ಕನ್ನಡಮ್ಮನ ಮುತ್ತಿನ ಮುಕುಟ ಮುತ್ತುರಾಜ್

 ಕನ್ನಡಮ್ಮನ ಮುತ್ತಿನ ಮುಕುಟ ಮುತ್ತುರಾಜ್

ಲೇಖನ - ಶ್ರೀ  ಅಶೋಕ್ ಕುಮಾರ್   



ಕನ್ನಡಿಗರೆಲ್ಲರ ಭಾಷೆ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವೇ ಆಗಿ, ಕನ್ನಡಿಗರನ್ನು ಸೂಜಿಗಲ್ಲಿನಂತೆ ಸೆಳೆದು ಅಸೀಮ ದಂತ ಕಥೆಯಾದವರು ಮುತ್ತುರಾಜ್ ಅಥವಾ ರಾಜಕುಮಾರ್ ಎಂಬ ಮೇರು ವ್ಯಕ್ತಿತ್ವ. ಏಕೆ ಅವರು ನಮಗೆಲ್ಲ ಪ್ರಿಯರಾದರು?  ಎಂದು ಯೋಚಿಸಿದಾಗ ನಾವೆಲ್ಲಾ ಚಿಕ್ಕ ವಯಸ್ಸಿನಿಂದ ಬೆಳೆದದ್ದೇ ಅವರ ಚಿತ್ರಗಳನ್ನು ನೋಡಿ. ಅವರ ಚಿತ್ರಗಳು ಅಂದರೆ ಸಾಧಾರಣವಾಗಿ ಮನೆಮಂದಿಯೆಲ್ಲ ಕುಳಿತು ನೋಡಬಹುದಾದಂತಹ ಒಳ್ಳೆಯ ಚಿತ್ರಗಳು ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರು ಅಂದು ಅಭಿನಯಿಸುತ್ತಿದ್ದ ಪಾತ್ರಗಳು ಬೇಡರಕಣ್ಣಪ್ಪ ದಿಂದ ಪ್ರಾರಂಭಿಸಿ ಕನಕದಾಸ, ಮಂತ್ರಾಲಯ ಮಹಾತ್ಮೆ, ಸಂತ ತುಕಾರಾಮ್, ಭಕ್ತ ಕುಂಭಾರ ಹೀಗೆ ಭಕ್ತಿ ತುಂಬಿದ ಪಾತ್ರಗಳನ್ನೂ ಅಭಿನಯಿಸುವಾಗಂತೂ, ಅದಕ್ಕೆ ಅವರು ಜೀವ ತುಂಬಿದ ಹಾಗೆ ಬಹುಷಃ ಭಾರತದಲ್ಲಿಯೇ ಇನ್ನಾರಿಗೂ ಸಾಧ್ಯವೇ ಇಲ್ಲವೇನೋ ಅನ್ನುವುದು ನಮ್ಮ ಭಾವನೆ. ಏಕೆಂದರೆ ರಾಜಕುಮಾರ್ ಅಭಿನಯಿಸಿದಷ್ಟು ಭಕ್ತಿಯ ಪಾತ್ರಗಳನ್ನು ಬೇರೆ ಭಾಷೆಗಳಲ್ಲಿ ಒಬ್ಬ ನಟ ನಟಿಸಿದ ಉದಾಹರಣೆಯೇ ಇಲ್ಲ. ಹೀಗಾಗಿ ನಾವಂತೂ ಇಂದಿಗೂ ಅವರ ಹಳೆಯ ಚಿತ್ರಗಳನ್ನು ಆಯಾ ಪಾತ್ರಗಳಲ್ಲಿ ಪರಕಾಯ ಪ್ರವೇಶವೇ ಮಾಡಿದ ಅವರ ಮುಖಭಾವ, ದೈನ್ಯತೆ ಎಲ್ಲವನ್ನೂ ತುಂಬು ಅಭಿಮಾನದಿಂದ ನೋಡುತ್ತಲೇ ಇರುತ್ತೇವೆ. 



