ನುಡಿದರೆ ಮುತ್ತಿನ ಹಾರದಂತಿರಬೇಕು..

 ನುಡಿದರೆ ಮುತ್ತಿನ ಹಾರದಂತಿರಬೇಕು..ಕಾಮೆಂಟ್ ಮಾಡಿದರೆ ಖುಷಿಯಾಗುವಂತಿರಬೇಕು....

ಲೇಖನ - ಶ್ರೀಮತಿ ಅನು ಶಿವರಾಂ 

“ನೋಡ್ದ್ಯಾ ಈ ಹಳದಿ ಬಣ್ಣ ನಿಂಗೆ ಎಷ್ಟು ಚೆನ್ನಾಗಿ ಒಪ್ಪುತ್ತೆ, ಅವತ್ತು ಹಾಕಿಕೊಂಡಿದ್ಯಲ್ಲ ಆ ನೀಲಿ ಬಣ್ಣ, ಅದು ಸ್ವಲ್ಪಾನೂ ಚೆನ್ನಾಗಿರಲಿಲ್ಲ, ನೀನು ಎಷ್ಟು ಕಪ್ಪಗೆ ಕಾಣಿಸ್ತಿದ್ದೆ”.

“ಪರವಾಗಿಲ್ಲವೇ ಈಗ ಎಷ್ಟೊಂದು ತೆಳ್ಳಗಾಗಿದೀಯ,  ಅಬ್ಬ ಮುಂಚೆ ಎಷ್ಟು ದಪ್ಪಕ್ಕಿದ್ದೆ, ! ಒಳ್ಳೆ ರೋಡ್ ರೋಲರ್ ತರ! ಏನು ಡಯಟ್ ಮಾಡಿದ್ಯಾ?”

ಈ ಮೇಲಿನ ಮಾತುಗಳನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀವಿ,ನಮಗೆ ತಿಳಿಯದಂತೆ ಅಡಿಯೂ ಇರಬಹುದೇನೋ!  ಯಾರಾದರೂ ಹೊಗಳಿದಾಗ ಅಥವಾ ಮೆಚ್ಚ್ಚುಗೆಯ ಮಾತನಾಡಿದಾಗ, ಖುಷಿಯಾಗುವುದು ಸಹಜ. ಆದರೆ ಇಲ್ಲಿ ಮೆಚ್ಚುಗೆಯ ಜೊತೆ ಜೊತೆಯಲ್ಲೇ ಹಿಂದಿನ ಅಪ್ರಿಯ ಸತ್ಯದ ಕಪ್ಪು ಛಾಯೆಯೂ ಇದೆ. ಅದು ಬೇಕೆ? ಬರಿ ಪ್ರಿಯ ಸತ್ಯದ ನುಡಿಯೊಂದೇ ಇದ್ದಿದ್ದರೆ ಕೇಳಿದವರಿಗೆ ಎಷ್ಟು ಸಂತೋಷವಾಗಿರಬಹುದಿತ್ತು.  


ಈ ವಾಕ್ಯಗಳ ಮೊದಲ ಅರ್ಧವನ್ನು ಮಾತ್ರ  ಹೇಳಿ ನಿಲ್ಲಿಸಿದ್ದರೆ ಹೇಳಿದವರ ಗಂಟೇನು ಹೋಗುತಿತ್ತು?  ಕೇಳಿದವರಿಗೂ ಸಂತೋಷ, ಹೇಳಿದವರಿಗೂ ಮರ್ಯಾದೆ.

