ಸಿಕ್ಕಾಪಟ್ಟೆಯ ಸಿಕ್ಕುಗಳು ಮತ್ತು ಪಟ್ಟೆಗಳು

 ಸಿಕ್ಕಾಪಟ್ಟೆಯ ಸಿಕ್ಕುಗಳು ಮತ್ತು ಪಟ್ಟೆಗಳು

ಹಾಸ್ಯ ಲೇಖನ - ಅಣುಕು ರಾಮನಾಥ್


ಈ ತಿಂಗಳ ಲೇಖನ  ಸಿಕ್ಕಾಪಟ್ಟೆ ಎಂಬ ವಿಷಯದ ಬಗ್ಗೆ ಬರೆಯಲು ಕೋರಿದವರು -  ಶ್ರೀಮತಿ ಸ್ಮಿತಾ ಮೇಲ್ಕೋಟೆ, ಸಿಡ್ನಿ 

       

                       ನಾಗಶೈಲರು ಹೀಗೆಲ್ಲ ಸಾಲ ವಸೂಲಿ ಮಾಡುವರೆಂದು ತಿಳಿದಿರಲಿಲ್ಲ. ನಾವು ಅಲ್ಲಿಗೆ ಬಂದಿದ್ದಾಗ ನನ್ನ ಭಾರ್ಯೆಗೆ ಸಿಕ್ಕಾಪಟ್ಟೆ ಇಷ್ಟವಾಗುವಂತಹ ಖಾರಾಬೂಂದಿ ಮಾಡಿಕೊಟ್ಟ ನಾಗಶೈಲರು ‘ಟೇಸ್ಟ್ ವಾಪಸ್ ಕೊಡಿ ಸಾರ್’ ಎಂದು ದುಂಬಾಲು ಬಿದ್ದರು. ಅವರು ಪಾಕಪ್ರವೀಣರು, ಒರಿಜಿನಲ್ ಬೂಂದಿ ಕೊಟ್ಟರು. ನಾನು ಪದಗಾರುಡಿಗ, ಪದಗಳಲ್ಲೇ ಹೋದ ಸಂಚಿಕೆಯಲ್ಲಿ ಅವರ ಖಾರಾಬೂಂದಿಯ ರುಚಿಯನ್ನು ಕಟ್ಟಿಕೊಟ್ಟೆ. ‘ಆಪ್ ಕೀ ಫರಮಾಯಿಷ್’ ರೀತಿಯ ವಿನೂತನ ಸಾಹಿತ್ಯಸವಾಲಿಗೆ ‘ಪಂಚಕಜ್ಜಾಯ’ದ ಮೂಲಕ ನಾಣಿ ನಾಂದಿ ಹಾಡಿದರೆ, ನಾಗಶೈಲರು ಆ ಸರಣಿಯನ್ನು ಖಾರಾಬೂಂದಿಯ ಮೂಲಕ ಸ್ಪೈಸಿಸಿದರು. ‘ಎರಡೂ ನನಗೆ ಸಿಕ್ಕಾಪಟ್ಟೆ ಇಷ್ಟ ಆಯಿತು ಸರ್. ಆದ್ದರಿಂದ ಸಿಕ್ಕಾಪಟ್ಟೆ ಎಂದ ಪದದ ಬಗೆಯೇ ಬರೆಯಿರಿ ನೋಡೋಣ’ ಎಂದಿದ್ದಾರೆ ಗೆಳತಿ ಸ್ಮಿತಾ ಮೇಲುಕೋಟೆ. ಅವರ ಮತ್ತೊಂದು ಪದ – ತಲೆಹರಟೆ. ಎರಡನ್ನೂ ಸೇರಿಸಿದರೆ ‘ಸಿಕ್ಕಾಪಟ್ಟೆ ತಲೆಹರಟೆ’ ಆಗಿ ಅನ್ ತಡೆಯೆಬಲ್ ಆದೀತೆಂದು ಈ ಸಂಚಿಕೆಗೆ ಸಿಕ್ಕಾಪಟ್ಟೆಯನ್ನಷ್ಟೇ ತೆಗೆದುಕೊಳ್ಳೋಣ. 

