ಸರ್ ಅರ್ಥರ್ ಕಾನಾನ್ ಡೊಯಲ್

 ಸರ್ ಅರ್ಥರ್ ಕಾನಾನ್ ಡೊಯಲ್ ಬರೆದ  The Strand magazine  ನಲ್ಲಿ ಪ್ರಕಟವಾಗಿದ್ದ ಕಥೆ :  The Story of the Beetle Hunter (೧೮೯೬)

ಲೇಖನ  - ರಾಮಮೂರ್ತಿ,  ಬೇಸಿಂಗ್ ಸ್ಟೋಕ್ UK




ನಾನು ಆಗತಾನೆ ವೈದ್ಯಕೀಯ ಪದವಿಯನ್ನು ಪಡೆದು ಲಂಡನ್ ಗೋವರ್ ಸ್ಟ್ರೀಟ್ ನಲ್ಲಿ  ಬಾಡಿಗೆ ಮನೆಯಲ್ಲಿ ವಾಸಕ್ಕೆ ಬಂದೆ, ಹೆಚ್ಚಾಗಿ ಹಣ ಇರಲಿಲ್ಲ , ಕೆಲಸ ಇನ್ನು ಸಿಕ್ಕಿರಲಿಲ್ಲ.  ನನ್ನ ಆಸಕ್ತಿ ವೈದಕೀಯಕ್ಕಿಂತ ಪ್ರಾಣಿ ಶಾಸ್ತ್ರ (   Zoology ) ಮತ್ತು ವಿಜ್ಞಾನದ (Science} ಮೇಲಿತ್ತು, ಆದರೆ ಹಣಕಾಸಿನ ಒತ್ತಡದಿಂದ ಯಾವುದೇ  ಕೆಲಸವನ್ನು ಮಾಡುವುದಕ್ಕೊ  ತಯಾರಿದ್ದೆ. ಒಂದು ದಿನ ಲಂಡನ್ ದಿನಪತ್ರಿಕೆ The Standardನಲ್ಲಿ ಈ ಜಾಹಿರಾತು ನೋಡಿದೆ 

" Wanted for one or more days services of a medical man. it is essential that he should be man of strong physique, of steady nerves and of a resolute nature, knowledge of entomology preferred. Apply 77 Brooke Street/ Applications must be made before 12'o clock today. 

ನಾನು ಮೇಲೆ ಹೇಳಿದಂತೆ. ಪ್ರಾಣಿಶಾಸ್ತ್ರ ಅದರಲ್ಲೂ , ಕೀಟಶಾಸ್ತ್ರ ನನಗೆ ಪ್ರಿಯವಾದ ವಿಷಯವಾಗಿತ್ತು, ಚಿಕ್ಕಂದನಿಂದ ಅನೇಕ ಮಾದರಿಯ ರೆಕ್ಕೆ ಹುಳ ( Beetles) ಗಳನ್ನು ಸಂಗ್ರಹಿಸಿದ್ದೆ. ಈ ಕೆಲಸದ ಜಾಹೀರಾತು ಸ್ವಲ್ಪ ವಿಚಿತ್ರವಾಗೇ ತೋರಿತು.  ಗಟ್ಟಿ ಮುಟ್ಟಾದ  ವೈದ್ಯಕೀಯ ಮತ್ತು ಕೀಟಶಾಸ್ತ್ರದ ತಿಳಿವು,  ಅದೂ  ಅಲ್ಲದೆ ಈ ಕೆಲಸ ಕೇವಲ ತಾತ್ಕಾಲಿಕ ಅಷ್ಟೇ,  ಆದರೆ ಹಣದ ಅವಶ್ಯಕತೆ ಇತ್ತು . ತಕ್ಷಣ ಕೊಟ್ಟಿದ್ದ ವಿಳಾಸಕ್ಕೆ ಹೊರಟು  ಹನ್ನೆರಡು ಗಂಟೆ ಮುಂಚೆ ತಲಪಿದಾಗ ಒಬ್ಬ ನನ್ನದೇ  ವಯಸ್ಸಿನ ತರುಣ ಸಪ್ಪೆ ಮುಖದಲ್ಲಿ ಹೊರಗೆ ಬಂದ, ಅಂದರೆ ಇವನಿಗೆ ಕೆಲಸ ಸಿಕ್ಕಿರಲಿಲ್ಲ ಅನ್ನುವ ಸಂದೇಹ ಬಂತು. ಬಾಗಿಲು ತಟ್ಟಿದೆ , ಒಬ್ಬ ಸಮವಸ್ತ್ರದ ಸೇವಕ ಬಾಗಿಲು ತೆಗದು ಏನು ಬೇಕಾಗಿತ್ತೆಂದು  ಕೇಳಿದ.  ಕೆಲಸದ ಬಗ್ಗೆ ಅಂತ ಹೇಳಿದಾಗ " ಸರಿ ನಿಮ್ಮನ್ನು ಲಾರ್ಡ್ ಲಿಂಚ್ಮಿಯರ್ ನೋಡುತ್ತಾರೆ , ಗ್ರಂಥಾಲಯದಲಿದ್ದಾರೆ ಬನ್ನಿ "ಎಂದು  ಹೇಳಿ ಒಂದು ದೊಡ್ಡ ಕೋಣೆಗೆ ಕರೆದೊಯ್ದ.   ಇವರ ಹೆಸರು ಎಲ್ಲೊ ಕೇಳಿದ ಹಾಗಿದೆ ಆದರೆ ಜ್ಞಾಪಕ ಬರಲಿಲ್ಲ.

ಲಾರ್ಡ್ ಲಿಂಚ್ಮಿಯರ್, ಸುಮಾರು ಐವತ್ತು  ವಯಸ್ಸಿರಬಹುದು, ಸಣ್ಣ ಮೈಕಟ್ಟು ದೊಡ್ಡ ಮೇಜಿನ ಮುಂದೆ ಕೂತು ಸೇವಕ ಕೊಟ್ಟಿದ್ದ ನನ್ನ ವಿಸಿಟಿಂಗ್ ಕಾರ್ಡ್ ಮೇಲಿ ಎತ್ತಿ ತೋರಿಸಿ 

" ನೀವು ನಮ್ಮ ಜಾಹಿರಾತನ್ನು ನೋಡಿ ಬಂದಿದ್ದೀರಾ ಡಾ.  ಹ್ಯಾಮಿಲ್ಟನ್ ?" ಅಂದರು 

"ಹೌದು ಸರ್ "

" ಜಾಹಿರಾತನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಈ ಕೆಲಸಕ್ಕೆ ಅರ್ಹತೆ ಇದೆಯಂದು ಭಾವಿಸಿದ್ದೀರಾ ?"

" ನನ್ನ ಪ್ರಕಾರ ಹೌದು  ಸರ್ "

"ನಿಮ್ಮ ಮೈಕಟ್ಟು  ನೋಡಿದರೆ ನೀವು ಬಲಶಾಲಿ"

"ನನ್ನ ಭಾವನೆ ಅದೇ ಸರ್ "

" ನಿಮ್ಮ ಜೀವನದಲ್ಲಿ ಎಂದಾದರೂ ಅಪಾಯ ತರುವ ಸಂಧರ್ಬವನ್ನು ಎದಿರಿಸಿದ್ದೀರಾ ?"

"ಅಂತಹ ಸಂದರ್ಭ ಹಿಂದೆ ಬಂದಿಲ್ಲ"

" ಸರಿ, ಅಂತಹ ಸಮಯ ಮುಂದೆ  ಬಂದರೆ ?"

" ಅದನ್ನು ಎದಿರಿಸುವ ಧೈರ್ಯ ನನಗಿದೆ ಅನ್ನುವುದರಲ್ಲಿ ಸಂದೇಹ ಇಲ್ಲ ಸರ್ "

" ನಿಮ್ಮನ್ನು ನೋಡಿದರೆ ನನಗೂ ಅದೇ ಭಾವನೆ ಬಂತು , ಈಗ ಎರಡನೇ ವಿಷಯಕ್ಕೆ  ಹೋಗೋಣ ಡಾ. ಹ್ಯಾಮಿಲ್ಟನ್ "

"ಕೇಳಿ ನನಗೆ ಗೊತ್ತಿದ್ದರೆ ಉತ್ತರಿಸುತ್ತೇನೆ "

" ಕ್ರಿಮಿ ಕೀಟಗಳ , ಅದರಲ್ಲೂ ರೆಕ್ಕೆ ಹುಳ ( Beetles) ಬಗ್ಗೆ ನಿಮಗೆ ಏನು ಗೊತ್ತಿದೆ ?"