ಇಂಗ್ಲೀಷ್ ಭಾಷೆಯಲ್ಲಿ ಇದನ್ನು ‘ಲೆಫ್ಟ್ ಹ್ಯಾಂಡೆಡ್  ಕಾoಪ್ಲಿಮೆಂಟ್’ ಅನ್ನುತ್ತಾರೆ. ಹೊಗಳಿದ ಹಾಗೂ ಇರಬೇಕು, ಆದರೆ ಮನಪೂರ್ವಕವಾಗಿ ಮೆಚ್ಚಲೂ ಬಾರದು, ಒಟ್ಟಿನಲ್ಲಿ ಅಪ್ರಿಯವಾದ ಒಂದು ನೆನಪನ್ನು ಕೊಕ್ಕೆ ಹಾಕಿ, ಒಬ್ಬರ ಮುಖದ ಮೇಲಿನ ನಗುವನ್ನು ಅಳಿಸುವ ಯತ್ನ!  ಇದೆಂತಹ ತೊಂದರೆಯಪ್ಪ! ಒಳ್ಳೆಯ ಮಾತನಾಡುವುದು, ನಮ್ಮ ಮಾತಿನಿಂದ ಮತ್ತೊಬ್ಬರಿಗೆ ಸಂತಸ ಕೊಡುವುದು ಅಷ್ಟು ಕಷ್ಟವೇ?

ಒಬ್ಬರ ಮನೆಯ ಔತಣ ಕೂಟದಲ್ಲಿ ಹೊಟ್ಟೆ ಬಿರಿಯುವಂತೆ  ಉಂಡು, “ ಅಯ್ಯೋ  ಇವರ ತಮ್ಮನ ಮನೆಯ ಪಾರ್ಟಿ  ಇನ್ನೂ ಎಷ್ಟು  ಗ್ರಾಂಡ್ ಆಗಿತ್ತು! ಇವರದೇನೂ ಇಲ್ಲ ಬಿಡಿ! “ ಅಲ್ಲ, ನಮ್ಮನ್ನು ಅವರು ಪ್ರೀತಿಯಿಂದ ಊಟಕ್ಕೆ ಕರೆದಿದ್ದರೋ ಅಥವಾ ಔತಣಕೂಟಗಳ ತೀರ್ಪುಗಾರಿಕೆಗೋ??

ಬೇಕಿರಲಿ, ಬೇಡದಿರಲಿ ಬೇರೆಯವರ ವಿಚಾರದಲ್ಲಿ ಬಾಯಿ ಹಾಕುವುದು, ಜನರ ವಯಸ್ಸು, ಸಂಬಳ, ಮಕ್ಕಳು ಇರುವುದು- ಇಲ್ಲದಿರುವುದು, ಇತ್ಯಾದಿ ವಯ್ಯಕ್ತಿಕ  ಪ್ರಶ್ನೆಗಳನ್ನು ಕೇಳಿ ಅವರ ಮನಸ್ಸಿಗೆ ಹಿಂಸೆ ಮಾಡುವುದರಿಂದ ನಮಗೆ ಬರುವ  ಲಾಭವಾದರೂ ಏನು? ಅವರ ಒದ್ದಾಟವನ್ನು ನೋಡಿ ಅರೆಘಳಿಗೆ  ನಮ್ಮ ಮನಸ್ಸಿಗೆ ವಿಕೃತ ಸಂತೋಷ ಸಿಗಬಹುದು ಆದರೆ ಅವರ ದೃಷ್ಟಿಯಲ್ಲಿ ಬಿದ್ದ ನಾವು ಎಂದೂ  ಎದ್ದು ನಿಲ್ಲಲಾರೆವು! ಹತ್ತಾರು ವರ್ಷಗಳ ಸ್ನೇಹ ಒಂದು ಸಣ್ಣ ಮಾತಿನಿಂದಾಗಿ ಮುರಿದು ಹೋಗಿರುವ  ನೂರಾರು ನಿದರ್ಶನಗಳು ಉಂಟು!

