ಎಲ್ಲರಂತಲ್ಲ ನನ್ನ ಅಮ್ಮ!

ಎಲ್ಲರಂತಲ್ಲ ನನ್ನ ಅಮ್ಮ!

 ಲೇಖನ - ಶ್ರೀಮತಿ ಭಾರತಿ ಬಿ ವಿ  

ಮೊದಲಿಗೆ ಹೇಳಿಬಿಡುತ್ತೇನೆ - ಇದು ಅಮ್ಮನ ಬಗ್ಗೆ ತುಂಬ ಭಾವುಕವಾದ, ಎದೆ ಕಲಕುವ ಕಥೆಯಲ್ಲ. ನನ್ನಮ್ಮ ಅಂದರೆ,

ಮಕ್ಕಳು ಊಟ ಮಾಡಿದ ಕೂಡಲೇ ಅಮ್ಮ ಸೆರಗಲ್ಲಿ ಕೈ ಒರೆಸುವ ಕಥೆಯಲ್ಲ

ತಾನು ತಿನ್ನದೇ ಮಕ್ಕಳಿಗಾಗಿ ಎಲ್ಲ ಎತ್ತಿಡುವ ಅಮ್ಮನ ಕಥೆಯಲ್ಲ

ಬದುಕಿನಲ್ಲಿ ಮಕ್ಕಳನ್ನು ಬಿಟ್ಟರೆ ಬೇರೆ ಬದುಕೇ ಇಲ್ಲವೆನ್ನುವಂತೆ ಬದುಕಿದ ಅಮ್ಮನ ಕಥೆಯಲ್ಲ ...

ನನ್ನಮ್ಮ ಎಂದರೆ,

ಅತ್ಯಂತ ಜೀವನ ಪ್ರೀತಿಯ ಅಮ್ಮ

ತಾನೂ ಬದುಕಿ ನಮ್ಮನ್ನೂ ಬದುಕಲು ಬಿಟ್ಟ ಅಮ್ಮ

ಮನೆ-ಮಕ್ಕಳು ಅಂತ ಒದ್ದಾಡುವಾಗಲೂ ತನ್ನ ಆಸಕ್ತಿಗಳನ್ನು ಕಾಯ್ದುಕೊಂಡ ಅಮ್ಮ!

ಮನೆಯ 11 ಮಕ್ಕಳಲ್ಲಿ 9ನೆಯವಳಾಗಿ ಹುಟ್ಟಿ ಬೇಬಿ ಅಂಥ ಕರೆಸಿಕೊಂಡು, ನಂತರ ಬೇಬಕ್ಕ, ಬೇಬಿ ಆಂಟಿ, ಬೇಬಿ ಅಜ್ಜಿಯೂ ಆದ ನನ್ನಮ್ಮನ ಒಂದಿಷ್ಟು ಜೀವನ ಪ್ರೀತಿಯ ಕ್ಷಣಗಳು ...

                                                                ***

ಅಮ್ಮ ಸಣ್ಣವಳಾಗಿದ್ದಾಗಿನ ಅವಳ ಕಥೆಗಳನ್ನು ಹೇಳುವುದು ನನಗೆ ತುಂಬ ಇಷ್ಟದ ಕ್ಷಣಗಳಲ್ಲಿ ಒಂದು. ಅವಳ ಕಾಲಕ್ಕೂ, ನನ್ನ ಕಾಲಕ್ಕೂ, ನನ್ನ ಮಗನ ಕಾಲಕ್ಕೂ ಕೊಂಡಿಯಂತಿರುವ ಅಮ್ಮನ ಮಾತುಗಳು ನನಗೆ ನಾನು ಅರಿಯದ ಯಾವುದೋ ಕಾಲಘಟ್ಟಕ್ಕೆ ಕೊಂಡೊಯ್ಯುತ್ತವೆ.



ಅವಳ ಅಜ್ಜಿ ಅಂದರೆ ನನ್ನ ಮುತ್ತಜ್ಜಿಗೆ ಸಿಕ್ಕಾಪಟ್ಟೆ ಸಿನೆಮಾ ಹುಚ್ಚಂತೆ. ಆದರೆ ನನ್ನ ತಾತ ತುಂಬ ಸ್ಟ್ರಿಕ್ಟ್ ಮನುಷ್ಯ ಅಂತ ಮಗನನ್ನು ಕೇಳಲು ಹೆದರಿಕೆಯಾಗಿ, ನನ್ನಮ್ಮನನ್ನು ಮುಂದಿಟ್ಟುಕೊಂಡು ಪರ್ಮಿಷನ್ ತೆಗೆದುಕೊಂಡು ಸಿನೆಮಾ ನೋಡುತ್ತಿದ್ದ ಕಥೆ, ಡೆಲ್ಲಿಯಿಂದ ಬರುತ್ತಿದ್ದ ನನ್ನ ದೊಡ್ಡಮ್ಮನ ಮಕ್ಕಳಿಗೆ ಇಂಗ್ಲೀಷ್ ಸಿನೆಮಾ ತೋರಿಸಲು ಕರೆದುಕೊಂಡು ಹೋಗಿ ನಯಾಪೈಸೆ ಅರ್ಥವಾಗದೇ ಬೆಂಚಿನ ಮೇಲೆ ಕಾಲು ಚಾಚಿ ನಿದ್ದೆ ಹೊಡೆದು, ಸಿನೆಮಾ ಮುಗಿದ ನಂತರ ಎದ್ದು ಬಂದ ಕಥೆ, ಅಜ್ಜಿ ಮಾರ್ಕೆಟ್ಟಿಗೆ ಸಾಮಾನು ತರಲು ಕಳಿಸಿದಾಗೆಲ್ಲ ಎರಡು ಬಾಳೆಹಣ್ಣು ಮತ್ತು ಒಂದಿಷ್ಟು ದ್ರಾಕ್ಷಿ ಹಣ್ಣನ್ನು ಪ್ರತೀ ಸಲವೂ , ಅಂದರೆ ದಿನಕ್ಕೆ ನಾಕು ಸಲ ಕಳಿಸಿದರೆ ಎಂಟು ಬಾಳೆಹಣ್ಣು ಮತ್ತು ದ್ರಾಕ್ಷಿ ಮಲ್ಟಿಪ್ಲೈಡ್ ಬೈ ಫ಼ೋರ್ ಅನ್ನುವ ಲೆಕ್ಕದಲ್ಲಿ ತಿನ್ನುತ್ತಿದ್ದ ಕಥೆ ... ಅವಳ ಬತ್ತಳಿಕೆಯ ತುಂಬ ಇರುವ ಇಂಥ ಕಥೆಗಳನ್ನು ಕೇಳುವುದು ನನಗೆ ತುಂಬ ಇಷ್ಟ. ಕೊಳ್ಳೆಗಾಲದಲ್ಲಿ ಮೊದಲೇ ದೇವಾಂಗ ಶೆಟ್ಟರ ಬೀದಿಯವರು ಮಾಟಮದ್ದಿಗೆ ಫೇಮಸ್ ಅಂತೆ. ಅಂಥವರ ಮನೆಯ ಮಕ್ಕಳೆಲ್ಲ ನನ್ನಮ್ಮನ ದೋಸ್ತ್‌ಗಳು. ನನ್ನಜ್ಜಿ ‘ಅವರಿಗೆ ಮದ್ದು ಹಾಕಕ್ಕೆ ಯಾರೂ ಸಿಗದಿದ್ರೆ ಮನೆ ಮಕ್ಕಳಿಗೇ ಮದ್ದು ಹಾಕಿ ಮಾರನೇ ದಿನ ತೆಗೀತಾರಂತೆ ಕಣೇ, ಅಲ್ಲಿ ತಿನ್ನಬೇಡ’ ಅಂತ ಬಯ್ದರೂ, ಒಂದೇ ಒಂದು ಸಲಕ್ಕೂ ಅನುಮಾನಿಸದೇ ಕೊಟ್ಟಿದ್ದನ್ನೆಲ್ಲ ಕಬಳಿಸಿ ಬರುತ್ತಿದ್ದ ಕಥೆ ನಮ್ಮ ಬೆಸ್ಟ್ ಸೆಲ್ಲರ್ ಕಥೆಗಳಲ್ಲಿ ಒಂದು!

