ತಪ್ಪು ಯಾರದು ?

ತಪ್ಪು ಯಾರದು ?  

 ಲೇಖಕರು : ಎಂ ಅರ್ ವೆಂಕಟರಾಮಯ್ಯ

                                                                             

ಆದು ಜ್ಯೋತಿಷಿಗಳ ಕುಟುಂಬ. ಫಲಿತ ಜ್ಯೋತಿಷ್ಯ ತಿಳಿಸುವ, ಜಾತಕ ಬರೆಯುವ, ಶುಭಾಶುಭ ಕಾರ್ಯಗಳನ್ನು ನೆರವೇರಿಸುವುದರಲ್ಲಿ ನಿರತವಾಗಿ, ನೂರಾರು ಸ್ಥಳೀಯರಿಂದ, ‘ಸ್ವಾಮಿಗಳು, ಅಯ್ನೋರು, ಶಾಸ್ತ್ರಿಗಳು, ಪುರೋಹಿತರು’ ಇತ್ಯಾದಿ ಸಂಬೋಧನೆಗಳಿಗೆ ಪಾತ್ರರಾಗಿದ್ದ ಆ ಕುಟುಂಬದ ಹಿರಿಯ ವ್ಯಕ್ತಿಯೇ, ಅನಂತಯ್ಯನವರು. ಈ ಜ್ಯೋತಿಷ್ಯ, ಪೌರೋಹಿತ್ಯ, ಎರಡೂ, ಅವರ ತಂದೆ, ಸೀತಾರಾಮಯ್ಯನವರಿಂದ ಬಂದ ಬಳುವಳಿಯಾಗಿತ್ತು. ಅಪ್ಪನಿಂದ, ಮಗನಿಗೆ, ಮನೆಯ ಆಸ್ತಿಯೊಂದಿಗೆ, ವೃತ್ತಿಯೂ ಹಿಂಬಾಲಿಸಿತ್ತು ‘ನಾನೂ ನೀನೂ ಜೋಡಿ’ ಎಂಬಂತೆ.  ಆತ ನುಡಿದ ಶಾಸ್ತ್ರ ಎಂದೂ ಸುಳ್ಳಾಗಿಲ್ಲ, ನಡೆಸಿಕೊಟ್ಟ ಕಾರ್ಯವಾವುದೂ ವಿಫಲವಾಗಿಲ್ಲ ಎಂಬ ನಂಬಿಕೆಗೆ ಪಾತ್ರರಾಗಿದ್ದವರು ಶುಭಾಶುಭ ಕಾರ್ಯಗಳಿಗೆ ಸೂಕ್ತ ಮುಹೂರ್ತ, ವಿವಾಹ, ಉಪನಯನ, ಗೃಹಪ್ರವೇಶ ಮೊದಲಾದುವುÀಗಳನ್ನು ತಾವು ಬಂದು ಮಾಡಿಸಬೇಕು ಎಂದು ಆಹ್ವಾನಿಸಲು ಬರುವ ಜನ, ಮನೆಯಲ್ಲಿ ಯಾರಿಗಾದರೊಬ್ಬರಿಗೆ ಸದಾ ಅನಾರೋಗ್ಯ, ಶಾಂತಿ, ನೆಮ್ಮದಿಗಳಿಲ್ಲ, ಮಕ್ಕಳಿಗೆ ಉದ್ಯೋಗ, ವಿವಾಹ, ಸಂತಾನ ಭಾಗ್ಯ ಎಟುಕುತ್ತಿಲ್ಲ, ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಹೊತ್ತು ತಂದ ಸುತ್ತಮುತ್ತಲ ಹಳ್ಳಿಗಳ ಗುಂಪು ಗುಂಪುಗಳಲ್ಲಿ ಜನ ಬೆಳಗಿನಿಂದಲೇ ಪರಿಹಾರಕ್ಕಾಗಿ ಎದುರುನೋಡುತ್ತಾ ಅಯ್ನೋರ ಮನೆಯ ಹೊರ ಜಗಲಿಗಳು, ಮನೆಯೊಳಗಿನ ಪಡಸಾಲೆಗಳಲ್ಲಿ. ಹೀಗೆ ಜಾಗ ಕಂಡ ಕಡೆ ಕುಳಿತ್ತಿರುತ್ತಿದ್ದರು. ಇವರ ಸರದಿ ಬಂದಾಗ, ತಾವು ತಂದ ಹೂವು, ಹಣ್ಣು, ಇತ್ಯಾದಿ ಪೂಜಾ ಸಾಮಗ್ರಿಗಳನ್ಮು ಅಯ್ಯನವರ ಮುಂದಿಟ್ಟು, ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಳ್ಳುವುದು, ಅದಕ್ಕೆ, ಅಯ್ಯ, ಪಂಚಾಂಗ ಬಿಚ್ಚಿಟ್ಟು, ಬೆರಳೆಣಿಸಿ, ಕೂಡಿ ಕಳೆದು, ಗುಣಾಕಾರ, ಭಾಗಾಹಾರ ಮಾಡಿ, (ಇಂದಿನ ಕಾಲಘಟ್ಟದಲ್ಲಿ ಕಂಪ್ಯೂಟರ್ ಲ್ಯಾಪ್ ಟಾಪ್, ಹಲವು ಚೀಠಿಗಳು ಈ ಕೆಲಸಕ್ಕೆ ಸಹಾಯಕವಾಗಿದ್ದರೂ ಡಬ್ಬಲ್ ಚೆಕ್‌ಗಾಗಿ ಈ ಹಳೆಯ ಪದ್ದತಿ ಇನ್ನೂ  ಗ್ರಾಮೀಣ ಜ್ಯೋತಿಷಿಗಳಲ್ಲಿ ಬಳಕೆಯಿದೆ) ಪರಿಹಾರ ಸೂಚಿಸುವುದು, ನಂತರ, ಅವರು ಸ್ವಾಮಿಗೆ ನಮಿಸುವುದರೊಂದಿಗೆ, ಮುಂದಿನ ಭಕ್ತರ ಪಾಳಿ ಶುರುವಾಗುತ್ತಿತ್ತು. 



