ಸರ್ವೇ ಜನಾಃ ಸುಖಿನೋ ಭವಂತು

 ಸರ್ವೇ ಜನಾಃ ಸುಖಿನೋ ಭವಂತು

 ಲೇಖಕರು : ಎಂ ಆರ್ ವೆಂಕಟರಾಮಯ್ಯ 


 ‘ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು’ ಎಲ್ಲರೂ ಸುಖವಾಗಿರಲಿ, ಎಲ್ಲರಿಗೂ ಮಂಗಳವಾಗಲಿ ಎಂಬ ಉದಾತ್ತ ಆಶಯ ಭಾರತೀಯ ಸಂಸ್ಕೃತಿಯದು. ಇಂತಹಾ ಆಶಯ ಸಾಧ್ಯವೇ ಎಂಬ ಸಂಶಯ ಬೇಡ. ಏಕೆಂದರೆ ನಮ್ಮದು ಸುಸಂಸ್ಕೃತ ರಾಷ್ಟç, ಇಲ್ಲಿನ ಪ್ರಜೆಗಳು ಧಾರ್ಮಿಕ ಕ್ರಿಯೆಗಳಲ್ಲಿ ಬಲು ಆಸಕ್ತರು, ಸತ್ಸಂ ಸಂಪ್ರ ದಾಯ, ಹಿರಿಯರು ಹಾಕಿ ಕೊಟ್ಟ ಆಚಾರ ವಿಚಾರಗಳಲ್ಲಿ ಶ್ರದ್ಧೆಯುಳ್ಳವರು, ಮಾನವೀಯತೆಗೆ ಹೆಸರಾದವರು, ಹೀಗೇನೇ ಬಹು ಹಿಂದಿನಿAದಲೂ ನಮ್ಮ ದೇಶ ಕರ್ಮಭೂಮಿ, ತಪೋ ಭೂಮಿ, ಜ್ಞಾನ ಮತ್ತ ತ್ಯಾಗ ಭೂಮಿ ಎಂದೆಲ್ಲಾ ಪ್ರಸಿದ್ಧಿಯಾಗಿ ಅಂದಿನಿಂದ  ಇಂದಿನವರೆಗೂ ಹಲವಾರು ತ್ಯಾಗ ಜೀವಿಗಳು ತಮ್ಮ ಐಹಿಕ ಸಾಧನೆ, ಸನ್ಮಾರ್ಗಗಳಿಂದ ಬಾಳಿ ಅಮರರಾಗಿದ್ದಾರೆ.

 ಭಾರತೀಯ ಸಂಸ್ಕೃತಿಯ ಹಲವು ಉದಾತ್ತ ಧ್ಯೇಯಗಳಲ್ಲಿ “ಅತಿಥಿ ದೇವೋ ಭವ” ‘ಅಹಿಂಸಾ ಪರಮೋ ಧರ್ಮಃ’ “ಧರ್ಮೋ ರಕ್ಷತಿ ರಕ್ಷಿತಃ” ‘ಸತ್ಯಂ ವದ ಧರ್ಮ ಚರ’ ‘ನಾಸ್ತಿ ಸತ್ಯ ಸಮಂ ತಪಃ” “ಸತ್ಯನ್ನಾಸ್ತಿ ಪರೋಧರ್ಮಃ” “ಸತ್ಯಂ ಶಿವಂ ಸುಂದರ” “ಸತ್ಯವೇ ನಮ್ಮ ತಾಯಿ, ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು” ಎಂದು ಸಾರಿರುವ ಗೋವಿನ ಹಾಡು ನಮ್ಮ ದೇಶದ್ದೇ. ಈ ತತ್ವಗಳೆಲ್ಲಾ ಆತಿಥೇಯ ಧರ್ಮ, ಅಹಿಂಸೆ, ದಯೆ, ಸತ್ಯ ಧರ್ಮಗಳ ಪಾಲನೆ ಇವುಗಳ ಅನುಷ್ಠಾನದ ಅನಿವಾರ್ಯತೆ, ನಮ್ಮ, ಈ ತತ್ವಗಳ ನಡುವಿನ ನಿಕಟ ಬಾಂಧವ್ಯ ಎಷ್ಟರ ಮಟ್ಟಿನದು ಎಂಬುದನ್ನು ಸೂಚಿಸುತ್ತವೆ. 



