ಆಸರೆ ಮನೆ - ಭಾಗ 10

ಆಸರೆ ಮನೆ - ಭಾಗ 10

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ





ಭಾಗ ೧೦........

ಆಸ್ತಿಯಿಂದ ಬೆಚ್ಚಿಬಿದ್ದ ಅಣ್ಣ-ತಮ್ಮಂದಿರು

ಮರಣದಿಂ ಮುಂದೇನು? ಪ್ರೇತವೋ?! ಭೂತವೋ?!।

ಪರಲೋಕವೋ? ಪುನರ್ಜನ್ಮವೋ? ಅದೇನು|| 

ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ| ಧರೆಯ ಬಾಳ್ಗದರಿನೇಮ್? ಮಂಕುತಿಮ್ಮ||

ಜಯರಾಮನಿಗೆ ನಿದ್ರೆಯಿಂದ ಗಾಬರಿಯಾಗಿ ಎಚ್ಚರವಾಯಿತು. ಪಕ್ಕದ ಮಂಚದಲ್ಲಿದ್ದ ತಮ್ಮನನ್ನು ಕೂಗಿ ಎಬ್ಬಿಸಿದ. 

''ಏನಣ್ಣ, ಶಾಂತಾರಾಮ ಗಾಬರಿಯಲ್ಲಿ ಎದ್ದು ಕುಳಿತ. 

''ಶಾಂತು ಪಕ್ಕದ ಶೆಟ್ಟರ ಮನೆಯಲ್ಲಿ ಏನೋ ಗಲಾಟೆ ಆಗುತ್ತಿದೆ ಕೇಳಿಸಿಕೊ"

''ಹೌದಣ್ಣ'' 

''ಎಲ್ಲೋ ಕಾಯಿಲೆ ಮಲಗಿದ್ದ ಶೆಟ್ಟರು ಹೋಗಿಬಿಟ್ಟರು ಅಂತ ಕಾಣುತ್ತೆ ಕಣೋ'' ಅಂದರು ಜಯರಾಮ. ಪಕ್ಕದ ಮನೆಯಲ್ಲಿ ತೆಲುಗಿನಲ್ಲಿ ಸಂಭಾಷಣೆ ಪಿಸಪಿಸ ಎಂದು ನಡೆಯುತ್ತಿತ್ತು. 

************

ಶೆಟ್ಟರಿಗೆ ಮೂವರು ಗಂಡು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು. ಮೂರಂತಸ್ತಿನ ದೊಡ್ಡ ಮನೆ. ಚಿನ್ನ, ಬೆಳ್ಳಿ, ನಗದು ಬ್ಯಾಂಕಿನಲ್ಲಿ ಚೆನ್ನಾಗಿ ಕೂಡಿಟ್ಟಿದ್ದರು ದೊಡ್ಡ ಶೆಟ್ಟರು. ಬೆಳಗಾಗುವ ವೇಳೆಗೆ ಜೀವ ಹೋದ ಸೂಚನೆ ಕಾಣಿಸಿತು. ಸತ್ತಮನೆಯ ಮುಂದೆ ಬೆಂಕಿ ಹಾಕಿದ್ದಾದರು ಒಳಗೆ ಗಲಾಟೆ ಜೋರಾಯಿತು. ಯಾರಿಗೂ ಏನೆಂದು ಗೊತ್ತಾಗಲಿಲ್ಲ. ತೆಲುಗಿನ ಜಗಳ ಕನ್ನಡಕ್ಕೆ ಇಳಿಯಿತು. 

ಆಕ್ಕಂದಿರು ಬೀದಿಯಿಂದಲೇ ಬಾಯಿ ಬಡಿದುಕೊಂಡು ರಂಪ ಮಾಡಿಕೊಂಡು ಬಂದರು. ೫ ಜನ ಮಕ್ಕಳು ಸೇರಿದರು. ಇನ್ನೇನು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಬೇಕೆಂದು ಬಂದ  ನೆಂಟರಿಷ್ಟರು ಪುರೋಹಿತರಿಗೆ ಹೇಳಿ ಕಳುಹಿಸಿದರು. ಶೆಟ್ಟರ ದೊಡ್ಡ ಮಗ ೬೦ ವರ್ಷ ವಯಸ್ಸಿನ ರಾಮಶೆಟ್ಟಿ ಮೊದಲು ಗಲಾಟೆ ಪ್ರಾರಂಭಿಸಿದ. 