ಈ ಮಧ್ಯೆ, ಅನಂತಯ್ಯನವರ  ಕುಟುಂಬದ ಮನೆಯ ಮಗಳೇ ವಿವಾಹ ವಯಸ್ಕಳಾದಳು. ಬಂದ ಹತ್ತಾರು ಸಂಬಂಧಗಳು ಮನೆತನ ಉದ್ಯೋಗ ಸಂಬಳ ಇತ್ಯಾದಿ ಬಾಬ್ತುಗಳಲ್ಲಿ  ಓ ಕೆ  ಎನಿಸಿದ್ದರೂ,  ಜಾತಕ, ಉಹೂಂ, ಪ್ರಶಸ್ತವಾಗಿಲ್ಲ ಎಂಬ  ಕಾರಣಗಳಿಂದ ಆ ಮಗಳ ವಿವಾಹ ಮುಂದಕ್ಕೆ ಹೋಗುತ್ತಿತ್ತು. ಕಡೆಗೂ ಒಬ್ಬ ಗಂಡು ಎನಿಸಿದವ  ಕಾಣಿಸಿದ. ಹುಡುಗ ಸುಶಿಕ್ಷಿತ, ಒಳ್ಳೆಯ ಮನೆತನ, ಸುಖ ಜೀವನಕ್ಕೆ ಸಾಕಾಗುವಷ್ಟು ಸಂಪಾದನೆ ಇದೆ, ಇತ್ಯಾದಿ ಲೆಕ್ಕಾಚಾರಗಳು ಹೆಣ್ಣಿನ ಮನೆಯಲ್ಲಿ ನಡೆದರೆ, ಅತ್ತ, ಹುಡುಗಿ ಪರವಾಗಿಲ್ಲ, ಲಕ್ಷಣವಾಗಿದೆ, ಇಂದಲ್ಲ, ನಾಳೆ ಒಳ್ಳೆ ಉದ್ಯೋಗ ಸಿಗುವುದು ಗ್ಯಾರಂಟಿ, ಗಂಡ ಹೆಂಡತಿ ಇಬ್ಬರೂ ಸಂಪಾದಿಸಿದರೆ ಜೀವನ ಸುಖಮಯ ಎಂಬ ಲೆಕ್ಕ ನಡೆದಿತ್ತು ಆ ಗಂಡಿನ ಮನೆಯಲ್ಲಿ. ಹೀಗೆ, ಈರ್ವರೂ ಮನದಲ್ಲೇ ಮಂಡಿಗೆ ಸವಿದಿದ್ದರು. ಹೆಣ್ಣಿನ ತಂದೆ, ಅನಂತಯ್ಯನವರು, ಆ ವೇಳೆಗೆ ಬರೆದಿದ್ದ ಜಾತಕಗಳೆಷ್ಟೋ, ಮಾಡಿಸಿದ ಮದುವೆಗಳ ಸಂಖ್ಯೆ ನೆನಪಿಲ್ಲದಷ್ಟು. ಇವೆಲ್ಲದರಲ್ಲೂ, ಯಾರೂ ಚಕಾರವೆತ್ತದಂತೆ  ಸುಖಾಂತ್ಯ ಕಂಡಿತ್ತು, ಹೀಗಿರುವಾಗ, ಅಯ್ಯನವರ ಸ್ವಂತ ಮಗಳ ಜಾತಕ ನೋಡಲು ಬೇರೊಬ್ಬ ಜ್ಯೋತಿಷಿಯೇ ? ಇಷ್ಟಕ್ಕೂ, ಬೇರೆಯವರು, ನನ್ನಷ್ಟು  ಶ್ರದ್ಧಾಸಕ್ತಿಗಳಿಂದ ನೋಡುವರೋ, ಇಲ್ಲವೋ, ಅಕಸ್ಮಾತ್, ಎಲ್ಲಾದರೂ ಲೆಕ್ಕ ತಪ್ಪಿದರೆ ! ಬೇಡ,  ಅಂತಹಾ ಪ್ರಮಾದಕ್ಕೆಡೆ ಬೇಡ, ಎನಿಸಿತು. ಅಪ್ಪಯ್ಯ, ಯಾರೂ ನಮ್ಮ ಪುಟ್ಟಿಯ ಜಾತಕ ನೋಡುವುದು ಬೇಡ, ನೀವೊದ್ಸಲ ಲೆಕ್ಕಮಾಡಿ, ಹೂಂ ಅಂದರೆ, ಆನಂತರ, ನಾನೂ ಒಮ್ಮೆ ನೋಡುವೆ ವಧೂ ವರರಿಬ್ಬರ ಜಾತಕ, ಎಂದ, ಅಯ್ಯನವರ ಮಗ. ಆ ಸಲಹೆ ಅಯ್ಯನವರಿಗೂ, ಪತ್ನಿ ಭಾಗ್ಯಮ್ಮನವರಿಗೂ ಸರಿ ಎನಿಸಿತು. 