ಇವೆಲ್ಲ ಅವಳ ಬಾಲ್ಯದ ಕಥೆಯಾದರೆ- ಮದುವೆಯಾದ ಹೊಸದರಲ್ಲಿ ಲೆಕ್ಕ ಗೊತ್ತಾಗದೇ ಇಬ್ಬರು ನೆಂಟರು ಎಕ್ಸ್ಟ್ರಾ ಬಂದರೆ ಎರಡು ಕೊಳಗ ಬಿಸಿಬೇಳೆ ಬಾತ್ ಮಾಡಿ ಮೊದಲೇ ಕಾಸಿಲ್ಲದ ನಮ್ಮಪ್ಪನಿಗೆ ಕಣ್ಣು ಮೇಲಕ್ಕೆ ಸಿಕ್ಕಿಸುತ್ತಿದ್ದ ಕಥೆ, ಬಂದವರಿಗೆ ಇಟ್ಟುಕೊಡಲು ದುಡ್ಡಿಲ್ಲ ಎಂದು ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಬೆಳ್ಳಿ ಬಟ್ಟಲನ್ನೆಲ್ಲ ಕುಂಕುಮದ ಜೊತೆಗಿಟ್ಟು ಕೊಟ್ಟ ದಾನಶೂರ ಕರ್ಣಿಯ ಕಥೆ, ಮದುವೆಯಾದ ಹೊಸದರಲ್ಲಿ ಅಸಾಧ್ಯ ನಿದ್ದೆಪುರುಕಿಯಾದ ಅಮ್ಮ ಬಾಗಿಲು ಜಡಿದು ನಿದ್ದೆ ಹೊಡೆದು, ಅಪ್ಪ ಕಿರಿಚಿ ಕಿರಿಚಿ ಸಾಕಾಗಿ ಕಿಟಕಿಯಲ್ಲಿ ಕೋಲು ತೂರಿಸಿ ಅಮ್ಮನನ್ನು ಎಬ್ಬಿಸಿದ ಕಥೆ, ಮನೆಯ ಹೆಂಚನ್ನು ತೆಗೆದಿಟ್ಟು ಸೂರಿನಿಂದ ಅಕ್ಕನಿಗೆ ಕಟ್ಟಿದ್ದ ತೊಟ್ಟಿಲಿನ ಹಗ್ಗ ಹಿಡಿದು ಕಳ್ಳ ಮನೆಯೊಳಗೆ ಇಳಿಯುವವರೆಗೂ ನಿದ್ದೆ ಹೊಡೆಯುತ್ತಿದ್ದ ಕಥೆ, ಬಕಾಸುರನಂಥ ನಾನು ಡಬ್ಬಗಟ್ಟಳೆ ಫ಼ೇರೆಕ್ಸ್ ತಿಂದು ಅಪ್ಪನ ಸಂಬಳ ಖಾಲಿ ಮಾಡಿ ಕೊನೆಗೆ ಸಾಬರ ಗೆಳೆಯನಿಂದ ಪ್ರತಿ ತಿಂಗಳ ಕೊನೆಗೂ 10 ರೂಪಾಯಿ ಸಾಲ ಪಡೆದು ತೀರಿಸಿ ಮತ್ತೆ ಮುಂದಿನ ತಿಂಗಳಿಗೆ ಕೈ ಚಾಚುತ್ತಿದ್ದ ಕಥೆ ಇಂಥ ಕಥೆಗಳನ್ನೂ ರಸವತ್ತಾಗಿ ಹೇಳುತ್ತಿರುತ್ತಾಳೆ.


ಯಾವತ್ತೂ ಅಪ್-ಟು-ಡೇಟ್ ಆದ ಅಮ್ಮ ಡ್ರೆಸ್ಸಿನ, ಫ಼್ಯಾಷನ್ನಿನ, ಟೆಕ್ನಾಲಜಿನ ವಿಷಯದಲ್ಲಿ ಅತೀವ ಆಸಕ್ತಿ ಹೊಂದಿದ್ದಳು. ಹೊಸ ಬಟ್ಟೆ ಹೊಲೆಸಲು ದುಡ್ಡಿಲ್ಲವಾದರೆ ಇರುವ ಸೀರೆಯನ್ನೇ ಹರಿಸಿ ಚೆಂದಕ್ಕಿರೋ ಫ್ರಾಕ್ ಹೊಲೆಸುತ್ತಿದ್ದಳು. ಅಮ್ಮನ ತಿಳಿ ಲ್ಯಾವೆಂಡರಿನ ಸೀರೆಯಲ್ಲಿ ಹೊಲೆಸಿದ್ದ ಡ್ಯಾನ್ಸಿಂಗ್ ಫ್ರಾಕ್ ಇವತ್ತಿಗೂ ನಾನು ಮರೆತಿಲ್ಲ. ಸಿನೆಮಾ ತಾರೆಯರ ಸ್ಟೈಲ್‌ನಲ್ಲಿ ಹೇರ್ ಕಟ್ ಮಾಡಿಸುವುದು ಅಮ್ಮನಿಗೆ ಬಹಳ ಪ್ರಿಯವಾಗಿತ್ತು. ತಾನೂ ಅಷ್ಟೇ, ಯಾವತ್ತೂ ‘ಹೇಬರಾಸಿಯ’ ಹಾಗೆ (ಹೇಬರಾಸಿ ಅನ್ನುವ ಪದ ಡಿಕ್ಷನರಿಯಲ್ಲಿಲ್ಲ ಅನ್ನಿಸುತ್ತದೆ) ಡ್ರೆಸ್ ಮಾಡಿಕೊಳ್ಳದೇ, ಇರುವುದನ್ನೇ ನೀಟಾಗಿ ಉಡುತ್ತಿದ್ದಳು ಅಮ್ಮ. ಆಯಾ ಕಾಲಕ್ಕೆ ತಕ್ಕಂತೆ ಬ್ಲೌಸಿನ ತೋಳು ಗಿಡ್ಡವಾಗುತ್ತ, ಉದ್ದವಾಗುತ್ತ ಹೋಗುತ್ತಿತ್ತು. ಯಾವತ್ತೂ ಹಾಗೆಲ್ಲ ಹಳೆಯ ಫ್ಯಾಷನ್ನಿನ ಎಂಥದ್ದೋ ಮ್ಯಾಚಿಂಗ್ ಇಲ್ಲದ ಬಟ್ಟೆ ಹಾಕುತ್ತಲೇ ಇರಲಿಲ್ಲ. ಯಾವ ವಯಸ್ಸಿನಲ್ಲೂ ಅವಳದ್ದು ಅದೇ ಕುಂದದ ಆಸಕ್ತಿ, ಅಚ್ಚುಕಟ್ಟು. ಇನ್ನು ಟೆಕ್ನಾಲಜಿ ವಿಷಯಕ್ಕೆ ಬಂದರೆ, ಟೇಪ್ ರೆಕಾರ್ಡರ್ ಅಮ್ಮನನ್ನು ಬಹಳವಾಗಿ ಆವರಿಸಿಕೊಂಡ ಕಥೆ ಹೇಳುತ್ತೇನೆ ಕೇಳಿ!

