ಮತ್ತೆ ರಾಯರು ಬಂದರು

ಮತ್ತೆ ರಾಯರು ಬಂದರು

ಲೇಖನ  - ಬೇಲೂರು ರಾಮಮೂರ್ತಿ

ಸೋಮಿ ತವರು ಮನೆಗೆ ಹೋಗಿ ಎರಡು ತಿಂಗಳಾಗಿತ್ತು. ಇಷ್ಟೊಂದು ದೀರ್ಘ ಅವಧಿಗೆ ಸೋಮಿಯನ್ನು ಬಿಟ್ಟಿರಲೇ ಇಲ್ಲ. ಹೀಗಾಗಿ ಸೋಮು ಮಾವನ ಮನೆಗೆ ಹೊರಟ. ಹೇಳದೇ ಹೋಗಿ ಸೋಮಿ ಮುಂದೆ ನಿಂತರೆ ಅವಳ ಮುಖದಲ್ಲಿ ಮೂಡುವ ಅಚ್ಚರಿಯನ್ನು ನೋಡೋದೇ ಒಂದು ಚೆಂದ ಅಂದುಕೊಂಡು  ಹೊರಟ. ಬಹಳ ದಿವಸ ಆಯ್ತಲ್ಲ ಅಂತ ಸ್ವಲ್ಪ ಹೆಚ್ಚಿಗೆ ಮಲ್ಲಿಗೆ ಹೂವನ್ನು ಕೊಂಡ. ಸೋಮಿಗೆ ಇಷ್ಟವಾದ ಮೈಸೂರು ಪಾಕ್ ಪ್ಯಾಕ್ ಮಾಡಿಸಿಕೊಂಡ. ಮಾವನ ಊರಿಗೆ ಮೂರು ಗಂಟೆಗಳ ಪ್ರಯಾಣ. ಕಾರು ತಗೊಂಡೇ ಹೊರಟ. ವಾಪಸ್ ಬರುವಾಗ ಸೋಮಿನೂ ಹಿಂದಕ್ಕೆ ಕರ‍್ಕೊಂಡು ಬರಬೇಕು ಅಂದುಕೊಂಡು ಮುಂದಿನ ಸಮಯದ ಮಜಾ ಬಗೆಗೆ ಯೋಚಿಸಿ ಮನ ಕುಲುಕಿಸಿಕೊಂಡು ಹೊರಟ.

ಮಾವನ ಮನೇಲಿ ಒಂದು ಸಣ್ಣ ದೀಪ ಮಾತ್ರ ಉರಿಯುತ್ತಿತ್ತು. ಅಂಗಳದಲ್ಲಿ ಕೂತಿದ್ದ ಮಾವನವರು ಅಯ್ಯೋ ಅಳಿಯಂದಿರು ಬಂದರು ಅಂದು ಅವರೇ ಬಂದು ಬ್ಯಾಗನ್ನು ತೆಗೆದುಕೊಂಡು ಬನ್ನಿ ಬನ್ನಿ ಅಂತ ಒಳಗೆ ಕರೆದುಕೊಂಡು ಹೋಗಿ ಕೂರಿಸಿದರು. ಒಂದೆರಡು ನಿಮಿಷ ಆದ ಮೇಲೆ ನೀರು ಕುಡಿಸ್ಲೇ ಅಂತ ಕೇಳಿದರು. ಸೋಮು ಈ ಸ್ವಾಗತ ನಿರೀಕ್ಷಿಸಿರಲಿಲ್ಲ. ನನ್ನ ಧ್ವನಿ ಕೇಳಿದರೂ ಸೋಮಿ ಯಾಕೆ ಓಡಿಬರಲಿಲ್ಲ ಅಂತ ಯೋಚಿಸುತ್ತಿದ್ದ. ಒಳಗಿನ ಕೋಣೆಯಿಂದ ನಾದಿನಿ ನಂದಿನಿ ಓಡಿ ಬಂದು ಭಾವಾ ಇವತ್ತೇ ಬಂದ್ಬಿಟ್ರಾ ಅಂತ ಕೇಳಿ ನೂರು ಅರ್ಥದ ನಗು ನಕ್ಕಳು.  