ಒಂದು ಶುಭ ವೇಳೆಯಲ್ಲಿ ಗಂಡು ಹೆಣ್ಣನ ಜಾತಕ ನೋಡಿ, ಲೆಕ್ಕಾಚಾರಗಳನ್ನು ಮುಗಿಸಿದ ವೇಳೆಗೆ, ಅಯ್ಯನವರ ಮುಖ ಮಂದಹಾಸದಿAದ ಮಿನುಗಿತ್ತು. ಅದನ್ನು ಸೂಕ್ಷö್ಮವಾಗಿ ಗಮನಿಸಿ, ಜಾತಕಾನುಕೂಲವಾಗಿದೆÀ ಎಂದು ಭಾವಿಸಿದ ಭಾಗ್ಯಮ್ಮನವರೂ ಆನಂದಭರಿತರಾದರು. ಬಾಯಿ ತೆರೆದ ಪತಿ, ಜಾತಕಗಳು ಬಹಳ ಪ್ರಶಸ್ತವಾಗಿವೆ, ಪರಸ್ಪರರಿಗೆ ಹೇಳಿ ಮಾಡಿಸಿದಂತಿದೆ, ಅನ್ಯೋನ್ಯ ದಾಂಪತ್ಯ, ಮಾಂಗಲ್ಯಕೂಟ ಚೆನ್ನಾಗಿದೆ, ಸುಖ, ಶಾಂತಿ, ನೆಮ್ಮದಿಯ ಜೀವನ ಇವರದಾಗುತ್ತದೆ ಎಂದರು ಅನಂತಯ್ಯ.  ಕೂಡಲೇ ಆಕೆ ಮೇಲೆದ್ದು ದೇವರ ಕೋಣೆಗೆ ಹೋಗಿ, ತುಪ್ಪದ ದೀಪ ಬೆಳಗಿಸಿ, ಸ್ವಾಮಿ, ಮಗಳ ವಿವಾಹ ಸುಗುಮವಾಗಿ ನಡೆಯುವಂತೆ ಮಾಡಿ ಮಗಳು ಅಳಿಯ ಮಕ್ಕಳು ಸದಾ ಸುಖವಾಗಿರುವಂತೆ ಹರಸಪ್ಪ, ಎಂದು ಮನೆ ದೇವರಿಗೆ ನಮಿಸಿದರು. 

