ಪಂಚಕಜ್ಜಾಯ

ಪಂಚಕಜ್ಜಾಯ

ಲೇಖನ - ಅಣುಕು ರಾಮನಾಥ್ 




ಪಂಚಕಜ್ಜಾಯದ ಸುತ್ತಮುತ್ತ

ನಾಯಕನಿಗೂ ವಿನಾಯಕನಿಗೂ 

ಹೆಚ್ಚಿಲ್ಲ ವ್ಯತ್ಯಾಸ

ವಿನಾಯಕನಿಗೆ ಪಂಚಕಜ್ಜಾಯ

ನಾಯಕನಿಗೆ 

ಲಂಚಕಜ್ಜಾಯ

ಎಂಬ ಅರ್ಥ ಬರುವಂತಹ ಸಾಲುಗಳನ್ನು ಕವಿಮಿತ್ರ ಡುಂಡಿರಾಜ್ ಬರೆದಿದ್ದಾರೆ. ಲಂಚಕಜ್ಜಾಯ ತಿಳಿದಂತಹದ್ದೇ. ಲಂಚಕಜ್ಜಾಯ ದುಶ್ಶಾಸನ (ದುಃಶಾಸನ-ಕೆಟ್ಟ ಶಾಸನ). ಪಂಚಕಜ್ಜಾಯ ಪಾಂಡವರಂತೆ - ಇಡಿಯಾಗಿರುವುದು ಕುಲ; ತುರಿತುರಿಯಾಗಿ ವಿಂಗಡಿಸಲ್ಪಡುವುದು ನ-ಕುಲ. ಪಂಚಕಜ್ಜಾಯದಲ್ಲಿ ಕೊಬ್ಬರಿಯೇ ನಕುಲ. ದೊಡ್ಡವರ ಸಂಗ ಮಾಡಿದರೆ ಚೆನ್ನಾಗಿ ಹುರಿದಂತಾಗುವುದು ಸಹಜವೇ. ಹೆಸರಿನಲ್ಲಿ ದೇವನೇ ಇದ್ದರೂ ಮಿಕ್ಕ ನಾಲ್ವರನ್ನು ಸಹನೆಯಿಂದ ಸಹಿಸಿಕೊಳ್ಳಬೇಕಾದ್ದರಿಂದಲೇ ಸಹದೇವ ಎಂದು ಹೆಸರು ಪಡೆದಿರಬಹುದಾದ ಅಂತಿಮಪಾಂಡವನಂತೆಯೇ ಕಡಲೆಬೇಳೆ. ಅಚ್ಚಾಗಿ, ಆಲೆಮನೆಯ ಮೆಚ್ಚಾಗಿ, ಹಲವಾರು ಸಿಹಿಗಳ ಜೀವಾಳವಾಗುವ ಬೆಲ್ಲ ಇಡಿಯಾಗಿಯೂ, ಬಿಡಿಯಾಗಿಯೂ ಎಲ್ಲರ ಗಮನ ಸೆಳೆಯುವುದಲ್ಲದೆ ಎಲ್ಲರಿಂದಲೂ ಮೆಚ್ಚುಗೆಯನ್ನೂ ಪಡೆಯುತ್ತದೆ. "ನನ್ನನ್ನೇ ಪ್ರಪಂಚದ ಶ್ರೇಷ್ಠ ಬಿಲ್ಲುಗಾರನಾಗಿಸಿ ಗುರುಗಳೆ" ಎಂದು ಚಿಕ್ಕಂದಿನಲ್ಲೇ ಖ್ಯಾತಿಯ ಅಪ್ಲಿಕೇಶನ್ ಹಾಕಿದ್ದ ಅರ್ಜುನನೇ ಬೆಲ್ಲ. ಮೊದಲಿಗೆ ರಕ್ಕಸರ ಕಿವಿಗಳನ್ನು ಹಿಡಿದು ಎತ್ತಿಕುಕ್ಕಿ, ಎದುರಾದ ಮರದ ರೆಂಬೆಗಳನ್ನು ಕತ್ತರಿಸಿ ಎಸೆಯುತ್ತಿದ್ದು, ನಂತರ ಬಾಂಡಲೆಯ ಕಿವಿಗಳನ್ನು ಹಿಡಿದು ಎತ್ತಿಕ್ಕಿ, ತರಕಾರಿಗಳನ್ನು ಕಚಕಚನೆ ಕತ್ತರಿಸುವ ಬಾಣಸಿಗನ ಮಟ್ಟಕ್ಕೆ ಇಳಿದ ಭೀಮನೇ ಘನರೂಪಿಯಾಗಿಯೂ, ದ್ರವರೂಪಿಯಾಗಿಯೂ ಸಲ್ಲಬಲ್ಲ ಸುಗಂಧಯುಕ್ತ ತುಪ್ಪ. ಧರ್ಮದ ಕೊರಡಿನಿಂದ ಉಜ್ಜಿದರೆ ಬೆಳ್ಳಗಾಗುವ, ಪಗಡೆಯ ಹಾಸಿನಲ್ಲಿ ಶಕುನಿಯ ಮುಂದೆ ಕಳೆಗುಂದಿ ಕಪ್ಪಾಗಿ ಕುಳಿತ ಧರ್ಮರಾಯನೇ ಕರಿಯೆಳ್ಳು. ತರ್ಪಣ ಬಿಡಲು ಬಳಸುವುದು ಎಳ್ಳನ್ನೇ. ಪಗಡೆಯಾಟದ ಹುಚ್ಚಿನಿಂದ ತನ್ನ ಮತ್ತು ತನ್ನವರ ಹದಿಮೂರು ವರ್ಷಗಳ ಸುಖಕ್ಕೇ ಎಳ್ಳುನೀರು ಬಿಡುವಲ್ಲಿ ದ್ರೌಪದಿಯ ಕಣ್ಣೀರೇ ನೀರು, ಧರ್ಮರಾಯನ ಹುಚ್ಚುತನವೇ ಕರಿಯೆಳ್ಳು ಆದದ್ದು ದಿಟ. "ಅಣ್ಣ ಹೇಳಿದಂತಾಗಲಿ" ಎಂದುದೂ, ಧರ್ಮಜನನ್ನು ಕರಿಯೆಳ್ಳಿಗೆ ಹೋಲಿಸಲು ಶಕ್ಯವಾದುದೂ ಭಾರತದಲ್ಲಿ ಅಂದೇ "black lives matter" ಅರಿವು ಇದ್ದುದನ್ನು ತೋರಿಸಿಕೊಡುತ್ತದೆ. 

