ಅಮೃತಾಪುರ

 ಅಮೃತಾಪುರ: ಶಿಲ್ಪಕಲೆಯ ಸೊಬಗು ಬೆಡಗಿನ ಸೌಂದರ್ಯ!

 ಲೇಖನ - ಡಾ. ಮಂಜುಳಾ ಹುಲ್ಲಹಳ್ಳಿ.

       ಅಮೃತಾಪುರ, ಮತ್ತೇ ಮತ್ತೇ ಚಪ್ಪರಿಸಿ ಸವಿಯಬೇಕೆನಿಸುವ ಉಮೇದು ಬಿತ್ತುವ ಅಪರೂಪದ ಊರು. ಹೆಸರಲ್ಲೇನಿದೆ? ಎಂದು ಕೇಳುವವರ ಮಾತಿಗೆ ಹೆಸರಿನಲ್ಲಿ ಅಮೃತವೇ ಇದೆ. ಹೆಸರಲ್ಲಿ ಮಾತ್ರವಲ್ಲ, ಪುರದ ಮೈಮನದೊಳಗಿರುವುದೆಲ್ಲವೂ ಅಮೃತದ ರಸಧಾರೆಯೇ ಎಂದು ಥಟ್ಟನೇ ಉತ್ತರಿಸಬಹುದು. ಊರು ಪುಟ್ಟದು, ಆದರೆ ಉಸಿರೊಳಗಿನ ಸಹೃದಯ ಹೂರಣ ಸವಿದಷ್ಟೂ ಮುಗಿಯದು!



       ಚಿಕ್ಕಮಗಳೂರು ಮಲೆನಾಡಿನ ನಲಿವು – ನೋವುಗಳ ಜೊತೆಗೆ ಬಯಲು ನಾಡಿನ ಹಾಡು-ಪಾಡುಗಳನ್ನೂ ಹಾಸು ಹೊಕ್ಕಾಗಿಸಿಕೊಂಡಿದೆ. ಚಿಕ್ಕಮಗಳೂರಿನಿಂದ ಪಶ್ಚಿಮದೆಡೆಗೆ ಘಟ್ಟಶ್ರೇಣಿಗಳ ಕುಳಿರ್ಗಾಳಿ ಕೈಬೀಸಿ ಕರೆದರೆ ಪೂರ್ವದ ಕಡೆಗೆ ಬಯಲುಸೀಮೆಯ ಸುಸಂಸ್ಕೃತಿ ಬೆಚ್ಚನೆಯ ಭಾವ ತುಂಬುತ್ತದೆ. ಈ ಬಟ್ಟ ಬಯಲು ಪ್ರದೇಶದಲ್ಲಿ ಇಂದು ಹಾಯಾಗಿ ಒರಗಿದಂತಿರುವ ಪುಟ್ಟ ಊರು, ಅಮೃತಾಪುರ. 

        ತರೀಕೆರೆ ತಾಲ್ಲೂಕಿಗೆ ಸೇರುವ ಈ ವಿಶೇಷವಾದ ಊರು ಚಿಕ್ಕಮಗಳೂರಿನಿಂದ ಸುಮಾರು ಎಪ್ಪತ್ತು ಕಿ.ಮಿ, ತರೀಕೆರೆ ಇಂದ ಹತ್ತು ಕಿ.ಮಿ, ಬೀರೂರು - ತರೀಕೆರೆ ಹೆದ್ದಾರಿಯ ಅಜ್ಜಂಪುರದ ಮುಖ್ಯ ರಸ್ತೆಯ ತಿರುವಿನಿಂದ ಐದು ಕಿ.ಮಿ. ದೂರದಲ್ಲಿದೆ.

         ಕಿರಿದಾದ, ಗ್ರಾಮ ಪರಿಸರದ ಒಳ ಹೊರಗುಗಳನ್ನು ಕುಲುಕುಲುಕಿ ತಿಳಿಸುವ ಹಾದಿ ನಿಧಾನವಾಗಿ ಸಾಗು ಸಾಗುತ್ತಾ, ಹೆಬ್ಬಳ್ಳವೊಂದನ್ನು ದಾಟಿಸುತ್ತಿದ್ದಂತೆ ರೋಮಾಂಚನದ ಉದ್ಗಾರವೊಂದನ್ನು ಥಟ್ಟನೇ ಹೊರಡಿಸುತ್ತದೆ. ಕಾರಣ, ಸುದೂರದಿಂದಲೇ ದೃಷ್ಟಿಗೋಚರವಾಗಿ ಮನೋಮಂದಿರದಲ್ಲಿ ದಾಖಲಾಗುವ ಅದ್ಭುತ ಗುಡಿ, ಅಮೃತೇಶ್ವರ ದೇಗುಲದ ಹಕ್ಕಿನೋಟ. ದೇವಾಲಯವನ್ನು ಸಮೀಪಿಸುತ್ತಿದ್ದಂತೆ ಸುಡುಗಾಳಿ, ಬಿಸಿಲ ಝಳಗಳನೊಂದನ್ನೂ ಲೆಕ್ಕಿಸದೇ ಒಳಧಾವಿಸಿ ಶಿಲ್ಪಕಲಾ ವೈಭವವನ್ನು ಮನದುಂಬಿಸಿಕೊಳ್ಳಬೇಕೆಂಬ ತುಡಿತ ಮೈಮನಗಳಲ್ಲಿ ಉಕ್ಕಿ ಹರಿಯುತ್ತದೆ.

