ನೂರೊಂದು ನೆನಪು ಚಿಲುಮೆಯಾಳದಿಂದ

 ನೂರೊಂದು ನೆನಪು ಚಿಲುಮೆಯಾಳದಿಂದ

ಹಾಸ್ಯ ಲೇಖನ - ಅಣುಕು ರಾಮನಾಥ್  



‘ನೂರು ವ್ಯೂಸು ಸಾಲದು ನಿನ್ನ ಓದಲು 

ನೂರಾರು ಲೈಕ್ಸು ಸಾಲದು ಈ ಅಂದ ಬಣ್ಣಿಸಲು

ಎನ್ನುವುದೇ ‘ಹೊರನಾಡ ಚಿಲುಮೆ’ ನೂರು ಮುಟ್ಟಿದ ಸಂದರ್ಭಕ್ಕೆ ಸರಿಯಾದ ಸಾಲುಗಳು’ ಎಂದ ಸೀನು. 

‘ಏನ್ಮಹಾ...’ ಎಂದೆ. ಒಳ್ಳೆಯದೆಲ್ಲವನ್ನೂ ಖಂಡಿಸುವುದು ಬುದ್ಧಿಜೀವಿಗಳ ಈಜನ್ಮಸಿದ್ಧ ಹಕ್ಕು. 

‘ಅದು ನೂರುನ್ನೀಸಾ’ 

‘ಏನೋ ಹಾಗಂದ್ರೆ?’ 

‘ನೂರು ತಲುಪಿದರೂ ಉನ್ನೀಸ್‌ನ ಹುರುಪನ್ನು ಹೊಂದಿರುವ ಟೀನೇಜರ್ ಅದು. ಹೊರನಾಡ ಚಿಲುಮೆಯ ಅಕ್ಷರಕ್ಷರಕ್ಕೂ ಅಕ್ಕರೆಯ ಅರ್ಥವಿದೆ’ ಸೀನು ತನ್ನ ಒಗಟುಮಾತುಗಳನ್ನು ಆರಂಭಿಸಿದ. ನಾನು ಎಂದಿನಂತೆ ಕೊಶ್ಚೆನ್ ಮಾರ್ಕಾದೆ. 

‘ಹೊ ಎಂದರೆ ಹೊನಲು; ವಿಷಯದ ಹೊನಲಿನಿಂದ ಹಾಸ್ಯದ ಹೊನಲಿನವರೆಗೆ ಎಲ್ಲವನ್ನೂ ಹೊತ್ತಿರುವ ಕಣಕ ಅದು. ಪುಟಪುಟಗಳಲ್ಲೂ ಪದೇ ಪದೇ ಮೆಲ್ಲುವ ರಸಮಯ, ಸರಸಮಯ ಹೂರಣ’ 

ಫಾರ್ ಒನ್ಸ್ ಹರಿಶ್ಚಂದ್ರನ ಪಥಕ್ಕೆ ಸರಿದು ಸೀನುವಿನ ಮಾತಿಗೆ ಸಮ್ಮತಿಸಿದೆ. 

‘ರ ಎಂದರೆ ರಮ್ಯತೆ. ಪುಟಗಳನ್ನು ವಿನ್ಯಾಸ ಮಾಡುವ ರೀತಿಯಿಂದ ಹಿಡಿದು ಸೂಕ್ತವಾದ ನೆಟ್‌ಲಭ್ಯ ಚಿತ್ರವನ್ನೋ, ನೆಟ್ಟಗಿರುವ ಚಿತ್ರವನ್ನೋ, ಮನದಲ್ಲಿ ನೆಟ್ಟ  ಚಿತ್ರವನ್ನೋ ಲೇಖನಕ್ಕೆ ಅಳವಡಿಸುವುದರ ಮೂಲಕ ರಮ್ಯತೆಯನ್ನು ಮೂಡಿಸುವ ಪರಿ ಅನನ್ಯ’ ಎಂದೆ. ‘ಆಬ್ಜೆಕ್ಷನ್ ಯುವರ್ ಆನರ್’ ಎನ್ನಲು ಏಕೋ ಮನಸ್ಸು ಬರಲಿಲ್ಲ. 