ಇಂತಹಾ ಭವ್ಯ ಪರಂಪರೆ, ತತ್ವ, ಸಿದ್ಧಾಂತ, ನೀತಿ, ನಿಯಮಗಳನ್ನು ಅನೂಚಾನವಾಗಿ ಪಾಲಿಸಿ, ಎಲ್ಲರೊಡನೆ ಶಾಂತಿಯುತ ಸಹಬಾಳ್ವೆ ನಡೆಸುತ್ತಾ, ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ದಿವ್ಯ ಸಂದೇಶವನ್ನು ಜಗತ್ತಿಗೇ ಸಾರಿ, ಮಾನವೀಯತೆಗೆ ನೆಲೆವೀಡಾದ ನಮ್ಮೀ ಪುಣ್ಯಭೂಮಿ ಭಾರತದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಜನರಲ್ಲಿ ಅಹಂ, ಸ್ವಾರ್ಥ ಬುಸುಗುಟ್ಟುತ್ತಿದೆ. ಇದರಿಂದ ಮಾನವೀಯತೆ, ಮನುಷ್ಯತ್ವಕ್ಕೇ ಬರ ಬಂದಿರುವುದು ಇಂದಿನ ದೊಡ್ಡ ದುರಂತವಾಗಿದೆ. ಇಂತಹಾ ಶೋಚನೀಯ ಪರಿಸ್ಥಿತಿಯಿಂದ ನೊಂದ ರಾಷ್ಟç ಕವಿ ದಿವಂಗತ ಡಾ| ಜಿ. ಎಸ್. ಶಿವರುದ್ರಪ್ಪನವರು ‘ಕೆಲವು ಪ್ರಶ್ನೆಗಳು’ ಎಂಬ ತಮ್ಮ ಕವನದಲ್ಲಿ ಮೂರು ಮೂಲಭೂತ ಪ್ರಶ್ನೆಗಳನ್ನು ಎತ್ತಿ, ಅದಕ್ಕೆ ಉತ್ತರ ಬಯಸಿದ್ದು, ಅದರಲ್ಲಿ ಮೊದಲನೆಯದು, “ನಾನು ಹುಡುಕುತ್ತಿರುವುದು ಮನುಷ್ಯರನ್ನು | ದಯಮಾಡಿ ಹೇಳಿ ಅವರೆಲ್ಲಿದ್ದಾರೆ ? ಎಂಬುದು. ನಾವೆಲ್ಲರೂ ಒಂದೇ ಸೃಷ್ಟಿಕರ್ತನ : ಭೂಮಿಯ ಮಕ್ಕಳಾಗಿ ಒಂದೇ ಮನುಷ್ಯ ಜಾತಿಗೆ ಸೇರಿದವರಾದರೂ, ನಮ್ಮೆಲ್ಲರ ನೋವು ನಲಿವುಗಳು ಆಸೆ ಆಕಾಂಕ್ಷೆಗಳು ಒಂದೇ ಆದರೂ ನಾವೇಕೆ ಪರಸ್ಪರ ಶತ್ರು : ರಾಕ್ಷಸರಂತೆ ವರ್ತಿಸುತ್ತಿದ್ದೇವೆ ? 

 ‘ಏನಾದರೂ ಸರಿ, ಮೊದಲು ಮಾನವನಾಗು’ ಎಂಬ ಕನ್ನಡದ ಹಿರಿಯ ಕವಿ, ದಿವಂಗತ ಡಾ| ಸಿದ್ಧಯ್ಯಪುರಾಣಿಕ್‌ರವರ ಕವನದ ಸಾಲುಗಳು, ‘ಯೋಗಿ ಆಗಬೇಡ, ಭೋಗಿ ಆಗಬೇಡ, ಮನುಷ್ಯನಾಗು’ ಎಂದಿರುವ ಖ್ಯಾತ ಕವಿ ವಾಣಿ, ‘ನುಡಿಯುವುದು ಸುಲಭ, ನುಡಿದಂತೆ ನಡೆಯುವುದು ಕಷ್ಟ. ದಿಟವಾಗಿ ಮಾನವನಾಗುವುದು ದಿಟವಾಗಿ ರಾಜನಾಗುವಷ್ಟೇ ಕಷ್ಟ. ಎರಡಕ್ಕೂ ಧೈರ್ಯ, ಸ್ಥೈರ್ಯ ಶುದ್ಧ ಮನೋಧರ್ಮ, ಸಾಧನೆ ಬೇಕು’ ಎಂದಿರುವ ‘ಕನ್ನಡದ ಆಸ್ತಿ ನಮ್ಮೀ ಮಾಸ್ತಿ’ ಎಂಬ ಹೊಗಳಿಕೆಗೆ ಪಾತ್ರರಾದ ಡಾ| ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ ನುಡಿಗಳು ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ಕಣ್ ತೆರೆಸಬೇಕು.