ಮನುಷ್ಯರಿರಲಿ, ನಾಯಿ, ಬೆಕ್ಕು  ಮುಂತಾದ ಸಾಕುಪ್ರಾಣಿಗಳು, ಗಿಡ ಮರಗಳೂ ಸಹ ಪ್ರೀತಿಯ ಮಾತಿಗೆ ಮಣಿಯುತ್ತವೆ.”ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ  ಜಂತವಃ, ತಸ್ಮಾತ್  ತದೇವ  ವಕ್ತವ್ಯಂ, ವಚನೇ ಕಾ ದರಿದ್ರತಾ?” ಪ್ರಿಯವಾದ ನುಡಿಗಳನ್ನು ಕೇಳಿದರೆ ಎಂತಹ ಜೀವಿಯಾದರೂ ಸಂತೋಷ ಪಡುತ್ತದೆ, ಅದ್ದರಿಂದ  ಪ್ರಿಯವಾದ ಮಾತನ್ನೇ ಆಡಬೇಕು. ಒಳ್ಳೆಯ ಮಾತಿನಲ್ಲಿ ಜಿಪುಣತನ ಏಕೆ? ಎನ್ನುತ್ತದೆ ಪುರಾತನ ಸಂಸ್ಕೃತ  ಸುಭಾಷಿತವೊಂದು, ಅಂದರೆ ಈ ಒಳ್ಳೆಯ ಮಾತಿಗಾಗಿ ಕೊಸರಾಡುವುದು ಹೊಸದೇನಲ್ಲ, ಇದು ಮನುಷ್ಯನಷ್ಟೇ ಹಳೆಯ ಪಿಡುಗಿರಬೇಕು! 

ಇಂದಿನ ತಾಂತ್ರಿಕ ಯುಗದಲ್ಲಿ ಹೆಚ್ಚಿನ ಸಂಪರ್ಕ, ಸಂವಹನೆ, ಸಂಭಾಷಣೆ ಎಲ್ಲ  ಇಮೇಲ್, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಗ್ರಾಂ ಹಾಗೂ ವಾಟ್ಸಆಪ್  ಮುಂತಾದ ಸಾಮಾಜಿಕ ತಾಣಗಳಲ್ಲೇ ಹೆಚ್ಚು. ಸಾಮಾನ್ಯವಾಗಿ ಎಲ್ಲ ಕುಟುಂಬಗಳಲ್ಲಿ, ಎಲ್ಲ ಶಾಲಾ, ಕಾಲೇಜು, ಆಫೀಸಿನ ಗುಂಪುಗಳಲ್ಲೂ ಸಹ ಒಂದು ವಾಟ್ಸ್ಆಪ್  ತಾಣ ಇರುವುದು ಅನಿವಾರ್ಯ ಅನ್ನುವಂತಾಗಿದೆ.

 ಒಬ್ಬರು ವಾಟ್ಸ್ಆಪ್  ತಾಣದಲ್ಲಿ  ತಮಗೆ ಬಂದ ಪ್ರಶಸ್ತಿ, ಫಲಕಗಳ ಬಗ್ಗೆಯೋ, ತಾವು ಮದುವೆಯಾದ, ಮನೆಕಟ್ಟಿದ, ಪ್ರವಾಸ ಮಾಡಿದ, ಯಾವುದೋ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡರು ಅನ್ನಿ, ತಕ್ಷಣವೇ ಬರುತ್ತದೆ ಮರುಬಾಣದಂತೆ ಒಂದು ಸಂದೇಶ, ತಾಲಿಬಾನಿಗಳು ಹೆಂಗಸರು, ಮಕ್ಕಳ್ಳನ್ನು ಹಿಂಸೆ ಮಾಡಿದ  ರಸವತ್ತಾದ ವಿವರಣೆಯೊಂದಿಗೆ! 