ಹೀಗೆ ಭಕ್ತಿರಸ ಪಾತ್ರಗಳು ಮಾತ್ರವಲ್ಲ ಮುಂದೆ ಅಭಿನಯದ ನವರಸಗಳಿಗೂ ಜೀವ ತುಂಬುತ್ತ ಅವರು ವ್ಯಕ್ತಿಯಿಂದ ಶಕ್ತಿಯಾಗಿ ಬೆಳೆದು ಕನ್ನಡದ ಅವಿಭಾಜ್ಯ ಅಂಗವೇ ಆಗಿ ಹೋದದ್ದು ಇತಿಹಾಸವೇ. ಕಡೆಗೆ ಅವರು ನಟಿಸಿದ್ದೆಲ್ಲ ಪ್ರಿಯವೇ ಆಗುತ್ತಾ ಬಂದಿದ್ದು ಮಾತ್ರವಲ್ಲ, ಸಾಮಾಜಿಕ ಚಿತ್ರಗಳಲ್ಲಿನ ಅವರ ಸಂಭಾಷಣೆಯ ಶೈಲಿಯಂತೂ ಕನ್ನಡವೆಂದರೆ ಭಾವಪೂರ್ಣವಾಗಿ ಮಾತನಾಡುವ ರಾಜಕುಮಾರ ಅವರ ಭಾಷೆಯ ಶೈಲಿಯೇ ಎಂದು ಮನಸಿನೊಳಗೆ ಅಚ್ಚೊತ್ತಿದಂತಾಗಿ ಮನೆಯಲ್ಲಿ ಒಲವಿನ ಹಿರಿಯಣ್ಣನ ಮಾತಿನಂತೆಯೋ, ಅಕ್ಕರೆಯ ತಂದೆಯ ಮಾತಿನಂತೆಯೋ ಅನ್ನಿಸುತ್ತಾ ಆಗಿನ ಕಾಲದಲ್ಲಿ ರೇಡಿಯೋಗಳಲ್ಲಿ ಚಿತ್ರದ sound track ಗಳು ಮಾತ್ರ ಬರುತ್ತಿದ್ದಾಗ ಅವರ ಮಾತುಗಳನ್ನು ಕೇಳುವುದಕ್ಕೆ ಕಾಯುತ್ತಾ ಇದ್ದ ದಿನಗಳು ನೆನಪಿಗೆ ಬರುತ್ತದೆ. ಚಿತ್ರಗಳಲ್ಲಿನ ಅವರ ಪಾತ್ರವೂ ಅದೇ ರೀತಿ , ಒಂದರಲ್ಲಿ ಆದರ್ಶ ಅಣ್ಣನಾದರೆ, ಮತ್ತೊಂದರಲ್ಲಿ ಆದರ್ಶ ಪ್ರೇಮಿ, ಪತಿ, ತಮ್ಮ, ತಂದೆ, ಹೀಗೆ ಎಲ್ಲ ಪಾತ್ರಗಳಲ್ಲಿ ಮಿಂಚುತ್ತಾ ಹೋದದ್ದು ಹೇಗೆ ಅಂತ ಯೋಚಿಸಿದರೆ ಅವರ ಚಿತ್ರದ ಕಥೆಗಳನ್ನು ಸ್ವಲ್ಪ ಗಮನಿಸುವ ಹಾಗಾಗುತ್ತದೆ. 