                            ‘ಸಿಕ್ಕಾಪಟ್ಟೆಯನ್ನಷ್ಟೇ’ ಎಂಬ ಪ್ರಯೋಗವೇ ವಿಶಿಷ್ಟವಾದುದು. ಇದೊಂದು ‘ನಾಣ್ಯಪದ’. ನಾಣ್ಯದಲ್ಲಿ ಎರಡು ವಿರುದ್ಧ ಮುಖಗಳಿದ್ದು, ಎರಡೂ ಸೇರಿದಾಗ ಒಂದು ಮೌಲ್ಯ ನಿಶ್ಚಯವಾಗುವಂತೆಯೇ ಸಿಕ್ಕಾಪಟ್ಟೆ ಮತ್ತು ಅಷ್ಟೇ ಎಂಬ ವಿರುದ್ಧಪದಗಳು ಸೇರಿ ‘ಆ ಪದವನ್ನು ಮಾತ್ರ’ ಎಂಬ ಅನ್ಯಾರ್ಥ ಮೂಡಿಸುವ ಯುಗಳಪದವೇ ನಾಣ್ಯಪದ. ಆಂಗ್ಲದಲ್ಲಿ Pretty Ugly, still running, fast food ಪದಗಳೂ, ಕನ್ನಡದಲ್ಲಿ ಹಿಡಿದುಬಿಟ್ಟರು, ತುಂಬಾಕಮ್ಮಿ, ಸ್ವಲ್ಪಜಾಸ್ತಿ ಮುಂತಾದವು ಇಂತಹ ‘ನಾಣ್ಯಪದ’ಗಳಿಗೆ ಒಳ್ಳೆಯ ಉದಾಹರಣೆಗಳು. 

                                 ‘ಸಿಕ್ಕಾಪಟ್ಟೆ’ ಎಂದಾಗ ಕೆಲವು ಇಂಗ್ಲಿಷ್ ಪದಗಳು ನೆನಪಾಗುತ್ತವೆ. Dress ಎಂದರೆ ಬಟ್ಟೆ ತೊಡು ಎಂದರ್ಥವಲ್ಲವೆ? ಆದರೆ dressed chicken ಎಂದರೆ ಬಟ್ಟೆಯ ಮಾತು ಅಂತಿರಲಿ, ಚರ್ಮವನ್ನೂ ತೆಗೆದುಬಿಟ್ಟಂತಹ ಪರಿಸ್ಥಿತಿ. Clip ಎಂದರೆ ಜೋಡಿಸು ಎಂದು ಅರ್ಥ – ರಟ್ಟಿಗೆ ಹಾಳೆಗಳನ್ನು ಕ್ಲಿಪ್ ಮಾಡಿಕೊಳ್ಳುತ್ತೇವಲ್ಲ! ಆದರೆ clip his wings ಎಂದರೆ ಅವನ ಬಾಲ ಕತ್ತರಿಸು ಎಂದರ್ಥ. Dust ಎಂದರೆ ಧೂಳು; Dust the table ಎಂದರೆ ಮೇಜಿಗೆ ಧೂಳನ್ನು ಅಂಟಿಸು ಎಂದಲ್ಲ, ಧೂಳನ್ನು ಕೊಡವು ಎಂದರ್ಥ. ‘ಸಿಕ್ಕಾಪಟ್ಟೆ’ಯೂ ಇದೇ ಜಾತಿಗೆ ಸೇರಿದ ಪದ. ‘ಸಿಕ್ಕಾಪಟ್ಟೆ ಚೆನ್ನಾಗಿದೆ’ ಎಂದಾಗ ಹೊಗಳಿಕೆಯ ಅರ್ಥವನ್ನು ಕೊಡುವ ಪದವೇ, ‘ನಿನ್ನದು ಸಿಕ್ಕಾಪಟ್ಟೆ ಆಯಿತು!’ ಎಂದಾಗ ಆಪದವನ್ನೇ ಸೂಚಿಸುತ್ತದೆ.  

