ಛಲವೇ ಬಲ

ಛಲವೇ ಬಲ

ಲೇಖಕರು : ಎಂ ಆರ್ ವೆಂಕಟರಾಮಯ್ಯ


ಲೇಖಕರ  ಕಿರು ಪರಿಚಯ:

 ಶ್ರೀಯುತ ಎಂ ಆರ್ ವೆಂಕಟರಾಮಯ್ಯ ಒಬ್ಬ ಹವ್ಯಾಸಿ ಲೇಖಕರು.  ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ ಕಳಕಳಿಯಿರುವ (ಉದಾಹರಣೆಗೆ, ಹಿಂದುಗಳು ಆಚರಿಸುವ ಮುಖ್ಯ ಹಬ್ಬಗಳು, ವ್ರತಗಳು, ಜಯಂತಿಗಳು, ಪ್ರಸಿದ್ಧ ಪುರಾಣ ಪುರುಷರ ಬಲ, ದೌರ್ಭಲ್ಯಗಳು, ಅಧ್ಯಾತ್ಮ ವಿಷಯಗಳಾದ ಸತ್ಯ, ಧರ್ಮ, ಅಹಿಂಸೆ, ಅತಿಥಿ ಸತ್ಕಾರ, ಗುರು ಭಕ್ತಿ, ಗುರು ಮಹಿಮೆ, ಸ್ಥಿತ ಪ್ರಜ್ಞೆ, ತತ್ವಮಸಿ, ಆತ್ಮವಿಶ್ವಾಸ ಭಾಷಾಭಿಮಾನ, ಸಂದರ್ಭೋಚಿತ ನಡೆ ನುಡಿಗಳು ಹೇಗಿರಬೇಕು,  ಮಾನವೀಯತೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಸಮಯ ಪಾಲನೆ, ವಚನ ಪಾಲನೆ, ಆದರ್ಶ ಪುರುಷರು ಇತ್ಯಾದಿ) ವಿಷಯಗಳ ಕುರಿತು  ಇವರು ಬರೆದ ಸುಮಾರು 570 ಲಲಿತ ಪ್ರಬಂಧ : ಲೇಖನಗಳು ಬೆಂಗಳೂರಿನಿಂದ  ಪ್ರಕಟವಾಗುತ್ತಿರುವ  ಶ್ರೀ ಶಂಕರ ಕೃಪಾ, ಧರ್ಮ ಪ್ರಭಾ, ಧಾರ್ಮಿಕವಾಣಿ, ವಿಪ್ರನುಡಿ, ವಿಜಯನಾರಸಿಂಹ, ಕರ್ನಾಟಕ ಸ್ಟೇಟ್ ಪೆನ್ಷನರ್, ಹರಿಹರ ಪುರದ ಸ್ವಯಂ ಪ್ರಕಾಶ, ವರಪುರದ ಶ್ರೀಧರ ಸಂದೇಶ, ಸಿರಸಿಯ ಶ್ರೀಧರ ಪ್ರಭಾ, ಸ್ವರ್ಣವಲ್ಲಿ ಪ್ರಭಾ,  ಹಾಸನದ ವಿಪ್ರವಾಹಿನಿ, ಹೊಳೆನರಸಿ ಪುರದ ಅಧ್ಯಾತ್ಮ ಪ್ರಕಾಶ, ಉಜಿರೆಯ ಮಂಜುವಾಣಿ, ಮೊದಲಾದ  ನಾಡಿನ ಸುಪ್ರಸಿದ್ಧ ಕನ್ನಡ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.    

            

ಛಲವೇ ಬಲ........                     

