ಅಹಲ್ಯೆ: ವಾಲ್ಮೀಕಿ ಕಂಡಂತೆ

 ಅಹಲ್ಯೆ: ವಾಲ್ಮೀಕಿ ಕಂಡಂತೆ

 ಲೇಖನ - ಡಾ ಸಿ ಅರ್ ಅನಂತ ರಾವ್  

ಅಹಲ್ಯೆ ರಾಮಾಯಣದಲ್ಲಿ ಬರುವ ಒಂದು ಸಣ್ಣ ಪಾತ್ರ.  ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಬರುವುದು ಪತಿ ಗೌತಮರ ಶಾಪದಿಂದ ಕಲ್ಲಾಗಿ ಬಿದ್ದಿದ್ದವಳು. ಶ್ರೀರಾಮನ ಪಾದಸ್ಪರ್ಶದಿಂದ ಮತ್ತೆ ತನ್ನ ಸ್ವರೂಪವನ್ನು ಪಡೆದ ದೃಶ್ಯ. ಕಾಳಿದಾಸ ಮಹಾಕವಿಯ ರಘುವಂಶ, ಇತರ ಸಂಸ್ಕೃತ ಮತ್ತು ದೇಶೀಯ ಭಾಷೆಗಳಲ್ಲಿ ಬರುವ ರಾಮಾಯಣ ಕಥೆಗಳಲ್ಲಿ, ಭಕ್ತಿ ಗೀತೆಗಳಲ್ಲಿ, ತ್ಯಾಗರಾಜಾದಿ ವಾಗ್ಗೇಯಕಾರರ ರಚನೆಗಳಲ್ಲಿ ಬರುವುದು ಶಿಲೆಯಾದ ಅಹಲ್ಯೆ ಎನ್ನುವ ಒಕ್ಕಣೆಯೇ.  



ಆದರೆ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಬರುವ ಅಹಲ್ಯೆಯ ಪಾತ್ರದ ಕಲ್ಪನೆ ಮತ್ತು ಅದು ಮೂಡಿಬಂದಿರುವದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. 

ಮನಸ್ಸಿಲ್ಲದಿದ್ದರೂ ವಸಿಷ್ಠರ ಬುದ್ಧಿವಾದದಂತೆ ದಶರಥ ಮಹಾರಾಜ ಮಹರ್ಷಿ ವಿಶ್ವಾಮಿತ್ರರ ಜೊತೆಯಲ್ಲಿ ಇನ್ನೂ ಬಾಲಕರಾದ ರಾಮ ಲಕ್ಷ್ಮಣರನ್ನು ಕಳುಹಿಸುತ್ತಾನೆ. 

ವಿಶ್ವಾಮಿತ್ರರು ಬಾಲಕರನ್ನು ವಾತ್ಸಲ್ಯದಿಂದ ಕಾಣುತ್ತಾರೆ. ಮೊದಲದಿನ ಹುಲ್ಲಿನ ಹಾಸಿಗೆಯಲ್ಲಿ ಮಲಗಿದ್ದ ರಾಜಕುಮಾರ ರಾಮನನ್ನು ಬೆಳಗಿನಝಾವ "ಕೌಸಲ್ಯಾ ಸುಪ್ರಜಾ ರಾಮ" ಎಂದು ಪ್ರೀತಿಯಿಂದ ಕರೆದು ಎಬ್ಬಿಸುತ್ತಾರೆ. ಮೂಲತಃ ವಾಲ್ಮೀಕಿ ರಾಮಾಯಣದ ಶ್ಲೋ ಕ ಶ್ರೀ ವೆಂಕಟೇಶ ಸುಪ್ರಭಾತದಲ್ಲಿ ಉಪಯೋಗವಾಗಿ ಪ್ರಸಿದ್ಧಿಗೆ ಬಂದಿದೆ. 