ಆದರೆ ಈ ಲೇಖನದಲ್ಲಿ ಸಿಕ್ಕಾಪಟ್ಟೆಯ ಬಗ್ಗೆ ಸಿಕ್ಕಾಪಟ್ಟೆ ಆಗುವುದು ಆಪದವಲ್ಲ, ಸಂಪದ! ನಮ್ಮ ಚಲನಚಿತ್ರಗಳು ಇಂತಹ ವಿಷಯದೋಣಿಗಳನ್ನು ಲಂಗರು ಹಾಕಿ ಹಿಡಿದಿಟ್ಟುಕೊಂಡಿರುವಂತಹ ಸರ್ವಋತುಬಂದರುಗಳು. ‘ಸಿಕ್ಕಾಪಟ್ಟೆ’ ಪದಕ್ಕೆ ಕನ್ನಡ ಚಲನಚಿತ್ರದ ಕೊಡುಗೆ ಏನೆಂದು ಹುಡುಕಿದರೆ ‘ಸಿಕ್ಕಾಪಟ್ಟೆ ಇಷ್ಟಪಟ್ಟೆ; ಇಷ್ಟಪಟ್ಟೆ ಸಿಕ್ಕಾಪಟ್ಟೆ’ ಎಂಬ ಸಾಲಿನ ಹೊರತಾಗಿ ಏನೇನೂ ದೊರಕದೆ ಸಿಕ್ಕಾಪಟ್ಟೆ ಭ್ರಮನಿರಸನವಾಯಿತು. 

When everything fails, try science ಎನ್ನುವುದು ನನ್ನ watchwordಉ. Atom is the smallest unit of matterಊ ಎಂಬ ಹೇಳಿಕೆಯನ್ನು It does not matterಊ ಎನ್ನುತ್ತಾ ಸ್ಪ್ಲಿಟ್ಟಿಸಿದ ವಿಜ್ಞಾನಿಗಳೇ ನನ್ನ ಲೇಖನಪಯಣದ ಸ್ಫೂರ್ತಿಯಾದರು. Atomic Fission ಮಾದರಿಯಲ್ಲೇ Lingusitic Fission ಮೂಲಕ ‘ಸಿಕ್ಕಾ’ ಮತ್ತು ‘ಪಟ್ಟೆ’ಗಳನ್ನು ಬೇರೆಯಾಗಿಸಿದ್ದೇನೆ. ಬನ್ನಿ, ಈ ಪದಪಂಡೋರಾ ಏನೇನು ಹೊಳಹುಗಳನ್ನು ಹೊಂದಿರುವುದೋ ನೋಡೋಣ. 


ಸಿಕ್ಕಾ ಎಂದರೆ ನಾಣ್ಯ ಎಂದೂ, ಪಟ್ಟಾ ಎಂದರೆ ಮಗು/ಕಿರಿಯದು/ಚಿಕ್ಕದು ಎಂದೂ ಯಾವುದೇ ಹಿಂಕನ್ನಡಿಗ (ಹಿಂದಿ ಹಾಡುಗಳಲ್ಲಿ, ಡೈಲಾಗುಗಳಲ್ಲಿ ಕಳೆದುಹೋದ ಕನ್ನಡಿಗ) ಹೇಳಿಯಾನು. ಪಟ್ಟಾ ಎಂದರ ಚಿಕ್ಕದು ಎನ್ನುವುದಕ್ಕೆ ‘ಉಲ್ಲೂ ಕಾ ಪಟ್ಟಾ’ ಎಂಬುದಕ್ಕೆ ‘ಗೂಬೆಯ ಮರಿ’ ಎಂಬ ಅರ್ಥವಿರುವುದೇ ಕಾರಣವೆಂದೂ, ಮರಿ=ಸ್ಮಾಲ್=ಚಿಕ್ಕದು=ಚಿಲ್ಲರೆ ಎಂದೂ, ಪಟ್ಟಾ ಈಸ್ ಸಿಂಗ್ಯುಲರ್ರು, ಪಟ್ಟೇ ಈಸ್ ಪ್ಲೂರಲ್ಲು, ‘ಪಟ್ಟೇ’ ಕನ್ನಡಕ್ಕೆ ಬಂದಾಗ ಸಂಸ್ಕೃತದ ‘ರಮಾ’ ಕನ್ನಡದ ‘ರಮ’ ಆಗುವಂತೆ ದೀರ್ಘ ಕಳೆದುಕೊಂಡು ಪಟ್ಟೆ ಆಗುವುದೆಂದೂ, ತತ್ಪರಿಣಾಮವಾಗಿ ಸಿಕ್ಕಾಪಟ್ಟೆ ಎಂದರೆ ಚಿಲ್ಲರೆ ನಾಣ್ಯಗಳು ಎಂದೂ ಮಿಶ‍್ರಭಾಷಾ ವ್ಯಾಕರಣ ಹೇಳುತ್ತದೆ. 