“ಒಬ್ಬರಿಗಿಂತಾ ಇಬ್ಬರು ಲೇಸು” ಎನಿಸಿ, ಅಪ್ಪೀ, ನೀನೂ ಒಮ್ಮೆ ಜಾತಕಗಳನ್ನು ನೋಡಿ ಶುಭ ತಿಳಿಸೋ ಎಂದಾಗ, ಮಗನೂ ತನ್ನದೇ ರೀತಿ, ಲೆಕ್ಕಾಚಾರ ಮಾಡಿ, ಅಪ್ಪಯ್ಯ ಲೆಕ್ಕ ಮಾಡಿ ಹೇಳಿದ ಮೇಲೆ, ಬರ‍್ಯಾರೂ ನೋಡುವುದೇ ಬೇಕಾಗಿಲ್ಲ, ಅಷ್ಟು ಕರಾರುವಾಕ್ಕಾದದ್ದು, ಅವರ ಲೆಕ್ಕ ಎಂದು ಮಗ, ಅಪ್ಪನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ. ಕೂಡಲೇ, ಅಮ್ಮ, ಆ ಸೋದರ ಎಲ್ಲಾ, ಪುಟ್ಟಿ, ನೀನು ಬಲು ಅದೃಷ್ಟವಂತೆ ಕಣೇ, ನಿಧಾನವಾದರೂ ಒಳ್ಳೆ ಗಂಡ ಸಿಕ್ಕಿದ, ಎಂದು ಸಂತಸದಿಂದ ಮಗಳ ಭವಿಷ್ಯವನ್ನು ಕೊಂಡಾಡಿದರು. 

ಹೆತ್ತವರ ಆ ಶುಭ ನುಡಿಗಳು ಮಗಳನ್ನೂ ಖುಷಿಗೊಳಿಸಿತ್ತು. ಈ ಹೆಣ್ಣು, ಜ್ಯೋತಿಷಿಗಳ ಮನೆಯದಲ್ಲವೆ ? ತನಗೇನೂ ಲೆಕ್ಕಾಚಾರ ಬಾರದೆ ? ಇರಲಿ, ಎಂದು, ಯಾರೂ ಕಾಣದ ವೇಳೆ, ಗಂಡಿನ ಜಾತಕ ಹುಡುಕಿ, ತನಗೆ ತಿಳಿದಿದ್ದ, ರೀತಿ, ಲೆಕ್ಕ ಮಾಡಿ, ಏನೂ ಸಂದೇಹವಿಲ್ಲ, ನಮ್ಮಿಬ್ಬರ ಜಾತಕಗಳು ಹೊಂದುತ್ತವೆ, ಎಂದು ತಾನೂ ಒಮ್ಮೆ ಖಾತ್ರಿ ಪಡಿಸಿಕೊಂಡು ಮನದಲ್ಲೇ ಖುಷಿಪಟ್ಟಳು. ನಂತರದ ಕೆಲ ದಿನಗಳಲ್ಲಿ, ನಡೆಸಬೇಕಾಗಿದ್ದ ಸಾಂಪ್ರದಾಯಕ ವಿಧಿ ವಿಧಾನಗಳು ಉಭಯತ್ರರಿಗೂ ಸಮಾಧಾನಕರವಾಗಿ ಮುಗಿದುವು. ಶುಭ ಮುಹೂರ್ತದಲ್ಲಿ ವಿವಾಹ ನೆರವೇರಿಸಿ, ಮಗಳನ್ನು ಅತ್ತೆಯ ಮನೆಗೆ ಕಳುಹಿದರು. ಅನಂತಯ್ಯ ಭಾಗ್ಯಮ್ಮ ದಂಪತಿಗಳು.