          ಮುಖ್ಯ ಪ್ರವೇಶದಿಂದ ಕವಲು ಮಾರ್ಗದಲ್ಲಿ ಸಾಗುವಾಗಲೇ ಎಡಭಾಗದ ಪ್ರಾಕಾರದ ಜೋಡಣೆಯ ನವೀನ ಕುಶಲತೆ ವ್ಯಕ್ತವಾಗುತ್ತದೆ. ಹಾಗೆಯೇ ಬಲಭಾಗದ ವಿಶಾಲ ಹುಲ್ಲುಹಾಸು ಮುಗುಳುನಗೆ ಬೀರಿ ಸ್ವಾಗತ್ತಿಸುತ್ತದೆ. ಈ ಪ್ರಾಕಾರ ದಾಟಿ ದೇಗುಲದ ನೇರ ಎದುರುಭಾಗಕ್ಕೆ ಬಂದಾಗ ಸಿಗುವ ದೇಗುಲದ ಒಟ್ಟು ನೋಟ, ಆಹಾ! ಹೊಯ್ಸಳ ಭಾವಪ್ರಪಂಚದ ಅದ್ಭುತ ಕಲಾ ಲೋಕವನ್ನೇ ಕಣ್ಣಿದುರು ತಂದಿಟ್ಟಂತೆ ಭಾಸವಾಗುತ್ತದೆ!


  ಪೂರ್ವಭಿಮುಖವಾಗಿ ಪ್ರತಿಷ್ಠಾಪಿತವಾಗಿರುವ ಹೊಯ್ಸಳ ಶೈಲಿಯ ದೇಗುಲಲೋಕದ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಬಂದರೆ, ವಿಶಾಲವಾದ ಮಹಾಮಂಟಪ, ಮುಖಮಂಟಪ, ನವರಂಗ, ಅಂತರಾಳದ ಮೂಲಕ ಗರ್ಭಗುಡಿಯನ್ನು ಕಾಣಬಹುದು.

    ಇಲ್ಲಿನ ಅಧಿದೇವತೆ, ಅಮೃತೇಶ್ವರ, ಸಾಲಿಗ್ರಾಮ ಶಿಲೆಯದು, ನೇಪಾಳದ ಗಂಡಕಿ ನದಿ ತೀರದಿಂದ ತಂದಿರುವುದು ಎಂಬ ನಂಬಿಕೆ ಇದೆ. ಸುಮಾರು ಎರಡು ಅಡಿ ಎತ್ತರವಿರುವ ಅಮೃತೇಶ್ವರ ದಿವ್ಯಲಿಂಗ ಸ್ವರೂಪಕ್ಕೆ ಸಂಕ್ರಾಂತಿಯ ದಿನದಂದು ಪ್ರಾತಃ ಸೂರ್ಯರಶ್ಮಿಗಳಿಂದ ಕಿರಣಾಭಿಷೇಕ ಸಲ್ಲುತ್ತದೆಂಬುದು ನಮ್ಮ ಶಿಲ್ಪಿಗಳ ವಿಸ್ಮಯದ ದರ್ಶನದ ಕಾಣ್ಕೆಯಾಗಿದೆ.

 ನವರಂಗದಲ್ಲಿರುವ ಗಣೇಶ, ಶಿವ, ಷಣ್ಮುಖ, ಬ್ರಹ್ಮ,  ವೇಣುಗೋಪಾಲ, ಅಪೂರ್ವ ನಾಗದಂಪತಿ ಮುಂತಾದ ಹೊಯ್ಸಳ ಶೈಲಿಯ ವಿಗ್ರಹಗಳು ತುಂಬಾ ಆಕರ್ಷಕ, ಮನಮೋಹಕ. ಮುಖಮಂಟಪದ ಬಾಗಿಲ ಬಳಿ ಅಲಂಕೃತ ವಿಶೇಷ ಸೊಬಗು ತುಂಬಿದ ನಂದಿ ವಿಗ್ರಹ ಶಿವನೆಡೆಗೆ ಮುಖ ಮಾಡಿದೆ. ಈ ಮುಖಮಂಟಪದ ಸೌಂದರ್ಯವೇ ಅದ್ವಿತೀಯ! 52ಸ್ತಂಭ ಕಂಬಗಳು. ಒಂದರಂತೆ ಇನ್ನೊಂದಿಲ್ಲ! ಅನುಪಮ ನುಣುಪು, ಅಸಾಧಾರಣ ಹೊಳಪು, ಶಿಲ್ಪ ಕಲಾ ಕುಸುರಿಯ ಬಿಸುಪು! 30 ಕ್ಕೂ ಹೆಚ್ಚು ಅಂಕಣಗಳು, ಪ್ರತಿ ಅಂಕಣದಲ್ಲು ವಿಶೇಷ ಕೆತ್ತನೆಯ ಭುವನೇಶ್ವರಿ. ಈ ಭುವನೇಶ್ವರಿಯ ಕೆತ್ತನೆಗಳಲ್ಲೂ ಅದೆಷ್ಟೊದು ವೈವಿಧ್ಯ!  ಹಂಸ, ಲತಾ ಬಂಧ, ನಾಗಬಂಧ, ವಿವಿಧ ದೇವತಾ ವೃಂದಾ ಓಹೋ! ಅಪೂರ್ವ. ಅದರಲ್ಲೂ ಗರ್ಭಗುಡಿಯ ಮುಂದಿರುವ ಸುಮಾರು 3 ಅಡಿ ಆಳಕ್ಕೆ ಕೊರೆದಿರುವ ಭುವನೇಶ್ವರಿಯ ಅಂಗೈ ಅಗಲದಷ್ಟು ಜಾಗದಲ್ಲಿ ಶಿಲ್ಪಿಸಿರುವ ನಟರಾಜನ ನೃತ್ಯವೈಭವ! ಅಧ್ಬುತದಲ್ಲಿ ಅದ್ಭುತ!