ವಿಶ್ವಾಮಿತ್ರರು ರಾಜಕುಮಾರರಿಗೆ ಅಗತ್ಯವಾದ ವಿದ್ಯೆಗಳನ್ನು ಕಲಿಸುತ್ತ ತಮ್ಮ ಯಾಗ ರಕ್ಷಣೆ ಮಾಡಿಕೊಳ್ಳುತ್ತಾರೆ. ಅನಂತರ ಮಿಥಿಲಾನಗರಿಗೆ ಹೋಗುವ ಉದ್ದೇಶದಿಂದ ಅನೇಕ ಸ್ವಾರಸ್ಯವಾದ ಸ್ಥಳಗಳನ್ನು ಬಾಲಕರಿಗೆ ತೋರಿಸಿ ಅವರಿಗೆ ಆ ಸ್ಥಳಗಳ ವಿಶೇಷಗಳನ್ನೂ ಚರಿತ್ರೆಗಳನ್ನೂ ತಿಳಿಸುತ್ತಾರೆ. ಅವರ ಪ್ರಯಾಣ ಒಂದು ಸಂಚಾರೀ ಗುರುಕುಲ ಆಗುತ್ತದೆ. ಹೀಗೆ ಬರುವಾಗ ಮಿಥಿಲಾನಗರಕ್ಕೆ ಹೊರಗಿದ್ದ ಕಾಡಿನಲ್ಲಿ ಒಂದು ಹಳೆಯದಾಗಿ ನಿರ್ಜನವಾಗಿ ಕಂಡರೂ ಏನೋ ಒಂದುಬಗೆಯ ಆಕರ್ಷಣೆಯಿಂದ ಕೂಡಿದ ಆಶ್ರಮ ಕಣ್ಣಿಗೆ ಬೀಳುತ್ತದೆ. ಶ್ರೀರಾಮನು ಕುತೂಹಲದಿಂದ ಗುರುಗಳಾದ ವಿಶ್ವಾಮಿತ್ರರನ್ನು ಈ ಆಶ್ರಮದ ಬಗ್ಗೆ ಪ್ರಶ್ನಿಸುತ್ತಾನೆ. 



ವಿಶ್ವಾಮಿತ್ರರು ಆಶ್ರಮದ ದುಃಖದ ಕಥೆ ಹೇಳುತ್ತಾರೆ. ದಿವ್ಯವಾದ ಈ ಆಶ್ರಮದಲ್ಲಿ ಗೌತಮ ಋಷಿಗಳು ಅಹಲ್ಯೆಯೊಡನೆ ದೀರ್ಘಕಾಲ ತಪಸ್ಸುಮಾಡಿಕೊಂಡು ಸಂತೋಷವಾಗಿ ವಾಸವಾಗಿದ್ದರು. ಆದರೆ ಅಹಲ್ಯೆಯ ರೂಪದಿಂದ ಮೋಹಗೊಂಡ ದೇವೇಂದ್ರನು ಒಮ್ಮೆ ಗೌತಮರು ಆಶ್ರಮದಲ್ಲಿಲ್ಲದಿದ್ದಾಗ ಅವರ ರೂಪದಲ್ಲಿಯೇ ಬಂದು ಆಕೆಯೊಡನೆ ಸಂಗ ಬಯಸುತ್ತಾನೆ. ಆದರೆ ಬಂದವನು ಇಂದ್ರನೆಂದು ಗೊತ್ತಾದರೂ ದೇವತೆಗಳ ಒಡೆಯನೊಡನೆ ಬೆರೆಯುವ ಚಪಲಕ್ಕೆ, ವಾಲ್ಮೀಕಿಗಳ ಮಾತಿನಲ್ಲಿ "ದೇವರಾಜಕುತೂಹಲ" ದಿಂದ ಮನಸೋತು, ವಿವೇಚನೆ ಬಿಟ್ಟು ಇಂದ್ರನ ಜೊತೆ ಬೆರೆಯುತ್ತಾಳೆ. ಸಂತೃಪ್ತನಾದ ಇಂದ್ರನು ಪರ್ಣಶಾಲೆಯಿಂದ ಹೊರಗೆ ಬರುವ ಸಮಯಕ್ಕೆ ಸರಿಯಾಗಿ ಗೌತಮರು ತೀರ್ಥಸ್ನಾನಮಾಡಿ ಹಿಂತಿರುಗಿ ಬಂದು ಎದುರಾಗುತ್ತಾರೆ. ನಡೆದವಿಷಯ ಕೂಡಲೇ ಗ್ರಹಿಸಿ ಇಬ್ಬರಿಗೂ ಅವರ ದುರ್ನಡತೆಗೆ ತಕ್ಕಂತೆ ಶಾಪ ಕೊಡುತ್ತಾರೆ. ಇಂದ್ರನ ಪುರುಷತ್ವ ನಷ್ಟವಾಗುತ್ತದೆ. ಅಹಲ್ಯೆ ಸಾವಿರಾರು ವರ್ಷ ಯಾವ ಪ್ರಾಣಿಗೂ ಕಾಣದಂತೆ "ಅದೃಶ್ಯಾಸರ್ವಭೂತಾನಾಮ್" ಉಸಿರಾಡುತ್ತ ತಪ್ತಳಾಗಿರುವಂತೆ "ವಾಯುಭಕ್ಷಾ ನಿರಾಹಾರಾ", ಮುಂದೆ ಶ್ರೀರಾಮ ಆಶ್ರಮಕ್ಕೆ ಬಂದಾಗ ನಿಜಸ್ವರೂಪ ಹೊಂದುವಂತೆ ಶಾಪದ ಅಂತ್ಯವನ್ನೂ ಸೂಚಿಸುತ್ತಾರೆ. ಬೇಸರಗೊಂಡ ಗೌತಮರು ಆಶ್ರಮವನ್ನು ಬಿಟ್ಟು ದೀರ್ಘ ತಪಸ್ಸಿಗಾಗಿ ಹೊರಟುಹೋಗುತ್ತಾರೆ. 