''ಅಪ್ಪನ ಆಸ್ತಿ ವಿಷಯ ಇತ್ಯರ್ಥವಾಗದೆ ಹೆಣ ಎತ್ತಲು ನಾನು ಬಿಡೋದಿಲ್ಲ''. ಎಂದು ಕೂಗಾಡಿದ. 

''ಆಸ್ತಿ ಇತ್ಯರ್ಥವಾಗೋದೇನಿದೆ ಇರೋ ಮನೆ ನಾವು ಮೂರು ಜನ ಗಂಡುಮಕ್ಕಳು ಹಂಚಿಕೊಂಡರಾಯಿತು ಬಿಡು''

ತಕ್ಷಣವೇ ಹೆಣ್ಣು ಮಕ್ಕಳಿಬ್ಬರು ದೊಡ್ಡ ರಾಗ ತೆಗೆದು ಮೇಲೆದ್ದರು ''ಏಮಿರಾ, ರಾಮ, ಸುಬ್ಬ, ನಾವಿಬ್ಬರು ಏನೂ ಅಪ್ಪನ ಮಕ್ಕಳಲ್ವ. ನೀವು ಮಾತ್ರ ಮಕ್ಕಳಾ. ನಮ್ಮ ಪಾಲು ಇತ್ಯರ್ಥವಾಗಲಿ. ಆಮೇಲೆ ಹೆಣ ಎತ್ತುವ ಮಾತು'' ಎಂದರು. 

ತಟ್ಟನೆ ಗಂಡು ಮಕ್ಕಳು ನೇರವಾಗಿ ಬಾಣ ಬಿಟ್ಟರು.

''ಏಮಕ್ಕಾ ನಿಮಗೆಂತ ಪಾಲುಪಟ್ಟಿ. ಅಪ್ಪ ನಿಮಗೆ ಮದುವೆ ಮಾಡಿ ಸಾಕಷ್ಟು ಬಂಗಾರ, ಅಳಿಯಂದಿರಿಗೆ ವರದಕ್ಷಿಣೆ, ನಿಮ್ಮವರಿಗೆಲ್ಲ ಜರತಾರಿ ಸೀರೆ ಕೊಟ್ಟು ಮರ್ಯಾದೆಯಿಂದ ಕಳುಹಿಸಿಕೊಟ್ಟಿಲ್ಲವಾ? ಹಬ್ಬ ಹರಿದಿನ ಬಸಿರು, ಬಾಣಂತಿ ಎಂದು ಕರೆಯಲಿಲ್ಲವಾ ಮಾಡಲಿಲ್ಲವಾ'' ಎಂದರು. 

ಅಕ್ಕಂದಿರಿಬ್ಬರು ಕಣ್ಣು ತಿರುಗಿಸುತ್ತ ''ಏಮರಾ ನಾವೇನು ಬೆಪ್ಪುಗಳಾ ಕಾನೂನು ನಮಗೂ ಗೊತ್ತು ಹೆಣ್ಣು ಮಕ್ಕಳಿಗೂ ಈಗ ಅಪ್ಪನ ಆಸ್ತಿಯಲ್ಲಿ ಪಾಲಿದೆ''

ಈಗ ಸೊಸೆಯರು ಮೇಲೆದ್ದರು. 

''ಹೌದು ಹೌದು ನಿಮ್ಮಮ್ಮ ಬದುಕಿದ್ದಾಗ ಅವರ ಹತ್ತಿರ ಇದ್ದ ಬಂಗಾರ, ಬೆಳ್ಳಿ ಜರತಾರಿ ಸೀರೆ ಎಲ್ಲ ನೀವೇ ಅಲ್ವ ಗಂಟು ಕಟ್ಟಿಕೊಂಡು ಹೋಗಿದ್ದು'' ಎಂದರು. 

ಇವರ ಜಗಳ, ವಾದ ಕೇಳಿ ಬೇಸತ್ತ ಬಂದಿದ್ದ ನೆಂಟರು 

''ಏಮಪ್ಪ ಇದಿ, ಕೊಂಚ ನಿಧಾನ ಮುಮ್ಮ, ಮೊದಲು ಹೆಣ ಎತ್ತಿ ಸಂಸ್ಕಾರ ಮಾಡಿ ಆಮೇಲೆ ಇವೆಲ್ಲ ಸರಿ ಮಾಡಿಕೊಳ್ಳುವಿರಂತೆ. ನಾವೆಲ್ಲ ಇಲ್ವಾ. ಕಾನೂನು ಇಲ್ವಾ. ಎಂದಕಪ್ಪ ಇಷ್ಪಳ್  ಚೇಯ್ತಾರು ಮೀರು'' ಎಂದರು. 