ಪ್ರಯಾಣ ಚನ್ನಾಗಿತ್ತೇ, ನೀವೇ ಡ್ರೈವ್ ಮಾಡ್ಕೊಂಡು ಬಂದ್ರಲ್ಲ. ಆಯಾಸ ಆಗಲಿಲ್ವೇ ಅಂತ ಕೇಳಿದರು. ಸೋಮುಗೆ ಸೋಮಿ ಎಲ್ಲಿ ಕರೀರಿ ಅಂತ ಕೇಳಬೇಕು ಅಂತ ಆತುರ. ಆದರೆ ಮಾವ ಏನಂದ್ಕೊಳ್ತಾರೋ ಅಂತ ತಡೆದ. ಅತ್ತೆಯೂ ಬಂದು ವಿಚಾರಿಸಲಿಲ್ವಲ್ಲ ಅಂತ ಇನ್ನೊಂದು ಅನುಮಾನ. ಮಾವನವರು ಅಳಿಯಂದಿರೇ ನನ್ನ ಮಗಳು ಹೇಳ್ತಾ ಇದ್ದಳು. ನೀವು ಅದೇನೊ ಹೊಸ ತರಹ ಕಾಫಿ ಮಾಡ್ತೀರಂತಲ್ಲ. ಕಾಫಿಗೆ ಒಂದು ಚೂರು ಉಪ್ಪು ಹಾಕಿ ಒಂದು ಚೂರು ಏಲಕ್ಕಿ, ಶುಂಠಿ, ಹಾಕಿ ಮಾಡ್ತೀರಂತೆ. ಬೊಂಬಾಟ್ ಹೊಸ ರುಚಿ ಬರುತ್ತೆ ಅಂದಿದ್ಲು. ಅಂದರು. ಸೋಮು ಹೌದು ಮಾವ ನಾನು ಹೊಸ ರುಚಿ ಪ್ರಯತ್ನ ಪಡ್ತನೇ ಇರ‍್ತೀನಿ. ಇದು ನನ್ನ ಲೇಟೆಸ್ಟ್. ಹಾಗಾದರೆ ನಮ್ಮಮನೇಲೂ ಮಾಡಬಹುದಾ ಅಂತ ಅವನ ಅನುಮತಿಯನ್ನೂ ಕೇಳದೇ ಅಡಿಗೆ ಮನೆಗೆ ಕರೆದುಕೊಂಡು ಹೋದರು. ಸೋಮು ಅಚ್ಚರಿಯಿಂದ ಇದೇನು ಮಾವ ನನ್ನನ್ನು ಅಡಿಗೆ ಮನೆಗೆ ತಳ್ತಾ ಇದಾರೆ. ಸೋಮಿ ಎಲ್ಲಿ ಅತ್ತೆಯವರು ಎಲ್ಲಿ ಅಂತ ಚಿಂತಿಸುತ್ತಲೇ ಕಾಫಿ ಮಾಡಿದ. ಒಂದು ಗುಟುಕು ಕಾಫಿ ಹೀರಿದ ಮಾವನವರು ಅದ್ಭುತ ಅದ್ಭುತ ಅಳಿಯಂದಿರೇ ನನ್ನ ಮಗಳು ಕೈ ಹಿಡಿದಿರೋದು ಅಂಥಿAಥಾ ವ್ಯಕ್ತಿಯಲ್ಲ, ಸಾಕ್ಷಾತ್ ನಳಮಹಾರಾಜ ಅಂದರು. ಇಷ್ಟೆಲ್ಲಾ ಆದರೂ ಸೋಮಿಯ ಸುಳಿವಿಲ್ಲ. ಕೇಳೋಕೆ ಸಂಕೋಚದಲ್ಲೇ ಕಳೆದ. ನಾದಿನಿ ನಂದಿನಿ ಎರಡು ಲೋಟ ಕಾಫಿ ತಗೊಂಡು ಹೊರಟಳು. ಸೋಮು ಎಲ್ಲಿಗೆ ಹೊರಟೆ ಅಂತ ಕೇಳಿದ. ಮಾವನವರು ಮಾತಾಡಲಿಲ್ಲ. ನಂದಿನಿ ನಗುತ್ತಾ ಹೊರಟುಹೋದಳು. 