ಪಂಚಕಜ್ಜಾಯದ ಒಂದೊಂದು ಸಾಮಗ್ರಿಯೂ ಒಂದೊಂದು ಸಂದೇಶ ಸಾರಬಲ್ಲದು. ಇಡಿಯಾಗಿ ಕುಳಿತು, ಅನಗತ್ಯ ಕಪ್ಪನ್ನು ಕಳೆದುಕೊಂಡು, ಅವಶ್ಯವಾದುದನ್ನು ಟ್ಯಾಟೂ ರೂಪದಲ್ಲಿ ಇರಿಸಿಕೊಂಡು, ಮಂಗಳಕಾರ್ಯಗಳಲ್ಲಿ ಸುಮಂಗಲಿಯರ ಕೈಗೆ ಹಸ್ತಾಂತರವಾಗುವ 'ಕೆತ್ತನೆಯ ಕೊಬ್ಬರಿ'ಯಿಂದ ಹಿಡಿದು ಮೋದಕದಲ್ಲಿ ಸಕ್ಕರೆಯನ್ನು ಈಕ್ವಲ್ ಪಾರ್ಟ್ನರ್ ಮಾಡಿಕೊಂಡು 'ರುಚಿವ್ಯಾಪಾರ'ಕ್ಕೆ ಇಂಬು ನೀಡುವವರೆಗೆ ವಿವಿಧ ರೂಪಗಳನ್ನು ತಾಳುವ ಕೊಬ್ಬರಿ 'ಅಣುವಾಗಿಯೂ ಮಹತ್ತಾಗಿಯೂ ಸಲ್ಲುವೆನ್ ಆನ್. ಅಣೋರಣೀಯನೂ ಮಹತೋ ಮಹೀಯನೂ ಆಗಿರ್ಪ ನಾನು ಪಚ್ಚತನದಲ್ಲೂ, ಶುಷ್ಕತೆಯಲ್ಲೂ ಉಪಯುಕ್ತವೆನಿಸುವ ಕಲ್ಪವೃಕ್ಷದ most ardent representitive" ಎಂದು ಪರಿಚಯಿಸಿಕೊಂಡೀತು. ನಯನಯೋ ಎನ್ನುವಂತಿರುವವರು ನಳನಳಿಸುವಂತಾಗಬೇಕಾದರೆ ಕೊಬ್ಬರಿಸೇವನೆ ಸೂಕ್ತ. 