 ಇಂದು ಜರುಗುತ್ತಿರುವ ಅಧರ್ಮ, ಅನ್ಯಾಯ, ಹಿಂಸೆ, ಕ್ರೌರ್ಯ ಮೊದಲಾದ ಹಲವು ಅನರ್ಥಗಳಿಗೆ ಕಾಮ, ಮೋಹಗಳೇ ಮುಖ್ಯ ಕಾರಣ. “ಮನುಷ್ಯನಲ್ಲಿರುವ ಅಜ್ಞಾನ. ವಸ್ತು, ವಿಷಯ, ವ್ಯಕ್ತಿ, ತತ್ವದ ಬಗ್ಗೆ ಯಥಾರ್ಥವಾದ ಅರಿವಿನ ಅಜ್ಞಾನ. ನಾನು, ನನ್ನದು ಎಂಬ ಅಹಂ, ಸ್ವಾರ್ಥ ನಮ್ಮ ಕಣ್ಣಿಗೆ ಮಾಯೆಯ ಪೊರೆಯನ್ನು ಹೊದಿಸಿರುವುದರಿಂದಲೇ ನಮ್ಮ ಅಜ್ಞಾನ ಬೆಳೆಯುತ್ತಿದೆ. ನಮ್ಮ ಅಂತಸ್ತು, ಜಾತಿ, ಮತ, ಧರ್ಮ ಇವುಗಳ ಮೇಲಿನ ವಿಪರೀತ ಅಭಿಮಾನವೇ ನಮ್ಮಲ್ಲಿ ಭೇದ ಜ್ಞಾನ  ಹುಟ್ಟಿಸಿದೆ. ನಾವು ಅರಿಯಬೇಕಾದ್ದು ಎಂದರೆ ಮಾನವರೆಲ್ಲರಲ್ಲ್ಲೂ ಪರಿಪೂರ್ಣವಾದ ಬ್ರಹ್ಮನೇ ಆತ್ಮ ಸ್ವರೂಪದಲ್ಲಿ ನೆಲೆಸಿದ್ದಾನೆ. ಹೀಗಾಗಿ ಮಾನವರೆಲ್ಲರೂ ಮೂಲತಃ ದೈವೀ ಸ್ವರೂಪರೇ. ಎಲ್ಲರೂ ಸಮಾನರೇ. ವಸ್ತು ಸ್ಥಿತಿ ಹೀಗಿರುವಾಗ, ಮನುಷ್ಯ ಮನುಷ್ಯನ ನಡುವೆ ಭೇದ ದೃಷ್ಟಿ ಮೂರ್ಖತನ. ನಾವು ಶ್ರೇಯಸ್ಸನ್ನು ಬಯಸುವವರಾದರೆ ‘ಭೇದ ಬುದ್ಧಿ’ ಎನ್ನುವ ಕೆಸರಿನ ಹೊಂಡದಿಂದ ಮೇಲೆದ್ದು ಸರ್ವ ಮಾನವರನ್ನೂ ಸಮನಾಗಿ ಕಾಣುತ್ತಾ ಸಾರ್ಥಕ ಜೀವನ ನಡೆಸಿ” ಎಂಬ ಸದ್ಗುರುವಾಣಿ ನಮ್ಮ ಕಣ್ತೆರೆಸಬೇಕು. 