ಅಳಿಯನ ಬೆನ್ನು ತಟ್ಟಿ ಇನ್ನೇನ್ ಅಳಿಯಂದಿರೇ ಹೇಗಿದೆ ನಿಮ್ಮ ಕೆಲಸ ಅಂತ ಮಾತಿಗೆ ಷುರು ಹಚ್ಚಿಕೊಂಡ ಮಾವನವರು ಬನ್ನಿ ನಮ್ಮ ಹಿತ್ತಲಿಗೆ ಹೊಸ ಹೊಸ ಗಿಡಗಳನ್ನು ತೋರಿಸ್ತೀನಿ ಅಂತ ಹಿತ್ತಲಿಗೆ ಕರೆದುಕೊಂಡು ಹೋದರು. ಆಗಲೂ ಸೋಮಿ ಸುಳಿವಿಲ್ಲ. ಇನ್ನು ತಡೆಯಲಾರೆ ಅಂತ ಸೋಮು ಮಾವ ಸೋಮಿ ಎಲ್ಲಿ ಕಾಣಿಸ್ತಿಲ್ಲ ಅಂತ ಕೇಳಿದ. ಮಾವನವರು ನಗುತ್ತಾ ಇನ್ನೇನು ಬಂದುಬಿಡ್ತಾಳೆ. ಅವಳೂ ನಮ್ಮನೆಯವಳೂ ಇಲ್ಲೇ ನಮ್ಮ ಸ್ನೇಹಿತರ ಮನೇಲಿ ಒಂದು ನಿಶ್ಚಿತಾರ್ಥ. ಅಲ್ಲಿಗೆ ಹೋಗಿದಾರೆ. ರಾತ್ರಿ ಅವರದು ಅಲ್ಲೇ ಊಟ. ನಮ್ಮದು ನೋಡೋಣ ಅಂದರು. ಸೋಮು ಪಾತಾಳಕ್ಕಿಳಿದು ಹೋದ.  


ಮಾವನವರು ಮಾತನಾಡುತ್ತಾ ಸೋಮಿ ನಿಮ್ಮ ಬಗ್ಗೆ ಎಲ್ಲ ಹೇಳ್ತಿರ‍್ತಾಳೆ. ಅದೇನೋ ಬಾಂಬೆ ಪಲಾವ್ ಅಂತ ಮಾಡ್ತೀರಂತೆ. ಭಲೇ ಚನ್ನಾಗಿರುತ್ತೆ ಅಂದಳು, ನಮಗೊಂದು ಸಾರಿ ಅದರ ರುಚಿ ತೋರಿಸಿ ಅಂದರು. ಸೋಮುಗೆ ಯಾರಾದರೂ ಹೊಗಳಿದರೆ ಅಟ್ಟಕ್ಕೇ ಏರಿಬಿಡ್ತಾನೆ. ಅದಕ್ಕೇನಂತೆ ಆಗಲಿ ಅಂದ. ಹಿತ್ತಲಕಡೆಯಿಂದ ಬೇಗ ಬೇಗ ಮನೆಯೊಳಗೆ ಬಂದು ಬಾಂಬೆ ಪಲಾವ್ ಅಂದ ಮೇಲೆ ನನ್ನ ಬಾಯಲ್ಲಿ ನೀರರ‍್ತಿದೆ. ಅದರ ಸವಿರುಚಿ ಇವತ್ತೇ ಯಾಕೆ ಆಗಬಾರದು ಅಂದರು. ಸೋಮು ಮತ್ತೆ ಹಳ್ಳಕ್ಕೆ ಬಿದ್ದ. ಅಡಿಗೆ ಮನೆ ಸೇರಿ ಎಲ್ಲ ಪರಿಕರಗಳನ್ನೂ ಹೊಂದಿಸಿಕೊAಡು ಬಾಂಬೆ ಪಲಾವ್ ತಯಾರಿಸಲು ಷುರುಮಾಡಿದ. ಆಗಾಗ ನಾದಿನಿ ಬಂದು ಭಾವನನ್ನು ನೋಡಿ ಕಿಸಕ್ಕಂತ ನಕ್ಕು ಹೊರಟುಹೋಗುತ್ತಿದ್ದಳು. ಹಾಗೊಮ್ಮೆ ಅವಳು ಹೋಗುವಾಗ ಅವಳ ಜಡೆ ಹಿಡಿದೆಳೆದು ನಿಮ್ಮಕ್ಕನ್ನ ಬೇಗ ಬರೋಕೆ ಹೇಳು ಅಂದ. ನಾನೂ ಹೇಳಿದೆ ಬಾವ ಆದರೆ ಅಕ್ಕ ಹೇಳಿದರು ಬರೋಕೆ ತುಂಬಾ ತಡವಾಗುತ್ತಂತೆ ಅಂದು ಹೊರಟುಹೋದಳು

