ಮೂಡಿಗೆರೆಯ ನಿರುತ್ತರೆ: ಶ್ರೀಮತಿ ರಾಜೇಶ್ವರಿ ತೇಜಸ್ವಿ.

ಮೂಡಿಗೆರೆಯ ನಿರುತ್ತರೆ: ಶ್ರೀಮತಿ ರಾಜೇಶ್ವರಿ ತೇಜಸ್ವಿ.

 ಲೇಖನ  - ಡಾ ಮಂಜುಳಾ ಹುಲ್ಲಹಳ್ಳಿ.



  ‘ಅಮ್ಮಾ ಅದೆಷ್ಟು ಸೊಗಸು ತುಂಬಿದ ರೋಮಾಂಚನಕಾರಿ ಬದುಕು ನಿಮ್ಮದು! ಇಬ್ಬರು ಮಹಾನ್ ಸಾಹಿತಿಗಳ ನಡುವೆ ಅರ್ಥಪೂರ್ಣ ಬದುಕು ಕಂಡವರು ನೀವು. ನಿಮ್ಮ  ಜೊತೆ ತುಂಬಾ ಮಾತನಾಡಬೇಕೆನ್ನಿಸುತ್ತದೆ.... ನಿಮ್ಮ ಜೀವನದ ಬಗೆಗೆ ತುಂಬಾ ತುಂಬಾ ಬರೆಯಬೇಕೆನ್ನಿಸುತ್ತದೆ...’  ಮೂಡಿಗೆರೆಯ ನಿರುತ್ತರದ ಸೊಗಸಿನ ಮನೆಯ ಅಂಗಳದಲ್ಲಿ ಕುಳಿತು, ಆರ್ಕಿಡ್ ಹೂಗಳ ಸೊಬಗನ್ನು ಆಸ್ವಾದಿಸುತ್ತಾ, ನೂರಾರು ಹಕ್ಕಿ ದನಿಗಳ ಚಿಲಿಪಿಲಿಗಳನ್ನು ಆಲೈಸುತ್ತಾ, ಪರ್ಕ್ಯುಲೇಟರ್ ಕಾಫಿಯ ಅಪೂರ್ವ ಸ್ವಾದವನ್ನು ಸವಿಯುತ್ತಾ  ರಾಜೇಶ್ವರಿಯವರೊಂದಿಗೆ ಮಾತನಾಡುತ್ತಿದ್ದಾಗ ಭಾವ ಪರವಶವಾದ ಮನಸ್ಸು ಆಡಿದ ಮಾತುಗಳಿವು. ತುಂಬು ಬೆಳದಿಂಗಳಿನ ನಗೆ ನಗುತ್ತಾ ಅಮ್ಮ ಹೇಳಿದ್ದು, ‘ಅದಕ್ಕೇನಂತೆ? ಧಾರಾಳವಾಗಿ ಬನ್ರಿ. ನಿಮ್ಮ ಗೆಳತಿ ಪೂರ್ಣಿಮಾ ಅವರನ್ನೂ ಕರೆದುಕೊಂಡು ಬನ್ನಿ. ಬೇಕಾದಷ್ಟು ಮಾತಾಡೋಣ. ಈಗೇನು ಅಂಥಾ ಕೆಲಸಗಳೂ ಇಲ್ಲ. ಸಾಹಿತ್ಯದ ಮಾತಾಡೊದಂದ್ರೇ ನನಗೂ ಆನಂದಾನೆ!’  


     ಐದಾರು ವರ್ಷಗಳ ಸತತ ಸಾಂಗತ್ಯದಲ್ಲಿ ನಮ್ಮ ಮಾತುಗಳು ಎತ್ತೆತ್ತ ಹೊರಳಿದರೂ ಕಡೆಗೆ ಬಂದು ನಿಲ್ಲುತ್ತಿದ್ದುದು ಬರೆಹದ ಕಡೆಗೇ! ಈ ಅವಧಿಯಲ್ಲಿ ತಮ್ಮ ಬರೆಹಗಳ ಮೂಲಕ ಆತ್ಮ ವಿಶ್ವಾಸವನ್ನು, ತೇಜಸ್ವಿ ಸ್ಮರಣೆಯಲ್ಲೇ ಆತ್ಮ ತೃಪ್ತಿಯನ್ನು, ನಿರುತ್ತರದ ವಾತಾವರಣದಲ್ಲಿ ಆತ್ಮ ದೀಪ್ತಿಯನ್ನು ಪಡೆದಿದ್ದ ರಾಜೇಶ್ವರಿ ತೇಜಸ್ವಿಯವರನ್ನು ಕಣ್ತುಂಬಾ ನೋಡುವುದು, ಅವರ ಮಾತುಗಳ ಮಾಧುರ್ಯವನ್ನು ಮನದ ತುಂಬಾ ಆಸ್ವಾದಿಸುವುದು ಮತ್ತು ಅವರು ಹೃದಯ ತುಂಬಿ ನಗುವುದನ್ನು ಭಾವಪೂರ್ಣವಾಗಿ ಆನಂದಿಸುವುದು ಇಂಥ ದಿನಗಳಿಗೆ ಲೆಕ್ಕವೇ ಇಲ್ಲ.