ಅತ್ತ, ಅತ್ತೆಯ ಮನೆಯಲ್ಲಿ, ಪುಟ್ಟಿಯ ಅತ್ತೆಯದೇ ಮನೆಯ ಯಜಮಾನಿಕೆ, ಎಲ್ಲಕ್ಕೂ ತನ್ನ ಮಾತೇ ನಡೆಯಬೇಕು, ನಿನ್ನೆ ಮೊನ್ನೆ ಬಂದವಳು, ಸೊಸೆ, ಅವಳಿಗೆ ನನ್ನ ಮಗನ್ನ ಒಪ್ಪಿಸಲಾ ? ಇಷ್ಟು ವರ್ಷ, ಅವನನ್ನು ಸಾಕಿ ಬೆಳೆಸಿ ವಿದ್ಯಾವಂತನನ್ನಾಗಿ ಮಾಡಿಲ್ಲವೇ ? ಅವನೆಂದೂ ಹೆಂಡತಿಯ ಗುಲಾಮನಾಗಿರಬಾರದು, ಅಮ್ಮನ ಮಗನಾಗಿರಬೇಕು ಎಂಬುದು ಆ ಅತ್ತೆಯ ನಿಲುವಾದರೆ, ಅಮ್ಮ ಹೇಳಿದ್ದೇ ಸರಿ, ಮೊದಲಲ್ಲೇ ಹೆಂಡತಿಗೆ ಸಲಿಗೆ ಕೊಟ್ಟು, ಅವಳು ಹೇಳಿದಂತೆ ಮಾಡಲು ಶುರು ಮಾಡಿದರೆ, ನಂತರದಲ್ಲಿ, ನನ್ನ, ಅಮ್ಮನ್ನ ಬೇರೆ ಮಾಡಿಬಿಡ್ತಾಳೆ, ಈಗನ ಕಾಲದ ಹುಡುಗಿಯರು ಸಾಮಾನ್ಯರಲ್ಲಾ, ಎಂಬ ಧೋರಣೆ, ಆ ಗಂಡಪ್ಪನದು. ತನ್ನ ಬಳಿ ಹೆಂಡತಿ ಏನಾದರೂ ಹೇಳಿದರೆ, ನಿನಗೇನೂ ಗೊತ್ತಾಗುವುದಿಲ್ಲ, ಅಮ್ಮನಿಗೆ ಮನೆ ಕೆಲಸಗಳಲ್ಲಿ ಸಹಾಯ ಮಾಡಿಕೊಂಡು ತೆಪ್ಪಗಿರು, ಅವರು ಹಾಗಂದರು, ಇವರು ಹೀಗಂದರು ಎಂದು ಏನೇನೋ ಹೇಳಿ ನನ್ನ ತಲೆ ಕೆಡಿಸಬೇಡ, ಎಂದು ಹಾಯಾಗಿ ತನ್ನ ಪಾಡಿಗೆ ಮಲಗಿ ನಿದ್ರಿಸುವುದೋ, ಅಮ್ಮನಿರುವ ಜಾಗದಲ್ಲಿ ಕೂತು ಆಕೆಯ ಬುದ್ದಿವಾದ ಕೇಳುವುದೋ ಆ ಗಂಡಪ್ಪನ ದಿನಚರಿಯಾಯಿತು. 

ಕೆಲ ದಿನಗಳ ನಂತರ, ತೌರಿಗೆ ಬಂದ ಮಗಳನ್ನು ಪ್ರೀತಿ ಅಕ್ಕರೆಗಳಿಂದ ಸ್ವಾಗತಿಸಿ, ಮಾಮೂಲಾಗಿ, ಹೆತ್ತವರು ಕೇಳುವಂತೇನೇ, ಏನಮ್ಮಾ, ಅತ್ತೆ, ಮಾವ ನಿನ್ನ ಚೆನ್ನಾಗಿ ನೋಡಿಕೊಳ್ತಾರಾ ! ನಿನ್ನ ಯಜಮಾನರು ? ಹೀಗೇ, ಮನೆಯವರೆಲ್ಲರ  ಬಗ್ಗೆ ತಾಯಿ ಭಾಗ್ಯಮ್ಮ ಕುತೂಹಲದಿಂದ ವಿಚಾರಿಸುವುದು, ಆಗೆಲ್ಲಾ, ಮಗಳು, ಮುಖ ಬಾಡಿಸಿಕೊಂಡು, ಅಯ್ಯೋ, ಹೋಗಮ್ಮ, ಏನು ಗಂಡನ ಮನೆಯೋ ! ಆ ಪುಣ್ಯಾತ್ಮ, ಅದೇ ನಿನ್ನ ಅಳಿಯನಿಗೆ ಎಲ್ಲಕ್ಕೂ ಅವರ ಅಮ್ಮನೇ ಬೇಕು, ಆಕೆ ಹಾಕಿದ ಗೆರೆ ದಾಟೊಲ್ಲ, ‘ಅಮ್ಮನ ವಾಕ್ಯ ವೇದ ವಾಕ್ಯ’ ತನ್ನ ಹೆಂಡತಿ ಏನು ಹೇಳಿದರೂ ಎಲ್ಲವನ್ನೂ ಅಮ್ಮನಿಗೆ ವರದಿ ಮಾಡುವುದು, ನನಗೊಂದು ಚೂರು ಏನಾದರೂ ಕೊಡಿಸಬೇಕಾದರೂ ಅದಕ್ಕೂ ಅಮ್ಮನ ಪರ್ಮಿಶನ್ ಬೇಕು, ನನ್ನ ಮಾತಿಗೆ ಆ ಮನೇಲಿ ಚಿಕ್ಕಾಸೂ ಬೆಲೆಯಿಲ್ಲ ಎಂದು ಮುಖ ಬಾಡಿಸಿಕೊಂಡ ಮಗಳು ಅಮ್ಮನಲ್ಲಿ ಅಳಲನ್ನು ತೋಡಿಕೊಂಡಳು. 

