ಖಾರಾಬೂಂದಿಯ ಚೆಲುವ ಸ್ವಾದವ ಎಲ್ಲಿ ನೋಡಿದಿರಿ...

 ಖಾರಾಬೂಂದಿಯ ಚೆಲುವ ಸ್ವಾದವ ಎಲ್ಲಿ ನೋಡಿದಿರಿ...

ಹಾಸ್ಯ ಲೇಖನ - ಅಣುಕು ರಾಮನಾಥ್


ಈ ತಿಂಗಳ ಖಾರಾಬೂಂದಿ ಎಂಬ ವಿಷಯದ ಬಗ್ಗೆ ಬರೆಯಲು ಕೋರಿದವರು - ಶ್ರೀ ನಾಗಶೈಲ ಕುಮಾರ್ , ಸಿಡ್ನಿ 

 United we stand, divided we fall ಎಂದು ಪ್ರಪಂಚವೆಲ್ಲ ಹೇಳಿಕೊಂಡರೂ ನಾವು ಅದನ್ನು ಒಪ್ಪಲು ಸಾಧ್ಯವೇ ಇಲ್ಲ. ಒಂಟಿಯಾಗಿ ಪಾತ್ರೆಯ ತಳದಲ್ಲಿ ಕುಳಿತು, ಪಾತ್ರೆಯತ್ತ ಇಣುಕುನೋಟ ಬೀರಿದ ಚಪಲವದನನನ್ನು 'ಬಾಯಿಗೆ ಹಾಕಿಕೊ ಎನ್ನ; ಸ್ವಾಮಿ; ಖಾರವ ಸವಿಯುವ ಕುರುಕಲು ಜಠರಿ' ಎಂದು 'ದಾಸನ ಮಾಡಿಕೊ ಎನ್ನ' ಸ್ಟೈಲಿನಲ್ಲಿ ಬೇಡಿಕೊಂಡರೂ, 'ಬಿಟ್ಬಿಡೊ ಆಚೆ' ಎಂದು ಷಹಜಹಾನ ಗೋಗರೆದರೂ ದಿವ್ಯ ನಿರ್ಲಕ್ಷ್ಯದಿಂದ ಬೆನ್ನು ತಿರುಗಿಸಿದ ಔರಂಗಜೇಬನಷ್ಟೇ ನಿರ್ಲಕ್ಷ್ಯದಿಂದ ಹೊರಹೋಗುವ ಖಾರಾಹಾರಪ್ರಿಯನು, ನಾನು ಮತ್ತಷ್ಟು ನಮ್ಮವರನ್ನು ಸೇರಿಸಿಕೊಂಡು ಗಲಗಲನೆ ಹರಟೆ ಹೊಡೆಯುತ್ತಾ ಬೇಸಿನ್ನಿನಲ್ಲಿ ಕುಳಿತಿದ್ದರೆ ತನ್ನಿಡೀ ಮುಷ್ಟಿಯನ್ನು ಬೇಸಿನ್ನಿಗೆ ಇಳಿಸಿ, ಸಿನ್ನೇ ಮಾಡದುದರಿಂದ ಬೇ-ಸಿನ್ ಆದ ನಮ್ಮ ಇಡೀ ಖಾರ್‌ದಾನ್... ಕ್ಷಮಿಸಿ... ಖಾನ್‌ದಾನನ್ನು, ಕುಂಭಕರ್ಣನು ಒಂದೊಂದು ಮುಷ್ಟಿಗೆ ಐದಾರು ಡಜನ್ ವಾನರಗಳನ್ನು ಫಿಂಗರ್ ಚಿಪ್ಸ್ನಂತೆ ಮೆಲ್ಲುತ್ತಿದ್ದ ರೀತಿಯಲ್ಲಿಯೇ, ಬಾಯಿಗೆ ತುರುಕಿಕೊಳ್ಳುತ್ತಾನೆ. ನಮ್ಮ ವಿಷಯದಲ್ಲಿUnited we perish, divided we are not cherished!  ಇದೇ ನಮ್ಮ ಹಣೆಬರಹ ಎನ್ನುವುದ ನಿಮಗೆ ತಲೆಬರಹದಲ್ಲೇ ತಿಳಿದುಬಿಟ್ಟಿದೆಯಲ್ಲವೆ? ಆದರೂ... "ವಾಟ್ ಈಸ್ ಯುವರ್ ನೇಮ್ ರಾಜೇಶ್?" ಎಂದು ಕೇಳುವ ಪ್ರೈಮರಿ ಸ್ಕೂಲ್ ಟೀಚರ್‌ಗಳ ಮಟ್ಟದವರಿಗಾಗಿ ನನ್ನ ಪರಿಚಯ ಮಾಡಿಕೊಂಡುಬಿಡುತ್ತೇನೆ - ನಾನು ಸ್ವಾಮಿ, ಖಾರಾಬೂಂದಿಯ ಕಾಳು!