‘ನಾ ಎಂದರೆ ನಾರಾಯಣರೇ... ಮಿಂಚಿ ಮರೆಯಾಗುವ ಬದರಿ ನಾರಾಯಣರಿಂದ ಹಿಡಿದು ಮ್ಯಾಗಝೈನಿಗೆ ಚಿರಯೌವನ ಒದಗಿಸಲು ಅಹೋರಾತ್ರಿ ಹೆಣಗುವ ಕನಕಾಪುರ ನಾರಾಯಣರವೆಗೆ ‘ನಾ’ದ ಮಯವಾಗಿರುವುದಿ ಇದರ ಹಿನ್ನೆಲೆ. ‘ನಾ’ ಎಂದರೆ ನಾಲ್ದೆಸೆ ಎಂದೂ ಹೌದು. ನಾಲ್ಕೂ ದಿಕ್ಕುಗಳಿಂದ ಲೇಖನಗಳು ಹರಿದುಬರುವುದೂ ಇಲ್ಲಿ ಕಾಣಬರುತ್ತದೆ. ಬೆಟ್ಟದಿಂದ ಲೇಖನಗಳು ಬರುತ್ತವೆನ್ನುವುದಕ್ಕೆ ನಾಗಶೈಲ, ಮಲಗಿದ್ದಾಗಲೂ ಬರೆದು ಕಳುಹಿಸುವರ ಎನ್ನುವುದಕ್ಕೆ ನಾಗಶಯನ, ಕೋಟೆಕೊತ್ತಲಗಳಿಂದಲೂ ಲೇಖನಗಳು ಉದಿಸುತ್ತವೆ ಎನ್ನುವುದಕ್ಕೆ ಸ್ಮಿತಾ ಮೇಲುಕೋಟೆ, ಮೂರ್ತಿಗಳಿಂದಲೂ ಬರಹ ಬರುವುದೆನ್ನುವುದಕ್ಕೆ ಬೇಲೂರಿನ ರಾಮಮೂರ್ತಿ, ಮಾಸ್ರ‍್ಸ್ ಆಫ್ ರೈಟಿಂಗ್ ಆರ್ ಹ್ಯಾಪಿ ಟು ರೈಟ್ ಹಿಯರ್ ಎನ್ನುವುದಕ್ಕೆ ಮಾಸ್ಟರ್ ಹಿರಣ್ಣಯ್ಯನವರ ಲೇಖನಗಳು... ನಾಲ್ದೆಸೆಯ ‘ನಾ’ ನಾ ಮೆಚ್ಚಿದ ನಾಕಸದೃಶ ಸಾಹಿತ್ಯ ನಾಲೆ’ ಎಂದ ಸೀನು. 

‘ಎಲ್ಲ ಅಕ್ಷರಗಳು ಎಂದು ಹೇಳಿ ನಿನ್ನ ಹಳ್ಳ ನೀನೇ ತೋಡಿಕೊಂಡೆ. ಡ ಅಕ್ಷರಕ್ಕೆ ವಿವರಣೆ ನೀಡು ನೋಡೋಣ’ ಸವಾಲೆಸೆದೆ. 

