಲ. ಶಾಂಭವಿಗೆ ಮಕ್ಕಳ ಮದುವೆ ಮಾಡಬೇಕಾದರೆ ವಿದೇಶದ ಅಳಿಯಂದಿರನ್ನೇ ತರಬೇಕೆಂಬ ಹುಚ್ಚು ಹಂಬಲ. ಗೋಪಾಲ ಮಾತ್ರ ''ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ'' ಎನ್ನುವ ಭಾವ.

ಆಶೆಗಳ ಕೆಣಕದಿರು. ಪಾಶಗಳ ಬಿಗಿಯದಿರು।

ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು|| ಬೇಸರದ ಪಾತಕಸ್ಮೃತಿಯ ಚುಚ್ಚದಿರು|

ಎನ್ನುತೀಶನನು ಬೇಡುತಿರೊ ಮಂಕುತಿಮ್ಮ||

***********

ಮಗಳು ಪ್ರಮತಿಗೆ ತಾನಾಗಿಯೇ ವಿದೇಶದಲ್ಲಿರುವ ವರ ಬೇಡಿ ಬಂದಾಗ ಶಾಂಭವಿ ಹಿಗ್ಗಿ ಹೂವಾದಳು. ಗೋಪಾಲನಿಗೆ ಎಳ್ಳಷ್ಟು ಇಷ್ಟವಿಲ್ಲ. ತನ್ನದೇನು ನಡೆಯುವುದಿಲ್ಲ ಎನ್ನುವುದು ಗೊತ್ತಿರುವ ಸಂಗತಿ.

ಅಮೇರಿಕಾದ ಹುಡುಗ ಬಂದು ೧೦ ದಿನದಲ್ಲಿ ಮದುವೆ ಮುಗಿಸಿ ಹೊರಡುವ ತಯಾರಿ ನಡೆಸಿದ. ಇಂಟರ್ನೆಟ್ ನಲ್ಲಿ ಹುಡುಗ ಹುಡುಗಿ ನೋಡಿ ಒಪ್ಪಿ ಚಾಟ್ ಮಾಡಿ ಪಾಸ್ಪೋರ್ಟ್ ವೀಸಾ ಕೂಡ ಸಿದ್ಧವಾಗುವ ಹಂತದಲ್ಲಿದ್ದರು. ಸರಳವಾಗಿ ದೇವಸ್ಥಾನದ ಮದುವೆ ಪಂಚತಾರ ಹೋಟೆಲಿನಲ್ಲಿ ರಿಸೆಪ್ಷನ್ ಸಮಾರಂಭ. ಎಲ್ಲ ಪ್ರಮತಿಯದೆ ತಯಾರಿ. ಶಾಂಭವಿ ಅಳಿಯನನ್ನು ಕಂಪ್ಯೂಟರ್ ನಲ್ಲೇ  ನೋಡಿ ಮೆಚ್ಚಿದಳು. ಮದುವೆಗೆ ಏನೇನು ಸಿದ್ಧತೆ ಬೇಡ. ತಮ್ಮ ಮದುವೆ ಸಮಯದಲ್ಲಿ ತಂದೆ ತಾಯಿ ಅಣ್ಣ ಎಷ್ಟೆಲ್ಲ ಓಡಾಡಿದ್ದರು. ಈಗ ಅದೆಲ್ಲ ಏನೂ ಇಲ್ಲ ಮನಸ್ಸಿಗೆ ಭಣ ಭಣ ಎನಿಸಿದರು ಅಮೇರಿಕದ ಎಳೆತ  ಎಲ್ಲವನ್ನೂ ಮರೆಸಿತು. ಪ್ರಣತಿ ಸಹ ಕುಣಿದಾಡಿದಳು.

ಹುಡುಗ ಪ್ರಣವ್ ಊರಿಗೆ ಬಂದದ್ದು ಆಯಿತು. ಮದುವೆಯಾಗಿ ಹೊರಟು  ಆಯಿತು. ೧೦ ದಿನದಲ್ಲಿ ಎಲ್ಲ ಮುಗಿದು ಹೋಯಿತು. ತಂಗಿಯನ್ನು ಗುಟ್ಟಾಗಿ ಸಂಧಿಸಿ ಪ್ರಮತಿ ಹೇಳಿದರು.

