ಭಾರತದ ಮಿತ್ರ ಜಾನ್ ಲ್ಯಾಂಗ್

 ಭಾರತದ ಮಿತ್ರ ಜಾನ್ ಲ್ಯಾಂಗ್

ಲೇಖನ - ಡಾ ಸಿ ವಿ ಮಧುಸೂದನ 

ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತೀಯರಿಗೂ,ಆಳುತ್ತಿದ್ದ ಬ್ರಿಟಿಷರಿಗೂ ಹೆಚ್ಚು ಸಂಪರ್ಕವಿತ್ತು ಎಂಬುದರಲ್ಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಭಾರತೀಯರೊಂದಿಗೆ ಸಂಪರ್ಕವಿದ್ದ ಆಸ್ಟ್ರೇಲಿಯನ್ ಗಣ್ಯರು ಬಹಳ ಅಪರೂಪ. ಅಂಥವರಲ್ಲಿ ಮುಖ್ಯನಾದವನು ಜಾನ್ ಲ್ಯಾಂಗ್.  



ಜಾನ್ ಲ್ಯಾಂಗ್ ಹುಟ್ಟಿದ್ದು 1817 ರಲ್ಲಿ. ಎಂದರೆ ಇನ್ನೂರಕ್ಕೂ  ಹೆಚ್ಚು ವರ್ಷಗಳ ಹಿಂದೆ. Ashfield Park ಎಂಬ ಹಳ್ಳಿಯಲ್ಲಿ. ಇದು ಈಗ ಸಿಡ್ನಿಯ ಉಪನಗರವಾದ Ashfield. ತಂದೆ ಒಬ್ಬ ಶ್ರೀಮಂತ ವರ್ತಕ. ಲ್ಯಾಂಗನ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲವೂ ಮನೆಯಲ್ಲೇ ನಡೆಯಿತು. ಮುಂದೆ ಅವನು Sydney College (ಈಗಿನ Sydney University) ಅನ್ನು ಸೇರಿ ಅಲ್ಲಿನ ಅತ್ಯುತ್ತಮ ವಿದ್ಯಾರ್ಥಿ outstanding scholar ಎಂದು ಹೆಸರಾದನು. 1837 ರಲ್ಲಿ ಇಂಗ್ಲೆಂಡಿಗೆ ತೆರಳಿ ಅಲ್ಲಿನ Trinity College, Cambridge ನ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡಿದರೂ ಧರ್ಮಬಾಹಿರವಾದ ಪ್ರಾರ್ಥನೆಯೊಂದನ್ನು ರಚಿಸಿದ್ದರಿಂದ ಅವನು ಅಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರೈಸಲಾಗಲಿಲ್ಲ. ಬದಲಿಗೆ ಲಂಡನ್ನಿನ Middle Temple ನಲ್ಲಿ ನ್ಯಾಯ ಶಾಸ್ತ್ರವನ್ನು ಓದಿ 1841 ರಲ್ಲಿ ಬ್ಯಾರಿಸ್ಟರ್ ಆದನು. ಅದೇ ವರ್ಷ ನ್ಯೂ ಸೌತ್ ವೇಲ್ಸ್ ಗೆ ಹಿಂತಿರುಗಿದನು. 1839 ರಲ್ಲೆ ಅವನಿಗೆ ಮದುವೆಯಾಗಿತ್ತು. ಅವನಿಗೆ ಸಿಡ್ನಿಯ ಸುಪ್ರೀಂ ಕೋರ್ಟಿನಲ್ಲಿ  ಬ್ಯಾರಿಸ್ಟರ್ ಆಗಿ ಕೆಲಸ ಮಾಡಲು ಅಧಿಕಾರವಿತ್ತು. 

