ಮೊಡವೆಗೆ ರಾಮಬಾಣ

 ಮೊಡವೆಗೆ ರಾಮಬಾಣ  -  ಗ್ರೀಷ್ಮಳ ಹೊಸ ಪ್ರಯೋಗ

  ಲೇಖನ - ಹೇಮಾ ಸದಾನಂದ ಅಮೀನ್ ,  ಮುಂಬಯಿ



ನಮ್ಮ ದಿನಸಿ  ಯಾದಿಯಲ್ಲಿ  ಸ್ಟೇಷನರಿಯಾದಿ ಸೇರಿಸಿದ್ದು ಆಶ್ಚರ್ಯವೇನಲ್ಲ .   ದಿ ಗ್ರೇಟ್  ಗ್ರೀಷ್ಮಳ ಸಾಮ್ರಾಜ್ಯದಲ್ಲಿ ಎಲ್ಲವೂ ಸಾಧ್ಯ. ತಿಂಗಳ  ದಿನಸಿ ಯಾದಿ  ಪುರುಸೊತ್ತಿದ್ದಾಗಲೇ  ಮಾಡಬೇಕು.  ಅಕ್ಕಿ, ಗೋದಿ, ರವೆ, ಸಕ್ಕರೆ, ವಾಶಿಂಗ್ ಪೌಡರ್, ಸೆಲೋ ಟೇಪು, ಫೆವಿಕಾಲ್, ಟಾಲ್ಕಂ ಪೌಡರ್, ಇನ್ನು ಮೂವತ್ತು ಜೋಡಣೆಗ ಬೇಕಾಗುವ ವಸ್ತುಗಳು.

.ನಾನು  ಖಾಸಗಿ ಕಂಪನಿಯಲ್ಲಿ  ಆಕೌಂಟಂಟಾಗಿ ಕೆಲಸ ಮಾಡುತ್ತಿದ್ದು ,   ಡಿಲೆವರಿ ಮುಂಚೆಯೇ  ಕೆಲಸಕ್ಕೆ  ಬಾಯ್ ಬಾಯ್ ಅಂದಿದ್ದೆ.    ನಮ್ಮ  ಮುದ್ದಿನ ಮಗಳೇ  ಗ್ರೀಷ್ಮ.  

ಎಲ್ಲರೂ ಅವಳ ಮುದ್ದಾದ ತುಂಟತನವನ್ನು  ನೋಡಿ   ಸೂಪರ್ , ಆಕ್ಟಿವ್ ಗರ್ಲ್ , ಸ್ಮಾರ್ಟ್, ಕ್ಯೂಟ್ ಬೇಬಿ .. ಎಂಬ ಹೇಳಿದಾಗ ಮೊದಮೊದಲು ಒಂಥರಾ ಹೆಮ್ಮೆ ಯೆನಿಸಿದರೂ . ಬರ್ತಾ ಬರ್ತಾ  ಅವಳ  ರಾದ್ದಂತ  ತಡೆಯೋದು ಕಷ್ಟವಾಯಿತು.  ಮನೆಗೆ ಬಂದವರಿಗೇನು? ಅವರು  "ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ ಕೂಸು ಕಂದಯ್ಯ  ಒಳ  ಹೊರಗ ಓಡಿದರ  ಬೀಸಣಿಕೆ ಗಾಳಿ ಸುಳಿದಾವ. “ ಎಂದು ಗರತಿಯ ಹಾಡನೊಮ್ಮೆ  ರಾಗದಲ್ಲಿ ಹಾಡಿ ಹೋಗ್ತಾರಮ್ಮ .. ಅನುಭವಿಸುವವರಿಗೆ  ಮಾತ್ರ  ಆ ಸವಿನೋವ ಸಂಕಟ ಗೊತ್ತು . 