    ಮುಖಮಂಟಪಕ್ಕೆ 3 ದ್ವಾರಗಳಿವೆ. ಪೂರ್ವ ಭಾಗದ್ದು ಶಿವದ್ವಾರ, ಉತ್ತರ ಭಾಗದಲ್ಲಿ ಬ್ರಹ್ಮ ದ್ವಾರ, ದಕ್ಷಿಣ ಭಾಗದಲ್ಲಿ ವಿಷ್ಣು ದ್ವಾರ. ಸುತ್ತ ಜಗಲಿ ಕಟ್ಟೆ. ದೇಗುಲ ನೋಡಿದ ಆಯಾಸದಿಂದ ವಿಶ್ರಾಂತಿಗಾಗಿ ಕೂತರೆ ಹಾಯ್ ಎನ್ನುವಷ್ಟು ತಂಪು. ಮನದ ಒಳಹೊರಗೆಲ್ಲಾ ನೆಮ್ಮದಿಯ  ಉಸಿರು. ಅಬ್ಬಾ! ಅದ್ಬುತ ದೇವಾಲಯವೇ!!! 

       ಮೈಸೂರು ಒಡೆಯ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗಾಗಿ ಅಮೃತೇಶ್ವರ ದೇವ ಸಾನಿಧ್ಯದಲ್ಲಿ ಹಚ್ಚಿಟ್ಟ ನಂದಾ ದೀಪವನ್ನು ಇಂದಿನವರೆಗೂ ಆರದಂತೆ  ಕಾಪಿಟ್ಟುಕೊಂಡು ಬರುತ್ತಿದ್ದಾರೆ ಗುಡಿಯ ಅರ್ಚಕ ವೃಂದದವರು. ಇವರ ಶೃದ್ದಾ ಭಕ್ತಿಗಳಿಗೆ ಮನ:ಪೂರ್ವಕ ವಂದಿಸಿ, ಅಮೃತೇಶ್ವರನ ದಿವ್ಯ ಸಾನಿಧ್ಯಕ್ಕೆ ಶಿರ ಸಾಷ್ಟಾಂಗ ನಮಿಸಿ ಪ್ರದಕ್ಷಿಣೆ ಹಾಕಲು ಹೊರಟರೆ ಮತ್ತೊಂದು ಭವ್ಯಲೋಕ ಅನಾವರಣ ಆಗುತ್ತದೆ.

    ಹೊಯ್ಸಳ ಏಕಕೂಟಾಚಲ ಮಾದರಿಯ ಈ ಅದ್ಭುತ ದೇಗುಲದ ಹೊರಭಿತ್ತಿಗಳಲ್ಲಿರುವ ಅಪೂರ್ವ ಶಿಲ್ಪ ಚಾತುರ್ಯವನ್ನು ಸವಿಸವಿದೇ ಆನಂದಿಸಬೇಕು. ದೇವಾಲಯಕ್ಕೆ ಇತರೆ ಹೊಯ್ಸಳ ದೇಗುಲದಂತೆ ಎತ್ತರವಾದ ಜಗತಿ ಇಲ್ಲ. ಹಾಗೆಯೇ ನಕ್ಷತ್ರಾಕಾರದ ತಳ ವಿನ್ಯಾಸವೂ ಇಲ್ಲ. ಆದರೆ ಅನುಷ್ಠಾನದ ಮೊದಲ ಸಾಲಿನಲ್ಲಿ ಮುಖ್ಯ ಗೋಪುರದ ಶಿಖರದ ಶೈಲಿಯ ಸೂಕ್ಷ್ಮ ಕೆತ್ತನೆಯ ಕಿರು ಗೋಪುರಗಳ ಅಲಂಕಾರ ಗುಡಿಗೆ ಅಪೂರ್ವ ಸೊಬಗು ನೀಡಿದೆ. ಸುಮಾರು 250 ಗೋಪುರಗಳಿವೆ. 2 ಗೋಪುರಗಳ ನಡುವೆ ಸಿಂಹ,  ಆನೆ, ನವಿಲು, ಕೋತಿ, ಹಂಸ, ಮಿಥುನ ಶಿಲ್ಪ ಮುಂತಾದ ಕುಸುರಿ ವೈವಿದ್ಯಗಳು ಚಿತ್ತಾಕರ್ಷಕವಾಗಿವೆ!  