ಗುಡ ಎನ್ನಿಸಿಕೊಂಡು, good ಆಗಿಯೇ ಇರುವ ಬೆಲ್ಲ ಮೋಹಕ್ಕೂ ಸೈ, ಮಧುಮೇಹಕ್ಕೂ ಸೈ. ನೂತನವಧೂವರರ ಶಿರದಿಂದ ಧರೆಗಿಳಿಯುವ 'ಜೀರಿಗೆ-ಬೆಲ್ಲ'ವಾಗಿ, ಸಂಕ್ರಾಂತಿಯ ಪ್ರಮುಖ ಮಿಶ್ರಣವಾದ 'ಎಳ್ಳು-ಬೆಲ್ಲ'ವಾಗಿ, ಮಿನಿಮಮ್ ಪ್ರಸಾದವಾದ 'ಕೊಬ್ಬರಿ-ಬೆಲ್ಲ'ವಾಗಿ, ಬೇಳೆಯೊಡನೆ ಸೇರಿ ಹಯಗ್ರೀವವಾಗಿ, ಅವಲಕ್ಕಿಯೊಡನೆ ಸೇರಿ ಬ್ರೇಕ್ಫಾಸ್ಟ್ ಆಗಿ, "ಎಲ್ಲರೊಡನೊಂದಾಗು ಮಂಕುತಿಮ್ಮ" ಎಂಬ ಕಗ್ಗಕ್ಕೆ ಉದಾಹರಣೆಯಾಗಿರುವ ಬೆಲ್ಲ ವೆಸ್ಟಿಂಡೀಸಿನ ಕ್ಲೈವ್ ಲಾಯ್ಡ್ ನಂತೆ - ರಿಚರ್ಡ್ಸ್ ಜೊತೆಯೂ ಸೆಂಚುರಿ ಜೊತೆಯಾಟಕ್ಕೆ ಸೈ, ಆಂಡಿ ರಾಬರ್ಟ್ಸ್ ಜೊತೆಯೂ ದೊಡ್ಡ ಮೊತ್ತದ ಜೊತೆಯಾಟಕ್ಕೆ ಸೈ. ಪುರಂದರದಾಸರ 'ಮಾಡು ಸಿಕ್ಕದಲ್ಲ...' ಹಾಡಿನಲ್ಲಿನ 'ಅಚ್ಚಿನೊಳಗೆ ಮೆಚ್ಚು; ಮೆಚ್ಚಿನೊಳಗೆ ಅಚ್ಚು' ಸಾಲು ಬೆಲ್ಲವನ್ನೇ ಕುರಿತೇ ಬರೆದಿರಬಹುದೆಂಬ ಗುಮಾನಿಯಿದೆ. 