     ಗೆಳತಿ ಡಾ. ಟಿ.ಸಿ ಪೂರ್ಣಿಮಾ ಅವರ ವಿಶೇಷ ಆಸಕ್ತಿಯಿಂದ ಅವರೊಂದಿಗೆ ನಾನು ಸೇರಿ ರಚಿಸಿದ ಕೃತಿ ‘ದಿಟದ ಮನೆ’.  ಇದರಲ್ಲಿ ಶ್ರೀ ಕುವೆಂಪು ಸಾಹಿತ್ಯದಲ್ಲಿ ಸಾವಿನ ಪರಿಕಲ್ಪನೆಯ ಹುಡುಕಾಟವಿದೆ. ಈ ಕೃತಿಯನ್ನು ರಾಜೇಶ್ವರಿ ತೇಜಸ್ವಿಯವರಿಗೆ ಮೊದಲ ಭೇಟಿಯಲ್ಲಿಯೇ ಸಲ್ಲಿಸಿದ್ದೆ. ಒಂದುವಾರ ಬಿಟ್ಟು ಮತ್ತೇ ಮೂಡಿಗೆರೆಗೆ ಭೇಟಿ ನೀಡುವ ಅವಕಾಶ ಬಂದಾಗ ಮೊದಲು ಹೋದದ್ದೇ ನಿರುತ್ತರಕ್ಕೆ. ನನ್ನನ್ನು ನೋಡಿದ ಕೂಡಲೇ ‘ಅಲ್ಲಾ ಕಣ್ರೀ, ಅದೆಷ್ಟು ತರದಲ್ಲಿ ಸಾವನ್ನು ಹುಡುಕಿದೀರಲ್ರೀ! ಕುವೆಂಪು ಅವರಿಗೂ ಆಶ್ವರ್ಯ ಆಗ್ತಿತ್ತೇನೋ!  ಸಾವಿನ  ಬಗ್ಗೆ ಮಾತಾಡಿದಷ್ಟೂ ಮುಗಿಯೋದಲ್ವಲ್ಲಾ! ಯಾವಾಗ ಕರ್ಕೊಂಡು ಬತ್ತೀರಿ, ನಿಮ್ಮ ಗೆಳತಿ ಪೂರ್ಣಿಮಾ ಅವರನ್ನು?’ ಎಂದ ವಿಶ್ವಾಸದ ನುಡಿಗಳು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿವೆ.