   ಈ ಗೋಪುರಗಳ ಮೇಲ್ಭಾಗದಲ್ಲಿ ಹೊಯ್ಸಳ ಶೈಲಿಯ ರಾಮಾಯಣ, ಮಹಾಭಾರತ, ಭಾಗವತ ಕಥೆಗಳ ಅತ್ಯಪೂರ್ವ ಶಿಲ್ಪ ಕಾವ್ಯಗಳು ಚಲನಚಿತ್ರಕ್ಕಿಂತಲೂ ಅಪೂರ್ವ ದೃಶ್ಯ ಭಾವವಾಗಿ ಸುವ್ಯಕ್ತವಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಸುಮಾರು ಒಂದು ಅಡಿ ಅಗಲ ಉದ್ದದ ಒಂದೊಂದು ಪಟ್ಟಿಕೆಯಲ್ಲೂ ಚಿತ್ರಿಸಿರುವ ಸುಸಂಗತಾ ಕಥಾವಿವರಗಳು ಬೆರಗು ಹುಟ್ಟಿಸುತ್ತವೆ. ಗುಡಿಯ ದಕ್ಷಿಣದಿಕ್ಕಿನಲ್ಲಿ ಎಡದಿಂದ ಬಲಕ್ಕೆ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಸಾಗಿದರೆ ರಾಮಾಯಣ ಕಥನ ತೆರೆದುಕೊಳ್ಳುತ್ತದೆ.

    ದಶರಥ ಮಹಾರಾಜನ ಪುತ್ರಕಾಮೇಷ್ಠಿಯಾಗ,  ವಿಶ್ವಾಮಿತ್ರ ಗುರುಗಳೊಡನೆ ರಾಮಲಕ್ಷ್ಮಣರು ಯಜ್ಞರಕ್ಷಣೆಗಾಗಿ ಹೊರಡುವುದು, ತಾಟಕಿ ರಾಕ್ಷಸಿಯ ವಧೆ, ರಾಮನು ಶಿವಧನಸ್ಸನ್ನು ಮುರಿದು ಸೀತಾಕಲ್ಯಾಣವಾಗುವುದು,  ಸೀತಾರಾಮಲಕ್ಷ್ಮಣ ವನವಾಸ, ಸ್ವರ್ಣಮೃಗದರ್ಶನ, 

ಸೀತಾಪಹರಣ, ಅಶೋಕವನದ ಶೋಕತಪ್ತ ಸೀತೆ, ರಾವಣನ ದರ್ಬಾರಿನಲ್ಲಿ ಬಾಲದಮೇಲೆ ಕುಳಿತ ಹನುಮಂತ, ರಾಮಸೇತು ನಿರ್ಮಾಣ, ರಾಮ ರಾವಣರ ಯುದ್ಧ- ಹೀಗೆ ಹಲವು ಸನ್ನಿವೇಶಗಳ ಚಿತ್ರಗಳು ಒಂದಕ್ಕಿಂತ ಒಂದು ಹೆಚ್ಚು ಸ್ಪುಟವಾಗಿ,  ಆಪ್ತವಾಗಿ ರಾಮಾಯಣದ ಕಥೆಯನ್ನು  ಹೇಳುತ್ತವೆ. 

     ಉತ್ತರ ದಿಕ್ಕಿನಲ್ಲಿ ಬಲದಿಂದ ಎಡಕ್ಕೆ ತಿರುಗಿ ಬರುವಾಗ ಮಹಾಭಾರತದ ಕಥೆ ಅಲೆ ಅಲೆಯಾಗಿ ಮೈತೆರೆದುಕೊಳ್ಳುತ್ತದೆ. ಪಾಂಡವರ ಜನನದಿಂದ ಹಿಡಿದು ಕೌರವರ ಪಾಂಡವರ ಯುದ್ದದವರೆಗಿನ ಅಪೂರ್ವ ಪ್ರಸಂಗಗಳು ಶಿಲ್ಪವೆಂಬ ಬೆಣ್ಎಯ ಕುಸುರಿಯಲ್ಲಿ ದಾಖಲಾಗಿದೆ. ಅದರಲ್ಲೂ ಕಿರಾತಾರ್ಜುನೀಯ ಪ್ರಸಂಗದಲ್ಲಿ ಅರ್ಜುನನ ಬೆನ್ನ ಮೇಲಿನ ಮಚ್ಚೆ ನೋಡಲು ಪಾರ್ವತಿಗೆ ಕಾಲಿನಿಂದ ಸಂಕೇತಿಸುವ ಶಿವನ ಅಧ್ಭುತ ಶಿಲ್ಪಾರೂಪ, ಭಾಗವತಾ ಕಥಾಪ್ರಸಂಗದಲ್ಲಿ ಕೃಷ್ಣ ಜನನವನ್ನು ಕಂಸನಿಗೆ ತಿಳಿಸುವುದು ಬೇಡ ಎಂದು ಕತ್ತೆಯ ಕಾಲು ಹಿಡಿದಿರುವ ವಸುದೇವನ ಚಿತ್ರ ಇಂತಹವು ಸಣ್ಣದೊಂದು ಶಿಲ್ಪ ಪಟ್ಟಿಕೆಯಲ್ಲಿ ಏನೆಲ್ಲಾ ಕತೆಗಳನ್ನು ನಿರೂಪಿಸಬಹುದು ಎಂಬುದಕ್ಕೆ ಮನಮೋಹಕ ಸಾಕ್ಷಿಗಳಾಗಿವೆ. ಶಾಲಾ ಮಕ್ಕಳಿಗಂತೂ ಈ ರೀತಿಯ ನೇರಪ್ರಾತ್ಯಕ್ಷಿಕೆಗಳನ್ನು  ತೋರಿಸುವ ಮೂಲಕ ಅವರಲ್ಲಿನ ಕುತೂಹಲ, ಕಲಿಯುವ ಹುಮ್ಮಸ್ಸು ಮತ್ತೊಷ್ಟು ಗರಿಗೆದರುವಂತೆ ಮಾಡಬಹುದು.