ಹೆಣ್ಣು ಮಕ್ಕಳು ಒಕ್ಕೊರಲಿನಿಂದ ''ನಿಕೇಮು ತೆಲಸು ಮಾವಯ್ಯ ಇವರೇನು ಸಾಮಾನ್ಯರಾ, ಅಪ್ಪನ ಹೆಣ ಎತ್ತಿದರೆ ಆಮೇಲೆ ನಮಗೆ ತಿರುಪತಿ ವೆಂಕಟರಮಣನ ಹಣೇನೆ ಗತಿ'' ಎಂದರು. 

ಯಾರ ಮಾತಿಗೂ ಬಗ್ಗದೆ ಮಾವಂದಿರು, ನೆಂಟರು ''ಅಮ್ಮಯ್ಯ ರಾಹುಕಾಲ ವಸ್ತುಂದಿ. ಮಾವಯ್ಯನ ಶವ ಮನೆಯಿಂದ ಆಚೆ ಹೋಗಲಿ. ಆಮೇಲೆ ಮಿಕ್ಕದ್ದು'' ಎಂದರು. 

''ನೂವು ಸರೀಗಾ ಮಾಮ ಅಂದರಿಕು ಮಂಚವಾಳ್ಳು'' ಎಂದರು ಹಾಗೂ ಹೀಗೂ ಶವವನ್ನು ಆಚೆ ಸಾಗಿಸಿ ಮಾಡಬೇಕಾದ ಕೆಲಸ ಪ್ರಾರಂಭಿಸಿದರು ನೆಂಟರು. ಕೆದರಿದ ಇರುವೆಗೂಡಿನಂತೆ ಗಂಡು ಮಕ್ಕಳಲ್ಲೇ ಪ್ರಾರಂಭವಾಯಿತು ಜಟಾಪಟಿ. 

''ಏಮರಾ ಅಪ್ಪನ ಹೆಣ ಆಚೆ ಸಾಗಿಸಿ ಮೆಲ್ಲಗೆ ಮನೆ ಹೊಡಿಯಲು ನೋಡುತ್ತೀಯ. ಅದೇಮಿರಾ ಎಲ್ಲಾ ಅಪ್ಪನ ಮುಂದೆ ಸೆಟ್ಲ್ ಆಗಲಿ'' ಎಂದ ತಮ್ಮ. ನೆರೆದ ಜನ ಇದನ್ನು ಕೇಳಿ ದಂಗಾದರು. ಸತ್ತು ಶವವಾಗಿರುವ ಅಪ್ಪ ಇವರಿಗೆ ಆಸ್ತಿಪಾಲು ಮಾಡಿಕೊಡಲು ಎದ್ದು ಬರುತ್ತಾರೆಯೇ ಎಂದು ಪಿಸುಗುಸು ಮಾಡಿದರು. 

ಹಾಗೂ ಹೀಗೂ ಎಲ್ಲರ ಬಲವಂತದಿಂದ ಶೆಟ್ಟರ ಶವ ತಾವು ಉಳಿತಾಯ ಮಾಡಿ ಹೊಟ್ಟೆಬಟ್ಟೆ ಕಟ್ಟಿ ಉಳಿಸಿ ಸೇರಿಸಿ ಕಟ್ಟಿಸಿದ ಮನೆಯಿಂದ ಬದುಕಿ ಬಾಳಿದ ಮನೆಯಿಂದ ಶವವಾಗಿ 