      ಇತ್ತೀಚಿನ ಭೇಟಿಯಲ್ಲಿ ತೇಜಸ್ವೀ ಪ್ರತಿಷ್ಠಾನದ ಮ್ಯೂಸಿಯಂಗೆ ಕೊಡಬೇಕಾಗಿರುವ ವಸ್ತುಗಳ ಪಟ್ಟಿ ಮಾಡುತ್ತಿದ್ದರು. ಅವುಗಳ ಬಗೆಗೆ ತಮ್ಮ ಅರಿವಿನ ಅನುಭವದ ಭಂಡಾರದಿಂದ ಹೆಕ್ಕಿದ ಮಾಹಿತಿಗಳನೆಲ್ಲಾ ಟಿಪ್ಪಣಿ ಮಾಡಿಕೊಳ್ಳುತ್ತಾ; ಆ ವಸ್ತುಗಳ ಬಗೆಗೆ, ಆ ವಸ್ತುಗಳು ಈ ಮನೆಗೆ ಆಗಮಿಸಿದ ಸಂದರ್ಭದ ಬಗೆಗೆ; ಅವುಗಳ  ಬಗೆಗೆ ತೇಜಸ್ವಿ ಅವರಿಗೆ ಮತ್ತು ತಮಗೆ ಇದ್ದ ಭಾವನಾತ್ಮಕ ಸಂಬಂಧಗಳ ಬಗೆಗೆ ವರ್ಣಿಸುತಿದ್ದರೆ ಕೇಳ ಕೇಳುತ್ತಲೇ ಪುಳಕ ಆವರಿಸುತ್ತಿತ್ತು. 'ಹೀಗೆ ಬರೆದುಕೊಳ್ಳುವ ಕೆಲಸವನ್ನು ನನಗೇ ಕೊಡಿ’ ಎಂದು ಕೇಳಿಯೇ ಬಿಟ್ಟೆ.  ಆಗ ಅವರು ನಗುತ್ತಾ ಎಂದದ್ದು, ‘ಒಂದು ವಾರ ರಜಾ ಹಾಕಿ ಬಂದುಬಿಡಿ. ಅದು ಸರಿ, ಮನೆ, ಗಂಡ, ಸಂಸಾರ ಏನು ಮಾಡ್ತೀರಿ? ನೋಡಿ, ಏನೇ ಮಾಡಿದ್ರೂ, ಎಷ್ಟೇ ಆಸೆ ಇದ್ದರೂ ಮನೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಲ್ಲವಾ?’ ಅವರ ಕಣ್ಣುಗಳ ಕಾಂತಿಗೆ ನನ್ನ ಧ್ವನಿಯೂ ಸೇರಿ ‘ಹೌದು’ ಎಂದಿತ್ತು.


     ಕೊರೋನಾ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದ ರಾಜೇಶ್ವರಿ ಅಮ್ಮನಿಗೆ ನಿರುತ್ತರಕ್ಕೆ ಬರುತ್ತಿದ್ದ ಸಂದರ್ಶಕರನ್ನು ಸಂಭಾಳಿಸುವದೇ ಒಂದು ದೊಡ್ಡ ಸವಾಲಾಗಿತ್ತು. ಕುವೆಂಪು, ತೇಜಸ್ವಿ ಮತ್ತೀಗ ರಾಜೇಶ್ವರಿ ಹೆಸರು ಹೇಳಿಕೊಂಡು ಬರುತ್ತಿದ್ದ ತಂಡ ತಂಡಗಳು! ಇವರಲ್ಲಿ ನೂರಕ್ಕೆ ಹತ್ತು ಭಾಗ ಮಾತ್ರ ನಿಜವಾದ ಆಸಕ್ತಿಯಿಂದ ಬರುವವರು. ಉಳಿದವರಿಗೆ ಇದೂ ಒಂದು ಪ್ರವಾಸಿತಾಣ ಎನ್ನುವಷ್ಟು ನಿರ್ಲಕ್ಷ್ಯ. ಇದಕ್ಕಾಗಿ ರಾಜೇಶ್ವರಿ ತೇಜಸ್ವಿ ಕಂಡುಕೊಂಡ ಉಪಾಯ, ಕುವೆಂಪು ಅಥವಾ ತೇಜಸ್ವಿ ಅವರ ಒಂದು ಕೃತಿಯ ಬಗೆಗೆ ಒಂದೆರಡು ನಿಮಿಷ ಮಾತನಾಡಿದರೆ ತೋಟ ನೋಡಲು ಬಿಡುವುದು!  ಇಂಥ ಸಮಯದಲ್ಲಿ ಪಠ್ಯ ಪುಸ್ತಕಗಳಾಗಿ ಪರಿಚಿತವಾಗಿದ್ದ ‘ಕರ್ವಾಲೋ’ ಮತ್ತು ‘ಕೃಷ್ಣೇಗೌಡರ ಆನೆ’ ಬಹುತೇಕರಿಗೆ ನಿರುತ್ತರದ ಸಂದರ್ಶನದ ‘ಪಾಸ್’ ಆಗಿ ಕೆಲಸ ಮಾಡುತ್ತಿದ್ದುವು! ರಾಜೇಶ್ವರಿ ಇದನ್ನೂ ನಗುತ್ತಾ ಹೇಳಿಕೊಳ್ಳುತ್ತಿದ್ದರು.