ರಾಜ್ ಕಪೂರ್ ಗೊತ್ತಾ ನಿಮಗೆ? ಗೊತ್ತಿದೆ ಅಂದ್ಮೇಲೆ ಮುಖೇಶನೂ ಗೊತ್ತರ‍್ತಾನೆ. ಯಾವುದೇ ಸಾಂಗ್ ಸೂಪರ್ ಹಿಟ್ ಆಗ್ಬೇಕಾದ್ರೆ ಈ ಜೋಡಿ ಎಷ್ಟು ಅಗತ್ಯವಿತ್ತೋ ಹಾಗೆಯೇ ಓಲ್ಡನ್ ಡೇಸ್‌ನ ಯಾವುದೇ ಸಮಾರಂಭ ಸಕ್ಸಸ್ ಆಗಬೇಕಾದರೆ ಲಾಡು-ಖಾರಾಬೂಂದಿ ಕಾಂಬಿನೇಷನ್ ಅತ್ಯವಶ್ಯ. ಹಾಗಂತ ಮ್ಯಾತಮ್ಯಾಟಿಕ್ಸ್ನಲ್ಲಿ ಹೇಳುವಂತೆ ನನ್ನನ್ನು 'ಡಿಪೆಂಡೆಂಟ್ ವೇರಿಯಬಲ್' ಅಂದ್ಕೊಂಡಿರಿ. ಹೇಮಂತಕುಮಾರ್, ಮನ್ನಾಡೆಗಳ ಜೊತೆಯೂ ರಾಜ್ ಕಪೂರ್ ಹಿಟ್ ಆಗ್ತಿದ್ಹಾಗೇ ನಾವು, ಉರುಫ್ ಖಾರಾಬೂಂದಿಯೂ, ಡಿಫರೆಂಟ್ ಸ್ವೀಟ್ಸ್ ಜೊತೆ ಪಾರ್ಟ್ನರ್‌ಶಿಪ್ ನಡೆಸ್ಕೊಳ್ತೀವಿ. ಕ್ರಿಕೆಟ್ ಜರ‍್ಗನ್ನಲ್ಲಿ ಹೇಳೋದಾದ್ರೆ ನಾವುಗಳು ಗಾವಸ್ಕರ್ ಇದ್ಹಾಗೆ - ಇಂಜಿನಿಯರ್‌ನಿಂದ ಹಿಡಿದು ಕೃಷ್ಣಮಾಚಾರಿ ಶ್ರೀಕಾಂತನವರೆಗೂ ಯಾರ ಜೊತೆಗಾದರೂ ಪಾರ್ಟ್ನರ್ ಆಗುತ್ತಿದ್ದ ಗಾವಸ್ಕರ್‌ನ ಗುಣಗಳು ನಮ್ಮಲ್ಲಿ ಹಾಸುಹೊಕ್ಕಾಗಿವೆ. ಸರಸ್ವತಿ ಪೂಜೆಯ ಸ್ವೀಟ್ ಪಾಕೆಟ್ಟಿನಲ್ಲೂ, ಮದುವೆಯೂಟದ ಲಾಡುವಿನ ಹಿಂಬಾಲಕನಾಗಿಯೂ, ಎಂಡ್ಕುಡ್ಕನ ಶೀಷೆಯ ಪಕ್ಕದಲ್ಲಿಯೂ, 'ಚಹಾದೊಡನ ಬೂಂದಿ ಹಾಂಗ' ಸಂಜೆಯ ಕುರುಕಲಾಗಿಯೂ ಎತ್ತೆತ್ತಲೂ ನಮ್ಮ ಸವಾರಿ ಚಿತ್ತೈಸಬಲ್ಲದು. 