ನಾವು ಕಳಿಸಿದ ಸಂದೇಶ  ಉಚಿತವೇ, ಉಪಯುಕ್ತವೇ? ಅದರಿಂದ ಯಾರಿಗಾದರೂ ಮೂರು ಕಾಸಿನ ಪ್ರಯೋಜನವಿದೆಯೇ ಎಂದು, ಒಂದೇ ಒಂದು ನಿಮಿಷ ಯೋಚನೆ ಮಾಡಿದರೂ ಬಹುಶಃ ನಾವು ಅದನ್ನು ಕಳಿಸುತ್ತಿರಲಿಲ್ಲ.  ನಮ್ಮ ಅಸಂಬದ್ದ  ಸಂದೇಶದಿಂದ ನಾವು ಬೇರೊಬ್ಬರ ಆನಂದವನ್ನು ಸಂಪೂರ್ಣವಾಗಿ ಹಾಳುಮಾಡಿದ್ದೇವೆ ಎಂಬ ಅರಿವು ಬೆಳೆಸಿಕೊಳ್ಳೋಣ. ಒಬ್ಬರ ಸಂತೋಷದ ಸಂದೇಶವನ್ನು  ಬೇರೆಯವರೂ ನೋಡಿ ಪ್ರತಿಕ್ರಿಯಿಸಲಿ, ಅಭಿನಂದಿಸಲಿ, ಆ ಖುಷಿಯ ವಾತಾವರಣ, ಅದರ ಪ್ರೇರಣೆ, ಸ್ವಲ್ಪ ಕಾಲ ಇರಲು ಬಿಟ್ಟು ಬಿಡೋಣ. ಕೋರೋನ ವೈರಸ್ ಬಗ್ಗೆಯೋ, ಆತಂಕವಾದಿಗಳ ಸಂಚಿನ ಬಗ್ಗೆಯೋ ಅಥವಾ ಪುಡಾರಿಗಳ  ಭ್ರಷ್ಠಾಚಾರದ  ಬಗ್ಗೆಯೋ ನಾವು  ಪಡೆದಿರುವ ಅಪಾರ ಜ್ಞಾನವನ್ನು ಆ ಕ್ಷಣವೇ ಹಂಚಿಕೊಳ್ಳದಿದ್ದರೆ ನಷ್ಟವೇನಿಲ್ಲ!

ಎದುರಿಗಿರುವವರ ಮಾತಿಗೆ ಹೇಗೆ ಸಮಯೋಚಿತವಾಗಿ ಪ್ರತಿಕ್ರಿಯಿಸುತೇವೋ, ಅವರ ಕಷ್ಟಕ್ಕೆ ಸಂತಾಪ ತೋರಿಸುತೇವೆಯೋ, ಅವರ ಸಾಧನೆಗಳಿಗೆ ಅಭಿನಂದಿಸುತ್ತೇವೆಯೋ ಅದೇ  ಸೂಕ್ಷ್ಮತೆ, ಅದೇ ಶಿಷ್ಟಾಚಾರವನ್ನು ನಾವು ಸಾಮಾಜಿಕ ತಾಣಗಳಲ್ಲಿಯೂ ಪಾಲಿಸಬೇಕಲ್ಲವೇ?

ಒಂದು ಗುಂಪಿನಲ್ಲಿ ಸಂದೇಶ ಕಳಿಸುವುದೆಂದರೆ ತುಂಬಿದ ಸಭೆಯಲ್ಲಿ ನಿಂತು ಭಾಷಣ ಮಾಡಿದಂತೆ! ನಾವು ಅಷ್ಟೇ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಗುಂಪಿನ ಎಲ್ಲರ ಮನಸ್ಥಿತಿ, ಪರಿಸ್ಥಿತಿಗಳನ್ನು ಗಮನದಲ್ಲಿ ಇಟ್ಕೊಂಡು  ಸಂದೇಶಗಳನ್ನು ಕಳಿಸಬೇಕು. ಸಾಮಾಜಿಕ ತಾಣಗಳಲ್ಲಿ  ಸುದ್ದಿ  ಒಣ  ಹುಲ್ಲಿನ  ಬಣವೆಯ ಮೇಲೆ  ಬಿದ್ದ  ಬೆಂಕಿಯ  ಕಿಡಿಯ  ಹಾಗೆ. ಕೋಮು ಗಲಭೆಯನನ್ನೋ, ದ್ವೇಷವನ್ನೋ, ವೈಯಕ್ತಿಕ  ವಿಷಯಗಳನ್ನೋ  ಬೇಜವಾಬ್ದಾರಿಯಿಂದ  ಹರಡಿದರೆ  ಅದರ  ಪರಿಣಾಮ ಭೀಕರವಾಗಬಹುದು, ಸಾವು, ನೋವುಗಳಲ್ಲಿ ಮುಗಿಯಬಹುದು.