ಮನೆಯ ಗೋಡೆಯ ಮೇಲೆ ಗ್ರೀಷ್ಮ ಬರೆದ ಚಿತ್ರ, ಯಾವ ರವಿವರ್ಮ, ಎಂ. ಎಫ್. ಹುಸೇನ್ ಚಿತ್ರಕ್ಕೆ ಕಡಿಮೆಯಾಗಿರುವುದಿಲ್ಲ. ಅವುಗಳನ್ನು ನೋಡಿ ವ್ಹಾ... ವ್ಹಾ..  ಎಂದು ಚಪ್ಪಾಳೆ ತಟ್ಟಿ ಒರೆಸುವುದೇ ದೊಡ್ಡ  ಕೆಲಸ.  ಅಳಿಸುತ್ತಾ ಅಳಿಸುತ್ತಾ ಇದೀಗ ಒಳಬಣ್ಣವೂ ಕಾಣುತ್ತಿತ್ತು.  ಅಲ್ಲಿ ಹೊಸ ಚಿತ್ರ, ವರ್ತುಲ, ಚೌಕ , ತ್ರಿಕೋನ  ಇನ್ನು ಏನೇನೋ... ಇದೆಲ್ಲವನ್ನು  ಸಂಬಂಧಿಕರಿಗೆ  ವಿಡಿಯೋ ಕಾಲ್ ಮಾಡಿ ತೋರಿಸುವುದೇ ಕೆಲಸವಾಯಿತು.  

ನನ್ನ ನಾದಿನಿಯ ಮಗಳು ಋತು ನಮ್ಮನೆಗೆ  ಬಂದಾಗ ಅವಳಿಗೆ ಈ ಆಕೃತಿಗಳನ್ನು ತೋರಿಸಿಯೇ    ಭೂಮಿತಿಯ ಪಾಠ ಹೇಳಿಕೊಡುವುದುಂಟು.. .”  ಕೂಸು  ಇದ್ದ ಮನಿಗೆ ಬೀಸಣಿಗೆ ಯಾತಾಕ ಎಂಬಂತೆ ನನ್ನ ಮಗಳು ಋತು ಜೊತೆ ಸೇರಿದರಂತೂ ಕೆಂಪಾನೂ ಕೆಂಬಣ್ಣ ನೋಡಲೆರಡು ಸಾಲದು ಕಣ್ಣ.. “ 

ಇವರು ಆಫೀಸ್ ಹೊರಡುವ ಮುಂಚೆಯೇ ಅಡುಗೆ ಕೆಲಸ ಮುಗಿಸಿ ಆ ಬಳಿಕ  ಕಿಚನ್  ಲಾಕ್.  ಇಲ್ಲಾಂದ್ರೆ ಗ್ರೀಷ್ಮ ರೆಫ್ರೀಜರೇಟರ್ ಬಾಗಿಲು ತೆರೆದು ಅಲ್ಲಿದ್ದ ವಸ್ತುಗಳನ್ನು  ಬಿಸಾಕಿ ತನ್ನ ಆಟದ ಸಾಮಾನುಗಳನ್ನು ತುರುಕಿಡುವುದು. 

ನಾನಂತು ದಿನದಲ್ಲಿ ಮಲಗುವುದೇ ಇಲ್ಲ. ಅಪರೂಪಕ್ಕೆ ನಿದ್ದೆ ಬಂದು ಮಧ್ಯದಲ್ಲಿ ಗ್ರೀಷ್ಮ ಎಚ್ಚೆತ್ತರೆ ಮತ್ತೆ ಕಥೆಯೇ ಬೇರೆ .  ತನ್ನ ಸಾಫ್ಟ್ ಟಾಯ್ಗಳನ್ನು  ಬಚ್ಚಲು ಮನೆವರೆಗೆ  ಕಿವಿಯಿಂದ ಎಳೆಯುತ್ತಾ ಅಲ್ಲಿ ಮನದಣಿಯೇ ಮೀಯಿಸುತ್ತಿದ್ದಳು. ನಾನೆದರೂ ಕಣ್ಣರಳಿಸಿ , “ ಏನೋ ಪುಟ್ಟಾ ಇದು? ಎಂದು ಕೇಳಿದರೆ  ತೊದಲುತ್ತಾ   “ ಮಮ್ಮಾ  ನನ್ನ ಟೆಡಿಗೆ ಕೋಲ್ಡ್ ಆಗುತ್ತೆ , ಬೇಗ  ತಲೆ ಒರೆಸೆಂದು ಮಡಿಲಲ್ಲಿ ತಂದು ಮಲಗಿಸುವಳು . . ಅಷ್ಟಕ್ಕೇ ನಿಲ್ಲದೆ ಮೇಡಂ, ವಿಕ್ಸಿನ ಡಬ್ಬಿ ತಂದು ಅದರ ಮೂಗಿಗೆ ತುರುಕಿಸುವುದನ್ನು ನೋಡಿ  ನಗುವುದೋ ? ಅಳುವುದೋ ಗೊತ್ತಾಗುತ್ತಿರಲಿಲ್ಲ. ಗ್ರೀಷ್ಮಳ ಮುದ್ದಾದ ತುಂಟತನಕ್ಕೆ   ನನ್ನದೇ ದೃಷ್ಟಿ ತಾಕಿತ್ತೆಂದು ದಿಟ್ಟಿ ಬೊಟ್ಟು ತಪ್ಪಿಸುತ್ತಿರಲಿಲ್ಲ. ಎಷ್ಟೇ ಕಿತಾಪತಿ ಮಾಡಿದರೂ ಮಗಳೆಂಬ ಮಮಕಾರದಿಂದ ಸಿಟ್ಟೆಲ್ಲ  ಕೆಲವೇ ಕ್ಷಣಗಳಲ್ಲಿ ಕರಗಿ ಹೋಗುತ್ತಿದ್ದವು. 