ಸಾಧಾರಣವಾಗಿ ಸಾಮಾಜಿಕ ಚಿತ್ರದಲ್ಲಿನ ಅವರ ಪಾತ್ರಗಳು ತ್ಯಾಗಮಯ ವ್ಯಕ್ತಿತ್ವವನ್ನು ಬಿಂಬಿಸುತ್ತಿದ್ದವು. ಚಿತ್ರ ನಿರ್ಮಾಣ, ಕಥೆ ಯಾವುದರ ಬಗ್ಗೆಯೂ ಹೆಚ್ಚಿನ ಜ್ಞಾನವಿಲ್ಲದಿದ್ದರೂ ಪ್ರೇಕ್ಷಕನಾಗಿ, ಹೆಚ್ಚು ಕಡಿಮೆ ಎಲ್ಲರಿಗೂ ಯಾವರೀತಿಯ ಪಾತ್ರಗಳು ತುಂಬಾ ಮೆಚ್ಚುಗೆಯಾಗುತ್ತವೆ ಅನ್ನುವುದನ್ನು ಹೇಳಬಲ್ಲೆ, ಅದೇ ತ್ಯಾಗಮಯ ವ್ಯಕ್ತಿತ್ವ. ಇದು ಕನ್ನಡ ಚಿತ್ರಪ್ರೇಮಿಗಳಿಗೆ ಮಾತ್ರವಲ್ಲದೆ ಸಮಸ್ತ ವಿಶ್ವದ ಜನಗಳಿಗೂ ಅದರಲ್ಲೂ ಭಾರತೀಯ ಜನತೆಗೆ ಹೃದಯಕ್ಕೆ ಬಹಳ ಬಹಳ ಹತ್ತಿರವಾಗುವ ಪಾತ್ರ. ನಾವೆಲ್ಲ ``ಸತ್ಯವೇ ಭಗವಂತನೆಂಬ ಪುಣ್ಯಕೋಟಿ''ಯ ಕಥೆಯನ್ನು ಪಾಠಗಳಲ್ಲಿ ಕೇಳುತ್ತಾ ಕಣ್ಣೀರು ಮಿಡಿಯುತ್ತಾ ಬೆಳೆದ ಮಕ್ಕಳು ಅನ್ನುವುದನ್ನು ಹೇಗೆ ತಾನೇ ಮರೆಯಲು ಸಾಧ್ಯ? ಭಾರತೀಯರ ಅದೇ ಭಾವನೆಯೇ ಗಾಂಧೀಜಿಯವರನ್ನು ಅಷ್ಟು ದೊಡ್ಡ ನಾಯಕನನ್ನಾಗಿಸಿದ್ದು, ಮಹಾತ್ಮನನ್ನಾಗಿಸಿದ್ದು, ರಾಷ್ಟ್ರಪಿತನನ್ನಾಗಿಸಿದ್ದು ಅನ್ನುವುದನ್ನೂ ಜ್ಞಾಪಿಸಿಕೊಳ್ಳಬೇಕು. ಏಕೆಂದರೆ ನಮ್ಮ ಸಂಸ್ಕೃತಿಯೇ ಅದು. ಮತ್ತೆ ಮತ್ತೆ ಪ್ರತಿಧ್ವನಿಸುವ  ''ಕರ್ಮದಿಂದ, ಸಂತಾನೋತ್ಪತ್ತಿಯಿಂದ, ಹಣದಿಂದ ಅಲ್ಲದೇ ತ್ಯಾಗದಿಂದ ಮಾತ್ರವೇ ಅಮೃತತ್ವ'' ಅನ್ನುವುದು ವೇದವಾಣಿಯೇ ಅಲ್ಲವೇ? ಇದು ಭಾರತ ಮತ್ತು ಭಾರತೀಯರಿಗೆ ಮಾತ್ರವೇ ಸೀಮಿತವಾದ ಭಾವನೆಯಲ್ಲ. ಎಲ್ಲರಿಗೂ ಈ ತ್ಯಾಗಮಯ ವ್ಯಕ್ತಿತ್ವ ಅದೇ ಪರಿಣಾಮವನ್ನು ಬೀರುತ್ತದೆ ಎನ್ನುವುದಕ್ಕೆ ಉದಾಹರಣೆಗಳು ಹಲವಾರು. ಅದರಲ್ಲಿನ ಕೆಲವು ಪ್ರಮುಖ ಹೆಸರುಗಳು, ಏಸುಕ್ರಿಸ್ತ, ಮದರ್ ತೆರೇಸಾ, ಫ್ಲಾರೆನ್ಸ್ ನೈಟಿಂಗೇಲ್, ಡಾಕ್ಟರ್ ಝಿವಾಗೊ ಮತ್ತಿತರರು. 