ಈಚೆಯೇನೋ ಬಂದಿತು. ಆದರೆ ತಾವು ಹೆತ್ತ ಮಕ್ಕಳ ನಾಟಕ ನಿಲ್ಲಿಸಲು ಅವರು ಕೈಯಲ್ಲಾಗುವಂತಿರಲಿಲ್ಲ. ೬೦ ವರ್ಷದ ಅಣ್ಣ, ೪೫ ವರ್ಷದ ತಮ್ಮನ ಮಧ್ಯೆ ಕೈ ಕೈ ಮಿಲಾಯಿಸುವಷ್ಟು ಜಟಾಪಟಿ. ನಡುಕಲವನು ಮಧ್ಯೆ ಮಧ್ಯೆ ಒಗ್ಗರಣೆ ಹಾಕುತ್ತಿದ್ದ. ತಾನು ಸುಮ್ಮನೆ ಇದ್ದು ಬಿಟ್ಟರೆ ಅಸ್ತಿ ಎಲ್ಲಿ ಅವರಿಬ್ಬರ ಪಾಲು ಆಗಿಬಿಟ್ಟರೆ ಎನ್ನುವ ಹೆದರಿಕೆ. ಹೆಣ್ಣು ಮಕ್ಕಳಿಬ್ಬರು ತಮ್ಮ ವಯಸ್ಸನ್ನು ಮರೆತು ಬಾಯಿ ಬೊಂಬಾಯಿ ಆಗಿ ತಮ್ಮ ಅಳಿಯಂದಿರ ಎದುರೇ ಗಂಟಲು ಬಿರಿಯುವಂತೆ ಎದೆ ಗುದ್ದಿಕೊಂಡು ಅಪ್ಪನ ಮೇಲಿನ ಪ್ರೀತಿಯಲ್ಲದೆ ಆಸ್ತಿಯ ಮೇಲಿನ ಹಟದಿಂದ ಕಿರುಚುತ್ತಿದ್ದರು. ಬಂದಿದ್ದ ಹೆಂಗಸರು ಸಾಕಷ್ಟು ಬುದ್ಧಿವಾದ ಹೇಳಿ ಜಗಳ ನಿಲ್ಲಿಸಿ ಅವತ್ತಿನ ಕೆಲಸ ಮುಗಿಸಲು ನೋಡಿದರು. 

ಯಾರ ಮಾತು ಯಾರಿಗೂ ಬೇಡ. ಆಸ್ತಿಯೊಂದೇ ಅಲ್ಲಿ ಕಣ್ಣಿಗೆ ಕಾಣುತ್ತಿದ್ದುದು.

 ''ನಿಕೇಮು ತೆಲ್ಸಮ್ಮ ನೂರು ಮೂಸ್ಕೊಂಡು ಪೋ'' ಎಂದು ತಮಗಿಂತ ದೊಡ್ಡವರಾದ ಸೋದರತ್ತೆಯನ್ನೇ ದಬಾಯಿಸಿಬಿಟ್ಟರು. 

ನೆರೆಹೊರೆಯವರು ನಾಟಕ ನೋಡಿ ತಮಾಷೆ ಪಡೆಯುತ್ತಿದ್ದರು. ಜಯರಾಮ, ಶಾಂತರಾಮ ಇದನ್ನೆಲ್ಲ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು. ಅವರಿಗೆ ಚೆನ್ನಾಗಿ ಗೊತ್ತು. ಇದು ಹೀಗೆ ಬಗೆಹರಿಯುವುದಿಲ್ಲ ಎಂದು. ಅಲ್ಲಿ ಒಳ್ಳೆಯ ಬುದ್ಧಿಯ ಮಾತುಗಳು ಕೆಲಸ ಮಾಡುವುದಿಲ್ಲ. ಅಸ್ತಿ ಹಣದ ವ್ಯಾಮೋಹ ಅವರುಗಳ ಕಣ್ಣು ಮುಚ್ಚಿಸಿತ್ತು. ಪುಣ್ಯಕ್ಕೆ ಸತ್ತ ಶೆಟ್ಟರ ಹೆಂಡತಿ ಇದನ್ನೆಲ್ಲ ನೋಡುವ ಪುಣ್ಯ ಇಲ್ಲದೆ ಎಷ್ಟೋ ವರ್ಷಗಳ ಹಿಂದೆಯೇ ಕಣ್ಮುಚ್ಚಿದ್ದರು,  ಮುತ್ತೈದೆ ಸಾವು ಎಂದು  ಹೊಗಳಿಸಿಕೊಂಡು.      