                           ‘ಛಲ’ ಎಂಬ ಶಬ್ಧಕ್ಕೆ ಸ್ಥಿರ, ದೃಢ ಸಂಕಲ್ಪ, ಮನೋ ನಿಶ್ಚಯ, ಹಟ, ಬಿಗಿಪಟ್ಟು, ಕೈ ಹಿಡಿದ ಕೆಲಸ ಸಾಧಿಸದೆ ಬಿಡದ ಪಟ್ಟು, ಇತ್ಯಾದಿ ವಿವಿಧಾರ್ಥಗಳಿವೆ. ವ್ಯಕ್ತಿ ಓದು, ಬರಹ, ಕೆಲಸ, ಗೃಹ ನಿರ್ಮಾಣ, ಶುಭ ಕಾರ್ಯ, ಯಾವುದೇ ವಿಷಯವಾಗಲಿ, ಅದನ್ನು ಮಾಡಲೇಬೇಕು ಎಂಬ ದೃಢ ನಿರ್ಧಾರ ಮಾಡಿದ ಮೇಲೆ, ಆ ಮಾರ್ಗದಲ್ಲಿ ಎಂತಹಾ ಅಡೆ ತಡೆಗಳು ಬಂದರೂ ಜಗ್ಗದೆ, ಹಿಡಿದ ಕೆಲಸವನ್ನು ಬಿಡದೆ ಸಾಧಿಸುವವನು ‘ಛಲಗಾರ, ಛಲವಂತ’ ಎನಿಸಿಕೊಳ್ಳುತ್ತಾನೆ. ಆದರೆ, ಈ ಛಲ, ಕೆಟ್ಟ ಕಾರ್ಯಗಳ, ದುಶ್ಚಟಗಳ, ಸಮಾಜ, ದೇಶ ದ್ರೋಹ ಕಾರ್ಯಗಳಿಗಾಗಿ ಬಳಸಬಾರದೆಂಬ ಕಟ್ಟೆಚ್ಚರಿಕೆ ನಮಗಿರಬೇಕು. ಕೈ ಹಾಕಿದ ಕೆಲಸವನ್ನು ಅಗತ್ಯ ಪ್ರಮಾಣದಷ್ಟು ಶ್ರದ್ದಾಸಕ್ತಿ ನಿಷ್ಠೆಗಳಿಂದ ಮಾಡಿದರೆ ಅದಕ್ಕೆ ಸತ್ಫಲ ದೊರೆಯಲು ಸಾಧ್ಯ. ಮನೋಸ್ಥೈರ್ಯವಿದ್ದರೆ, ಯಾವ ಕೆಲಸವೂ ಅಸಾಧ್ಯವಲ್ಲ. ಆದ್ದರಿಂದಲೇ, “ಛಲವೇ ಬಲ, ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು” ಎಂದಿದ್ದಾರೆ ನಮ್ಮ ಹಿರಿಯರು, ಅನುಭವಿಗಳು. ಈ ಎಲ್ಲಾ ಮಾತುಗಳನ್ನೂ ನಂಬಲಾಗದು ಎಂಬ ಸಂಶಯವೇ, ! ಹಾಗಿದ್ದರೆ ಇಲ್ಲಿದೆ ಕೆಲವು ಜೀವಂತ ಉದಾಹರಣೆಗಳು : 

ಸ್ಪೇನ್ ದೇಶದ ಯುವಕ, ಜೂಲಿಯೋ ಇಗ್ನೆಶಿಯಸ್, ಸಣ್ಣ ವಯಸ್ಸಿನಿಂದಲೂ ಫುಟ್‌ಬಾಲ್ ಆಟಗಾರನಾಗುವ ಸವಿ ಕನಸು ಕಂಡು, ದಿನದ ಹೆಚ್ಚು ಕಾಲವನ್ನು ಈ ಕ್ರೀಡೆ ಕಲಿಯಲು ವಿನಿಯೋಗಿಸುತ್ತಿದ್ದ. ತನ್ನ ವೈಯಕ್ತಿಕ ಯಶಸ್ಸನ್ನು ಗಳಿಸುವುದರ ಜೊತೆಗೆ, ತನ್ನ ಮಾತೃಭೂಮಿಗೂ ಹೆಸರು ಗಳಿಸಿಕೊಡಬೇಕೆಂಬ ಹಿರಿಯಾಸೆಯಿಂದ ರಿಯಲ್ ಮಡ್ರಿಡ್ ಕ್ಲಬ್‌ಗೆ ಸೇರಿದ. ಮುಂದಿನ ಅವಧಿಯಲ್ಲಿ, ಉತ್ತಮ ಗೋಲ್ ಕೀಪರ್ ಎಂಬ ಖ್ಯಾತಿ ಗಳಿಸಿದ. ಆದರೆ ದುರಾದೃಷ್ಟ ಅವನ ಬೆನ್ನಟ್ಟಿತ್ತು. ಅದೊಂದು ದಿನ ತನ್ನ ಮಿತ್ರರ ಜೊತೆಯಲ್ಲಿ ಕಾರಿನಲ್ಲಿ ಪಯಣಿಸುತ್ತಿದ್ದಾಗ ಭೀಕರ ಅಪಘಾತಕ್ಕೆ ಗುರಿಯಾಗಿ, ಸೊಂಟದ ಕೆಳಗಿನ ಪೂರ್ಣ ಭಾಗ ಚಲನಾಶಕ್ತಿಯನ್ನು ಕಳೆದುಕೊಂಡನು. ಪರಿಣಾಮವಾಗಿ, ತನ್ನ ನೆಚ್ಚಿನ ಕ್ರೀಡೆಯಾದ ಫುಟ್‌ಬಾಲ್‌ನಿಂದ ದೂರಾಗಬೇಕಾಯಿತು. ದೇವರು ದಯಾಮಯ. ಯಾರನ್ನೂ ಶಿಕ್ಷಿಸುವುದು ಆತನ ಉದ್ದೇಶವಲ್ಲ. ಒಂದು ಅನುಕೂಲದ ಮಾರ್ಗ ಮುಚ್ಚಿದರೆ, ಮತ್ತೊಂದು ರೀತಿಯ ಅನುಕೂಲದ ಬಾಗಿಲನ್ನು ತೆರೆದಿಡುತ್ತಾನೆ ಎಂಬುದು ಅನುಭವಿಗಳ ಮಾತಾಗಿದೆ. ಹೀಗೇನೇ ಆಯಿತು ಇಗ್ನೇಶಿಯಸ್‌ಗೂ. ತನಗಾದ ತೊಂದರೆಯಿಂದ ಮನನೊಂದ ಇವನು ತಾನೇನೂ ಮಾಡಲಾರದವ, ದೇವರು ತನಗೆ ಅನ್ಯಾಯ ಮಾಡಿದ ಎಂದು ಸೃಷ್ಟಿಕರ್ತನನ್ನು ನಿಂದಿಸಿ ಸುಮ್ಮನೆ ಕೂಡಲಿಲ್ಲ. ಬದಲಿಗೆ, ತಾನೇನ್ನಾದರೂ ಮಾಡಿ ಜೀವನದಲ್ಲಿ ಮೇಲೇರಬೇಕು ಎಂಬ ಛಲ ವಹಿಸಿ, ತನಗೆ ತೋಚಿದಂತೆ ಹಾಡುಗಳನ್ನು ಬರೆದು, ಹಾಡತೊಡಗಿದ. 