ನನ್ನಲ್ಲಿ ಸಿಕ್ಕಾಪಟ್ಟೆ ಹ್ಯೂಮರ್ ಬೆಳೆಸಿದ ಮಾಸ್ಟರ್ ಹಿರಣ್ಣಯ್ಯನವರ ಮನೆಗೊಮ್ಮೆ ಹೋಗಿದ್ದಾಗ ಬೆನ್ನಿನ ಮೇಲೆ ಅಷ್ಟಗಲ ಪಟ್ಟೆ ಇದ್ದಿತು. 

‘ಏನ್ಸಾರ್ ಈ ಮಾರ್ಕ್ಸು?’ ಎಂದೆ. 

‘ಸಿಕ್ಕಾಪಟ್ಟೆ’ ಎಂದರು ಅಲ್ಲಿಗೆ ಬಂದಿದ್ದ ನಯಾಝ್ ಅಹಮದ್. 

‘ಹೌದು. ಜಾಸ್ತೀನೇ ಇದೆ’ ಎಂದೆ. 

‘ಹಾಗಲ್ಲ ಹೇಳಿದ್ದು. ಅವರಿಗೆ ಸ್ಲಿಪ್ ಡಿಸ್ಕ್ ಆಗಿತ್ತು. ಭಟ್ಟರಹಳ್ಳಿ ಗಂಗಣ್ಣನ ಹತ್ತಿರ ಹೋದಾಗ ಅವನು ಬೆನ್ನಿನ ಆ ಭಾಗದಲ್ಲಿ ತೈಲ ಸವರಿ, ನಿರ್ದಿಷ್ಟ ಸ್ಥಳಗಳಲ್ಲಿ ಸಿಕ್ಕಾ ಇಟ್ಟು ಬೆಲಡೋನಾ ಪ್ಲಾಸ್ಟರ್ ಹಾಕಿದ್ದ. ಈಗ ಪ್ಲಾಸ್ಟರ್ ತೆಗೆದಿದ್ದಾರೆ. ಸಿಕ್ಕಾ, ಅಂದರೆ ನಾಣ್ಯ ಹಾಗೂ ಪ್ಲಾಸ್ಟರಿನ ಪಟ್ಟಿ ಎರಡೂ ಸೇರಿ ಬೆನ್ನಿನ ಮೇಲೆ ಪಟ್ಟೆ ಬಿದ್ದಿರುವುದನ್ನೇ ನೀವು ಕಾಣುತ್ತಿರುವುದು’ ಎಂದರು ನಿಯಾಝ್. ‘ಸಿಕ್ಕಾಪಟ್ಟೆ’ ಎಂದರೆ impression of belladonna plaster with coins on the skin ಎಂಬ ಹೊಸ ಅರ್ಥವೊಂದು ಲಿಂಗ್ವಿಸ್ಟಿಕ್ ಫಿಷನ್ನಿನಲ್ಲಿ ದೊರೆತಂತಾಯಿತು. 