ಬಿಸಿಲು ಏರುತ್ತಿತ್ತು. ಶೆಟ್ಟರ ಹೆಣ ಬಿಸಿಲು ಕಾಯುತ್ತ ಹಪ್ಪಳವಾಗುತ್ತಿತ್ತು. ಅಕ್ಕಪಕ್ಕದವರು ಇದೆಲ್ಲ ಬಗೆಹರಿಯದೆ ಸ್ನಾನ ಊಟ ಮಾಡುವುದು ಹೇಗೆ ಎಂದು ಮೇಲೆ ಮೇಲೆ ಮಾತಾಡಿದರು. ಒಬ್ಬೊಬ್ಬರೇ ಮನೆಯ ಒಳಗೆ ಹೋಗಿ ತಮ್ಮ ಹೊಟ್ಟೆಯನ್ನು ಭದ್ರಮಾಡಿಕೊಂಡು ಮಕ್ಕಳಿಗೂ ಒಂದಿಷ್ಟು ಹಾಕಿ ಸ್ಕೂಲು, ಕಾಲೇಜುಗಳಿಗೆ ಸಾಗಿಸಿ ಪುನಃ ಕಾಂಪೌಂಡು ಕಾಯುವ ಕೆಲಸಕ್ಕೆ ಬಂದರು. ಜನಜಂಗುಳಿ ಹೆಚ್ಚಾಯಿತು. ಕೇಳಲು ಬೇಸರವೂ ಆಯಿತು. ಶೆಟ್ಟರ ಮಕ್ಕಳ ಬಗ್ಗೆ ಯಾರಿಗೂ ಸಹಾನುಭೂತಿಯಿಲ್ಲ. ತಾವೂ ತಾವೇ ಮಾತಾಡಿಕೊಂಡ ಬೀದಿಯ ಜನ ಶೆಟ್ಟರ ಮಕ್ಕಳ ಬಳಿ ಬಂದು ''ರೀ ರಾಮಶೆಟ್ಟರೆ ಏನ್ರೀ ಇದು ಬೀದಿ ಜಗಳ. ಎತ್ರಿ ಹೆಣ'' ಎಂದು ದಬಾಯಿಸಿದರು. 

ರಾಮಶೆಟ್ಟಿ ''ಸ್ವಾಮಿ ಇದು ನಿಮ್ಮ ಸಮಸ್ಯೆ ಅಲ್ಲ. ನಮ್ಮ ಮನೆಯ ಸಮಸ್ಯೆ. ಹೆಣ ಎತ್ತಲು ಒಟ್ಟು ೫ ಕೋಟಿ ಬೆಲೆಯ ಮನೆಯನ್ನು ಬಿಟ್ಟುಬಿಡು ಎನ್ನುತ್ತೀರಾ? ನೀವಾದ್ರು ಬಿಡುತ್ತಿದ್ದಿರಾ? ಎಂದ. 

''ಅಬ್ಬಾ ನಾವಂತೂ ಖಂಡಿತಾ ನಿಮ್ಮ ಹಾಗೆ ಹಾದಿರಂಪ ಬೀದಿರಂಪ ಮಾಡುತ್ತಿರಲಿಲ್ಲ'' ಎಂದರು ಗುಂಪಿನಲ್ಲೊಬ್ಬರು. 

''ಅದು ಗೊತ್ತು ಕಣ್ರೀ ನಿಮ್ಮಪ್ಪನಿಗಿದ್ದುದು ಒಂದು ಜನತಾಮನೆ '' ಎಂದಾಗ,  ಹೇಳಿದವರಿಗೆ ರೇಗಿ ಹೋಯಿತು. ಶೆಟ್ಟರ ಮಗನ ಮೇಲೆ ಕೈಮಾಡಲು ಮುಂದಾದರು. ನೆರೆದಿದ್ದ ಜನ ಅವರನ್ನು ತಡೆದು ಸುಮ್ಮನಾಗಿಸಿ ಹಿಂದಕ್ಕೆ ಕಳುಹಿಸಿದರು. ಮಕ್ಕಳು ಶಾಲೆಯಿಂದ ಬರುವ ಹೊತ್ತಾದರು ಸತ್ತ ಶೆಟ್ಟರ ಸಮಸ್ಯೆ ಬಗೆಹರಿಯಲಿಲ್ಲ. 

ಜಯರಾಮ ತಮ್ಮನಿಗೆ ಹೇಳಿದರು, ''ಶಾಂತೂ ಹೆಣ ಕೊಳೆತು ವಾಸನೆ ಬಂದರು ಇವರಿಗೆ ಬುದ್ಧಿ ಬರುವುದಿಲ್ಲಪ್ಪ, ಬಿಸಿಲಿನಲ್ಲಿ ಹೆಣ ಒಣಗುತ್ತಿದೆ. ಸೂರ್ಯಾಸ್ತವಾದ ಮೇಲೆ ಅಂತ್ಯ ಸಂಸ್ಕಾರ ಮಾಡುವುದಿಲ್ಲ. ಮನೆಯಿಂದ ಈಚೆ ಬಂದ  ಶವ ಮತ್ತೆ ಒಳಗೆ ಹೋಗುವಂತಿಲ್ಲ. ಕಡೆಗೆ ನಾವು ಕಂಡ ಆ ಹಿರಿಯ ಜೀವದ ಶವ ನಾಯಿ ನರಿಗಳ ಪಾಲಾಗುತ್ತದೆ'' ಎಂದರು. 

