ಆಸರೆ ಮನೆ - 9

 ಆಸರೆ ಮನೆ - ಭಾಗ 9

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ 



ರಾತ್ರಿ ಕೆಲಸ ಮುಗಿಸಿ ಗಂಡ-ಮಗ ಮನೆಗೆ ಬಂದ ನಂತರ ಮಾತನಾಡಬೇಕೆಂದುಕೊಂಡಳು. ರಾತ್ರಿ ಎಲ್ಲರೂ ಟೇಬಲ್ ಮುಂದೆ ಕುಳಿತು ಹರಟೆ ಹೊಡೆಯುತ್ತ ಊಟ ಮುಗಿಸಿದರು. ಅನಾಮಿಕ ಸಡಗರದಿಂದ ಓಡಾಡುತ್ತ ಎಲ್ಲರಿಗೂ ಬಡಿಸಿದಳು. ಅನಾಮಿಕಾಳ ಕೈ ಪ್ರಜ್ವಲ್ ತಟ್ಟೆಯ ಬಳಿ ಬಂದಾಗ ಕೊಂಚ ಹೆಚ್ಚಾಗಿಯೇ ಬಡಿಸುತ್ತಿದ್ದುದು ಇದ್ದಕ್ಕಿದ್ದಂತೆಯೇ ರಂಜನ್ ಮಿಶ್ರಾ ಕಣ್ಣಿಗೂ ಬಿದ್ದಿತು. ಆದರೆ ಅದಕ್ಕೇನು ಮಹತ್ವ ಕಾಣಲಿಲ್ಲ ಅವರಿಗೆ. 

ರಾತ್ರಿಯ ಕೆಲಸಗಳನ್ನೆಲ್ಲ ಮುಗಿಸಿ ಎಲ್ಲರೂ ಅವರವರ ರೂಮಿಗೆ ಸೇರಿದರು. ಎಲ್ಲ ರೂಮಿನಲ್ಲೂ ಟಿ.ವಿ ಇದ್ದುದರಿಂದ ಎಲ್ಲರಿಗೂ ಅವರವರದೇ ಪ್ರಪಂಚ. 

ರಂಜನ್ ಮಿಶ್ರಾ ಊರ್ಮಿಳಾ ರೂಮಿಗೆ ಹೋದರು. ಬಾಗಿಲು ಹಾಕಿಕೊಂಡ ನಂತರ ಊರ್ಮಿಳಾ ಗಂಡನೊಡನೆ ಮಂಚದ ಮೇಲೆ ಕುಳಿತು ಮಾತಿಗಾರಂಭಿಸಿದಳು. 

''ರಂಜನ್ ನೀವು ಇತ್ತೀಚಿಗೆ ಪ್ರಜ್ವಲ್, ಅನು ರನ್ನು ಗಮನಿಸಿದ್ದೀರಾ?''

''ದಿನಾ ನೋಡುತ್ತಿದ್ದೆನಲ್ಲ ಊರ್ಮಿ ಈಗೇನು ವಿಶೇಷ?''

''ಹಾಗಲ್ಲ ರಂಜು ಅದು ವಿಶೇಷವಾಗಿರುವ ಹೊತ್ತಿಗೆ ಹೇಳುತ್ತಿದ್ದೇನೆ''. 

''ವಿಶೇಷ ಏನದು ವಿಶೇಷ''. ಅದು ಅದು ನನಗನಿಸಿದ್ದನ್ನು ಹೇಳುತ್ತಿದ್ದೇನೆ. ರಂಜು, ಪ್ರಜ್ವಲ್ ಅನು ಈಚೆಗೆ ತುಂಬಾ ಹತ್ತಿರವಾಗುತ್ತಿದ್ದರೆ ಎನಿಸುತ್ತಿಲ್ಲವೆ ನಿಮಗೆ?'' ''ಅದರಲ್ಲೇನು ವಿಶೇಷ ಅಣ್ಣ-ತಂಗಿ ಹತ್ತಿರವಾಗಿದ್ದಾರೆ''. 