ಕುಟುಂಬಗಳಲ್ಲಿ ತ್ಯಾಗಮಯ ವ್ಯಕ್ತಿತ್ವವನ್ನು ಅಭಿನಯಿಸಿ ತೋರಿಸಿದ ರಾಜಕುಮಾರರ ಚಿತ್ರಗಳು ಬಹಳಷ್ಟು. ಅದರಲ್ಲೊಂದು ಕರ್ನಾಟಕದಲ್ಲಿ ಇತಿಹಾಸ ನಿರ್ಮಾಣ ಮಾಡಿದ ‘’ಬಂಗಾರದ ಮನುಷ್ಯ’’ ಚಿತ್ರ. ಬೆಂಗಳೂರಿನ ಚಿತ್ರಮಂದಿರಕ್ಕೆ ಸುತ್ತಮುತ್ತಲಿನ ಹಳ್ಳಿಗಳೆಲ್ಲದರಿಂದ ಜನಗಳು ಜಾತ್ರೆಗೆ ಬಂದಂತೆ ಮುತ್ತಿಗೆ ಹಾಕುತ್ತಾ ಆ ಚಿತ್ರವನ್ನು ವರ್ಷಗಳ ವರೆಗೆ ನಡೆಯುವಂತೆ ಮಾಡಿದ್ದರು. ಅಂತದ್ದೇನಿದೆ ಆ ಚಿತ್ರದಲ್ಲಿ? ಎಂದು ನೋಡಲು ಹೋದ ನನಗಂತೂ ಇವತ್ತಿಗೂ ಆ ಚಿತ್ರವೊಂದು ಮರೆಯಲಾಗದ ಆದರ್ಶ ಚಿತ್ರವಾಗಿ ಉಳಿದು ಹೋಗಿದೆ. ಬಹಳವೇ ಸಾಧಾರಣ ಚಿತ್ರವಾದ ಅದರಲ್ಲಿ ಮನಸ್ಸಿನಲ್ಲಿ ಉಳಿಯುವುದು, ಒಂದು ಕುಟುಂಬದಲ್ಲಿ ನಾಯಕನ ತ್ಯಾಗಮಯ ವ್ಯಕ್ತಿತ್ವ. ಕಡೆಯಲ್ಲಿ ಎಲ್ಲವನ್ನೂ ಬಿಟ್ಟು ಅನಂತದೆಡೆಗೆ ಅವನು ಹೊರಟು ಹೋಗುವುದು ಮರೆಯಲು ಸಾಧ್ಯವೇ ಇಲ್ಲ.  



ಹಾಗೆಯೇ ಕಸ್ತೂರಿ ನಿವಾಸ, ಭಾಗ್ಯವಂತರು ಅಂತಹ ಚಿತ್ರಗಳು ''Only those Live, who Live for others'' ಅನ್ನುವ ವಿವೇಕಾನಂದರ ವಾಣಿಯನ್ನು ಸಾಕಾರಗೊಳಿಸಿ ಕಣ್ಣಿಗೆ ಕಟ್ಟುವಂತೆ ಮಾಡಿದ ಪಾತ್ರಗಳೇ ಅಲ್ಲವೇ? ಆ ಪಾತ್ರಗಳನ್ನೆಲ್ಲ ನೋಡುತ್ತಾ ನೋಡುತ್ತಾ ಮನಸ್ಸಿನಾಳದಲ್ಲಿ ಮೂಡಿದ್ದ ಆ ಪಾತ್ರಗಳು ಗೌಣವಾಗುತ್ತಾ ರಾಜಕುಮಾರ ಎನ್ನುವ ಆ ವ್ಯಕ್ತಿ ಕನ್ನಡಿಗರ ಮನಸ್ಸಿನಲ್ಲಿ ಮೇರು ಸದೃಶ ವ್ಯಕ್ತಿಯಾಗಿ ಬೆಳೆದು ಚಿರವಾಗಿ ನಿಂತಿದ್ದಾರೆ ಎಂದರೆ ಉತ್ಪ್ರೇಕ್ಷೆಯಲ್ಲ. ಅವರ ಎಲ್ಲ ಸಾಧನೆಗಳನ್ನು ಸಮಗ್ರವಾಗಿ ತೆಗೆದುಕೊಂಡಾಗ ಚಿಕ್ಕ ಪುಟ್ಟ ವಿಷಯಗಳೆಲ್ಲ ಗೌಣವಾಗಿ ಹೋಗಿ ಕರ್ನಾಟಕದ ಕನ್ನಡ ಜನತೆಗೆ ಅವರಂತಹ ದೊಡ್ಡ ವ್ಯಕ್ತಿ, ಒಬ್ಬ Father figure ನ್ನು ಮತ್ತೆ ಇನ್ನೊಬ್ಬರಲ್ಲಿ ಕಾಣಲು ಇನ್ನೆಷ್ಟು ಶತಮಾನಗಳು ಕಾಯಬೇಕೋ ಅಂತ ಯೋಚಿಸುತ್ತಿರುವಂತೆಯೇ ಇನ್ನೊಬ್ಬರಲ್ಲ,  ಅವರೇ ನಮಗಾಗಿ ಮರು ಜನ್ಮ ತಾಳಿ ಬರಬೇಕೇನೋ ಎನಿಸುತ್ತದೆ. 