‘ಡಂಬವಿಲ್ಲದೆ, ಡಗೆ ಇಲ್ಲದೆ ಡಬಡ್ಡಾಳಿಕೆಗೆ ಹೊರತಾಗಿ, ಕನ್ನಡದ ಡಂಗೂರವನ್ನು ಡೌಲಿನಿಂದ ಡಂಡಮಿಸುವ ಡವಾಲಿಗಳಿರುವ ಡೇರೆಯನ್ನು ಬಣ್ಣಿಸಲು ಡಕಾರದಲ್ಲಿ ಪದಗಳು ಹೇರಳವಾಗಿವೆ. ಇದು ಆಂಗ್ಲದ ನಾಡಿನಿಂದ ಕನ್ನಡಿಗರಿಗೆ ಸಲ್ಲುತ್ತಿರುವ ಕಾಣಿಕೆಯಾದ್ದರಿಂದ ಆಂಗ್ಲದ ‘ಡಿಎ’ ಎನ್ನುವುದನ್ನು ತೆಗೆದುಕೊಂಡರೂ ‘ಡಿಲೈಟ್‌ಫುಲ್ ಆಲ್ವೇಸ್’ ಎಂಬ ಅರ್ಥ ಮೂಡುತ್ತದೆ. ಕನ್ನಡಗರಿಮೆಯನ್ನು ಟಾಠಡಾಢಣಂ ಎಂದು ಕೊಂಡಾಡಿದ ಹಿರಿಯರ ಮಧ್ಯೆ ಡ ಅಕ್ಷರದಿಂದ ಪದಗಳಿಲ್ಲವೆನ್ನುವೆಯಾ, ಪೋಡಾ ಡೇ’ ಕಿಡಿಕಿಡಿಯಾದ ಸೀನು. 

‘ಪೋಡಾ ಡೇ ತಮಿಳಾಯಿತಲ್ಲ’ ಕಿಡಿಗೇಡಿಗೊಂದು ಎಳೆ ಸಿಕ್ಕಿತು. 

‘ಹೌದು. ಕನ್ನಡಿಗರಿಂದ ತಮಿಳು ಹೋಗಲಿ ಎನ್ನುವ ಅರ್ಥದಲ್ಲೇ ನಾನು ಅದನ್ನು ಬಳಸಿದ್ದು. ಚಿ ಎಂದರೆ ಚಿರಯೌವನ, ಚಿ ಎಂದರೆ ಚಿರಂಜೀವ, ಚಿ ಎಂದರೆ ಚಿನಕುರುಳಿ. ಇವೆಲ್ಲವೂ ಹೊರನಾಡ ಚಿಲುಮೆಯಲ್ಲಿ ಸೊಗಸಾಗಿ ಹರಿದುಬಂದಿವೆ.’

‘ಲು ಅಕ್ಷರದಲ್ಲಂತೂ ನೀನು ಸಿಕ್ಕಿಬಿದ್ದೆ’ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬ ಹಠವೆನ್ನದು – ಮೊದಲೇ ಮೀಸೆ ಬೋಳಿಸಿಕೊಂಡಿದ್ದೆನಲ್ಲ!

‘ಕನ್ನಡಿಗರ ಪರಿಸ್ಥಿತಿ ಲುಲಿತ(ಅಸ್ತವ್ಯಸ್ತಗೊಂಡ)ವಾದಾಗ ಲುಳಿ(ರಭಸ)ದಿಂದ ನುಗ್ಗಿ ಲುಲಾಯ(ಮಹಿಷ)ದಂತೆ ಕಾದಾಡುವ ಲ ಕೊಂಬು ಲುಗಳು ಇರುವ ಜಾಗವಿದು’ ಎಂದ ಸೀನು. 

‘ಏನದು ಲ ಕೊಂಬು ಲು?’ 

‘ಭಾಷೆಯ ಬಗ್ಗೆ ಲ ಎಂದರೆ ಲಹರಿ; ಲ ಎಂದರೆ ಲತೆ. ಭಾಷೆಯನ್ನು ಬಳ್ಳಿಯಂತೆ ಬಳಸಿಕೊಳ್ಳುವ, ಭಾಷೆಯ ತರುವಿಗೆ ಬಳ್ಳಿಯಂತೆ ಅಪ್ಪಿಕೊಳ್ಳುವ ಲಲಾಮರು ಇದ್ದು, ಅದೇ ಅವರಿಗೆ ಕೊಂಬು - ಹಿರಿಮೆ, ಗರಿಮೆ ಎಂಬ ಭಾವವನ್ನು ಹೊಂದಿದ್ದಾರೆ ಎನ್ನುವುದೇ ಲ ಕೊಂಬು ಲು ವಿನ ಅರ್ಥ’ 

ಸೀನು ನಾ ಕಂಡಂತೆ ಎಲ್ಲವನ್ನೂ ಅಲ್ಲಗಳೆಯುವವನು. ಇಂತಹವನಿಂದ ನೇರಸ್ತುತಿ! 