ಕಡಲೆಬೇಳೆ ಪದವೇ ವಿಶಿಷ್ಟ. 'ಕಡಲೆ ಬೇಳೆ' ಎಂದು ವಿಂಗಡಿಸಿದರೆ ಬೆಸ್ತರ ಬೇಳೆ ಬೇಯುವುದೇ ಕಡಲಿನಿಂದ ಎಂಬ ಅರ್ಥ ಮೂಡುತ್ತದೆ. ಕಡಲೆಯ ಬಳಕೆ ಎರಡು ವಿಧದಲ್ಲಿ ಆಗುತ್ತದೆ - ನೆನೆಸಿ ಅಥವಾ ಹುರಿದು. ನೆನೆಸಿ ಬಳಸುವ ಕಡಲೆ ರಾಜ್ ಕಪೂರ್ ಫಿಲ್ಮ್ ಗಳ ಹೀರೋಯಿನ್ನಿನಂತೆ. ನೆನೆನೆನೆದು ರಸಿಕರು ಆಗಾಗ್ಗೆ ನೆನೆಯುವಂತೆ ಕಾಣುವುದು ಒಂದು ಅಂಶವಾದರೆ ರುಬ್ಬಿಸಿಕೊಳ್ಳುವುದು ಚಿತ್ರಜಗತ್ತಿನಲ್ಲಿ ಹೆಣ್ಣು ಅನುಭವಿಸುವ ಕೋಟಲೆಗಳ ಪ್ರತೀಕ. "ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ತರುವುದು" ಎಂಬ ರೀತಿಯಲ್ಲೇ ನೆನೆದು, ರುಬ್ಬಿಸಿಕೊಂಡು, ಕಾದ ಎಣ್ಣೆಯಲ್ಲಿ ಕುಣಿಕುಣಿದು ತಟ್ಟೆಗೆ ಬೀಳುವ ಆಂಬೊಡೆಯಂತೆಯೇ ಹೀರೋಯಿನ್ಗಳ ಪರಿಸ್ಥಿತಿ ಎಂದು ಬಲ್ಲವರು ಹೇಳಿಯಾರು. ಹುರಿಯಲ್ಪಡುವ, ಹುರಿದು ಮುಕ್ಕಲ್ಪಡುವ ಕಡಲೆ ಕೂಡುಕುಟುಂಬದ ಸೊಸೆಯ, ಉರಿಮುಖಿ ಬಾಸ್ ನ ಕೈಕೆಳಗಿನ ಸಿಬ್ಬಂದಿಯ ಪ್ರತೀಕವಂತೆ. 

"ಮದುವೆ-ಮುಂಜಿಗಳಲ್ಲಿ ಅನ್ನ ಬಡಿಸಿ, ಹುಳಿಯನ್ನೋ ಸಾರನ್ನೋ ಬಡಿಸುವುದಕ್ಕೆ ಮುಂಚೆ ಎಲ್ಲೋ ಒಂದು ಸಣ್ಣ ಸದ್ದು ಕೇಳಿಸತ್ತೆ. ಅದನ್ನೇ ತುಪ್ಪ ಅಂತ ಕರೀತಾರೆ" ಎನ್ನುತ್ತಿದ್ದರು ಮಾಸ್ಟರ್ ಹಿರಣ್ಣಯ್ಯ. "ಕೈಯಲ್ಲಿ ತುಪ್ಪದ ಗಿಂಡಿ ಹಿಡಿದು, ಪಂಕ್ತಿಯಲ್ಲಿ ಕುಳಿತ ಅಷ್ಟೂ ಜನರಿಗೆ ಬಡಿಸಿ ಕಡೆಗೆ ಗಿಂಡಿಯಲ್ಲಿ ಎಷ್ಟಿತ್ತೋ ಅಷ್ಟನ್ನೇ ಉಳಿಸಿಕೊಳ್ಳುವ ಕಲೆ" ಮದುವೆಮನೆಗಳಲ್ಲಿ ಬಡಿಸುವವರಿಗೆ 'ಉದ್ಧರಣೆಗತ'ವಾಗಿರುತ್ತದಂತೆ. ಸಾಲ ಮಾಡಿಯಾದರೂ ಇದನ್ನು ತಿನ್ನಲೇಬೇಕಂದು ಸುಭಾಷಿತವೇ ಹೇಳುತ್ತದೆ - ಋಣಂ ಕೃತ್ವಾ ಘೃತಂ ಪಿಬೇತ್! ತುಪ್ಪ ಮರಳುಮರಳಾಗಿದ್ದಷ್ಟೂ ಚೆನ್ನ ಎನ್ನುವುದು ಒಪ್ಪಬೇಕಾದದ್ದೇ. ನಮ್ಮ ಪುಟ್ಟ ಬಾಟಲನ್ನು ಜಾರಿಸಿ, ಮರಳಿನ ಮೇಲೆ ಚೆಲ್ಲಿದ ತುಪ್ಪವನ್ನು ಬಾಟಲಿಗೆ ಸೇರಿಸಿದ್ದು, ಆ ತುಪ್ಪ ನಮಗೆ 'ಮರಳುಮರಳಾಗಿ' ತಟ್ಟೆಯಲ್ಲಿ ಹರಡಿಕೊಂಡಿದ್ದು ಮಾತ್ರ ಸೇವಿಸಲು ದುಃಸಾಧ್ಯವಾಗಿತ್ತಷ್ಟೆ. ಬಾಣಂತಿಯರಿಗೆ ಪುಷ್ಟಿ ನೀಡುವ, ಊಟಕ್ಕೆ ರುಚಿ ನೀಡುವ ಈ ತುಪ್ಪ ಜೀವನಕ್ಕೆ ಅವಶ್ಯವಾದ ಕಲಾವಿದನಂತೆ. 



