ಆಸರೆ ಮನೆ - ಭಾಗ 11

 ಆಸರೆ ಮನೆ - ಭಾಗ 11

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ



ಜಯರಾಮ- ಶಾಂತಾರಾಮ ಅಣ್ಣ ತಮ್ಮಂದಿರು ಇದರಿಂದ ಎಚ್ಚೆತ್ತುಕೊಂಡರು. ಜಯರಾಮ ಶಾಂತಾರಾಮ ಇಬ್ಬರು ಮಾಧ್ಯಮಿಕ ಶಾಲೆಯ ಉಪಾಧ್ಯಾಯರಾಗಿದ್ದು ನಿವೃತ್ತರಾಗಿದ್ದವರು. ಜಯರಾಮ ಮದುವೆ ಮಾಡಿಕೊಂಡಿರಲಿಲ್ಲ. ತಮ್ಮನ ಜೊತೆಯಲ್ಲಿ ಇದ್ದುಬಿಟ್ಟಿದ್ದ. 

ಶಾಂತಾರಾಮನಿಗೆ ಮದುವೆಯಾಗಿತ್ತು. ಮೂರು ಜನ ಮಕ್ಕಳು ಎರಡು ಗಂಡು, ಒಂದು ಹೆಣ್ಣು. ಕೊನೆಯ ಮಗಳ ಹೆರಿಗೆಯಲ್ಲಿ ಶಾಂತಾರಾಮ ಪತ್ನಿ ತೀರಿಕೊಂಡಿದ್ದರು. ಶಾಂತಾರಾಮ ಮತ್ತೆ ಮದುವೆಯ ಗೊಡವೆಗೆ ಹೋಗಲಿಲ್ಲ. ಅಣ್ಣ ತಮ್ಮ ಸೇರಿ ಮೂವರು ಮಕ್ಕಳನ್ನು ಸುಶಿಕ್ಷಿತರು, ಸಂಸ್ಕಾರವಂತರೂ ಆಗಿ ಬೆಳೆಸಿದ್ದರು. ಮೂವರು ಮಕ್ಕಳಿಗೂ ಮದುವೆ ಮಾಡಿದರು. ಬಂದ ಸೊಸೆಯರು ಒಳ್ಳೆಯ ಸದ್ಗ್ರುಹಿಣಿಯರಾಗಿದ್ದರು. ಅಳಿಯ ಮನೆಯ ಮಗನಂತಿದ್ದ. ಮಕ್ಕಳು ಸೊಸೆಯರು ಮೊಮ್ಮಕ್ಕಳಿಂದ ಮನೆ ನಂದಗೋಕುಲವಾಗಿತ್ತು. 

ವಯಸ್ಸಾದ ಕಾಲದಲ್ಲಿ ಅಣ್ಣ ತಮ್ಮ ನೆಮ್ಮದಿಯಾಗಿಯೇ ಇದ್ದರು. ಇಬ್ಬರೂ ತಮ್ಮ ಕಾಲದಲ್ಲಿ ದುಡಿದಿದ್ದರಲ್ಲಿ ೨ ಮನೆ ಮಾಡಿದ್ದರು. ಮಕ್ಕಳಿಗೆ ಮದುವೆ ಮಾಡಿ ಹೆಣ್ಣು ಮಗಳಿಗೆ ಚೆನ್ನಾಗಿ ಚಿನ್ನ ಹಾಕಿ ಮದುವೆ ಮಾಡಿ ಹಬ್ಬ ಹರಿದಿನ ಬಾಣಂತನ ಎಲ್ಲ ಚೆನ್ನಾಗಿ ಮಾಡಿ ಕಳುಹಿಸಿದ್ದರು.

ಇಬ್ಬರಿಗೂ ಕೈತುಂಬಾ ನಿವೃತ್ತಿ ವೇತನ. ಅದರಲ್ಲೂ ಯಾವುದೇ ಕಾಯಿಲೆ ಕಸಾಲೆ ಇಲ್ಲದ ಕಾರಣ ಯಾವ ಅಭ್ಯಾಸಗಳೂ ಇಲ್ಲದ್ದರಿಂದ ಸಾಕಷ್ಟು ಹಣ ಕೈಯಲ್ಲಿ ಇತ್ತು. ಸೊಸೆ, ಮಕ್ಕಳು ಇವರಿಬ್ಬರ ಬಗ್ಗೆ ಗೌರವಯುತವಾಗಿ ಪ್ರೀತಿಯಿಂದ ಯಾವುದೇ ಭೇದಭಾವ ಇಲ್ಲದಂತೆ ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲ ಸುಖಜೀವನದ ಮಧ್ಯೆಯಲ್ಲಿ ಶೆಟ್ಟರ ಸಾವು ಅಣ್ಣ ತಮ್ಮಂದಿರ ಕಣ್ತೆರೆಸಿತು. 