''ಹಾಗಲ್ಲ ರಂಜು ಇದು ಬೇರೆಯ ತರಹ ಸೆಳೆತ ಎನಿಸುತ್ತಿದೆ ನನಗೆ''. 

''ಛೇ ಬಿಡು ಊರ್ಮಿ ನೀನು ಏನು ಹೇಳ್ತಿ. ಅವರಿಗೆ ಗೊತ್ತಿಲ್ಲವೇನು ತಾವು ಅಣ್ಣ-ತಂಗಿ ಎಂದು''. 

''ಗೊತ್ತಿರಬಹುದು. ಆದರೆ ಯೌವನ, ಬಿಸಿರಕ್ತ ಪ್ರೇಮಕ್ಕೆ ಕಣ್ಣಿಲ್ಲ ಎನ್ನುವುದು ಗೊತ್ತಲ್ಲ''

''ಹಾಗೇನು ಇಲ್ಲ ನೀನು ಚಿಂತೆ ಬಿಟ್ಟು ಮಲಗು'' ಎಂದು ಮಿಶ್ರಾ ಹೊದ್ದು ಮಲಗಿದರು.

***********

ಆದರೆ ಇದೇನು ಇಷ್ಟಕ್ಕೆ ಮುಗಿಯುವ ಪ್ರಕರಣ ಆಗಿರಲಿಲ್ಲ. ವಿಶಾಲ್ ಮಾತ್ರ ಇದ್ಯಾವುದನ್ನು ತಿಳಿಯದೆ ಇಂದಿನ ತನ್ನ ಕೆಲಸಗಳಲ್ಲಿ ಮಗ್ನನಾಗಿದ್ದ.   ಆದರೆ ಮಿಶ್ರಾ ದಂಪತಿಗಳಿಗೆ ಅನಿಶ್ಚಿಂತೆ ಇರಲಿಲ್ಲ. ಈಗ ಹೆಂಡತಿಯ ಅನುಮಾನದ ವಾಸನೆ ಮಿಶ್ರಾರ ಮೂಗಿಗೂ ಬಡಿಯ ತೊಡಗಿತು. ಏನು ಮಾಡುವುದೋ ಗೊತ್ತಾಗಲಿಲ್ಲ. 

ಕಡೆಗೆ ಊರ್ಮಿಳಾನೇ ಅದಕ್ಕೊಂದು ಪರಿಹಾರ ಹುಡುಕಿದಳು. ಅನಾಮಿಕಾಳನ್ನು ಚೆನ್ನೈಗೆ ಬಿಟ್ಟು ಬರುವುದೆಂದು ನಿರ್ಧರಿಸಿದರು. ಪ್ರಜ್ವಲ್ ಎಂ.ಡಿ ಸೀಟಿಗಾಗಿ ಎಂಟ್ರೆನ್ಸ್ ಬರೆಯಲು ನಾಲ್ಕು ದಿನಗಳ ಮಟ್ಟಿಗೆ ನಗರಕ್ಕೆ ಪ್ರಯಾಣ ಬೆಳೆಸಿದ್ದ. ಇದೇ ಸುಸಮಯ ಎಂದು ಊರ್ಮಿಳಾ ಅನಾಮಿಕಳೊಡನೆ ಚೆನ್ನೈ ಫ್ಲೈಟ್ ಹತ್ತಿದರು. 