ಮಾವನವರು ಆಗಾಗ ಅಳಿಯಂದಿರೇ ಭಲೇ ಭಲೇ ಏನು ವಾಸನೆ ಘಮ ಘಮ ಅಂತಿದೆಯಲ್ಲಾ, ಇಂಥಾ  ಪಲಾವು ತಿನ್ನೋಕೆ ಅದೇನು ಪುಣ್ಯ ಮಾಡಿದ್ದೆನೋ ನನಗೆ ಗೊತ್ತಿಲ್ಲ ಅಂದು ಸಂಭ್ರಮಿಸಿದರು. ಇನ್ನೂ ಪೂರ್ತಿ ಆಗೋಕಿಲ್ಲ ಆಗಲೇ ಒಂಚೂರು ಬಾಯಿಗೆ ಹಾಕಿಕೊಂಡು ತಲೆ ಕುಣಿಸಿದರು. 

ಪಲಾವ್ ಮುಗಿದರೂ ಸೋಮಿಗೆ ಬುಲಾವ್ ಹೋಗಲಿಲ್ಲ. ಅವಳು ಬರಲಿಲ್ಲ. ಅವಳಿಲ್ಲದ ಈ ಮನೆ ಮನೆಯೇ ಅಲ್ಲ ಅನಿಸಿತು. ಅವಳಿಲ್ಲದ ಊಟ ಊಟವೇ ಅಲ್ಲ ಅನಿಸಿದರೂ ಹೊಟ್ಟೆ ಕೇಳಬೇಕಲ್ಲ. ಮಾವ ಅಳಿಯಂದಿರೇ ಅಳಿಯಂದಿರೇ ಅಂದುಕೊಂಡು ಪಲಾವನ್ನು ಚನ್ನಾಗಿ ಬಾರಿಸಿದರು. ಜೊತೆಗೆ ಮೊಸರನ್ನ. ಭಾವನಿಗೆ ಕಾಣದಂತೆ ನಂದಿನಿ ಎರಡು ತಟ್ಟೆಗಳಲ್ಲಿ ಪಲಾವು ಮೊಸರನ್ನ ಹಾಕಿಕೊಂಡು ಹೊರಟಳು. ಅಂತೂ ಸೋಮು ಮಾಡಿದ ಪಲಾವ್ ಖಾಲಿಯಾಯಿತು.

ಹೊಟ್ಟೆ ತುಂಬಿತು, ಮನಸ್ಸು ತುಂಬಲಿಲ್ಲ. ಮಾವ ನಾನೇ ಹೋಗಿ ಸೋಮಿನ ಕರ‍್ಕೊಂಡು ಬರ‍್ತೀನಿ. ಎಲ್ಲಿಗೆ ಹೋಗಿದಾಳೆ ಹೇಳಿ ಅಂದ ಸೋಮು. ಮಾವನವರು ಅಯ್ಯಯ್ಯೋ ಬೇಡಿ ನೀವು ಅಲ್ಲೆಲ್ಲಾ ಹೋಗಬಾರದು. ಅವಳೇ ಬರ‍್ತಾಳೆ. ನೀವು ಬರೋದು ಅವಳಿಗೆ ಗೊತ್ತಿಲ್ಲವಲ್ಲ. ಇನ್ನೇನು ಬರೋ ಹೊತ್ತು. ಅವಳು ಬಂದು ನಿಮ್ಮನ್ನು ನೋಡಿದ ತಕ್ಷಣ ಅದೆಷ್ಟು ಸಂತೋಷ ಪಡ್ತಾಳೇಂತೀರ. ಬನ್ನಿ ಬನ್ನಿ ಹಾಸಿಗೆ ಹಾಸಿದೀನಿ ಹಾಗೇ ಕಾಲು ಚಾಚಿ ಅಂದರು.