***********

ಅಣ್ಣ ತಮ್ಮಂದಿರಿಬ್ಬರೂ ಸಾಕಷ್ಟು ಸಮಾಲೋಚನೆ ನಡೆಸಿ ಒಂದು ತೀರ್ಮಾನಕ್ಕೆ ಬಂದರು. 

ಒಂದು ರಜಾದಿನ ಮಕ್ಕಳು, ಸೊಸೆಯಂದಿರು, ಹೆಣ್ಣುಮಗಳು, ಅಳಿಯನನ್ನು ಮನೆಗೆ ಬರಹೇಳಿದರು. ಲೋಕಾಭಿರಾಮವಾಗಿ ಮಾತುಕತೆ ತಿಂಡಿ-ಕಾಫಿ ಸಮಾರಾಧನೆಯ ನಂತರ ಎಲ್ಲರೂ ಹಾಲಿನಲ್ಲಿ ಕುಳಿತಾಗ ಮಗಳೇ ಮುಂದಾಗಿ ''ಅಪ್ಪಾ, ಏನಪ್ಪ ಇವತ್ತು ಎಲ್ಲರನ್ನೂ ಒಟ್ಟಿಗೆ ಕರೆದಿದ್ದೀರಿ, ಏನು ಸಮಾಚಾರ?'' ಎಂದಳು. 

''ಏನಿಲ್ಲಮ್ಮ ನಾವು ಅಣ್ಣ ತಮ್ಮಂದಿರು ಒಂದು ಯೋಚನೆ ಮಾಡಿ ನಿರ್ಧಾರಕ್ಕೆ ಬಂದಿದ್ದೀವಿ. ಅದನ್ನು ನಿಮಗೆ ತಿಳಿಸುವುದಕ್ಕೆ ಎಲ್ಲರನ್ನೂ ಕರೆದೆವು''. 

''ಏನು ದೊಡ್ಡಪ್ಪ ಅಂತಹ ಸಮಾಚಾರ?''

''ಏನ್ರಪ್ಪಾ ನೀವೆಲ್ಲ ಚೆನ್ನಾಗಿದ್ದೀರಿ, ತುಂಬಾ ಅನ್ಯೋನ್ಯವಾಗಿಯೂ ಇದ್ದೀರಿ ಸಂತೋಷ. ನಾವು ಚೆನ್ನಾಗಿದ್ದೀವಿ. ಸುಖವಾಗಿಯೂ ಇದ್ದೀವಿ. ಈಗ ಏನಪ್ಪ ಅಂದ್ರೆ ನಮ್ಮ ಹತ್ತಿರ ಏನು ಬಹಳ ಅಸ್ತಿ ಇಲ್ಲ. ಇರುವುದನ್ನು ನಿಮಗೆ ಕೊಟ್ಟಿದ್ದೇವೆ. ಈಗ ಬ್ಯಾಂಕಿನಲ್ಲಿ ಒಂದಿಷ್ಟು ಕ್ಯಾಶ್ ಇದೆ. ಅದನ್ನು ನಿಮಗೆಲ್ಲ ಸಮನಾಗಿ ಕೊಡಬೇಕು ಎಂದು ಯೋಚಿಸಿದ್ದೇವೆ. ನಮ್ಮಿಬ್ಬರ  ನಿವೃತ್ತಿ ವೇತನ ನಾವಿರುವವರೆಗೆ ಸಾಕು. ನಮ್ಮ ಖರ್ಚಿಗೆ ......''

''ಈಗ ಈ ವಿಷಯ ಯಾಕಪ್ಪ?''