ನಾಲ್ಕು ದಿನಗಳಲ್ಲಿ ಎಂಟ್ರೆನ್ಸ್ ಬರೆದು ಮರಳಿದ ಪ್ರಜ್ವಲ್ ಗೆ ಮನೆಯಲ್ಲಿ ಭಣ ಭಣ. ಅದಕ್ಕೆ ಕಾರಣ ಅನಾಮಿಕ ಮನೆಯಲ್ಲಿಲ್ಲ. ಕಾಲು ಸುಟ್ಟ ಬೆಕ್ಕಿನಂತೆ ಅಪ್ಪ ಅಮ್ಮ ಬರುವವರೆಗೆ ಓಡಾಡಿದ. ವಿಶಾಲ್ ಒಂದು ತಿಂಗಳು ಸೆಮಿನಾರ್ ಪ್ರೋಗ್ರಾಮ್ ಗಾಗಿ ಡೆಲ್ಲಿಗೆ ಹೊರಟಿದ್ದ. ತಂದೆ ತಾಯಿ ಬಂದ  ಕೂಡಲೇ ಪ್ರಜ್ವಲ್ ಅನಾಮಿಕಾಳ ಬಗ್ಗೆ ವಿಚಾರಿಸಿದ. ಡಾ||ಮಿಶ್ರಾ ''ಅದಿರಲಿ ಪ್ರಜೂ ನಿನ್ನ ಎಂಟ್ರೆನ್ಸ್ ಹೇಗಾಯಿತು. ಚೆನ್ನಾಗಿ ಬರೆದಿದ್ದೀಯ ಎಂ.ಡಿ ಸೀಟ್ ಸಿಗುವುದು ಗಟ್ಟಿನಾ ? ಎಂದರು.      

''ಅದು ಹೇಗೋ ಆಗುತ್ತೆ ಡ್ಯಾಡಿ ಅನು ಎಲ್ಲಿ ಹೋದಳು''

ಊರ್ಮಿಳಾ ಮಧ್ಯೆ ಬಾಯಿ ಹಾಕಿ ''ಅನು. ಅನು. ಅನು ಏನೋ ಇದು ಪ್ರಜೂ ಅವಳು ಅವರ ಅಮ್ಮ ಅಪ್ಪನ ಮನೆಗೆ ಹೋದ್ಲು. 

''ಏನು ಚೆನ್ನೈ ಗೆ ಹೋದಳ! ಯಾರನ್ನು ಕೇಳಿ ಹೋದಳು?

ಏನು ಯಾರನ್ನು ಕೇಳುವುದೇ? ಅಮ್ಮ-ಅಪ್ಪನ ಮನೆಗೆ ಹೋಗಲು ಯಾರನ್ನು ಯಾಕೆ ಕೇಳಬೇಕು. ಅವಳೇನು ನಮ್ಮಲ್ಲಿ ಶಾಶ್ವತವಾಗಿ ಇರಲು ಬಂದವಳ. ಮದುವೆಗೆ ಬಂದಿರುವ ಹುಡುಗಿ ಎಷ್ಟು ದಿನ ಬೇರೆಯವರ ಮನೆಯಲ್ಲಿ ಇರುತ್ತಾಳೆ?

''ಏನಂದೆ ಮಮ್ಮಿ! ಬೇರೆಯವರ ಮನೆ. ಇದು ಹೇಗೆ ಅವಳಿಗೆ ಬೇರೆಯವರ ಮನೆ, ಇದು ಅವಳ ಮನೆ''

''ಏನು, ಏನಂದೆ'' ತಂದೆ ತಾಯಿಗಳಿಬ್ಬರು ಒಟ್ಟಿಗೆ ಕಿರುಚಿದರು. 

''ಹೌದು ಇದು ಅವಳ ಮನೆ ನಾನು ಅವಳನ್ನು ಮದುವೆ ಆಗುತ್ತೇನೆ. ಅದು ಅವಳಿಗೂ ಗೊತ್ತು'' ಎಂದ ಪ್ರಜ್ವಲ್.

''ಮದುವೆ ಪ್ರಜ್ವಲ್...'' ಕಿರುಚಿದಳು ಊರ್ಮಿಳಾ 

''ಯಾಕೆ ಆಗಬಾರದ? '' ಪ್ರಜ್ವಲ್ ಕಿಡಿನುಡಿ. 

