ದೇವನೂರು

ದೇವನೂರು: ಕನ್ನಡದ ಪ್ರಕೃತಿ, ಸಂಸ್ಕೃತಿ, ಪರಂಪರೆ, ಸಾಹಿತ್ಯ ಪ್ರಭಾವದ ಮೇರು! 

ಲೇಖನ - ಡಾ. ಮಂಜುಳಾ ಹುಲ್ಲಹಳ್ಳಿ. 



    ಚಿಕ್ಕಮಗಳೂರಿನಿಂದ ಸುಮಾರು 40, ಕಿಲೋಮೀಟರ್, ಸಕ್ಕರೆಯ ಪಟ್ಟಣದಿಂದ 20 ಕಿಲೋಮೀಟರ್ ದೂರದಲ್ಲಿ, ವಿಶಾಲ ಕೆರೆಯ ಬಗಲಲ್ಲಿ ವಿಶ್ರಮಿಸುತ್ತಿರುವ ಅಚ್ಚುಕಟ್ಟಾದ ಹಿರಿಯಗ್ರಾಮ ದೇವನೂರು. ಬಯಲುಸೀಮೆಯ ನೂರಾರು ಗ್ರಾಮಗಳಲ್ಲಿ ಒಂದಾಗಿ ಪರಿಗಣಿತವಾಗಬಹುದಿದ್ದ  ಈ ಊರಿಗೆ ಅಪೂರ್ವ ಮಾನ್ಯತೆ, ಗೌರವ, ಅಭಿಮಾನ, ಹೆಚ್ಚುಗಾರಿಕೆಗಳನ್ನು ತಂದುಕೊಟ್ಟಿರುವುದು ಎರಡು ಹೊಯ್ಸಳ ಶೈಲಿಯ ದೇವಾಲಯಗಳು, ಕನ್ನಡ ಕಂಡ ಇಬ್ಬರು ಮಹಾನ್ ಅಪ್ರತಿಮ ಕವಿಗಳು, ಸಿದ್ದೇಶ್ವರ ಗುಡಿಯಲ್ಲಿರುವ ಒಂದು ಅಮೂಲ್ಯ ಶಾಸನ ಜೊತೆಗೆ   ಗ್ರಾಮದೇವತೆ ಚಂದ್ರಮೌಳೇಶ್ವರಿ, ಹೆಬ್ಬಾಗಿಲು ಆಂಜನೇಯ ಸೇರಿದಂತೆ 32 ದೇವಾಲಯಗಳು!    

   ಪುರಾತನ ದೇಗುಲದ ಗುಣಲಕ್ಷಣಗಳು ಸಂಪೂರ್ಣವಾಗಿ ಮರೆಮಾಚುವಂತೆ ನವೀಕೃತವಾಗಿರುವ ಸಿದ್ದೇಶ್ವರ ದೇಗುಲ ದೇವನೂರಿನ ಊರ ಪ್ರವೇಶದಲ್ಲೇ ಊರಿಗೆ ಹೊರಚ್ಚಾಗಿ ವಿರಾಜಮಾನವಾಗಿದೆ. ಹನ್ನೊಂದನೇ ಶತಮಾನದ ಅಂತ್ಯಭಾಗದಲ್ಲಿ ನಿರ್ಮಾಣವಾದ ಈ ಹೊಯ್ಸಳ ಶೈಲಿಯ ದೇವಾಲಯದ ಮುಖ್ಯ ಪ್ರಾಣಲಿಂಗ ಸಿದ್ದೇಶ್ವರ ಲಿಂಗವನ್ನು ಈ ಊರಿನ ಕವಿ ರುದ್ರಭಟ್ಟ ನರ್ಮದಾ ನದಿಯಿಂದ ತಂದು ಪ್ರತಿಷ್ಠಾಪನೆ ಮಾಡಿದ್ದೆಂಬ ಪರಂಪರಾನುಗತ ನಂಬಿಕೆಯಿದೆ. ಹೊಯ್ಸಳ ಶೈಲಿಯ ಕೆತ್ತನೆಯ ಕುಸುರಿಗಳು ಆಧುನಿಕ ಬಣ್ಣದ ಲೇಪನದಿಂದ ಬಸವಳಿದಿದ್ದರೂ ಶಿಥಿಲವಾಗಿ ಕುಸಿದು ಹೋಗುತ್ತಿದ್ದ ಗುಡಿಯ ರಕ್ಷಣೆಗೆ ಗ್ರಾಮದ ಜನರು ತೋರಿದ ಕಾಳಜಿಗೆ ತೋರುಬೆರಳೂ ಆಗಿದೆ. ನವರಂಗದಲ್ಲಿರುವ ಗಣೇಶ, ಜನಾರ್ಧನ, ನಂದಿ, ಸೂರ್ಯನಾರಾಯಣರ ವಿಗ್ರಹಗಳಲ್ಲಿ ಹೊಯ್ಸಳ ಶೈಲಿಯು ಚೆಲ್ಲುವರಿದಿದೆ. ಇವುಗಳ ಜೊತೆ ಜೊತೆಗೆ ಈ ನವರಂಗದಲ್ಲೇ ಪೂಜಿತವಾಗುತ್ತಿರುವ 74 ಸಾಲುಗಳ ಹೊಯ್ಸಳ ಕುಶಲಕೆತ್ತನೆಗಳಿಂದ ಕಲಾತ್ಮಕವಾದ ಬೃಹತ್ ಶಿಲಾಶಾಸನವು ಹಲವಾರು ಅಂಶಗಳಿಂದ ಮಹತ್ವದ್ದಾಗಿದೆ. 