''ಯಾಕೆ ಅಂದರೆ ಅದಕ್ಕಿಂತ ಮುಖ್ಯವಾದ ಒಂದು ವಿಷಯ ನಿಮಗೆ ಹೇಳುವುದಿದೆ. ನಾವು ಹೀಗೆ ನಮ್ಮದಾದ್ದನ್ನೆಲ್ಲ ನಿಮಗೆ ಬಿಟ್ಟಿದ್ದೇವೆ. ಈಗ ನಮ್ಮ ನಿವೃತ್ತಿ ವೇತನದೊಡನೆ ನಾವಿಬ್ಬರು ಕಲ್ಯಾಣಮ್ಮನ ''ಆಸರೆ ಮನೆ'' ಗೆ ಹೋಗಿ ಕೊನೆಗಾಲದಲ್ಲಿ ನಾವು ಅಲ್ಲೇ ಇದ್ದು ಅಲ್ಲಿನ ಮಕ್ಕಳಿಗಾಗಿ ಒಂದಿಷ್ಟು ಸೇವೆ ಮಾಡೋಣ ಅಂತ ತೀರ್ಮಾನಿಸಿದ್ದೇವೆ. ಇದು ನಮ್ಮ ಅಂತಿಮ ತೀರ್ಮಾನ. ಇದನ್ನು ನೀವ್ಯಾರು ಪ್ರಶ್ನಿಸುವಂತಿಲ್ಲ.. ನೀವು ಬೇಕಾದಾಗ ನಮ್ಮನ್ನು ನೋಡಲು ಬರಬಹುದು. ಅದಕ್ಕೇನು ಅಭ್ಯಂತರವಿಲ್ಲ. ನಮಗೂ ನಿಮ್ಮನ್ನೆಲ್ಲ ನೋಡಬೇಕೆನಿಸಿದಾಗ ಬರುತ್ತಾ ಹೋಗುತ್ತಾ ಇರುತ್ತೇವೆ. ಅದನ್ನು ನಿಮಗೆಲ್ಲ ತಿಳಿಸಬೇಕೆಂದೇ ಎಲ್ಲರನ್ನೂ ಒಟ್ಟಿಗೆ ಸೇರಿಸಿದೆವು'' ಎಂದು ಹೇಳುತ್ತ  ಸೊಸೆಯ ಮುಖ ನೋಡುತ್ತ ''ಏನಮ್ಮ ನಾವು ನಾಳೆ ಹೊರಡಬೇಕೆಂದಿದ್ದೇವೆ. ಊಟದ ವ್ಯವಸ್ಥೆ ಏನಾದರು ಉಂಟೊ ಇವತ್ತು'' ಎಂದರು. ಸೊಸೆಯಂದಿರು ಅಡಿಗೆ ಮನೆಯ ಕಡೆ ನಡೆದರು. ಯಾರಿಗೂ ಮಾತನಾಡುವ ಮನಸ್ಸೇ ಇರಲಿಲ್ಲ. ಚೆನ್ನಾಗಿದ್ದಾಗಲೆ ಒಳ್ಳೆಯ ಸಮಯದಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಹಿರಿಯರಿಲ್ಲದ ಮನೆ ಹೇಗಿರುವುದು ಎಂದು ಮಕ್ಕಳು ಯೋಚಿಸಿದರು. 

**************

ಬೆಳಗಿನ ಹತ್ತು ಗಂಟೆ ಸಮಯ. ಎಂದಿನಂತೆ ಕಲ್ಯಾಣಿ- ನಿರಂಜನ ಸಿಟಿ ಕಡೆ ಹೋಗಿದ್ದರು. ಮೂರ್ತಿ Bank ಕಡೆ ಹೋಗಿ ಆಗಿತ್ತು. 

ಒಂದು ಆಟೋ ಬಂದು ಆಸರೆ ಮನೆಯ ಮುಂದೆ ಬಂದು ನಿಂತಿತು. ಅದರಿಂದ ಇಳಿದ ಇಬ್ಬರಲ್ಲಿ ಚಿಕ್ಕವರು ಗೇಟು ತೆಗೆದು ಒಳ ಬಂದರು. ಆಗ ತಾನೇ ಮಾತನಾಡಲು ಕನ್ನಡ ಕಲಿಯುತ್ತಿದ್ದ ಡಾ|| ವಿಶಾಲ್ ಬಂದವರನ್ನು ತನ್ನದೇ ಹಿಂದಿ ಕನ್ನಡ ದಾಟಿಯಲ್ಲಿ ಬನ್ನಿ ಅಂದರ್ ಬನ್ನಿ ಎಂದು ಆಹ್ವಾನಿಸಿದ. ಒಳಗಿನಿಂದ ಕಸಗುಡಿಸುತ್ತಿದ್ದ ನಿಂಗಮ್ಮ ಪೊರಕೆ ಒಳಕ್ಕೆ ಹಾಕಿ ''ವಿಶಾಲಪ್ಪ ಏನದು ಅಂದ್ರ ಪಂದ್ರ ಅಂತೀರಿ, ಒಳಗೆ ಬನ್ನಿ'' ಎಂದು ಕರೆಯಿರಿ ಎಂದಳು . 