ಸಿಕ್ಕಾ ಎಂದರೆ ಮುದ್ರೆ ಎಂಬ ಅರ್ಥವೂ ಇದೆ. ಸಿಕ್ಕಾಪಟ್ಟೆ ಎಂದರೆ ಮುದ್ರೆಯ ಅಗಲವಾದ ಗೆರೆ ಎಂದಾಯಿತಲ್ಲ! ಇದರ ವ್ಯಾಪ್ತಿಯಂತೂ ಸಿಕ್ಕಾಪಟ್ಟೆ ಇದೆ. ನಮಗೆ ತಿಳಿದಮಟ್ಟಿಗೆ ಪ್ರಪಂಚದಲ್ಲಿ ಮೊಟ್ಟಮೊದಲ ಮುದ್ರೆಯನ್ನು ಬಳಸಿದವನು ಶ್ರೀರಾಮನೇ. ‘ಅನ್ವೇಷಣೆಗೆ ಹೊರಟೆ’ ಎಂದ ಆಂಜನೇಯನಿಗೆ ‘ಸೀಲ್ ದ ಡೀಲ್ ವಿತ್ ದಿಸ್ ರಿಂಗ್ ಆಫ್ ಸೀಲ್’ ಎನ್ನುತ್ತಾ ಮುದ್ರೆಯುಂಗುರವನ್ನು ಕೊಡದಿದ್ದರೆ ಸೀತೆ ಹನುಮನನ್ನು ನಂಬುವುದಕ್ಕೆ ಎವಿಡೆನ್ಸೇ ಇರುತ್ತಿರಲಿಲ್ಲ. ಅಗಲವಾದ/ದೊಡ್ಡದಾದ ಸೀಲ್‍ಗಳು ಪೋಸ್ಟಾಫೀಸಿನ ಪ್ರತಿ ಪಾರ್ಸಲ್ಲುಗಳಿಗೆ ಅವಶ್ಯ. ರಾಜಮಹಾರಾಜರು ಅಮೂಲ್ಯವಾದ ಪತ್ರಗಳು, ವಸ್ತುಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಭದ್ರವಾದ ‘ಸಿಕ್ಕಾಪಟ್ಟೆ’ಯನ್ನು ಹಾಕುತ್ತಿದ್ದುದು ಇತಿಹಾಸದುದ್ದಕ್ಕೂ ಕಂಡುಬರುತ್ತದೆ. 

ಮುದ್ರೆ ಎಂದರೆ ಸೀಲ್ ಅಷ್ಟೇ ಅಲ್ಲದೆ ಹಚ್ಚೆ ಎಂದೂ ಅನ್ವಯಿಸಬಹುದು. ಇಲ್ಲಿಯೂ ರಾಮಾಯಣವನ್ನು ಸ್ಮರಿಸಬೇಕು. ಅಳಿಲೊಂದು ‘ಅಕ್ಸೆಪ್ಟ್ ಮೈ ಟೂ ಬಿಟ್ಸ್’ ಎನ್ನುತ್ತಾ ದೊಡ್ಡ ಕಲ್ಲುಗಳ ನಡುವೆ ಚಿಕ್ಕ ಕಲ್ಲುಗಳನ್ನು ವೆಡ್ಜಿನಂತೆ ತುರುಕಿ ಸೇತುವೆಯನ್ನು ಭದ್ರಪಡಿಸಿದ್ದನ್ನು ಕಂಡ ಶ್ರೀರಾಮನು ಅದನ್ನೆತ್ತಿಕೊಂಡು ಬೆನ್ನಿನಮೇಲೆ ಕೈಯಾಡಿಸಿದ. ರಾಮ ಇಂದಿನವರ ಭಾಷೆಯಲ್ಲಿ ಹೇಳುವುದಾದರೆ quiet a hot guy. ಅವನು ಕೈಯಾಡಿಸಿದ ಬೆನ್ನಿನ ಭಾಗದಲ್ಲಿ ಕಾದ ಕಬ್ಬಿಣದಿಂದ ಹಾಕಿದ ಹಚ್ಚೆಯಂತೆ ಗೆರೆಗಳು ಮೂಡಿದವು. ಅಳಿಲಿನ ಇಡೀ ಸಂತತಿಯೇ branded for generations ಆಯಿತು. 

ಅಳಿಲಿನ ಬೆನ್ನಮೇಲಿನ ಹಚ್ಚೆ recognition of service ಆದರೆ ಹಿಟ್ಲರನ concentration campನಲ್ಲಿ ಹಾಕಿದ ಹಚ್ಚೆ symbol of atrocity ಆಗಿ ಮನುಷ್ಯನ ಕರಾಳ ಮುಖದ ಸಂಕೇತವಾಯಿತು. ಹಿಟ್ಲರನ ಕೈಯಲ್ಲಿ ಸಿಕ್ಕಿ ನರಳಾಡಿದ ಯಹೂದಿಗಳು ತಮ್ಮ ಮೈಮೇಲಿನ ಹಚ್ಚೆಯನ್ನು ಕಳೆದುಕೊಳ್ಳಲೂ ಆಗದೆ, ಇಟ್ಟುಕೊಳ್ಳಲು ಮನಸ್ಸಿಲ್ಲದೆ ಅನುಭವಿಸಿದ ಯಾತನೆ ವರ್ಣನಾತೀತ, ಊಹಾತೀತ. 