ಇಷ್ಟು ಹೇಳಿ ವಿಶ್ವಾಮಿತ್ರರು ರಾಮನನ್ನು "ಮಹಾಭಾಗಾಮ್ ಆಹಲ್ಯಾಮ್ ದೇವರೂಪಿಣೀಮ್ " ಅದೃಶ್ಯಳಾಗಿ ದೇವತೆಯಂತಿರುವ ಅಹಲ್ಯೆಯನ್ನು ಉದ್ಧಾರ ಮಾಡು ಬಾ ಎಂದು ರಾಮಲಕ್ಷ್ಮಣರೊಡನೆ ಆಶ್ರಮವನ್ನು ಪ್ರವೇಶಿಸುತ್ತಾರೆ. ರಾಮನಿಗೆ ಕಂಡ ಅಹಲ್ಯೆ ಮಾನವರಿಗೂ ದೇವತೆಗಳಿಗೂ ಕಾಣದಿದ್ದರೂ, (ವಾಲ್ಮೀಕಿ ವರ್ಣನೆಯನ್ನು ಮಹಾವಿದ್ವಾನ್ ದಿವಂಗತ ರಂಗನಾಥಶರ್ಮರು ಭಾಷಾಂತರಿಸಿರುವಂತೆ, ವಾಲ್ಮೀಕಿರಾಮಾಯಣ, ಬಾಲಕಾಂಡ 

ಸರ್ಗ ೪೯, ರಾಮಾಯಣ ಪ್ರಕಾಶನ ಸಮಿತಿ, ಬೆಂಗಳೂರು)


"ದೀರ್ಘಕಾಲದ  ತಪಸ್ಸಿನಿಂದ ಅಹಲ್ಯೆಯ ಸುತ್ತಲೂ ದಿವ್ಯಪ್ರಭೆಯು ಹರಡಿತ್ತು ಬ್ರಹ್ಮನು ಪ್ರಯತ್ನಪೂರ್ವಕವಾಗಿ ಸೃಷ್ಟಿಸಿದ ಮಾಯಾಮಯಳಾದ ದೇವತೆಯಂತೆ, ಮಂಜುಮೋಡಗಳಿಂದ ಮರೆಯಾದ ಪೂರ್ಣಚಂದ್ರಪ್ರಭೆಯಂತೆ, ಹೊಗೆಮುಚ್ಚಿದ ಅಗ್ನಿಜ್ವಾಲೆಯಂತೆ,  ಜಲದಲ್ಲಿ ಪ್ರತಿಬಿಂಬಿಸಿರುವ ಉಜ್ಜ್ವಲವಾದ ಸೂರ್ಯ ದೀಪ್ತಿಯಂತೆ"


ಇದ್ದಳು. ಪರಪುರುಷನ ಸಂಗ ಮಾಡಿ ಗಂಡನಿಂದ ತಿರಸ್ಕೃತಳಾದ ಹೆಣ್ಣು ಸಮಾಜಕ್ಕೆ ಕಣ್ಣಿಗೆ ಬಿದ್ದರೂ ಕಾಣದ ಹಾಗೆ. ಲೋಕನಿಂದೆ ಎನ್ನುವ ಹೊಗೆ ಆಕೆಯ ವ್ಯಕ್ತಿತ್ವವನ್ನು, ತೇಜಸ್ಸನ್ನು ಮುಚ್ಚುತ್ತದೆ. ಆವರಿಸಿರುವ ಹೊಗೆಯನ್ನು ದಾಟಿ ನಿಜವಾದ ವ್ಯಕ್ತಿಯನ್ನು ಕಾಣುವ ಸೂಕ್ಷ್ಮ ದೃಷ್ಟಿ ರಾಮನಂಥ, ವಿಶ್ವಾಮಿತ್ರರಂಥ ಉದಾರ ಚರಿತರಿಗೆ ಮಾತ್ರ ಸಾಧ್ಯ. ಇದು ಅದಿಕವಿಯ ಕಲ್ಪನೆ. 