''ಬಿಡಣ್ಣಾ ಇದಕ್ಕೆ ನಾನೇ ಒಂದು ಉಪಾಯ ಮಾಡುತ್ತೇನೆ ಎಂದು

ಮನೆಯ ಒಳಗೆ ಹೋದ ಶಾಂತಾರಾಮ ಸದ್ದಿಲ್ಲದೆ ಪೊಲೀಸರಿಗೆ ಫೋನ್ ಮಾಡಿ ಸಮಸ್ಯೆಯನ್ನು ವಿವರಿಸಿದ್ದಾಯಿತು. 

೩೦ ನಿಮಿಷಗಳ ಒಳಗೆ ಪೊಲೀಸ್ ಜೀಪ್ ಮನೆಯ ಮುಂದೆ ಬಂದು ನಿಂತಿತು. ಶೆಟ್ಟರ ಗುಂಪು ನೆರೆಹೊರೆಯವರು ಗಾಬರಿಯಾದರು. ಎಲ್ಲ ಗೊತ್ತಿದ್ದರೂ ಏನು ತಿಳಿಯದಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ''ಯಾರ ಮನೇದ್ರಿ ಈ ಹೆಣ. ಯಾರೀ ಕೊಲೆ ಮಾಡಿದವರು. ಜಟಾಪಟ್ ಹೇಳಿ.ಇಲ್ಲದಿದ್ದರೆ ಎಲ್ಲರನ್ನು ಒದ್ದು ಎಳೆದುಕೊಂಡು ಹೋಗುತ್ತೇನೆ!! ಏನು ಗಲಾಟೆ ಮಾಡಿದರೆ ಮಾತ್ರ ಕೊಲೆ ಮಾಡಿ ತಪ್ಪಿಸಿಕೊಳ್ಳಬಹುದು ಎಂದು ತಿಳಿದಿರಾ?'' ಎಂದು ಪೊಲೀಸ್ ಭಾಷೆಯಲ್ಲಿ ಜಬರಿಸಿದಾಗ ಎಲ್ಲರೂ ತಣ್ಣಗಾದರು. ನೆರೆದಿದ್ದ ಬಹಳಷ್ಟು ಜನ ತಮಗ್ಯಾಕೆ ಇಲ್ಲದ ಉಸಾಬರಿ ಎಂದು ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡರು.  ಶೆಟ್ಟರ ಮಕ್ಕಳು ನಡುಗುತ್ತ ಮುಂದೆ ಬಂದು ''ಸಾರ್ ಇವರು ನಮ್ಮಪ್ಪ ಸಾರ್, ವಯಸ್ಸಾಗಿತ್ತು. ಬೆಳಗಿನ ಜಾವ ತೀರಿಕೊಂಡರು. ಕೊಲೆ ಆಗಿಲ್ಲ ಸಾರ್'' ಎಂದರು ತೊದಲುತ್ತ, ನಡುಗುತ್ತ,  ಬೆವರುತ್ತ. 

''ಏನು ನಿಮ್ಮ ತಂದೇನ ಎಷ್ಟ್ರೀ ನಿಮ್ಮ ವಯಸ್ಸು. ನೀವೇ ಇನ್ನೇನು ಸ್ಮಶಾನದಲ್ಲಿ ಒಂದು ಕಾಲಿಟ್ಟ ಹಾಗಿದ್ದೀರಿ. ಬೆಳಗ್ಗೆ ಸತ್ತ ಅಪ್ಪನ ಹೆಣಾನ ಇನ್ನು ಮಣ್ಣು ಮಾಡಿಲ್ಲ. ಯಾಕೆ ನೀವು ಸೇರಿ ಅಪ್ಪ ಮಗನ ಹೆಣ ಒಂದೇ ಖರ್ಚಿನಲ್ಲಿ ಸಾಗಿಸಬೇಕು ಎಂದು ಪ್ಲಾನ್ ಮಾಡಿದೀರ?'' ಸಾಹೇಬರು ಲಾಠಿ ಅಲ್ಲಾಡಿಸುತ್ತ ಆಡಿದ ಮಾತಿಗೆ ಶೆಟ್ಟರ ಪೂರಾ ಸಂಸಾರ ಬಾಯಿ ಮುಚ್ಚಿತು. 