''ಪ್ರಣತಿ ನೀನು Course ಮಾಡಿಕೊಂಡು ಬಿಡು. ನಾನು ನಿನ್ನನ್ನು ಅಲ್ಲಿಗೆ ಕರೆಸಿಕೊಳ್ಳುತ್ತೇನೆ. ಮದ್ವೆಗಿದ್ವೆ ಬಗ್ಗೆ ಆಮೇಲೆ ಯೋಚನೆ ಮಾಡಿದರಾಯಿತು'' ಎಂದು ತಂಗಿಗೆ ಭರವಸೆ ಕೊಟ್ಟಳು.

ಪ್ರಮತಿ ಯಾವ ಚಿಂತೆಯೂ ಇಲ್ಲದೆ ಪ್ರಣವನೊಡನೆ ಅಮೆರಿಕಕ್ಕೆ ಹಾರಿದಳು. ಪ್ರಣತಿ ಈಗಾಗಲೇ ಒಂದು ಕಾಲು ಇಟ್ಟಾಗಿತ್ತು ಅಮೆರಿಕೆಗೆ.

*********

ಮನೆ ಮೊದಲಿನಂತಿಲ್ಲ. ಪ್ರಮತಿ ಇಲ್ಲ. ಪ್ರಣತಿ ಕಾಲೇಜು ಬಿಟ್ಟರೆ ಹುಡುಗರು, ಹುಡುಗಿಯರೆನ್ನುವ ಎಗ್ಗಿಲ್ಲದ ತಿರುಗಾಟ. ಶಾಂಭವಿಗೆ ಇದರಿಂದ ಏನೂ ಬೇಸರವಿಲ್ಲ. ಮಗಳು ಹೀಗೆ ಆಧುನಿಕವಾಗಿದ್ದರೆ ಅಮೆರಿಕೆಗೆ ಹೋಗುವುದು ಸುಲಭ ಎನ್ನುವುದು ಅವಳ ಭಾವನೆ.

ಪ್ರಣತಿಯ ವಿದ್ಯಾಭ್ಯಾಸ ಮುಗಿಯುವ ವೇಳೆಗೆ ಪ್ರಮತಿಯಿಂದ ವಿದೇಶಕ್ಕೆ ಆಹ್ವಾನ ಪ್ರಣವ್ ಗೆ ಅಮೆರಿಕದ ನಾಗರೀಕ ಹಕ್ಕುಪತ್ರ ಇದ್ದುದರಿಂದ ಅವಳು ಸುಲಭವಾಗಿ ಅಕ್ಕನ ಮೂಲಕ ಅಮೆರಿಕೆಗೆ ಹೊರಟು  ಬಿಟ್ಟಳು. ಈಗ ಮನೆಯಲ್ಲಿ ಉಳಿದವರು ಶಾಂಭವಿ ಗೋಪಾಲ.

''ರೀ ನೀವು ವೀಸಾ ಗೆ ಟ್ರೈ ಮಾಡ್ರಿ ಹೇಗಿದ್ರು ನಮ್ಮ ಹತ್ತಿರ ಪಾಸ್ ಪೋರ್ಟ್ ಇದೆಯಲ್ಲ. ಮಕ್ಕಳ ಮನೆಗೆ ಹೋಗೋಣ ಎಂದು ಗಂಡನಿಗೆ ವರಾತ ಹಚ್ಚಿದಳು.

''ಶಾಂಭವಿ ಆಮೆರಿಕ ಎಂದರೆ ಏನೆಂದುಕೊಂಡಿದ್ದೀ. ಅದೇನು ನಮ್ಮ ಪಕ್ಕದ ಮನೆಯಂತೆ ಬೇಕಾದಾಗ ಹೋಗಿಬರಬಹುದು ಎಂದುಕೊಂಡೆಯ?'' ಎಂದು ಗೋಪಾಲನ ಪ್ರತ್ಯತ್ತರ.

