ಆಸರೆ ಮನೆ - 5

 ಆಸರೆ ಮನೆ - 5

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ 


ಭಾಗ - 5

ಊರಿನ ಗಾಳಿ ಬೀಸಿದಂತೆ ದಂಪತಿಗಳ ಮನಸ್ಸು ಪುಳಕಿತವಾಯಿತು. ಸ್ಟೇಷನ್ನಿಗೆ ವಿಜಯನ ಅಣ್ಣ ಸುಬ್ಬಣ್ಣ, ಮೂರ್ತಿಗಳ ತಮ್ಮ ಗಿರಿಧರ ಇಬ್ಬರೂ ಬಂದಿದ್ದರು. ಮೂರ್ತಿ ಮೊದಲೇ ಯೋಚಿಸಿದ್ದಂತೆ ಮೊದಲು ತಮ್ಮ ಮನೆಗೆ ಹೋಗಿ ನಂತರ ವಿರಾಮವಾಗಿ ಎಲ್ಲರ ಮನೆಗೂ ಹೋಗುವುದೆಂದು ನಿರ್ಧರಿಸಿದರು. 

ಸುಬ್ಬಣ್ಣ ಮೊದಲೇ ಮನೆಯನ್ನು ಶುಚಿ ಮಾಡಿಸಿ ಕೆಲಸದಾಳು ನಿಂಗಮ್ಮನನ್ನು ಅಲ್ಲೇ ಇರುವುದಕ್ಕೆ ಏರ್ಪಾಡು ಮಾಡಿದ್ದರು.ಹಾಗಾಗಿ ಮನೆ ವಾಸಕ್ಕೆ ಯೋಗ್ಯವಾಗಿತ್ತು. ಹತ್ತಿರದಲ್ಲಿಯೇ ಗಿರಿಧರನ ಮನೆ ಇದ್ದುದರಿಂದ ಊಟಕ್ಕೆ ಅಲ್ಲಿಗೆ ಹೋಗುವುದೆಂದಾಯಿತು. ಸುಬ್ಬಣ್ಣ ತಂಗಿ ಭಾವನನ್ನು ಮನೆಗೆ ತಲುಪಿಸಿ ತಾವು ಹೊರಡುವುದಾಗಿಯೂ ನಿಧಾನವಾಗಿ ಮನೆಗೆ ಬರಬೇಕೆಂದು ಊಟ-ತೀಡಿ ಮನೆಯಲ್ಲಿ ಮಾಡದೇ ತಮ್ಮ ತಮ್ಮಲ್ಲಿಯೇ ಒಬ್ಬೊಬ್ಬರ ಮನೆಗೆ ಒಂದೊಂದು ದಿನ ಬರಬೇಕೆಂದು ಹೇಳಿ ಹೊರಟರು. 