ಹಚ್ಚೆಯ ಪಟ್ಟಿಗಳು ಪ್ರೀತಿಯ ಸಂಕೇತವೆಂಬುದು ಸುನಿಶ್ಚಿತ. ತನ್ನಿನಿಯನ/ಳ ಹೆಸರನ್ನು ಪಟ್ಟೆಪಟ್ಟೆಯಾಗಿ ಕೈಮೇಲೆ ಹಾಕಿಸಿಕೊಳ್ಳುತ್ತಿದ್ದ ಕಾಲವೊಂದಿತ್ತು. ಅಕ್ಷರವನ್ನು ಪಟ್ಟೆ ಎನ್ನುವುದು ಸಿಕ್ಕಾಪಟ್ಟೆ ಅತಿಯಾಯಿತು ಎನ್ನಿಸಿದರೆ ಇಂದಿನವರ ಮೈಗಳನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಮೈ ನೋಡುತ್ತಲೇ Oh My...! ಎಂದು ಉದ್ಗಾರ ಹೊರಡುವ ರೀತಿಯಲ್ಲಿ ಶಂಖ, ಚಕ್ರ, contour mapಗಳಲ್ಲಿ ತೋರುವಂತಹ ಬೆಟ್ಟಗುಡ್ಡಗಳು, ಹಳ್ಳಕೊಳ್ಳಗಳ ಪಟ್ಟೆಗಳು, ವರ್ತುಲದ ಪಟ್ಟೆ, ಅರೆವರ್ತುಲದ ಪಟ್ಟೆ ಮುಂತಾದ ಸಕಲ ಆಕಾರಗಳನ್ನು ಹೊಂದಿ ಇಡೀ ಮೈ ಜ್ಯಾಮೆಟ್ರಿ ಫಿಗರ್‍ಗಳ ಪುಸ್ತಕದಂತೆ ಕಾಣುವಂತೆ ಹಚ್ಚೆ ಹಾಕಿಕೊಂಡಿರುವ  ಹದಿಹರಯದವರ ದಂಡು ವಿಶ್ವದಾದ್ಯಂತ ಕಂಡುಬರುತ್ತಿದೆ. ‘ಟ್ಯಾಟೂ...’ ಎಂದರೆ ‘ಮೀ ಟೂ’ ಎನ್ನುತ್ತಾ ಮುಂಬರುವ ಪಡ್ಡೆಗಳ ಹಿಂಡು ದಿನೇದಿನೇ ಬೆಳೆಯುತ್ತಿದೆ. 



ಸಿಕ್ಕಾಪಟ್ಟೆ ಎಂದರೆ ಸಿಕ್ಕ(ಖ್ಖ)ರು ಧರಿಸುವಂತಹ ಆ ಪಟ್ಟೆ ಎಂಬ ಅರ್ಥವನ್ನೇನಾದರೂ ತೆಗೆದುಕೊಂಡರೆ ಬಿಷನ್ ಸಿಂಗ್ ಬೇಡಿ, ಹರಭಜನ್ ಸಿಂಗ್ ಮುಂತಾದವರ ಸಾಲುಸಾಲೇ ಕಣ್ಣಮುಂದೆ ಬರುತ್ತದೆ. ಬೇಡಿಯಂತೂ ಅಲಂಕಾರಪ್ರಿಯ. ಫೀಲ್ಡ್ ಮಾಡುತ್ತಿರುತ್ತಿದ್ದ ಆತನಿಗೆ ಆ ಪಟ್ಟೆಯನ್ನು ಬದಲಾಯಿಸುವ ಮನಸ್ಸಾದರೆ ಸಬ್ಸ್‍ಟಿಟ್ಯೂಟನ್ನು ಬರಹೇಳಿ, ಒಳಹೋಗಿ ಪೇಟಾ ಬದಲಿಸಿಕೊಂಡು ಬರುತ್ತಿದ್ದ. ದಿನದ ಆಟದಲ್ಲಿ ಕನಿಷ್ಠ ಮೂರು ಬಾರಿಯಾದರೂ ಪಟ್ಟೆಯನ್ನು ಬದಲಿಸುತ್ತಿದ್ದ ಬೇಡಿಯ ಪಟ್ಕಾ ಅಚ್ಚುಕಟ್ಟಾಗಿಯೂ, ಆಕರ್ಷಕವಾಗಿಯೂ ಇರುತ್ತಿತ್ತು. 