ರಾಮನ ದರ್ಶನವಾದನಂತರ ಎಲ್ಲರಿಗೂ ಗೋಚರವಾದಳು. ರಾಮಲಕ್ಷ್ಮಣರು ಅಹಲ್ಯೆಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಅಹಲ್ಯೆ ರಾಮಲಕ್ಷ್ಮಣರಿಗೆ, ವಿಶ್ವಾಮಿತ್ರರಿಗೆ ಗೌರವಪೂರ್ವಕವಾಗಿ ಸತ್ಕಾರ ಮಾಡುತ್ತಾಳೆ. ಎಲ್ಲೆಲ್ಲಿಯೂ ಹರ್ಷದಿಂದ ಅಹಲ್ಯೆಗೆ ಸ್ವಾಗತವಾಗುತ್ತದೆ. ದೇವತೆಗಳು 'ಸಾಧು ಸಾಧು' ಎಂದು ಅಹಲ್ಯೆಯನ್ನು ಪೂಜಿಸುತ್ತಾರೆ. ಕಾಲವನ್ನರಿತ ಗೌತಮರು ಆಶ್ರಮಕ್ಕೆ ಹಿಂದಿರುಗಿ ಅಹಲ್ಯೆಯ ಜೊತೆಸೇರುತ್ತಾರೆ. ವಾಲ್ಮೀಕಿಗಳ ಮಾತಿನಲ್ಲಿ ಗೌತಮರು "ಅಹಲ್ಯಾ ಸಹಿತಃ ಸುಖೀ".  ಈ ಮೂರು ಪದಗಳಲ್ಲಿ ಸುಂದರವಾದ ದೃಷ್ಟಿ ಇದೆ. ಶಾಪದ ಸಮಯದಲ್ಲಿ ಗೌತಮರೇನೂ ಅಷ್ಟು ನೆಮ್ಮದಿಯಿಂದಿದ್ದವರಲ್ಲ. ಅಹಲ್ಯೆಯೊಡನೆ ಮತ್ತೆ ಸೇರುವುದು ಅವರಿಗೆ ಸಂತೋಷದ ವಿಷಯವೇ.


ವಾಲ್ಮೀಕಿಗಳ ಚಿತ್ರಣದಲ್ಲಿ ಅಹಲ್ಯೆ ಒಂದು ಜಡವಾದ ಕಲ್ಲಾಗಿ ಬಿದ್ದಿರುವ ಸೂಚನೆಯೇ ಇಲ್ಲ. ಕಲ್ಲಿನ ಅವಸ್ಥೆಯಲ್ಲಿ ಬೆಳವಣಿಗೆ ಇಲ್ಲ. ಮೂಲತಃ ಅಹಲ್ಯೆ ಅಂತಃಸತ್ವ ಉಳ್ಳವಳು, ಗೌರವಾರ್ಹಳು. ಶಾಪದ ಸ್ಥಿತಿಯಲ್ಲಿ ನೊಂದು ಬೆಂದರೂ ಆಕೆಯ ಸಾತ್ವಿಕ ಪ್ರಗತಿ ನಿರಂತರವಾಗಿ ಸಾಗುತ್ತದೆ.  ತಪ್ಪು ಮಾಡುವುದು ಮಾನವಸಹಜವಾದದ್ದು. ವಾಲ್ಮೀಕಿಗಳ ಚಿತ್ರಣದಲ್ಲಿ ಅಹಲ್ಯೆಯ ಚಾರಿತ್ರ್ಯವನ್ನು ಅಳೆಯುವ ಪ್ರಯತ್ನವಿಲ್ಲ. ವಿಷಯ ಕುತೂಹಲಕ್ಕೆ ಸೋತು ತಪ್ಪು ಮಾಡಿದಳಷ್ಟೇ. ತಪ್ಪಿತಸ್ಥರೂ ತಮ್ಮನ್ನು ತಾವು ಉತ್ತಮಗೊಳಿಸಿಕೊಳ್ಳುವುದಕ್ಕೆ, ಉದ್ಧರಿಸಿಕೊಳ್ಳುವುದಕ್ಕೆ ಅವಕಾಶ ಇರಬೇಕೆಂಬುದು ವಾಲ್ಮೀಕಿ ಋಷಿಗಳ ಉದಾರ ಕಲ್ಪನೆ. ಶಾಪದಿಂದ ಮುಕ್ತಳಾದ ಅಹಲ್ಯೆ ದೇವತೆಗಳಿಗೂ ಪೂಜಾರ್ಹಳು. ರಾಮನ ದೆಸೆಯಿಂದ ಆಕೆಯ ಶಾಪವಿಮೋಚನೆಯಾದರೂ ಬಾಲಕರಾದ ರಾಮಲಕ್ಷ್ಮಣರು ಹಿರಿಯಳಾದ ಅಹಲ್ಯೆಯ ಪಾದ ಮುಟ್ಟಿ ನಮಸ್ಕರಿಸುವುದು ಸದಾಚಾರ. 


