ಸಾವಿಗೆ 5 ಸೆಕೆಂಡ್ ದೂರದಲ್ಲಿ

 ಸಾವಿಗೆ 5 ಸೆಕೆಂಡ್ ದೂರದಲ್ಲಿ

ಲೇಖನ   - ಶ್ರೀಮತಿ ಭಾರತಿ ಬಿ ವಿ    

ಹಂಪಿಯಲ್ಲಿ ನಡೆದು ನಡೆದು ಕಾಲು ಬಿದ್ದು ಹೋಗಿತ್ತು. ನಡೆಯಲು ಹೊರಟರೆ ತುಕ್ಕು ಹಿಡಿದ ಕಬ್ಬಿಣದ ಬಾಗಿಲಿನ ಥರ ಕಿರ್ರ್ ಸದ್ದು ಬರುವಂತೆನಿಸುತ್ತಿತ್ತು. ಕೊನೆಯ ದಿನ ಸಂಡೂರು ನೋಡುವುದಿತ್ತು. ಅವತ್ತಂತೂ ಕಾಲುಗಳನ್ನು ಕೈಗಳಿಂದ ನಡೆಸಬೇಕು ಅನ್ನುವಷ್ಟು ಪರಿಸ್ಥಿತಿ ಹದಗೆಟ್ಟಿತ್ತು. ಆದರೂ ಮಾನಸ ಸರೋವರದಲ್ಲಿ ಕಂಡ ಊರು ಮನಸ್ಸಿನಲ್ಲಿ ಎಷ್ಟು ಅಚ್ಚೊತ್ತಿತ್ತು ಅಂದರೆ ಅದನ್ನು ನೋಡದೇ ಹಿಂತಿರುಗಲಾರೆ ಎನ್ನುವಷ್ಟು. 'ಸರಿ ಆಗಿದ್ದಾಗಲಿ ನಡಿ ಭಾರತಿ. ನಡೆಯಕ್ಕಾಗದಿದ್ದರೆ ನಿಧಾನವಾಗೇ ಹೋಗು ಅಷ್ಟೇ. ಇದೇನು ಒಲಿಂಪಿಕ್ಸಾ... ಬೇಗ ನಡೆದರೆ ಮೆಡಲ್ ಕೊಡ್ತಾರೆ ಅನ್ನಕ್ಕೆ' ಎಂದುಕೊಳ್ಳುತ್ತಾ ಹೊರಟೆ.



ಆ ಊರು ಚೆಂದವಿತ್ತು ಅನ್ನಿಸಿತ್ತಾದರೂ,

ಬಿರುಬೇಸಿಗೆಯ ಊರುಗಳ ಬದಿಯಲ್ಲಿ ಮಲೆನಾಡಿನಂಥ ಊರನ್ನು ನಾನು ಊಹಿಸಿಕೊಂಡಿರಲಿಲ್ಲ! ಜೀವನದಲ್ಲೇ ಮರೆಯಲಾಗದ ಅದ್ಭುತ ಪ್ರಯಾಣಗಳಲ್ಲಿ ಅದೂ ಒಂದು. ದೂರದಲಿ ಗಿರಿಯ ಮೇಲೆ ಇಳಿದಂಥ ಮೋಡ ಮಾಲೆ, ಹಸಿರಿನ ನಾನಾ ಶೇಡ್ಸ್... ಉಫ್ ನೆನೆಸಿಕೊಂಡರೆ ಈಗಲೂ ರೋಮಾಂಚನ! ಬಿಟ್ಟ ಬಾಯಿ ಬಿಟ್ಟಂತೆ ಕುಳಿತಿರುವಾಗಲೇ ನಮ್ಮ ಗೈಡ್ ಶಿವಾಜಿ ನಮಗಾಗಿ ಕಾಯುತ್ತ ನಿಂತಿದ್ದ ಸ್ಥಳ ಬಂತು. 25 ವರ್ಷದ ಹುಡುಗ. ಚುರುಕಾಗಿದ್ದ. ನಾರಿಹಳ್ಳ ರಿಸರ್ವಾಯರ್ ಬಳಿ ಕಾಯುತ್ತ ನಿಂತಿದ್ದವನು, ಅದನ್ನು ಮೊದಲು ನೋಡಿ ಬಿಡೋಣ ಎಂದ. ಸರಿ ಅಂತ ಮೇನ್ ರೋಡ್‌ನ ಬದಿಯಲ್ಲಿ ಗಾಡಿ ಹಾಕಿ ಹೊರಟೆವು. ಎರಡು ಜಬರ್ದಸ್ತ್ ಬೀಗ ಹಾಕಿದ ಗೇಟ್‌ಗಳನ್ನು ನೋಡಿ ನಾನು ಈಗೇನು ಗತಿ ಅಂದುಕೊಳ್ಳುವಾಗಲೇ ಬದಿಯಲ್ಲಿ ಒಂದು ಪಿಲ್ಲರ್ ಉರುಳಿಸಿ ಮಾಡಿದ್ದ ಸಂದಿಯಲ್ಲಿ ನಮ್ಮನ್ನು ಕರೆದೊಯ್ದ!