     ಅಭಿನವ ರುದ್ರರೆಂದೇ ಹೆಸರಾದ ಕುಮಾರದೇವರು ಹಿರಿಯ  ದೇವನೂರಿನಲ್ಲಿ ಇದೇ ಕೈಲಾಸಾದ್ರಿ, ಇದೇ ಹಿಮಗಿರಿಯ ಮೇರು ಎಂಬಂತೆ ಶೋಭಾಪೂರ್ಣವಾದ ಸಿದ್ದೇಶ್ವರ ದೇವಾಲಯವನ್ನು ಮಹಾ ಪ್ರತಿಷ್ಠಾನ ಮಾಡಿಸಿದುದನ್ನೂ, ಆಗ ಇಮ್ಮಡಿ ಬೀರಬಲ್ಲಾಳನ ಅಮಾತ್ಯರೂ, ರಾಜಗುರುವೂ ಆಗಿದ್ದ ಚಂದ್ರಮೌಳಿದೇವರು ಸಮಸ್ತ ಶಿವಗಣ ಸಮೇತ ಆಗಮಿಸಿ ಉಚಿತ ಪೂಜೆಯನ್ನು ಸಾನಂದದಿಂದ ಕೈಗೊಂಡುದನ್ನೂ ಈ ಶಾಸನ ಮೊದಲಿಗೆ ಉಲ್ಲೇಖಿಸುತ್ತದೆ. ಈ ಕುಮಾರದೇವನ ಮಗ ಶಿವನಜ್ಜನ ಅಜ್ಜಗವುಂಡನ  ಕಾಲದಲ್ಲಿ, ಕ್ರಿಸ್ತ ಶಕ 1233ರಲ್ಲಿ ಈ ಶಾಸನ ರಚಿತವಾಗಿದೆ. ಇದರಲ್ಲಿ ಹೊಯ್ಸಳ ರಾಜಪರಂಪರೆ, ಕುಮಾರ ದೇವನ ಶಿವ ತತ್ವವಿಚಾರ ಸಾರ ಹೃದಯಗಳ ವರ್ಣನೆಗಳೂ ಇವೆ. ಅಭಿನವ ರುದ್ರನೆಂದು ಹೆಸರಾದ ಕುಮಾರದೇವನೇ ರುದ್ರಭಟ್ಟನೆಂದು ಊಹಿಸಬಹುದು. ಇವನ ಮೇರುಕಾವ್ಯ ಜಗನ್ನಾಥ ವಿಜಯ ಈನಂತರದಲ್ಲಿ ರಚಿತವಾಗಿರುವ ಸಾಧ್ಯತೆ ಇದೆ.    