ತಾಯಿಗೂ ಮಗಳ ಮಾತಿನಿಂದÀ ಬೇಸರವಾದರೂ ಅದನ್ನು ತೋರ್ಪಡಿಸದೆ, ನೀನೇನೂ ಚಿಂತಿಸಬೇಡ, ಹೊಸದರಲ್ಲಿ ಎಲ್ಲಾ ಹುಡುಗರೂ ಹಾಗೇನೇ, ಕಾಲ ಕ್ರಮೇಣ ಸರಿ ಹೋಗುತ್ತೆ, ಎಂದು ಸಮಾಧಾನಪಡಿಸಿ ಮಗಳನ್ನು ಅತ್ತೆಯ ಮನೆಗೆ ಕಳುಹಿಸಿದರು. 

ಹೊಸದಾಗಿ ಮದುವೆಯಾಗಿ ಬಂದ ಆ ಹೆಣ್ಣಿಗೆ, ವಯಸ್ಸಿಗೆ ಸಹಜವಾದ ಆಸೆ ಆಕಾಂಕ್ಷೆಗಳಿರುವುದು ತಪ್ಪೇ ? ಆದರೆ, ಅದನ್ನು ಯಾರಲ್ಲಿ ಹೇಳುವುದು ? ಗಂಡ ಈ ಪರಿ, ಇನ್ನು, ಆ ಅತ್ತೆಯೋ, ತನ್ನಿಂದ ಮನೆಯ ಕೆಲಸಗಳೆಲ್ಲವನ್ನೂ ಮಾಡಿಸುವುದು ಗೊತ್ತೇ ವಿನಃ, ತನ್ನ ಕಷ್ಟ ಸುಖ ಕೇಳುವ ಮನಸ್ಸಿಲ್ಲ. ಹೂಂ, ಆಗಲಿ, ತನ್ನಮ್ಮ ಹೇಳಿದಂತೆ, ಕೆಲ ಕಾಲದಲ್ಲಿ ಸರಿ ಹೋಗಬಹುದೆಂಬ ಅವಳಲ್ಲಿದ್ದ ಆಸೆ ಕಾಲ ಸರಿದಂತೆ ಕಮರುತ್ತಾ ಬಂತು. ತನ್ನ ಪರಿಸ್ಥಿತಿಯನ್ನು ಗಂಡನ ಬಳಿ ಹೇಳಿದಾಗ, ಅತನಿಂದ ಬಯ್ಗಳು ಮೊದಲಲ್ಲಿ ಶುರುವಾಗಿ, ನಂತರದ ದಿನಗಳಲ್ಲಿ ಹೊಡೆತವೂ ಅನುಭವಿಸಬೇಕಾಯಿತು. ಅನಂತಯ್ಯ, ಭಾಗ್ಯಮ್ಮನವರೂ, ತಮ್ಮ ಅಳಿಯನೊಡನೆ ವಿಷಯವನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದಾಗ, ಅತ್ತೆಯ ಮನೆಯಲ್ಲಿ ಹೇಗೆ ಬಾಳಬೇಕೆಂಬ ಪಾಠ, ಮಗಳಿಗೆ ಹೇಳಿ, ಆ ಮೇಲೆ ಅಲ್ಲಿಗೆ ಕಳುಹಿಸಿ ಎನುತ್ತಾ ಪತ್ನಿಯನ್ನು ತೌರಿಗೆ ದೂಡಿ, ಅಮ್ಮನ ಮಗನಾಗಿ, ದಿನ ಕಳೆಯಲಾರಂಭಿಸಿದ. 