ಹಸಿರಿನ ನಡುವೆ ಸಾಗುವಾಗಲೇ ಜೋರು ಗಾಳಿ ಏರಿಯ ಮೇಲೆ ಬರುವುದರಲ್ಲಿ uncontrollable ಆಗಿತ್ತು. ಆ ಗಾಳಿಯಬ್ಬರದಲ್ಲಿ ನನ್ನ ಶೇಡ್ಸ್ ಹೋಗಿ 15 ಅಡಿ ಕೆಳಗೆ ಬಿದ್ದಿದ್ದನ್ನು ಶಿವಾಜಿ ತಂದುಕೊಟ್ಟ. ಆ ನಂತರ ಅಲ್ಲೊಂದು view point ಗೆ ಕರೆದುಕೊಂಡು ಹೋದ... ಒಂದಿಷ್ಟು ಫೋಟೋಗಳಾದವು. ಆ ನಂತರ ಇನ್ನೇನು ವಾಪಸ್ ಅಂದುಕೊಳ್ಳುವಾಗಲೇ ಬಲಕ್ಕೆ ತಿರುಗಿದ ಶಿವಾಜಿ. ಅಲ್ಲಿ ಒಂದು ದೊಡ್ಡ ಸಿಮೆಂಟ್ ಪೈಪ್ ಹಾಕಿದ್ದಲ್ಲಿ ರಸ್ತೆ ಮುಗಿದುಹೋಗಿತ್ತು. 'ಇಲ್ಲಿ ರಸ್ತೆಯೇ ಇಲ್ಲವಲ್ಲಪ್ಪಾ' ಅಂದೆ. 'ನೀವು ಬನ್ನಿ ಹೇಳ್ತೀನಿ' ಅಂದ. ಕುರಿಯಂತೆ ಹಿಂಬಾಲಿಸಿದೆ. ಆ ಪೈಪ್‌ನ ಬದಿಯಿದ್ದ ಒಂದಿಷ್ಟು ಕಲ್ಲನ್ನೇರಿ, ಒಂದು ತಡೆಗೋಡೆ ತಬ್ಬಿ ಹಿಡಿದು 'ಬನ್ನಿ' ಅಂತ ಕರೆದ. 'ಏ ಹೋಗಯೋ ಸಪಾಟಾದ ನೆಲದ ಮೇಲೆ ನಡೆಯಕ್ಕೇ ಆಗ್ತಿಲ್ಲ. ಇನ್ನು ಇದನ್ನು ದಾಟುವುದಾ? ಸರಿ ಅಲ್ಲಿ ಬಂದರೆ ಮುಂದೆ ಹೇಗೆ?' ಅಂದೆ. 'ಈ ಪೈಪ್ ದಾಟಿದರೆ ಆಯ್ತು' ಅಂದವನೇ ಸಲೀಸಾಗಿ ದಾಟಿ 'ಹೀಗೆ' ಅಂದ. ನಾನು ನಗುತ್ತಾ 'ಶಿವಾಜಿ ನಿನ್ನ ವಯಸಲ್ಲಿ ನಾನು ಎರಡೆರಡು ಮೆಟ್ಟಲು ಹಾರಿ ಹತ್ತುತಿದ್ದೆ ಕಣಪ್ಪಾ. ಈಗಾಗಲ್ಲ. ಜೊತೆಗೆ ಹಂಪಿಯಲ್ಲಿ ಎರಡು ದಿನ ನಾಯಿ ಥರ ಅಲೆದಾಡಿಸಿದ್ದಾರೆ ಅಲ್ಲಿನ ಗೈಡ್. ಬುಟ್ಬುಡಪ್ಪ ನನ್ನ' ಅಂದರೆ ಈ ನನ್ನ ಗಂಡ 'ಏ ಆಗಲ್ಲ ಅಂದರೇನರ್ಥ? ಬಾ ಬಾ ಕೈ ಹಿಡ್ಕೋ' ಅಂದವನೇ ನನ್ನನ್ನು ಯೋಚಿಸಲೂ ಬಿಡದಂತೆ ಒತ್ತಾಯಿಸಿ ಆ ಪೈಪ್‌ನ ಬಳಿ ಎಳೆದುಕೊಂಡ. ಅದರ ಮೇಲೆ ಕೂತಾಗ ಥೇಟ್ ಕೃಷ್ಣದೇವರಾಯನ ಸಿಂಹಾಸನದ ಮೇಲೆ ಕೂತಂತೆ ಅನಿಸಿತ್ತು ದಣಿದ ದೇಹಕ್ಕೆ. 'ಯಪಾ ಇಷ್ಟೆತ್ತರದಿಂದ ಆ ಕಡೆಗೆ ಹಾರಿ ಯಾಕೆ ಸಾಯಬೇಕು ... ಬಿಡ್ರೋ ನನ್ನ ಅತ್ಲಾಗೆ. ನೀವಿಬ್ರೂ ಹೋಗಿಬನ್ನಿ' ಅಂದರೆ ಬಿಡಲೊಲ್ಲರು. ಕೊನೆಗೆ ವಿಧಿಯಿಲ್ಲದೆ ಅಂತೂ ಆ ಕಡೆ ಹಾರಿದೆ. (ಇದನ್ನು ಓದುತ್ತಿರುವ ಆ ಊರಿನವರಿಗೆ ಅಥವಾ ಅಲ್ಲಿ ಹೋಗಿರುವವರಿಗೆ ಅದು ಸಣ್ಣ ಪೈಪ್ ಅನ್ನಿಸಿದ್ದರೆ ದಯವಿಟ್ಟು   😁😁😁 ... ನಾನು ಮಾತಾಡುತ್ತಿರುವುದು ನನ್ನ ಬಗ್ಗೆ ಮಾತ್ರ)!