   ಈ ಮುಖ್ಯ ಗರ್ಭಗುಡಿಗೆ ಅಪೂರ್ವ ರಕ್ಷಣಾಕವಚದಂತಿರುವ, ಕಂಚಿನ ಕಳಸದಿಂದ ದೇದಿಪ್ಯಮಾನವಾಗಿರುವ ಗೋಪುರ ಅತ್ಯಂತ ಸೊಗಸುಪೂರ್ಣವಾಗಿದೆ. ಗೋಪುರದ ಮುಂಭಾಗದಲ್ಲಿದ್ದ ಹೊಯ್ಸಳ ಲಾಂಛನ ಭಗ್ನಗೊಂಡಿರುವುದು ದೃಷ್ಟಿವೇದ್ಯವಾಗುವಂತಿದೆ. ಗೋಪುರದ ಪೂರ್ವಮುಖದ ವಿಶಾಲ ಪಟ್ಟಿಕೆಯಲ್ಲಿ ಮೂಡಿಸಿರುವ ಗಜಸಂಹಾರಮೂರ್ತಿಯ ಅಪೂರ್ವ ಶಿಲ್ಪ ಇಡಿ ದೇಗುಲದ ಸೊಬಗಿಗೆ   ಕಳಶಪ್ರಾಯವಾಗಿದೆ. 

 


    ಸುಮಾರು 5ಅಡಿ ಚದುರದ ಬಳಪದ ಕಲ್ಲಿನ ಚಪ್ಪಡಿಯ ಮೇಲಿನ ಉಬ್ಬುಶಿಲ್ಪದಲ್ಲಿ ಗಜಾಸುರ  ಸಂಹಾರ ಮಾಡಿ ನರ್ತಿಸುತ್ತಿರುವ ಸರ್ವಾಲಂಕಾರ ಭೂಷಿತ 16 ಬಾಹುಗಳ ಅಧ್ಭುತ ಶಿವನ ಮೂರ್ತಿಯ ಕಂಡರಣೆ ಇದೆ. 11 ಬಾಹುಗಳು ಹಾನಿಗೊಳಗಾಗಿ, ಶಿಲ್ಪದ ಮನಮೋಹಕತೆಗೆ ಕೊಂಚ ಧಕ್ಕೆಯಾಗಿದೆ. ಮೇಲ್ಭಾಗದಲ್ಲಿ ಲಾಳಾಕಾರದ ಮಹಾನಾಸಿ, ಅದ್ಭುತವಾದ ಕೀರ್ತಿಮುಖ, ಎರಡು ಪಕ್ಕಗಳಲ್ಲಿ ವಿವಿಧ ಗಿಡಮರಬಳ್ಳಿಗಳ ಸಮೃದ್ಧ ಅಲಂಕಾರ, ಬಲಭಾಗದಲ್ಲಿ ಗಣೇಶ ಪಾರ್ವತಿ, ಎಡ ಭಾಗದಲ್ಲಿ ನಂದಿ, ಭೃಂಗಿ ಉಬ್ಬು ಶಿಲ್ಪಗಳ ಸೊಬಗು ಮನಮೋಹಕ. ಇಷ್ಟು ಶಿಲ್ಪ ಸಮೂಹವನ್ನು ಕೂಡಿದಂತೆ ಹಿಂಭಾಗದಲ್ಲಿ ವಿಶಾಲವಾಗಿ, ತೆಳುವಾಗಿ, ಪದರ ಪದರವಾಗಿ ಹರಡಿದಂತಿರುವ ಆನೆಯ ಚರ್ಮದ ಕೌಶಲ್ಯ ಪೂರಿತ ಕೆತ್ತನೆ ಶಿಲ್ಪಕೌಶಲ್ಯದ ಕುಶಲತೆಯ ಪರಮೊನ್ನತ ಸಾಧನೆ! ಈ ಶಿಲ್ಪಕ್ಕೆ ಪ್ರಭಾವಳಿಯ ರೀತಿಯಲ್ಲಿ ವಲ್ಲಿ ಮಂಡಲವನ್ನು ರೂಪಿಸಿ ಅದರಲ್ಲಿ ಅಷ್ಟ ದಿಕ್ಬಾಲಕರು, ಯಕ್ಷರು, ಗಂಧರ್ವರು ಮುಂತಾದ ದೇವತೆಗಳನ್ನು ಕಂಡರಿಸಿರುವ ರೀತಿಯದೇ ವಿಶಿಷ್ಟ ಅಧ್ಭುತ!