ನನಗೆ ಈ ಪ್ರಶ್ನೆ  ಬಹಳ ವಿಚಿತ್ರವಾಗಿತ್ತು, ನನ್ನ  ಗೇಲಿ ಮಾಡುತ್ತಿದ್ದಾರೆಯೇ ? ಎನ್ನುವ ಸಂಶಯವೂ  ಮನಸ್ಸಿಗೆ ಬಂತು, ಆದರೆ ಲಾರ್ಡ್ ಲಿಂಚ್ಮಿಯರ್  ಒಬ್ಬ ಗಂಭೀರ ಮತ್ತು ವಿದ್ಯಾವಂತ ಮನುಷ್ಯ ಅನ್ನುವುದರಲ್ಲಿ  ಏನೂ   ಸಂದೇಹ ಇರಲಿಲ್ಲ ಆದರೂ ಈ ಪ್ರೆಶ್ನೆ ಅರ್ಥವಾಗಲಿಲ್ಲ. ನಾನು ಮೇಲೆ ಹೇಳಿದಹಾಗೆ ವೈದ್ಯಕೀಯಗಿಂತ ಹೆಚ್ಚು ಆಸಕ್ತಿ ಪ್ರಾಣಿ ಶಾಸ್ತ್ರದಲ್ಲಿ ಮತ್ತು Entomology ಬಗ್ಗೆ  ಸಹ ಸ್ವಲ್ಪ ತಿಳಿದಿದ್ದೆ, ತಕ್ಷಣ ನನಗೆ ಉತ್ತರ ಹೇಳುವುದಕ್ಕೆ ತೋಚಲಿಲ್ಲ. 

" ಓ ಹೊ ನಿಮಗೆ ಕ್ರಿಮಿ ಕೀಟಗಳ ಬಗ್ಗೆ ಗೊತ್ತಿಲ್ಲ ಅಲ್ಲವೇ ?"

ಧೈರ್ಯ ತಂದುಕೊಂಡು " ಹಾಗಲ್ಲ ಸರ್ , ಈ ವಿಷಯದಲ್ಲಿ ನನಗೆ ಆಸಕ್ತಿ ಇದೆ ಮತ್ತು coleopterology  ಅಧ್ಯಯನ ಮಾಡಿದ್ದೇನೆ"

" ಹಾಗಾದರೆ ತುಂಬಾ ಸಂತೋಷ , ನಿಮಗೆ ಗೊತ್ತಿರುವದನ್ನು  ವಿವರಿಸಿ "

ಸುಮಾರು ಐದು  ನಿಮಿಷ ರೆಕ್ಕೆ ಹುಳದ ಬಗ್ಗೆ ಮಾತನಾಡಿದೆ , ನಾನು ಹೇಳಿದ್ದರಲ್ಲಿ ಹೊಸ ವಿಷಯ ಏನೂ ಇರಲಿಲ್ಲ ಆದರೆ ಹಿಂದೆ Journal of Entomological Science ನಲ್ಲಿ ಒಂದು ಸಣ್ಣ ಬರಹ ಪ್ರಕಟವಾಗಿದ್ದು ಮತ್ತು ನನ್ನ ಬಳಿ ಅನೇಕ ರೀತಿಯ ರೆಕ್ಕೆ ಹುಳಗಳ  ಸಂಗ್ರಹ ಇದ್ದ ವಿಚಾರ ಕೇಳಿ ಲಾರ್ಡ್ ಲಿಂಚ್ಮಿಯರ್ ಬಹಳ ಸಂತೋಷ ಪಟ್ಟರು 

"ಡಾ. ಹ್ಯಾಮಿಲ್ಟನ್ , ನೀವು ನಮಗೆ ಬೇಕಾದವರು ಎನ್ನುವುದರಲ್ಲಿ ಸಂದೇಹವೇ ಇಲ್ಲ, ನೋಡಿ,  ಲಂಡನ್ನಿನ  ೫ ಮಿಲಿಯನ್ ಜನಸಂಖ್ಯೆಯಲ್ಲಿ ನಿಮ್ಮಂತವರು ಸಿಕ್ಕಿರುವುದು ನನ್ನ ಅದೃಷ್ಟ" ಎಂದು  ಹೇಳಿ ಮೇಜಿನ ಮೇಲೆ ಇದ್ದ ಗಂಟೆ ಬಾರಿಸಿ ಹೊರಗೆ ನಿಂತಿದ್ದ ಸೇವಕನನ್ನು ಕರೆದು  "ಲೇಡಿ ರೊಸ್ಸಿಟರ್  ಅವರನ್ನು ಇಲ್ಲಿಗೆ ಬರ ಹೇಳು " ಎಂದರು . ಕೆಲವು ನಿಮಿಷದಲ್ಲಿ ಆಕೆ ಬಂದರು . ನೋಡಿದರೆ ಲಾರ್ಡ್ ಲಿಂಚ್ಮಿಯರ್ ರ ಹೋಲಿಕೆ ಇತ್ತು , ಇವರಿಗೂ ಸುಮಾರು ಐವತ್ತು ವಯಸ್ಸು , ಮಖದಲ್ಲಿ ಏನೋ ಕಳವಳ ಮತ್ತು ಹೆದರಕೆ ಇರುವಂತಿತ್ತು, ಪರಿಚಯ ಆದನಂತರ ನನ್ನ ಕಡೆ ನೋಡಿ ತಿರಿಗಿದಾಗ ಆಕೆಯ ಬಲ ಕಣ್ಣಿನ ಕೆಳಗೆ ಎರಡು ಮೂರು ಇಂಚುಗಳ , ಬಹುಷಃ ಇತ್ತೀಚಿಗೆ ಆಗಿದ್ದ,  ಗಾಯದ  ಗುರುತು ಕಾಣಿಸಿತು. 

" ನೋಡು ಈವೆಲಿನ್ ,  ಇವರು ಡಾ . ಹ್ಯಾಮಿಲ್ಟನ್ ನಮ್ಮ  ಕೆಲಸಕ್ಕೆ ಸರಿಯಾಗಿ  ಹೊಂದುವರು ಅಂದರೆ ಇವರೇ,  ಇವರಿಗೆ ರೆಕ್ಕೆ ಹುಳಗಳ ವಿಷಯ ಗೊತ್ತಿದೆ ಮತ್ತು ಇವರ ಹವ್ಯಾಸ ಸಹ ಅದರ ಸಂಗ್ರಹ ಮತ್ತು ಈ ವಿಷಯದ ಮೇಲೆ ಲೇಖವನ್ನು ಬರೆದಿದ್ದಾರೆ  "

" ಸಂತೋಷ, ಹಾಗಾದರೆ ನೀವು  ನನ್ನ ಪತಿ ಸರ್ ಥಾಮಸ್ ರೊಸ್ಸಿಟರ್  ಹೆಸರು ಕೇಳಿರಬೇಕು , ಇವರು  ರೆಕ್ಕೆಹುಳಗಳ  ಬಗ್ಗೆ ಸಂಶೋಧನೆ ಮಾಡಿದ್ದಾರೆ"

ಆ ಕ್ಷಣ ನನಗೆ ಈ ಕುಟುಂಬಕ್ಕೆ  ರೆಕ್ಕೆ ಹುಳದ  ಸಂಬಂಧ  ಹೊಳೆಯಿತು, ಸರ್ ಥಾಮಸ್, coleopterology ಅಧ್ಯಯನದಲ್ಲಿ ಗಣ್ಯರು ಅನ್ನುವುದನ್ನ ಕೇಳಿದ್ದೆ 

" ನೀವು ಅವರನ್ನು ಭೇಟಿಯಾಗಿದ್ದೀರಾ "

"ಇಲ್ಲ,  ಲೇಡಿ ರೊಸ್ಸಿಟರ್, ಮಾಡಿಲ್ಲ "

ಲಾರ್ಡ್ ಲಿಂಚ್ಮಿಯರ್ " ನಿಮಗೆ ಅವರ ಭೇಟಿ ಮಾಡಿಸುತ್ತೇನೆ "

ಲೇಡಿ ರೊಸ್ಸಿಟರ್ , " ಚಾರ್ಲ್ಸ್ , ನೀನು ಇದನ್ನು ನಿಜವಾಗಲೂ ಮಾಡುತ್ತೀಯಾ, ಆದರೆ ನನಗೆ ಭಯ" ಎಂದು ಹೇಳಿ ಪಕ್ಕದಲ್ಲೇ ನಿಂತಿದ್ದ  ಲಾರ್ಡ್ ಲಿಂಚ್ಮಿಯರ್ ಭುಜದ  ಮೇಲೆ ಕೈ ಇಟ್ಟು ಆತಂಕದಿಂದ  ಹೇಳಿದಳು, ನನಗೆ ಇವರಿಬ್ಬರು ಅಣ್ಣ ತಂಗಿ ಅಂತ ಅರಿವಾಯಿತು,