ನಾನೊಮ್ಮೆ  ಯು – ಟ್ಯೂಬಿನಲ್ಲಿ ಇಂತಹ ಮಕ್ಕಳನ್ನು  “ ಹೈಪರ್  ಆಕ್ಟಿವ್ ದಿಶ್ರ್ದೆರ್ಡ”ಮ ಅಂತ ಗುರುತಿಸಿದಾಗ ಇದೂ ಒಂದು  ಕಾಯಿಲೆಯಾ?  ಎಂಬ ಗುಮಾನಿ.   ಇನ್ನಷ್ಟು ವಿಡಿಯೋಗಳನ್ನು ಹೆಕ್ಕಿನೋಡಿದೆ .  ಕಾಯಿಲೆಯಲ್ಲದೆ  ಒಂದು ರೀತಿಯ ಅಸಮತೋಲನೆ' ಎಂದು ಖಾತ್ರಿ ಮಾಡಿದಾಗಾ  ಸ್ವಲ್ಪ ಮಟ್ಟಿಗೆ ಮನಸ್ಸು  ತಿಳಿಯಾಯಿತು.  

ಒಮ್ಮೆ ನಾನು  ಹಾಗೂ ಗೆಳತಿ ಚೈತ್ರ ಆಟೋದಲ್ಲಿ ಪಕ್ಕದ  ಮಾಲಿಗೆ ಹೋಗಿದ್ದೆವು.   ಅವಳಲ್ಲಿ  ಚೇಂಜ್ ಇಲ್ಲದಿರಲು ನಾನೇ   ಗ್ರೀರ್ಷ್ಮಳನ್ನು ಕೆಳಗಿಳಿಸಿ.  ವಾಲೆಟ್ ತೆಗೆದು ಹಣ ಕೊಡಲು  ಅನುವಾದೆ . ಅಷ್ಟರಲ್ಲಿ ಗ್ರೀಷ್ಮ  ಕೈಯಲೊಂದು ನಾಯಿಮರಿಯನ್ನು ಅವಚಿ ಹಿಡಿದು “  ಮಮ್ಮಾ, ದ್ವಾಗಿ. ದ್ವಾಗಿ ಎನ್ನುತ್ತಿದ್ದಂತೆ, “ ಈ ನಾಯಿಮರಿ ತೆಪ್ಪಗೆ ಇದೆಯಲ್ಲ !” ಎಂದು ಆಶ್ಚರ್ಯದಿಂದ ನೋಡಲು , ಅದು ಸತ್ತಿತ್ತು.  ಆ ಕ಼್ಷಣಮಾತ್ರ   ಸಿಟ್ಟು , ದುಃಖ, ಹತಾಶೆ ಒಂದಾಗಿ  ಅಲ್ಲೇ ಅತ್ತಿದ್ದೆ. 