ಮೂರ್ತಿ- ವಿಜಯನಿಗೆ ತಮ್ಮ ಮನೆಯ ಆಹ್ಲಾದತೆ, ತಮ್ಮವರ ಪ್ರೀತಿ ಆದರ  ಹಿತವನ್ನು  ತಂದಿತು. ಸಂಜೆಯ ವೇಳೆಗೆ ಮನೆ ಅಣ್ಣ ತಮ್ಮ, ಅಕ್ಕ ತಂಗಿಯರಿಂದ ತುಂಬಿ ಹೋಯಿತು. ದೊಡ್ಡವರ ಮಾತು ನಗೆ ಮಕ್ಕಳ ಗದ್ದಲ ದಂಪತಿಗಳನ್ನು ಸ್ವರ್ಗ ಸುಖದಲ್ಲಿ ತೇಲಾಡಿಸಿತು. ಎಲ್ಲರ ಮನೆಯಿಂದಲೂ ಒಂದೊಂದು ಬಗೆ ತಿಂಡಿ ಊಟ ತಂದಿದ್ದರಿಂದ ಎಲ್ಲರಿಗೂ ಅಲ್ಲೇ ಸಂಜೆಯ ತಿಂಡಿ, ರಾತ್ರಿಯ ಊಟ ಆಯಿತು. ಸಂಜೆಯ ಟೀ ಮಾತ್ರ ನಿಂಗಮ್ಮ ತಂದುಕೊಟ್ಟ ಹಾಲಿನಿಂದ ವಿಜಯ ತಯಾರಿಸಿ ತಿಂಡಿಯೊಂದಿಗೆ ವಿತರಿಸಿದರು. ಊರಿನಿಂದ ಬರುವಾಗ ಎಲ್ಲರಿಗೆಂದು ತಂದಿದ್ದ ಶಾಲು, ಸ್ವೆಟರ್ ಗಳು, ಮಕ್ಕಳಿಗೆ ಆಟದ ಸಾಮಾನು ಬಟ್ಟೆಗಳು ವಿತರಣೆಯಾಯಿತು. ಎಲ್ಲರೂ ಹೊತ್ತಾಯಿತೆಂದರು. ಒಬ್ಬೊಬ್ಬರೇ ಮನೆಗೆ ಹೊರಟರು. ಮೂರ್ತಿ ಸುಬ್ಬಣ್ಣನನ್ನು ಮಾತ್ರ ಉಳಿದುಕೊಳ್ಳಲು ಹೇಳಿದರು. 

ಎಲ್ಲರೂ ಹೋದ ನಂತರ ಗದ್ದಲ ಗೌಜು ಕಡಿಮೆಯಾದ ಮೇಲೆ ಮೂರ್ತಿ ವಿಜಯ, ಸುಬ್ಬಣ್ಣ ಮೂವರೇ ಕುಳಿತು ಮಾತಿಗೆ ತೊಡಗಿದರು. ನಿಂಗಮ್ಮ ವರಾಂಡದ ಜಗುಲಿಯನ್ನೇ ಮಂಚ ಮಾಡಿಕೊಂಡು ಮಲಗಿದಳು. 

ಮೂರ್ತಿ ಮಾತನಾಡಲು ಶುರು ಮಾಡುವ ಮೊದಲೇ ಸುಬ್ಬಣ್ಣ ''ಏನು ಭಾವ ನನ್ನನ್ಯಾಕೆ ಉಳಿಸಿಕೊಂಡಿರಿ? ಏನು ಸಮಾಚಾರ?'' ಎಂದರು. 

''ಸುಬ್ಬಣ್ಣ, ಇನ್ನು ಎರಡು ವರ್ಷ ನನ್ನ ಸರ್ವೀಸ್ ಇರುವುದು. ನಂತರ ನಾವು ಇಲ್ಲೇ ಬಂದು ಇರುವುದೆಂದು ನಿರ್ಧರಿಸಿದ್ದೇವೆ''. ಎಂದರು. 

''ಅದಕ್ಕೇನು ಒಳ್ಳೇ ಖುಷಿಯ ಸಮಾಚಾರ. ದೂರದಲ್ಲೆಲ್ಲೋ ನೀವಿದ್ದರೆ ನಮಗೂ ನೆಮ್ಮದಿಯಿಲ್ಲ. ನಿವೃತ್ತಿಯ ನಂತರ ನಿಮಗೆ ಅಲ್ಲೇನು ಕೆಲಸ ಬಂದು ಬಿಡಿ''. 

''ಅದಕ್ಕೆ ನಿನ್ನಿಂದ ಸಹಾಯ ಆಗಬೇಕಪ್ಪ''

''ನನ್ನಿಂದ ಏನಾಗಬೇಕು ಭಾವ''

''ಏನಿಲ್ಲ ನೀನು ಹೇಗಿದ್ದರು ಸಿವಿಲ್ ಎಂಜಿನಿಯರ್. ನಮ್ಮ ಈ ಮನೆಯನ್ನ ನಮ್ಮ ವಾಸಕ್ಕೆ ಯೋಗ್ಯವಾಗುವಂತೆ ಬದಲಾವಣೆ ಮಾಡಿ ಚೆನ್ನಾಗಿ ಕಾಲಾನುಸಾರ ಇರುವಂತೆ ಕಟ್ಟಿಸಿಕೊಡಬೇಕಪ್ಪ''. 

