ಸುಂದರ ದಿನ, ಸುಂದರ ಇನ....

ಸುಂದರ ದಿನ, ಸುಂದರ ಇನ, ಸುಂದರ ವನ ನೋಡು ಬಾ

ಲೇಖನ - ಬದರಿ ತ್ಯಾಮಗೊಂಡ್ಲು  



 “ಹೊಸತು, ಹೊಸತು, ಹೊಸತು. ಎಲ್ಲವೂ ಹೊಸತಾಗಿರಬೇಕು. ಹಳೆಯದು ಬೇಡವೇ ಬೇಡ. ನಮ್ಮ ಕಣ್ಣು ಮುಂದಿರುವುದು ಮಾತ್ರ ಸತ್ಯ … ಇತ್ಯಾದಿ.”. ಇಂತಹ ಮಾತುಗಳು ಹೆಚ್ಚು ಹೆಚ್ಚಾಗಿ ಕೇಳಿಬರುತ್ತಿದೆ ಎಂಬುದು ಕೇವಲ ಬಹುತೇಕ ಜನರ ಅನಿಸಿಕೆಯೋ ಅಥವಾ ವಾಸ್ತವಕ್ಕೆ ಹಿಡಿದ ಕನ್ನಡಿಯೋ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. 

ಎಲ್ಲರೂ ತಮ್ಮತಮ್ಮ ತತ್ವಸಮರ್ಥನೆಯಲ್ಲಿ ನಿರತರಾಗಿ ಅವರವರ ನಿಲುವೇ ಸರಿ ಎಂದು ಮನುಷ್ಯತ್ವಕ್ಕೆ, ತಮ್ಮ ಮುಂದಿರುವ ಜೀವನಕ್ಕೆ ಬೆಲೆಕೊಡದೆ, ಸುಮ್ಮನೇ ಪ್ರತಿಪಾದನೆ ಮಾಡುತ್ತಿರುವರೇನೋ ಎಂದೆನಿಸುವುದು ವಿಷಾದನೀಯ ಸಂಗತಿಯೇ ಸರಿ!

ಮೇಲಿನ ಎರಡು ವಿಷಯಗಳನ್ನು, ವರ್ಷದ ಮೊದಲಲ್ಲೇ ಮೆಲಕುಹಾಕಿ ಒಂದಷ್ಟು ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಜಗಕ್ಕೆ ಹಿತವಾಗುತ್ತದೆನ್ನುವುದು ನಮ್ಮ ಅಭಿಮತ.

ಈ ನಿಟ್ಟಿನಲ್ಲಿ ಜ್ಞಾಪಕ ಬರುವ ಒಂದು ಉತ್ತಮ ಹೇಳಿಕೆ ಹೀಗಿದೆ. “ನಾನು ನೀನು ಹೇಳಿದ್ದನ್ನು ಅನುಮೋದಿಸದೆ ಇರಬಹುದು, ಆದರೆ ನನ್ನ ಉಸಿರಿರುವ ತನಕ ನಾನು ನಿನ್ನ ವಾದವನ್ನು ಮಂಡಿಸುವುದಕ್ಕೆ ಬೆಂಬಲ ಕೊಡುತ್ತೇನೆ” (I may not agree with what you have to say but i defend to death your right to say it). ಅಂತೆಯೇ, ನಮ್ಮ ನೆಲದ ಮಾತುಗಳೇ ಆದ ಬಸವಣ್ಣನ - “ಅರಿವಿಂಗೆ ಹಿರಿದು, ಕಿರಿದುಂಟೆ”, ಗೀತೆಯ - “ತದ್ವಿದ್ದಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ -  ನಮ್ರತೆಯಿಂದ ಪ್ರಶ್ನೆಗಳನ್ನು ಕೇಳಿ ಮನವರಿಕೆ ಮಾಡಿಕೊಳ್ಳಬೇಕು” ಎನ್ನುವುದನ್ನೂ ಕೇಳಿರುತ್ತೇವೆ. 

ಹಾಗಿದ್ದೂ ಕೂಡ, ನಮ್ಮ ಯೋಚನಾ ಲಹರಿಯನ್ನು ಪ್ರಶ್ನಿಸ ಬಂದವರನ್ನು ಏಕಾಏಕಿ ನೂಕಿ, ಮಟ್ಟ ಹಾಕಿ “ನಾನು ಗೆದ್ದೇ” ಎಂದರೆ, ಅದು ಸತ್ಯದ ಮಾತಾಗುವುದಿಲ್ಲ. ಅದು ತನ್ನಹಮಿಕೆಯ ದರ್ಪವಾಗುತ್ತದಷ್ಟೇ. 

“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಎನ್ನುವ ಉತ್ತಮ ಚಿಂತನೆಯನ್ನು ಬದಿಗಿಟ್ಟು, ಪುರಾತನವಾದ ಮಾಹಿತಿಯನ್ನು ಒರೆಗೆ ಹಚ್ಚದೇ ಸಾರಾಸಗಟಾಗಿ ತಿರಸ್ಕರಿಸಿ, ಇತ್ತೀಚಿನ ತಲೆಮಾರಿನ ಯೋಚನೆ ಮಾತ್ರ ಸರಿ ಎನ್ನುವುದರಿಂದ, ಹಳೆ ಬೇರಿನ ಗಟ್ಟಿತನವನ್ನು ಕಳೆದುಕೊಂಡು, ಜೀವನವೆಂಬ ಮರವನ್ನು ಅಸ್ಥಿರಗೊಳಿಸುತ್ತಿರುವುದು  ನಾವೇ ಎನ್ನುವುದನ್ನು ಮರೆಯುತ್ತಿದ್ದೀವಿ. ಹಾಗೆಯೇ, “ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ …” ಎಂಬ ಕವಿವಾಣಿಯಂತೂ ಅನೇಕರ ದಿನನಿತ್ಯದ ಜೀವನದಲ್ಲಿ ಬಹುತೇಕ ಬಾರಿ ಬಂದು ಬಂದು, ಜ್ಞಾಪಿಸುತ್ತಿರುತ್ತದೆ. ಒಣ ಪ್ರತಿಷ್ಠೆಯ ಕಡೆಗೇಕೆ ಸಾಗುತ್ತಿದೆ ಮನುಕುಲ ಎಂದು ಚಿಂತಿಸುವಂತಾಗುತ್ತಿದೆ.