''ಯಾಕ್ರೀ ಆಗಲ್ಲ ಮೂಲೆಮನೆ ಶಾರದಮ್ಮ ೩ ಸಾರಿ ಹೋಗಿ ಬಂದಿದ್ದಾರೆ. ಈ ವಯಸ್ನಲ್ಲಿ ನಮಗ್ಯಾಕೆ ಆಗುವುದಿಲ್ಲ'' ಎಂದು ಹಟ ಹಿಡಿದಳು.

***********

ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ ಪ್ರಮತಿ ಗರ್ಭಿಣಿ ಎಂದು ಬಾಣಂತನದ ಹೆಸರಲ್ಲಿ ಶಾಂಭವಿ ಅಮೆರಿಕಾಗೆ ಬರಬೇಕೆಂಬ ಕರೆ ಪ್ರಣವ್ ಪ್ರಮತಿಯಿಂದ ಬಂದಿತು.

''ನೋಡ್ರಿ ಅದೃಷ್ಟ ಇದ್ರೆ ಏನೆಲ್ಲ ಆಗುತ್ತೆ ''

''ಶಾಂಭವಿ ನಿನ್ನ ಬಯಕೆ ಈಡೇರಿತಲ್ಲ. ಹೋಗಿ ಮಗಳ ಬಾಣಂತನ ಮುಗಿಸಿ ಬಾ''.

ಶಾಂಭವಿ ಇಂಡಿಯಾಕ್ಕೆ ವಾಪಸ್ ಬರುವ ಬಗ್ಗೆ ಕನಸು ಕಾಣಲಿಲ್ಲ. ಗೋಪಾಲ ಹೊರಡುವ ಮನಸ್ಸು ಮಾಡಲಿಲ್ಲ. ಅವನಿಗೆ ತಮ್ಮೂರು ತನ್ನ ಮನೆ ''ಜನನೀ  ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ''

''ನಾನು ಹೋಗುತ್ತೇನೆ. ನೀವು ಇಲ್ಲಿದ್ದು ಏನು ಮಾಡುತ್ತೀರಿ. ಊಟ ತಿಂಡಿ ನಿಮ್ಮ ಯೋಗಕ್ಷೇಮ ಯಾರು ನೋಡಿಕೊಳ್ಳುತ್ತಾರೆ?'' ಎಂದಳು ಶಾಂಭವಿ.

''ನೀನು ಹೊರಡು ಶಾಂಭವಿ ನನ್ನ ಯೋಗಕ್ಷೇಮದ ಬಗ್ಗೆ ಚಿಂತಿಸಬೇಡ'' ಎಂದು ಸಂದರ್ಭಾನುಸಾರ ಮಾತನಾಡಿದ.

************

ಶಾಂಭವಿ ಹೊರಡುವ ದಿನ ಹತ್ತಿರ ಬಂದಿತು. ಎಲ್ಲ ಪುಡಿ ಹುಡಿಗಳು ಸಿದ್ಧವಾಯಿತು. ಬಟ್ಟೆಗಾಗಿ ಹೊಸ ಸೂಟ್ ಕೇಸ್ ಬಂದಿತು. ಸದಾ ಸೀರೆ ಉಡುತ್ತಿದ್ದ ಶಾಂಭವಿ ವಿದೇಶಕ್ಕಾಗಿ ಸಲ್ವಾರ್ ಕಮಾಜ್ set ತೆಗೆದುಕೊಂಡಳು. ಗೋಪಾಲನಿಗಂತೂ ೩೦ ವರ್ಷ ಒಟ್ಟಿಗೆ ಸಂಸಾರ ಮಾಡಿದ ಹೆಂಡತಿ ಏಕ್ ದಂ ಅಮೆರಿಕಕ್ಕೆ ಮರುಳಾಗಿ ಹೋಗುತ್ತಿರುವಳಲ್ಲ ಎನಿಸಿ ತುಂಬ ಬೇಸರವೇನೋ ಆಯಿತು.

ವಿಮಾನದ ಟಿಕೆಟ್ ಬಂದು ಪ್ರಯಾಣದ ದಿನ ನಿಶ್ಚಯವಾಯಿತು. ಶಾಂಭವಿ ಕುಣಿಕುಣಿಯುತ್ತ ಊರಿನ ಜನರಿಗೆಲ್ಲ ತನ್ನ ಪ್ರಯಾಣದ ಸುದ್ದಿ ಬಿತ್ತರಿಸಿದಳು.