ರಾಮಶೆಟ್ಟರ ಹೆಂಡತಿ ಮಾತ್ರ ''ಅಯ್ಯೋ ಎಂಥಾ ಮಾತಾಡ್ತೀರಿ ಸ್ವಾಮಿ ಬದುಕಿರೋರ್ಗೆ '' ಎಂದರು. 

''ಹೌದಮ್ಮ ಸತ್ತೋರಮುಂದೆ ನೀವೆಲ್ಲ ಏನು ಮಾಡುತ್ತಿದ್ದೀರಿ. ಬಾಯ್ಮುಚ್ಚಮ್ಮ ಮೊದಲು ನಿಮ್ಮನ್ನ ಒಳಕ್ಕೆ ಹಾಕಿಸ್ತೀನಿ'' ಎಂದ ಪೊಲೀಸ್ ಜಬರ್ದಸ್ತಿಗೆ ಅವಳು ಹೆದರಿದಳು. 

''ರೀ ಶೆಟ್ರೇ ಬನ್ರೀ ಇಲ್ಲಿ. ನಿಮ್ಮಪ್ಪ ಆಸ್ತಿ ಪಾಲು ಮಾಡಿದ್ದರೇನ್ರಿ''

''ಮಾಡಿದ್ರು ಸ್ವಾಮಿ''

''ವಿಲ್ ಏನಾದ್ರೂ ಬರೆದಿಟ್ಟಿದ್ರಾ''

''ಹೌದು ಸ್ವಾಮಿ''

''ಎಲ್ಲಿದೆ ವಿಲ್''

''ನಮ್ಮ ಲಾಯರ್ ಸ್ವಾಮಿಗಳ ಹತ್ತಿರಾನೆ ಮಡಗಿದ್ದಾರೆ ಸ್ವಾಮಿ''

''ಮತ್ಯಾಕ್ರಿ ಬಡ್ಕೋತಿದೀರಿ''

''ಅದು, ಅದು ಏನಿಲ್ಲ ಸ್ವಾಮಿ'' ಎಂದು ಕೈ ಹೊಸಕಿಕೊಂಡಾಗ 

''ಹೇಳ್ತೀರೋ  ಲಾಠೀಲಿ ಎರಡು ಕೊಡಲೋ'' ಎಂದಾಗ 

''ಇಲ್ಲ ಸ್ವಾಮಿ ಅದು ನಮ್ಮಪ್ಪ ಈ ಮನೇಲಿ ಇದ್ದದ್ದು ಅದು ಇತ್ಯರ್ಥ ಆಗಬೇಕು ಅಂತ ಇವರೆಲ್ಲ ಹೇಳ್ತಿರೋದು'' 

''ಯಾರ್ರೀ ಈ ಮನೇಲಿ ಈಗ ವಾಸ ಮಾಡ್ತಿರೋರು''

''ನಾನು ನನ್ನ ಸಂಸಾರ ಅಪ್ಪನ ಜೊತೆ ಇದ್ವು ಸ್ವಾಮಿ''

'' ಓಹೋ ಅದು ಸಮಾಚಾರ. ಮೊದ್ಲು ಹೆಣ ಎತ್ರೀ. ಆಮೇಲೆ ನಿಮ್ಮ ಲಾಯರ್ ಸಾಹೇಬ್ರನ್ನ ಕರೆಸಿ ವಿಲ್ ಬಗ್ಗೆ ವಿಚಾರಿಸೋಣ'' ಎಂದರು ಸಾಹೇಬರು. 

ಅಂತಿಮ ಆಜ್ಞೆ ನೀಡುವ ವೇಳೆಗೆ ಸಂಜೆ ೫ ಸಮೀಪಿಸಿತ್ತು. ನೆರೆದಿದ್ದವರೆಲ್ಲ ಮೇಲೇರಿದ್ದ ಉಸಿರನ್ನು ಕೆಳಗೆಳೆದುಕೊಂಡರು. ಶಾಂತಾರಾಮ, ಜಯರಾಮ ಮುಖ ಮುಖ ನೋಡಿಕೊಂಡರು. ಶೆಟ್ಟರ ಹೆಣ್ಣು ಮಕ್ಕಳು ಮಾತ್ರ ಪೊಲೀಸ್ ಸಾಹೇಬರಿಗೆ ಹೆದರಿ ಸುಮ್ಮನಾದರು. ಒಳಗೊಳಗೇ ನೆಟಿಕೆ ಮುರಿದರು. 