ಒಮ್ಮೆ ಮೈಸೂರಿನಿಂದ ಬಂದ ಅಪ್ಪನ ಕೈಯಲ್ಲಿ ಪ್ಯಾನಾಸೋನಿಕ್ ಟೇಪ್ ರೆಕಾರ್ಡರ್ ಕಂಡಾಗ ಅದೇನೆಂದು ತಿಳಿಯದ ನಾವು ಬಾಯಿ ಬಾಯಿ ಬಿಟ್ಟಿದ್ದೆವು. ಆಮೇಲೆ ಅಪ್ಪ ಕ್ಯಾಸೆಟ್ ಹಾಕಿ ಸಿನೆಮಾ ಹಾಡು ಕೇಳಬಹುದು ಅಂದ ಘಳಿಗೆಯಲ್ಲಿ ನಮ್ಮೆದುರು ಒಂದು ಮಾಯಾಲೋಕ ತೆರೆದುಕೊಂಡಿತು! ತೆರೆಯ ಹಿಂದೆ, ರೇಡಿಯೋ ಒಳಗೆ ಕೂತು ಹಾಡುಗಾರರು ಹಾಡುವುದನ್ನು ಮಾತ್ರ ಕೇಳಿದ್ದ ನಮಗೆ, ಅವರೆಲ್ಲ ನಮ್ಮ ಮನೆಯೊಳಗೂ ಕೂತು ಹಾಡುತ್ತಾರೆ ಎಂದಾಗ ರೋಮಾಂಚನ! ಮೊದಮೊದಲಲ್ಲಿ ಕ್ಯಾಸೆಟ್ ಹಾಕಿ ಕೇಳುತ್ತಿದ್ದ ಅಮ್ಮನಿಗೆ ಇದ್ದಕ್ಕಿದ್ದ ಹಾಗೆ ಶುರುವಾಯ್ತು ನಮ್ಮ ಗಾನ ಪ್ರತಿಭೆಯನ್ನು ರೆಕಾರ್ಡ್ ಮಾಡುವ ಹುಚ್ಚು! ಅಸಾಧ್ಯ ಸಿಟ್ಟಿನಲ್ಲಿ ಕಿರಿಚಿ, ಕಿರಿಚಿ ಗೊಗ್ಗರು ಗಂಟಲಾಗಿಸಿಕೊಂಡಿದ್ದ ನಾನು, ಒಣಕಲು ಶರೀರದೊಳಗಿನ ಸಣ್ಣ ದನಿಯ ಅಕ್ಕ, ತಕ್ಕಮಟ್ಟಿಗೆ ಕೆಟ್ಟದಾಗಿದ್ದ ಅಪ್ಪನ ದನಿ, ಗಂಡಸರ ದನಿಯಂತಿದ್ದ ಅಮ್ಮ ಎಲ್ಲರ ದನಿಯಲ್ಲೂ ಆಗಾಗ ಹಾಡಿಸಿ ರೆಕಾರ್ಡ್ ಮಾಡುವ ಕೆಲಸ ಶುರುವಾಯಿತು ಅವಳದ್ದು.

ಕಾಲೋನಿಯಲ್ಲಿದ್ದ ಒಬ್ಬರು ಹಾಡಿನ ಟೀಚರ್ ಪುರಂದರ ದಾಸರ ರಚನೆಗಳನ್ನು ನನ್ನಿಂದ ಹೊರಡಿಸಲಾಗದೇ ಸೋತು ಸುಣ್ಣವಾಗಿದ್ದರು ಅಂದರೆ ನನ್ನ ಬಾಲಪ್ರತಿಭೆ ಊಹಿಸಿಕೊಳ್ಳಿ! ಅಂಥ ಕೆಟ್ಟ ಕಂಠದ ನನ್ನನ್ನು ಹಾಡು ಹಾಡು ಎಂದು ಪ್ರಾಣ ತಿನ್ನುತ್ತಿದ್ದಳು. ಅದೂ ರೆಕಾರ್ಡ್ ಮಾಡುವ ಕೆಲಸವೇನು ಸಾಮಾನ್ಯದ್ದೇ! ಗಾಳಿಯ ಸದ್ದಿನಿಂದ ಹಿಡಿದು, ಎಲ್ಲವೂ ರೆಕಾರ್ಡ್ ಆಗುತ್ತಿದ್ದುದರಿಂದ ಎಲ್ಲ ಕೆಲಸ ಮುಗಿಸಿ, ಮನೆಯ ಎಲ್ಲ ಕಿಟಕಿ, ಬಾಗಿಲುಗಳನ್ನು ಜಡಿದು, ಬೀದಿಯಲ್ಲಿ ತರಕಾರಿ, ಹೂವಿನವರೆಲ್ಲ ಬಂದು ಹೋಗಿ ಆಯ್ತು ಅಂತ ಖಾತ್ರಿ ಪಡಿಸಿಕೊಂಡ ನಂತರ ಇವಳ ರೆಕಾರ್ಡಿಂಗ್ ಸೆಷನ್ ಶುರುವಾಗುತ್ತಿತ್ತು. ನಾವು ಅಸಾಧಾರಣ ಪ್ರತಿಭೆಯ ಗಾಯಕರು ಒಂದೇ ಟೇಕಿನಲ್ಲಿ ಹಾಡಿ ಮುಗಿಸಬೇಕಿತ್ತು ಬೇರೆ! ನಾನು ಮೊದಲು ಹಾಡಿದ ಹಾಡು ನಾಗರಹಾವು ಸಿನೆಮಾದ ‘ಕನ್ನಡ ನಾಡಿನ ವೀರ ರಮಣಿಯ’ ಹಾಡು. ವೀರ ರಮಣಿ ಅನ್ನುವುದು ಗೊತ್ತಿಲ್ಲದ ಪೆದ್ದಲಾಷ್ಟಕ ನಾನು ‘ವೀರರ ಮಣಿಯ’ ಅಂತ ಹಾಡಿದ್ದೆ!! ಅದೂ ಉಸಿರು ಹಿಡಿದು ಹಾಡಲು ಗೊತ್ತಿಲ್ಲದ ನಾನು ಬುಸ್ ಬುಸ್ ಎಂದು ಉಸಿರು ಬಿಡುತ್ತಾ ಹಾಡಿದ್ದೆ. ಆಮೇಲೆ ಪ್ಲೇ ಮಾಡಿ ನೋಡಿದರೆ ಹಿಮಾಲಯ ಪರ್ವತ ಹತ್ತುತ್ತಾ ಹಾಡುತ್ತಿದ್ದೇನೋ ಅನ್ನುವಂತೆ ರೆಕಾರ್ಡ್ ಆಗಿದ್ದು ಕಂಡು ನನಗೆ ಸಿಕ್ಕಾಪಟ್ಟೆ ಅವಮಾನವಾಗಿ ಹೋಗಿತ್ತು. ಅಪ್ಪ ಅದನ್ನು ಕೇಳಿದ ನಂತರ ಹಾಡುವ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದಾಗ, ನ್ಯೂಸ್ ಪೇಪರ್ ಹಿಡಿದು ಓದುವುದನ್ನೇ ರೆಕಾರ್ಡ್ ಮಾಡಿ ಅಮ್ಮ ಪತಿಭಕ್ತಿ ಮೆರೆದಿದ್ದಳು!