     ರಾಜೇಶ್ವರಿ ಅವರನ್ನು ಇತ್ತೀಚೆಗೆ ಅತೀವವಾಗಿ ಕಾಡುತ್ತಿದ್ದ ಸುಸ್ತು, ಅದಕ್ಕೆ ಕಾರಣವಾಗಿದ್ದ ಅನಿಮಿಯಾದಂಥ ತೊಂದರೆಗಳ ಬಗೆಗೆ ಸಾಕಷ್ಟು ಕಳವಳ ಇದ್ದಿತು. ಜೊತೆಗೆ ಇತ್ತೀಚಿನ ಔಷಧಿಗಳು ಬಹಳಷ್ಟು ಒಳ್ಳೆಯ ಗುಣಮಟ್ಟದವು ಹಾಗಾಗಿ ತಾವು ಬೇಗ ಸುಧಾರಿಸಿಕೊಳ್ಳುತ್ತೇನೆಂಬ ಆತ್ಮ ಚೈತನ್ಯವೂ ಇದ್ದಿತು. ಆದರೆ... ಇಷ್ಟು ಬೇಗ ನಿರುತ್ತರಾ ನಿರುತ್ತರೆಯಾಗಿ ನಿಲ್ಲಬಹುದೆಂಬ ಕಲ್ಪನೆಯೂ ಇರಲಿಲ್ಲ.


    ಶ್ರೀ ಕುವೆಂಪು ಬಾಂಧವ್ಯ ಚಿಕ್ಕಮಗಳೂರು ಜಿಲ್ಲೆಯ ಜೊತೆಯಲ್ಲಿ ಒಂದು ವಿಶಿಷ್ಟವಾದ ರೀತಿಯಲ್ಲಿ ತಳುಕುಹಾಕಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೂಡಿಗೆಯ ಸೀತಮ್ಮನವರು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯ ವೆಂಕಟಪ್ಪನವರನ್ನು ವಿವಾಹವಾದರು. (ಬೇರೆ ತಾಲ್ಲೂಕು, ಬೇರೆ ಜಿಲ್ಲೆಗಳಿಗೆ ಸೇರಿದ ಈ ಎರಡೂ ಊರುಗಳ ಅಂತರ ಆರೇಳು ಕಿಲೋಮೀಟರ್ ಮಾತ್ರವೇ!) ಆದರೆ, ಕುವೆಂಪು ಹುಟ್ಟಿದ್ದು ಹಿರೇಕೂಡಿಗೆಯ ಮನೆಯಲ್ಲಿಯೇ!


    ಶ್ರೀ ಕುವೆಂಪು ಅವರ ಹಿರಿಯ ಮಗ ಪೂರ್ಣ ಚಂದ್ರ ತೇಜಸ್ವಿ ಹುಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರಿನಲ್ಲಿ, ಆದರೆ ವಿವಾಹವಾಗಿ ನೆಲೆ ನಿಂತದ್ದು ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆಯಲ್ಲಿ! ಇದಕ್ಕೆ ಮುಖ್ಯ ಕಾರಣ ತೇಜಸ್ವಿ ಎಂಬ ಅಪೂರ್ವ ಚೈತನ್ಯದ ಸಲಗದಂತಹ ಸ್ವೇಚ್ಛಾ ಪ್ರಕೃತಿಗೆ ಪ್ರೀತಿಯ ಅಂಕುಶವಾಗಿದ್ದ ರಾಜೇಶ್ವರಿ!