ನನ್ನ ಒಳಗುದಿಯನ್ನು  ಅರ್ಥಮಾಡಿದ ಚೈತ್ರ , ನನ್ನ ಅತಂಕವನ್ನು ನೀಗಿಸಲೆಂದು ಮುದ್ದಾಂ ಶಿಶು ತಜ್ಣೆ ಡಾ. ಸರೋಜ ಅವರನ್ನು ಕನ್ಸಲ್ಟ್ ಮಾಡಿದಾಗ ಅವರು ,”   ಇದು ಕೇವಲ ಮಾನಸಿಕ ಅಸಮತೋಲನ ಅಷ್ಟೇ. . ಸಾಮಾನ್ಯವಾಗಿ ೪ ರಿಂದ  ೭ ವರುಷ ಪ್ರಾಯದ ವರೆಗೆ ಈ ವಿಶೇಷತೆ  ಕಂಡು ಬರುವುದು. ಆ ಬಳಿಕ ತನ್ನಷ್ಟಕ್ಕೆ ತಾನೇ ಸಾಮಾನ್ಯ ಮಕ್ಕಳಂತೆ ವರ್ತಿಸುತ್ತಾರೆ " ಎಂದರು. ಜೊತೆಗೆ ಕೆಲವು  ಪ್ರಶ್ನೆ, "ಗ್ರೀಷ್ಮಳ ಗರ್ಭಿಣಿಯಾಗಿದ್ದಾಗ, ನೀವು  ಹೊರರ್ ಮೂವೀಸ್ ನೋಡಿದ್ದಿದ್ರಾ?  ಮನೆಯಲ್ಲಿ ಜಗಳ , ಒತ್ತಡ ಇದ್ದೀತೆ?   ಎಂದು ಕೇಳಿದರು. ,  ಮತ್ತೆ ಮುಂದುವರಿಸುತ್ತಾ , ಹೈಪರ್ ಆಕ್ಟಿವ್ ಶರೀರದಲ್ಲಿರುವ ಹಾರ್ಮೋನುಗಳು ಏರುಪೇರಾಗಿರುವ ಕಾರಣದಿಂದಾಗಿರುವುದು. ಇಂತಹ ಮಕ್ಕಳ ಬೆಳವಣಿಗೆ,  ನಿಜವಾಗಿಯೂ  ಪಾಲಕರಿಗೆ  ಒಂದು  ಚ್ಯಾಲೆಂಜ್ .  ಅದ್ದರಿಂದ ಬಹಳ ತಾಳ್ಮೆಯಿಂದ ವರ್ತಿಸುವುದು ಅತ್ಯಗತ್ಯ. ಇನ್ನೊಂದು ಖುಷಿಯ ವಿಷಯವೆಂದರೆ,  ಹೈಪರ್ ಆಕ್ಟಿವ್ ಮಕ್ಕಳು, ಚುರುಕಾಗಿ  ಕ್ರಿಯಾತ್ಮಕ ವಿಷಯಗಳಲ್ಲಿ ಮುಂದುವರಿಯುತ್ತಾರೆ. 

ನಾನು ಅನಾಯಶವಾಗಿ  ಮನದಲ್ಲೆ  ಹರಕೆಗಳನ್ನು ಹೊತ್ತು  ಮರೆಯಬಾರದೆಂದು ಡೈರಿಯಲ್ಲಿ ಬರೆದಿಟ್ಟೆ. .ಮನೆ ಮಂಡಿಯವರಿಗೆ ವಿಷಯ ತಿಳಿದರೆ  ಉಚಿತ ಸಲಹೆಗಳ ರಾಶಿಗಳೇ ಬಂದಾವು  ' ಎಂದು  ಆದಷ್ಟು ಪರಿಸ್ಥಿತಿಯನ್ನು ತಾನೇ ಅನುಭವಿಸುವುದು  ಲೇಸೆಂದು ಸುಮ್ಮನಾದೆ..

ನಮ್ಮ ಮನೆಯ ಕೆಲಸದಾಕೆ  ಬೇರೆಯವರ ವಿಷಯವನ್ನು  ಷಾರ್ಟ್ ಮೂವಿ ತರಹ ನನ್ನ ಮುಂದೆ ದಿನಾ ಚಿತ್ರಿಸಿ ಹೇಳುತ್ತಿದ್ದದ್ದನ್ನು ನೋಡಿ ಇನ್ನು ತಾನಿಲ್ಲದಾಗ,  ಮಗುವಿನ ಹಠಕ್ಕೆ ಸಿಟ್ಟಿನಿಂದ ಹೊಡೆದೇ  ಬಿಟ್ಟಾಳೆಂಧು ಮತ್ತು .ಬೇರೆ ಕಡೆ ಹೋಗಿ ಗ್ರೀಷ್ಮಳ ಜಾತಕ ಓದಿದರೆ? ಎಂಬ ಭಯದಿಂದ ಅವಳನ್ನೂ  ನೆಪ ಹೇಳಿ ಕೆಲಸದಿಂದ ತೆಗೆದು ಹಾಕಿದೆ. . 