ಅದಾದ ನಂತರ ಯಾವುದೇ ಊರಿಗೆ ಹೋಗಲಿ, ಯಾವುದೇ ರಜೆ ಬರಲಿ.. ನಾವು ಊರಿಗೆ ಹೋಗಲು ಪ್ಯಾಕ್ ಮಾಡುವ ಲಗೇಜಿನಲ್ಲಿ ಈ ಟೇಪ್ ರೆಕಾರ್ಡರಿಗೆ ಪರ್ಮನೆಂಟ್ ಜಾಗ ಸಿಕ್ಕಿಬಿಟ್ಟಿತು. ಅಮ್ಮ ಒಂದೇ ಒಂದು ಸಲವೂ ಬೇಸರಿಸದೇ ಅದೆಷ್ಟು ಜನರ ಹಾಡುಗಳನ್ನು, ಕ್ಯಾಸೆಟ್‌ಗಟ್ಟಳೆ ರೆಕಾರ್ಡ್ ಮಾಡಿದಳೋ. ಕೊಳ್ಳೆಗಾಲದ ರೂಪ ಸಂತೋಸ, ಅಹ್ಹಾ, ಒಹ್ಹೋ ಅಂದದ್ದರಿಂದ ಹಿಡಿದು, ನನ್ನ ಮಾವ ಪೂಜೆ ಮಾಡುವಾಗ ಹೇಳುತ್ತಿದ್ದ ಮಂತ್ರ, ನನ್ನ ಅಜ್ಜಿಯ ಹಾರ್ಮೋನಿಯಮ್, ಆಗಿನ ಕಾಲಕ್ಕೆ ಬರಿಯ ಹಿಂದಿ ಗೀತೆಗಳನ್ನೇ ಹೇಳುತ್ತಿದ್ದ ನನ್ನಣ್ಣನ ಅದ್ಯಾವುದೋ ಸಂಭಾಷಣೆಯಂತೆ ಓದಿದ್ದ ಹಾಡು, ನನ್ನ ದೊಡ್ಡಮ್ಮನ ಮಗಳ ನಾ ಪಾಡಲ್ ಪಾಡುಂ ಅನ್ನುವ ತಮಿಳು ಹಾಡು ಎಲ್ಲವನ್ನೂ ರೆಕಾರ್ಡ್ ಮಾಡಿಸಿ ಮಾಡಿಸಿ ತುಂಬಿಟ್ಟಳು. ನನ್ನ ದೊಡ್ಡಮ್ಮ ಬಾರೋ ಕೃಷ್ಣಯ್ಯಾ ಅನ್ನುತ್ತ ಹಾಡುವಾಗೆಲ್ಲ ನನ್ನ ದೊಡ್ಡಪ್ಪ ಹಿಂದೆ ನಿಂತು ಬಾರೋ ರಾಮಯ್ಯ ಅಂತ ತಮ್ಮ ಹೆಸರಾದ ರಾಮಚಂದ್ರನಿಗೆ ತಿದ್ದುಪಡಿ ಮಾಡಿದ್ದ ಹಾಡು, ನನ್ನತ್ತೆ ತಮಿಳು ಉಚ್ಛಾರಣೆಯಲ್ಲಿ ನಿಲ್ಲಿಸ ದಿರು ವನಮಾಲಿ ಕೊಳಲ ಗಾ ನವಾ ಅನ್ನುತ್ತ ಸಂಕೋಚದಲಿ ಹಾಡಿದ್ದ ಹಾಡು, ನಮ್ಮ ಮನೆಯ ಏಕೈಕ ಸುಮಧುರ ಕಂಠವಾದ ನನ್ನತ್ತೆಯ ಮಗನ ನಾವಾಡುವ ನುಡಿಯೇ ಕನ್ನಡನುಡಿ ಹಾಡು, ನನ್ನ ದೊಡ್ಡಮ್ಮನ ಮಗ ಯಾರೇ ಕೂಗಾಡಲಿ ಹಾಡಿದಾಗ ಹಿಂದೆ ಅರೆ ಹೊಯ್ ಅರೆ ಹೊಯ್ ಅನ್ನುತ್ತ ಕೋರಸ್ ಹಾಡಿದ್ದು ಎಲ್ಲವನ್ನೂ ಅದೆಷ್ಟು ತನ್ಮಯತೆಯಿಂದ ಬೇಜಾರೇ ಇಲ್ಲದೆ ಅಮ್ಮ ರೆಕಾರ್ಡ್ ಮಾಡಿಟ್ಟಳು. ಈಗ ಆ ಹಾಡುಗಳನ್ನು ಹಾಡಿದವರಲ್ಲಿ ಎಷ್ಟೊಂದು ಜನ ಇಲ್ಲವಾಗಿದ್ದಾರೆ. ಆದರೆ, ಅವರ ದನಿ ಮಾತ್ರ ನಮ್ಮ ಮನೆಯಲ್ಲಿ ಶಾಶ್ವತ ...

ಇಂಥದ್ದೇ ಇನ್ನೊಂದು ಹುಚ್ಚೆಂದರೆ ಅವಳ ಕ್ಯಾಮೆರಾದ್ದು. ಅಮ್ಮನಿಗೆ ಮೊದಲಿನಿಂದ ತನ್ನದೇ ಆದ ಒಂದು ಕ್ಯಾಮೆರಾ ಇರಬೇಕು ಅನ್ನುವ ಆಸೆ. ಆಗೆಲ್ಲ ಕ್ಯಾಮೆರ ಮತ್ತು ಫೋಟೋಗ್ರಫಿ ತುಂಬ ದುಬಾರಿ ಹವ್ಯಾಸವಾಗಿತ್ತು. ಹಾಗಾಗಿ ಅಮ್ಮ ಆಸೆಯನ್ನು ಅದುಮಿಟ್ಟುಕೊಂಡಿದ್ದಳು. ಒಂದು ಸಲ ನಮ್ಮ ನೆಂಟರಲ್ಲಿ ಯಾರೋ ಹಳೆಯದ್ದೊಂದು ಕ್ಯಾಮೆರಾ ಮಾರುತ್ತಿದ್ದಾರೆ ಅಂದಾಗ ಅಮ್ಮ ಇದ್ದ ಬದ್ದ ದುಡ್ಡೆಲ್ಲ ಹೊಂಚಿಹಾಕಿ ಮುಗಿಬಿದ್ದು ಅದನ್ನು ಕೊಂಡಿದ್ದಳು. ಮೊತ್ತಮೊದಲ ಫೋಟೋ ಅವಳು ತೆಗೆದದ್ದು ನನ್ನಪ್ಪನ ಕಾಲಿನ ಮೇಲಿದ್ದ ರಗ್‌ನ ಫೋಟೋ! ಮುಖ ಫೋಕಸ್ ಮಾಡಲು ಹೋಗಿ ಪಾಪ ಕಾಲು ಫೋಕಸ್ ಆಗಿತ್ತು! ತಾನು ನಿಂತ ಜಾಗ ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಬಿಟ್ಟು ನಮ್ಮನ್ನೇ ಹಿಂದೆ ಹೋಗಿ ಸ್ವಲ್ಪ, ಇನ್ನೊಂಚೂರು ಮುಂದೆ ಬನ್ನಿ ಅನ್ನುತ್ತಿದ್ದಳು!! ಮನೆಗೆ ಬಂದ ಫೋಟೋಗ್ರಾಫರ್ ಒಬ್ಬರು ನಿಂತವರನ್ನು ಹಾಗೆಲ್ಲ ಅಡ್ಜಸ್ಟ್ ಮಾಡಬಾರದು, ನೀವು ತೆಗೆಯುವ ಜಾಗ ಅಡ್ಜಸ್ಟ್ ಮಾಡಿಕೊಳ್ಳಬೇಕು ಅಂತ ಅಮೋಘ ಉಪದೇಶ ಕೊಟ್ಟ ಮೇಲೆ ಅಮ್ಮ ಅಂತೂ ಸುಮಾರಾಗಿ ಫೋಟೋ ತೆಗೆಯಲು ಕಲಿತಳು. ತಾನೇ ಹೋಗಿ ಫಿಲ್ಮ್ ರೋಲ್‌ಗಳನ್ನು ಎಲ್ಲೆಲ್ಲೋ ಹೋಗಿ ತರುತ್ತಿದ್ದಳು. ಫಿಲ್ಮ್ ಲೋಡ್ ಮಾಡುವುದು ಕಲಿತಳು. ಅಪ್ಪನಿಗೆ ಕಾಡಿ ಬೇಡಿ ಎಂ ಜಿ ರೋಡಿಗೆ ಕಳಿಸಿ ಡೆವಲಪ್ ಮಾಡಿಸಿ, ಪ್ರಿಂಟ್ ಹಾಕಿಸುತ್ತಿದ್ದಳು. ಇಷ್ಟಿಷ್ಟು ದಪ್ಪದ ಆಲ್ಬಮ್ ತರಿಸಿ ಅವುಗಳಲ್ಲಿ ಈ ಫೋಟೋಗಳನ್ನು ಸಿಕ್ಕಿಸುವವರೆಗೂ ಅವಳದ್ದು ತೀರದ ಉತ್ಸಾಹ.  ಒಮ್ಮೆಯಂತೂ ಮನಿಲಾದಲ್ಲಿ ಚೆಂದಕ್ಕೆ ಪ್ರಿಂಟ್ ಬರುತ್ತದೆ ಅಂತ ಮಾಮ ಹೇಳಿದ್ದು ಕೇಳಿ, ಪೋಸ್ಟಿನಲ್ಲಿ ರೋಲ್  ಕಳಿಸಿದ್ದಂಥ ಮಹಾಮಾತೆ ನನ್ನಮ್ಮ!