     ದೇವಾಲಯದ ಸುತ್ತಲೂ ವಿಶಾಲವಾದ ಪ್ರಾಂಗಣ ಮತ್ತು ಅತ್ಯಂತ ವಿಸ್ತಾರವಾದ ಪ್ರಾಕಾರ ಗೋಡೆಗಳಿವೆ. ಮೂಲ ಗುಡಿಯ ದಕ್ಷಿಣದಲ್ಲಿ ಉತ್ತರಾಭಿಮುಖವಾಗಿ ಕಲ್ಯಾಣ ಚಾಲುಕ್ಯ ವಾಸ್ತುಶೈಲಿಯ ಸರಸ್ವತಿ ಮಂದಿರವಿದೆ. ಇಲ್ಲಿನ ಕುಳಿತ ಭಂಗಿಯಲ್ಲಿರುವ ಆಳೆತ್ತರದ ಸರಸ್ವತಿ ವಿಗ್ರಹವಂತೂ ಹೊಯ್ಸಳ ಶಿಲ್ಪಕಲೆಯ ಪರಾಕಾಷ್ಟತೆಯ ಸೊಬಗನ್ನು ತುಂಬಿಕೊಂಡಿದೆ. ಅಪೂರ್ವ ಶಿಲ್ಪ ಕೃತಿ, ಅತ್ಯಂತ ಸುಂದರ ಆಕೃತಿ, ಶಾರದೆ ಎಂದರೆ ಪರಿಪೂರ್ಣ ಶಾರದೆಯೇ. ಮಕ್ಕಳ ಅಕ್ಷರಾಭ್ಯಾಸಕ್ಕೆ ಶೃಂಗೇರಿಯಷ್ಟೇ ಪವಿತ್ರವಾದ ಸಾನ್ನಿಧ್ಯವೆಂಬುದು ನಂಬಿಕೆ!

    ಸವಿಗೆ ಸವಿ ಸೇರಿಸುವ ಈ ಒಂದೊಂದು ಅಂಶವನ್ನು ಸವಿ ಸವಿದು ಆಸ್ವಾದಿಸುತ್ತಾ ಶಾರದ ದೇವಿಯ ಗುಡಿಯ ಮುಂದಿರುವ ಪುಟ್ಟ ಜಗುಲಿಯ ಮೇಲೆ ಆನಂದದ ನಿಟ್ಟುಸಿರನ್ನು ಹೊಮ್ಮಿಸುತ್ತಾ, ಬೀಸಿ ಬರುವ ತಂಗಾಳಿಯನ್ನು ಅನುಭವಿಸುತ್ತಾ ಕುಳಿತಾಗ ಹಲವು ಹತ್ತು ಪ್ರಶ್ನೆಗಳು ಮನವನ್ನು ಕಾಡ ತೊಡಗುತ್ತವೆ.

   ಇಂತಹ ಸುಂದರ ದೇವಾಲಯವನ್ನು ನಿರ್ಮಿಸಿದ ಮಹಾನುಭಾವರು ಯಾರು? ಕಟೆದು ನಿಲ್ಲಿಸಿದ ಶಿಲ್ಪಿಚತುರರು ಯಾರು? ಇಂದಿನ ಈ ಪುಟ್ಟ ಊರು ಇಂತಹ ಸೊಬಗಿನ ಅಮೃತ ಸರಸ್ವತಿಯನ್ನು ತನ್ನಲ್ಲಿ ಆಗು ಮಾಡಿಸಿಕೊಳ್ಳುವಷ್ಟು ಯಾವಾಗ ಸಶಕ್ತವಾಗಿತ್ತು? ಈ ಮತ್ತು ಇಂತಹ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಅಲ್ಲೆ ಸಮೀಪದಲ್ಲೆ ನಿಂತ ಅಮೋಘ ಕುಸುರಿ ಕೆಲಸದ  ಅದ್ಭುತ ಅಪರೂಪ ಅನನ್ಯ ಶಾಸನ ಶಿಲ್ಪ ನೀಡುತ್ತಿದೆ. ಎಪಿಗ್ರಾಫಿಯ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಹನ್ನೆರೆಡನೆ ಸಂಪುಟವನ್ನು ತಿರುವಿ ಹಾಕಿದರೆ, ಅತಿ ಅಮೂಲ್ಯ ಸಂಗತಿಗಳು ತೆರೆದುಕೊಳ್ಳುತ್ತದೆ.

         ಈ ವೈಭವ ಪೂರ್ಣ ಶಾಸನ ಶಿಲ್ಪ ಕ್ರಿ.ಶ.1198 ರ ಜನವರಿ ಒಂದನೇ ತಾರೀಖು ಗುರುವಾರದಂದು ರಚಿತವಾಗಿದೆ. 121 ಸಾಲುಗಳ  ಈ ಅಪೂರ್ವ ಶಿಲ್ಪ ಕಾವ್ಯವನ್ನು ರಚಿಸಿದವನು ನಮ್ಮ ಕವಿಚಕ್ರವರ್ತಿ ಜನ್ನ! ಉದ್ದಂಡ ಕವಿ ಭಾಳನೇತ್ರನೂ ಸುಕವಿ ಜನಮಿತ್ರನೂ ಆದ ನಮ್ಮ ಜನ್ನಯ್ಯನ ಶಿಲಾಕವಿತೆ ಇದು. ಮಹಾಕವಿ ಜನ್ನನ ಕವಿತೆಯನ್ನು ಕಲ್ಲಿನಲ್ಲಿ ಸ್ಪುಟವಾಗಿ ಬರೆದವನು ಸರಸ್ವತಿ ಕರ್ಣ ಪುತ್ರನೂ ಕಮನೀಯಗಾತ್ರನೂ ಆದ ಲಕ್ಕುಂಡಿಯ ಮಹಾದೇವಣ್ಣಗಳ ಶಿಷ್ಯ ನಾಕಣ್ಣ. ಇದನ್ನು ಕಂಡರಿಸಿದವನು ಬಿರುದ ಕಂಡರಣೆಕಾರ, ಕೋಳಾಹಳ ರೂವಾರಿ ಮಲ್ಲೋಜ! ಒಂದು ಶಿಲಾ ಶಾಸನ ಪರಿಪಕ್ವವಾಗಿ ರೂಪುಗೊಳ್ಳುವ ಅನುನಯ ಕಾರ್ಯಗಳನ್ನು ಈ ಶಾಸನ ವ್ಯವಸ್ಥಿತವಾಗಿ ನಿರೂಪಿಸಿದೆ.