" ನೀನೇನು ಆತಂಕ ಪಡಬೇಡ ಈವಲಿನ್ ನಮಗೆ ಬೇರೆ ದಾರಿ ಇಲ್ಲ "

" ಇನ್ನೊಂದು ದಾರಿ ಇದೆ ಚಾರ್ಲ್ಸ್ "

" ನಮಗೆ ಇದನ್ನು ಬಿಡು ಈವಲಿನ್ , ನಿನ್ನನ್ನು ನಾನು ಪರಿತ್ಯಜಿಸುವುದಿಲ್ಲ "

ನಾನು ಇರುವುದನ್ನ   ಮರೆತು ಈ ಸಂಭಾಷಣೆ ನಡೆದಹಾಗೆ ಕಾಣಿಸಿತು,    ಲಾರ್ಡ್ ಲಿಂಚ್ಮಿಯರ್ ನನ್ನ ಕಡೆ ತಿರಿಗಿ , "ನೋಡಿ ಡಾ. ಹ್ಯಾಮಿಲ್ಟನ್, ಈ ಕೆಲಸಕ್ಕೆ ನಾನು  ನಿಮನ್ನು ಕೇಳುವುದಿಷ್ಟೇ , ನೀವು ನನ್ನ ಜೊತೆಯಲ್ಲಿ ಯಾವಾಗಲು ಇರತಕದ್ದು ಮತ್ತು ನಾನು ಹೇಳಿದಾಗೆ ಮಾಡಬೇಕು, ಇದು ನಿಮಗೆ ಸರಿ ಅಲ್ಲ ಅನ್ನಿಸದೇ ಇರಬಹುದು ಆದರೂ ನೀವು ನನ್ನ ಅಪ್ಪಣೆಯನ್ನು ಮೀರಬಾರದು.  

" ಇದು ಸ್ವಲ್ಪ ಮಿತಿ ಮೀರಿದ್ದು ಅಲ್ಲವೇ ಸರ್ "

"ಇರಬಹುದು, ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವ ರೀತಿ ಮುಂದೆವರೆಯುತ್ತೆ ಅನ್ನುವುದು ನನಗೂ ಗೊತ್ತಿಲ್ಲ. ಕೊನೆಗೆ ಇದು ಸಫಲವಾದರೆ, ನೀವು ಹೆಮ್ಮೆ ಪಡುಬಹುದಾದ ವಿಚಾರ "

ಲೇಡಿ ರೊಸ್ಸಿಟರ್  " ಇದು ಸಂತೋಷದಿಂದ ಕೊನೆಗೊಂಡರೆ "

" ಹೌದು , ಇದು ಸಂತೋಷದಿಂದ ಕೊನೆಗೊಂಡರೆ " ಲಾರ್ಡ್ ಲಿಂಚ್ಮಿಯರ್ ಪುನರಾವರ್ತಿಸಿದರು 

" ಇದಕ್ಕೆ ನನ್ನ ಸಂಭಾವನೆ ಏನು ಅಂತ ಕೇಳಬಹುದಾ  ಸರ್ "

" ದಿನಕ್ಕೆ ಇಪ್ಪತ್ತು ಪೌಂಡ್ ಗಳು "

ನಾನು  ಇಷ್ಟು ದೊಡ್ಡ ಮೊತ್ತವನ್ನು ನಿರೀಕ್ಷಿರಲಿಲ್ಲ , ನನ್ನ ಮುಖದ ಮೇಲೆ ಕಂಡ ಆಶ್ಚರ್ಯ ನೋಡಿ " ಈ ಕೆಲಸವು ಪ್ರಯಾಸಕರ ಅಥವಾ ಅಪಾಯಕಾರಿಯಾಗಿರಬಹುದು ಆದ್ದರಿಂದ ವೇತನ ಹೆಚ್ಚು, ಇದು ಒಂದು ಅಥವಾ ಎರಡು ದಿನಗಳಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ ಅನ್ನುವುದು ನನ್ನ ಭಾವನೆ, ನಿಮ್ಮ ಸಹಾಯ ನಿರೀಕ್ಷಿಸಬಹುದಾ, ಡಾ. ಹ್ಯಾಮಿಲ್ಟನ್?"

" ಖಂಡಿತವಾಗಿಯೂ  ಸರ್ , ಹೇಳಿ ನನ್ನಿಂದ ಏನಾಗಬೇಕು "

" ನೀವು ತಕ್ಷಣ ನಿಮ್ಮ ಕೋಣೆ ಹಿಂತಿರಿಗಿ , ಕಿರು ಭೇಟಿಗೆ ಬೇಕಾದ್ದ ಬಟ್ಟೆಗಳನ್ನು ತೆಗೆದುಕೊಂಡು ೩:೩೦ ಘಂಟೆಗೆ  ಪ್ಯಾಡಿಂಗ್ಟನ್ (Paddington) ರೈಲು ನಿಲ್ದಾಣಕ್ಕೆ ಬನ್ನಿ , ನಾನು ನಿಮ್ಮ ಟಿಕೆಟ್ ಖರೀದಿ ಮಾಡಿರುತ್ತೇನೆ , ೪ ಘಂಟೆಗೆ   ಬಾರ್ಕ್ ಶೈರ್ (Berkshire) ನಲ್ಲಿರುವ ಪೆಂಗ್ ಬೌರನ್ (Pangbourne) ಗೆ ನಮ್ಮ ಪ್ರಯಾಣ, ಅಂದಹಾಗೆ ಎರಡು ವಿಷಯ ಬಹಳ ಮುಖ್ಯವಾದುದ್ದು . ನೀವು ಸಂಗ್ರಿಸಿದ  ರಕ್ಕೆ ಹುಳಗಳು ಮತ್ತು ಒಂದು ದೊಡ್ಡ ಕೋಲು ಮರಯೆದೆ ತನ್ನಿ "  

ನನ್ನ ಮನಸಿನ ಕಳವಳ ಹೆಚ್ಚಾಗಿ ಅನೇಕ ಪ್ರೆಶ್ನೆಗಳು ನನ್ನ ತಲೆ ತುಂಬಿತು ಆದರೆ ಈ ಸಮಸ್ಯೆಗಳಿಗೆ ಉತ್ತರ ಇಲ್ಲ ಎಂಬುದು ಖಚಿತ,  ಅದೊ  ಅಲ್ಲದೆ ಲಾರ್ಡ್ ಲಿಂಚ್ಮಿಯರ್ ಹೇಳಿದ ಮಾತುಗಳು ನೆನಪಿಗೆ ಬಂದು ಅವರು  ಹೇಳಿದಹಾಗೆ ಮಾಡಲೇಬೇಕಾಗಿದೆ. 

೩ ೩೦ ಸರಿಯಾಗಿ ರೈಲ್ ನಿಲ್ದಾಣ ಕ್ಕೆ ಸೇರಿದಾಗ ಲಾರ್ಡ್ ಲಿಂಚ್ಮಿಯರ್ ನನಗೆ ಕಾಯುತ್ತಿದ್ದರು, ಕೈಯಲ್ಲಿ ಒಂದು ದಪ್ಪದ  ಕರಿ ದೊಣ್ಣೆ ಕಂಡು ನನ್ನ ಕುತೊಹಲ ಮತ್ತಷ್ಟು ಕೆರಳಿತು. 

" ಡಾ. ಹ್ಯಾಮಿಲ್ಟನ್ , ಎರಡು ವಿಚಾರ ಸರಿಯಾಗಿ ಗಮನಿಸಿ , ಒಂದು,  ನೀವು ನನ್ನ ರಕ್ಷಣೆಗೆ ಇರಬೇಕು ಮತ್ತು ಎರಡನೆಯದು ನನ್ನ ಬಿಟ್ಟು ಒಂದು ಕ್ಷಣವೂ ಇರಬಾರದು"    ಈ ಮಾತುಗಳನ್ನು ಪ್ರಯಾಣ ಮಾಡುವಾಗ ಎರಡು ಮೂರು ಸಾರಿ ಪುನಃ ಪುನಃ ಹೇಳಿದರು. 