   ಈ ವೇಳೆಗಾಗಲೇ ದೇವನೂರಿಗೆ ವರಲಕ್ಷ್ಮೀ ನಾರಾಯಣಪುರ ಎಂಬ ಅಭಿದಾನವಿದ್ದುದನ್ನು ಹೇಳುವ ಮೂಲಕ ದೇವನೂರಿನಲ್ಲಿ ಈ ಮೊದಲೇ ಇದ್ದ ಲಕ್ಷ್ಮಿಕಾಂತನ ಗುಡಿಯ ಕಡೆಗೂ ಈ ಶಾಸನವು ಕೈ ಮಾಡಿ ತೋರಿಸುತ್ತದೆ. ದೇವನೂರಿನ ಮಹಾಜನರು ಸಿದ್ದೇಶ್ವರನ ಧರ್ಮಪಾಲಕರು, ಕುಲಧರರಾಜ್ಞಾಪಾಲರು, ಇಳಾ ವಶಿಷ್ಟಪ್ರತಿಮರು ಎಂದು ಹೇಳುತ್ತಾ ಊರಿನ ಸುಸಂಸ್ಕೃತ, ಸಹೃದಯವಂತ ಜನಸಮೂಹವನ್ನು ಅನಾವರಣ ಮಾಡುತ್ತದೆ.  ಊರಿನ ಹಲವಾರು ಗಣ್ಯ ದಾನಿಗಳ ಜೊತೆಗೆ ಕುಮಾರದೇವನ ಮಗ ಶಿವನಜ್ಜನ ಅಜ್ಜಗವುಡನು ಸಿದ್ದನಾಥದೇವರ ಅಮೃತಪಡಿಗೆ ಸೊಡರೆಣ್ಣೆಗೆ  400 ಕಂಬಗಳ ಗದ್ದೆಯನ್ನು ಧಾರಾ ಪೂರ್ವಕವಾಗಿ ಕೊಟ್ಟದ್ದನ್ನು ತಿಳಿಸುತ್ತದೆ.


    ಲಕ್ಷ್ಮೀನಾರಾಯಣ ದೇವರ ವೃಂದಾವನ, ಸ್ವಾಮಿ ದೇವರ ಹೂದೋಟ, ಊರ ಹಲವಾರು ಗಣ್ಯರ ತೋಟ ತುಡಿಕೆಗಳು, ಕೆರೆಯ ಏರಿ,  ಸುತ್ತಮುತ್ತಲ ಊರ ಪ್ರಮುಖರನ್ನು ಹೆಸರಿಸುತ್ತಾ ಊರಿನ ರಮ್ಯ  ಚಿತ್ರಣವೊಂದನ್ನು ಕಣ್ಮುಂದೆ ಕಟ್ಟಿಬಿಡುವ ಈ ಶಾಸನ ನಮ್ಮ ದೇವನೂರಿನ ಅಮೂಲ್ಯ ಆಸ್ತಿಯೇ ಹೌದು.


    ಕನ್ನಡದ ಶ್ರೇಷ್ಠ ಚಂಪು ಕಾವ್ಯಗಳಲ್ಲಿ ಒಂದೆಂದು ಪರಿಗಣಿತವಾದ ಜಗನ್ನಾಥ ವಿಜಯದ ಕವಿ ರುದ್ರಭಟ್ಟ. ಕನ್ನಡದ ಮೊದಲ ಬ್ರಾಹ್ಮಣ ಕವಿಯೆಂಬ ಹಿರಿಮೆಯೂ ಇವನದೇ. ಈತ ತನ್ನ ಕಾವ್ಯದ ಆಶ್ವಾಸಾಂತ್ಯಗಳಲ್ಲಿ 'ಲಕ್ಷ್ಮಿಕಾಂತ ಶ್ರೀಪಾದ ಭಕ್ತಿ ಯುಕ್ತಿ ಸುಕವೀಂದ್ರ ರುದ್ರ ಪ್ರಣೀತ' ಎಂದು ಹೇಳಿರುವ  ನುಡಿಗಳು ಕವಿಯ, ದೇವನೂರಿನ ನಂಟನ್ನು ಬಲಪಡಿಸುತ್ತವೆ.