ಅದಾದ ನಂತರ ನಿಟ್ಟುಸಿರು ಬಿಟ್ಟು ಹೊರಟೆ. ಅಲ್ಲಿದ್ದ ರೈಲ್ವೇ ಹಳಿಗಳ ಮೇಲೆ ನಡೆಯುತ್ತ ಸಾಗುವಾಗ ಅಷ್ಟೆಲ್ಲ ಸರ್ಕಸ್ ಮಾಡಿದ್ದೂ ಸಾರ್ಥಕ ಅನ್ನಿಸಿತು... ಅಷ್ಟು ಸುಂದರವಾದ ಸ್ಥಳ. ಸುತ್ತಲೂ ಬೆಟ್ಟಸಾಲು... ನಡುವೆ ನೀರು... ಮಧ್ಯದಲ್ಲಿ ಈ ರೈಲ್ವೆ ಹಳಿ... ಪೇಂಟಿಂಗ್ ಇದ್ದ ಹಾಗಿತ್ತು ಇಡೀ ವಾತಾವರಣ. ಹಾಗೆ ನಡೆಯುವಾಗ ಶಿವಾಜಿ 'ಈ ಬ್ರಿಡ್ಜ್ ದಾಟಿ ಆ ಕಡೆ ಹೋದರೆ ಅಲ್ಲೊಂದು view point ಇದೆ... ಹೆಂಗಿದೆ ಗೊತ್ತಾ ಮೇಡಂ' ಅಂತ ವರ್ಣಿಸುತ್ತಾ ಸಾಗಿದ. ಒಂದಿಷ್ಟು ದೂರ ಸಾಗಿದ ನಂತರ ಆ ಬ್ರಿಡ್ಜ್ ಬಂತು. ಅದರ ಮೇಲೆ ಒಂದು ಹೆಜ್ಜೆ ಇಟ್ಟವಳಿಗೆ ತಲೆ ಗಿರ್ ಅಂತು ಅಡಿಯಲ್ಲಿ ಹರಿಯುತ್ತಿದ್ದ ನೀರನ್ನು ನೋಡಿ. ವರ್ಟಿಗೋ ಸಮಸ್ಯೆ ಇರುವ ನನಗೆ ಎತ್ತರವೇ ಒಂದು ಸಮಸ್ಯೆ... ಅದರಲ್ಲೂ ಕಾಲ ಕೆಳಗೆ ಏನಾದರೂ ಚಲಿಸುತ್ತಿದ್ದರಂತೂ ಮುಗಿದೇ ಹೋಯಿತು. ನಾನು ತಕ್ಷಣ ಕಾಲು ಹಿಂದಕ್ಕೆಳೆದು 'ನಾನು ಬರಲ್ಲ' ಅಂತ ಘೋಷಿಸಿದೆ. ಆ ಕಳ್ಳ ಶಿವಾಜಿ ಪೈಪ್ ಹತ್ತಿಸಿದ ಹಾಗೆ ಇದನ್ನೂ ದಾಟಿಸಿಬಿಡಬಹುದು ಅನ್ನುವಂತೆ ಪುಸಲಾಯಿಸಲು ಶುರು ಮಾಡಿದ...