ಆ ಫೋಟೋ ಹುಚ್ಚು ಕೂಡಾ ಹಾಡಿನ ರೆಕಾರ್ಡಿನಂಥದ್ದೇ. ನಾವು ಎಲ್ಲೆಲ್ಲಿ ಕೂತೆವೋ, ನಿಂತೆವೋ, ಒರಗಿದೆವೋ ಆಗೆಲ್ಲ ಸುರಸುಂದರಿಯರ ಹಾಗೆ ಅವಳ ಕಣ್ಣಿಗೆ ಕಂಡು ‘ಇರ್ರೇ! ಓಡೋಗಿ ಕ್ಯಾಮೆರಾ ತರ್ತೀನಿ’ ಅಂತ ಓಡುತ್ತಿದ್ದಳು. ನಾನೋ ಸುಹಾಸಿನಿ, ಸ್ಮಿತಾ ಪಾಟಿಲ್ ಮುಂತಾದ ನಟಿಯರ ಆರ್ಟ್ ಮೂವಿ ಭಕ್ತೆ. ಅವರಂತೆ ಎಣ್ಣೆ ಮುಖದ, ಮೇಕಪ್ ಅನ್ನುವುದಿರಲಿ ಪೌಡರ್ ಕೂಡಾ ಹಚ್ಚದ ನನ್ನ ಮತ್ತು ಅಕ್ಕನ ಸಾಲು ಸಾಲು ಫೋಟೋ ತೆಗೆಯುತ್ತಿದ್ದಳು. ಯಾವುದೋ ಬಟ್ಟೆ ಹಾಕಿ ಅವಸರದಲ್ಲಿ ಎಲ್ಲೋ ಹೊರಡುವ ಗಡಿಬಿಡಿಯಲ್ಲಿದ್ದಾಗ ಅಮ್ಮನಿಗೆ ನಮ್ಮಲ್ಲೊಬ್ಬ ಮಿಸ್ ಇಂಡಿಯಾ ಗೋಚರಿಸಿಬಿಡುತ್ತಿದ್ದಳು! ನಾವು ‘ಲೇಟ್ ಆಗಿದೆ ಸುಮ್ನಿರಮ್ಮಾ’ ಅಂತ ಬೇಡಿಕೊಂಡರೂ ಬಿಡದೇ ಗದರಿಸಿ ನಿಲ್ಲಿಸಿ ಫೋಟೋ ತೆಗೆಯುವವರೆಗೂ ಬಿಡುತ್ತಿರಲಿಲ್ಲ. ಯಾವುದೇ ಮನೆಯಲ್ಲಿ ನೆಂಟರು ಸೇರಲಿ ಇವಳು ಮೊದಲು ಕ್ಯಾಮೆರಾ ರೋಲ್ ಹೊಂದಿಸಿಕೊಳ್ಳುತ್ತಿದ್ದಳು! ಅಲ್ಲಿ ಹೋಗಿ ಇದ್ದ ಬದ್ದವರನ್ನೆಲ್ಲ ಕೂರಿಸಿ ತೆಗೆದಿದ್ದೇ ತೆಗೆದಿದ್ದು. ಒಮ್ಮೆ ತಾತ-ಅಜ್ಜಿಯ ಫೋಟೋಗಳನ್ನು ತುಂಬ ಪ್ರೀತಿಯಿಂದ ತೆಗೆದಳು ಅಮ್ಮ. ಅದಾದ ನಂತರ ಆ ರೋಲ್ ಇನ್ನೂ ಮುಗಿಯುವ ಮುನ್ನವೇ ತಾತ ಇನ್ನಿಲ್ಲವಾಗಿದ್ದರು. ಅಮ್ಮ ಒಂದು ದಿನ ತಾತನನ್ನು ನೆನೆಸಿಕೊಳ್ಳುತ್ತಲೇ ದುಃಖದಿಂದ ಆ ರೋಲ್ ಹೊರತೆಗೆಯಲು ಹೊರಟು ಅದು ಎಕ್ಸ್‌ಪೋಸ್ ಆಗಿ ಇಡೀ ರೋಲ್ ಕರ್ರಗಾಗಿ ಹೋಗಿ, ತಾತ ಮಾಯವಾಗಿಹೋಗಿದ್ದರು. ಅವತ್ತು ಅಮ್ಮ ಪಟ್ಟ ದುಃಖ ಇವತ್ತಿಗೂ ನಾನು ಮರೆತಿಲ್ಲ ...

                                                                ***

ನನ್ನಮ್ಮ ಎಂಥವಳು ಎಂದರೆ, ಇಡೀ ಜೀವನದಲ್ಲಿ ಒಂದೇ ಒಂದು ಸಲವಾದರೂ ನನಗೆ ಮೂಡಿಲ್ಲ, ಬೇಜಾರು, ನನಗೆ ಅದಿಲ್ಲ, ಇದಿಲ್ಲ ಅಂತ ಕೊರಗಿದ್ದೇ ಕಂಡಿಲ್ಲ. ಒಂಥರಾ ಆರಾಮ್ ಜೀವಿ. ನಾನಂತೂ ಸಣ್ಣ ಪುಟ್ಟದಕ್ಕೆಲ್ಲ ಗಾಭರಿ ಬೀಳುವವಳು. ಅಪ್ಪ ಬರುವುದು ತಡವಾದರೆ ಮೊದಲು ಟೆನ್ಷನ್ನಿನಲ್ಲಿ ಬಾಲ್ಕನಿಗೆ ಹೋಗಿ, ನಂತರ ಗೇಟಿಗೆ ಹೋಗಿ ನಂತರ ಬೀದಿ ಕೊನೆಯಲ್ಲಿ ನಿಂತುಬಿಡುತ್ತಿದ್ದೆ ನಾನು. ಒಮ್ಮೆಯಂತೂ ಹಾಗೆ ನಿಂತಿರುವಾಗ ಒಬ್ಬರು ಪೊಲೀಸ್ ಕಾನ್ಸ್ಟೇಬಲ್ ಹೋಗುತ್ತಿದ್ದರೆ, ಅಪ್ಪನಿಗೆ ಏನೋ ಆಗಿಹೋಗಿರುವುದರಿಂದ information ಕೊಡಲು ಮನೆ ಹುಡುಕುತ್ತಿದ್ದಾರೆ ಅಂತ ಗಾಭರಿ ಬಿದ್ದು ಅವರನ್ನು ಹೋಗಿ ಯಾಕೆ ಬಂದಿದೀರ ಅಂತಲೂ ವಿಚಾರಿಸಿದಂಥ ಪ್ರಾಣಿ ನಾನು! ನಾನು ಇಷ್ಟೆಲ್ಲ ತಿಕ್ಕಲು ತಿಕ್ಕಲಾಗಿ ಆಡುತ್ತಿದ್ದರೆ ಅಮ್ಮ ನನ್ನನ್ನು ಮೂರು ಸಲ ‘ಅಯ್ಯೋ ಬಾರೇ ಬರ್ತಾರೆ. ಊಟ ಮಾಡು’ ಅನ್ನುವಾಗ ನಾನು ಅಮ್ಮನನ್ನು ಮೇಲಿನಿಂದ ಕೆಳಗಿನವರೆಗೆ ನೋಡುತ್ತಿದ್ದೆ! ‘ನನ್ನಪ್ಪ ಇನ್ನೂ ಬಂದಿಲ್ಲ ಅಂತ ನಾನು ಒದ್ದಾಡುತ್ತಿದ್ದರೆ ಊಟವಂತೆ ಊಟ!’ ಅನ್ನುವ ತಿರಸ್ಕಾರವಿರುತ್ತಿತ್ತು ನನ್ನಲ್ಲಿ. ಅಮ್ಮ ಕರೆದು ಸಾಕಾಗಿ, ಕೊನೆಗೆ ಅಚ್ಚುಕಟ್ಟಾಗಿ ಸಾರನ್ನ, ಪಲ್ಯ, ಕೆನೆ ಹಾಕಿದ ಮೊಸರನ್ನ ಕಲೆಸಿ ಚಪ್ಪರಿಸಿ ತಿಂದು ಕೈ ತೊಳೆಯುತ್ತಿದ್ದಳು. ನಾನು ದ್ರಾಬೆ ಮೂತಿ ಮಾಡಿ ಕೂತೇ ಇರುತ್ತಿದ್ದೆ. ಕೊನೆಗೆ ಒಣ ಮುಖದಲ್ಲಿ ಮೂರು ಘಂಟೆ ಆದಮೇಲೆ ಅಪ್ಪ ಮನೆಗೆ ಬರುತ್ತಿದ್ದರು. ಇವಳು ಆರಾಮವಾಗಿ ‘ನಾ ಹೇಳ್ಳಿಲ್ವಾ ಏನಾಗಿರಲ್ಲ ಅಂತ’ ಎನ್ನುತ್ತ ಅಪ್ಪನಿಗೆ ಬಡಿಸಿ ನೆಮ್ಮದಿಯಾಗಿ ಹೋಗಿ ಮಲಗುತ್ತಿದ್ದಳು. ಅಷ್ಟರವರೆಗೆ ಒದ್ದಾಡಿದ ನಾನು ಏನು ಘನಕಾರ್ಯ ಸಾಧಿಸಿದೆ ಎಂದು ಆಶ್ಚರ್ಯ ಪಡುತ್ತಾ ಕೂರುತ್ತಿದ್ದೆ! ಹಾಗಂತ ಮಾರನೆಯ ದಿನಕ್ಕೆ ನನಗೆ ಬುದ್ಧಿ ಬಂದುಬಿಡುತ್ತಿತ್ತು ಅಂದುಕೊಳ್ಳಬೇಡಿ ... ಮಾರನೆಯ ದಿನಕ್ಕೂ ಇದೇ ರಾಗ- ಇದೇ ಹಾಡು ನನ್ನದು.