ನನ್ನ ಪತಿಗೆ  ಗ್ರಿಷ್ಮಳ ವಿಷಯ  ತಿಳಿಸಿದಾಗ, " ಇದೊಂದು ಸಮಸ್ಯೆಯಾ?. ಇಷ್ಟಕ್ಕೂ ಈ ವಿಷಯಕ್ಕೆ  ಡಾಕ್ಟರ್ ಬಳಿ ಹೋಗಲೆ ಬಾರದಿತ್ತು " ಎಂದು ರೇಗಾಡಿದರು.. ಹಲವು ಬಗೆಯಿಂದ ತಿಳಿಸಿ ಹೇಳಲೂ  ಪ್ರಯೋಜನವಾಗಲಿಲ್ಲ. ಅದಕ್ಕೆ ವಿರುದ್ಧವಾಗಿ  ನಮ್ಮಲ್ಲಿಯೇ  ಮೌನಸಮರ ಆರಂಭವಾಯಿತು.  

ಈ ಮಧ್ಯ  ನನ್ನ ಚಿಕ್ಕಮ್ಮನ ಮಗ ಆದಿತ್ಯ ಬೆಂಗಳೂರಿನಿಂದ ಇಲ್ಲಿ  ಮಲ್ಟಿನ್ಯಾಷನಲ್ ಕಂಪನಿಯೊಂದರಲ್ಲಿ ಇಂಟರ್ವ್ಯೂ ಗಾಗಿ  ಬರುವವನಿದ್ದ. 

ಚೈತ್ರಳಿಗೆ  ಈಗ ಯಾರೂ ಮನೆಗೆ ಬರುವುದು ಇಷ್ಟವಿರಲಿಲ್ಲ. ಆದರೂ  ಆದಿತ್ಯ   ಮೊದಲ  ಬಾರಿ ಮುಂಬೈಗೆ ಬರುತ್ತಿದ್ದಾನೆಂದು  ಮನೆಗೆ ಬೇಕಾದ ಸಾಮಾನಿನ ಜತೆಗೆ ಸ್ವಲ್ಪ ರೆಡಿಮೇಡ್ ತಿಂಡಿಗಳನ್ನೂ ತಂದಿಟ್ಟಳು.  

ಆದಿತ್ಯ ಬಂದವನೇ ಸ್ನಾನ ಪೂಜೆ ಮುಗಿಸಿ ಬಂದು ಕೂತಾಗಲೇ ಗ್ರೀಷ್ಮನ ಪರಿಚಯವಾಯಿತು.  ಅತಿ ಮುದ್ದಾಗಿ , " ಹಾಯ್ ಬೇಬಿ ಬಾ ಇಲ್ಲಿ ಎಂದು ಕರೆದಾಗ, ಒಂದು ನಿಮಿಷ ಕಣ್ಣು ಮಿಟುಕಿಸುತ್ತಾ, ಮಮ್ಮಾ , " ಯಾಕೆ ಬರ್ತಾರೆ ಇವರೆಲ್ಲಾ” ಅಂತ ನೀನು ಈ ಅಂಕಲನ್ನೇ ಹೇಳಿದ್ದಾ?"  ಎಂದೇ ಬಿಟ್ಟಳು.  ನನಗೆ ಏನು ಹೇಳಬೇಕೆಂದೆ ತೋಚಲಿಲ್ಲ. ಡಾ. ಸರೋಜ ಅವರ ಹೇಳಿದಂತೆ ಸಮಾದಾನದ ಎಂಜಲು ನುಂಗಿ  , ಹುಸಿನಗುವನ್ನು ತುಟಿಗೆಳೆದುಕೊಂಡೆ. 