 ಇಂತಹಾ ಸತ್ಯವನ್ನು ಅರಿಯಲು, ಅರಿತು ಪಾಲಿಸಲು ಹೆಚ್ಚು ವಿದ್ಯೆ ಅಗತ್ಯವಿಲ್ಲ, ಬದಲಿಗೆ ನಮ್ಮ ದೃಷ್ಟಿಕೋನ ಬದಲಾಗಬೇಕು. ಇದೇ ಸಂದರ್ಭದಲ್ಲಿ ನಾ ಕೇಳಿದ ಒಬ್ಬ ಹೂವು ಮಾರುವವಳ ನುಡಿ, ನಡೆಗಳ ಕಿರು ಚಿತ್ರಣ ಹೀಗಿದೆ :

 ಶ್ರಾವಣ ಮಾಸದ ಶನಿವಾರವಂದು. ಶ್ರೀ ವೆಂಕಟೇಶ್ವರ ಸ್ವಾಮಿಯ ಆಲಯಕ್ಕೆ ಎಂದು ಹೊರಟ ನಾನು, ದಾರಿಯಲ್ಲಿ ಕಾಣಿಸಿದ ಹೂವು ಮಾರುವವಳ ಬಳಿ ನಾಲ್ಕು ಮೊಳ ಹೂ ಕೊಂಡು ಹಣ ಕೊಟ್ಟಾಗ, ಆಕೆ ನೋಟನ್ನು ಭಕ್ತಿಯಿಂದ ಕಣ್ಣಿಗೊತ್ತಿಕೊಂಡು, ಅದನ್ನು ಒಮ್ಮೆ ಭೂಮಿಗೆ ಮುಟ್ಟಿಸಿ, ಮತ್ತೊಮ್ಮೆ ತನ್ನ ಹೂವಿನ ಬುಟ್ಟಿಗೆ, ನಂತರ ನನ್ನ ಕಡೆಗೆ, ಆಮೇಲೆ ಆಗಸದ ಕಡೆಗೆ, ಮತ್ತೆ ತನ್ನ ಶಿರದ ಹಿಂಭಾಗದತ್ತ ತೋರಿಸಿ ನೋಟನ್ನು ತನ್ನ ಪರ್ಸಿನಲ್ಲಿ ಇಟ್ಟುಕೊಂಡಳು. ಆಕೆಯ ಆ ವಿಚಿತ್ರ ವರ್ತನೆ ನನಗೆ ಒಮ್ಮೆಗೇ ನಗೆ, ಅಶ್ಚರ್ಯಗಳನ್ನು ಮೂಡಿಸಿದುವು. ಕುತೂಹಲ ತಣಿಸಲು ಯಾಕಮ್ಮಾ ಹಾಗೆ ಮಾಡಿದೆ ! ಎಂದು ಆಕೆಯನ್ನು ವಿಚಾರಿಸಿದಾಗ, “ಇದು ನನ್ನ ಪೂಜೆ ಸ್ವಾಮಿ, ನನ್ನ ಹೂವಿಗೆ ನೀವೇ ಮೊದಲ ಗಿರಾಕಿಯಾದ ಕಾರಣ, ನಿಮ್ಮ ಕೈ ಬೋಣಿ ಚೆನ್ನಾಗರ‍್ಲಿ, ಇಂದು ನನ್ನ ವ್ಯಾಪಾರ ಹೆಚ್ಚಾಗಲಿ ಎಂದು ನೀವಿತ್ತ ಹಣಕ್ಕೆ, ಈ ಹೂ ಬೆಳೆಸಿದ ಭೂ ತಾಯಿಗೆ, ರೈತನಿಗೆ, ನನ್ನ ಕೈ ಹಿಡಿದು ರಕ್ಷಿಸುತ್ತಿರುವ ಪತಿ, ಮಕ್ಕಳು ಚೆನ್ನಾಗಿರಲಿ ಎಂದು ನನ್ನ ನಮಸ್ಕಾರಗಳು ಎಂದ ಆಕೆ, ಎಲ್ಲರೂ ಚೆನ್ನಾಗಿದ್ದರಲ್ವಾ ಸ್ವಾಮಿ, ನಾ ಚೆನ್ನಾಗಿರುವುದು ! ಎಂದುತ್ತರಿಸಿದಳು”. ಆಹಾ ! ಅವಿದ್ಯಾವಂತಳಾದರೂ ಎಂತಹಾ ಉದಾತ್ತ, ಸದಾಶಯ, ಈಕೆಯದು, ಮೆಚ್ಚಬೇಕಾದ್ದೇ ಈಕೆಯ ಸದ್ಭಾವನೆಯನ್ನು, ಆ ದೇವನ ಈ ಸೃಷ್ಟಿಯನ್ನು ಎಂದು ತಲೆದೂಗಿ ಆಲಯದಲ್ಲಿ ಪೂಜೆ ಮುಗಿಸಿ ಮನೆ ಸೇರಿದೆ. ಶರೀರ ಮನೆಯಲ್ಲಿದ್ದರೂ, ಮನ ಮಾತ್ರ ಆಕೆಯಾಡಿದ ಮಾತುಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತಿತ್ತು. 