ಲ್ಯಾಂಗ್ ಸಾಮಾಜಿಕ ಕಾರ್ಯಗಳಲ್ಲಿ, ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದನು. ಆದರೆ February 1842 ರಲ್ಲಿ  ಪ್ರಜಾ ಪ್ರತಿನಿಧಿ ಸರ್ಕಾರದ ವಿರೋಧವಾಗಿ ಒಂದು ಭಾಷಣ ಮಾಡಿದನು.. ಇದರಿಂದ  ಅನೇಕರ ದ್ವೇಷವನ್ನು ಕಟ್ಟಿಕೊಂಡನೆಂದು ಕಾಣುತ್ತದೆ. ಅದೇ ವರ್ಷ ಹೆಂಡತಿ ಮಕ್ಕಳೊಡನೆ ಸಿಡ್ನಿಯನ್ನು ತೊರೆದು ಕಲ್ಕತ್ತಾಗೆ ವಲಸೆ ಹೋದನು. ಮತ್ತೆ ಅವನು ಆಸ್ಟ್ರೇಲಿಯಾಗೆ ಮರಳಲೇ ಇಲ್ಲ.

 ಕಲ್ಕತ್ತೆಯಲ್ಲಿ 3-4 ವರ್ಷಗಳು ಲಾಯರಾಗಿ ಕೆಲಸ ಮಾಡಿದ ನಂತರ ಮೀರತ್ ನಗರದಲ್ಲಿ ವಾಸ್ತವ್ಯ ಹೂಡಿದನು. ಇಲ್ಲಿ ಅವನು The Mofussilite ಎಂಬ ಪತ್ರಿಕೆಯ ಪ್ರಕಾಶಕ/ಸಂಪಾದಕನಾದನು. The Mofussilite ಆಗಿನ ಇಂಡಿಯಾದಲ್ಲೇ ಅತ್ಯಂತ ಪ್ರಭಾವಶಾಲಿ ಪತ್ರಿಕೆಗಳಲ್ಲಿ ಒಂದಾಗಿದ್ದಕ್ಕೆ ಇವನ ಪ್ರತಿಭೆಯೇ ಮುಖ್ಯಕಾರಣ. ಭಾರತೀಯರ ಹಕ್ಕು ಮತ್ತು ಘನತೆಗಳ ಬಗ್ಗೆ ಇವನಿಗೆ ವಿಶೇಷವಾದ ಕಾಳಜಿ ಇತ್ತೆಂದು ತಿಳಿಯುತ್ತದೆ. ಈ ಕಾಲದಲ್ಲಿ ಅವನು ಎರಡು ಮೂರು ಕಾದಂಬರಿಗಳನ್ನೂ ಬರೆದನು. ಇದರೊಂದಿಗೇ ತನ್ನ ಲಾಯರ್ ಕೆಲಸವನ್ನೂ ಮುಂದುವರೆಸಿದನು. ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಮತ್ತು ಅಯೋಧ್ಯಾ ಪ್ರಸಾದ್ ಎಂಬ ಶ್ರೀಮಂತ (Army Contractor) ಅವನ ಮುಖ್ಯ ಕಕ್ಷಿಗಾರರಲ್ಲಿ ಇಬ್ಬರು. ಇಬ್ಬರಿಂದಲೂ ಅವನಿಗೆ ಬೇಕಾದಷ್ಟು ಹಣ ಸಂಪಾದನೆಯಾಯಿತು, ಬೆಲೆ ಬಾಳುವ ಉಡುಗೊರೆಗಳು ದೊರೆತವು. 