    ರಾಜೇಶ್ವರಿ- ತೇಜಸ್ವಿ ಅವರ ಪ್ರೇಮಲತೆ ಕುಡಿಯೊಡೆದದ್ದು  ಮೈಸೂರಿನ ಮಹಾರಾಜ ಕಾಲೇಜಿನ ಅಂಗಳದಲ್ಲಿ,1960 ರಲ್ಲಿ.  ಇವರಿಬ್ಬರಿಗೂ ಸ್ನೇಹಿತರಾಗಿದ್ದ ಜೂಲಿಯಟ್ ವೆನ್ನಿ ಮತ್ತು ಕೃಷ್ಣಮೂರ್ತಿ ಅವರಿಂದ ಆದ ಪರಿಚಯದ ಸ್ನೇಹ ಲಹರಿಗಳು ಪ್ರಿತಿ ಪ್ರೇಮಗಳ ಕಡೆಗೆ ಇಬ್ಬರ ಅರಿವಿಗೂ ಬಾರದಂತೆ ಹೊರಳಿಕೊಂಡಿತ್ತು.  ಯಾವಾಗಲೂ ಶುಭ್ರವಾದ ಇಸ್ತ್ರಿಯಾದ ಬಿಳಿ ಉಡುಪಿನ ತೇಜಸ್ವಿಯನ್ನು ಕಂಡರೆ ರಾಜೇಶ್ವರಿಗೆ ಹೇಳಲಾರದ ಖುಷಿ! ಸರಳಸೌಂದರ್ಯದ ರಾಜೇಶ್ವರಿ ಎಂದರೆ ತೇಜಸ್ವಿಗೆ ವರ್ಣಿಸಲಾರದ ಆತ್ಮೀಯತೆ. ಮಹಾರಾಜ ಕಾಲೇಜಿಗೆ ಸ್ವಲ್ಪ ದೂರದಲ್ಲಿದ್ದ ಹೊಂಗೆಯ ಮರ ಇವರಿಬ್ಬರಿಗಿಂತಲೂ ಹೆಚ್ಚಾಗಿ ಇವರಿಬ್ಬರ ಹೃದಯದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿತ್ತು!


         ಅನೇಕ ರೀತಿಯ ಕಾರಣಗಳಿಗಾಗಿ 1961 ರಿಂದ 1966 ರವರಿಗೆ ಆರು ವರ್ಷಗಳಷ್ಟು ಸುದೀರ್ಘ ಕಾಲ ಇವರ ವಿವಾಹಕ್ಕೆ ಸಂದರ್ಭ ಕೂಡಿಬರಲಿಲ್ಲ. ಇಷ್ಟೂ ಕಾಲ ತಮ್ಮ ಹೃದಯದಲ್ಲಿ ಹಚ್ಚಿದ್ದ ಪ್ರೀತಿಯ ನಂದಾದೀಪವನ್ನು ಮಂತ್ರ ಮಾಂಗಲ್ಯವೆಂಬ ಮಂಗಲದೀಪದೊಡನೆ ಜೋಡಿಸಿಕೊಳ್ಳಲು ರಾಜೇಶ್ವರಿ  ಮೂಡಿಗೆರೆಯ ಭೂತನಕಾಡಿನಲ್ಲಿ ಅಕ್ಷರಶಃ ತಪವಿದ್ದರು. ಆ ಸಮಯದ ಅವರ ಮನದ ತಲ್ಲಣಗಳನ್ನು  ರಾಜೇಶ್ವರಿ ಅವರಿಗೆ ತೇಜಸ್ವಿ ಅವರು ಬರೆದಿರುವ ಪತ್ರಗಳು ಅನಾವರಣ ಮಾಡುತ್ತವೆ. ಈ ಕೃತಿಯಲ್ಲಿ ತಮ್ಮ ಪ್ರೇಮ ಪ್ರಸಂಗಗಳನ್ನು, ತಮಗೆ ಎದುರಾದ ಸವಾಲುಗಳನ್ನು, ಆ ಸವಾಲುಗಳನ್ನು ಅತ್ಯಂತ ಹೃದಯಂಗಮವಾಗಿ ಎದುರಿಸಿದ ಪರಿಯನ್ನು ಅತ್ಯಂತ ಸ್ಫುಟವಾಗಿ ದಾಖಲಿಸಿದ್ದಾರೆ. (ನನ್ನ ತೇಜಸ್ವಿ ಕೃತಿಯಲ್ಲಿ ‘ಪತ್ರಗಳು’ ಅಧ್ಯಾಯ ಪು-29 ರಿಂದ 75 ರವರೆಗೆ).