‘ಮೆ ಎಂದರೇನೆಂದೂ ಹೇಳಿಬಿಡು’ ಸಂಪೂರ್ಣ ಸಮ್ಮತಿ ಸೂಚಿಸಿಬಿಟ್ಟೆ. 

‘ಮೆರವಣಿಗೆ ಕಣಯ್ಯಾ... ಕನ್ನಡ ಕಲಿಕೆಯ ಮೆರವಣಿಗೆ, ಕನ್ನಡ ಭಾಷೆಯ ಮೆರಗು, ಮೆಚ್ಚುಗೆ, ಮೆಲುಕುಗಳ ಮೆರವಣಿಗೆ. ಕೇಶಿರಾಜನಿಂದ ಕೈಲಾಸಂವರೆಗೆ ಎಂತೆಂತಹ ದಿಗ್ಗಜರ ಮೆಲುಕು ಮೂಡಿದೆ ಈ ಪುಟಗಳಲ್ಲಿ! ಕನ್ನಡದವರನ್ನು ಕರೆದು, ಹಾಡಿಸಿ, ಆಡಿಸಿ, ಮೆಚ್ಚುಗೆ ಸೂಚಿಸಿದುದನ್ನು ದಾಖಲಿಸಿದ ಪತ್ರಿಕೆ ಈ ಹೊರನಾಡ ಚಿಲುಮೆ’ ಎಂದ ಸೀನು. 



‘ನೂರು ತುಂಬಿದ್ದು ಸಾರ್ಥಕವೇ ಅನ್ನು’ ಎಂದೆ. 

‘ನೂರು ಎನ್ನುವುದರಲ್ಲೇ ಊರು ಎಂದಿದೆ. ಊರು ಎಂದರೆ ತೊಡೆ. ಕನ್ನಡಮ್ಮನ ತೊಡೆಯಲ್ಲಿ ಆಡುವುದರಲ್ಲಿ ಸಂತೋಷ ಕಾಣಲೆಂದೇ ಇದಕ್ಕೆ ನೂರು ತುಂಬಿರುವುದು. ನೂರನ್ನು ಅಂಕಿಯಲ್ಲಿ ಕಂಡಾಗಂತೂ ಮತ್ತಷ್ಟು ವಿಷಯಗಳು ಹೊಮ್ಮುತ್ತವೆ’ ಒಳ್ಳೆಯ ಲಹರಿಯಲ್ಲಿದ್ದ ಸೀನು. 

‘ಒದರಿಬಿಡು’ ಅದೇಶಿಸಿದೆ. 

‘೧ ಜಗವೆಲ್ಲ ಒಂದೇ ಎಂಬ ಕನ್ನಡಿಗರ ಬುದ್ಧಿಯನ್ನು ತೋರಿಸುತ್ತದೆ. ಎಲ್ಲ ದೇಶ, ರಾಜ್ಯಗಳವರನ್ನು ಕರೆದು ಅವರವರ ಭಾಷೆಯಲ್ಲೇ ಮಾತನಾಡುತ್ತಾ, ಕನ್ನಡಿಗರೊಡನೆಯೂ ಇಂಗ್ಲಿಷ್‌ನಲ್ಲಿ ಮಾತನಾಡುವುದೇ ಕನ್ನಡಿಗನ ಜಾಯಮಾನವೆಂದು ಕೈಲಾಸಂ ಹೇಳಿದ್ದರು. ‘ಒಂದೇ ನಾಡು ಒಂದೇ ಕುಲವು ಒಂದೇ ದೈವವು’ ಎಂದು ಯಾರು ಹೇಳಲಿ, ಬಿಡಲಿ, ಕನ್ನಡಿಗರಂತೂ ಅದನ್ನು ಅನುಷ್ಠಾನಕ್ಕೆ ತಂದುಬಿಟ್ಟಿದ್ದಾರೆ’ ಬ್ರೇಕಿಲ್ಲದ ಬೈಕಿನಂತೆ ಸಾಗಿತ್ತು ಸೀನುವಿನ ಹೊರನಾಡ ಚಿಲುಮೆಯ ಗುಣಗಾನ. 