ರಾಣಿ ಲಕ್ಷ್ಮೀಬಾಯಿ ಅವರ ಪತಿಯ ಮರಣಾನಂತರ ಅವರ ಆಸ್ತಿಗಳನ್ನು ಕಂಪನಿ ಸರ್ಕಾರವು ವಶಪಡಿಸಿಕೊಂದದ್ದು ಮಾತ್ರವಲ್ಲ, ಅವರ ದತ್ತು ಮಗನ ಹಕ್ಕುಗಳನ್ನೂ ನಿರಾಕರಿಸಿದ್ದರಲ್ಲವೇ? ರಾಣಿಯವರ ಆಸ್ತಿಗಳನ್ನು ಹಿಂತಿರುಗಿಸಬೇಕೆಂದು ಮತ್ತು ಅವರ ದತ್ತು ಮಗನನ್ನು ಸ್ವಂತ ಮಗನಂತೆಯೇ ಪರಿಗಣಿಸಬೇಕೆಂದು,  ಜಾನ್ ಲ್ಯಾಂಗ್ ಆಗಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ Dalhousie ಅವರಿಗೆ ಸುದೀರ್ಘ ಮನವಿಯನ್ನು ಬರೆದು ಸಲ್ಲಿಸಿದನು. ಆದರೆ ಎಲ್ಲರಿಗೂ ತಿಳಿದಿರುವಂತೆ Dalhousie ಇದನ್ನು ಅಂಗೀಕರಿಸಲಿಲ್ಲ. ಅಂಗೀಕರಿಸಿದ್ದರೆ ಇಂಡಿಯಾದ ಚರಿತ್ರೆಯೇ ಬೇರೆಯಾಗುತ್ತಿತ್ತೋ ಏನೋ?

1854 ರಿಂದ 1859 ರ ಐದು ವರ್ಷಗಳ ಕಾಲ ಇಂಗ್ಲೆಂಡ್ ಯೂರೋಪುಗಳಲ್ಲಿ ಪ್ರವಾಸ ಮಾಡಿದನು.ಎಲ್ಲೆಲ್ಲೂ ಅವನಿಗೆ ಅನೇಕ ಗಣ್ಯರ ಸ್ನೇಹವಿತ್ತು. ಅನೇಕ ಕಥೆಗಳನ್ನೂ ಬರೆದನು. ಅವುಗಳಲ್ಲಿ ಬಹಳಷ್ಟು ಕಥೆಗಳು Charles Dickens ಸಂಪಾದಿಸಿ ಪ್ರಕಟಿಸುತ್ತಿದ್ದ Household Words ಎಂಬ ನಿಯತಕಾಲಿಕದಲ್ಲಿ ಪ್ರಕಟವಾದುವು.  

1859 ರಲ್ಲಿ ಇಂಡಿಯಾಗೆ ಹಿಂತಿರುಗಿ ಹಿಮಾಲಯದ ತಪ್ಪಲಿನಲ್ಲಿರುವ ಮುಸ್ಸೋರೀ ಎಂಬ ಊರಿನಲ್ಲಿ ನೆಲಸಿದನು. 1861 ರಲ್ಲಿ ಇನ್ನೊಮ್ಮೆ ಮದುವೆಯಾದನು, ವಧುವಿನ ಹೆಸರು Margaret Wetter. ಮೊದಲ ವಿವಾಹ ಯಾವಾಗ ವಿಚ್ಚೇದವಾಯಿತೋ ತಿಳಿಯದು. 1864 ರಲ್ಲಿ ಕಾಲವಾದನು. ಅವನು ಚಿಕ್ಕ ವಯಸ್ಸಿನಲ್ಲೇ ಗತಿಸಿದ್ದಕ್ಕೆ ಅವನ fast life style ಏ ಕಾರಣ ಎಂದು ನಂಬುತ್ತಾರೆ. ಬೆಳಗಿನ ಉಪಹಾರಕ್ಕೆ Champagne ಸೇವಿಸುತ್ತಿದ್ದವರಲ್ಲಿ ಇವನೇ ಮೊದಲಿಗ ಎಂದು ಕಾಣುತ್ತದೆ! ಮುಸ್ಸೋರಿಯ ಒಂದು ಚರ್ಚಿನ ಹಿಂದೆಯೇ ಅವನ ಗೋರಿ ಇದೆ.