     ತೇಜಸ್ವಿ ಪ್ರೀತಿಯ ಧಾಟಿಯನ್ನು 1964 ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ರಾಜೇಶ್ವರಿಗೆ ಬರೆದ ಪತ್ರ ಅದ್ವಿತೀಯವಾಗಿ ಹೊರಹೊಮಿಸುತ್ತಿದೆ.  ‘..... ನೀನು ನನ್ನ ತಂಟೆಗೆ ಬರೋದು ಬೇಡ. ನಿನ್ನ ಮುಟ್ಟಾಳತನವನ್ನೆಲ್ಲಾ  ರಿಪೇರಿ ಮಾಡೋದರಲ್ಲಿ ನನ್ನ ಜೀವನವೇ ವ್ಯಯವಾಗಿದೆ. ಕತ್ತೆ, ನೀನು ನನ್ನನ್ನು ಏನೆಂದು ತಿಳಿದುಕೊಂಡಿದೀಯ? ... ಏನು ಹೇಳಿದರೂ ನಿನಗೆ ಪ್ರಯೋಜನವಿಲ್ಲ. ನಿನ್ನೆದುರೇ ವಿಷ ಕುಡಿದು ಸತ್ತರೂ ಅರ್ಥವಾಗದ ತಿಳಿಗೇಡಿ ಮೂರ್ಖ ರ‌್ಯಾಸ್ಕಲ್ ನೀನು...  ಇನ್ನು 'ನಮ್ಮಪ್ಪನಾಣೆ ನೀವು ಹೇಳಿದ ಮಾತು ಕೇಳ್ತೀನಿ. ಅವಿವೇಕ ತಿಳಿಗೇಡಿತನ ಮಾಡೊಲ್ಲ' ಎಂದು  ಭಾಷೆ ಕೊಟ್ಟರೇ ನಾನು ಕಾಗದ ಬರೆಯೋದು, ಭೂತನ ಕಾಡಿಗೆ ಬರೋದು...  ಥೂ ಯಾರಿಗೆ ಬೇಕು ಹಾಳು ಹುಡುಗಿಯರ ಸಾವಾಸ. ಎಲ್ಲಾ ಮುಟ್ಟಾಳರು ಥತ್...’


     ತೇಜಸ್ವಿ ಸಿಟ್ಟನ್ನು ಓದಿ ಆ ಕ್ಷಣಕ್ಕೆ ತತ್ತರಿಸಿ ಹೋಗಿದ್ದರೂ ಆನಂತರದಲ್ಲಿ ಓದು ಓದುತ್ತಲೇ ಖುಷಿ ಅನುಭವಿಸುವ ರಾಜೇಶ್ವರಿ ಆ ದಿನಗಳಲ್ಲಿ ಇಡೀ ಕುಟುಂಬದೊಡನೆ  ಎದುರಿಸಿದ ದಿಗಿಲು ತಲ್ಲಣಗಳನ್ನು ಆ ಪದಗಳನ್ನು ಬಳಸದೇ ತಾವೇ ಒಂದು ಅಭಿವ್ಯಕ್ತಿಯಾಗಿಬಿಟ್ಟಿದ್ದರು.


    ನಾಲ್ಕಾರು ವರುಷಗಳ ತೀವ್ರ ಪರಿಪಾಟಲು ಪಟ್ಟು ಕಡೆಗೆ 1966ರಲ್ಲಿ ತೇಜಸ್ವಿ ಮುಡಿಗೆರೆ ತಾಲೂಕಿನ ಒಳಾಂತರಾಳದ ಹೊಯ್ಸೊಳಲಿನ ಸಮೀಪದ ತೋಟ ತೆಗೆದುಕೊಂಡ ಸಂದರ್ಭ ಅವರ ಬದುಕಿನ ರೋಮಾಂಚನದ ಗಳಿಗೆಯಾಯಿತು. ಶ್ರೀ ಕುವೆಂಪು ಅವರಿಂದ ‘ಚಿತ್ರಕೂಟ’ ಎಂದು ಕರೆಸಿಕೊಂಡ ಆ ತೋಟದಲ್ಲಿ ಒಂದು ಕಡೆ ಕಾಲೂರಿ ನಿಲ್ಲುವ ಕ್ಷಣ ಬಂತು. ಕಾಯುವಿಕೆ ಸಫಲವಾಯಿತು, ಒಂದಾಗಿ ಬದುಕುವ ಕಾಲ ಬಂದಿತು ಅನ್ನುವುದಕ್ಕಿಂತ ಇನ್ನೇನು ಬೇಕು ಬದುಕನ್ನು ಸಂಭ್ರಮಿಸಲು!


    ‘ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಒಂದು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಕ್ಕುವುದಿಲ್ಲ' ಎಂಬ ತೇಜಸ್ವಿಯವರ ನುಡಿ  ಈ ತೋಟದ ರೂಪದಲ್ಲಿ ಅಕ್ಷರಶಃ ಸಾಕಾರವಾಗಿತ್ತು!