       ದೇವನೂರಿನ ಹೃದಯ ಪ್ರದೇಶದಲ್ಲಿ ದೇದೀಪ್ಯಮಾನವಾಗಿರುವ,  ಹೊಯ್ಸಳ ಶೈಲಿಯ ಗುಣಲಕ್ಷಣಗಳನ್ನು ಅಭಿವ್ಯಕ್ತಿಸುತ್ತಿರುವ, ವಿಶಾಲವಾದ, ಏಕಕೂಟಾಚಲ ಲಕ್ಷ್ಮಿಕಾಂತ ಗುಡಿಯ ಪ್ರಧಾನ ಮೂರ್ತಿ ಲಕ್ಷ್ಮೀಶ ವಿಗ್ರಹವು ಸಾಲಿಗ್ರಾಮ ಶಿಲಾಮೂರ್ತಿ ಆಗಿದ್ದು ಪಾಂಡವರಿಂದ  ಪ್ರತಿಷ್ಠಾಪನೆ ಆಗಿದೆ ಎಂಬ ನಂಬಿಕೆ ಇದೆ. ಕನ್ನಡದ ಇಬ್ಬರು ಶ್ರೇಷ್ಠ ಕವಿಗಳ ಆರಾಧ್ಯ ಮೂರ್ತಿಯಾದ ಈ ಲಕ್ಷ್ಮಿಕಾಂತನನ್ನು ಕವಿ ಲಕ್ಷ್ಮೀಶ ಮನದುಂಬಿ ಸ್ಮರಿಸಿದ್ದಾನೆ. 


      ಕವಿ ಲಕ್ಷ್ಮೀಶ ಎಂದರೆ ಸಾಕು ಕನ್ನಡ ಸಾಹಿತ್ಯ ರಸಿಕರ ಮೈಮನಗಳು ರಸಪುಳಕಿತವಾಗುತ್ತವೆ. ಈ ಕವಿಚೈತ್ರವನಚೂತ, ಉಪಮಾಲೋಲ, ನಾದಲೋಲ, ವಾರ್ಧಕ ಷಟ್ಪದಿಯ ಸೊಗಸುಗಾರನನ್ನು ಕನ್ನಡದ ಸಹೃದಯೀ ಸಾಹಿತ್ಯಾಸಕ್ತರು ಮನಸಾರೆ ಮೆಚ್ಚಿದ್ದಾರೆ, ಅವನ ಕವಿತಾಶಕ್ತಿಗೆ ಮಾರುಹೋಗಿದ್ದಾರೆ, ಆ ಕವಿ ಕಾವದೌನ್ನತ್ಯಗಳನ್ನು ಹಾಡಿಹೊಗಳಿದ್ದಾರೆ. 

     

   ರಾಷ್ಟ್ರಕವಿ ಕುವೆಂಪುರವರಿಗೆ ಕಾವ್ಯರಸದೀಕ್ಷೆಯನ್ನು ನೀಡಿದ ಪೂರ್ವಸೂರಿಗಳಲ್ಲಿ ಮಹಾಕವಿ ಲಕ್ಷ್ಮೀಶನದು ಅತ್ಯಂತ ಗೌರವದ ಸ್ಥಾನ. ನಾದಕವಿ ಬೇಂದ್ರೆಯವರಂತೂ 'ಹಕ್ಕಿಯಂತೆ ಹಾಡುವ ಲಕ್ಷ್ಮೀಶನ ಲೀಲಾವತಾರಿಯಾದ ಷಟ್ಪದಿಯ ಸೊಗಸು, ಸೊಬಗು, ಬೆಡಗು, ಯಮಕ, ವಯ್ಯಾರಗಳು ಗಮಕಿಗಳಿಂದ ಪ್ರಕಾಶ ಹೊಂದಬೇಕು' ಎಂದು ಅಭಿನಂದಿಸಿದ್ದಾರೆ. ಹೌದು ಜೈಮಿನಿಭಾರತದ ಸುಶ್ರಾವ್ಯ ಗಮಕವಂತೂ ಒಂದು  ರಸದ ಕಡಲು. ಬೇಂದ್ರೆಯವರ ವರಪುತ್ರ ವಾಮನ ಬೇಂದ್ರೆ ಅವರು ಕವಿ ಲಕ್ಷ್ಮೀಶನ ಬಗೆಗೇ ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು  ಮಹಾಕವಿ ಬೇಂದ್ರೆಯವರೊಡನೆ ನಾಲ್ಕಾರು ದಿನಗಳ ಕಾಲ ದೇವನೂರಿನಲ್ಲಿ ತಂಗಿದ್ದರು ಎನ್ನುವುದು ಮತ್ತೊಂದು ಹೆಗ್ಗಳಿಕೆ. 