    'ಶಶಕಪ್ರಸಿದ್ಧಪುರ ಅಥವಾ ಸೊಸೆಊರು (ಇಂದಿನ ಅಂಗಡಿ) ಪ್ರಸಿದ್ಧ ಗುರುಕುಲ. ಇಲ್ಲಿ ಸಳ ಎಂಬುವವನು ವಾಸಂತಿಕ ದೇವಿಯನ್ನು ಆರಾಧಿಸುತ್ತಿರುವಾಗ ಭೀಕರ ರೂಪದ ಹುಲಿ ಆರ್ಭಟಿಸುತ್ತಾ ಬಂತು. ಅದನ್ನು ಕಂಡ ಜೈನಮುನಿ ತನ್ನ ಕೈಲಿದ್ದ ಕುಂಚವನ್ನು ಸಳನಿಗೆ ಕೊಟ್ಟು 'ಹೊಯ್ಸಳ' ಎಂದು ಹರಸಿದ. ಕತ್ತಿಯಿಂದ ಸಿಂಹವನ್ನು ಇರಿಯುವುದು ಹೆಚ್ಚುಗಾರಿಕೆ ಅಲ್ಲ ಹುಲ್ಲಿನ ಕುಂಚದ ಸೆಳೆಯಿಂದ ಹುಲಿಯೊಡನೆ ಹೋರಾಡಿ ಗೆದ್ದುದು ನಿಜವಾದ ಶೌರ್ಯ!' ಎಂದು ಕವಿ ಚಕ್ರವರ್ತಿ ಜನ್ನ ಹೊಯ್ಸಳ ಮೂಲದ ಸಂದರ್ಭದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾನೆ. ಹೀಗೇ ಹೊಯ್ಸಳ ಮನೆತನದ ಸಾಹಸ ಗಾಥೆಯನ್ನು ಸುರಮ್ಯವಾಗಿ ಹೇಳ ಹೇಳುತ್ತಾ ಇಮ್ಮಡಿ ವೀರಬಲ್ಲಾಳ ದೇವನ ಅಪೂರ್ವ ಬಿರುದಾವಳಿಗಳನ್ನು ದಾಖಲಿಸಿ ಅವನ ಮಹಾದಂಡನಾಯಕ ಅಮೃತೇಶ್ವರ ದಂಡನಾಯಕನ ಬಗೆಗೆ ಅತೀ ವಿಸ್ತಾರ ಮಾಹಿತಿ ನೀಡುತ್ತಾನೆ.

     ಚಟ್ಟಿಸೆಟ್ಟಿ ಜಕ್ಕಿಯಕ್ಕರ ಮೊಮ್ಮಗ, ಹರಿಯಮಸೆಟ್ಟಿ ಸುಗ್ಗಿಯಕ್ಕರ ಮಗ  ಅಮೃತೇಶ್ವರ ದಂಡನಾಯಕನು ಸತ್ಯದಾಯತನು. ಐಶ್ವರ್ಯ ಇದ್ದರೆ ದಾನ ಮಾಡಿ ತೋರಬೇಕು, ಶೌರ್ಯ ಇದ್ದರೆ ಯುದ್ಧದಲ್ಲಿ ಗೆದ್ದು ತೋರಬೇಕು ಎನ್ನುವ ಮನೋಭಾವದ ಅಮೃತೇಶ್ವರನು ಬಲದಿಂದ ಭೀಮ, ನುಡಿಯಿಂದ ರಾಮ, ದಾನದಿಂದ ಕರ್ಣರಿಗೆ ಸರಿಸಮಾನ ಎನಿಸಿದವನು!

   ಇಂಥ ಅಮೃತ ದಂಡನಾಯಕನು ಲೋಕದ ಕಣ್ಣ ಪುಣ್ಯ ರೂಪವೇ ಸಾಕಾರಗೊಂಡಂತೆ ಬೆಡಗು ತುಂಬಿದ ಅಮೃತ ಸಮುದ್ರದಲ್ಲಿ ಮಹಿಮೆವೆತ್ತ ಅಮೃತೇಶ್ವರ ದಿವ್ಯಗೇಹವನ್ನು ಮಾಡಿಸಿ ಶ್ರೀಮದಮೃತೇಶ್ವರ ದೇವರನ್ನು ಶಕವರ್ಷ 1119 ಪಿಂಗಳ ಸಂವತ್ಸರ ಪುಷ್ಯ ಬಹುಳ ಸಪ್ತಮಿ ಸೋಮವಾರದುತ್ತರಾಯಣ ಸಂಕ್ರಮಣದಂದು ಸುಪ್ರತಿಷ್ಠೆ ಮಾಡಿಸಿದನಂತೆ.