ದೊಡ್ಡದೊಂದು ಮನೆ. ಪ್ರಾಮಾಣಿಕ ವ್ಯಕ್ತಿಯೊಬ್ಬನ್ನ ಸಾಯಿಸಕ್ಕೇಂತ ವಿಲನ್ ರ‍್ತಾನೆ, ಚಾಕು ಎಸೀತಾನೆ. ಪ್ರಾಮಾಣಿಕ ಎದೇಲಿ ಚಾಕು ಸಿಕ್ಕಿಸ್ಕೊಂಡೇ "ರಾಮ ನೀ ಚೇಸಿನದಿ ನ್ಯಾಯಮಾ?" ಅಂತ ಬಾಣ ಸಿಕ್ಕಿಸ್ಕೊಂಡು ವಾದ ಮಾಡೋ ವಾಲಿಯ ತರಹವೇ ವಿಲನ್ ಜೊತೆ ಸಂವಾದಕ್ಕಿಳಿಯುತ್ತಾನೆ. ವಿಲನ್ 'ನೂವಂತೇ ಕಾದು, ನೀ ವಂಶಮನೇ ನಾಶಂ ಜೇಸ್ತಾನುರಾ' ಎಂದಾಕ್ಷಣ 'ಓಡಿರೋ...' ಎಂದು ಹೈ ಆಕ್ಟೇವ್‌ನಲ್ಲಿ ಕಿರುಚುತ್ತಾನೆ. ಬಾಣ ಸಿಕ್ಕಿದ ಎದೆ, ಗುಂಡು ಹೊಕ್ಕ ಗುಂಡಿಗೆಯಿಂದ  ಈ ಆಕ್ಟೇವ್‌ನ ಸದ್ದು ಹೊರಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಅತ್ತ ಬಿಟ್ಟು ಪ್ರಾಮಾಣಿಕನ ಮಕ್ಕಳತ್ತ ಗಮನ ಹರಿಸಿದರೆ ಇಬ್ಬರೂ ಉಸೇನ್ ಬೋಲ್ಟನ್ನು ಹಿಂದಿಕ್ಕುವ ಸ್ಪೀಡಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಓಡಿ ವಿಲನ್‌ನಿಂದ ತಪ್ಪಿಸಿಕೊಳ್ಳುತ್ತಾರೆ. ಆ ಕಡೆ ಹೋದವನು ಮೈಕೈಯೆಲ್ಲ ಹಿಂಡಿಹೋಗುವಷ್ಟು ಶ್ರಮ ಪಟ್ಟೂ ಪಟ್ಟೂ ಒಳ್ಳೆಯವನಾಗುತ್ತಾನೆ; ಈ ಕಡೆ ಹೋದವನು ವಿಲನ್‌ನನ್ನು ಮೀರಿಸಿದ ಕೇಡಿ ಆಗುತ್ತಾನೆ. ನನ್ನದು, ಲಾಡುವಿನದು ಇದೇ ಕಥೆ. ಅದೇ ಜಾಲರಿ, ಅದೇ ಕಡಲೆಹಿಟ್ಟು, ಅದೇ ಉಂಡುಂಡೆ ರೂಪಕ್ಕೆ ಬದಲಾಗುವುದು; ಸಿಹಿಯಲ್ಲಿ ಬಿದ್ದು ಮೈಯೆಲ್ಲಾ ಗಂಟಾಗುವುದು ಲಾಡು ಆಗುತ್ತದೆ. ಕಡೆಯವರೆಗೂ 'ಇಂಡಿವಿಜುಯಲ್ ಇಂಡಿಪೆಂಡೆನ್ಸ್' ಉಳಿಸಿಕೊಂಡೂ 'ಕಲೆಕ್ಟಿವ್ ನೌನ್' ಆಗಿ ರಾರಾಜಿಸುವ ನಾವು ಖಾರಬೂಂದಿ ಆಗುತ್ತೇವೆ. 