''ಅಷ್ಟೇ ತಾನೇ ಅದಕ್ಯಾಕೆ ಯೋಚನೆ, ನಾನೇ ನಿಂತು ಎಲ್ಲ ಮಾಡಿಸಿದರೆ ಸರಿ ತಾನೆ . ಬಿಡಿ ಯೋಚನೆ. ಇದ್ಯಾವ ದೊಡ್ಡ ವಿಷಯ. ನಿಮಗೆ ಯಾವ ರೀತಿ ಇರಬೇಕೆಂದು ಒಂದು ನಕಾಶೆ ಕೈನಿಂದ ಹಾಕಿಕೊಡಿ. ಅದಕ್ಕೆ ಸರಿಯಾಗಿ 

ನಾನು ನೀಲನಕಾಶೆ ತಯಾರಿಸಿ ಲೈಸೆನ್ಸ್ ಇತ್ಯಾದಿ ವ್ಯವಸ್ಥೆ ಮಾಡಿ ಕೆಲಸ ಪ್ರಾರಂಭಿಸುತ್ತೇನೆ''. ಎಂದು ಸುಬ್ಬಣ್ಣ ಭರವಸೆ ಕೊಟ್ಟ ಮೇಲೆ ಮೂರ್ತಿ ದಂಪತಿಗಳಿಗೆ ನಿರಾಳವಾಯಿತು. 

ಅಣ್ಣ ತಮ್ಮಎಲ್ಲರನ್ನು ಬಿಟ್ಟು ಸುಬ್ಬಣ್ಣನಿಗೆ ಕೆಲಸ ವಹಿಸಿದ್ದು ಮೂರ್ತಿಯ ತಮ್ಮಂದಿರಿಗೆ ಸ್ವಲ್ಪ ಅಸಮಾಧಾನಕ್ಕೆ ಕಾರಣವಾದರು ಸುಬ್ಬಣ್ಣ ಸಿವಿಲ್ ಎಂಜಿನಿಯರಾದುದ್ದರಿಂದ  ಅಣ್ಣ ಈ ತೀರ್ಮಾನ ಕೈಗೊಂಡಿರಬಹುದೆಂದು ತಾವೇ ಸಮಾಧಾನಿಸಿಕೊಂಡರು. 

೧೫ ದಿನಗಳು ೧೫ ನಿಮಿಷಗಳಂತೆ ಉರುಳಿತು. ಸುಬ್ಬಣ್ಣನ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದು ಅಲ್ಲಿಗೆ ಸಾಕಷ್ಟು ಹಣ ತುಂಬಿಸಿ ಮೂರ್ತಿಗಳು ಬ್ಯಾಂಕಿನ ಕಾಗದ ಪತ್ರಗಳನ್ನೂ, ಮನೆಗೆ ಕಟ್ಟಲು ಬೇಕಾದ ಅನುಮತಿ ಪಾತ್ರ ಇತ್ಯಾದಿಗಳಿಗೆ ಸಹಿ ಮಾಡಿಕೊಟ್ಟು ಮೂರ್ತಿ-ವಿಜಯ ಸಿಂಧ್ರಿಯತ್ತ ಹೊರಟರು. ಮನೆ ಕೆಲಸ ಪ್ರಾರಂಭವಾಗುವವರೆಗೂ ನಿಂಗಮ್ಮ ಆ ಮನೆಗೆ ತಾತ್ಕಾಲಿಕ ಯಜಮಾನಿ. 