''ಉಹುಂ ಆಗಬಾರದು. ಅವಳು ನಿನ್ನ ತಂಗಿ. ನಿನ್ನ ದೊಡ್ಡಪ್ಪನ ಮಗಳು ತಿಳಿಯಿತಾ. ಈ ಮದುವೆ ಖಂಡಿತಾ ಸಾಧ್ಯವಿಲ್ಲ''. 

''ಇಲ್ಲ ಈ ಮದುವೆ ನಡೆದೇ ತಿರುತ್ತದೆ. ಯಾವುದೇ ಕಾರಣಕ್ಕೂ ನಾನು ಅವಳನ್ನು ಬಿಡುವುದಿಲ್ಲ. ಅನು ಏನು ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗಳಲ್ಲವಲ್ಲ'' ಎಂದು ಗುಡುಗಿದ. 

ದಂಪತಿಗಳಿಬ್ಬರೂ ಪೆಚ್ಚಾದರು. ಅವರಿಗೆ ಪ್ರಜ್ವಲ್ ನ ಹಟದ ಸ್ವಭಾವ ಮೊದಲಿನಿಂದಲೂ ಗೊತ್ತಿದ್ದುದೆ. ಅವನಂತು ವಿಶಾಲನಂತಹವನಲ್ಲ ಹಿಡಿದದ್ದೆ ಹಟ. ತನಗನಿಸಿದ್ದನ್ನು ಮಾಡದೆ ಬಿಡುವವನೇ ಅಲ್ಲ. ಇದರಿಂದಲೇ ಇಬ್ಬರಿಗೂ ಹೆದರಿಕೆ, ಚಿಂತೆ. ದಿಕ್ಕುಗಾಣದಂತಾದರು. 

ಒಂದು ವಾರ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಕಡೆಗೆ ಒಂದು ದಿನ ಎಲ್ಲ ಬಯಲಾಯಿತು. 

ಡಾಕ್ಟರ್ ದಂಪತಿಗಳಿಬ್ಬರು ತಮ್ಮ ವೈದ್ಯಕೀಯ ವಿದ್ಯೆಯನ್ನೇ ಬಳಸಿಕೊಂಡು ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಪ್ರಾಣ ಬಿಟ್ಟರು. ಮನೆಯಲ್ಲಿ ನಡೆದ ವಿಷಯ ಯಾರಿಗೂ ಹೇಳುವಂತಿಲ್ಲ. ಮರ್ಯಾದೆಯ ಪ್ರಶ್ನೆ. ಒಳ್ಳೆಯ ಹೆಸರಿಗೆ ಕಳಂಕ ಅಂಟಿಸಿಕೊಳ್ಳಲು ಇಬ್ಬರೂ ಸಿದ್ಧರಿರಲಿಲ್ಲ. ಬೆಳಿಗ್ಗೆ ಎದ್ದಾಗ ಪ್ರಜ್ವಲ್ ತಂದೆ ತಾಯಿಗಳಿಬ್ಬರ ಶವವನ್ನು ನೋಡಿದ. ಎದೆ ಹಾರಿತು. ಇದೊಂದು ಸಣ್ಣ ವಿಷಯಕ್ಕೆ ತಂದೆ ತಾಯಿಗಳಿಬ್ಬರು ಇಷ್ಟು ಕಠಿಣ ನಿರ್ಧಾರ ತೆಗೆದುಕೊಂಡ ಮೇಲೆ ತಾನು ಯಾಕೆ ಬದುಕಬೇಕು ಎನ್ನುವ ಕ್ಷಣಿಕ ನಿರ್ಧಾರದಿಂದ ಗಟ್ಟಿ ಮನಸ್ಸು ಮಾಡಿ ಪ್ರಜ್ವಲ್ ಕೂಡ ತಂದೆ ತಾಯಿಯ ದಾರಿ ಹಿಡಿದ. ಮೂವರ ಸಾವಿನ ಹಿಂದಿನ ಸತ್ಯ ಬಯಲಾಗಲೇ ಇಲ್ಲ. ವಿಶಾಲ್ ಡೆಲ್ಲಿಯಿಂದ ಲಗುಬಗೆಯಿಂದ ಓಡಿ  ಬಂದ. ಎಲ್ಲ ಮುಗಿದು ಹೋಗಿತ್ತು. ಏನು ಕಾರಣ ಎನ್ನುವುದು ಅವನಿಗೂ ಗೊತ್ತಾಗಲಿಲ್ಲ. ನೆರೆದ ಬಂಧುಗಳು ತೋಚಿದಂತೆ ತಲೆಗೊಂದು ಮಾತನಾಡಿದರಾದರೂ ಎಲ್ಲರ ಬಾಯಲ್ಲೂ ಡಾಕ್ಟರ್ ದಂಪತಿಗಳ ಒಳ್ಳೆಯತನದ ಬಗ್ಗೆಯೇ ಮಾತು. ಯಾರೂ ಒಂದು ಅಪಶಬ್ದ ನುಡಿಯಲಿಲ್ಲ. 