    1931ರಲ್ಲಿ ದೇವನೂರಿನಲ್ಲಿ ನಡೆದ ಶ್ರೀ ಲಕ್ಷ್ಮೀಶ ಜಯಂತಿ ಮತ್ತು ಕವಿ ಸಮ್ಮೇಳನದ ಅಧ್ಯಕ್ಷತೆಯನ್ನು ಆಗ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾಗಿದ್ದ ಮಾಸ್ತಿಯವರು ವಹಿಸಿದ್ದರೆಂಬುದು ಮತ್ತೊಂದು ವಿಶೇಷ. ಕೆಂಗಲ್ ಹನುಮಂತಾರಾಯರು ಜೈಮಿನಿ ಭಾರತ ಕೃತಿಗೆ ಒಂದು ರೂಪಾಯಿ ಬೆಲೆ ಇರಿಸಿ ಕನ್ನಡಕ್ಕೆ ನೀಡಿದ ಭಾಗ್ಯ ಸ್ಮರಣಾರ್ಹ. ಕವಿ ಲಕ್ಷ್ಮೀಶನ ಬಗ್ಗೆ ಬಂದಿರುವ ಕೃತಿ ಉಪಕೃತಿ ವಿಮರ್ಶೆ ಪ್ರಬಂಧ ಮಹಾಪ್ರಬಂಧಗಳ ಅಪಾರತೆ ಕವಿಯ ಮಹತ್ವಕ್ಕೆ ಮತ್ತೊಂದು ನಿದರ್ಶನ.  1950ರ ದಶಕದಲ್ಲಿ ದಾರ್ಶನಿಕ ಸಾಹಿತಿ, ಆದರ್ಶ ಶಿಕ್ಷಕ ಬೆಳಗೆರೆ ಕೃಷ್ಣಶಾಸ್ತ್ರಿಗಳು ದೇವನೂರಿನ ಸಾಹಿತ್ಯ ಸಂಸ್ಕೃತಿಗಳಿಗೆ ಹೊಸ ಆಯಾಮ ನೀಡಿದರು. ಅವರ 'ಯೇಗ್ದಾಗೆಲ್ಲಾ ಐತೆ' ಕೃತಿಯ ಮುಖ್ಯ ಆಡುಂಬೊಲ ಈ ದೇವನೂರು ಎಂಬುದೇ ಮಹತ್ವದ ವಿಷಯ. ಕೃಷ್ಣಶಾಸ್ತ್ರಿಗಳ ಮೂಲಕ ನಾಡಿನ ಬಹುತೇಕ ಗಣ್ಯ ಸಾಹಿತಿ ಕವಿ ಮಹಾನುಭಾವರು ದೇವನೂರಿನ ಪವಿತ್ರ ನೆಲವನ್ನು ಸ್ಪರ್ಶಿಸುವಂತಾಯಿತು. 