ವಿದ್ಯಾವಂತರಾದ ನಾವು ದೇವರ ಮುಂದೆ ನಿಂತು, ಸ್ವಾಮಿ, ನನಗೆ, ನನ್ನ ಕುಟುಂಬದವರಿಗೆ ಇದು, ಅದು, ಎಲ್ಲವನ್ನೂ ಕೊಡು, ನಮ್ಮನ್ನೆಲ್ಲಾ ಚೆನ್ನಾಗಿಟ್ಟಿರು, ನನ್ನ ಮಕ್ಕಳಿಗೆ ಹೆಚ್ಚಿನ ವಿದ್ಯೆ, ಒಳ್ಳೆಯ ಬುದ್ಧಿ, ಐಶ್ವರ್ಯ ಕೊಡು ಎಂದು ದೀನರಾಗಿ ಬೇಡುತ್ತೇವೆಯೇ ಹೊರತು, ನಮ್ಮಂತೆಯೇ ಬೇರೆಯವರೂ ಚೆನ್ನಾಗಿರಲಿ ಎಂದು ಹಾರೈಸುತ್ತೇವೆಯೇ ! ಹಾಗೆ ಮಾಡಿ ಎಂದು ನಾನೆಂದರೆ, ‘ಅಯ್ಯೋ ಹೋಗಿ ಸ್ವಾಮಿ, ನೀವೂ ಚೆನ್ನಾಗೇ ಹೇಳ್ತೀರಾ ! ‘ಊರು ಕಾದು ದೊಡ್ಡ ಬೋರೇ ಗೌಡ ಎನಿಸಿಕೊಂಡ ಪರರ ಚಿಂತೆ ನಮಗೇಕೆ ? ಎಂಬ ಗಾದೆಯಂತೆ, ನಮ್ಮದು ನಾವು ನೋಡಿಕೊಳ್ಳೋಣ ಎನ್ನುವವರು ಬಹಳಷ್ಟು ಮಂದಿ. ಯಾರು ಹಿತವರು ನಿಮಗೆ ಈ ಇಬ್ಬರೊಳಗೆ ! ಆವಿದ್ಯಾವಂತ ಮಹಿಳೆಯೋ ? ಈ ವಿದ್ಯಾವಂತ ನಾಗರಿಕರೋ ! ಎಂಬ ಪ್ರಶ್ನೆ ನಮ್ಮ, ನಿಮ್ಮನ್ನು ಕಾಡಬಹುದಲ್ಲವೇ ? ಹೀಗೆ ಯಾರಾದರೂ ಬೇರೆಯವರ ಹಿತ ಕೋರಿದವರಿದ್ದರೆ ತಿಳಿಸಿ ಸ್ವಾಮಿ, ಎಂದಿರಾ ! ಇಲ್ಲಿದೆ ಅಂತಹ ಕೆಲವರ ಪ್ರಸಂಗಗಳು : 