************

ಮನೆ ನಕಾಶೆ ಸಿದ್ಧವಾಗಿ ಮೂರ್ತಿ -ವಿಜಯರ ಒಪ್ಪಿಗೆ ಸಿಕ್ಕಿದ ಕೂಡಲೇ ಅದಕ್ಕೆ ಬೇಕಾದ ಕಾನೂನಿನ ಅನುಮತಿ ದೊರಕಿಸಿಕೊಂಡು ಸುಬ್ಬಣ್ಣ ಒಂದು ಶುಭದಿನ ತಮ್ಮ ಹಾಗೂ ಮೂರ್ತಿಯ ಸಹೋದರರನ್ನೆಲ್ಲ ಆಹ್ವಾನಿಸಿ ಪೂಜಾ ಕಾರ್ಯಕ್ರಮ ನಡೆಸಿ ಮನೆ ಕೆಲಸ ಪ್ರಾರಂಭಿಸಿದರು. 

ವಾರ ವಾರದ ಪ್ರಗತಿಯ ವರದಿ ಸಿಂಧ್ರಿಗೆ ರವಾನೆಯಾಗುತ್ತಿತ್ತು. ವಿಡಿಯೋ, ಮೊಬೈಲ್ ಹಾವಳಿ ಇಲ್ಲದ ಕಾಲವಾದ್ದರಿಂದ ಅಂಚೆಯ ಮಧ್ಯಸ್ಥಿಕೆಯಿಂದ ಸುದ್ದಿ ಮುಟ್ಟುತ್ತಿತ್ತು. ಎಷ್ಟೇ ವೇಗವಾಗಿ ಕೆಲಸ ಸಾಗುತ್ತಿದೆಯೆಂದಾದರು ಮನೆ ಕಟ್ಟಿನೊಡು ಮದುವೆ ಮಾಡಿನೋಡು ಎನ್ನುವ ಗಾದೆಗನುಸಾರವಾಗಿ ೧೩ ತಿಂಗಳು ಪಡೆದು ಮನೆ ಪೂರ್ಣವಾಗಿ ಸಿದ್ಧವಾಗಿ ಸುಣ್ಣ ಬಣ್ಣಸಾರಣೆ ಕಾರಣೆಗಳಿಂದ ಸಿದ್ಧವಾಯಿತು. ಮತ್ತೊಮ್ಮೆ ಮೂರ್ತಿ-ವಿಜಯ ಊರಿಗೆ ಬಂದು ಮನೆಯ ಮಟ್ಟಿಗೆ ಎನ್ನುವಂತೆ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಮಕ್ಕಳು, ಚಿಕ್ಕಮ್ಮ, ಚಿಕ್ಕಪ್ಪ, ಸೋದರಮಾವ, ಅತ್ತೆಯರನ್ನು ಆಹ್ವಾನಿಸಿ ಪುಟ್ಟದಾಗಿ ಗೃಹಪ್ರವೇಶವನ್ನು ತಕ್ಕಮಟ್ಟಿನ ಅದ್ದೂರಿಯಲ್ಲಿ ಆಚರಿಸಿ ಎಲ್ಲರಿಗೂ ಸೀರೆಗಳು , ಪಂಚೆಗಳು, ಷರ್ಟ್ ಪ್ಯಾಂಟ್ ಪೀಸುಗಳ ಉಡುಗೊರೆ ಕೊಟ್ಟಾಯಿತು.

ಬಂದವರಿಗೆಲ್ಲ ಮನೆಯನ್ನು ನೋಡಿ ಸಂತೋಷವಾದರು ಒಳಗೊಳಗೆ ಅಸೂಯೆಯ ಕಿಡಿಯೂ ಹೊತ್ತಿ ಉರಿಯಿತು. ಯಾರಿಗೆ ಈ ಮನೆಯನ್ನು ಅನುಭವಿಸುವ ಭಾಗ್ಯವಿದೆಯೋ ಅದು ನಮ್ಮ ಮಕ್ಕಳೇ ಯಾಕಾಗಬಾರದು . ಅವರಿಗಂತೂ ಮಕ್ಕಳಿಲ್ಲ ಎಂದು ಮನಸ್ಸಿನಲ್ಲೇ ಮಂಡಿಗೆ ತಿಂದರು. ಅಂತೂ ನೆಂಟರೆಲ್ಲ ಅವರವರ ಮನೆಗೆ ತೆರಳಿದ್ದಾಯಿತು. ಮೂರ್ತಿ-ವಿಜಯ ದಿನಾ ಬಂದು ಹೋಗುವ ಅಣ್ಣ ತಮ್ಮ, ಅಕ್ಕ ತಂಗಿಯರು.