    70ರ ದಶಕದಲ್ಲಿ ಹಿರೇಮಗಳೂರಿನ ಸವ್ಯಸಾಚಿ ಅವರು ಲಕ್ಷ್ಮಿಕಾಂತ ಗುಡಿಯ ಅರ್ಚಕರಾಗಿದ್ದಾಗ ಗುಡಿಗೆ ಒಂದು ದಿವ್ಯ ಸಾತ್ವಿಕ ಪರಿವೇಷ ತೊಡಿಸಿದರು. ದೇವನೂರನ್ನೇ ತಮ್ಮ ಅಪೂರ್ವ ಕನ್ನಡದ ಮೊದಲ ಪಾಠಶಾಲೆಯಾಗಿಸಿಕೊಂಡು ಬೆಳೆದ  ಹಿರೇಮಗಳೂರು ಕಣ್ಣನ್ ಅವರು ದೇವನೂರಿನ ಸೌಭಾಗ್ಯ ಸಮೃದ್ಧಿ, ಸಂಸ್ಕೃತಿ, ಸಾಹಿತ್ಯಗಳನ್ನು ನಾಡಿಗೆ ನಿತ್ಯ ಪರಿಚಯಿಸುತ್ತಿದ್ದಾರೆ. ಜೈಮಿನಿಭಾರತದ ಗಮಕವಾಚನ ಭಾವತುಂಬಿ ಅವರ ಹೃದಯದಿಂದ ಚಿಮ್ಮಿ ಬರುವುದನ್ನು ಆಸ್ವಾದಿಸಿ, ಅನುಭವಿಸಿಯೇ ಆನಂದಿಸಬೇಕು.

     

   ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ, ರುದ್ರಭಟ್ಟನು ದೇವನೂರಿಗೆ ಸಮೀಪದಲ್ಲಿರುವ ದ್ವಾರಸಮುದ್ರದ (ಹಳೇಬೀಡು) ವೀರಬಲ್ಲಾಳ ಚಕ್ರವರ್ತಿಯ ಆಸ್ಥಾನದ ಕವಿಯೂ ಆಗಿದ್ದುದರಿಂದ ಮತ್ತು ಜಗನ್ನಾಥ ವಿಜಯದಲ್ಲಿ ಲಕ್ಷ್ಮಿಕಾಂತ ದೇವರ ಉಲ್ಲೇಖವಿದ್ದುದರಿಂದ  ಅವನ ತವರೂರು ದೇವನೂರು ಎಂಬುದನ್ನು ಬಹುತೇಕ ವಿದ್ವಾಂಸರು ಒಪ್ಪಿಕೊಂಡರು. ಆದರೆ ಕವಿ ಲಕ್ಷ್ಮೀಶನು ಲಕ್ಷ್ಮೀಕಾಂತನ ಊರಿಗೆ ಸುರಪುರ, ಅಮರಪುರ, ಗೀರ್ವಾಣಪುರ, ಸುರನಗರಿ, ಅಮರನಗರಿ, ದೇವಪುರ ಎಂದೆಲ್ಲಾ ಹೇಳಿದ್ದರೂ ತನ್ನ ಬಗ್ಗೆ ಮಾತ್ರ ಭರದ್ವಾಜ ಗೊತ್ರಭವ, ಅಣ್ಣಮಾಂಕಸುತ, ಕವಿಚೈತ್ರವನಚೂತ ಎಂದಲ್ಲದೆ ಬೇರೆ ಮಾತುಗಳನ್ನೇ ಹೇಳಿಲ್ಲದ ಕಾರಣ ಅವನ ತವರು ಈ ದೇವನೂರೇ ಅಥವಾ ಕಲಬುರ್ಗಿ ಜಿಲ್ಲೆಯ ಸುರಪುರವೇ ಎಂಬುದು ವಿದ್ವಾಂಸರ ಚರ್ಚೆಯ ವಿಷಯವಾಯಿತು. ಎರಡೂ ಕಡೆ ಲಕ್ಷ್ಮಿಕಾಂತನ ದೇಗುಲವಿರುವುದು ಚರ್ಚೆಗೆ ಕಾವೇರಿಸಿತು. ಅನಂತರ ಹಲವು ಮೇರು ವಿದ್ವಾಂಸರು ಹಲವಾರು ಬಾಹ್ಯ, ಆಂತರಿಕ ಕಾರಣಗಳನ್ನು ಒಟ್ಟು ಮಾಡಿ ಕವಿ ಲಕ್ಷ್ಮೀಶನ ಹುಟ್ಟೂರು, ಬಾಲ್ಯದ ಅಂಗಳ, ಯೌವನದ ಆಡುಂಬೊಲ,  ಜೈಮಿನಿ ಭಾರತದ ಭವ್ಯರಚನೆಯ ಮಂಗಳಧಾಮ ಈ ದೇವನೂರೇ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

        