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಗಾದೆಗೆ ಈಗ ಹೊಸದಾಗಿ ‘ಸೆಂಡ್ ಬಟ್ಟನ್ ಒತ್ತಿದರೆ ಮುಗಿಯಿತು!’ ಎಂದು ಸೇರಿಸಬೇಕಾಗಿದೆ. ಒಮ್ಮೆ ನಮ್ಮ ಸಂದೇಶ, ಕಾಮೆಂಟ್, ಚಿತ್ರ ಏನನ್ನಾದರೂ ಕಳಿಸಿದೆವೆಂದರೆ ಅಲ್ಲಿಗೆ ಮುಗಿಯಿತು, ಅದು ನಮ್ಮ ಕೈಯಿಂದ ಜಾರಿ ಹೋಗಿ ವಿಶ್ವವ್ಯಾಪಿ ಜಾಲವೊಂದರಲ್ಲಿ ಸಿಲುಕಿದಂತಾಯ್ತು! ಅದೃಷ್ಟವಿದ್ದರೆ ಯಾರೂ ನೋಡುವ ಮೊದಲೇ ಅದನ್ನು ಡಿಲೀಟ್ ಮಾಡಬಹುದು, ಆದರೆ  ದೇವಾಲಯದಿಂದ ಹಿಡಿದು ಬಾತ್ರೂಂ ವರೆಗೂ ಸದಾ ಕೈಯ್ಯಲ್ಲೇ ಫೋನ್ ಹಿಡಿದು ಓಡಾಡುವ ಜನರಿರುವಾಗ ಆ ಅರೆ ಕ್ಷಣದ ಅದೃಷ್ಟವೂ ಸಿಗದಿರಬಹುದು, ನಾವು ಟೈಪ್ ಮಾಡಿದಾಗ ಆದ ಯಾವುದೇ ಪ್ರಮಾದವನ್ನೂ ತಿದ್ದುವ ಅವಕಾಶ ಸಿಗುವುದು ಕಡಿಮೆ, ಆದರಿಂದ  ಇಂತಹ ತಾಣಗಳ ಕಹಳೆಯ ಬಾಯಿಗೆ ಮುತ್ತು ಕೊಡುವ ಮುನ್ನ ತುಂಬಾ ಎಚ್ಚರಿಕೆಯಿಂದ ಇರಬೇಕು !