ಮುಂದಿನ ದಿನಗಳಲ್ಲಿ, ಇವನ ಇಂಪಾದ ದ್ವನಿಯಿಂದ ಹೊರಬಿದ್ದ ಗೀತೆಗಳಿಂದ ಪ್ರಭಾವಿತಳಾದ ದಾದಿಯೊಬ್ಬಳು ಇವನಿಗೆ ಗಿಟಾರ್ ಕೊಡಿಸಿದಳು. ಹಿಂದೆಂದೂ ಕಲಿತಿರದ ಈ ವಾದ್ಯವನ್ನು ಇವನು ತನಗೆ ತೋಚಿದಂತೆ ನುಡಿಸಿಕೊಂಡು ಹಾಡಲು ಶುರು ಮಾಡಿದನು. ‘ಉಗುಳ್ತಾ ಉಗುಳ್ತಾ ರೋಗ, ಬೊಗಳ್ತಾ ಬೊಗಳ್ತಾ ರಾಗ ‘ ಎಂಬ ಹಳೆಯ ಗಾದೆಯಂತೆ, ಕಾಲಕ್ರಮಣ, ಇಗ್ನೇಶಿಯಸ್, ಹಾಡುಗಾರಿಕೆ, ಗಿಟಾರ್ ನುಡಿಸುವುದರಲ್ಲಿ ಪರಿಣತಿ ಹೊಂದಿದ. ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನೂ ಗಳಿಸಿದ. ಈ ಗೆಲುವು ಇವನ ಆತ್ಮವಿಶ್ವಾಸ, ಜನ ಪ್ರಿಯತೆ ಹೆಚ್ಚಿಸಿತು. ‘ಜೀವನ ಹೀಗೇ ಸಾಗುತ್ತಿದೆ ‘ ಎಂಬ ಹೆಸರಿನ ಆಲ್ಬಂ ಸಿದ್ಧಪಡಿಸಿದ. ಇದರ 300 ಮಿಲಿಯನ್ ಪ್ರತಿಗಳು ಮಾರಾಟವಾದುವು. ವಿಶ್ವದ ಹತ್ತು ಪ್ರಖ್ಯಾತ ಗಾಯಕರಲ್ಲಿ ಇಗ್ನೇಶಿಯಸ್ ಒಬ್ಬನಾದ. ಅಸಂಖ್ಯಾತ ಸಂಗೀತ ಪ್ರಿಯರ ಮನ ಸೂರೆಗೊಂಡ ಇವನು, ತನಗಾದ ಸೋಲನ್ನೇ ಗೆಲುವನ್ನಾಗಿ ಪರಿವರ್ತಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡ. ‘ಛಲವೇ ಬಲ, ಛಲವಿದ್ದರೆ ಏನನ್ನಾದರೂ ಸಾಧಿಸಬಹುದು’ ಎಂಬುದನ್ನು ವಿಶ್ವಕ್ಕೇ ಪ್ರದರ್ಶಿಸಿದ. 