ನಿವೃತ್ತಿ ಪೂರ್ವದ ಪೂರ್ಣ ರಜೆಯನ್ನು ಹಾಕಿ ಬಂದಿದ್ದ ಮೂರ್ತಿ ಒಮ್ಮೆ ಸಿಂಧ್ರಿಗೆ ಹೋಗಿ ಅಲ್ಲಿನ ಕಚೇರಿ ಕಲಾಪಗಳನ್ನೆಲ್ಲ ಮುಗಿಸಿಕೊಟ್ಟು ಹಣದ ಚೆಕ್ ತನಗೆ ಬರಬೇಕಾದ ವಿಳಾಸ ಬ್ಯಾಂಕ್ ಅಕೌಂಟ್ ಎಲ್ಲ ಕೊಟ್ಟು ಬಂದಾಯಿತು.

ಮೂರು ತಿಂಗಳ ನಂತರ ೧೦ ಲಕ್ಷದ ಚೆಕ್ ಅಲ್ಲದೆ ಜೀವವಿಮೆಯ ೫ ಲಕ್ಷ ಇಡುಗಂಟು ಮೂರ್ತಿಯ ಕೈ ಸೇರಿತು. ಇಬ್ಬರ ಜೀವನಕ್ಕೆ ಸರಳ ವ್ಯವಸ್ಥೆಗೆ ಬರುವ ಬಡ್ಡಿ ಹಣ ಸಾಕಾಗುವಷ್ಟಿತ್ತು. ಇಬ್ಬರಿಗೂ ಆರೋಗ್ಯದ ಯಾವುದೇ ಸಮಸ್ಯೆ ಇರಲಿಲ್ಲ. ಹೀಗಾಗಿ ಊಟ ತಿಂಡಿ ಕಾರಿನ ಪೆಟ್ರೋಲ್ ಇಷ್ಟಕ್ಕೆ ಹಣದ ವ್ಯವಸ್ಥೆ ಇದ್ದರೆ ಸಾಕಾಗುತ್ತಿತ್ತು. 

ಎಲ್ಲರ ಕಣ್ಣು ಈಗ ಮೂರ್ತಿಯ ಮೇಲೆ. ತಮ್ಮಂದಿರು ಸ್ವಲ್ಪ ಕಣ್ಣು ಕೆಂಪಗೆ ಮಾಡಿಕೊಂಡರು. ಅಣ್ಣ ತಾನಾಗೆ ಏನೂ ಸಹಾಯ ಮಾಡಲು ಮನಸ್ಸು ಮಾಡಲಿಲ್ಲ. ಜೊತೆಗೆ ಮಾಡುವ ಮುನ್ಸೂಚನೆಯೂ ಇಲ್ಲ. ಒಂದು ದಿನ ಇದ್ದಕ್ಕಿದ್ದಂತೆಯೇ ವಿಜಯನ ಅಕ್ಕ ಬಂದು, 

''ವಿಜು ನಿನ್ನಿಂದ ಒಂದು ಸಹಾಯ ಬೇಕಾಗಿತ್ತು ಕಣೆ. ಅದಕ್ಕೆ ಬಂದೆ.''

''ಏನಕ್ಕ ಅದು ನನ್ನ ಕೈಲಾದರೆ ಖಂಡಿತ ಮಾಡುತ್ತೇನೆ ಹೇಳಕ್ಕ''

''ಅಯ್ಯೋ ವಿಜು ನಿನ್ನ ಕೈಲಿ ಆಗೋ ಅಂತಾದ್ದೇ ಕಣೇ''

''ಹೇಳಕ್ಕ ಸಂಕೋಚ ಏಕೆ?''