ಅಂತೂ ಇಂತೂ ಸ್ಥಿರ ಲಗ್ನದಲ್ಲಿ ಸಾವನ್ನಪ್ಪಿದ ಶೆಟ್ಟರು ಚರಲಗ್ನದಲ್ಲಿ  ಸ್ಮಶಾನಯಾತ್ರೆ ಕೈಗೊಂಡರು. ಬೀದಿಯ ಜನ ನಿಟ್ಟುಸಿರುಗರೆದು ಶೆಟ್ಟರು ಮುಂದಿನ ಜನ್ಮದಲ್ಲಿ ಇಂತಹ ಮಕ್ಕಳನ್ನು ಪಡೆಯದಿರಲಿ ಎಂದು ಮನಸ್ಸಿನಲ್ಲೇ ಹೇಳಿಕೊಂಡರು. 

*********

ನಂತರದ ಕಥೆ ಯಾರಿಗೂ ಸಲ್ಲದು. ಯಾಕೆಂದರೆ ಅದು ಇಲ್ಲಿಗೆ ಪ್ರಸ್ತುತವಲ್ಲ. ಆದ್ರೂ ಕುತೂಹಲಕ್ಕೊಂದು ತೆರೆಬೀಳಬೇಕಲ್ಲ.

ಶೆಟ್ಟರು ಬಹಳ ಜಾಣತನದಿಂದ ವಿಲ್ ಮಾಡಿಟ್ಟಿದ್ದರು. ಮಕ್ಕಳಿಗೆಲ್ಲ ಕೊಟ್ಟಿದ್ದ ಅವರವರ ಪಾಲನ್ನು ನಮೂದಿಸಿದ್ದಲ್ಲದೆ ತಾವು ವಾಸ ಮಾಡುತ್ತಿದ್ದ ಮನೆಯ ಅರ್ಧಭಾಗ ತಮ್ಮನ್ನು ಕೊನೆಯವರೆಗೂ ಇಟ್ಟುಕೊಂಡಿದ್ದ (ಇಟ್ಟುಕೊಂಡಿದ್ದಷ್ಟೇ ನೋಡಿಕೊಂಡವನಲ್ಲ) ದೊಡ್ಡ ಮಗನಿಗೂ ಉಳಿದ ಅರ್ಧ ಭಾಗ ಇನ್ನಿಬ್ಬರು ಗಂಡು ಮಕ್ಕಳಿಗೂ ಬರೆದಿದ್ದು, ಬ್ಯಾಂಕಿನಲ್ಲಿದ್ದ ನಗದು ಹಣ ತಮ್ಮ ಅಂತ್ಯ ಕ್ರಿಯಾಕರ್ಮಕ್ಕೆ ಖರ್ಚು ಮಾಡಿ ಉಳಿದ ಹಣವನ್ನು ಐದು ಜನ ಮಕ್ಕಳು ಸಮವಾಗಿ ಹಂಚಿಕೊಳ್ಳಬೇಕೆಂದು ಬರೆದಿದ್ದರು. ವಕೀಲರು ಎಲ್ಲವನ್ನೂ  ಓದಿ ಹೇಳಿ ತಮ್ಮ ಜವಾಬ್ದಾರಿ ಮುಗಿಸಿಕೊಂಡರು. 

ಆಸ್ತಿಗಾಗಿ ಹೊಡೆದಾಡುತ್ತಿದ್ದ ಐದು ಜನ ಮಕ್ಕಳು ತೆಪ್ಪಗಾದರು. ಶೆಟ್ಟರ ಕೊನೆಯ ಇಚ್ಛೆಯಂತೆ ಎಲ್ಲ ನಡೆಯಿತಾದರು ಊರ ಪಂಚಾಯ್ತಿಯಾದ ಅವರ ಶವದ ಕಥೆ ಎಲ್ಲರಿಗೂ ಕೆಲವು ದಿನ ಮಾತಾಡುವ ಬಾಯಿಗೆ ವಸ್ತುವಾಯಿತು. 

ಭಾಗ ೧೧ ರಲ್ಲಿ ಮುಂದುವರೆಯುವುದು .........

Comments