      ಏರ್‌ಫರ‍್ಸ್ನಲ್ಲಿ ಒನ್ ಮ್ಯಾನ್ ಆರ್ಮಿಯಂತೆ ಕೆಲಸ ಮಾಡುತ್ತಿದ್ದ ರಾಬರ್ಟ್ ಸ್ಟುವರ್ಡ್ ಬೆಂಡರ್, ಯುದ್ಧದ ಸಮಯದಲ್ಲಿ ವಿಮಾನವನ್ನು ಕೆಳ ಮಟ್ಟದಲ್ಲಿ ಹಾರಿಸುವ ಪ್ರಯತ್ನದಲ್ಲಿ, ತನ್ನ ಎರಡು ಕಾಲುಗಳನ್ನೂ ಕಳೆದುಕೊಂಡು ಅಂಗವಿಕಲನಾದ. ಪರಿಣಾಮವಾಗಿ ಆರ್ಮಿಯಿಂದ ನಿವೃತ್ತನಾದ. ನಂತರದ ಕಾಲದಲ್ಲೇ ಎರಡನೆಯ ಮಹಾ ಯುದ್ಧ ಪ್ರಾರಂಭವಾದ ಕಾರಣ, ಸಮರ್ಥರಾದ ಸೇನಾನಿಗಳ ಕೊರತೆ ಕಾಣಿಸಿತು. ಆಗ ವಿಮಾನ ಚಾಲಕನಾಗಿ ಯುದ್ಧದಲ್ಲಿ ಇಂಗೆಂಡಿಗೆ ನೆರವಾದ. ಆದರೆ, ಜರ್ಮನಿಯ ಸೇನೆಗೆ ಸೆರೆ ಸಿಕ್ಕ ಈತ, ಅಲ್ಲಿಂದ ಪಾರಾಗಿ ಸ್ವತಂತ್ರನಾಗಲು ಮಾಡಿದ ಪ್ರತಿ ಪ್ರಯತ್ನದಲ್ಲೂ ವಿಫಲನಾಗಿ ಶಿಕ್ಷೆಗೆ ಗುರಿಯಾದ. ತನ್ನ ಸೋಲಿನಿಂದ ನಿರಾಶನಾಗಿ ಇತರ ಖೈದಿಗಳಂತೆ ಸುಮ್ಮನಿರದೆ, ‘ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು’ ಎಂಬಂತೆ, ಜೈಲಿನಿಂದ ಹೊರಬರಲು ಸತತ ಪ್ರಯತ್ನಗಳನ್ನು  ಮುಂದುವರಿಸಿದ್ದ, ಇವನ ಛಲ, ಸಾಹಸ, ಸ್ವಾತಂತ್ರ ಪ್ರಿಯತೆಗೆ ಮೆಚ್ಚಿದ ಜರ್ಮನ್ ಸೇನಾಧಿಕಾರಿಗಳು ಇವನಿಗೆ ಹೊಸ ಮರದ ಕಾಲುಗಳನ್ನು ಬಳುವಳಿಯನ್ನಾಗಿ ನೀಡಿ, ಸೆರೆಮನೆಯಿಂದ ಬಿಡುಗಡೆ ಮಾಡಿದರು. ಈ ಪ್ರಸಂಗವೂ, “ಬೆಳಕು, ಯಶಸ್ಸು ಕಂಡೇ ಕಾಣುತ್ತೇನೆ ಎಂಬ ಆಸೆ ತುಂಬಿಕೊಂಡು ಛಲ ವಹಿಸಿ ಕಾರ್ಯೋನುಖ್ಮರಾಗುವವರು ತಮ್ಮ ಗುರಿ ಸಾಧಿಸಿ, ಯಶಸ್ಸು ಕಾಣಲು ಸಾಧ್ಯ” ಎಂಬ ಸರ್ವಕಾಲಿಕ ಸತ್ಯವನ್ನು ಸಾರಿದೆ.                             
















ಲೇಖಕರು : ಎಂ ಆರ್ ವೆಂಕಟರಾಮಯ್ಯ

Comments

Post a Comment