''ಏನಿಲ್ಲ ವಿಜು ನನ್ನ ಮಗ ಒಂದು Site ತಗೊಂಡಿದ್ದಾನೆ. ಬರೀ ೩೦ ೪೦ ರದ್ದು. ಅದರಲ್ಲಿ ಮನೆ ಕಟ್ಟುವ ಆಸೆ ಅವನಿಗೆ. ಆಫೀಸಿನಲ್ಲಿ ಸ್ವಲ್ಪ ಸಾಲ ಕೊಡುತ್ತಾರೆ. ಮಿಕ್ಕ ಹಣ ನಿನ್ನಿಂದ ನೆರವು ಬೇಕು ಕಣೆ,  ಹೇಗಿದ್ದರು ನಾಳೆ ನಿಮ್ಮಿಬ್ಬರಿಗೂ ಆಗುವವರು ನಾವು ತಾನೆ ? ಜಾಸ್ತಿ ಬೇಡ ಒಂದೆರಡು ಲಕ್ಷ ಕೊಟ್ಟರೆ ಸಾಕಮ್ಮ. ಅಕ್ಕನ ಮಾತು ಕೇಳಿ ವಿಜಯನ ಎದೆಯಲ್ಲಿ ಮುಳ್ಳು ಮುರಿದಂತಾಯಿತು. 

ಹೌದು ತಮಗೆ ಮಕ್ಕಳಿಲ್ಲ, ಅದನ್ನೇ ಅಕ್ಕ ಹಂಗಿಸಿ ಹೇಳುತ್ತಿದ್ದಾಳೆ ಎನಿಸಿತು. ''ಆಗಲಿ ಅಕ್ಕ ಇವರನ್ನು ಕೇಳಿ ಹೇಳುತ್ತೇನೆ'' ಎಂದು ಮಾತು ಮುಗಿಸಿದಳು. 

ಅದಾದ ಎರಡೇ ದಿನಕ್ಕೆ ತಂಗಿ ಶಾರದಾ ಬಲು ಪ್ರೀತಿಯಿಂದ ಅಕ್ಕನ ಮನೆಗೆ ಬಂದಳು. ಗೃಹಪ್ರವೇಶ ಮುಗಿಸಿ ಹೋದ ಮೇಲೆ ಇತ್ತ ಬಾರದ ತಂಗಿ ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷ.