ಅಯ್ಯೋ ಅಲ್ಲೆಷ್ಟು ಚೆನಾಗಿದೆ ಗೊತ್ತಾ ಮೇಡಂ

ನಾ ಹಿಡ್ಕೊತೀನಿ ಬನ್ನಿ ಮೇಡಂ

ಕಾಲ ಕೆಳಗೆ ನೋಡದೇ ನಡೆದರಾಯ್ತು ಮೇಡಂ

ಬಿದ್ರೂ ಇಲ್ಲೇನು ಅಡಿಗೆ ಹೋಗಕ್ಕಾಗತ್ತಾ ನೋಡಿ ಮೇಡಂ...

ಅದಕ್ಕೆ ನನ್ನ ಗಂಡನ ಹಿಮ್ಮೇಳ ಬೇರೆ...

ನಾನು ಕೇಳುವಷ್ಟು ಕೇಳಿ 'ನೋಡು ಶಿವಾಜಿ ನೀನು, ನನ್ನ ಗಂಡ ಸೇರಿಸಿ ಒಂದು ಕೋಟಿ... ಎಷ್ಟೇಳು... ಒಂದು ಕೋಟಿ ಕೊಡ್ತೀನಿ ಅಂದ್ರೂ ನಾನು ಬಿಲ್‌ಕುಲ್ ಬರಲ್ಲ' ಅಂದಮೇಲೆ ಇಬ್ಬರೂ ಆ ಪ್ರಯತ್ನ ನಿಲ್ಲಿಸಿ ಹೊರಟರು.



ನಾನು ರೈಲ್ವೇ ಹಳಿಯ ಮೇಲೆ ಚಕ್ಕಮಕ್ಕಳ ಹಾಕಿ ಕೂತು ಕಾಲು ನೀವಿಕೊಳ್ಳುತ್ತಾ ಫೋಟೋ ತೆಗೆಯಲು ಪ್ರಾರಂಭಿಸಿದೆ. ಸುತ್ತಲೂ ಯಾರೆಂದರೆ ಯಾರಿಲ್ಲ, ಆ ಪೈಪ್‌ನ ಆ ಪಕ್ಕದಲ್ಲಿ ರಿಪೇರಿ ಮಾಡುತ್ತಿದ್ದ ಗ್ಯಾಂಗ್‌ಮನ್‌ಗಳ ಒಂದು ಗುಂಪು ಬಿಟ್ಟರೆ. ಪ್ರಕೃತಿ at its best! ಆನಂದವಾಗಿ ಕುಳಿತಿರುವಾಗ ಇದ್ದಕ್ಕಿದ್ದಂತೆ ಎಲ್ಲಿಂದಲೋ 'ಪೋಂ' ಅಂತ ಸದ್ದು! ಇದೆಲ್ಲಿಂದ ಬಂತು... ರೈಲು ಬರುತ್ತಾ ಈ ಹಳಿಯ ಮೇಲೆ ಅಂದು ಗಾಬರಿಯಿಂದ ತಲೆ ತಿರುಗಿಸಿದರೆ ನನ್ನಿಂದ ಕೇ...ವ...ಲ.... ಕೇವಲ 15 ಅಡಿ ದೂರದಲ್ಲಿ ರೈಲು!! ಕೇವಲ ಹದಿನೈದು ಅಡಿ!! ಅದರ ವೇಗಕ್ಕೆ ನನ್ನನ್ನು ತಲುಪಲು 5-6 ಸೆಕೆಂಡ್ ಸಾಕು!!!