ಆಗೆಲ್ಲ ಅಮ್ಮನಿಗೆ ತುಂಬ ತಲೆನೋವಿನ ಕಾಟ. ಬಿಸಿಲಿಗೆ ಓಡಾಡಿದರಂತೂ ಮುಗಿದೇ ಹೋಯಿತು, ತಲೆ ನೋವಿನೊಡನೆ, ವಾಂತಿಯೂ ಶುರುವಾಗಿ ಹೋಗುತ್ತಿತ್ತು. ಅಮ್ಮ ಗಂಟಲಿನಾಳದಿಂದ ದನಿ ಮಾಡುತ್ತ ವಾಂತಿ ಮಾಡಿಕೊಳ್ಳುವುದು ನನ್ನ ಜೀವನದ nightmare ಆಗಿಹೋಗಿತ್ತು. ಒಂದು ಸಲವಂತೂ ವಾಂತಿ ಮಾಡುವಾಗ ರಕ್ತ ಕಾರಿಕೊಂಡು ಬಿಟ್ಟಿದ್ದಳು. ನಾನು ಜ್ಞಾನ ತಪ್ಪಿ ಬೀಳುವುದೊಂದು ಬಾಕಿ. ಆಮೇಲೆ ಮನೆಯ ಹತ್ತಿರವೇ ಇದ್ದ ಡಾಕ್ಟರ್ ಹತ್ತಿರ ಹೋಗಿ ‘ಅಯ್ಯೋ ನಮ್ಮಮ್ಮ ರಕ್ತ ವಾಂತಿ ಮಾಡ್ತಿದಾಳೆ’ ಅಂತ ಗೊಳೋ ಎಂದು ಅತ್ತಿದ್ದೆ, ಹುಚ್ಚು ಹಿಡಿದ ಹಾಗೆ ಆಡಿದ್ದೆ. ಆಮೇಲೆ ಅವರು ಅದೇನೋ ಮಾತ್ರೆ ಕೊಟ್ಟರು, ಸರಿ ಹೋದಳು ಅಮ್ಮ. ಆದರೆ ಅವತ್ತಿನಿಂದ ಸಂಜೆಯಾದ ನಂತರ ಅಮ್ಮ ಅವಳ ತಲೆಯ ಮೇಲೆ ಕೈ ಇಟ್ಟುಕೊಳ್ಳುವ ಅಧಿಕಾರ ಕಳೆದುಕೊಂಡು ಬಿಟ್ಟಳು!! ಹಾಗೆ ಇಟ್ಟ ಕೂಡಲೇ ತಲೆ ನೋವಾ, ಅಯ್ಯೋ ತಲೆ ನೋವಾ ಅಂತ ಬಾಯಿ ಬಡಿದುಕೊಳ್ಳಲು ಶುರು ಮಾಡುತ್ತಿದ್ದೆ ನಾನು. ಅಮ್ಮನಿಗೆ ತಲೆನೋವಿಗಿಂತ ದೊಡ್ಡ ತಲೆಬೇನೆಯಾದೆ ನಾನು. ‘ಇಲ್ಲವೇ ತಲೆನೋವಿಲ್ಲ’ ಅಂದರೂ ಬಿಡದೇ ‘ನಿಜ ಹೇಳು, ನಿಜ ಹೇಳು’ ಅಂತ ಪ್ರಾಣ ತಿನ್ನುತ್ತಿದ್ದೆ. ಅವಳೂ ಕೇಳಿ ಕೇಳಿ ಸಾಕಾಗಿ ‘ನನ್ನಾಣೆಗೂ ಇಲ್ಲ’ ಅನ್ನುತ್ತಿದ್ದಳು. ನಾನು ಆಣೆ ಮಾಡ್ತಿದ್ದಾಳೆ ಅಂದರೆ ಅದು ಸತ್ಯವೇ ಅಂತ ನಂಬಿ ನೆಮ್ಮದಿಯಾಗುತ್ತಿದ್ದೆ. ಅದಾಗಿ ಒಂದಿಪ್ಪತ್ತು ವರ್ಷಗಳೇ ಕಳೆದ ಮೇಲೆ ಒಂದಿನ ‘ನೀನು ಆಣೆ ಮಾಡಿದಾಗಲೇ ನನಗೆ ನೆಮ್ಮದಿ ಆಗ್ತಿದ್ದು ಕಣೇ ಅಂದರೆ ‘ಅಯ್ಯೋ ಬೇಕಾದಷ್ಟು ಸಲ ಸುಳ್ಳು ಹೇಳಿರ್ತಿದ್ದೆ ’ ಅಂದಳು!! ನಾನು ‘ಅಯ್ಯೋ ರಾಮ ಮತ್ತೆ ಆಣೆ ಹಾಕ್ತಿದ್ಯಲ್ಲೇ’ ಅಂತ ಕಣ್ಣು ಕಣ್ಣು ಬಿಟ್ಟರೆ ‘ಅಯ್ಯೋ ಹೋಗೇ! ನೀನು ತಲೆ ತಿನ್ತಿದ್ಯಲ್ಲ, ಅದಕ್ಕಿಂತ ಆಣೇನೇ ವಾಸಿ ಅನ್ನಿಸ್ತಿತ್ತು’ ಅಂದಳು ಕೂಲಾಗಿ!!