‘ಎರಡು ಸೊನ್ನೆಗಳನ್ನು ಬಿಟ್ಟೆಯಲ್ಲಾ...’ 

‘ಕನ್ನಡಮ್ಮನ ಪಯೋಧರಗಳ ದ್ಯೋತಕಗಳು ಅವು. ಕನ್ನಡಾಮೃತವನ್ನು ನೂರನ್ನು ಮುಟ್ಟಿದ ಈ ಸಂದರ್ಭದಲ್ಲಿ ಮತ್ತೆ ಹೀರಿ ಮತ್ತಷ್ಟು ಸುಪುಷ್ಟರಾಗಿರಿ ಎನ್ನುತ್ತವೆ ಆ ಶೂನ್ಯದ್ವಯಗಳು. ಸೊನ್ನೆಯೇ ಒಂದು ವಿಶೇಷ ಸಂಖ್ಯೆ’ 

‘ವಿವರಿಸು.’

‘ಎಲ್ಲಿಯೂ ಚೂಪು ತುದಿಗಳಿಲ್ಲದ ಸಂಖ್ಯೆಯೆಂದರೆ ಅದೊಂದೇ. ಅರಬ್ಬೀ ಭಾಷೆಯ ಹೊರತಾಗಿ ‘ಶೂನ್ಯ’ ಎನ್ನುವುದನ್ನು ಎಲ್ಲ ಭಾಷೆಗಳಲ್ಲಿಯೂ ಸೂಚಿಸುವಂತಹ ಸಂಖ್ಯೆ ಅದೊಂದೇ. ‘ಶೂನ್ಯಮದಃ ಶೂನ್ಯಮಿದಂ | ಶೂನ್ಯಾತ್ ಶೂನ್ಯಮುದಚ್ಯತೇ | ಶೂನ್ಯಸ್ಯ ಶೂನ್ಯಮಾದಾಯ ಶೂನ್ಯಮೇವಾವಿಶಿಷ್ಯತೇ || ಎನ್ನುವುದೇ ಅದರ ಸಂಕೇತ. ಕನ್ನಡ ನಶಿಸುತ್ತಿದೆ. ಅದು ಶೂನ್ಯಸ್ಥಿತಿಯನ್ನು ತಲುಪುತ್ತದೆ ಎನ್ನುವರು ತಿಳಿಯಬೇಕಾದ ಶ್ಲೋಕವಿದು. ಶೂನ್ಯವು ಕನ್ನಡ. ಶೂನ್ಯವು ಇತರ ಭಾಷೆಗಳು ಆದರೂ ಆ ಶೂನ್ಯದಿಂದ ಈ ಶೂನ್ಯವು ಉದ್ಭವಿಸುತ್ತದೆ. ಕಂಗ್ಲಿಷ್ ಹಿಂಗ್ಲಿಷ್‌ಗಳ ಶೂನ್ಯದಿಂದ ಕನ್ನಡದ ಶೂನ್ಯವನ್ನು ಹೊರತೆಗೆದಾಗ ಕನ್ನಡದ ಶೂನ್ಯವು ಉಳಿಯುತ್ತದೆ ಎಂದು ಇದರ ಅರ್ಥ. ಶೂನ್ಯ ಎಂದರೆ ಪೂರ್ಣತೆಯ ಸಂಕೇತ. ಹೀಗಾಗಿ ಕನ್ನಡವೂ ಪೂರ್ಣತೆಯ ಸಂಕೇತ. ಆಡಿದುದನ್ನೇ ಬರೆಯುವ, ಬರೆದದ್ದನ್ನೇ ಓದುವ ಅನ್ಯ ಭಾಷೆ ಇಲ್ಲವೀ ಜಗದೊಳ್’ ಎಂದುಸುರಿದ ಸೀನು. 

‘ಹೊರನಾಡ ಚಿಲುಮೆಗೆ ಜೈ. ಮೇ ದ ಫೌಂಟೆನ್ ಬಿ ಎಟರ್ನಲ್’ ಎಂದೆ. 