ಪುಟ್ಟಿಗೂ ಮನಸ್ಸು ರೋಸಿ ಹೋಗಿತ್ತು. ಇನ್ನು ಆ ಗಂಡ, ಸಂಸಾರ, ಯಾವುದೂ ಬೇಡ, ನನ್ನ ಹಣೆಯಲ್ಲಿ ಸಂಸಾರ ಸುಖ ಇಲ್ಲೆಂದು ಆ ಬ್ರಹ್ಮ ಬರೆದಿಟ್ಟರುವಾಗ, ಯಾರೇನು ಮಾಡಿದರೂ ಪ್ರಯೋಜನವಾಗದು, ಎಂದು ನಿಟ್ಟುಸಿರಿಟ್ಟು, ಕಾಣದಾ ವಿಧಿಯನ್ನು ಜರಿದಳು. ಹೊಲಿಗೆಯೋ, ಮಕ್ಕಳಿಗೆ ಪಾಠ ಹೇಳಿಯೋ ಹೇಗೋ ನನ್ನೊಬ್ಬಳ ಜೀವನ ನಡಸ್ಕೊತೀನಿ, ಅಪ್ಪ ಅಮ್ಮನಿಗೂ ನಾ ಹೊರೆ ಆಗೊಲ್ಲ ಎಂದು ನಿರ್ಧರಿಸಿದಳು.

 ಅನಂತಯ್ಯ ದಂಪತಿಗಳಿಗೆ ಪರಿಸ್ಥಿತಿ, ‘ಬಿಸಿ ತುಪ್ಪದಂತಾಯ್ತು. ನಂಗುವ ಹಾಗಿಲ್ಲ, ಉಗಳುವ ಹಾಗಿಲ್ಲ’. ಮಗಳು ಸಂಸಾರ ಮಾಡಿಕೊಂಡಿರಲಿ ಎಂದು ಅಲ್ಲಿಗೆ ಕಳುಹಿಸಿದರೆ, ನಾವೇ ಆಕೆಯನ್ನು ನರಕಕ್ಕೆ ತಳ್ಳಿದಂತಾಗುವುದು. ಮನೆಯಲ್ಲೇ ಇಟ್ಟುಕೊಳ್ಳೋಣವೆಂದರೆ, ಮುಂದೆ ಅವಳ ಭವಿಷ್ಯ ? ನಮ್ಮ ನಂತರ ಅವಳ ಯೋಗ ಕ್ಷೇಮ ನೋಡುವವರಾರು ? ಈ ಯೋಚನೆಯಲ್ಲೇ ಆ ದಂಪತಿಗಳು ಕೃಶರಾದರು. ಅನಾರೋಗ್ಯದಿಂದ ಅನಂತಯ್ಯನವರು ಹಾಸಿಗೆ ಹಿಡಿದರು. ಕೂತರೆ, ನಿಂತರೆ, ಅನಂತಯ್ಯನವರದು, ಒಂದೇ ಯೋಚನೆ ? ‘ತಪ್ಪು ಯಾರದು ? ತಪ್ಪೇಲ್ಲಾಗಿದೆ ? ನಾನೇ ಖುದ್ದಾಗಿ ಇಬ್ಬರ ಜಾತಕಗಳನ್ನೂ ಬಹಳ ಜಾಗರೂಕನಾಗಿ ಪರಿಶೀಲಿಸಿದ್ದೇನೆ, ಲೆಕ್ಕಾಚಾರಗಳು ಸರಿಯಾಗಿಯೇ ಇವೆ, ಉಭಯತ್ರರದೂ ಹೇಳಿ ಮಾಡಿಸಿದಂತಿವೆ, ಅನ್ಯೋನ್ಯ ದಾಂಪತ್ಯ ಇವರದಾಗಬೇಕು, ಆದರೂ ಎಲ್ಲಿ ತಪ್ಪಾಗಿದೆ ? ತಿಳಿಯುತ್ತಿಲ್ಲ ಎಂದು, ಅಂದು, ಮದುವೆಗೆ ಮುನ್ನ ಲೆಕ್ಕಿಸಿದ ಕಾಗದಗಳನ್ನು ಮತ್ತೆ ಮತ್ತೆ ತಿರುವಿದರು, ಅನಂತಯ್ಯ,