SSLC ಪರೀಕ್ಷೆಯ ದಿನ ಪರೀಕ್ಷೆಗೆ ತಡವಾಗಿದ್ದರೂ ಓಡದ ನಾನು, ಆವರೆಗೆ ಕಾಲು ನೋವು ಅಂತ ನೀವಿಕೊಳ್ಳುತ್ತ ಕೂತಿದ್ದ ನಾನು... ರೈಲು ಕಂಡ ಕೂಡಲೇ ಛಂಗನೇ ಹದಿನಾರು ವರ್ಷದ ಹುಡುಗಿಯ ಹಾಗೆ... ಏ ಅಷ್ಟೂ ಇಲ್ಲ ಬಿಡಿ ಆರೆಂಟು ವರ್ಷದ ಮಗೀನ ಹಾಗೆ ಎದ್ದು ನಿಂತೆ! ನಾನು ನಿಲ್ಲುವುದರಲ್ಲಿ ರೈಲು ನನ್ನ ಪಕ್ಕ ಬಂದಾಗಿತ್ತು! ಅಷ್ಟೇ ಸಮಯ... ಕೇವಲ ನಾಲ್ಕೈದು ಸೆಕೆಂಡ್ ಅಷ್ಟೇ. ರೈಲು ನನ್ನಿಂದ ಕೇವಲ ಅರ್ಧ ಅಡಿ ಅಂತರದಲ್ಲಿ ಸರಿದು ಹೋಗಲಾರಂಭಿಸಿತು... ಕೇವಲ ಅರ್ಧ ಅಡಿ!

ಅದರ ಪಕ್ಕ ಅಡ್ಡಲಾಗಿ ನಾನು ಸುಮಾರು ಒಂದೂವರೆ ಅಡಿ...

ಅದರ ಪಕ್ಕ ಒಂದು ಅಥವಾ ಒಂದೂವರೆ ಅಡಿ ಜಾಗ...

ಅದರ ಬದಿಯಲ್ಲಿ ನೀರು!

ನಾನು ನಿಶ್ಚಲಳಾಗಿ ರೈಲಿಗೆ ಬೆನ್ನು ಹಾಕಿ ನಿಂತುಬಿಟ್ಟೆ...