ವರ್ಷದ ಮೊದಲಲ್ಲಿ ಇದೆಂತಹ ಒಣ ಮಾತುಗಳು ಎಂದೆನಿಸಬಹುದು. ಒಳ್ಳೆಯ ಆಶಾ ಭಾವನೆ ನಿಜಕ್ಕೂ ಮುಖ್ಯ. ಅದಕ್ಕಿಂತಲೂ ಹೆಚ್ಚು ಮುಖ್ಯ ನಾವು ಕಾರ್ಯರೂಪಕ್ಕೆ ತರುವ ಚಿಂತನೆಗಳು. ಈ ಹಿನ್ನಲೆಯಲ್ಲಿ, ಹೆಚ್ಚುಹೆಚ್ಚು ಸಮಾಜಮುಖಿಯಾದ ಭಾವನೆಗಳು ಎಲ್ಲರ ಮನಸಿನಲ್ಲಿಯೂ ನೆಲಸಿ, ಮಾಡುವ ಪ್ರತಿಯೊಂದು ಕಾಯಕವೂ ಎಲ್ಲರ ಹಿತವನ್ನು ಬಯಸಿ ಮಾಡುವಂತಾಗಲಿ ಎಂದು ಆಶಿಸುತ್ತೇವೆ.

೨೦೧೯ ರಲ್ಲಿ ಶುರುವಾದ ಮಹಾಮಾರಿ ಕೊರೋನ ಬಹುತೇಕರ ಬಾಳಿನಲ್ಲಿ “ನೀನು ಒಂದು ಧೂಳಿನ ಕಣಕ್ಕೂ ಸಮಾನವಿಲ್ಲವಲ್ಲೋ ” ಎಂದು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದೆ. ಕಳೆದ ಎರೆಡು ವರ್ಷ ನಮ್ಮ ನಮ್ಮ ಜೀವನದಲ್ಲಿ, ನಮ್ಮ ಸುತ್ತ ಮುತ್ತಲಲ್ಲಿ, ಬಂಧು ಬಳಗದಲ್ಲಿ ನಡೆದ ಘಟನೆಗಳು, ಯಾವುದು ಮುಖ್ಯ, ಮಿಕ್ಕಿರುವ ಜೀವನ ಹೇಗಿರಬೇಕು ಎನ್ನುವ ಪಾಠವನ್ನು ಚೆನ್ನಾಗಿ ಕಲಿಸಿದೆ. ಅನೇಕರು ಜೀವನವನ್ನು ನೋಡುವ ರೀತಿಯೇ ಬದಲಾಗಿಹೋಗಿದೆ ಎನ್ನುವುದನ್ನು ನಾವು ನೀವುಗಳು ನೋಡಿರುತ್ತೇವೆ. ಒಂದಂತೂ ಸತ್ಯ. ಈಗಿನ ತಲೆಮಾರು, ಕೋಟಿಕೋಟಿ ವರ್ಷಗಳ ಐತಿಹ್ಯವಿರುವ ಈ ಜಗತ್ತಿನ ಒಂದು ಅತಿ ಪುಟ್ಟ ಕಾಲಮಾನದ ಒಂದು ಭಾಗ. ಹೀಗಿರುವಾಗ ಇರುವ ಈ ಅತ್ಯಲ್ಪ ಸಮಯದಲ್ಲಿ ನಾಲ್ಕು ಜನರ ಹಿತಕ್ಕೆ ಬದುಕಿದಾಗ ಸಿಗವ ಆನಂದದ ಚಿಲುಮೆ, ನಮ್ಮ ತಾಯ್ನುಡಿ ಆಡುವಾಗ ಸಿಗುವ ಸಂತೋಷ ನಮ್ಮ ನಮ್ಮ ಬದುಕಿನಲ್ಲಿ ನವಚೈತನ್ಯ ಮೂಡಿಸುವುದರಲ್ಲಿ ಸಂಶಯವಿಲ್ಲ.

೨೦೨೨ ರಲ್ಲಿ ಸರ್ವಹಿತ ಚಿಂತನೆಗಳು ನಮ್ಮೆಲ್ಲರಲ್ಲಿ ಚಿಲುಮೆಯಂತೆ ಚಿಮ್ಮಲಿ. ಈ ಭುವಿಯು ಸರಾಗವಾಗಿ ಉಸಿರಾಡುವಂತಾಗಲಿ. ಪ್ರತೀ ದಿನವೂ “ ಸುಂದರ ದಿನ, ಸುಂದರ ಇನ, ಸುಂದರ ವನ ನೋಡು ಬಾ” ಎನ್ನುವಂತಾಗಲಿ.


Comments

Post a Comment