ಇದೇ ದಾಟಿಯಲ್ಲಿ ಅಲೋಚಿಸಿದ ಪುಟ್ಟಿಯ ಸೋದರ, ನಾವು ಅವರನ್ನು ಸುಮ್ಮನೆ ಬಿಡಬಾರದು, ಕೋರ್ಟಿಗೆ ಹೋಗೋಣ, ಪುಟ್ಟಿಯ ಸಂಸಾರ ಸರಿಪಡಿಸೋಣ ಎಂದಾಗ, ಅನಂತಯ್ಯನವರು, ಬೇಡಪ್ಪಾ, ನಮ್ಮ ವಂಶದಲ್ಲಿ ಯಾರೂ ಪೋಲಿಸ್, ಕೋರ್ಟು ಮೆಟ್ಟಿಲು ಹತ್ತಿದವರಲ್ಲಾ,  ಇಷ್ಟಕ್ಕೂ, ಇವೆಲ್ಲಾ ಕೋಮಲ ಮನಸ್ಸಿಗೆ ಸಂಬAಧಿಸಿದ ವಿಷಯಗಳು, ‘ಸಂಸಾರದ ಗುಟ್ಟು, ವ್ಯಾಧಿ ರಟ್ಟು’ ಎಂಬಂತೆ ನಮ್ಮ ಕುಟುಂಬದ ಮಾನ ಮರ್ಯಾದೆ ಬೀದಿಗೆ ಬೀಳುತ್ತದೆ. ಅಳಿಯನೇನು ಅವಿದ್ಯಾವಂತನೆ ? ಹೆಂಡತಿ ಜೊತೆ ಸುಖವಾಗಿ ಸಂಸಾರ ಮಕ್ಕಳು ಎಂದು ಇರಬೇಕೆಂಬ ಮಾನವ ಸಹಜ ಆಸೆ ಅವನಲ್ಲಿ ಇಲ್ಲದೆ ಇದ್ದಾಗ, ಬಲವಂತದಿAದ ಅದು ಸರಿ ಹೋಗೊಲ್ಲಾ. ‘ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲಿತ್ತು’ ಅಂತ ಏನೋ ಒಂದು ಸಬೂಬು ಹೇಳಿ, ಹುಡುಗೀನ ತೌರಿಗೆ ಕಳಿಸ್ತಾನೆ, ಇಲ್ಲವಾದರೆ, ತನ್ನ ಮನೇಲೇ ಹುಡುಗಿಗೆ ಹಿಂಸಿಸಿ ಅವಳ ಬಾಳನ್ನು ನರಕ ಮಾಡ್ತಾನೆ. ಅದು ಯಾವುದೂ ಬೇಡಪ್ಪಾ, ಎಂದು ನಿಟ್ಟುಸಿರಿಟ್ಟರು. ಆದರೂ, ಅನಂತಯ್ಯನವರ ಅಂತರಾಳದಲ್ಲ್ಲಿ ಆ ಪ್ರಶ್ನೆ, ಹುಳುವಿನಂತೆ ಸತತವಾಗಿ ಓಡಾಡುತ್ತಲೇ ಇತ್ತು, ‘ತಪ್ಪು ಯಾರದು ? ಅವರಿಬ್ಬರ ಜಾತಕಗಳನ್ನು ಬೇರೆಯವರಿಂದ ಪರಿಶೀಲಿಸಿದ್ದರೆ ಹೀಗಾಗುತ್ತಿರಲಿಲ್ಲವೇನೋ ? ಅಥವಾ, ಹುಡುಗನ ಕಡೆಯವರು ಅವನ ಅಸಲಿ ಜಾತಕ ನಮಗೆ ಕೊಡದೆ ಮುಚ್ಚಿಟ್ಟರೆ ? ಅವನ ಜಾತಕ ಫಲವೇ ಹೀಗಿರಬಹುದೇ ? ಇವ್ಯಾವುದೂ ಅಲ್ಲದೆ, ನಮ್ಮ ಹುಡುಗಿಯ ಪೂರ್ವ ಜನ್ಮದ ಪಾಪ, ಶಾಪವೇ ? ಉತ್ತರ ಅರ‍್ಯಾರಿಗೂ ಹೊಳೆಯದಾಯಿತು. ಆದರೆ, ‘ತಪ್ಪು ಯಾರದು’ ? ಆ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿಯಿತು, ಕಾಲ ಸರಿದರೂ. .

                             

Comments

  1. ತಮ್ಮ ಲೇಖನ ಬಹಳ ವಿಶೇಷವಾಗಿರುತ್ತವೆ. ಈ ಕಥಾ ರೂಪಕವೂ ಹಾಗೆ ಸೊಗಸಾಗಿದೆ. ಅಪ್ಪಿ ಎನ್ನುವ ಪದ ಕೇಳಿ ಖುಷಿಯಾಯ್ತು ನಮ್ಮ ಮನೆಗಳಲ್ಲಿ ಎಲ್ಲರೂ ಅಪ್ಪಿ ಅಮ್ಮಿ ಅಪ್ಪಯ್ಯ ಅಮ್ಮಯ್ಯ ಎಂದೇ ಕರೆಯುತ್ತಿದ್ದುದು ನೆನಪಿಸಿದಿರಿ.

    ReplyDelete

Post a Comment