ಏನೋ ಒಂದೆರಡು ಮೂರು ಬೋಗಿ ಬರುತ್ತದೆ ಅಂತ ನಿಂತಲ್ಲೇ ನಿಂತೆನಾ... ಒಂದಾದ ಮೇಲೊಂದರಂತೆ ಸಾಗಿದವು... ಸಾಗಿದವು... ಸಾಗಿದವು... ಸುಮಾರು 30-35 ಗೂಡ್ಸ್ ಕಂಟೇನರ್‌ಗಳು!! ಅದು ಸಾಗುವಾಗ ನಾನು ಹಿಂತಿರುಗಿ ನೋಡಲೂ ಸ್ಥಳವಿಲ್ಲ. ಟ್ರೇನ್‌ಗೆ ಕಟ್ಟಿದ್ದ ಯಾವುದೋ ಹಳೆಯ ದಾರಗಳೆಲ್ಲ ನನಗೆ ಹೊಡೆದು ಹೋಗುತ್ತಿವೆ ರಪ್ ರಪ್ ಅಂತ. ಬಲಕ್ಕೆ ಸರಿಯಲಾ ಸ್ವಲ್ಪ ಅಂದುಕೊಂಡರೆ ಅದೂ ಭಯ. ಆ ರಪ್ ರಪ್ ದಾರ ಹೊಡೆಯುವ ಆ ಭೀಭತ್ಸ ಘಳಿಗೆಯಲ್ಲೂ ಎಡಗೈಲಿ ನನ್ನ ಹುಟ್ಟಿದ ದಿನಕ್ಕೆ ಗಂಡ ಉಡುಗೊರೆಯಾಗಿ ಕೊಡಿಸಿದ ಹೊಸ ಮೊಬೈಲ್‌ನ ಯೋಚನೆ! ಆ ಥರ ಹೊಡೆತದ ಶಾಕ್‌ಗೆ ಮೊಬೈಲ್ ರೈಲಿನಡಿ ಸೇರಿದರೆ ಅಂತ ಮೆತ್ತಗೆ ಬಲಗೈ ಎಡಗೈ ಹತ್ತಿರ ತಂದು ವರ್ಗಾಯಿಸಿದೆ! ಆ ನಂತರ ಯೋಚಿಸಿದೆ 'ನಮ್ಮೂರ ಟ್ರಕ್‌ಗಳಾಚೆ ಬಂದಿರುವ ಕಬ್ಬಿಣ ಇರುತ್ತದಲ್ಲ... ಅದೇ ಪೋಲಿಸರಿಗೆ ಲಂಚ ಕೊಟ್ಟು ಜೈ ಅನ್ನುತ್ತಾರಲ್ಲ... ಆ ಥರವೇನಾದರೂ ಈ ರೈಲಿನಿಂದಾಚೆ projection ಇರುವುದೇನಾದರೂ ವಸ್ತುವನ್ನು ಹಾಕಿದ್ದರೆ, ಅದು ನನ್ನನ್ನು ಸಾರಿಸಿ ಗುಡಿಸಿ ರಂಗೋಲಿ ಹಾಕಿಬಿಡುತ್ತದಲ್ಲ ಅಯ್ಯೋ ದೇವರೇ ಅಂತ. ಆ ಥರವೇನಾದರೂ ಇದೆಯಾ ಅಂತ ಹಿಂದೆ ತಿರುಗಿ ನೋಡಲಾ, ಇದ್ದರೆ ನಿಂತ ಸ್ಥಳದಲ್ಲೇ ಕೂರಬಹುದೇನೋ ಅಂದುಕೊಂಡರೆ ರೈಲಿನ ರಭಸಕ್ಕೆ ಭರ್ರೋ ಗಾಳಿ. ಹಿಂದಿರುಗಲು ತಲೆ ತಿರುಗಿಸುವಾಗ ಸ್ವಲ್ಪ ಆಯ ತಪ್ಪಿದರೂ ಹಳಿಯ ಮೇಲೆ ಚಟ್ನಿಯಾಗುತ್ತೇನೆ. ಥು ಬೇಡ ಬಿಡು ಅದಕ್ಕಿಂತ ನೀರಿಗೆ ಬಿದ್ದರೆ ಯಾರೋ ನೋಡಿ ಕಾಪಾಡುವ ಸಾಧ್ಯತೆಯಾದರೂ ಇರುತ್ತೆ ಅಂತನ್ನಿಸಿ ಸುಮ್ಮನೆ ನಿಂತೆ. ಕ್ಷಣವೊಂದು ಶತಮಾನದ ಥರ ಸಾಗುತ್ತಿತ್ತು. ಸಾವು "ಸ್ಟ್ಯಾಚು" ಹೇಳಿದ ಹಾಗೆ ನಿಂತಿದ್ದೆ. ಇದ್ದಕ್ಕಿದ್ದಂತೆ ನೋಡಿದರೆ ನನ್ನ  ಮೊಬೈಲ್ ಕ್ಯಾಮೆರಾ ಆನ್ ಇದ್ದಿದ್ದು ಕಾಣಿಸಿತು. ಆ ಘಳಿಗೆಯಲ್ಲೂ ನಾನು ಹಿಂದಿನಿಂದ ರಾಡ್ ಏನಾದರೂ ಹೊಡೆದು ನೆಗೆದು ಬಿದ್ದರೆ, ಅಮೃತವರ್ಷಿಣಿ ಸಿನೆಮಾದ ಥರ ಸಾಯುವ ಘಳಿಗೆಯ ಫೋಟೋ ಆದರೂ ಇರಲಿ ಅಂತ ಯೋಚಿಸಿ, ಹಾಗೇ ಮೆಲ್ಲನೆ ಬಲಗೈ ಮಾತ್ರ ಸ್ವಲ್ಪ ಎತ್ತಿ ಟ್ರೈನ್ ಫೋಟೋ ತೆಗೆದುಕೊಂಡೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದರೆ ಬಹುಶಃ ನಾನಿವತ್ತು ಇದನ್ನು ಬರೆಯಲು ಆಗ್ತಿರಲಿಲ್ಲ!


ಅಂತೂ ಎರಡು ಶತಮಾನಗಳ ನಂತರ ರೈಲಿನ ಕೊನೆಯ ಕಂಟೇನರ್‌ನ ಹಿಂಭಾಗ ಕಾಣಿಸಿತು. ಒಂದು ಮೂವತ್ತು ಸೆಕೆಂಡ್‌ಗಳ ಕಾಲ ಸ್ತಬ್ಧವಾಗಿ ನಿಂತಿದ್ದವಳು, ಟ್ರೈನ್ ಬಂದಾಗ ನಾನು ಎದ್ದು ನಿಂತ ವೇಗವನ್ನು ನೆನಪಿಸಿಕೊಂಡೆ ನೋಡಿ.... ನಕ್ಕೆ ನಕ್ಕೆ ನಕ್ಕೆ... ಒಬ್ಬಳೇ ಹುಚ್ಚಿಯಂತೆ ನಕ್ಕೆ ಸುಮಾರು ಅರ್ಧ ಗಂಟೆಯವರೆಗೆ...