ಈಗ ಜನರಲ್ಲಿ ಜಾನ್ ಲ್ಯಾಂಗ್ ನ ನೆನಪಿರುವುದು ಮುಖ್ಯವಾಗಿ ಅವನ “True Tales of Botany Bay” ಎಂಬ ಕಥಾ ಸಂಕಲನದಿಂದ. ಈ ಕಥೆಗಳೆಲ್ಲವೂ ಸಿಡ್ನಿಯ ಮತ್ತು ಸುತ್ತು ಮುತ್ತಲಿನ ಪ್ರದೇಶಗಳಿಗೆ ಸಂಬಂಧಪಟ್ಟವು. ಆ ದಿನಗಳಲ್ಲಿ ಸಿಡ್ನಿಯೇ ಒಂದು ಊರು. Parramatta, Penrith ಮುಂತಾದುವು ಸಮೀಪದ ಹಳ್ಳಿಗಳು. ಸಿಡ್ನಿಗೂ ಈ ಊರುಗಳಿಗೂ ನಡುವೆ ದಟ್ಟವಾದ ಕಾಡು. ಅಲ್ಲಿ ದರೋಡೆಕಾರರೂ, ಹಗಲುಗಳ್ಳರೂ ರಾಜಾರೋಷವಾಗಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದರು. ಕಥೆಗಳಲ್ಲಿ ಕೆಲವು ಇಂತಹ ಸಂದರ್ಭಗಳನ್ನು ಕುರಿತು ಬರೆದಿದ್ದು. ಇದಲ್ಲದೆ ಹಾಸ್ಯದ ಕಥೆಗಳೂ ಪತ್ತೇದಾರಿ ಕಥೆಗಳೂ ಈ ಸಂಕಲನದಲ್ಲಿವೆ.

ಎಲ್ಲ ಕಥೆಗಳೂ ಸ್ವಾರಸ್ಯವಾಗಿವೆ. ಆದರೆ ಒಂದು ಕಥೆಯ ಒಂದು ಭಾಗ ಮಾತ್ರ ಇಲ್ಲಿ ತಿಳಿಸುತ್ತೇನೆ. ಈಗ ಸಿಡ್ನಿಯ ಶ್ರೀಮಂತರ ಉಪನಗರವೆಂದು ಪ್ರಖ್ಯಾತವಾಗಿರುವ Vaucluse ನಲ್ಲಿ ಆಗ ತಾನೇ ಮಂದಿ ಮಹಲುಗಳನ್ನು ಕಟ್ಟಲು ಪ್ರಾರಂಭಿಸಿದ್ದರು. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಶಹರಿನ ಸಾಮೀಪ್ಯ. ಹಾಗೆ ಮನೆ ಕಟ್ಟಿದವರಲ್ಲಿ Sir Henry Hayes ಒಬ್ಬನು. ಇವನು ಮೂಲತಃ ಐರ್ಲೆಂಡ್ ನ ಒಬ್ಬ ಶ್ರೀಮಂತ. ಒಬ್ಬ ಯುವತಿಯನ್ನು ಅವಳ ಇಷ್ಟಕ್ಕೆ ವಿರುದ್ಧವಾಗಿ ಮದುವೆಮಾಡಿಕೊಳ್ಳುವ ಸಲುವಾಗಿ ಅಪಹರಿಸಲು ಯತ್ನಿಸಿದ್ದಕ್ಕಾಗಿ ಅವನನ್ನು ಗಡೀಪಾರು ಮಾಡಿದ್ದರು. ಸಿಡ್ನಿಗೆ ಬಂದನಂತರ ಅವನ ಸ್ವಭಾವದಲ್ಲಾಗಲಿ ಚಟುವಟಿಕೆಗಳಲ್ಲಾಗಲಿ ಯಾವ ಕುಂದು ಕೊರತೆಯೂ  ಇರಲಿಲ್ಲ. ಅವನ ಸಭ್ಯತೆಗೂ ಔದಾರ್ಯಕ್ಕೂ ಮಣಿದು ಎಲ್ಲರೂ ಅವನನ್ನು ಗೌರವಿಸುತ್ತಿದ್ದರು. 