    ಕೊಂಟನ ಮಡುವಿನ ಕೇತಗವುಡ, ಎರಕಗೌಡ, ಮಾಳಗೌಡ ಎನ್ನುವ ಮೂವರು ಮಹಾನುಭಾವರು ತಮ್ಮ ಹೊಲದಲ್ಲಿ ಅಮೃತೇಶ್ವರ ದೇವರಿಗೆ ದೇವಾಲಯ ಮಾಡಲು, ಪುರವನ್ನು ಕಟ್ಟಲು ಭೂಮಿ ಬಿಟ್ಟುಕೊಟ್ಟರಂತೆ! ಎಂಥ ಪುಣ್ಯಾತ್ಮರು ಅವರು!

    ಈ ದೇವಾಲಯ ನಿರ್ಮಾಣ ಮಾಡಲು ಶ್ರಮಿಸಿದ ಶಿಲ್ಪಿಗಳ ಹೆಸರುಗಳನ್ನು ಮುಖಮಂಟಪದ ಭುವನೇಶ್ವರಗಳಲ್ಲಿ ಕೆತ್ತಲಾಗಿದೆ. ಸೂಲಯ, ಮಲಿತಮ, ಪದುಮಂಣ, ವಿಕಡರೂಪ ಸುಬುಜಗ, ದಿಶವರೂಪ ಸುಬುಜರು, ಪದ್ಮಯ್ಯ ಬೂತಯ, ರೂವಾರಿ ಬಲುಗ, ಮುಳಣ ಮುಂತಾದ ಶಿಲ್ಪಿಗಳ ಹೆಸರುಗಳು ರಸ ರೋಮಾಂಚನವುಂಟು ಮಾಡುತ್ತವೆ.

    ಇಲ್ಲಿಯ ಕ್ರಿ.ಶ. 1214ರ ಎರಡು ವೀರಗಲ್ಲುಗಳು ಗುಜ್ಜರರ ಜೊತೆಯಲ್ಲಿ ಹೋರಾಡಿ ಮಡಿದ ಇಬ್ಬರು ವೀರರನ್ನು ಮತ್ತು ಇದೇ ಸಮಯದ ಮತ್ತೆ ಎರಡು ವೀರಗಲ್ಲುಗಳು ಅಮೃತಾಪುರದ ಜೀವಧನವಾದ ಹಸುಕರುಗಳನ್ನು ಕಳ್ಳರು ಹೊತ್ತೊಯ್ಯುವಾಗ ಅವರೊಡನೆ ಹೋರಾಡಿ ಮಡಿದ ವೀರರನ್ನೂ ಸ್ಮರಿಸುತ್ತವೆ.

   ಅಮೃತಾಪುರವೆಂಬ ಪುಟ್ಟ ಊರಿನಲ್ಲಿ ಈಗಲೂ ದೊಡ್ಡ ಮನಸ್ಸಿನ ಮಾನವತಾವಾದಿಗಳು ಇದ್ದಾರೆ. ತಮ್ಮೂರಿನ ಅಮೂಲ್ಯ ಆಸ್ತಿಯಾದ  ದೇವಾಲಯವನ್ನು ಕಾಪಾಡಿಕೊಳ್ಳಲು ಹೃದಯಪೂರ್ವಕ ಶ್ರಮ ವಹಿಸುತ್ತಿದ್ದಾರೆ. ಊರ ನಡುವೆ ಇರುವ ಬಸವೇಶ್ವರ, ವೀರಭದ್ರೇಶ್ವರ ಮತ್ತು ಗ್ರಾಮದೇವತೆ ಅಂತರಘಟ್ಟಮ್ಮ ಗುಡಿಗಳಿಗೆ ನಡೆದುಕೊಳ್ಳುತ್ತಾರೆ. ಸೌಹಾರ್ದ, ಸಹಕಾರ, ಪರೋಪಕಾರಿ ಮನೋಭಾವಗಳಿಂದ ಕೂಡಿದ ಊರಿನ ಸಹೃದಯತೆಯನ್ನು ಅಭಿಮಾನದಿಂದ ಸ್ಮರಿಸಲೇಬೇಕು. ಮಹಾಕವಿ ಜನ್ನನಿಂದ ಅಮೃತ ಕಾಸಾರ ಎಂದು ಹೊಗಳಿಸಿಕೊಂಡು ಈಗಲೂ ಅಮೃತಾಪುರದ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಹಿರಿಯ ಕೆರೆ ಅಮೃತಾಸಮುದ್ರ ತನ್ನ ಇರುವಿಕೆಯನ್ನು ಸಾಕಾರಗೊಳಿಸಿಕೊಳ್ಳಲು ಅವಿರತವಾಗಿ ಹೋರಾಡುತ್ತಿರುವುದನ್ನು ಮನತುಂಬಿಸಿಕೊಳ್ಳಬೇಕು. ಇದಕ್ಕಾಗಿ ಅಮೃತಾಪುರಕ್ಕೆ ಭೇಟಿ ನೀಡಲೇಬೇಕು!!!


Comments