ಪುಟ್ಟ ಫೋನಿನಲ್ಲಿ ದಪ್ಪ  ಬೆರಳುಗಳಿಂದ  ಟೈಪ್  ಮಾಡುವಾಗ ಆಗುವ ಎಡವಟ್ಟುಗಳು ಅಷ್ಟಿಷ್ಟಲ್ಲ!  ಸಂತಸದ ಸುದ್ದಿಗೆ ಅಳುಮುಖವನ್ನೋ, ಸಾವಿನ ಸುದ್ದಿಗೆ ನಗುಮೊಗದ  ಎಮೊಜಿಯನ್ನೋ ಎಷ್ಟು ಜನ ಹಾಕಿಲ್ಲ! ತನ್ನ ಮಗಳಿಗೆ ತುಂಬ ಹೊಟ್ಟೆ ನೋವೆಂದು  ಕಾತರದಿಂದ ತಂದೆಯೊಬ್ಬರು ವೈದ್ಯರಿಗೆ ಸಂದೇಶ  ಕಳಿಸಿದಾಗ ಹೊಸ ವರ್ಷದ ಸಂದೇಶಗಳ ಸುರಿಮಳೆಯಲ್ಲಿ ಮುಳುಗಿ ಹೋಗಿದ್ದ   ಅ ವೈದ್ಯರು ನಿಮಗೂ ಸಹ ಹಾಗೆಯೇ ಆಗಲಿ ಎಂದು ಮರು ಸಂದೇಶ ಕಳಿಸಿದರಂತೆ!!  ಸಂದೇಶಗಳನ್ನು ಪೂರ್ಣ ಓದುವ ವ್ಯವಧಾನ ಯಾರಿಗೆ ಇದೆ  ಹೇಳಿ, ನೂರಾರು ಸಂದೇಶಗಳು ಪ್ರತಿ ನಿಮಿಷವೂ ನಮ್ಮ  ಫೋನ್, ಕಂಪ್ಯೂಟರ್,  ಟ್ಯಾಬ್ಲೆಟ್ನಲ್ಲಿ ಧಾಳಿ ಇಡುತಿರುವಾಗ?   ಪ್ರೇಯಸಿಗೆಂದು ಬರೆದ ಸಂದೇಶವನ್ನು  ಬಾಸ್ಗೆ ಕಳಿಸಿ,  ಸಹೋದ್ಯೋಗಿಗಳಿಗೆಂದು ಬರೆದ  ಸಂದೇಶವನ್ನು ಅತ್ತೆಗೆ ಕಳಿಸಿ  ಫಜೀತಿ  ಪಟ್ಟವರೂ ಉಂಟು!

 ಇನ್ನು ಕೆಲವರು ಪದಗಳ ಈ ತಂಟೆಯೇ  ಬೇಡವೆಂದು  ಕೈ ಮುಗಿದೋ, ಹೆಬ್ಬರೆಳು  ಎತ್ತಿಯೋ,  ಇಲ್ಲ  ಹಸಿ ಹಸಿ ಸುಳ್ಳಿನ  ನಗುಮೊಗವನ್ನು  ತೋರಿಸಿಯೋ  ಪ್ರತಿಕ್ರಿಯಿಸುತ್ತಾರೆ . ಎಲ್ಲ  ಪ್ರಶ್ನೆಗಳಿಗೂ, ಎಲ್ಲ ಗಂಭೀರ  ಸಂವಾದಗಳಿಗೂ  ಇವರ  ಉತ್ತರ  ಒಂದೇ, ಅಡ್ಡ ಗೋಡೆಯ  ಮೇಲೆ  ದೀಪವಿಟ್ಟಂತೆ! ಇವರ  ಮನದಲ್ಲಿ  ಏನಿದೆಯೋ  ದೇವನೇ  ಬಲ್ಲ !

ಸಾಮಾಜಿಕ ತಾಣಗಳನ್ನು ಹೊಸದಾಗಿ ಉಪಯೋಗಿಸಲು ಶುರು ಮಾಡಿದಾಗ ಕೆಲವರಿಗೆ ತಮಗೆ ಬಂದ ಮೆಸೇಜ್ಗಳನ್ನೆಲ್ಲ  ನಿಜವೆಂದು ಭಾವಿಸಿ ಅದನ್ನು ತಕ್ಷಣ ಯಾರಿಗಾದರೂ ರವಾನಿಸ ಬೇಕೆಂಬ ಒತ್ತಡ ಎದ್ದುಕಾಣುತ್ತದೆ. ಅದು ನಮ್ಮ ಮನೆಯಂಗಳದ ಕಸವನೆಲ್ಲ  ಗುಡಿಸಿ ಪಕ್ಕದ ಮನೆ ಅಂಗಳಕ್ಕೆ ಹಾಕಿದಂತೆ! ಸಂದೇಶವನ್ನು ಓದಿ ನೋಡಿ,  ಅದು ನಮಗೆ ಪೂರ್ತಿ ಒಪ್ಪಿಗೆ ಆಗಿ, ಅದನ್ನು ಹಂಚಿಕೊಳ್ಳುವುದರಿಂದ ಇತರರಿಗೆ ಉಪಯೋಗವೋ, ಆನಂದವೋ, ಕಡೇ ಪಕ್ಷ ಒಂದು ಕಿರು ನಗೆಯೋ ಬರುವಂತಿದ್ದರೆ ಹಂಚೋಣ, ಇಲ್ಲದೆ ಇದ್ದಲ್ಲಿ ನಿಸ್ಸಂಕೋಚವಾಗಿ ಕಸದ ಬುಟ್ಟಿಗೆ  ದಾಟಿಸೋಣ!  