ಎಲ್ಲ ಮುಗಿಸಿ ವಿಶಾಲ್ ಮನೆಯಲ್ಲಿ ಒಬ್ಬನೇ ಕುಳಿತು ಸಾಕಷ್ಟು ಕಣ್ಣೀರು ಸುರಿಸಿ ತಾನೇ ಸಮಾಧಾನಿಸಿಕೊಂಡ.

ಮುಂದಿನ ಜವಾಬ್ದಾರಿ ಅವನ ಹೆಗಲ ಮೇಲಿತ್ತು. ಯೋಚಿಸುವುದಕ್ಕೆ ಮನಸ್ಸು ಖಾಲಿಯಾಗಿತ್ತು. ತಂದೆ ತಾಯಿ ಎಷ್ಟು ಒಳ್ಳೆಯವರು. ಮಕ್ಕಳಾದ ನಮ್ಮನ್ನು ಎಷ್ಟು ಪ್ರೀತಿಸುತ್ತಿದ್ದರು. ಪ್ರಜೂ ಪ್ರಜೂ ಇಂತಹ ತಮ್ಮ ನಗುನಗುತ್ತಾ ಕೀಟಲೆ ಮಾಡುತ್ತ ಮನೆಯನ್ನೆಲ್ಲ ನಗುವಿನಿಂದ ತುಂಬಿಸಿ ಬಿಡುತ್ತಿದ್ದ. ಪ್ರಜೂ ಯಾಕೆ ಹೀಗೆ ಮಾಡಿದೆಯೋ ನನ್ನನ್ನು ಒಬ್ಬನೇ ಬಿಟ್ಟು ಎಲ್ಲಿ ಹೋದೆಯೋ ಕಿರುಚಿ ಅಳಬೇಕೆನಿಸಿತು ವಿಶಾಲ್ ಗೆ. ಕಣ್ಣೀರು ಧಾರೆ  ಧಾರೆ ಯಾಗಿ ಹರಿಯಿತು. ಇಷ್ಟರ ಮಧ್ಯೆ ವಿಶಾಲ್ ಗೆ ಥಟ್ಟನೆ ನೆನಪಾದವಳು ಅನಾಮಿಕ. ಇಷ್ಟೆಲ್ಲ ಅನಾಹುತವಾದರು ಅವಳೇಕೆ ಬರಲಿಲ್ಲ. ಅವಳು ಚೆನ್ನೈ ಗೆ ಹೋಗಿದ್ದ ವಿಷಯ ಡೆಲ್ಲಿಯಲ್ಲಿದ್ದಾಗ ತಿಳಿದಿದ್ದರೂ ಇಂತಹ ಸಮಯದಲ್ಲಿ ಅವಳೇಕೆ ಬರಲಿಲ್ಲ? ಎಂದು ಯೋಚಿಸಿದ. 