   1966ನೇ ದೀಪಾವಳಿ ಅಮಾವಾಸ್ಯೆಯ ದಿನ ತೇಜಸ್ವಿ ಸ್ಕೂಟರ್ ನಲ್ಲಿ ಬಂದು ಭೂತನಕಾಡು ಮನೆ ಮುಂದೆ ನಿಲ್ಲಿಸಿದರು.  ‘ಹತ್ತು. ನಮ್ಮ ಮನೆಗೆ ಹೋಗೋಣ’ ಎಂದ ಕ್ಷಣದಲ್ಲಿ ರಾಜೇಶ್ವರಿ ಅವರ ಆರು ವರ್ಷಗಳ ಕಾಯುವಿಕೆಗೆ ಅರ್ಥ ಬಂದಿತ್ತು. ತಮ್ಮ ಪ್ರೀತಿಗೆ ಮೌನದಲ್ಲೇ ಬೆಂಬಲ ನೀಡಿ ಬೆನ್ನೆಲುಬಾಗಿ ನಿಂತಿದ್ದ ತಾಯಿಯವರಿಗೆ, ಮನೆಯ ಎಲ್ಲಾ ಬಂಧು ಬಾಂಧವರಿಗೆ ಧನ್ಯತೆಯ ವಂದನೆಗಳನ್ನು ಸಲ್ಲಿಸಿ ಸ್ಕೂಟರ್ ಹತ್ತಿ ರಾಜಕುಮಾರನ ಸೊಂಟ ಸುತ್ತಿ ಹೊರಟ ಕ್ಷಣಗಳು ರಾಜೇಶ್ವರಿ ಮನದಲ್ಲಿ ನಿತ್ಯ ನೂತನವಾಗಿ ನಿಂತುಬಿಟ್ಟವು!


   ಈ ಸಂದರ್ಭವನ್ನೇ ತೇಜಸ್ವಿ ಅವರು ‘ಸ್ವಾಗತ ಲಹರಿ’ ಹೆಸರಿನ ಕವಿತೆಯಾಗಿಸಿದರು. 1966ರಲ್ಲಿ ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕೆ ‘ನಳಿನೀ ದೇಶಪಾಂಡೆ’ ಹೆಸರಿನಲ್ಲಿ  ಕಳಿಸಿಕೊಟ್ಟಿದ್ದರು.

 ಆ ಕವನದ ಕೊನೆಯ ಭಾಗ ಇದು:

  

‘ಅನಿಸಿದ್ದೆಲ್ಲಾ ಆಗೇ ಬಿಡಲಿ

ಆಟಂ ಬಾಂಬಿನ ಅಣು ಸಮರಕ್ಕೆ

ನಾಂದಿಯಾದರೂ ನನಗೇನಿಲ್ಲ!

ತುಂಟ ಹುಡುಗನ ಸೊಂಟಾ ಸುತ್ತಿ

ಲ್ಯಾಂಬಟಾ, ವೆಸ್ಪಾ ಬೆನ್ನನು ಹತ್ತಿ

ಕೀಲಿ ಕುದುರಿ ರಾಜಕುಮಾರಿ

ಒಮ್ಮೆಯಾದರೂ ಆದೇನು!

ನರಕಕ್ಕೂ  ಹೋದೇನು!'


  ಅಂದ ಹಾಗೇ ಆಗಿನ ರಾಜೇಶ್ವರಿಯನ್ನು ತಾಯಿಯ ಮನೆಯಲ್ಲಿ ಕರೆಯುತ್ತಿದ್ದ ಮುದ್ದಿನ ಹೆಸರು ನಳಿನಾ!


      ಚಿತ್ರಕೂಟದಲ್ಲಿ ತೇಜಸ್ವಿ ಕಟ್ಟಿದ ಮನೆಯಂಗಳದಲ್ಲೇ ಮದುವೆ! 27-11-66ರಂದು ಶ್ರೀ ಕುವೆಂಪು ದಂಪತಿಗಳು ಸಂತಸದಿಂದ ಮಾಡಿದ ಮೊಟ್ಟಮೊದಲ ಮಂತ್ರಮಾಂಗಲ್ಯದ ಸರಳವಿವಾಹ! ಕುವೆಂಪು ಸದಾಶಯದ ಕುಲುಮೆಯಲ್ಲಿ ಮೂಡಿಬಂದ ಈ ಮಂತ್ರಮಾಂಗಲ್ಯ ಮುಂದಿನ ಯುವಪೀಳಿಗೆಗೆ ಮಾರ್ಗದರ್ಶಕವೂ ಆಯಿತು.