ಬಂದವರಿಬ್ಬರು ಒಳಗೆ ಬಂದು ವರಾಂಡದಲ್ಲಿ ಕುಳಿತರು. ತಮ್ಮ ಸೂಟ್ ಕೇಸ್ ಗಳನ್ನಿಟ್ಟು.  ಮುಕ್ತಾ  ಒಳಗಿನಿಂದ ಪಾನಕ ತಂದು ಮುಂದೆ ಹಿಡಿದಳು. ಇಬ್ಬರು ಪಾನಕ ಕುಡಿದು ಲೋಟ ಕೆಳಗಿಟ್ಟಾಗ ಕಲ್ಯಾಣಿ ನಿರಂಜನ ಮಾರುತಿ ವ್ಯಾನ್ ನಿಂದ ಇಳಿದು ಬಂದರು. ಬಂದವರು ಆಗಂತುಕರನ್ನು ನೋಡಿ ಕೈ ಮುಗಿದರು. ''ಅಮ್ಮಾ ತಾವು ಕಲ್ಯಾಣಮ್ಮ ತಾನೇ'' ಎಂದರು. ''ಹೌದು ..ತಾವು?'' ಎಂದಳು. ನಾವು ಅಣ್ಣ ತಮ್ಮಂದಿರಮ್ಮ 

''ನಾನು ಜಯರಾಮ, ಇವನು ನನ್ನ ತಮ್ಮ ಶಾಂತಾರಾಮ. ನಾವು ನಿಮ್ಮಲ್ಲಿ ಇರಲು ಬಂದಿದ್ದೇವಮ್ಮ. ನೀವು ಸಮ್ಮತಿಸಿದರೆ ನಾವಿಬ್ಬರು ಇಲ್ಲೇ ಇರುತ್ತೇವೆ''. 

''ಧಾರಾಳವಾಗಿ ಇಲ್ಲಿ ಯಾರು ಬೇಕಾದರೂ ಆಸರೆ ಪಡೆಯಬಹುದು'' ಎಂದಳು ಕಲ್ಯಾಣಿ. 

''ಅಮ್ಮಾ ನಾವು ಉತ್ತಮವಾದ ನಗುನಗುತ್ತಾ ಇರುವ ತುಂಬು ಸಂಸಾರದ ಮನೆಯಿಂದ ನಗುನಗುತ್ತಲೇ ಬಂದಿದ್ದೇವೆ. ನಮಗೆ ಮನೆಯಲ್ಲಿರಲು ಏನು ತೊಂದರೆ ಇಲ್ಲ. ಆದರೂ ಇಲ್ಲಿ ಇರಬೇಕೆಂದು ಬಯಸಿ ಬಂದಿದ್ದೇವೆ. ನಮ್ಮಿಬ್ಬರಿಗೂ ಸಾಕಷ್ಟು ಪೆನ್ ಷನ್ ಹಣ ಬರುತ್ತದೆ. ಅದನ್ನು ನಿಮ್ಮ ಕೈಗೆ ಹಾಕಿ ನಾವು ಶಿಕ್ಷಕರಾಗಿದ್ದರಿಂದ ಇಲ್ಲಿರುವ ಮಕ್ಕಳಿಗೆ ನಮಗೆ ತಿಳಿದ ಪಾಠ ಹೇಳಿಕೊಡುತ್ತ ಇರಲು ಬಯಸಿದ್ದೇವೆ. ನಮ್ಮನ್ನು ನೋಡಬೇಕೆನಿಸಿದಾಗ ನಮ್ಮ ಮನೆಯವರು ನಮ್ಮನ್ನು ನೋಡಲು ಬರುವುದಕ್ಕೆ ನಿಮ್ಮ ಅನುಮತಿ ಬೇಕಮ್ಮ''

''ಖಂಡಿತ ಮೇಷ್ಟ್ರೆ ಬರಲಿ ಸಂತೋಷ. ನಿಮ್ಮವರೆಂದ ಮೇಲೆ ಅವರು ನಮ್ಮವರೂ ಹೌದು'' ಎಂದಳು ಕಲ್ಯಾಣಿ. 