***********

ತಿಗಳು ಕಳೆಯಿತು. ವಿಶಾಲ್ ಇನ್ನು ಇಲ್ಲಿರಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ. ಯಾವಾಗಲೂ ತಂದೆ ತಾಯಿ ಪ್ರಜ್ವಲ್ ನ ಚಿತ್ರವೇ ಕಣ್ಣ ಮುಂದೆ. ಅವನು ತಡೆಯಲಾರದಾದ. 

ನರ್ಸಿಂಗ್ ಹೋಮ್ ಅನ್ನು ತಮ್ಮಲ್ಲೇ ಇದ್ದ ಡಾ||ಪ್ರಶಾಂತ್ ಶರ್ಮನಿಗೆ ವಹಿಸಿಕೊಟ್ಟ. ಮನೆಯನ್ನು ಡಾ|| ಶಿವಾನಿಗೆ ಮಾರಿ ಕೈತೊಳೆದುಕೊಂಡು ಊರಿಗೆ, ಆಸ್ಪತ್ರೆಗೆ, ಮನೆಗೆ, ಗೆಳೆಯರಿಗೆ ಸಹೋದ್ಯೋಗಿಗಳಿಗೆ ಕೊನೆಯ ವಿದಾಯ ಹೇಳಿ ಹೊರಟ. ಅವನು ಹೊರಟ ವೇಳೆಗೆ ನಿಲ್ದಾಣದಲ್ಲಿ ಇದ್ದ ಎಲ್ಲ ಗೆಳೆಯರು, ಜನರೂ ಕಣ್ಣೀರಧಾರೆ ಹರಿಸಿ ಬೀಳ್ಕೊಟ್ಟರು .

**********

ಅಲ್ಲಿಂದ ಹೊರಟ ವಿಶಾಲ್ ಮೊದಲು ಬಂದದ್ದು ಚೆನ್ನೈ ನ ದೊಡ್ಡಪ್ಪನ ಮನೆಗೆ. 

ಮನೆ ನಿಶ್ಯಬ್ದವಾಗಿತ್ತು. ದೊಡ್ಡಪ್ಪ-ದೊಡ್ಡಮ್ಮ ಎಂದಿನ ಗೆಲುವಿನಲ್ಲಿರಲಿಲ್ಲ. ಯಾಂತ್ರಿಕವಾಗಿ ಮಾತನಾಡಿಸಿದರು. ತಮ್ಮ ಮನೆಯ ದುರಂತ ಅವರನ್ನು ಹೀಗೆ ಮಾಡಿರಬಹುದೆಂದು ವಿಶಾಲ್ ಸಹಜವಾಗಿ ಯೋಚಿಸಿದ. 

''ಅನಾಮಿಕ ಎಲ್ಲಿ ದೊಡ್ಡಪ್ಪ?'' ಎಂದ.

''ಅವಳಿಗೆ ಅರೋಗ್ಯ ಸರಿಯಿಲ್ಲಪ್ಪ. ರೂಮಿನಲ್ಲಿ ಮಲಗಿದ್ದಾಳೆ''. ರೂಮಿನಲ್ಲಿ ಮಲಗಿದ್ದ ಅನಾಮಿಕ ವಿಶಾಲ್ ನನ್ನು ನೋಡುತ್ತಲೇ ಭೈಯ್ಯಾ,ಭೈಯ್ಯಾ ಎಂದು ಅಳಲು ಪ್ರಾರಂಭಿಸಿದಳು. ನಂತರ ಹೊರಬಂದ ಕಠೋರ ಸತ್ಯ ಪ್ರಜ್ವಲ್- ಅನಾಮಿಕರ ಪ್ರೇಮ ಪ್ರಕರಣದ ದುರಂತ ಕಥೆ. 