ಸಿಕ್ಕಾ ಉರುಫ್ ನಾಣ್ಯಗಳ ಮೇಲೆ ವಿಧವಿಧವಾದ ಪಟ್ಟೆಗಳಿರುತ್ತವೆ. ಪಟ್ಟೆ ಉರುಫ್ band ಗಳದಂತೂ ಮತ್ತೊಂದು ಜಗವೇ ಇದೆ. ಇವೆರಡರ ಬಗ್ಗೆಯೂ ಬರೆಯತೊಡಗಿ, ಸ್ಮಿತಾ ಮೇಲುಕೋಟೆ ‘ಈತನಿಗೆ ಸಿಕ್ಕಾಪಟ್ಟೆ ಎಂಬ ಪದ ಕೊಟ್ಟು ಸಿಕ್ಕಾಪಟ್ಟೆ ತಪ್ಪು ಮಾಡಿದೆ. ಸಿಕ್ಕಾಪಟ್ಟೆ ಕೊರೆಯುತ್ತಾನೆ’ ಎನ್ನುವುದಕ್ಕೆ ಮುಂಚೆ ವಿರಮಿಸುತ್ತೇನೆ. 

ಇಂತಹ ಆಶುಲೇಖನಕ್ಕೆ ಅವಕಾಶ ನೀಡುತ್ತಿರುವ ಚಿಲುಮೆಗೆ ಸಿಕ್ಕಾಪಟ್ಟೆ ಥ್ಯಾಂಕ್ಸ್! 

Comments

  1. ಲೇಖನ ಸಿಕ್ಕಾಪಟ್ಟೆ ಚೆನ್ನಾಗಿದೆ. ಸಿಕ್ಕಾಪಟ್ಟೆ ನಕ್ಕು ಹೊಟ್ಟೆ ಹುಣ್ಣಾಗಿದೆ. 😀😃😂

    ReplyDelete
  2. ಸಿಕ್ಕಾಪಟ್ಟೆ ನಕ್ಕಿದಾಯ್ತು :)

    ReplyDelete
  3. ನಿಮ್ಮ ಸಿಕ್ಕಾಪಟ್ಟೆ ವಿಷಯಗಳಲ್ಲಿ ಇದೂ ಸೇರತ್ತೆ ಎಂದು ಊಹಿಸಿಯೇ ಇರಲಿಲ್ಲ. ವಿಜ್ಞಾನಿಗೆ ಒಂದು ಬಿಂದು ಸಾಕು - ರಾಮನಾಥರಿಗೆ ಒಂದು ಪದ ಸಾಕು ಬಿಡಿ. ಬಿಡಿಸಿ, ವಿಂಗಡಿಸಿ, ಶೋಧಿಸಿ, ಶೋಭಿಸಿ,ಎಳೆದಾಡಿಸಿ, ನಕ್ಕು ನಲಿದಾಡಿಸಿ, ವಿವಿಧ ಭಾಷೆ ಇಣುಕಿಸಿ, ಪುರಾಣ ಇತಿಹಾಸ ಜೋಡಿಸಿ, ಜಾಡಿಸಿ ಸಿಕ್ಕಾಪಟ್ಟೆ ಮನದಾಳದ ನಗು ಪೆಟ್ಟಿಗೆ ತಟ್ಟಿದೆ. ಸೂಪರ್ ರಾಮ್

    ReplyDelete

Post a Comment