ಪ್ರಯಾಣ ಮುಗಿದು ಕುದರೆ ಗಾಡಿಯಲ್ಲಿ ಕುಳಿತಾಗ, " ನೋಡಿ ಡಾ,  ಹ್ಯಾಮಿಲ್ಟನ್ , ನನಗೆ  ಸ್ವಲ್ಪ ನರಗಳ ದುರ್ಬಲತೆ ಇದೆ ಮತ್ತು ಪುಕ್ಕಲ ಎಂದೂ ಹೇಳಬಹುದು ಆದರೆ ನನ್ನಲ್ಲಿ ಆತ್ಮ ವಿಶ್ವಾಸ ಇದೆ ಎಂಥಹ  ಕಷ್ಟ ಬಂದರೂ ,  ನರಗಳ ದುರ್ಬಲತೆ ಇದ್ದರೂ ಇದನ್ನ ಎದಿರುಸುವ ಧೈರ್ಯ ನನ್ನಲ್ಲಿ ಇದೆ. ಈಗ ನಾನು ಕೈಕೊಳ್ಳುವ ಕೆಲಸ  ಕರ್ತ್ಯವ್ಯ ಪ್ರಜ್ಞೆಯಿಂದ  ಮಾತ್ರ, ಅಕಸ್ಮಾತು ಇದು ಕೈಮೀರಿ ವೈಫಲ್ಯ ವಾದರೆ ನಾನು  ಹುತಾತ್ಮನಾಗಬಹುದು"

ಈ ಒಗಟುಗಳ ಮಾತನ್ನು  ಕೇಳಿ ನನಗೆ ವಿಪರೀತ ಗೊಂದಲವಾಯಿತು " ಸರ್ ನೀವು ನನ್ನಲ್ಲಿ ನಂಬಿಕೆ ಇಡಿ , ಆದರೆ ನಮ್ಮ ಉದ್ದೇಶ್ಯ ಏನು, ನಾವೆಲ್ಲಿಗೆ ಈಗ ಹೋಗುತ್ತಿದ್ದೇವೆ ಇಂತಹ ಪ್ರಶ್ನೆಗಳು ನನ್ನ  ಕಾಡುತ್ತಿದೆ"

" ಎಲ್ಲಿಗೆ ಹೋಗುತ್ತಿದ್ದೇವೆ ಅನ್ನುವುದರಲ್ಲಿ ಸಂದೇಹ ಇಲ್ಲ, ಇಲ್ಲಿಂದ ಸ್ವಲ್ಪ ದೂರದಲ್ಲಿ ಡೆಲಾಮಿರ್ ಕೋರ್ಟ್(Delamere Court) , ಸರ್ ಥಾಮಸ್ ರೊಸ್ಸಿಟರ್  ಅವರ ನಿವಾಸ, ಇವರ ಸಂಶೋಧನೆ ನಿಮಗೆ ಪರಿಚಯ ಇದೆ ಎಂದು ಹೇಳಿದ್ದೀರಿ ,   ಅಲ್ಲಿ ಏನು ಮಾಡುತ್ತೀವಿ ಅನ್ನುವುದನ್ನ ಈಗ ಹೇಳಿ ಪ್ರಯೋಜನ ಇಲ್ಲ ಅಂತ ನನ್ನ ನಂಬಿಕೆ.  ನಮ್ಮ , ಅಂದರೆ,  ನನ್ನ ಮತ್ತು ಲೇಡಿ ರೊಸ್ಸಿಟರ್  ಉದ್ದೇಶ್ಯ ಒಂದೇ , ನಮ್ಮ ಕುಟುಂಬದಲ್ಲಿ ಆಗಬಹುದಾದ  ಹಗರಣವನ್ನು ತಪ್ಪಿಸುವುದು,  ನಿಮಗೆ ವಿವರವಾದ ವಿವರಣೆಯನ್ನು ಈಗ ಹೇಳಿ ಅಗತ್ಯವಿಲ್ಲ ಡಾ .  ಹ್ಯಾಮಿಲ್ಟನ್ , ನಿಮ್ಮ ಸಲಹೆ ನಾನು ಕೇಳುತ್ತಿಲ್ಲ, ನಿಮ್ಮಿಂದ ಬೇಕಾಗಿರುವುದು   ಸಹಕಾರ ಮತ್ತು ಸಹಾಯ ,  ಎಲ್ಲಿ,  ಹೇಗೆ ಅನ್ನುವುದನ್ನ ಸಮಯ ಬಂದಾಗ ಕೇಳುತ್ತೇನೆ"




ಇನ್ನೇನೂ ಪ್ರಶ್ನೆಗಳನ್ನು  ಕೇಳುವ  ಸ್ಥಿತಿಯಲ್ಲಿ ನಾನಿರಲಿಲ್ಲ, ದಿನಕ್ಕೆ ಇಪ್ಪತ್ತು ಪೌಂಡ್ ಗಳ ವೇತನ ಮುಖ್ಯ , ಹಾಗಾಗಿ ಸುಮ್ಮನಾದೆ 

ಡೆಲಾಮಿರ್ ಕೋರ್ಟ್ ರೈಲು ನಿಲ್ದಾಣದಿಂದ ಐದು ಮೈಲಿ , ಲಾರ್ಡ್ ಲಿಂಚ್ಮಿಯರ್ ದಾರಿಯಲ್ಲಿ ಇನ್ನೇನೂ ಹೇಳಲಿಲ್ಲ, ನಾನು ಸುಮ್ಮನ್ನಿದ್ದೆ, ಗಾಡಿಯಿಂದ ಇಳಿಯುವುದಕ್ಕೆ ಮುಂಚೆ "ನೋಡಿ ಡಾ . ಹ್ಯಾಮಿಲ್ಟನ್ ನಾನು ನಿಮ್ಮಹಾಗೆ ಒಬ್ಬ ವೈದ್ಯ"  " ಓ ಹೌದಾ ಸರ್ ನನಗೆ ಗೊತ್ತಿರಲಿಲ್ಲ "      " ಹೌದು ಬಹಳ ವರ್ಷಗಳ  ಹಿಂದೆ ನಾನು ಪದವಿ ಪಡೆದೆ ಆದರೆ ಕಾರಣಾಂತರಗಳಿಂದ   ವೈದ್ಯ ವೃತ್ತಿ ಪ್ರಾರಂಭಿಸುವುದಕ್ಕೆ ಸಾಧ್ಯವಾಗಲಿಲ್ಲ, ಆದರೂ ನಾನು ಕಲಿತದ್ದನ್ನು ಮರೆತಿಲ್ಲ , ಇಲ್ಲಿ ನೋಡಿ ಡೆಲಾಮಿರ್ ಕೋರ್ಟ್ ಗೇಟ್  ಬಂತು". ಗೇಟಿನಿಂದ ಒಳಗೆ ಸುಮಾರು ದೂರದಲ್ಲಿ ಒಂದು ದೊಡ್ಡ ಕಟ್ಟಡ ಇಂಗ್ಲೆಂಡ್ ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವ ಮ್ಯಾನರ್ ಹೌಸ್. ನಮ್ನನ್ನು  ಎದಿರಗೊಳ್ಳಲು ನಿಂತಿದ್ದ ವ್ಯಕ್ತಿ, ಸುಮಾರು ಆರು ಅಡಿ ಮೇಲೆ ಇರುವ ಎತ್ತರ  , ತಲೆಯಮೇಲೆ ಕಪ್ಪು ಹ್ಯಾಟ್ , ಟ್ರಿಮ್ ಮಾಡಿಲ್ಲದ ಬಿಳಿ ಗಡ್ಡ ,  ತೋಟದಲ್ಲಿ ಕೆಲಸ ಮಾಡುವಾಗ ಕೈಗೆ ಹಾಕುವ ಗ್ಲೋವ್ಸ್. ಲಾರ್ಡ್ ಲಿಂಚ್ಮಿಯರ್, ಗಾಡಿಯಿಂದ ಇಳಿಯುವುದಕ್ಕೆ  ಮುಂಚೆ " ಇವರೇ ಸರ್ ಥಾಮಸ್ ರೊಸ್ಸಿಟರ್ "

ಇಳಿದು  ಆತ್ಮೀಯತೆಯಿಂದ " ಮೈ ಡಿಯರ್ ಥಾಮಸ್ ಹೇಗಿದ್ದೀರ?" ಆದರೆ ಉತ್ತರ ತಕ್ಷಣ ಬರಲಿಲ್ಲ , ಮುಖದಲ್ಲಿ ಏನೂ ವಾತ್ಸಲ್ಯ ಇರಲಿಲ್ಲ , ನಾನು ಲಾರ್ಡ್ ಲಿಂಚ್ಮಿಯರ್ ಹಿಂದೆ ನಿಂತಿದ್ದೆ , ನನ್ನ ಕಡೆ ನೋಡಿ ಸರ್ ಥಾಮಸ್ ಮೆಲ್ಲಗೆ ಗೊಣಗಿದ್ದು ಸ್ವಲ್ಪ  ಕೇಳಿಸಿತು  " ..... ಅಪರಿಚಿತರು ...ಇಲ್ಲಿಗೆ.. ಏನು ಕಾರಣ .. ಇಷ್ಟ ಇಲ್ಲ ... ."