ಖಾರಾಬೂಂದಿ ಎಂದಾಕ್ಷಣ ಒಬ್ಬೊಬ್ಬರ ಮನದಲ್ಲಿ ಒಂದೊAದು ಚಿತ್ರಣ ಮೂಡಬಹುದು. ದೇಶದ ಹವಾಗುಣದ ಮೇಲೆ ಮನುಷ್ಯನ ಚರ್ಮದ ಬಣ್ಣ ತರ‍್ಮಾನವಾಗುವಂತೆಯೇ ಕಡಲೆಹಿಟ್ಟಿನ ಬಣ್ಣದ ಮೇಲೆ, ಬೂಂದಿಕಾರನ ಎಣ್ಣೆ ಕಾದಿರುವ ಮಟ್ಟದ ಮೇಲೆ, ಬಾಣಸಿಗನು ಅಡಿಗೆಯ ಮೇಲೆ ಲಕ್ಷö್ಯವಿರಿಸುವ ಮಟ್ಟದ ಮೇಲೆ ನಮ್ಮ ಬಣ್ಣವೂ ನಿರ್ಧಾರವಾಗುತ್ತದೆ. ಒಂದು ವಿಧದಲ್ಲಿ ನಾರ್ತ್ ಇಂಡಿಯನ್ ಡಿಷ್ ಮಾಡುವವರು ರೋಟಿ ಕರಿ ಮಾಡುವ ಪ್ರಕ್ರಿಯೆಗೆ ನಮ್ಮ ರಂಗಾಂಕುರವನ್ನೂ ಹೋಲಿಸಬಹುದು. ಕೆಲವರು ಮಾಡಿದಾಗ ರೋಟಿ-ಕರಿ ಎನ್ನುವುದು ದ್ವಿವಚನವಾಗಿರುತ್ತದೆ. ಇನ್ನು ಕೆಲವರ ತಂದೂರೀ ಚಳಕದಿಂದ ರೋಟಿಯ ತಂದುರಸ್ತೀ ಹಾಳಾಗಿ ರೋಟಿಕರಿ ಎನ್ನುವುದು ಏಕವಚನವಾಗುತ್ತದೆ. ಅಂತಹ ಬಾಣಸಿಗರು ಮನದಲ್ಲೇ "ಬ್ಲ್ಯಾಕ್  ಲೈವ್ಸ್ ಮ್ಯಾಟರ್'ನ ಬೆಂಬಲಿಗರಾಗಿರುವುದೇ ಇಂತಹ ಕರಿರೋಟಿ ಹೊರಬರಲು ಕಾರಣವಿದ್ದೀತು. ಕರಿರೋಟಿಯ ರೀತಿಯಲ್ಲೇ ಖಾರಾಬೂಂದಿಯನ್ನು ಕರಿಬೂಂದಿ ಮಾಡುವ ತಾಕತ್ತಿರುವ ಅಡುಗೆಯವರು ಇದ್ದರೂ ಅವರ ಸಂಖ್ಯೆ ವಿರಳ. ಬಾಂಡ್ಲಿಯಲ್ಲಿ ಬೂಂದಿಯ ಕಾಳುಗಳನ್ನು ಹಾಕಿದ ಸಮಯದಲ್ಲೇ "ಕ್ಯೋಂಕಿ ಸಾಸ್ ಭೀ ಕಭೀ ಬಹೂ ಥೀ" ತರಹದ ಅಶ್ರುಜಲಪಾತಗಳು ಮೂಡಿಬಂದಾಗ ಇಂತಹ ಬ್ಲ್ಯಾಕೌಟುಗಳು ಸಂಭವಿಸಬಹುದು. ಇನ್ನು ಕೆಲವು ಬಾಣಸಿಗರದು "ಆತುರ ಮುಖ ಶ್ವೇತ ಕಾಳ್ಳನೆ ತೀಸಿನ ವಂಟವಾಡೆನೆ ನುವ್ವು ಗದಾ" ಎನಿಸಿಕೊಳ್ಳಲು ಲಾಯಕ್ಕಾದವರು. ಬೇಯುವುದಕ್ಕೆ ಮುಂಚೆಯೇ ಹೊರತೆಗೆದು "ಯಾಕೋ ಗರಂ ಅಂತಾನೇ ಇಲ್ಲ" ಎಂದು ತಮ್ಮ ತಪ್ಪನ್ನು ಹಿಟ್ಟಿನ ಕ್ವಾಲಿಟಿಗೆ ಆರೋಪಿಸುವ ಜಾತಿಗೆ ಸೇರಿದವರಿವರು. ಮೂರನೆಯ ಜಾತಿಯೇ "ಹದವರಿತು ಹಿತವರಿತು ಮುದವರಿತು ಮುನ್ನಿಂತು ಸಕಾಲದೊಳ್ ಸ್ನೇಹಕಾರಕದಿಂ (ಸ್ನೇಹ ಎಂದರೆ ಜಿಡ್ಡು. ಸ್ನೇಹಕಾರಕ ಎಂದರೆ ಜಿಡ್ಡುಂಟುಮಾಡುವ ಉರುಫ್ ಎಣ್ಣೆ ಎಂದರ್ಥ) ಸೆಳೆವ ಜಾಲರಿಗರ್!". ಇಂತಹ ಜಿಹ್ವಾಸಖರಿಂದ ಸಿದ್ಧಗೊಂಡ ನಮ್ಮ ಬದುಕೇ ಸಾರ್ಥಕ ಬದುಕು. 