ಮರುದಿನ ಬೆಳಿಗ್ಗೆ ಆದಿತ್ಯನಿಗೆ ಇಂಟರ್ವ್ಯೂ ಹೋಗಬೇಕಿತ್ತು. ಬೆಳಿಗ್ಗೆ ಬೇಗನೆ ಎದ್ದು ಹೋಗಿ   ಬರುವಾಗ ಮಧ್ಯಾಹ್ನ  ೩.೩೦ ಗಂಟೆ.  ಬಂದವನಿಗೆ ತಡೆಯಲಾರದ ತಲೆ ಸಿಡಿತ. ಆತ  ಊಟ  ಮುಗಿಸಿ ತನ್ನ ಕೋಣೆ ಸೇರಿದ್ದನು.    ಗ್ರೀಷ್ಮಳನ್ನು ಮಲಗಿಸುವ ಹರ ಸಾಹಸದಲ್ಲಿ ಗೆದ್ದ  ನನಗೂ  ಸಣ್ಣದಾಗಿ ನಿದ್ದೆ ಬಂದೆ ಬಿಟ್ಟಿತು. ಅದಾದ ಅರ್ಧ ತಾಸಲ್ಲಿಯೇ ಒಳಗೆ   ಸರಬರ ಸದ್ದು ಕೇಳಿ ಎದ್ದು ನೋಡಲು ಪಕ್ಕದಲ್ಲಿ  ಗ್ರೀಷ್ಮ ಇರಲಿಲ್ಲ . ದಿಗಿಲೆದ್ದು  ಹೊರಬಂದಾಗ,  ಆದಿತ್ಯ ಸಿಂಕಿಗೆ ಮುಖವೊಡ್ಡಿ ಕೆನ್ನೆಗೆ ನೀರೆರೆಚಿಕೊಳ್ಳುತ್ತಿದ್ದನು . ಮುಖ  ನೋಡಲು ರಕ್ತ ಒಂದೇ ಸಮನೆ ಹರಿಯುತ್ತಿದ್ದನ್ನು ಕಂಡು, ಏನಾಯಿತು ಆದಿತ್ಯ?  ಗ್ರೀಷ್ಮ ಎಲ್ಲಿ? 

“ ಪಾಪು  ಏನ್ನನ್ನೋ ತಂದು ಕೆನ್ನೆಗೆ ಉಜ್ಜಿದ್ದಳು.  ನಿದ್ರೆಯ ಭರದಲ್ಲಿ ಏನಂತಾ ತಿಳಿಯಲಿಲ್ಲ.   ಸ್ವಲ್ಪ ಹಳದಿ ಹುಡಿ ಕೊಡಕ್ಕ  ಈ ಹಾಳು  ರಕ್ತಸ್ರಾವ ನಿಲ್ಲೋದೆ ಇಲ್ಲ ನೋಡು” .  ನನಗಿನ್ನೂ ವಿಷಯ ಅರ್ಥವಾಗದೆ . ಗ್ರೀಷ್ಮಳನ್ನು ಹುಡುಕುತ್ತಾ ಬಂದಾಗ ,ಆಕೆ  ಗಿರಣಿ ಸಾಮಾನುಗಳಲ್ಲಿಯ ರವೆಯಿಂದ ರಂಗೋಲಿ ಬಿಡಿಸುತ್ತಿದ್ದಳು.  ಅಲ್ಲಿಯೇ ಪಾತ್ರೆ ತಿಕ್ಕುವ ಹೆವಿ ಸ್ಟೈನ್ ಸ್ಕಾಚ್ ಬ್ರೈಟ್  ಬಿದ್ದಿತ್ತು.  ಅದನ್ನೆತ್ತಿ ಸೂಕ್ಷ್ಮವಾಗಿ ನೋಡಲು, ರಕ್ತ ಮಾಂಸದ ಪರೆಗಳು ಅಂಟಿಕೊಂಡಿದ್ದವು.  ಆದಿತ್ಯನ  ಮುಖದಲ್ಲಿ ಮೊಡವೆಗಳ ಗುಳ್ಳೆಗಳು ಎದ್ದಿದ್ದವು.   ಈ ಹುಡುಗಿಗೆ ಎನೆನಿಸಿತೂ  ಆ ಸ್ಕ್ರಬ್ಬಿನಿಂದ ಚೆನ್ನಾಗಿ ಅವನ ಕೆನ್ನೆ ಉಜ್ಜಿದ್ದಳು. ಅಮಾಯಾಕನಂತೆ ನೋವಿಗೆ ಸಿಕ್ಕಿಕೊಂಡ ಆದಿತ್ಯನ   ಅವಸ್ಥೆ ನೋಡಿದ ನಾನು ಸಿಟ್ಟಿನ ಭರದಲ್ಲಿ ಗ್ರೀಷ್ಮಳ ಬೆನ್ನಿಗೆ ನಾಲ್ಕು ಬಾರಿಸಿದೆ. ಮತ್ತೆ  ಅವಳ ವಿವಶತೆಯನ್ನರಿತು ದುಃಖ ತಾಳಲಾರದೆ ಬಾಯಿಕೊಟ್ಟು ಅತ್ತು ಅಲ್ಲೇ ಕುಸಿದು ಬಿದ್ದೆ..  