ತಕ್ಷಣ ಲಾರ್ಡ್ ಲಿಂಚ್ಮಿಯರ್  ನನ್ನ ಕಡೆ ತಿರಗಿ " ಡಾ. ಹ್ಯಾಮಿಲ್ಟನ್,  ನಿಮ್ಮನ್ನು ಸರ್ ಥಾಮಸ್ ಅವರಿಗೆ ಪರಿಚಯ ಮಾಡುತ್ತೇನೆ"  ಸರ್ ಥಾಮಸ್ ನಗಲಿಲ್ಲ, ಕೈಕುಲಕಲಿಲ್ಲ, ನೇರವಾಗಿ ನೋಡಿ " ಲಾರ್ಡ್ ಲಿಂಚ್ಮಿಯರ್ ಹೇಳಿದ್ದ ಪ್ರಕಾರ ನಿಮಗೆ ರೆಕ್ಕೆ ಹುಳಗಳ ಬಗ್ಗೆ ಆಸಕ್ತಿ ಇದೆಯಂತೆ  ?"

" ಹೌದು ಸರ್ ನಿಮ್ಮ ಸಂಶೋಧನೆಯಿಂದ ಕೆಲವು ವಿಚಾರಗಳನನ್ನು ತಿಳಿದಿದ್ದೇನೆ"

" ಹಾಗಾದರೇ ಒಂದೆರಡು ಹೆಸರುಗಳನ್ನು  ಹೇಳಿ ಅದರ ಬಗ್ಗೆ ವಿವರಣೆ ಕೊಡಿ",  ನಾನು  ಈ ರೀತಿಯ ಪರೀಕ್ಷೆ ನಿರೀಕ್ಷರಲಿಲ್ಲ, ವಿಚಿತ್ರ  ಮನುಷ್ಯ,   ಮನೆ ಹೊರಗೆ ನಿಲ್ಲಿಸಿ ರೆಕ್ಕೆ ಹುಳಗಳ ಮೇಲೆ ಮಾತನಾಡು ಅಂದರೆ ಇವರಿಗೆ ಬುದ್ದಿ ನೆಟ್ಟಗಿಲ್ಲ ಅನ್ನುವ ಭಾವನೆ ಬಂತು , ನನಗೆ ತಿಳಿದ ವಿಚಾರಗಳನ್ನು ಹತ್ತು ನಿಮಿಷ ಹೇಳಿದೆ, ಮತ್ತು  ಸರ್ ಥಾಮಸ್ ನಡೆಸಿದ ಸಂಶೋಧನೆ ಸಹ ವಿವರಿಸಿದೆ 

" ಡಾ . ಹ್ಯಾಮಿಲ್ಟನ್ ನೀವು ನನ್ನ ಪುಸ್ತಕವನ್ನು ಓದಿ ತಿಳಿಕೊಂಡಿದ್ದೀರ, ಬಹಳ ಸಂತೋಷ, ನೋಡಿ ಜನರಿಗೆ ಕ್ರೀಡೆಗಳು ಮನೋರಂಜನೆ ಇತ್ಯಾದಿಗಳಮೇಲೆ ಗಮನ ಹೆಚ್ಚು. ಆದರೆ ಈ ಅಜ್ಞಾನಿ ಜನಕ್ಕೆ  ರೆಕ್ಕೆಹುಳ  ಬಗ್ಗೆ ಸ್ವಲ್ಪಾನೂ  ಆಸಕ್ತಿ ತೋರಿಸುವುದಿಲ್ಲ,   ನಿಮ್ಮನ್ನು ಭೇಟಿಯಾಗಿದ್ದು ಒಳ್ಳೇದೇ ಆಯಿತು,  ಬನ್ನಿ ನನ್ನ ರೆಕ್ಕೆ ಹುಳಗಳ ಸಂಗ್ರಹ ತೋರಿಸುತ್ತೇನೆ "  

ಅವರನ್ನು ಹತ್ತಿರದಿಂದ ಮನೆ ಒಳಗೆ ನೋಡಿದಾಗ ತಲೆಮೇಲೆ ಹ್ಯಾಟ್ ಇರಲಿಲ್ಲ , ಹಣೆ ಮೇಲೆ, ನರಗಳ ದುರ್ಬಲದಿಂದ ಇರಬೇಕು , ಸ್ನಾಯುಗಳು ಅಲ್ಲಾಡಿತ್ತಿರುವುದು ಗಮನಿಸಿದೆ , ನಮ್ಮ ಕಡೆ ತಿರಿಗಿ ಮಾತನಾಡಿದಾಗ ಈ ಲಕ್ಷಣಗಳು ಹೆಚ್ಚಾದಂತೆ ತೋರಿತು. 

" ನಿಮ್ಮನ್ನ ಸ್ವಾಗತಿಸೊಕ್ಕೆ  ಲೇಡಿ ರೊಸ್ಸಿಟರ್  ಇಲ್ಲಿಲ್ಲ, ಅಂದಹಾಗೆ ಚಾರ್ಲ್ಸ್, ಈವಲಿನ್ ಇಲ್ಲಿಗೆ ಬರುವ ವಿಚಾರ ನಿನಗೆ ತಿಳಿಸಿದ್ದಳಾ ?"

" ನಿಮಗೆ ಗೊತ್ತಿದೆ ಥಾಮಸ್ , ಅವಳ  ಸ್ನೇಹಿತರು ಬಹಳ ಮಂದಿ ಇದ್ದಾರೆ ಆದ್ದರಿಂದ ಇನ್ನೂ ಕೆಲವು ದಿನ ಲಂಡನ್ ನಲ್ಲಿ ಇರುವ ನಿರ್ಧಾರ ಅವಳದ್ದು"

" ಸರಿ ಅವಳ ಇಷ್ಟ , ಆದರೆ ಆಕೆ ಇಲ್ಲಿ ಇಲ್ಲದೆ ಇರೋದು ನನಗೆ ಬಹಳ ಬೇಜಾರು "

" ನನಗೆ ಇದು ಗೊತ್ತಿದೆ ಚಾರ್ಲ್ಸ್ , ಆದ್ದರಿಂದ ನಾನೇ  ಬಂದೆ ಮತ್ತು  ಡಾ .  ಹ್ಯಾಮಿಲ್ಟನ್  ನಿಮ್ಮನ್ನು ಭೇಟಿಯಾಗಲಿ ಅಂತ ಕರೆತಂದೆ, ನಿಮ್ಮ ಸಂಶೋಧನೆ ಬಗ್ಗೆ ಈತನಿಗೆ ಬಹಳ ಕುತೂಹಲ ಇದೆ "

  " ನಾನು ಈಗ ನಿವೃತ್ತಿ ಜೀವನ ನಡೆಸುತ್ತಿದ್ದೇನೆ ಡಾ . ಹ್ಯಾಮಿಲ್ಟನ್, ಪ್ರಪಂಚದ ನಾನಾ ಭಾಗಗಳಿಗೆ ಹೋಗಿ ಅನೇಕ ವಿಧವಾದ ರೆಕ್ಕೆ ಹುಳಗಳನ್ನು ಹುಡುಕಿ ತಂದಿದ್ದೀನಿ.  ನನ್ನಲ್ಲಿ ಇರುವ ಈ ಅತ್ಯುತ್ತಮ ಸಂಗ್ರಹ ಇನ್ನೆಲ್ಲೂ ಇಲ್ಲ ಎಂದು ಹೇಳಬಲ್ಲೆ, ನಿಮಗೂ ಈ ವಿಚಾರದಲ್ಲಿ ಆಸಕ್ತಿ ಇರುವುದಿಂದ ಬನ್ನಿ ನೋಡುವಿರಂತೆ " . 