ವಿಶಾಲ್ ದಿಗ್ಬ್ರಾಂತನಾದ. ಏನೂ ಅರಿಯದ ಮುಗ್ಧ ಜೀವಿಗಳ ಪ್ರೇಮ ಪ್ರಕರಣ ಮೂವರ ದುರಂತ ಸಾವಿಗೆ ಕಾರಣವಾಗಿದ್ದಲ್ಲದೆ ಸುಂದರವಾದ ಒಂದು ಸಂಸಾರ ನುಚ್ಚು ನೂರಾಗಿತ್ತು. 

ಸೌಂದರ್ಯ ಬಾಂಧವ್ಯಗಳನ್ನು ಬರಿದೆನೆಲಹುದೆ?।

ಹೊಂದಿಸದೆ ಕುಡಿಸದೆ ಜೀವಿಗಳನವುಗಳ್।।

ಸಿಂಧು ಪೂರದಿ ಬಿದ್ದವರೊಳಬ್ಬರೊಬ್ಬರನು ।

ಅಂದಿಕೊಳಲಿದೆ ಬರಿದೆ? ಮಂಕುತಿಮ್ಮ|| 

ವಿಶಾಲ್ ಚೆನ್ನೈ ನಿಂದ ಹೊರಟು ಬರಿದೆ ದಕ್ಷಿಣ ಭಾರತವನ್ನೆಲ್ಲ ತಿರು ತಿರುಗಿ ಕಡೆಗೆ ಬಂದದ್ದು ಆಸರೆ ಮನೆಗೆ. ಅವನವರ್ಯಾರಿಗೂ ಅವನೆಲ್ಲಿರುವನೆಂಬ ಕುರುಹು ಸಿಗಲಿಲ್ಲ. ಆಸರೆಮನೆಯ ಎಲ್ಲ ನೊಂದ ಜೀವಿಗಳಿಗೂ ಅವನೊಬ್ಬ ಧನ್ವಂತರಿ. ವಿಶಾಲ್ ಮನಸ್ಸಿಗೆ ಸಾಂತ್ವನ ಸಿಕ್ಕಿದ್ದು ಇಲ್ಲಿ. ಡಾ।। ವಿಶಾಲ್ ನಿಂದ ಅಲ್ಲಿನ ಜೀವಿಗಳಿಗೆ ಸಾಂತ್ವನ ದೇಹಕ್ಕೆ ನೆಮ್ಮದಿ ಆಸರೆಯ ಜೀವಿಗಳಿಗೆ. 

ಹೀಗೆ ಕಲ್ಯಾಣಿಯ ತೆಕ್ಕೆಗೆ ಬಂದವನು ಡಾ|| ವಿಶಾಲ್. 

************

ಆಸ್ತಿಯಿಂದ ಬೆಚ್ಚಿಬಿದ್ದ ಅಣ್ಣ-ತಮ್ಮಂದಿರು

ಮರಣದಿಂ ಮುಂದೇನು? ಪ್ರೇತವೋ?! ಭೂತವೋ?!।

ಪರಲೋಕವೋ? ಪುನರ್ಜನ್ಮವೋ? ಅದೇನು|| 

ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ| ಧರೆಯ ಬಾಳ್ಗದರಿನೇಮ್? ಮಂಕುತಿಮ್ಮ||

ಜಯರಾಮನಿಗೆ ನಿದ್ರೆಯಿಂದ ಗಾಬರಿಯಾಗಿ ಎಚ್ಚರವಾಯಿತು. ಪಕ್ಕದ ಮಂಚದಲ್ಲಿದ್ದ ತಮ್ಮನನ್ನು ಕೂಗಿ ಎಬ್ಬಿಸಿದ.........

ಭಾಗ ೧೦ರಲ್ಲಿ ಮುಂದುವರೆಯುವುದು .........

Comments