ಗೋಪಾಲನ ದಿವ್ಯ ಮೌನ ಶಾಂಭವಿಗೆ ಏನೂ ಅನ್ನಿಸಲಿಲ್ಲ.

ಅಂತೂ ಆ ದಿನ ಬಂದೇ ಬಿಟ್ಟಿತು. ಶಾಂಭವಿ ಮೊತ್ತ ಮೊದಲ ಬಾರಿಗೆ ಅಳಿಯ ಪ್ರಣವ್ ಸ್ನೇಹಿತರೊಬ್ಬರ ಜೊತೆ ವಿಮಾನ ಹತ್ತಿದಳು. ನ್ಯೂಜೆರ್ಸಿ ಮಗಳು ಅಳಿಯ ಇದ್ದ ಊರು. ವಿಮಾನ ಬದಲಾಯಿಸಿ ಜೊತೆಯವರಿದ್ದ ಕಾರಣ ಧೈರ್ಯವಾಗಿ ಮಗಳ ಮನೆ ತಲುಪಿದಳು. ಗೋಪಾಲ ಒಬ್ಬನನ್ನು ಬಿಟ್ಟು ಮಿಕ್ಕವರೆಲ್ಲ ವಿದೇಶಿ ನೆಲದಲ್ಲಿ ಹಾರಾಡಿದರು.

**********

ಈಗ ಗೋಪಾಲ ತನ್ನ ದಾರಿ ನಿಶ್ಚಯಿಸಿಕೊಂಡ. ಕೆಳಗಿನ ಮನೆಯ ಸಾಮಾನುಗಳನ್ನೆಲ್ಲ ಮೇಲಿನ ಮನೆಗೆ ಶಿಫ್ಟ್ ಮಾಡಿ ಬೀಗ ಹಾಕಿದ. ಕೆಳಗಿನ ಮನೆಗೆ ತನ್ನ ಪರಿಚಿತರೊಬ್ಬರ ಮೂಲಕ ಬಾಡಿಗೆದಾರರನ್ನು ಗೊತ್ತು ಮಾಡಿದ. ದೊಡ್ಡ ಮನೆಯಾದ್ದರಿಂದ ೧೦ಸಾವಿರ ರೂ. ಬಾಡಿಗೆ ಒಪ್ಪಂದವಾಯಿತು. ಆಫೀಸಿಗೆ ನಿವೃತ್ತಿಗಾಗಿ ಬರೆದುಕೊಂಡು  ಒಂದು ತಿಂಗಳ ರಜೆ ಬಳಕೆ ಮಾಡಿಕೊಂಡು ಕೈಗೆ ಬಂದ  ಹಣವನ್ನೆಲ್ಲ  ಬ್ಯಾಂಕ್ ಖಾತೆಗೆ ಜಮಾ ಮಾಡಿದ. ಮುಂದಿನ ಹಾದಿಯ ಬಗ್ಗೆ ಮನದಲ್ಲಿ ಮೊದಲೇ ನಿಶ್ಚಯಿಸಿಕೊಂಡಿದ್ದರಿಂದ ಒಂದು ಆಟೋ ಮಾಡಿಕೊಂಡು ಸೀದಾ ಆಸರೆಮನೆಯ ಬಾಗಿಲು ತಟ್ಟಿದ. ತಿಂಗಳ ಬಾಡಿಗೆ ಹಣ ಕಲ್ಯಾಣಿಯ ಕೈಯಲ್ಲಿ ಹಾಕಿ ತಾನು ಆಸರೆಮನೆಯಲ್ಲಿ ತನಗೆ ತೋಚಿದ, ಕಲ್ಯಾಣಿ ಹೇಳಿದ ಕೆಲಸ ಮಾಡಿಕೊಂಡು ಮೊದಲಿನಿಂದ ತಾನು ನಂಬಿದ್ದ ಶ್ರೀದತ್ತನ ಪೂಜೆ ಭಜನೆ ಮಾಡುತ್ತ ನೆಮ್ಮದಿಯ ನೆಲೆ ಕಂಡುಕೊಂಡ.

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ

************

ಭಾಗ 13 ರಲ್ಲಿ ಮುಂದುವರೆಯುವುದು ........

Comments