'ಅಲ್ವೇ ಮಾರಾಯ್ತಿ ಸಾವು ಬಂದರೆ ಕ್ಯಾರೆ ಅನ್ನಲ್ಲ ಅಂತಿದ್ದಿ... ಸತ್ತೋದರೆ ಸರಿ ಅಂತ ಸಾವಿರ ಸಲ ಎದೆ ಎದೆ ಬಡ್ಕೊಂಡು ಅತ್ತಿದೀ... ಕಾಲು ನೋವು ಅಲುಗಾಡಕ್ಕೇ ಆಗಲ್ಲ ಅಂತಿದ್ದೀ.... ರೈಲು ಬಂದ ತಕ್ಷಣ 5 ಸೆಕೆಂಡಲ್ಲಿ ಎದ್ದು ನಿಂತ್ಯಲ್ಲ....' ಅಂತ ಮಾತಾಡಿಕೊಳ್ಳೋದು ಮತ್ತೆ ನಗೋದು ಮತ್ತೆ ಮಾತಾಡಿಕೊಳ್ಳೋದು ಮತ್ತೆ ನಗೋದು...


ಇಷ್ಟರಲ್ಲಿ ಆ ಬದಿ ಗುಡ್ಡದ ಮೇಲೆ ನಿಂತಿದ್ದ ನನ್ನ ಗಂಡ ಮತ್ತು ಶಿವಾಜಿ ಬರುವುದು ಕಾಣಿಸಿ ಫೋಟೋ ತೆಗೆದುಕೊಳ್ಳಲಾರಂಭಿಸಿದೆ. ಅಂತೂ ಅವರು ಈ ಕೊನೆ ಮುಟ್ಟಿದಾಗ ಹಲ್ಲು ಕಿಸಿಯುತ್ತ ನಿಂತಿದ್ದ ನನ್ನನ್ನು ನೋಡಿ ನನ್ನ ಗಂಡ 'ನಿಂದೂ ಟ್ರೈನ್ ಕತೆನಾ' ಅಂದ. 'ಲೇ ನಿಮ್ ಮಕ ಮುಚ್ಚ... ರೈಲು ಓಡಾಡತ್ತೆ ಅಂತ ಎಚ್ಚರಿಕೆ ಕೊಡೋದಲ್ವೆನ್ರೋ ಪಾಪಿಗಳಾ' ಅಂದರೆ, ಶಿವಾಜಿ 'ಅಯ್ಯೋ ಹೇಳಿದ್ನಲ್ಲ ಸಾರ್‌ಗೆ... ಆ ಕಡೆ ಲೋಡ್ ಆದಮೇಲೆ ಬರ್ತವೆ... ಟೈಮಿಂಗ್ ಅಂತ ಏನು ಇಲ್ಲ ಸಾರ್ ಅಂತ' ಅಂದ... ಸಾರು 'ಅಯ್ಯೋ ನೀನು ಕೇಳಿಸಿಕೊಳ್ಲಿಲ್ವಾ... ನಾನು ಅವನು ಹೇಳಿದ್ದನ್ನ ನೀನು ಕೇಳಿಸಿಕೊಂಡಿದೀ ಅಂತ ಮಾಡ್ದೆ!!'

'ಥೋ ನಿಮ್ಮ communication gap ಮನೆ ಹಾಳಾಗ... ಇಬ್ರೂ ಸೇರಿ ರೈಟ್ ಹೇಳಿಸ್ತಿದ್ರಿ ನನ್ನ' ಅಂದವಳೇ ಮತ್ತೆ ನಾನೆದ್ದು ನಿಂತ ಪರಿ ನೆನಪಿಸಿಕೊಂಡು ಉರುಳಾಡಿ ನಗಲು ಶುರು ಮಾಡಿದವಳೇ ಕತೆ ವಿವರಿಸಿದೆ. ನನ್ನ ಗಂಡ 'ಅಯ್ಯೋ ನಿನ್ನ ಕತೆ ಹಾಗಾಯ್ತಾ... ನಾವು ಅಲ್ಲಿ ಹೋಗೋದ್ರಲ್ಲಿ ಈ ಟ್ರೈನ್ ಬಂದ ತಕ್ಷಣ ಶಿವಾಜಿ ಸಾರ್ ಓಡಿ ಓಡಿ ಅಂತ ಕಿರುಚಿದ. ಹೆಂಗೆ ಓಡಿದ್ವಿ ಗೊತ್ತಾ... ಎರಡು ಸೆಕೆಂಡ್‌ನಲ್ಲಿ ಗುಡ್ಡದ ಮೇಲಿದ್ವಿ' ಅಂತ ಅವನೂ ನಗಲು ಶುರು ಮಾಡಿದ. 'ನೀವಾಗಿದ್ದಕ್ಕೆ ಓಡಿದ್ರಿ. ನಾನಿದ್ದಿದ್ರೆ ಓಡಕ್ಕಾಗ್ತಿತ್ತಾ ಈ ದೇಹ ಹೊತ್ಕೊಂಡು? ಚಟ್ನಿ ಆಗೋಗ್ತಿದ್ದೆ' ಅಂದರೆ ಆ ಶಿವಾಜಿ ಕೂಲಾಗಿ 'ಅಯ್ಯೋ ಪ್ರಾಣ ಉಳಿಸಿಕೊಳ್ಬೇಕು ಅಂತ ಬಂದಾಗ ನೀವೂ ಓಡ್ತಿದ್ರಿ ಬಿಡಿ ಮೇಡಂ'😁😁😁ಅಂತಾನೆ    