Hayes, Vaucluse ನಲ್ಲಿ ಮನೆಯನ್ನೇನೋ ಕಟ್ಟಿದನು. ಆದರೆ ಆಗ ಅಲ್ಲಿ ಹಾವುಗಳ ಕಾಟ ವಿಪರೀತ. ಮನೆಯ ಹೊರಗೂ ಒಳಗೂ ಎಲ್ಲೆಲ್ಲೂ ಹಾವುಗಳೇ – ಅಡಿಗೆಮನೆಯಲ್ಲಿ, ದಿವಾನಖಾನೆಯಲ್ಲಿ, ಹಾಸಿಗೆಯ ಮೇಲೆ, ಹಾಸಿಗೆಯ ಕೆಳಗೆ - ಕಪ್ಪು ಹಾವು, ಕಂದು ಹಾವು, ಹಳದಿ ಹಾವು ಹೆಬ್ಬಾವು ಇತ್ಯಾದಿ ನಿರ್ಭಯವಾಗಿ ಓಡಾಡುತ್ತಿದ್ದುವು. ಎಷ್ಟು ಕೊಂದರೂ ಅವುಗಳ ಕೊನೆಗಾಣದು.

Hayes ಗೆ ಕೆಲವು ಕಾಲ ಏನು ಮಾಡಬೇಕೆಂದು ಹೊಳೆಯಲಿಲ್ಲ. ಎಷ್ಟಾದರೂ ಅವನು Irish. ಸಂಕಟ ಬಂದಾಗ St Patrick ನ ಮೊರೆಹೊಕ್ಕನು, ನಾವು ವೆಂಕಟರಮಣನನ್ನು ಮೊರೆಹೋಗುವ ಹಾಗೆ. ಕನಸಿನಲ್ಲಿ ಜ್ಞಾನೋದಯವಾಯಿತು. ಇಡೀ ಐರ್ಲೆಂಡ್ನಲ್ಲಿ ಹುಡುಕಿದರೂ ಒಂದು ಹಾವು ಕೂಡ ಸಿಕ್ಕುವುದಿಲ್ಲ ಅಲ್ಲವೇ? ಅದಕ್ಕೆ ಅಲ್ಲಿನ ಮಣ್ಣಿನ ಪ್ರಭಾವವೇ ಕಾರಣ ಎಂದು ತಿಳಿದು ಅಲ್ಲಿಂದ ಒಂದು ಹಡಗಿನ ತುಂಬಾ ಮಣ್ಣನ್ನು ತರಿಸಿದನು. ಆ ಮಣ್ಣನ್ನು ತನ್ನ ಜಮೀನಿನ ಮೇಲೆಲ್ಲವೂ ಹರಡಿಸಿದನು. ಪರಿಣಾಮ ಅವನ ಮನೆಯಲ್ಲೂ ಹೊರಾಂಗಣದಲ್ಲೂ ಒಂದು ಹಾವೂ ಇಲ್ಲವಾಯಿತು. ಅಕ್ಕ ಪಕ್ಕದ ಮನೆಗಳಲ್ಲೇನೋ ಬೇಕಾದಷ್ಟಿದ್ದವು. 


Hayes ಕಟ್ಟಿದ ಮನೆಯನ್ನು ಮುಂದೆ William Charles Wentworth ಎಂಬಾತನು ಖರೀದಿಸಿ, ಅವನೂ ಅವನ ವಂಶಸ್ಥರೂ ಅನೇಕ ಅಭಿವೃದ್ಧಿಗಳನ್ನು ಮಾಡಿದರು. ಈಗ ಆ ಮನೆಯೇ ಸಾರ್ವಜನಿಕರು ಸಂದರ್ಶಿಸಬಹುದಾದ Vaucluse House.

ಖ್ಯಾತ Anglo Indian ಲೇಖಕ Ruskin Bond ಅವರು ಮತ್ತು ಅವರ ಸಂಗಡಿಗರು ಜಾನ್ ಲ್ಯಾಂಗ್ ನ ಜನ್ಮ ದಿನವನ್ನು ಮುಸ್ಸೋರಿಯಲ್ಲಿ ಈಗಲೂ ಆಚರಿಸುತ್ತಾರೆ.