 ''ಓಹೋ ಏನೇ ಶಾರದಾ ತುಂಬಾ ಅಪರೂಪ. ಎಂದ ಮೂರ್ತಿಯ ಆಹ್ವಾನಕ್ಕೆ, ''ಏನಿಲ್ಲ ಭಾವ ಪುರುಸೊತ್ತೇ ಆಗ್ಲಿಲ್ಲ ಬರಕ್ಕೆ ಎನ್ನುತ್ತಾ ಅಕ್ಕಾ ಎಂದು ಒಳ ನಡೆದಳು. ಅಡುಗೆ ಮನೆಯಲ್ಲಿದ್ದ ವಿಜಯ ಕೈ ಒರೆಸಿಕೊಳ್ಳುತ್ತ ಹೊರಬಂದವಳು ''ಬಾರೇ  ಶಾರದಾ ಅಪರೂಪ ಆಗ್ಬಿಟ್ಟೆಯಲ್ಲ'' ಎಂದಳು. ''ಅದಕ್ಕೆ ಇವತ್ತೇ ಬಂದು ಬಿಟ್ಟೆ ಅಕ್ಕಾ'' ಎನ್ನುತ್ತಾ ಶಾರದಾ ಕುಳಿತಳು. ಕಾಫಿ ಲೋಟಗಳನ್ನು ಹಿಡಿದು ಬಂದ ವಿಜಯ ಮೂರ್ತಿಗೂ ಶಾರದನಿಗೂ ಒಂದೊಂದು ಲೋಟ ಕೊಟ್ಟು ತಾನು ಒಂದು ಲೋಟ ಹಿಡಿದು ಕುಳಿತಳು. ಮೂರ್ತಿ ಕಾಫಿ ಕುಡಿದು ಲೋಟ ಇಟ್ಟು ಹೊರ ನಡೆದ ಮೇಲೆ ಶಾರದ ತಾನು ಬಂದ ವಿಷಯಕ್ಕೆ ಪೀಠಿಕೆ ಹಾಕುತ್ತ, ''ಅಕ್ಕ ನಮ್ಮ ನಾಗೂಗೆ ಮದುವೆ ವಯಸ್ಸು ಬಂದಿದೆ. ವರ ನೋಡೋಣ ಅಂತ ಇದೀವಿ ಕಣೆ'' ಎಂದಾಗ ವಿಜಯ ಸಂತೋಷದಿಂದ ''ನಾಗು ಆಗ್ಲೇ ದೊಡ್ಡವಳಾಗಿ ಬಿಟ್ಟಳೆ, ಸಂತೋಷಾಮ್ಮ'' ಎಂದಳು.  ''ಅಕ್ಕ ಈಗ ನಿನ್ನ  ಸಹಾಯ ಬೇಕಕ್ಕ. ನಾಗೂಗೆ ಏನು ಚಿನ್ನ ಮಾಡಿಸಿಲ್ಲ. ಒಂದೈದು ತೊಲಚಿನ್ನ ಹಾಕಿ  ಮದುವೆ ಮಾಡಬೇಕು. ಏನಿಲ್ಲ ಅಂದರೂ ಎಲ್ಲ ಮೂರು ಲಕ್ಷ ಖರ್ಚಿನ ಬಾಬತ್ತು ಕಣೆ. ನೀನು ಭಾವ ಮನಸ್ಸು ಮಾಡಿ ಕನ್ಯಾಸೆರೆ ಬಿಡಿಸಿಕೊಡ ಬೇಕಮ್ಮ'' ಎಂದಳು. ''ನಾನೇನು ಮಾಡಕ್ಕಾಗತ್ಯೆ ಶಾರದ ? ಎಂದಾಗ ಭಾವನಿಗೆ ಹೇಳಿ ಒಂದು ಮೂರು ಲಕ್ಷ ರೂ. ಕೊಟ್ಟರೆ ಈ ಜನ್ಮದಲ್ಲಿ ನಿಮ್ಮ ಸಹಾಯ ಮರಿಯೋದಿಲ್ಲಮ್ಮಾ''ಎಂದಾಗ ವಿಜಯನಿಗೆ ಆಘಾತ. ಜೊತೆಗೆ ಶಾರದ ಹೇಳಿದ ಇನ್ನೊಂದು ಮಾತು ವಿಜಯನನ್ನು ಚುಚ್ಚಿ ನೋಯಿಸಿತು. ''ಅಕ್ಕ ನಿನಗಂತು ಕನ್ಯಾದಾನ ಮಾಡೋ ಪುಣ್ಯ ಇಲ್ಲ. ನಾಗೂನೆ ನಿನ್ನ ಮಗಳು ಅಂತ ತಿಳಿದು ಮದ್ವೆ ನಡೆಸಿಕೊಡಬೇಕಕ್ಕ '' ಎಂದಿದ್ದಳು. 

ಶಾರದ ಮನೆಗೆ ಹೋಗಿ ಎಷ್ಟೋ ಹೊತ್ತಾಗಿದ್ದರು ವಿಜಯಳಿಗೆ ತನ್ನ ಅಕ್ಕ-ತಂಗಿ ಇಬ್ಬರೂ ಆಡಿದ ಮಾತು ಮನಸ್ಸಿನ ಚಿಂತೆ ಹೆಚ್ಚಿಸಿತು. ಮೂರ್ತಿಗೆ ಈ ವಿಷಯ ಹೇಳಿ ಕಣ್ಣೀರಿಟ್ಟಳು. 

ಭಾಗ -  6 ರಲ್ಲಿ ಮುಂದುವರೆಯುವುದು............


Comments

Post a Comment