ಒಂದ್ರಾಶಿ ಹೊತ್ತು ನಕ್ಕು ಅಲ್ಲಿಂದ ಹೊರಟು ಬರುವಾಗ ಇದ್ದಕ್ಕಿದ್ದಂತೆ ಹೊಳೆದು 'ಅಲ್ಲ ಶಿವಾಜಿ ಬ್ರಿಡ್ಜ್ ಮೇಲೆ ನಡೆದು ಹೋಗುವಾಗ ಟ್ರೈನ್ ಬಂದ್ರೆ ಏನು ಮಾಡೋದು' ಅಂದೆ ಗಾಬರಿಯಲ್ಲಿ. 'ಏ ಅಲ್ಲೇ ಮಧ್ಯೆ ಆ ಮೂರು ಲ್ಯಾಂಡಿಂಗ್ ಇಲ್ವಾ ಅಲ್ಲಿ ನಿಂತ್ಕೊಳೋದು' ಅಂದ. 'ಲೇ ಒಂದೊಂದಕ್ಕೂ ನಡುವೆ ಇಪ್ಪತ್ತು ಅಡಿ ದೂರ ಇದೆಯಲ್ಲಪ್ಪ... ಒಂದು ಲ್ಯಾಂಡಿಂಗ್ ಬಿಟ್ಟ ನಂತರ ಟ್ರೈನು ಬಂದುಬಿಟ್ರೆ?' ಅಂದೆ. 'ಏ ಓಡೋದಷ್ಟೇ ಮೇಡಂ... ಇನ್ನೇನು ಮಾಡಕ್ಕಾಗತ್ತೆ' ಅಂದ!!

ಯಪ್ಪಾ ಯೌವನ ಕೊಡೋ ಭಂಡ ಧೈರ್ಯವೇ!! ಇವನು ನನ್ನ ಈ ಲೋಕ ಬಿಟ್ಟೇ ಓಡಿಸಲಿಲ್ಲ ನನ್ನ  😁😁 ಭಾಗ್ಯ   

Comments

  1. ಟ್ರೈನ್ ಹೋಗಿ
    ಯುಗಗಳೇ
    ಕಳೆದರೂ ನಗು ನಿಲ್ತಿಲ್ಲ!!!

    ReplyDelete
  2. ಹೊಟ್ಟೆ ಹುಣ್ಣಗುವಷ್ಟು ನಕ್ಕಿದಿನಿ ನೆನಪಾದಾಗ, ವಂದನೆಗಳು ಮೇಡಂ ನಿಮ್ಮ ಬರಹಕೆ 🙏

    ReplyDelete
  3. ನಿಸರ್ಗ ವರ್ಣನೆ ಮತ್ತು ಹಾಸ್ಯಗಳ ಮೆಲುಕು ತಮ್ಮ ಲೇಖನ ತುಂಬಾ ಮುದ ನೀಡಿದೆ. ರೈಲಿಗೆ ಅರ್ಧಡಿ ದೂರದಲ್ಲಿ ಪಾರಾದ ದೃಶ್ಯ ಮೈ ಜುಮ್ ಎನಿಸಿತು. ಸಕಲೇಶಪುರದ ಸೇತುವೆ ಸುರಂಗಗಳ ನೆನಪು ಮಾಡಿಕೊಟ್ಟಿತು. ಧನ್ಯವಾದಗಳು

    ReplyDelete

Post a Comment