ವಾಲ್ಮೀಕಿಯ ರಾಮ ದೇವಾಂಶದಿಂದ ಹುಟ್ಟಿದವನಾದರೂ ಮನುಷ್ಯ. ಸರ್ವಗುಣೋಪೇತನಾದರೂ 'ನರ'. ಆದರ್ಶ ಪುರುಷನಾದರೂ ಪುರುಷೋತ್ತಮನಲ್ಲ. ಕಾಲಕ್ರಮದಲ್ಲಿ ಭಗವದವತಾರಗಳ ಪ್ರಾಮುಖ್ಯ ಹೆಚ್ಚಿದ ನಂತರ ರಾಮಾವತಾರದ ರಾಮ ಪುರುಷೋತ್ತಮನಾದ ವಿಷ್ಣುವಾಗುತ್ತಾನೆ.  ಕಲ್ಲಾಗಿದ್ದ ಅಹಲ್ಯೆ ಭಗವಂತನ ಪಾದಧೂಳಿಯಿಂದ ಶುದ್ಧಳಾಗಿ ಸ್ವರೂಪ ಪಡೆಯುವ ದೃಶ್ಯ ಸರಳತೆಯಿಂದ ಜನರ ಮನಸ್ಸಿನಲ್ಲಿ ನಿಲ್ಲುವಂಥದ್ದು. ಈ ಮಾರ್ಪಾಟು ಹೇಗೆ ಆರಂಭವಾಯಿತೆಂದು ಹೇಳುವುದು ಕಷ್ಟ. ಸಾವಿರದ ಐನೂರು ವರ್ಷಗಳ ಹಿಂದೆಯೇ ಮನುಜಸ್ಥಿತಿಯ ಸೂಕ್ಷ್ಮಗ್ರಾಹಿಯಾದ ಕವಿಶ್ರೇಷ್ಠ ಕಾಳಿದಾಸನ ರಘುವಂಶ ಕಾವ್ಯದಲ್ಲಿಯೇ 'ಶಿಲಾಮಯೀ' ಮತ್ತು 'ರಾಮಪದರಜ' ದಿಂದ ಸ್ವರೂಪ ಪಡೆದವಳು ಎಂಬ ವರ್ಣನೆ ಬರುತ್ತದೆ. ದೇಶಭಾಷೆಗಳಲ್ಲಿ ಬಂದ ರಾಮಾಯಣಗಳಲ್ಲೂ ಶಿಲೆಯಾದ ಅಹಲ್ಯೆಯೇ ನಮಗೆ ಕಾಣುವುದು. 

ಆದರೆ ಆದಿಕವಿ ವಾಲ್ಮೀಕಿಯ ಕಲ್ಪನೆ ಪ್ರೌಢವಾದದ್ದು, ಮನುಜಸ್ಥಿತಿಯನ್ನು ಅರ್ಥಮಾಡಿಕೊಡದ್ದು ಅನುಕಂಪದಿಂದ ಕೂಡಿದ್ದು. ಅವರ ಅಹಲ್ಯೆ ನೊಂದು ತನ್ನತನವನ್ನು ಕಳೆದುಕೊಳ್ಳದೆ ಬೆಳೆದವಳು. ಪೂಜಾರ್ಹಳು ಸ್ಮರಣೀಯಳು. 