  ಮೂಡಿಗೆರೆಯ ಚಿತ್ರಕೂಟ ತೋಟದಲ್ಲಿ ತೇಜಸ್ವಿ-ರಾಜೇಶ್ವರಿಯರ ದಾಂಪತ್ಯದ ಹೆಜ್ಜೆಗಳು ಮೂಡತೊಡಗಿದವು. ಆದರವು ಸಾರ್ಥಕವಾಗಿ ಬೆಳೆದುದು ಹಳೇಮೂಡಿಗೆರೆಯ ನಿರುತ್ತರದ ತೋಟದಲ್ಲಿ.  1977ರಲ್ಲಿ ‘ನಿರುತ್ತರ’ ತೋಟವನ್ನು ತಮ್ಮದಾಗಿಸಿಕೊಂಡರು ತೇಜಸ್ವಿ-ರಾಜೇಶ್ವರಿ ದಂಪತಿಗಳು. ಇದರಿಂದಾಗಿ ಇಲ್ಲಿಗೆ ಸಮೀಪವೇ ಇದ್ದ ಮೂಡಿಗೆರೆಗೆ ಹೊಸ ಹುಮ್ಮಸ್ಸು ಬಂದಂತಾಯಿತು. 

    ತಮ್ಮದೇ ಆದ ವಿಶಿಷ್ಟ ನಿಲುವುಗಳಿಂದ, ಆಲೋಚನೆಗಳಿಂದ, ವಿಧಾನಗಳಿಂದ ತೇಜಸ್ವಿ ಮನೆಮಾತಾದರೆ, ಮೂಡಿಗೆರೆ ಪಟ್ಟಣದಲ್ಲಿ ಕಾರು ಓಡಿಸಿದ ಪ್ರಪ್ರಥಮ ಮಹಿಳೆಯಾಗಿ ರಾಜೇಶ್ವರಿ ಇಡೀ ಊರಿನ ಗಮನ ಸೆಳೆದಿದ್ದರು!

      ರಾಜೇಶ್ವರಿ ಅವರೇ ಹೇಳಿದಂತೆ, ಇಬ್ಬರು ಮಹಾನ್ ಸಾಹಿತಿಗಳನ್ನು ಅತ್ಯಂತ ಹತ್ತಿರದಲ್ಲಿ ಕಂಡ ಅಪೂರ್ವ ಭಾಗ್ಯ ಶಾಲಿಗಳು ಅವರು. ತೇಜಸ್ವಿ ಬದುಕು ಬರೆಹದ ಬೆನ್ನುಲುಬಾಗಿ ನಿಂತವರು. ‘ನನ್ನ ಜೀವಕೆ ಜೀವ ತುಂಬಿ ಬದುಕು ಬಂಗಾರವಾಗಿಸಿದ ನನ್ನ ಪೂರ್ಣ ಚಂದ್ರ ತೇಜಸ್ವಿಗೆ’ ಎಂದು ತಮ್ಮ ಬದುಕನ್ನೇ ಸಮರ್ಪಿಸಿದರವರು.  ಈಗ ಮತ್ತೇ ತೇಜಸ್ವಿಯವರನ್ನು ಸೇರಲು ‘ನಿರುತ್ತರೆ’ಯೂ ಆಗಿದ್ದಾರೆ.  

     ಅರವತ್ತು ವರ್ಷಗಳಿಂದ ರಾಜೇಶ್ವರಿ ಅವರ ಸುದೀರ್ಘ ಸಾಂಗತ್ಯ ಪಡೆದಿದ್ದ ಮೂಡಿಗೆರೆ ಪರಿಸರ ಅವರು ಇನ್ನಿಲ್ಲವೆಂಬ ಶೂನ್ಯವನ್ನು ಅರಗಿಸಿಕೊಳ್ಳಲಾರದೆ ಮೌನವಾಗಿದೆ. ಸಾಂಸ್ಕೃತಿಕ ಮನಗಳು ನಿರುತ್ತರದೆಡೆಗೆ ಸಾಗುತ್ತಿವೆ.


Comments

  1. ಸೊಗಸಾದ ಬರಹ. ಗತದ ಸೊಗಡಿಗೆ ಹಿಡಿದ ದರ್ಪಣ.

    ReplyDelete

Post a Comment