ಸಾಮಾನ್ಯವಾಗಿ ಒಂದೋ ಎರಡೋ ಚಮಚದಷ್ಟು ಸೇವಿಸಲ್ಪಡುವ ತುಪ್ಪವನ್ನು ದೊನ್ನೆಗಟ್ಟಲೆ ಸೇವಿಸುವ ಘಟಗಳೂ ಇದ್ದಾರೆ. ಅಂತಹವರ ಬಗ್ಗೆ ಬರೆಯುತ್ತಾ ಶ್ರೀನಿವಾಸ ವೈದ್ಯರು "ಭಟ್ಟರ ಮೈ ಸಾವಿರಾರು ದೊನ್ನೆಗಟ್ಟಲೆ ತುಪ್ಪದ ಸೇವನೆಯಿಂದ ಮಿರಮಿರಮಿರಮಿರ ಮಿರುಗುತ್ತಿತ್ತು. ಅವರ ಮೈಯಲ್ಲಿ ಯಾವ ಮಟ್ಟಕ್ಕೆ ತುಪ್ಪ ಸೇರಿತ್ತೆಂದರೆ ಭಟ್ಟರ ಚಂಡಿಕೆಯನ್ನು ಬತ್ತಿಯಾಗಿ ಹೊಸೆದು ಕಡ್ಡಿ ಗೀರಿದರೆ ಕನಿಷ್ಠ ಒಂದು ತಿಂಗಳಾದರೂ ದೀಪವಾಗಿ ಉರಿಯುತ್ತಿತ್ತು" ಎಂದಿದ್ದಾರೆ. ತುಪ್ಪವನ್ನು ಯಾವಾಗ ಆಗುವುದೋ, ಎಷ್ಟೆಷ್ಟು ಸಾಧ್ಯವೋ, ಅಷ್ಟಷ್ಟೂ ಸೇವಿಸಿಬಿಡಬೇಕಂತೆ. ಇಲ್ಲವಾದರೆ "ಮುಪ್ಪು ಬಂದಿತಲ್ಲ; ತಪ್ಪಲೆ ಪಾಯಸ ಉಣಲಿಲ್ಲ; ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲ" ಎಂದು ಪರಿತಪಿಸುವಂತೆ ಆಗುವುದೆಂದು ಪುರಂದರದಾಸರೇ ಹೇಳಿದ್ದಾರೆ. 

ಎಳ್ಳು ಮನುಷ್ಯನಿಗೆ ಕೊಬ್ಬು ಬರಲು ಪ್ರಮುಖ ಕಾರಣವಂತೆ. ಎಣ್ಣೆಗೆ ಎಣ್ಣೆ ಎಂಬ ಹೆಸರು ಬರಲು ಎಳ್ಳೇ ಕಾರಣ. 'ಎಳ್-ನೈ' ಎಂದರೆ ಎಳ್ಳಿನಿಂದ ತೆಗೆಯಲ್ಪಟ್ಟ ತೈಲವೇ ಉಚ್ಚಾರದ ಭರಾಟೆಯಲ್ಲಿ ಎಣ್ಣೈ-ಎಣ್ಣೆ ಆಗಿ ಬದಲಾದುದು. ಜನವರಿಯಲ್ಲಿ ಬಿಳಿಯ ಬಟ್ಟೆ ಧರಿಸಿ ಐದಾರು ಸ್ನೇಹಿತರೊಡಗೂಡಿ (ಹ್ಞಾಂ - ಸ್ನೇಹ ಎಂದರೆ ಜಿಡ್ಡು; ಕಡಲೆಬೀಜ, ಕೊಬ್ಬರಿಗಳಲ್ಲಿ 'ಸ್ನೇಹ' ಇರುವುದರಿಂದ ಅವು 'ಸ್ನೇಹಿತರು'!) ತಟ್ಟೆಗಿಳಿಯುವ ಎಳ್ಳು ವಿವಿಧ ಗೊಜ್ಜುಗಳ ಅಂಗವಾಗಿ ಮೆರೆಯುತ್ತಾ, ಮಹಾಲಯ ಅಮಾವಾಸ್ಯೆಯಂದು ವಿಶೇಷ ಪ್ರಾಮುಖ್ಯತೆ ಪಡೆದು "ಹುಟ್ಟು ಸಾವು ಎರಡರ ಮಧ್ಯೆ ಎರಡು ವಿಧದ ಎಳ್ಳು'  ಎನ್ನುವುದನ್ನು ತೋರ್ಪಡಿಸುತ್ತದೆ. 