ನನ್ನಮ್ಮ ಈ ವಯಸ್ಸಿನಲ್ಲೂ ರಾತ್ರೋ ರಾತ್ರಿ ನಡೆಯುವ ಕ್ರಿಕೆಟ್ ಮ್ಯಾಚ್‌ಗಳನ್ನು ನೋಡುತ್ತಾಳೆ. ವಿಂಬಲ್ಡನ್, US ಓಪನ್ ಎಲ್ಲ ಟೆನ್ನಿಸ್ ಮ್ಯಾಚುಗಳನ್ನೂ ಟಿವಿಯ ಒಳಕ್ಕೇ ಹೋಗುತ್ತಾಳೇನೋ ಅನ್ನುವಷ್ಟು ಮುಂದಕ್ಕೆ ಛೇರ್ ಹಾಕಿ ಕೂತು ನೋಡುತ್ತಾಳೆ. ಜೀವವನ್ನೇ ಪಣಕ್ಕಿಟ್ಟವಳಂತೆ ಆಟಗಾರರನ್ನು ಕಮಾನ್!!! ಎಂದು ಹುರಿದುಂಬಿಸುತ್ತಾಳೆ. ನನ್ನ ಅಪ್ಪ ಅಮ್ಮನನ್ನು ರೇಗಿಸಲು ‘ನೀನು ವಿಂಬಲ್ಡನ್ ಛಾಂಪಿಯನ್ ಆಗಿದ್ಯಲ್ಲ, ಆಗ ಹೀಗೆ ಆಗಿರ್ಲಿಲ್ಲ ಅಲ್ವಾ’ ಅನ್ನುತ್ತಾರೆ! ಅಮ್ಮ ‘ಉಶ್! ನೋರು ಮೂಸ್ಕೊಂಡು ಕೂಸ್ಕೋ’ ಅಂತ ಮಕ್ಕಳನ್ನು ಗದರಿಸುವ ಹಾಗೆ ಗದರಿ ಮತ್ತೆ ಮ್ಯಾಚಿನಲ್ಲಿ ಮುಳುಗುತ್ತಾಳೆ. ಟಿವಿ ಸೀರಿಯಲ್ ನೋಡುವಾಗ ಟಿ ಎನ್ ಸೀತಾರಾಮ್ ಸರ್ ಅವರ ಸೀರಿಯಲ್ ಒಂದು ಬಿಟ್ಟು ಮತ್ತೆಲ್ಲ ನೋಡುವಾಗಲೂ ‘ಅಯ್ಯೋ ಥೂ! ಬರೀ ಬಂಡಲ್ ಕಥೆ’ ಅನ್ನುತ್ತಲೇ ವರ್ಷಗಟ್ಟಳೆ ನೋಡುತ್ತಾಳೆ. ‘ಮತ್ತೆ ಯಾಕೆ ನೋಡ್ತಿ, ಬಿಟ್ಟು ಇರು’ ಅನ್ನುತ್ತೀನಿ ನಾನು ... ಅವಳು ಮೌನವಾಗಿರುತ್ತಾಳೆ ಮತ್ತು ಸುಖವಾಗಿ ಬದುಕುತ್ತಾಳೆ.

ಕಾರ್ಡ್ಸ್‌ ಆಟ ಅವಳು ಆಡುವುದನ್ನು ನೋಡಬೇಕು ... ಎಂಥ ಅದ್ಭುತ ಕಲೆಗಾರ್ತಿ ಗೊತ್ತಾ! ಶೋ ಆಗುತ್ತದೆ ಅಂತಲೇ ಗೊತ್ತಾಗಿರದ ನಾವು ನೋಡುತ್ತಿದ್ದರೆ ಟ್ರಿಪ್ಲೆಟ್‌ಗಳನ್ನು ಒಡೆದು, ಸೀಕ್ವೆನ್ಸ್‌ಗಳನ್ನು ಒಡೆದು ಕ್ಷಣ ಮಾತ್ರದಲ್ಲಿ re arrange ಮಾಡಿ ಛಕ್ಕಂತ ಶೋ ಮಾಡುವ ಸ್ಟೈಲ್ ನೋಡಬೇಕು ... you must see it to believe it! ಅಪ್ಪ-ಅಮ್ಮ ಒಂದಿಪ್ಪತ್ತೈದು ದೇಶಗಳನ್ನು ಸುತ್ತಿದ್ದಾರೆ. ಲಡಾಕ್‌ನ ಆ ರಸ್ತೆಗಳಲ್ಲೂ ಹೋದ ವರ್ಷ ಪ್ರವಾಸ ಮಾಡಿ ಬಂದರು ಇಬ್ಬರೂ. ಈ ಜೀವನಪ್ರೀತಿಯೇ ಬಹುಶಃ ನನ್ನನ್ನು ನನ್ನೆಲ್ಲ ಕಷ್ಟದ ಸಂದರ್ಭಗಳಲ್ಲೂ ಬದುಕಿನೆಡೆಗೆ ಮತ್ತೆ ಮುಖ ಮಾಡುವಂತೆ ಪ್ರೇರೇಪಿಸುತ್ತದೋ ಏನೋ!

ಅವಳಿಗೆ ನನ್ನ ಬಗ್ಗೆ ಕೆಲವು ತಕರಾರುಗಳಿವೆ ಅನ್ನುವುದು ನನಗೆ ಗೊತ್ತು. ನಾನು ದೇವರ ಪೂಜೆ ಮಾಡುವುದಿಲ್ಲ ಅನ್ನುವುದು ಅವಳಿಗೆ ತುಂಬ ಬೇಜಾರಿನ ವಿಷಯ ಅನ್ನುವುದು ನನಗರಿವಿದೆ. ದೊಡ್ಡ ದೊಡ್ಡ ಹಬ್ಬಗಳಲ್ಲಾದರೂ ಅವಳೊಡನೆ ಎಲ್ಲ rituals ನಲ್ಲೂ ಭಾಗಿಯಾಗಲಿ ಅನ್ನುವ ಆಸೆಗೆ ನಾನು ತಣ್ಣೀರೆರಚುತ್ತೇನೆ ಪಾಪ. ನಾನು ತಲೆಹರಟೆ ಅನ್ನುವುದೊಂದು ಬೇಸರವೂ ಇದೆ. ಚೌತಿ ಚಂದ್ರನನ್ನು ಬೇಡ ಅಂದರೂ ನೋಡ್ತೀನಿ ಅಂತೆಲ್ಲ ನನ್ನ ಮೇಲೆ ಸಿಟ್ಟಿದೆ. ಅದೆಲ್ಲ ಏನೇ ಇದ್ದರೂ ಕಷ್ಟ ಅಂದರೆ ಎಲ್ಲ ಕೆಲಸ ಬಿಸಾಕಿ ಓಡಿ ಬರುತ್ತಾಳೆ, ನೋಡಿಕೊಳ್ಳುತ್ತಾಳೆ, ನಾನಿದ್ದೀನಿ ಸುಮ್ಮನಿರು ಅಂತ ಅಭಯ ನೀಡುತ್ತಾಳೆ, ನಾನು ಹರಕೆ ಅಂತೆಲ್ಲ ಕಟ್ಟಿಕೊಂಡರೆ ತೀರಿಸುವವಳಲ್ಲ ಅಂತ ಗೊತ್ತಿರುವುದರಿಂದ ತಾನೇ ಬಂದು ಸೇವೆ ಮಾಡುತ್ತೇನೆ ಅಂತ ದೇವರೊಡನೆ ಸಂಧಾನ ಮಾಡಿಕೊಳ್ಳುತ್ತಾಳೆ, ನಾನು ನಾಟಕ ಮುಗಿಸಿ ಮನೆಗೆ ಬರುವವರೆಗೆ ನಿದ್ದೆ ಮಾಡದೇ, ನಾನು ಮನೆ ತಲುಪಿದೆ ಅಂತ ಹೇಳಿದ ಮೇಲೆ ಸುಖ ನಿದ್ದೆಗಿಳಿಯುತ್ತಾಳೆ. ಓ ಕಾದಲ್ ಕಣ್ಮಣಿ ಸಿನೆಮಾ ನೋಡಬೇಕು, ಟಿಕೆಟ್ ಬುಕ್ ಮಾಡಿಸಿಕೊಡು ಅನ್ನುತ್ತಾಳೆ ....