ನಿಜವಾಗಲೂ , ಈ ಸಂಗ್ರಹವನ್ನು ಮೆಚ್ಚಲೇಬೇಕು, ಹಲವಾರು ಮರದ ಬೀರುಗಳಲ್ಲಿ ಪ್ರಪಂಚದ ನಾನಾ ಭಾಗದಿಂದ ತಂದ ಈ ಕ್ರಿಮಿಗಳನ್ನು ಜೋಡಿಸಿ ಅದರ ವಿವರಣೆಯ ಬರೆದಿತ್ತು . ಕೆಂಪು ಕಪ್ಪು ಹಸಿರು ಬಣ್ಣದ ಕ್ರಿಮಿಗಳು ಸಾವಿರಾರು.  ತನ್ನ ಇಡೀ ಜಾಯಮಾನವನ್ನೇ ಈ ಸಂಗ್ರಹಕ್ಕೆ ಕಳೆದಿದ್ದಾರೆ  ಅನ್ನಬಹುದು.  ಸುಮಾರು ಎರಡು ಗಂಟೆ ತಮ್ಮ ಸಂಶೋಧನೆ ಮೇಲೆ ಮಾತಾಡಿರಬಹುದು ಬಹುಷಃ ನಾನೆ ಇವರ ಮೊದಲನಯ ಸಹಾನುಭೂತಿಯ ಕೇಳುಗ. 

   ಸರ್ ಥಾಮಸ್ ಪಕ್ಕದಲ್ಲೇ   ಲಾರ್ಡ್ ಲಿಂಚ್ಮಿಯರ್  ನಿಂತಿದ್ದರೂ ಒಂದು ಮಾತೂ ಅಡಲಿಲ್ಲ ಆದರೆ ಅವರ ಮಖದಲ್ಲಿ  ಆತಂಕ ಅಥವಾ ಕಳವಳ, ಮತ್ತು  ಮುಂದೆ ಏನಾಗಬಹುದು ಅನ್ನುವ ಚಿಂತೆ ಅವರನ್ನು ಕಾಡಿಸುತ್ತಾ ಇರುವಹಾಗಿತ್ತು .

ಅವರ ಸೇವಕ ಬಂದು ಊಟ ತಯಾರಾಗಿದೆ ಎಂದು ಹೇಳಿದಾಗ , ಎಲ್ಲರೂ ತಮ್ಮ ಕೊಠಡಿಗೆ ಹೋಗಿ ಸರಿಯಾದ ಉಡುಪುಗಳನ್ನು ಧರಿಸಿ ಊಟದ  ಮನೆಯಲ್ಲಿ ಸೇರಿದೆವು . 

ಊಟದ ಸಮಯದಲ್ಲಿ ಸರ್ ಥಾಮಸ್ ,  ಲೇಡಿ ರೊಸ್ಸಿಟರ್  ಮತ್ತು ಮಗ ಮನೆಯಲ್ಲಿ ಇಲ್ಲದಿರುವುದು ಬಹಳ ಬೇಜಾರು, ದಿನಗಳನ್ನು ಕಳೆಯುವುದು ಕಷ್ಟ ಅನ್ನುವುದೇ  ನನ್ನ ಚಿಂತೆ ಎಂದು ಪಶ್ಚಾತಾಪ ಪಟ್ಟರು . 

ಊಟದನಂತರ ಬಿಲಿಯರ್ಡ್ಸ್ ಆಡುವ ಕೊಣೆ ಯಲ್ಲಿ ಸ್ವಲ್ಪ ಕಾಲ ಧೂಮಪಾನ ಮಾಡುತ್ತಾ ಕುಳಿತು ನಂತರ ಅವರವರ  ಕೊಣೆಗೆ ಹೋಗಿ ಮಲಗುವುದಕ್ಕೆ ಹಿಂತಿರಿಗಿದೆವು . ನನ್ನ ಹಿಂದೆ  ಲಾರ್ಡ್ ಲಿಂಚ್ಮಿಯರ್ ಬಂದು " ಡಾ ಹ್ಯಾಮಿಲ್ಟನ್ , ನೀವು ಇಲ್ಲಿ ಮಲಗ ಬೇಡಿ ನನ್ನ ಕೋಣೆ ಗೆ ಬನ್ನಿ"  ಅಂತ ಹೇಳಿದಾಗ, ಈತನಿಗೆ ಬುದ್ದಿ ಕೆಟ್ಟಿರ ಬೇಕು ಅನ್ನುವ ಸಂದೇಹ ಬಂತು.    ಇದರ ಉದ್ದೇಶ ಏನು ಅಂತ ಕೇಳಿದಾಗ " ಇದನ್ನು ನಾನು ನಿಮಗೆ ವಿವರಿಸಬೇಕಾಗಿಲ್ಲ, ಬೆಳಗ್ಗೆ ಸೇವಕ ಬಂದು ಎಬ್ಬಿಸುವಕ್ಕೆ ಮುಂಚೆ ನೀನು ನಿಮ್ಮ ಕೋಣೆ ಗೆ ಹೋಗಿ " 

"ಆದರೆ ಏಕೆ ಹೇಳಿ"

" ನನ್ನ ನರಗಳ ದುರ್ಬಲತೆಯಿಂದ ಒಬ್ಬನೇ ಮಲಗುವುದಕ್ಕೆ ಆಗುವುದಿಲ್ಲ , ಈಗ ನಾನು ಹೇಳಿದ್ದನ್ನು ಕೇಳಿ "

 ಇಪ್ಪತ್ತು ಪೌಂಡ್ ಗಳು ಕಣ್ಣಿನ ಮುಂದೆ ಬಂತು, ವಿಧಿ ಇಲ್ಲದೆ ಅವರನ್ನು ಅವರ ಕೋಣೆಗೆ  ಹಿಂಬಾಲಿಸಿದೆ   

"ಆದರೆ ಸರ್, ಈ ಹಾಸಿಗೆ ಒಬ್ಬರಿಗೆ ಮಾತ್ರ  "

"ಹೌದು  ಒಬ್ಬರಿಗೆ ಜಾಗ, ಇನ್ನೊಬ್ಬರು ಕಾವಲಿರಬೇಕು "

" ಕಾರಣ? , ಯಾರಾದರೂ ಹಲ್ಲೆ ಮಾಡುವ ಸಾಧ್ಯತೆ ಇದೆಯೇ ?"

"ಆ ಅನುಮಾನ ನನಗಿದೆ "

" ಹಾಗರಾದರೆ ಬಾಗಿಲಗೆ ಚಿಲಕ ಹಾಕಿ ಮಲಗಬಹುದಲ್ಲ "

"ಇಲ್ಲ, ನನ್ನ ಮೇಲೆ ಹಲ್ಲೆ ನಡಯಲಿ ಅನ್ನುವುದೇ  ಅಸೆ  "

ಈತನಿಗೆ  ಬುದ್ಧಿವಿಕಲ್ಪ ಆಗಿದೆ ಎಂಬುದು ನನಗೆ ಖಚಿತವಾಯಿತು " ಹಾಗಾದರೆ ನೀವು ಮಲಗಿ  ನಾನು ಈ ಕುರ್ಚಿಮೇಲೆ ಕುಳಿತು ಕಾವಲಿರುತ್ತೇನೆ "

" ಇಬ್ಬರೂ ಮಾಡೋಣ , ನೀವು ಎರಡು ಗಂಟೆ  ಎದ್ದಿರಿ  ನಂತರ ನನ್ನ ಸರದಿ,  ನನ್ನನ್ನು ಆ ಸಮಯಕ್ಕೆ ಎಬ್ಬಿಸಿ "

"ಸರಿ "

" ಎಚ್ಚ್ಚರದಿಂದಿರಿ ,ಕೂತಲ್ಲೇ ನಿದ್ದೆ ಮಾಡಬೇಡಿ ,  ಏನಾದರೂ ಶಬ್ದ ಕೇಳಿಸಿದರೆ ನನನ್ನು ಎಬ್ಬಿಸಿ"

ನನಗೆ ತೂಕಡಿಕೆ ಬಂದರೂ ಕಷ್ಟದಿಂದ ಎದ್ದಿದ್ದೆ , ಕೊಣೆಯ ಎದುರಿನ ಓಣಿಯಲ್ಲಿ ಗಡಿಯಾರ ಹದಿನೈದು ನಿಮಿಷಕ್ಕೆ ಸದ್ದುಮಾಡುತಿತ್ತು, ಕೊನೆಗೆ ಎರಡು ಗಂಟೆ ಹೊಡೆದ ಶಬ್ದ ಕೇಳಿಸಿತು, ತಕ್ಷಣ ನಿಶ್ಚಿಂತೆಯಿಂದ ಮಲಗಿದ್ದ ಲಾರ್ಡ್ ಲಿಂಚ್ಮಿಯರ್ ಭುಜವನ್ನು ಮುಟ್ಟಿ ಎಬ್ಬಿಸಿದೆ, ಅವರು ಗಾಬರಿಯಿಂದ ಎದ್ದು " ಏನಾಯಿತು ಶಬ್ದ ಏನಾದರೂ ಕೇಳಿಸಿತೇ ?"