 ಶ್ರೀಮನ್ಮಹಾರಾಜರು ಈ ನಾಡನ್ನು ಆಳುತ್ತಿದ್ದ ಕಾಲದ ದಸರಾ ಸಮಯವದು. ಅಲಂಕರಿಸಿದ ಬೊಂಬೆಗಳನ್ನಿಟ್ಟವರ ಮನೆಗಳಿಗೆ ಬೊಂಬೆ ನೋಡಲು ಹೋಗುತ್ತಿದ್ದ ಮಕ್ಕಳು, “ಮಳೆ ಬಂದು ಬೆಳೆ ಬೆಳೆದು ಇಳೆ ತಣಿಯಲೆಂದು, ತಿಳಿಗೊಳಗಳುಕ್ಕಿ ಗೋವ್ಗಳು ಕರೆಯಲೆಂದು, ನಳಿನಾಕ್ಷಿಯರು ಸುಂದರ ಪುತ್ರರನ್ನು ಹಡೆಯಲೆಂದು, ಇಳೆಯೊಳಗೆ ಹರಸಿದೆವು ಪುಟ್ಟ ಬಾಲಕರು ನಾವ್ಬಂದು” ಎಂಬ ಸಾಲುಗಳನ್ನು ಮರ‍್ನವಮಿಯ ಪದಗಳಾಗಿ ಹಾಡುತ್ತಿದ್ದರಂತೆ. ಇದೇ ದಾಟಿಯಲ್ಲಿ, ಮನೆಯ ಮುಖ್ಯಸ್ಥನಿಗೆ, ಸಂಘ ಸಂಸ್ಥೆ, ರಾಜ್ಯದ ಪ್ರಮುಖರಿಗೂ, “ಅಂದಣವು ಪಲ್ಲಕ್ಕಿ, ಪದವಿ ನಿಮಗಾಗಿ, ಇಂದ್ರನAದದಿ ಅಷ್ಟಭೋಗ ನಿಮಗಾಗಿ, ಖಂಡೆಯದ ಶತ್ರುಗಳು ಪದಚ್ಯುತರಾಗಿ, ಮಂಡೆಯಾ ಹೂವು ಬಾಡದ ಸುಖ ಸಂತಸ ನಿಮದಾಗಲಿ” ಎಂಬ ಮಾತುಗಳಲ್ಲಿ ಶುಭ ಹಾರೈಸಲಾಗುತಿತ್ತಂತೆ. ವಿದ್ಯೆ ಬುದ್ಧಿಗಳಲ್ಲಿ ಇಂದಿನಷ್ಟು ಮುಂದುವರಿಯದ ಆ ಹಿಂದಿನ ದಿನಗಳಲ್ಲೂ ಜನರ ಸದ್ಭಾವನೆ ಎಂತಹುದಿತ್ತು ಎಂಬುದನ್ನು ಮೇಲಿನ ಸಾಲುಗಳು ನಮಗೆ ತಿಳಿಸುತ್ತವೆ. ಇವೇ ಅಲ್ಲವೇ ‘ಸರ್ವೇ ಜನಾಃ ಸುಖಿನೋ ಭವಂತು, ಎಂಬುದರ ನಿಜವಾದ ಅರ್ಥ, ಭಾವನೆ ? 