   ಲಕ್ಷ್ಮಿಕಾಂತ ದೇವಾಲಯದಲ್ಲಿರುವ ಕವಿ ಲಕ್ಷ್ಮೀಶ ನಿರ್ಮಿಸಿದ ಎನ್ನುವ ಕವಿ-ಕಾವ್ಯ ಮಂಟಪದ 16 ಬೃಹತ್ ಕಂಬಗಳಲ್ಲಿ ಜೈಮಿನಿಭಾರತದ ಕಥೆ ನಿರೂಪಿಸುವ ಯಜ್ಞಾಶ್ವ, ಘಂಟಾದಂತಿ, ಸಂಗ್ರಾಮನಿರತ ನರಸಿಂಹ  ಮುಂತಾದ ಕೆತ್ತನೆಗಳಿವೆ. (ಅತ್ಯಂತ ಶಿಥಿಲವಾಗಿದ್ದ ಈ ಮಂಟಪವನ್ನು 1981ರಲ್ಲಿ ಪುನರ್ ರೂಪಿಸಿ, ಕವಿ ಲಕ್ಷ್ಮೀಶನ ವಿಗ್ರಹವನ್ನು ಇಲ್ಲಿ ನಿರ್ಮಿಸಿ, ವಿದ್ವತ್ ಗೋಷ್ಠಿಗಳನ್ನು ನಡೆಸಲು ಅನುವು ಮಾಡಿಕೊಟ್ಟಿರುವುದು ಕನ್ನಡದ ಸೌಭಾಗ್ಯ) ಕವಿ ಲಕ್ಷ್ಮೀಶನ ನಿವಾಸ ಇದ್ದ ಜಾಗದಲ್ಲಿ 1921ರಲ್ಲಿ ಹೂವಿನ ಮತ್ತು ತೆಂಗಿನ ತೋಟ ನಿರ್ಮಿಸಿ ಲಕ್ಷ್ಮೀಶ ಜಯಂತಿ ಆರಂಭಿಸಲಾಯಿತು. ಈ ನಿವೇಶನ ಈಗ ಸಾರ್ವಜನಿಕ ಗ್ರಂಥಾಲಯವಾಗಿದೆ. 


  ಚೈತ್ರ ಹುಣ್ಣಿಮೆಯಂದು ಲಕ್ಷ್ಮೀಕಾಂತ ದೇಗುಲದಲ್ಲಿ ಜರುಗುವ ಕವಿ ಲಕ್ಷ್ಮೀಶನ ಉತ್ಸವ; ಈ ಪರಿಸರದ ಲಕ್ಷ್ಮೀಶನ ಒಕ್ಕಲುಮನೆಗಳ  ಶುಭಕಾರ್ಯಗಳಲ್ಲಿ ಸಲ್ಲಿಸುವ ಲಕ್ಷ್ಮೀಶಕವಿ ಕಾಣಿಕೆ; ಮೈಸೂರು ಸೀಮೆಯಲ್ಲಿ ಜೈಮಿನಿ ಓದುವುದು, ಗಮಕಿಸುವುದು, ಅರ್ಥೈಸುವುದು ವಿದ್ವತ್ತಿನ ದ್ಯೋತಕವೆಂಬ ಪರಿಗಣನೆ; ಮದುವೆಗೆ ಹೆಣ್ಣು ಸಿಗಬೇಕಾದರೆ ಜೈಮಿನಿ ಕಲಿಯುವುದು  ಅನಿವಾರ್ಯವೆಂಬ ಈ ಪರಿಸರದ ಭಾವನೆ; ಸಿದ್ದೇಶ್ವರ ಗುಡಿಯ ಅಮೂಲ್ಯ ಶಾಸನ ಮತ್ತು ಲಕ್ಷ್ಮೀಶಕವಿಯ ಅಪೂರ್ವ ಕಾವ್ಯ ಎರಡರ ಆರಂಭ ಪದವು 'ಶ್ರೀವಧು' ಎಂದಿರುವುದು- ಇಂತಹ ಕಾರಣಗಳಿಂದ ಕವಿಯ ತವರೂರು ಈ ದೇವನೂರು ಎಂದು ಸಾಧಿತವಾಗಿದೆ.