"ಇಲ್ಲ ಸರ್, ಎರಡು ಗಂಟೆ ಅದಕ್ಕೆ ಎಬ್ಬಿಸಿದೆ "

" ಸರಿ, ನೀವು ಮಲಗಿ ನಾನು ಎದ್ದಿರುತ್ತೇನೆ "

ಎಷ್ಟು ಹೊತ್ತು ನಿದ್ದೆ ಮಾಡಿದ್ದನೋ ಅರಿವಿಲ್ಲ , ಆದರೆ ನನ್ನ ತೋಳನ್ನು ಯಾರೋ ಬಲವಾಗಿ ಎಳೆದಾಗ ಎಚ್ಚರಿಕೆ ಆಯಿತು .  " ಬೇಗ, ಬೇಗ ಏಳಿ ,  ಬನ್ನಿ ಶಬ್ದ ಮಾಡದೆ ಕೇಳಿ " ಲಾರ್ಡ್ ಲಿಂಚ್ಮಿಯರ್ ನನ್ನನ್ನು ಎಳೆಯುತ್ತಾ ಒಂದು ಮೂಲೆಯಲ್ಲಿ ನಿಲ್ಲಿಸಿದರು. ಸಂದೇಹವೇ ಇರಲಿಲ್ಲ, ಯಾರೋ ಬರುತ್ತಿರುವ ಶಬ್ದ, ಬಹಳ ಎಚ್ಚರದಿಂದ ಬರುತ್ತಿರುವ ಹಾಗಿದೆ, ಹೆಜ್ಜೆಯ ಶಬ್ದ ಒಂದು ಕ್ಷಣ ನಿಲ್ಲುವುದು ನಂತರ ಕೇಳುವುದು, ನನ್ನ ಕೈಯನ್ನು ಹಿಡದ  ಲಾರ್ಡ್ ಲಿಂಚ್ಮಿಯರ್  ಬಿಟ್ಟರಲಿಲ್ಲ , ಆದರೆ ಉದ್ರೇಕದಿಂದ ನಡಗುತ್ತಿದ್ದರು, 

" ಯಾರು ಇರಬಹುದು ಸರ್ ?

" ಅವರೇ .....   ಅವರೇ .."

"ಸರ್ ಥಾಮಸ್, ಏನು ಬೇಕು ಅವರಿಗೆ  ?"

"ಹೌದು ಹೌದು  ನಾನು ಹೇಳುವರಗೆ ಏನೂ ಮಾಡಬೇಡಿ

 ಮುಂದಾಗಿದ್ದ ಬಾಗಿಲು ನಿಧಾನವಾಗಿ ತೆರದಿದ್ದು ಕೇಳಿಸಿತು  ಓಣಿಯಲ್ಲಿ ಹಚ್ಚಿದ್ದ  ದೀಪ ದಿಂದ ಸ್ವಲ್ಪ ಬೆಳಕಿತ್ತು , ಒಬ್ಬ  ಬಗ್ಗಿದ ವ್ಯಕ್ತಿ ಒಳಗೆ ಧಾವಿಸಿ, ತಕ್ಷಣ   ಹಾಸಿಗೆಮೇಲೆ  ಮೇಲೆ ಧಭ ಧಭ ಅಂತ ಬಾರಿಸಿದ್ದು ಕಂಡು ನನ್ನ ಜೀವವೇ ಹೋದಂತಾಯಿತು.   ಕೆಲವೇ ಕ್ಷಣಗಳಲ್ಲಿ ಲಾರ್ಡ್ ಲಿಂಚ್ಮಿಯರ್ ನನ್ನ ಕೈ ಬಿಟ್ಟು  ಸರ್ ಥಾಮಸ್ ಹಿಂದೆ ನಿಂತು ಅವರ ಎರಡು ಕೈಯನ್ನು ಅವರ ಕತ್ತಿನ ಮೇಲೆ ಹಾಕಿ ನನ್ನನ್ನು   ಕೂಗಿದರು , ಎತ್ತರದ ವ್ಯಕ್ತಿ ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾಗ ನಾನು ತಕ್ಷಣ ಅವರ ನೆರವಿಗಿ ಹೋಗಿ ಇಬ್ಬರೂ  ಆತನನ್ನು  ಹತೋಟಿಗೆ ತಂದು ಅವರು  ತೊಟ್ಟಿದ್ದ ಡ್ರೆಸ್ಸಿಂಗ್ ಗೌನ್ ನಲ್ಲಿದ್ದ ಹಗ್ಗವನ್ನು ತೆಗೆದು ಅವರ ಎರಡು ಕೈಗಳನ್ನು ಕಟ್ಟಿದೆವು,  ಈ ಕಿರಿಚಾಟ ಕೇಳಿದ ಮೂರು ಸೇವಕರು ಓಡಿ  ಬಂದರು. ಇವರ ಸಹಾಯದಿಂದ ಸರ್ ಥಾಮಸ್ ಸಂಪೂರ್ಣವಾಗಿ ನಮ್ಮ ಸೆರೆಯಾದರು , ಕೆಳಗೆ ಕೂತು ಸಿಟ್ಟಿನಿಂದ ಉಸಿರಾಡುತ್ತಿದ್ದರು. ಅವರ ಮುಖವನ್ನು  ಸರಿಯಾಗಿ ನೋಡಿದಾಗ ಈತ ಒಬ್ಬ ಅಪಾಯಕಾರಿ ಹುಚ್ಚ ಅನ್ನುವುದು ಸ್ಪಷ್ಟವಾಯಿತು , ಅದೂ ಅಲ್ಲದೆ ಹಾಸಿಗೆ ಪಕ್ಕದಲ್ಲಿ ಬಿದ್ದಿದ್ದ ಸುತ್ತಿಗೆಯಿಂದ   ಸರ್ ಥಾಮಸ್ ರವರ ಉದ್ದೇಶ್ಯ ಲಾರ್ಡ್ ಲಿಂಚ್ಮಿಯರ್ ರನ್ನು ಕೊಲ್ಲಿವುದಾಗಿತ್ತು ಅನ್ನುವುದರದಲ್ಲಿ ಸಂಶಯ ಏನೂ ಇರಲಿಲ್ಲ. 

ಅವರನ್ನು ಎತ್ತಿ ನಿಲ್ಲಿಸಿದಾಗ , ಲಾರ್ಡ್ ಲಿಂಚ್ಮಿಯರ್ " ಅವರನ್ನು ಹಿಂಸೆ ಮಾಡಬೇಡಿ,  ಉದ್ರೇಕದ ನಂತರ ಈ  ಮೂರ್ಖತನ ಕೆಲವು ನಿಮಿಷಗಳು ಮಾತ್ರ ಇರುತ್ತದೆ." ಹೀಗೆ ಹೇಳುತ್ತಿರುವಾಗಲೇ ಸರ್ ಥಾಮಸ್ ಅವರ ತಲೆ ತಗ್ಗಿಸಿ ನಿಂತಲ್ಲೇ ನಿದ್ದೆ ಮಾಡುವಹಾಗಿತ್ತು, ಎಲ್ಲರೂ ಸೇರಿ ಅವರನ್ನು ನಿಧಾವಾಗಿ ನಡೆಸಿಕೊಂಡು ಅವರ ಕೋಣೆ ಯಲ್ಲಿ ಹಾಸಿಗೆಮೇಲೆ ಮಲಗಿಸಿದೆವು. ಪ್ರಜ್ಞೆ ಇದ್ದಹಾಗೆ ಕಾಣಿಸಲಿಲ್ಲ  ಮೇಲೆ  ಮೇಲೆ ಉಸಿರು ಬಿಡುತ್ತಿದ್ದರು . 