ಕಾಲು ಚಾಚಿದರೂ ಸೋಮುಗೆ ನಿದ್ದೆ ಬರಲಿಲ್ಲ. ಸೋಮು ಜೊತೇಲಿ ಇಲ್ಲ ಅಂದರೆ ಅದೇನು ನಿದ್ದೆಯೇ ಅನಿಸಿತು. ಸೋಮಿ ಮಾತುಗಳ ಸಂಭ್ರಮವಿಲ್ಲ. ಅವಳು ಮುಡಿಯುವ ಮಲ್ಲಿಗೆಯ ಘಮವಿಲ್ಲ. ಅವಳ ತುಂಟತನದ ಮಾತುಗಳಿಲ್ಲ. ಇವೆಲ್ಲಾ ಇಲ್ಲದ ಮೇಲೆ ಅಂಥಾ ಬದುಕು ಯಾಕೆ ಬೇಕು ಅಂತ ಹಾಸಿಗೆಯಲ್ಲಿ ಹೊರಳಿದ್ದೇ ಹೊರಳಿದ್ದು. ರಾತ್ರಿ ಹನ್ನೆರಡರ ಹೊತ್ತಿಗೆ ಬಾಗಿಲು ಸದ್ದಾಗಿದಾಗ ಓಡಿ ಹೋಗಿ ಸೋಮು ಬಾಗಿಲು ತಗೆದ. ಅಳಿಯಂದಿರೇ ಅಳಿಯಂದಿರೇ ಅಂತ ಮಾವನವರು ಕೂಗುತ್ತಿದ್ದರೂ ಸೋಮು ಓಡಿದ. ಮಾವನವರೂ ಹಿಂದೆ ಹೋದರು. ಬಾಗಿಲಿಲ್ಲಿ ನಿಂತವರನ್ನು ನೋಡಿ ಸೋಮುಗೆ ಆದ ನಿರಾಸೆ ಅಷ್ಟಿಷ್ಟಲ್ಲ. ಯಾರೋ ಹಳ್ಳಿಯವನು ನಿಂತಿದ್ದ. ಅವನು ಸೋಮುನ ನೋಡಿ ಯಾರ‍್ರೀ ನೀವು. ಈ ಮನೇಲಿ ಏನ್ ಮಾಡ್ತಿದೀರ ಅಂತ ಜೋರಾಗಿ ಅಂದ. ಅಷ್ಟೊತ್ತಿಗೆ ಮಾವನವರು ಬಂದು ಅಯ್ಯಯ್ಯೋ ಅವರನ್ನು ಹಾಗೆಲ್ಲ ಅನ್ನಬೇಡಪ್ಪಾ ಅವರು ನಮ್ಮ ಅಳಿಯಂದಿರು ಅಂದು ಬಂದವನ ಜೊತೆ ಅದೇನೋ ಮಾತಾಡಿ ಕಳಿಸಿದರು. ಸೋಮು ತಲೆ ಮೇಲೆ ಹೊಡ್ಕೊಂಡು ಮತ್ತೆ ಬಂದು ಮಲಗಿದ. 