ಇವೆಲ್ಲವು ಸಹಜವೆನಿಸಿದರೂ  ಆದಿತ್ಯನಿಂದ ನೋಡಲಾಗಲಿಲ್ಲ.  ಎಲ್ಲವನ್ನು ಸರಿ ಪಡಿಸುವವರೆಗೆ ಇವರು  ಬಂದೆ ಬಿಟ್ಟರು.  ಪರಿಸ್ಥಿತಿಯನ್ನು ಕಣ್ಣಾರೆ ನೋಡಿ ಆವರಿಗೆ ನನ್ನ  ಒಳಗುದಿ ಅರ್ಥವಾಗಿರಬೇಕು .  ವಾತಾವರಣವನ್ನು ತಿಳಿಗೊಳಿಸಲು  “  ಏನಿಲ್ಲ ಭಾವ, ನಿಮ್ಮ ಮೊಡವೆಗಳಿಗೆ ನಮ್ಮ ಗ್ರೀಷ್ಮಳ  ರಾಮಬಾಣ.  “ ಎನ್ನಬೇಕೇ? 


Comments

  1. ಹೊಸ ರೀತಿಯ ಕಥಾ ವಸ್ತು, ಭಿನ್ನವಾಗಿದೆ. ನಿರೂಪಣೆ ಕೂಡ ಸೊಗಸಾಗಿದೆ. ಅತಿ ಚಟುವಟಿಕೆಯಿಂದ ಕೂಡಿದ ಮಕ್ಕಳ ನಡವಳಿಕೆಯನ್ನು ಖಾಯಿಲೆ ಎಂದು ಹೇಳಲು ಮನಸ್ಸು ಒಪ್ಪುವುದೇ ಇಲ್ಲ. ಕೆಲ ವರ್ಷಗಳ ನಂತರ ತಮಗರಿವಿಲ್ಲದೇ ಅವರೆಯೇ ಇವರು ಎನ್ನುವಷ್ಟು ಬದಲಾಗಿರುತ್ತಾರೆ. ಪೋಷಕರ ತಾಳ್ಮೆಯೇ ಇದಕ್ಕೆ ಚಿಕಿತ್ಸೆ.

    ReplyDelete
  2. ಮನದ ಬೇಗುದಿಗೂ ಕಾರಣ ಇರುತ್ತೆ. ಪರಿಹಾರವಿರದ ಸಮಸ್ಯೆಗಳು ತುಂಬಾ ಕಡಿಮೆ. ಎರಡನ್ನೂ ಸಂದರ್ಭಗಳೊಂದಿಗೆ ಮನೋಜ್ಞವಾಗಿ ತಿಳಿಸಿದ್ದೀರಿ. Hyper Active Syndrome is treatable. ಮಗುವಿನ ಅತಿ ಚೈತನ್ಯವನ್ನು ಸೂಕ್ತ ಚಟುವಟಿಕೆಗಳನ್ನು ನೀಡಿ ತಹಬಂದಿಗೆ ತರಬಹುದು. Keep in touch with your child therapist.

    ReplyDelete
  3. ತಮ್ಮ ಲೇಖನ ಶೈಲಿ ಸೊಗಸಾಗಿದೆ, ಈ ಲೇಖನದ ವಿಷಯವೂ ವಿಭಿನ್ನವಾಗಿದೆ ಧನ್ಯವಾದಗಳು

    ReplyDelete

Post a Comment