" ನೀವೆಲ್ಲರು  ಇವರ ಮೇಲೆ ನಿಗಾ ಇಟ್ಟಿರಿ , ಡಾ.  ಹ್ಯಾಮಿಲ್ಟನ್ , ನೀವು ನನ್ನ ಜೊತೆಯಲ್ಲಿ ಬನ್ನಿ ನನ್ನ ಕೊಣೆಯಲ್ಲಿ ನಿಮಗೆ ಇದರ ಬಗ್ಗೆ ವಿವರಣೆ ಕೊಡುತ್ತೇನೆ"

ಅವರ ಕೋಣೆ  ಸೇರಿದಾಗ " ನೋಡಿ ನನ್ನ ಮೈದುನ,  ಸರ್ ಥಾಮಸ್ ಬಹಳ ಒಳ್ಳೆ ಮನುಷ್ಯ, ಅವರಿಗೆ ತನ್ನ ಪತ್ನಿ ಮತ್ತು ಮಗನ ಮೇಲೆ ಅಪಾರ ಪ್ರೀತಿ, ಆದರೆ ಅವರ ಮನೆತನದಲ್ಲಿ   ಹಲವಾರು ತಲೆ ಮಾರುಗಳಿಂದ ಬಂದಿರುವುದು ಕಳಂಕದ ಹುಚ್ಚುತನ. ಆಗಾಗ್ಗೆ ಕೊಲೆಗಾರನಿಗೆ ಬರುವ ಪ್ರವುತ್ತಿ, ಇವರಿಗೂ ಬಂದಿದೆ, ಒಂದು ವಿಚಿತ್ರ ಅಂದರೆ,  ಯಾರು ತುಂಬಾ ಹತ್ತಿರವಾದವರ ಮೇಲೆ ಧಾಳಿ ನಡೆಸುವುದು. ಆದ್ದರಿಂದ ಅವರ ಮಗ  ಬೋರ್ಡಿಂಗ್ ಶಾಲೆಯಲ್ಲಿದ್ದಾನೆ ಮತ್ತು ಲೇಡಿ ರೊಸ್ಸಿಟರ್ ಆದಷ್ಟು ಮನೆಯಿಂದ ಹೊರಗೆ ಇರುತ್ತಾರೆ. ನೀವು ನನ್ನ ತಂಗಿ ಮಖದ ಮೇಲೆ ಆಗಿದ್ದ ಗಾಯವನ್ನು ಗಮನಿರಸಬಹುದು. ಈತನಿಗೆ  ಇದರ ಅರಿವು ಚೂರು ಇಲ್ಲ ಮತ್ತು ತಾನು ಇಂತ ಘಟನೆಗಳಿಗೆ ಕಾರಣ ಅನ್ನುವುದು ನಗೆಗೇಡಿತನ ಅನ್ನುವ ಭಾವನೆ. ಇವರ ಹವ್ಯಾಸ ರೆಕ್ಕೆ ಹುಳಗಳ ಸಂಗ್ರಹಣ ಮತ್ತು ಏಕಾಂತ ಜೀವನ, ಬೇರೆ ಯಾರ ಹತ್ತಿರನೂ ಸಂಪರ್ಕ ಬೆಳಸಿಲ್ಲ ಮತ್ತು ಬೇಕಾಗೂ ಇಲ್ಲ, ಇಂಥವರಿಗೆ ವೈದ್ಯರಿಂದ ಚಿಕಿತ್ಸೆ  ಕೊಡಿಸುವುದು ದೊಡ್ಡ ಸಮಸ್ಯೆ ಇತ್ತು, ಅದೂ ಅಲ್ಲದೆ ವೈದ್ಯನಿಗೂ ಇವರಿಗೆ ಈ ಮಾನಸಿಕ ರೋಗ ಇದೆ ಎಂದು ಅರಿವು ಮಾಡಿಸುವುದೂ  ಹೇಗೆ ಅನ್ನುವುದು ನಮ್ಮನ್ನು  ಕಾಡುತಿತ್ತು. ಆದರೆ , ಸುದೈವದಿಂದ ಇವರಿಗೆ ಈ ಮನಸ್ಥಿತಿ ಬರುವ ಮೊದಲು ಕೆಲವು ಸೂಚನೆಗಳು ಕಾಣಿಸುತ್ತವೆ. ನಿಮ್ಮ ಹತ್ತಿರ ಮಾತನಾಡುವಾಗ ಅವರ ಹಣೆಯಮೇಲೆ ಸ್ನಾಯುಗಳು  ಅದರುವುದು ನೀವು ಗಮನಿಸಿದಿರಾ ? ಇದು ಎರಡು ಮೂರು ದಿನಗಳ ಹಿಂದೆ ಶುರುವಾಗುವುದು.  ಅಂತಹ ಸಮಯದಲ್ಲಿ ಲೇಡಿ  ರೊಸ್ಸಿಟರ್ ಏನೋ ನೆಪಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಮನೆಗೆ ಬರುತ್ತಿದ್ದರು, ನನ್ನ ಗುರಿ ಇದ್ದಿದ್ದು ಹೇಗಾದರೂ ಮಾಡಿ ಒಬ್ಬ ವೈದ್ಯನ್ನ ಮುಂದೆ ಸರ್ ಥಾಮಸ್ ಅವರಿಗೆ ಈ ಮಾನಸಿಕ ರೋಗ ಇದೆ ಅನ್ನುವುದನ್ನ ತೋರಿಸಿವುದು. ಅವರ ಮನೆಗೆ ಅಪರಿಚಿತರು ಹೋಗುವುದಕ್ಕೆ ಒಂದು ಒಳ್ಳೆ ಕಾರಣ ಹುಡಕಬೇಕಾಗಿತ್ತು. ರೆಕ್ಕೆ  ಹುಳದ  ಬಗ್ಗೆ ಆಸಕ್ತಿ ಇರುವರು ಸಿಕ್ಕಿದರೆ ಸರ್  ಥಾಮಸ್ ಅವರನ್ನು ನೋಡುವ ಸಾಧ್ಯತೆ ಇದೆ ಎಂದು ಆ ರೀತಿ  ಜಾಹಿರಾತನ್ನು ಪತ್ರಿಕೆಯಲ್ಲಿ ಹಾಕಿದ್ದು. ನೀನು ಅದನ್ನ ನೋಡಿ ಬಂದದ್ದು ನಮ್ಮ ಅದೃಷ್ಟ, ನನಗೆ ಯಾವ ಘಳಿಗೆಯಲ್ಲಿ ಈ ಅನಾಹುತ ನಡೆಯುತ್ತೆ ಅನ್ನುವುದು ಊಹಿಸುವುದು ಕಷ್ಟ, ಆದರೆ ಇದು ನನ್ನ ಮೇಲೆ ನಡೆಯುತ್ತೆ ಅನ್ನುವುದು ಖಚಿತ. ಕಾರಣ ಈತನಿಗೆ ನನ್ನ  ಮೇಲೆ ಅಕ್ಕರೆ ಮತ್ತು ಗೌರವ ಇದೆ. ನಿಮ್ಮ ಸಹಾಯದಿಂದ ಈಗ ಇವರಿಗೆ ಸರಿಯಾದ ಚಿಕಿತ್ಸೆ  ದೊರೆಯುವ ಸಂದರ್ಭ ಬಂದಿದೆ   " 

"ಡಾ. ಹ್ಯಾಮಿಲ್ಟನ್, ನೀವು ಸರ್ ಥಾಮಸ್ ಅವರ ಮಾನಸಿಕ ಕಾಯಿಲೆಯ ಪ್ರಮಾಣ ಪಾತ್ರಕ್ಕೆ ಸಹಿ ಹಾಕುತ್ತೀರಾ?"

"ಖಂಡಿತ ಸರ್ , ಆದರೆ ಕಾನೂನಿನ ಪ್ರಕಾರ ಎರಡು ಸಹಿ ಬೇಕಲ್ಲ "

" ನಾನು ಒಬ್ಬ ಪರಿಣಿತಿ ಹೊಂದಿರುವ ವೈದ್ಯ ಅನ್ನುವುದು ಮರೆಯಬೇಡಿ, ಬೇಕಾದ್ದ ಪತ್ರಗಳು ಇಲ್ಲೇ ಇದೆ ನಮ್ಮಿಬ್ಬರ ಸಹಿ ಆದನಂತರ ರೋಗಿಯನ್ನು ಇಲ್ಲಿಂದ ಸಾಗಿಸಬಹುದು "

ಪ್ರಸಿದ್ಧ "ಬೀಟಲ್ ಹಂಟರ್ " ಸರ್  ಥಾಮಸ್ ರೊಸ್ಸಿಟರ್ ಅವರ ಭೇಟಿಯಾಗಿದ್ದು, ಲಾರ್ಡ್ ಲಿಂಚ್ಮಿಯರ್ ಮತ್ತು ಲೇಡಿ ರೊಸ್ಸಿಟರ್ ಪರಿಚಯ ನನ್ನ ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಿ ಮುಂದುವರೆಯುವದಕ್ಕೆ  ಸಹಾಯವಾಯಿತು.

ಸರ್ ಥಾಮಸ್ ಚಿಕಿತ್ಸೆನಂತರ ಗುಣವಾಗಿ  ಮಾನಸಿಕ ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ, ಆದರೆ, ನಾನು ಪುನಃ ಡೆಲಾಮಿರ್  ಕೋರ್ಟ್ ನಲ್ಲಿ  ಉಳಿದರೆ ಬಾಗಿಲಗೆ  ಚಿಲಕ ಹಾಕಿ ಮಲಗುವುದು ಉತ್ತಮ ಅಲ್ಲವೇ?   


 


 



Comments

Post a Comment