"ಉದಾರ ಚರಿತಾನಾಂ ತು ವಸುಧೈವ ಕುಟುಂಬಕಂ" ಎನ್ನುವುದನ್ನು ಓದಿರುವವರು ನಾವು. "ಹ್ಹ! ಬೂಂದಿಯೂ ಓದುವುದೇನು?" ಎಂದು ಕಿಸಕ್ಕೆಂದಿರೇನು? ಮನುಷ್ಯನ ಕಣ್ಣು ಕಾಗದದಿಂದ ಕನಿಷ್ಠ ಮೂವತ್ತು ಸೆಂಟಿಮೀಟರ್ ದೂರವಿದ್ದೀತು. ನಮ್ಮದು ಒಂದು ಮಿಲಿಮೀಟರ್‌ಗಿಂತಲೂ ಹತ್ತಿರವಿರುವ ಕಣ್ಣು. "ಬೂಂದಿಗೂ ಕಣ್ಣೇ?" ಎಂದಿರೇನು? ಹೂಂ ಸ್ವಾಮಿ. ಹಾವಿಗೆ ಮೈಯೆಲ್ಲಾ ಕಿವಿ ಎಂದಂತೆ  ಬೂಂದಿಗೆ ಮೈಯೆಲ್ಲಾ ಕಣ್ಣು. ಇಂತಹ ಕಣ್ಣುಗಳಿಂದ ನಮ್ಮನ್ನು ಕಟ್ಟಿಕೊಟ್ಟ ಪೊಟ್ಟಣದಲ್ಲಿನ ಎಷ್ಟೋ ವಿಷಯಗಳನ್ನು ಸಮೀಪಾತಿಸಮೀಪದಿಂದ ಓದಿದ್ದೇವಷ್ಟೇ ಅಲ್ಲ, ಅದನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡಿದ್ದೇವೆ. ಆಗಷ್ಟೇ ಮಾಡಿದ ಪ್ರೆಷ್ ಬಿಸಿಬೇಳೆಬಾತ್ ಆಧುನಿಕತೆಯ ಸಂಕೇತ. ಅದರ ಮೇಲೆ ಸಂತೋಷದಿಂದ ಮೈಚೆಲ್ಲಿ ಹರಡಿಕೊಳ್ಳುವ ನಾವು ಪುರಾತನ ದಿನಗಳ ಸಂಕೇತವಾದ, ಸಂಪೂರ್ಣ ಮಳೆಯಲ್ಲಿ ತೊಯ್ದ ಬಾಕ್ಸರ್ ಶ್ವಾನದ ಮೂತಿಯಂತಿರುವ ಹಳಸಲು ವಡೆಗೆ ಮೊಸರಿನೊಡನೆ ಸೇರಿ "ತೈರ್ ವಡೆ" ಎಂಬ ಹೆಸರಿನಡಿಯಲ್ಲಿ ಹೊಸ ಬೇಡಿಕೆಯನ್ನು ತಂದುಕೊಡುತ್ತೇವೆ. 