"ಪಂಚಕಜ್ಜಾಯ" ಪದದಲ್ಲೇ ಪಂಚ, ಪಂಚಕ, ಕಜ್ಜ, ಆಯ, ಚಯಗಳೆಂಬ ಐದು ಬಿಡಿ ಪದಗಳಿವೆ. ಪಂಚ್ ನೀಡುವವನೇ ಪಂಚ ಎಂದಾದರೆ ಜಗದ ಮೊದಲ ಪಂಚ ಹನುಮಂತ ಎನ್ನಬಹುದು. ಮಹಾಭಾರತದ ಭೀಮನೂ 'ಪಂಚ'ನೇ. "ಭೀಮನು ಕೀಚಕನನ್ನು ಗುದ್ದಿ ಗುದ್ದಿ ಗುದ್ದಿ ಕೊಂದನು" ಎಂಬುದರಲ್ಲಿ ಗುದ್ದಿ ಗುದ್ದಿ ಎಂದೇ ಎರಡು ಪುಟಗಳಷ್ಟು ಬರೆದು 'ಎರಡು ಪುಟಗಳ ಪ್ರಬಂಧ'ವನ್ನು ಪೂರ್ಣಗೊಳಿಸಿದ್ದನಂತೊಬ್ಬ ವಿದ್ಯಾರ್ಥಿ. "ಪಂಚಕ" ವಿಷ್ಣುಪಂಚಕಕ್ಕೋ ಮತ್ತಾವುದಕ್ಕೋ ಬಳಸಿದಾಗ ಶ್ರೇಷ್ಠ; ಇಂದಿನ ಗ್ರಾಮಪಂಚಾಯತಿಯ ವಿಷಯಕ್ಕೆ ಬಂದರೆ ಅದು "ಪಂಚ-ಖಾ" ಎಂದು ಬದಲಾಗಿ "ಟಾಪ್ ಫೈವ್ ಕರಪ್ಟ್ ಪೀಪಲ್ ಆಫ್ ಪಂಚಾಯತ್" ಎಂದಾದೀತು. ಕಜ್ಜ ಉರುಫ್ ಕೆಲಸವಂತೂ 'ವರ್ಕ್ ಫ್ರಂ ಹೋಮ್', 'ವರ್ಕ್ ಫಾರ್ ಹೋಂ', 'ವರ್ಕ್ ಫಾರ್ ಎವೇ ಫ್ರಂ ಹೋಂ' ಎಂದು ವಿಂಗಡಣೆಗೊಂಡಿದೆ. ಸಜ್ಜಾದವ ಅಜ್ಜನಾಗುವವರೆಗೆ ದುಡಿಯುವ ದುಡಿಮೆಯೇ ಕಜ್ಜ! "ಆಯ" ಇಂದಿನ ಮಿಡಲ್ ಕ್ಲಾಸ್ಗಂತೂ 'ಗಯಾ' ಆಗುವುದೇ ಹೆಚ್ಚು. "ಚಯ" ಎಂದರೆ ಗುಂಪು. ಅದರ ಪರಿ-ಚಯ ಈ ಲೇಖನಕ್ಕೆ ಮೀರಿದ್ದೇ ಸೈ. ಒಂದಂತೂ ಸತ್ಯ - ಬರೆಯುವುದಕ್ಕೆ ಬ್ರೇಕ್ ತೆಗೆದುಕೊಳ್ಳುವೆನೆಂದಾಗ "ಮುಂದುವರಿಸಿ" ಎಂದ ಹೊರನಾಡಿನ ಚಿಲುಮೆಯ ಚಯ ನನಗೆ ಬಹಳವೇ ಪ್ರಿಯವಾದ ಸಂಚಯ. 