ಒಟ್ಟಿನಲ್ಲಿ  ನಮ್ಮ  ಮುಖಾಮುಖಿ  ಸಂಭಾಷಣೆಗಳಲ್ಲಿ,  ಸಾಮಾಜಿಕ ತಾಣಗಳ ಸಂವಹನಗಳಲಿ, ನಮ್ಮ ಮಾತು- ತೇತೇನುಡಿದರೆ ಮುತ್ತಿನ ಹಾರದಂತಿರಬೇಕು, ಕಾಮೆಂಟ್ ಮಾಡಿದರೆ  ಖುಷಿಯಾಗುವಂತಿರಬೇಕು,ಸಂದೇಶ ಕಳಿಸಿದರೆ ಅದು ಸಾರ್ಥಕವೆನಿಸಬೇಕು.....


Comments

  1. ತುಂಬಾ ಸಮಯೋಚಿತ ಲೇಖನ. ಸಮೂಹ ಮಾಧ್ಯಮಗಳಲ್ಲಿ ಬಲು ಜನಪ್ರಿಯವಾದ ವಾಟ್ಸಾಪ್ ನ ಪ್ರಭಾವ ಅಷ್ಟಿಷ್ಟಲ್ಲ. ತಾವು ಮೊದಲ ಒಂದು ಸಾಲನ್ನು ಕೂಡ ಓದಿರುವುದಿಲ್ಲ. ಆಗಲೇ ಅದನ್ನು ಇತರರಿಗೆ ರವಾನಿಸಲು ಹಾತೊರೆಯುತ್ತಾರೆ. ಎದುರಿಗೆ ಕಂಡಾಗ ಒಂದು ನಗುವೂ ಇರುವುದಿಲ್ಲ, ವಾಟ್ಸಾಪ್ ನಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್ ತಪ್ಪುವುದಿಲ್ಲ. ಒಟ್ಟಿನಲ್ಲಿ ನಿಮ್ಮ ಲೇಖನ ಸಮೂಹ ಮಾಧ್ಯಮಗಳ ಬಳಸುವ ಬಗ್ಗೆ ಚಿಂತನೆಗೆ ಹಚ್ಚುತ್ತದೆ.

    ReplyDelete
  2. Very well written and a mirror to the truth of what we are doing knowingly and sometimes unknowingly

    ReplyDelete
  3. ಸಾಮಾಜಿಕ ಮಾಧ್ಯಮಗಳ ಮೂಲಕ ಸಂದೇಶಗಳನ್ನು ಕಳಿಸುವ ಮುನ್ನ, ಇತರರನ್ನು ಟೀಕಿಸುವ ಮುನ್ಮ ಒಂದು ನಿಮಿಷವಾದರೂ ತಡೆದರೆ ಉತ್ತಮ. ಅದೂ ಅಲ್ಲದೆ " Don't sy anything, unless you have something nice to say" ಎಂಬ ನಾಣ್ನುಡಿಯನ್ನೂ ಮರೆಯಬಾರದು.
    ಉತ್ಮಮ, ಸಮಯೋಚಿತ ಲೇಖನ ಬರೆದಿದ್ದೀರಿ, ಅಭಿನಂದನೆಗಳು.

    ReplyDelete

Post a Comment