 ಸೊಪ್ಪು ಮಾರುವಾಕೆಯ ಬಳಿ ಒಬ್ಬ ಗೃಹಸ್ಥ ಸೊಪ್ಪು ಖರೀದಿಸಿ ಹಣ ಕೊಟ್ಟ. ಅದಕ್ಕೆ ಚಿಲ್ಲರೆ ಕೊಡುವಾಗ, ಆಕೆ ಒಂದು ನಾಣ್ಯವನ್ನು ಕೆಳಗೆಲ್ಲೋ ಬೀಳಿಸಿಕೊಂಡ ಕಾರಣ, ಅದನ್ನು ಹುಡುಕತೊಡಗಿದಳು. ಆಕೆಯ ಅವಸ್ಥೆ ಕಂಡು ಮರುಕಗೊಂಡ ಗೃಹಸ್ಥ, ಹೋಗಲಿ ಬಿಡಮ್ಮ, ಮತ್ತೆಂದಾದರೂ ನಾ ಸಿಕ್ಕಾಗ ಅದನ್ನು ನನಗೆ ನೀ ಕೊಡಬಹುದು ಎಂದ. ಆದರೆ ಸಾಧಾರಣ ವ್ಯಕ್ತಿ ಆಕೆಯಾಗಿರಲಿಲ್ಲ. “ಅದಾಗದು ಸ್ವಾಮಿ, ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ. ಯಾರು ಎಷ್ಟು ಕಾಲ ಇರತಾರೋ ತಿಳಿಯದು, ನಿಮ್ಮ ಹಣ ಕೊಡದೆ ಅಕಸ್ಮಾತ್ ನಾ ತೀರಿಹೋದರೆ, ಮುಂದಿನ ಜನ್ಮದಲ್ಲಿ ನಿಮ್ಮ ಮನೆಯಲ್ಲಿ ನಾ ನಾಯೋ ಬೆಕ್ಕೋ ಆಗಿ ದುಡಿದು ನಿಮ್ಮ ಋಣವನ್ನು ತೀರಿಸಬೇಕಾಗುತ್ತದೆ. ಆ ಪೊರಪಾಟು ಬ್ಯಾಡ ಸ್ವಾಮಿ” ಎನ್ನುತ್ತಾ ತನ್ನಲ್ಲಿದ್ದ ಮತ್ತೊಂದು ನಾಣ್ಯವನ್ನು ಗೃಹಸ್ಥನಿಗೆ ನೀಡಿ ಋಣ ಮುಕ್ತಳಾದಳು. ಅಂದರೆ ಇದರ ಸಾರಾಂಶ ಸರಳ. ಯಾರ ಹಣ ಸೊತ್ತನ್ನು ಯಾರೂ ಅಕ್ರಮ ಅನ್ಯಾಯವಾಗಿ ಅನುಭವಿಸುವುದು ಬೇಡ. ನೀವೂ ಚೆನ್ನಾಗಿರಿ, ನಾವೂ ಚೆನ್ನಾಗಿರೋಣ, ‘ಸರ್ವೇ ಜನಾಃ ಸುಖಿನೋ ಭವಂತು’ ಎಂದು ಬಾಳೋಣ ಎಂಬುದೇ ಆಗಿದೆ. ಆ ಸೊಪ್ಪು ಮಾರುವಾಕೆ, ಶಾಲೆಗೆ ಹೋಗಿ ಕಲಿತವಳಲ್ಲ, ಸಾಧು ಸಂತರ ಪ್ರವಚನ, ಉಪನ್ಯಾಸಗಳನ್ನು ಕೇಳಿದವಳಲ್ಲ. ಆದರೂ ಆಕೆ ಗಳಿಸಿಕೊಂಡ ಜೀವನಾನುಭವ, ತಿಳಿದ ಸತ್ಯವನ್ನು ಮುಚ್ಚು ಮರೆಯಿಲ್ಲದೆ ಸಾರ್ವಜನಿಕವಾಗಿ ವ್ಯಕ್ತಪಡಿಸಿದಳು. ತನ್ನ ನಡೆ ನುಡಿಗಳಲ್ಲಿ ವ್ಯತ್ಯಾಸವಿಲ್ಲ ಎಂಬುದನ್ನು ತನ್ನ ವರ್ತನೆಯಿಂದ ಸೂಚಿಸಿದಳು. ಅನಕ್ಷರಸ್ಥರೇ ಹೀಗೆ ನಡೆವಾಗ, ಅತಿ ವಿದ್ಯಾವಂತರು, ನಾಗರಿಕರು ಎಂದು ಬೀಗುವ ನಾವು, ಮನುಷ್ಯರು, ಸರ್ವೇ ಜನಾಃ ಸುಖಿನೋ ಭವಂತು ಎಂಬ ತತ್ವವನ್ನು ನಮ್ಮ ನಡೆ ನುಡಿಗಳಲ್ಲಿ ಅಳವಡಿಸಿಕೊಂಡು ದುರ್ಲಬವಾದ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಡವೇ ? ಈ ಸದ್ವಿಚಾರದ ಬಗ್ಗೆ ಚಿಂತಿಸಲು ಇದು ಸಕಾಲವಲ್ಲವೇ ? 

 || ಸರ್ವೇ ಭವಂತು ಸುಖಿನಃ | ಸರ್ವೇ ಸಂತು ನಿರಾಮಯಾಃ | ಸರ್ವೇ ಭದ್ರಾಣಿ ಪಶ್ಯಂತು | ಮಾ ಕಶ್ಚಿತ್ ದುಃಖ ಭಾಗ್ಭವೇತ್ || ಎಲ್ಲರೂ ಸುಖಿವಾಗಿರಲಿ, ಎಲ್ಲರೂ ನಿರತಂಕವಾಗಿರಲಿ, ಶುಭವಾದದನ್ನೇ ಕಾಣಲಿ, ಯಾರೂ ದುಃಖಿಗಳಾಗದಿರಲಿ.


Comments

  1. ಲೇಖನವೂ ಅರ್ಥಪೂರ್ಣ ವಾಗಿದ್ದು, ಮನುಷ್ಯನು ಸ್ವಾರ್ಥಿ ಆಗಿರದೆ ಸಕಲರ ಒಳಿತುನ್ನು ಬಯಸುವಂತೆ ಪ್ರೇರೇಪಿಸುವ ಲೇಖನವಾಗಿದೆ.

    ReplyDelete

Post a Comment