   ಈಗ ದೇವನೂರಿನ ಸಮಗ್ರ ಅಭಿವೃದ್ಧಿಯು ಪ್ರವಾಸೋದ್ಯಮ ಇಲಾಖೆಯ ಆದ್ಯತೆಯ ಪಟ್ಟಿಯಲ್ಲಿದೆ. ಯಾತ್ರಿನಿವಾಸವಿದೆ. ಫುಡ್ ಕೋರ್ಟ್ ನಿರ್ಮಾಣ ಆಗುತ್ತಿದೆ.  ಶ್ರೀ ಪಾರ್ಥಸಾರಥಿ, ಶ್ರೀ ಕೆಂಚಪ್ಪ, ಶ್ರೀ ಮುರಳಿ ಮತ್ತು ಸಂಗಡಿಗರ ಉತ್ಸಾಹಕ್ಕೆ ಈ ಊರು ಪರಿಸರದ ಎಲ್ಲ ಕೋಮುಗಳ ಸಮಸ್ತರ ಶ್ರಮವೂ ಸೇರಿ ಊರಿಗೆ  ಹೊಸ ಚೈತನ್ಯ ತುಂಬುತ್ತಿದ್ದಾರೆ. ದೇವನೂರಿನ ದೇವಾಲಯಗಳ ಘನತೆ ಗೌರವಗಳನ್ನು ಕಾಪಾಡಲು ನಿತ್ಯ ಶ್ರಮಿಸುತ್ತಿದ್ದಾರೆ.

       

  11ನೇ ಶತಮಾನದ ಆರಂಭದ ಶ್ರೇಷ್ಠಕವಿ ರುದ್ರಭಟ್ಟ ಮತ್ತು 16ನೇ ಶತಮಾನದಲ್ಲಿದ್ದ ಕವಿ ಲಕ್ಷ್ಮೀಶ ಇಬ್ಬರನ್ನು ತನ್ನ ಮಡಿಲಿನಲ್ಲಿ ಇರಿಸಿಕೊಂಡು ಪೋಷಿಸಿದ ದೇವನೂರು, ಇಬ್ಬರು ಮೇರು ಕವಿಗಳಿಗೆ ಅಪೂರ್ವ ಕಾವ್ಯವನ್ನು ಬರೆಯುವ ಶಕ್ತಿ ಕೊಟ್ಟು ಹರಸಿದ ಈ ಊರಿನ ಅಪೂರ್ವ ದೈವ ಲಕ್ಷ್ಮಿಕಾಂತ ಮತ್ತು ಈ ಸೌಭಾಗ್ಯವನ್ನು ನಿತ್ಯ ಆಸ್ವಾದಿಸುತ್ತಿರುವ,  ಅನುಭವಿಸುತ್ತಿರುವ  ದೇವನೂರಿನ ಜನತೆ ಎಲ್ಲರೂ ಧನ್ಯರು, ಧನ್ಯಮಾನ್ಯರು!


ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

Comments

  1. ಅಪರೂಪದ ಮಾಹಿತಿಗಾಗಿ ಧನ್ಯವಾದಗಳು 🙏

    ReplyDelete
  2. ವಿದ್ವತ್ ಪೂರ್ಣ ಲೇಖನ! ಬಹಳ ಚೆನ್ನಾಗಿ ಮೂಡಿಬಂದಿದೆ! ಅಭಿನಂದನೆಗಳು!!

    ReplyDelete
  3. An excellent article. Very informative about an unknown place has such a great history.

    ReplyDelete
  4. ದೇವನೂರು ನೋಡಲೇ ಬೇಕಾದ ಸ್ಥಳವಾಗಿದೆ ನಮಗೀಗ. ಚರಿತ್ರೆಯ ಜೊತೆಗೆ ಸಾಹಿತಿಗಳ ನಂಟು ಮತ್ತಷ್ಟು ಆಸಕ್ತಿ ಮೂಡಿಸಿದೆ. ಇದೊಂದು ಉತ್ತಮ ದರ್ಜೆಯ ಲೇಖನ ಮತ್ತು ಮಾಹಿತಿ. ನಮ್ಮ ಚಿಲುಮೆಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು

    ReplyDelete

Post a Comment