ಭಾರತದ ಮುಖ್ಯ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 2014 ರಲ್ಲಿ ಆಸ್ಟ್ರೇಲಿಯಾವನ್ನು ಸಂದರ್ಶಿಸಿದಾಗ ಒಂದು frame ಹಾಕಿದ ಚಿತ್ರಗಳ collage ಅನ್ನು ಆಗಿನ ಮುಖ್ಯ ಮಂತ್ರಿ Tony Abbott ಅವರಿಗೆ ಕಾಣಿಕೆ ಕೊಟ್ಟರು.

ಈ collage ನಲ್ಲಿ ನಾಲ್ಕು ಫೋಟೋಗಳಿವೆ:

1.ಜಾನ್ ಲ್ಯಾಂಗ್ Dalhousie ಗೆ ಸಲ್ಲಿಸಿದ ಮನವಿ ದಾಖಲೆಯ ಜತೆಗಿನ ಪತ್ರ (Covering Note)

2. Mussori ಯಲ್ಲಿ ನೆರವೇರಿದ ಅವನ ವಿವಾಹದ ದಾಖಲೆ 

3. Mussori ಯಲ್ಲಿರುವ ಅವನ ಅಂತಿಮ ವಿರಾಮ ಸ್ಥಳ

4. Mussori ಯ Christ Church ನಲ್ಲಿ ತೂಗು ಹಾಕಿರುವ ಸ್ಮಾರಕ ಫಲಕ. ಇದರಲ್ಲಿ ಅವನನ್ನು “A Scholar and Friend of India” ಎಂದು ಕರೆಯಲಾಗಿದೆ.




Comments

  1. ಅಬ್ಬಾ, ತುಂಬಾ ಆಸಕ್ತಿದಾಯಕವಾಗಿದೆ ನಿಮ್ಮ ಲೇಖನ. ನಿಮ್ಮ ಲೇಖನಗಳಿಂದ ಎಷ್ಟೊಂದು ವಿಷಯಗಳನ್ನು ತಿಳಿದುಕೊಳ್ಳಬಹುದು. Vaucluse house ಹಿಂದೆ ಎಂದೋ ನೋಡಿದ್ದೆ. ಆದರೆ ಅದರ ಚರಿತ್ರೆ ಈಗ ತಿಳಿಯಿತು. ಮತ್ತು True tales of botany bay, ಹುಡುಕಿ ಓದಬೇಕೆಂಬ ಕುತೂಹಲ ಮೂಡಿದೆ.

    ReplyDelete
  2. ಧನ್ಯವಾದಗಳು. Botany Bay, True Tales of Early Australia ಈ ಪುಸ್ತಕವನ್ನು Project Gutenberg ವೆಬ್ ಸೈಟ್ ನಿಂದ download ಮಾಡಬಹುದು.

    ReplyDelete
  3. Very interesting article. Hope to visit Vaucluse House soon.
    I bought one of the books by Ruskin Bond 'The big book of animal stories', just a couple of months ago, haven't read it yet. Now I am inspired to read it. He has received many awards including the Padma Shri and the Padma Bhushan.

    ReplyDelete
  4. Good to know about John Lang's and his connection with India. I had read his 'Ghost upon the Rail' long time ago.

    ReplyDelete
  5. ಸುಮಾರು ೨೦೦ ವರ್ಷ ಹಿಂದಿನ ವಿಷಯವನ್ನು ನಮ್ಮ ಭಾಷೆಯ ಓದುಗರಿಗೂ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ರಾಣಿಯ ಪತಿಯ ಮರಣಾ ನಂತರ ಆಸ್ತಿಯ ವಿಚಾರವಾಗಿ ಅವರ ಹಕ್ಕಿನ ಬಗ್ಗೆ ಜಾನ್ ಮನವಿ ಬರೆದಿದ್ದರು ಎನ್ನುವ ಸಂಗತಿ ತಿಳಿದಿರಲಿಲ್ಲ. ಎಂದಿನಂತೆ ನಿಮ್ಮ ಲೇಖನ ವಿಭಿನ್ನ ಹಾಗು ಆಸಕ್ತವಾಗಿದೆ

    ReplyDelete

Post a Comment