ವೇದವಾಣಿಯಂತೆ ಅವರ ತ್ಯಾಗಮಯ ಪಾತ್ರಗಳು ಹಾಗೂ ಜೀವನಶೈಲಿಯಿಂದಾಗಿ ಕೋಟ್ಯಾಂತರ ಹೃದಯಗಳಲ್ಲಿ ಅಮೃತತ್ವವನ್ನು ಪಡೆದಿರುವುದು ಪ್ರಿಯವಾದ ಸತ್ಯ.  

**************

Comments

  1. ಉತ್ತಮ ಲೇಖನ. ರಾಜಕುಮಾರ್ ಅವರು ಕನ್ನಡದ ಮಹಾನ್ ನಟರು. ಅವರ ಉದಾತ್ತ ವ್ಯಕ್ತಿತ್ವವನ್ನು ಮರು ಪರಿಚಯ ಮಾಡಿಕೊಟ್ಟಿರುವ ಅಶೋಕ್ ಅವರಿಗೆ ಧನ್ಯವಾದಗಳು.

    ReplyDelete
    Replies
    1. ಧನ್ಯವಾದಗಳು ಸರ್. ನನ್ನ ಹೃದಯದಲ್ಲಿ ಮೂಡಿರುವ ಅವರ ವ್ಯಕ್ತಿತ್ವಕ್ಕೊಂದು ಸಂಭಾವ್ಯ ಕಾರಣದ ಜಿಜ್ಞಾಸೆ ಯನ್ನಷ್ಟೇ ನಾನು ಮಾಡಲು ಪ್ರಯತ್ನಿಸಿದ್ದು. ಎಂದಿನಂತೆ ನಿಮ್ಮ ಬೆನ್ನು ತಟ್ಟುವಿಕೆ ಉತ್ಸಾಹ ಮುಡಿಸಿದೆ.

      Delete
  2. ಕನ್ನಡಿಗರ ಕಣ್ಮಣಿ ರಾಜ್ ಕುಮಾರ್ ಅವರ ಪರಿಚಯವನ್ನು ವಿಭಿನ್ನ ಶೈಲಿಯಲ್ಲಿ ಮಾಡಿಕೊಟ್ಟಿದ್ದೀರ. ಅವರನ್ನು, ಅವರ ಚಿತ್ರಗಳನ್ನು ಬರಿದೇ ಹೊಗಳದೆ, ಅವರ ಅಭಿನಯದ ವೈಶಿಷ್ಟ್ಯವನ್ನು ಎತ್ತಿ ತೋರಿದ್ದೀರಿ.

    ReplyDelete
    Replies
    1. ಧನ್ಯವಾದಗಳು. ನಿಮ್ಮ ಅಭಿಪ್ರಾಯವು ಮುದ ನೀಡಿದೆ. ಕನ್ನಡ ಪತ್ರಿಕೆಗಾಗಿ ಲೇಖನ ಬರೆಯಬೇಕೆನಿಸಿದಾಗ ನೆನಪಿಗೆ ಬಂದದ್ದು ನಮ್ಮ ಭಾಷೆಗೇ ಪರ್ಯಾಯ ಪದವೆನಿಸಿದ "ರಾಜ್ ಕುಮಾರ್".

      Delete
  3. ಕನ್ನಡ ಚಿತ್ರರಂಗದ ಅಮೂಲ್ಯ ರತ್ನ ಮುತ್ತಣ್ಣನ ಬಗ್ಗೆ ಚೆಂದದ ಲೇಖನ ಬರೆದಿದ್ದೀರಿ ಶ್ರೀ ಅಶೋಕ್ ರವರೆ, ಭಕ್ತಿ ತ್ಯಾಗಗಳ ಪಾತ್ರ ನೆನೆಯುವುದಲ್ಲದೆ ಗಾಂಧೀಜಿ, ವಿವೇಕಾನಂದರನ್ನೂ ಉದಾಹರಿತವಾಗಿಟ್ಟುಕೊಂಡು ಅಪರೂಪದ ಲೇಖನ ಕೊಟ್ಟಿದ್ದೀರಿ. ಧನ್ಯವಾದಗಳು

    ReplyDelete

Post a Comment