ಆಕೆ 'ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ ' ಎಂದು ನಿತ್ಯ ಸ್ಮರಣೀಯರಾದ ಪಂಚ ಕನ್ಯೆಯರ ಸಾಲಿಗೆ ಸೇರುತ್ತಾಳೆ. ಈ ಐದು ಸ್ತ್ರೀಯರಲ್ಲೂ ಒಂದು ಸಂಕುಚಿತ ದೃಷ್ಟಿಯಲ್ಲಿ ಕಳಂಕವನ್ನು ಹುಡುಕಬಹುದು. ಆದರೆ ಪ್ರತಿಯೊಬ್ಬರೂ ಜೀವನದಲ್ಲಿ ನೋವುಂಡು ತಮ್ಮ ಸ್ವಂತಿಕೆಯನ್ನು ಬಿಡದೆ ತಮ್ಮ ಹಿರಿಮೆಯನ್ನು ಮೆರೆದವರು. ಅವರು ತಮ್ಮ ಒಳಗಿನ ಸತ್ವವನ್ನು ನೋವಿನಿಂದ ಪರಿಶುದ್ಧಗೊಳಿಸಿದವರು. ಆ ಶುದ್ಧತೆಯ ಕಾರಣದಿಂದ ಅವರು ನಿತ್ಯ ಕನ್ಯೆಯರು. ಆದರ್ಶಪ್ರಾಯರು ಅವರ ಸ್ಮರಣೆ ಶ್ರೇಯಸ್ಕರ. ಹೀಗೆ ವಿಪರ್ಯಾಸದಲ್ಲಿ, ವೈರುಧ್ಯತೆಯಲ್ಲಿ ಸೂಕ್ಷ್ಮವಾದ ಉನ್ನತ ಆದರ್ಶ ಕಾಣುವ ಶಕ್ತಿ ನಮ್ಮ ಸಂಸ್ಕೃತಿಯ, ಪರಂಪರೆಯ ವಿಶೇಷ, ಹಿರಿಮೆ. ಈ ಸೂಕ್ಷ್ಮವಾದ ಉದಾರವಾದ ಮನೋಧರ್ಮವನ್ನು ಉಳಿಸಿ ಬೆಳೆಸಿದಷ್ಟೂ ನಮ್ಮ ಸಂಸ್ಕೃತಿ ಜಯಶಾಲಿಯಾಗುತ್ತದೆ


Comments

  1. Wonderfully explained. thanks for sharing this. I was not aware of this.

    ReplyDelete
  2. ವಾಲ್ಮೀಕಿ ರಾಮಾಯಣದಲ್ಲಿನ ಅಹಲ್ಯೆಯ ಉಪಾಖ್ಯಾನವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಪೂಜ್ಯ ಡಿವಿಜಿ ಅವರು ತಮ್ಮ ರಾಮಾಯಣ ಪರೀಕ್ಷಣಂ ಗ್ರಂಥದಲ್ಲಿ ಗೌತಮ ಋಷಿಯು ತನ್ನ ಪಶ್ಚಾತ್ತಾಪವನ್ನು "ಎನ್ನ ಕಥೆ ಮತ್ಸರದ ವೆಥೆ ಜೀವಿತಾಂತರ್ದೃಷ್ಟಿ ಹೀನ ಚರಿತೆ | ಅತ್ಮಗತಿಯಾತುರದಿ ಸಹಧರ್ಮಿತೆಯ ಮರೆತು ಕಣ್ತಡೆಯ ತೊಟ್ಟ ಹಯವಾದೆನಯ್ಯ" ಎಂದು ಮುಂತಾಗಿ ಶ್ರೀರಾಮನೊಂದಿಗೆ ನಿವೇದಿಸಿದನೆಂದು ಮನೋಜ್ಞವಾಗಿ ಬರೆದಿದ್ದಾರೆ.
    ಅಂದಹಾಗೆ ಪಂಚಕನ್ಯಯೆರನ್ನು ಸ್ಮರಿಸುವ ಶ್ಲೋಕದ ಇನ್ನೊಂದು ಆವೃತ್ತಿಯಲ್ಲಿ "ಅಹಲ್ಯಾ ದ್ರೌಪದೀ ತಾರಾ ತಾರಾ ಮಂಡೋದರೀ" ಎಂದಿದೆ. ಇದರಲ್ಲಿ ಒಬ್ಬ ತಾರೆಯು ಬೃಹಸ್ಪತಿಯ ಹೆಂಡತಿ, ಇನ್ನೊಬ್ಬಳು ವಾಲಿಯ ಹೆಂಡತಿ ಎಂದು ನನ್ನ ಅನಿಸಿಕೆ.

    ReplyDelete

Post a Comment