ಅಪ್ಪನ ಪ್ರೀತಿಯಲ್ಲೇ ಮುಳುಗಿಹೋದ ನಾನು ಅವಳನ್ನು ಇನ್ನಿಷ್ಟು ಪ್ರೀತಿಸಬೇಕಿತ್ತು ಅಂತ ಅನ್ನಿಸುತ್ತದೆ ಇತ್ತೀಚೆಗೆ. ಅದಕ್ಕೇ ಪ್ರಾಯಶ್ಚಿತ್ತ  ಮಾಡಿಕೊಳುವವಳಂತೆ ನನಗೆ ನಂಬಿಕೆ ಇಲ್ಲದಿದ್ದರೂ ಅವಳಿಗಾಗಿ ಮೊದಲ ವರ್ಷ ಅವಳ ತಿಥಿ ಮಾಡುತ್ತೇನೆ ಅಂತ ಪ್ರಾಮಿಸ್ ಮಾಡಿದ್ದೇನೆ. ಅವಳು ಉಪದೇಶ ನೀಡುವಾಗ ಮೊದಲಿನಂತೆ ರೇಗದೇ ಸಹಿಸಿಕೊಳ್ಳುತ್ತೇನೆ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಹೆಚ್ಚು ಪ್ರೀತಿಸಲು ಶುರು ಮಾಡಿದ್ದೇನೆ. ಅವಳೂ ಕೂಡ ಆಗಾಗ ನನ್ನ ಮಾತು ಕೇಳಲು ಶುರು ಮಾಡಿದ್ದಾಳೆ! ಕಣ್ಣು ದಾನ ಮಾಡು ಅಂದರೆ ಒಂದು ಕಣ್ಣು ಮಾತ್ರ ಅನ್ನುತ್ತಿದ್ದಳು ಸದಾ. ನಾನು ಒಂದು ದಿನ ಅದಕ್ಕೆ ಕಾರಣ ಕೇಳಿದರೆ- ಅಯ್ಯೋ, ಸ್ವರ್ಗ ನೋಡಕ್ಕೆ ಸಾಧ್ಯವಾಗೋದಾದರೆ ಒಂದು ಕಣ್ಣಾದ್ರೂ ಇರಲಿ ಅಂತ ಕಣೇ ಅನ್ನುತ್ತಿದ್ದಳು! ನಾನು ಸುಮಾರು ವರ್ಷಗಳಿಂದ - ಅವೆಲ್ಲ ನಾನ್ಸೆನ್ಸ್ ಅಮ್ಮ, ಸತ್ತ ಮೇಲೆ ಸುಟ್ಟು ಹಾಕ್ತಾರೆ, ಯಾವ ಕಣ್ಣು, ಯಾವ ಸ್ವರ್ಗ ಅಂತ ಬಯ್ಯುತ್ತಿದ್ದೆ. ಮೊನ್ನೆ ಯಾವತ್ತೋ ಎರಡೂ ಕಣ್ಣೂ ದಾನ ಮಾಡಿದೀನಿ ಅಂದಳು.

ಅಮ್ಮನಿಗೊಂದು ಮೆಸೇಜ್: ಹೇಗೂ ಒಬ್ಬರಿಗೊಬ್ಬರು ಅಡ್ಜಸ್ಟ್ ಆಗೋಗಿದೀವಿ ಅಲ್ವಾ? ಮುಂದಿನ ಜನ್ಮ ಅನ್ನೋದು ಇದ್ದರೆ ನಾವಿಬ್ರೇ ಅಮ್ಮ-ಮಕ್ಕಳಾಗೋಣ ...


Comments

  1. ಎಲ್ಲದರಂತಿಲ್ಲ ಈ ನಿಮ್ಮ ಲೇಖನ. ಹೊಸತನದಿಂದ ಕೂಡಿ, ಹಾಸ್ಯವು ಹಾಸುಹೊಕ್ಕಾಗಿ, ಅಮ್ಮನ ಮೇಲಿನ ನಿಷ್ಕಳಂಕ ಪ್ರೀತಿಯು ತಾನೇ ತಾನಾಗಿ ಹರಿದು ಬಂದಿದೆ. ಕೊನೆಯ ಸಾಲುಗಳಂತೂ ಲೇಖನಕ್ಕೆ ಮುಕುಟ ಮಣಿಯಂತಿದೆ.

    ReplyDelete
  2. ಅಮ್ಮನ ಬಗ್ಗೆ ನೀವು ಬರೆದ್ದದ್ದು, ಅವರ ಕ್ಯಾಮೆರಾ ಚಿತ್ರದಷ್ಟು, ಅವರ tape recorder ನ ಧ್ವನಿಯಷ್ಟೇ ವಿಶೇಷವಾಗಿದೆ! ಹಾಸ್ಯದ ಹಿಂದೆ ಪ್ರೀತಿ, ಅಭಿಮಾನಿಗಳು ಗುಪ್ತಗಾಮಿನಿಯಾಗಿ ಹರಿಯುತ್ತಿದೆ, ನಗು ನಗುತ್ತಲೇ ಕಣ್ಣಂಚು ಒದ್ದೆಯಾಗುವಷ್ಟು ಆತ್ಮೀಯವಾಗಿದೆ ನಿಮ್ಮ ಲೇಖನ . ನಿಮ್ಮ ಅಮ್ಮನಂತೆಯೇ ಜೀವನ ಪ್ರೇಮಿಯಾದ ನನ್ನ ಅಮ್ಮನಿಗೆ ಈ ಲೇಖನವನ್ನು ಕಳಿಸಿದ್ದೇನೆ, ಒಟ್ಟಿಗೇ ಓದಿ ಆನಂದಿಸಲು!

    ReplyDelete
  3. ಬಹಳ ಸುಂದರ ಲೇಖನ. ಇಂತಹ ಹೆಚ್ಚಿನ ಲೇಖನಗಳಿಗಾಗಿ ಎದುರುನೋಡಬಹುದು. ತುಂಬಾ ಇಷ್ಟವಾಯಿತು. ನನ್ನ ಅತ್ತೆಯನ್ನು ಬೇಬಿ ಎಂದು ಕರೆಯಲಾಯಿತು ಮತ್ತು ಅವರು ಕುಟುಂಬದಲ್ಲಿ 9 ನೇ ಮಗು :)

    ReplyDelete
  4. ಅಮ್ಮನ ದಿಟ್ಟ ನಡೆ ನುಡಿ ಎಲ್ಲವೂ ಬಹಳ ಮುದ ನೀಡುವಂತೆ ಸುಂದರವಾಗಿ ಲೇಖನವನ್ನು ನಿರೂಪಿಸಿದ್ದೀರಿ. ಏನೋ ಒಂದು ವಿಶೇಷ ಆಕರ್ಷಣೆಯಿದೆ ಈ ಅಮ್ಮನ ಬಗೆಗೆ ಬರೆದಿರುವ ಲೇಖನ, ಹಾಗಾಗಿ ಎಲ್ಲರಂತವಳಲ್ಲ ನನ್ನ ಅಮ್ಮ ಎನ್ನುವುದೂ ಅಷ್ಟೇ ಸೂಕ್ತ. ಅಮ್ಮನನ್ನು ಹೊಗಳುತ್ತಾ ಅವಳ ಬೇಕು ಬೇಡಗಳು ಹಾಸ್ಯದ ಜೊತೆ ಬೆರೆಸಿರುವುದು ಓದುತ್ತಾ ಓದುತ್ತಾ ಲೇಖನ ಮುಗಿದದ್ದೇ ತಿಳಿಯಲಿಲ್ಲ.

    ReplyDelete

Post a Comment