ಹಿಂದಿಯವರ ಉಚ್ಚಾರದಲ್ಲಿ ಪಂಚಕಜ್ಜಾಯವು ಪಂಚ್ ಕಾ ಜಾಯ್ ಆಗುತ್ತದೆ. ಇದರಲ್ಲೂ ಹಲವು ವಿಧ. "ಫ್ರೂಟ್ ಪಂಚ್"ನ ಸವಿಯನ್ನು ನೋಯರ್ರೇ ನೋಯರ್ರು. ಡಬ್ಲ್ಯೂಡಬ್ಲ್ಯೂ ಎಫ್ ನಲ್ಲೊಂದು ವಿಧದ ಪಂಚ್ ಕಾ ಜಾಯ್, ಸುಮೋ ರೆಸ್ಲಿಂಗಿನಲ್ಲೊಂದು ವಿಧದ್ದು, ಮುಷ್ಟಿಯುದ್ಧದಲ್ಲೊಂದು ಬಗೆಯದು ಪಂಚ್ ಗಳ ಖುಷಿ ಇರುತ್ತವೆ. ವಿನೋದಸಾಹಿತ್ಯದ ಪಂಚ್ ಕಾ ಜಾಯ್ ನಿಜಕ್ಕೂ ವರ್ಷಗಟ್ಟಲೆ ಮನದಲ್ಲಿ ನಿಲ್ಲಬಲ್ಲ ಜಾಯ್. 



ಇನ್ನು ಲಂಬಿಸಿದರೆ ಜಾಯ್ ಕಡಿಮೆಯಾಗಿ ನನಗೇ ಪಂಚ್ ನೀಡುವ ಮಂದಿಯ ಕ್ಯೂ ಬೆಳೆದೀತು. ಪಂಚಕಜ್ಜಾಯದ ಬಗ್ಗೆ ಬರೆಯಿರಿ ಎಂದ ನಾಣಿಗೆ ಪಂಚ ಸಲ್ಯೂಟುಗಳನ್ನು ಸಲ್ಲಿಸುತ್ತಾ ಕೀಬೋರ್ಡಿಗೆ ವಿರಾಮ ನೀಡುತ್ತೇನೆ. 

Comments


  1. ವಿನಾಯಕನಿಗೆ ಪಂಚಕಜ್ಜಾಯ ಅರ್ಪಿಸುವುದು ಸೂಕ್ತವಾಗಿಯೇ ಇದೆ. ಏಕೆಂದರೆ ವಿನಾಯಕನಲ್ಲಿರುವ ವಿ (V) ರೋಮನ್ ಅಂಕೆಯಲ್ಲಿ ಐದನ್ನು ಸೂಚಿಸುತ್ತದೆ ಅಲ್ಲವೇ? ಇನ್ನೊಂದು ಯೋಚನೆ: ಪಂಚಕಜ್ಜಾಯ ಎಂದರೆ ವಿನಾಯಕನಿಗೆ ಐದು ಬಗೆಯ ಕಜ್ಜಾಯಗಳನ್ನು (ಅತಿರಸ, ಗಾರಿಗೆ,ಇತ್ಯಾದಿ) ಅರ್ಪಿಸಬೇಕೇನೋ?

    ReplyDelete
    Replies
    1. Good angle. You are quick to observe and point out new avenues sir.

      Delete
  2. ಜಾಯ್ ಗೆ ಲಯ ಆಗದಂತೆ ಮುಂದುವರೆಸಿದ್ದು ನಮಗೆ ಸಿಕ್ಕ ದೊಡ್ಡ ಪಂಚ್ !!

    ReplyDelete
  3. This comment has been removed by the author.

    ReplyDelete

Post a Comment