ಎಂಥಾ ದರಿದ್ರ ಬದುಕಾಯಿತು ನನ್ನದು ಅಂತ ಅಂತ ಶಪಿಸಿಕೊಂಡೇ ಮಲಗಿದವನಿಗೆ ಬೆಳಗಿನ ಝಾವ ಎಚ್ಚರವಾಯಿತು. ಸೋಮಿ ಬಂದ್ರೆ ಬರಲಿ ಬಿಟ್ಟರೆ ಬಿಡಲಿ ನಾನು ಇಲ್ಲೇ ಇದ್ದರೆ ಇವತ್ತು ಈ ಮಾವ ನನ್ನ ಕೈಲಿ ಉಪ್ಪಿಟ್ಟು, ಅನ್ನ ಸಾರು, ಹುಳಿ ಎಲ್ಲ ಮಾಡಿಸ್ತಾರೆ ಅಷ್ಟೇ ಅಲ್ಲ ಪಾತ್ರೆನೂ ತೊಳೆಸಿಬಿಡ್ತಾರೆ. ಇಲ್ಲಿಂದ ಕಂಬಿ ಕೀಳೋದು ವಾಸಿ ಅಂದ್ಕೊಂಡು ಹೊರಡೋಕೆ ರೆಡಿಯಾದ. ಮಾವನವರು ಗಾಬರಿಯಿಂದ ಅಯ್ಯೋ ಅಯ್ಯೋ ಅಳಿಯಂದಿರೇ ಇದೇನು ಹೀಗೆ ಹೊರಟುಬಿಟ್ರಾ ಅಂದರು. ನಾದಿನಿ ನಂದಿನಿ ಒಳಮನೆಯಿಂದ ಭಾವ ಹೋಗಬೇಡಿ ನೀರಾಗಿದೆ ಅಂದಳು. ಸೋಮು ಮುಖ ಅರಳಿತು. ಕೈಲಿ ಹಿಡಿದಿದ್ದ ಬ್ಯಾಗನ್ನು ಅಲ್ಲೇ ಬಿಸಾಕಿ ಸೋಮಿಯನ್ನು ಕಾಣಲು ಕಾತುರನಾದ. ಒಳಕೋಣೆಯಿಂದ ಅತ್ತೆ ತಲೆಗೆ ಹೂವು ಮುಡಿದುಕೊಂಡು ನೆನ್ನೆ ಬಂದ್ರAತೆ ಅಳಿಯಂದಿರೇ ಬನ್ನಿ ಕೂತ್ಕೊಳಿ ಮೊದಲು ಕಾಫಿ ಮಾಡ್ತೀನಿ ಆಮೇಲೆ ನಿಮಗಿಷ್ಟವಾದ ತಿಂಡಿ ಮಾಡ್ತೀನಿ ಅಂದರು. ಸೋಮು ಮತ್ತೆ ಪೆಚ್ಚಾದ. ಅತ್ತೆಯವರು ಅಡಿಗೆ ಮನೆಗೆ ಹೋಗುತ್ತಾ ನಕ್ಕು ನನಗೆ ಇವತ್ತು ನೀರು, ಸೋಮಿಗೆ ನಾಡಿದ್ದು ನೀರು ಅಂತ ಹೇಳುತ್ತಿರುವಂತೆ ಸೋಮು ಬಿಸಾಕಿದ್ದ ಬ್ಯಾಗು ತೆಗೆದುಕೊಂಡು ಮಾವನವರು ಅಳಿಯಂದಿರೇ ಅಳಿಯಂದಿರೇ ಅಂತ ಕೂಗುತ್ತಿದ್ದರೂ ಕೇಳಿಸಿಕೊಳ್ಳದೇ ಕಾರಿನಲ್ಲಿ ಕೂತು ಹೊರಟೇಬಿಟ್ಟ.

ಕಿಟಕಿಯ ಸರಳುಗಳ ಹಿಂದೆ ನಿಂತು ಸೋಮುನ ಗಮನಿಸುತ್ತಾ ಅಚ್ಚರಿಯಾದರೂ ಮುಸಿಮುಸಿ ನಗುತ್ತಿದ್ದ ಸೋಮಿಯ ಮುಖವನ್ನು ಕಡೆಗೂ ಸೋಮು ನೋಡಲೇ ಇಲ್ಲ. ಇನ್ಯಾವತ್ತೂ ಮಾವನ ಮನೆಗೆ ಹೇಳದೇ ಕೇಳದೇ ಬರಲೇಬಾರದು ಅಂತ ಅಂದುಕೊಂಡು ಹೊರಟವನಿಗೆ ಅಲ್ಲಾ ಅತ್ತೆಗೆ ಇವತ್ತು ನೀರಾದರೆ ನನಗೆ ಬಂದ ಭಾಗ್ಯವೇನು ಅನಿಸಿತು.

(ಕೃಪೆ : ಅಪರಂಜಿ)


Comments

  1. ರಾಯರ ಕಥೆ ಸ್ವಾರಸ್ಯಕರವಾಗಿದೆ, ಕುತೂಹಲಕರವಾಗಿ ಓದಿಸಿಕೊಂಡು ಹೋಗುತ್ತದೆ. ಕಡೆಯ ತಿರುವು ಅನಿರೀಕ್ಷಿತ ಎನಿಸಿದರೂ ಚೆನ್ನಾಗಿದೆ.

    ReplyDelete
  2. different but very nice article

    ReplyDelete

Post a Comment