ಬಿಸಿಬೇಳೆಭಾತಿನ ಬಿಸಿಗೆ ಒಗ್ಗುವ ನಾವು ಫ್ರಿಡ್ಜಿನಿಂದ ಆಗಷ್ಟೇ ಹೊರಬಂದು ಫಿಲಿಪ್ ಐಲ್ಯಾಂಡಿನ ಪೆಂಗ್ವಿನ್ನಿನ ಹೊಟ್ಟೆಯಷ್ಟು ತಣ್ಣಗಿರುವ ಮೊಸರಿನ ಜೊತೆಗೂ ಸಖ್ಯ ಬೆಳೆಸಿ ಆಸ್ವಾದಿಸುವವರಿಗೆ ಸೊಗಸಾದ ರುಚಿಯನ್ನು ಒದಗಿಸುತ್ತೇವೆ. ಹೊಸ, ಹಳೆ, ಬಿಸಿ, ಶೀತಲ ಎಲ್ಲದರೊಡನೆ ಹೊಂದಿಕೊಳ್ಳುವ ನಾವೇ "ಅಯಂ ನಿಜಃ ಪರೋವೇತ್ತಿ"ಗೆ ಸೂಕ್ತವಾದ ಜಾಹೀರಾತು ಮಾಡೆಲ್‌ಗಳು. ಇಂತಹ ಸರ್ವಋತು ಬಂದರು ಆಗುವ ಗುಣವಿರುವುದರಿಂದಲೇ ನಮಗೆ ಬಡ ಕಡಲೆಪುರಿಯೊಡನೆಯೂ ಸಖ್ಯ, ಸಿರಿವಂತ ಗೋಡಂಬಿ ಬಾದಾಮಿಗಳೊಡನೆಯೂ ಸಖ್ಯ. ಜಾತಿಯ ವರ್ತುಲದಲ್ಲಿ ಸಿಲುಕಿ ಸಿಡಿಮಿಡಿಗೊಳ್ಳುತ್ತಿರುವ ನೀವು, ನರಮನುಷ್ಯರನ್ನು, ನೋಡಿದರೆ ನನ್ನ ಮನಸ್ಸಿಗೆ ತೋಚುವುದು ಒಂದೇ ಸಾಲು - ನೀನಾರಿಗಾದೆಯೋ ಎಲೆ ಮಾನವ; ಗರಿಗರಿ ಬೂಂದಿ ನಾನು | ಇಟ್ಟರೆ ಕುರುಕಲಾದೆ; ಸೇರೆ ನಂಜಿಕೊಳ್ಳಲಾದೆ ; ಬಾರಲಿ ಕುಡುಕರಿಗೆ ಕಿಕ್ಕೇರಲಾದೆ | ಲಾಡುವಿನ ಜೊತೆ ಸೇರೆ ಸತಿಪತಿ ದ್ಯೋತಕವಾದೆ | ನೀನಾರಿಗಾದೆಯೋ....!


Comments

  1. ಇಂತಹ ಲೇಖನಗಳನ್ನು ಇನ್ನಷ್ಟು ಓದಲು ನಾವು ಎದುರು ನೋಡುತ್ತಿದ್ದೇವೆ :)

    ReplyDelete

Post a Comment