ಸೀನು ಸಂಪ್ರೀತನಾದ.  


Comments

  1. ಹಾಸ್ಯವನ್ನು ಹಾಸುಹೊಕ್ಕಾಗಿ ಹೊಸೆದು, ಹೊರನಾಡ ಚಿಲುಮೆಯ ಹೂರಣವನ್ನು ಹದವವಾಗಿ ತೆಗೆದು, ನೂರರ ಸಂಭ್ರಮವನ್ನು ಹತ್ತು ಪಟ್ಟು ಹೆಚ್ಚಿಸಿ, ಸಾಹಿತ್ಯ ಧಾರೆಯ ಚಿಲುಮೆಯನ್ನೇ ಚಿಮ್ಮಿಸಿದ್ದೀರಿ.
    ಅಂದಹಾಗೆ ಚಿಲುಮೆ ಭರ್ಜರಿಯಾಗಿ ಚಿಮ್ಮಲು, ರಾಮ್ ಬಿಡುವ ನಗೆ ಬಾಣಗಳೂ ಕಾರಣ ಎಂದು ಸೀನು ಮರೆತರೂ ಓದುಗರು ಮರೆಯಲಾರರು.

    ReplyDelete
  2. ಹೊರನಾಡ ಚಿಲುಮೆಯ ಪ್ರತಿಯೊಂದು ಅಕ್ಷರಕ್ಕೂ ಮಾತ್ರವಲ್ಲದೆ ಸಂಖ್ಯೆ ನೂರರ ಅಂಕೆಗಳಿಗೂ ಸೃಜನಶೀಲ ಮತ್ತು ಸಂದರ್ಭೋಚಿತವಾಗಿ ಈ ರೀತಿಯ ವಿವರಣೆ ನೀವು ಮಾತ್ರ ಕೊಡಬಲ್ಲಿರಿ!👏👏

    ReplyDelete
  3. This comment has been removed by the author.

    ReplyDelete
  4. ವಿವರಣೆ ಬಲು ಚೆನ್ನಾಗಿದೆ.

    ReplyDelete
  5. ಚಿಲುಮೆ ಆರಂಭದಿಂದಲೂ ಲೇಖನ ಕಲಿಸುತ್ತಿರುವ ರಾಮ್ ಅವರಿಗೆ ಧನ್ಯವಾದಗಳು.ಲೇಖಕರು ಆಗೊಮ್ಮೆ ಈಗೊಮ್ಮೆ ಲೇಖನ ಬರೆದು ಕಳಿಸಿದರೆ ರಾಮ್ ನೀವು ಮಾತ್ರ ಸತತವಾಗಿ ಅದ್ಭುತವಾದ ಹಾಸ್ಯಲೇಖನಗಳನ್ನೇ ಕೊಟ್ಟಿದ್ದೀರಿ. ನಿಮ್ಮ ಕಲ್ಪನಾ ಶಕ್ತಿಒಂದು ಸಲಾಂ. ಆಡುಮುಟ್ಟದ ಸೊಪ್ಪಿಲ್ಲ ತಾವು ಮುಟ್ಟದ ವಸ್ತುವಿಲ್ಲ, ಈ ಲೇಖನದಲ್ಲಿ ಪ್ರತಿಅಕ್ಷರಕ್ಕೂ ಅದೆಷ್ಟು ಹಾಸ್ಯ ತುಂಬಿ ಹೋಗಳಿ ಬರೆದಿದ್ದೀರಿ. ಎಂದೂ ಮರೆಯಲಾಗದ ಅಮೂಲ್ಯ ಲೇಖನ ಕಮ್ ಹಾಸ್ಯ ಕಮ್ ಶುಭಾಶಯ ಕಮ್ (ಬೀಚಿ ತಿಮ್ಮನಂತೆ) ಸೀನೂ ಕೂಡಾ ಈ ಲೇಖನದಲ್ಲಿ ಸೇರಿದ್ದು ಬೋನಸ್ .ಸೂಪರ್ ಸೀನೂ ಇಮಾಜಿನೇಷನ್ಸ್

    ReplyDelete

Post a Comment