ನಿಂಗಮ್ಮನನ್ನು ಕೂಗಿ ಅವರ ಸೂಟ್ ಕೇಸ್ ಗಳನ್ನೂ ರೂಮಿನಲ್ಲಿಡಲು ಹೇಳಿದ ಕಲ್ಯಾಣಿ ''ಮುಕ್ತಾ ಪಾನಕ ಕೊಡಮ್ಮ'' ಎಂದಳು. ನಿಂಗಮ್ಮನೇ ''ಆಯಿತ್ರಮ್ಮ'' ಎಂದಳು. ಹೀಗೆ ನಗುನಗುತ್ತ ಬಂದು ಆಸರೆಮನೆಯ ಸದಸ್ಯರಾಗಿ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತವರು ಶಾಂತಾರಾಮ, ಜಯರಾಮ ಅಣ್ಣತಮ್ಮಂದಿರು. 

ಅಳಬೇಕು ನಗಬೇಕು, ಸಮತೆ ಶಮವಿರಬೇಕು|

ಹೊಳೆಯ ನೆರೆವೊಲು ಹೃದಯರಸ ಹರಿಯಬೇಕು|| 

ಅಲೆಯನಲುಗದ ಬಂಡೆಯವೊಲಾತ್ಮವಿರಬೇಕು| 

ತಿಳಿದವರಚರಿತವದು ಮಂಕುತಿಮ್ಮ|| 

*************      

ಜನನೀ  ಜನ್ಮ ಭೂಮಿಶ್ಚ

ಗೋಪಾಲ-ಶಾಂಭವಿ ಗಂಡ ಹೆಂಡಿರಾದದ್ದು ಆಕಸ್ಮಿಕ. ಬೇರೆ ಯಾವುದೋ ವಧುವನ್ನು ವೀಕ್ಷಿಸಲು ಒಂದು ಮದುವೆ ಮನೆಗೆ ಬಂದಿದ್ದ ಗೋಪಾಲ ತಾನು ನೋಡಲು ಬಂದಿದ್ದ ಹುಡುಗಿಯನ್ನು ಬಿಟ್ಟು ಶಾಂಭವಿಯನ್ನು ನೋಡುತ್ತಲೇ ತನ್ನ ಸಮ್ಮತಿ ಸೂಚಿಸಿದ. 

ಜಾತಕ, ವರಸಾಮ್ಯ ಎಲ್ಲ ಸರಿಹೋದ ಮೇಲೆ ಎರಡೂ ಕಡೆಯ ಹಿರಿಯರು ಮದುವೆಗೆ ಸಮ್ಮತಿಯ ಮುದ್ರೆ ಒತ್ತಿದರು. ಕಾಕತಾಳಿಯವೋ ಎನ್ನುವಂತೆ ಎರಡು ಮನೆಯವರು ದತ್ತ  ಭಕ್ತರು. ದತ್ತ ಜಯಂತಿಯನ್ನು ಎರಡೂ ಮನೆಯವರು ಅದ್ದೂರಿಯಾಗಿ ಆಚರಿಸುವ ಸಂಪ್ರದಾಯವಿದ್ದವರು. ಗೋಪಾಲ ತಾಯಿ ತಂದೆಗೆ ಒಬ್ಬನೇ ಮಗ. ಶಾಂಭವಿಗೆ ಮಾತ್ರ ಒಬ್ಬ ಅಣ್ಣ ಇದ್ದ. ಹುಡುಗ ಒಂದು ಸಾಮಾನ್ಯ ನೌಕರಿಯಲ್ಲಿದ್ದರು ಮರ್ಯಾದವಂತ. ಶಾಂಭವಿಯ ತಂದೆ ತಾಯಿಗಳು ಸಂಭಾವಿತ ಹುಡುಗ, ಒಳ್ಳೆಯ ಮನೆತನ ಎನ್ನುವ ಕಾರಣದಿಂದ ಮದುವೆಗೆ ಒಪ್ಪಿದರು. 


ಭಾಗ ೧೨ ರಲ್ಲಿ ಮುಂದುವರೆಯುವುದು ........

Comments