ನಮ್ಮೂರ ಹೆಸರು ಚೆಂದವೊ...

 ನಮ್ಮೂರ ಹೆಸರು ಚೆಂದವೊ...,ನಿಮ್ಮೂರ ಹೆಸರು ಚೆಂದವೊ....

ಲೇಖನ - ದತ್ತು ಕುಲಕರ್ಣಿ, ಸಿಡ್ನಿ 


ನಾನು ಈಗ ಕೆಲ ವರ್ಷಗಳ  ಹಿಂದೆ ಬ್ರಿಸ್ಬೇನ್‌ದಿಂದ  ಕ್ವೀನ್ಸಲ್ಯಾಂಡ್ ನ ಉತ್ತರ ಭಾಗಕ್ಕೆ  ಕಾರಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಒಂದು ವಿಚಿತ್ರ ಹೆಸರಿನ ಹಳ್ಳಿ ಸಿಕ್ಕಿತು. ಆ ಹಳ್ಳಿಯ ಹೆಸರನ್ನು  ೧೭೭೦ ಎಂದು ಬರೆಯಲಾಗಿತ್ತು. ಒಂದು ಸಂಖ್ಯೆಯನ್ನು ಊರಿನ ಹೆಸರನ್ನಾಗಿ ಇಟ್ಟಿದ್ದು ನೋಡಿ ಬಹಳ ಆಶ್ಚರ್ಯವಾಗಿ  ಊರಿನ ಒಳಗೆ ನನ್ನ ಕಾರನ್ನು ತಿರುಗಿಸಿದೆ. ಸಮುದ್ರ ದಂಡೆ ಮೇಲೆ ಇರುವ ಈ ಸಣ್ಣ ಊರಿನ ಮುಖ್ಯ ರಸ್ತೆ  ನನ್ನನ್ನು ಒಂದು ಸ್ಮಾರಕದ ಮುಂದೆ ತಂದು ನಿಲ್ಲಿಸಿತು. ಆ ಸ್ಮಾರಕದಲ್ಲಿ  ಕ್ಯಾಪ್ಟನ್ ಕುಕ್ ೧೭೭೦ರ ಮೇ ತಿಂಗಳಿನಲ್ಲಿ ಈ ಜಾಗೆಕ್ಕೆ ಬಂದಿದ್ದನಂತಲೂ, ಅದರ ಸವಿ ನೆನಪಿಗಾಗಿ ಈ ಹಳ್ಳಿಯನ್ನು ಕಟ್ಟಿ ಈ ಹೆಸರನ್ನು ಇಡಲಾಗಿದೆ ಎಂದು ಬರೆಯಲಾಗಿತ್ತು,  ಬಹುಶಃ ಸಂಖ್ಯೆಯನ್ನು ಹೆಸರಾಗಿ ಹೊಂದಿರುವ ಊರು ಜಗತ್ತಿನಲ್ಲಿ ಇದೊಂದೆ ಇರಬಹುದು.

ಇಂಥದೇ ವಿಶೇಷ/ವಿನೋದ ಹೆಸರಿರುವ ಊರಿನ ಜೊತೆ ನನ್ನ ಒಡನಾಟ ಈ ಮೊದಲೇ ನನಗೆ  ಬೆಂಗಳೂರಿನಲ್ಲೇ ಆಗಿತ್ತು,

 ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರಬೇಕಾದರೆ ಮೊದಲು ಗ್ರಾಮಾಂತರ ಪ್ರದೇಶವಾಗಿದ್ದು ಈಗ ಬೆಂಗಳೂರಿನ ಭಾಗವಾಗಿರುವ ದೊಡ್ಡ ನಕ್ಕುಂಡಿ ಎಂಬ ಪ್ರದೇಶದಲ್ಲಿ ನಾನು ಓಡಾಡಬೇಕಾಗುತ್ತಿತ್ತು. ಈ ಬಡಾವಣೆಯ ಹೆಸರಿನಲ್ಲಿನ ‘ನ’ ಅಕ್ಷರವನ್ನು ಸ್ವಲ್ಪ ಸ್ಥಳಾಂತರಿಸಿ ದೊಡ್ಡ’ ಇದಕ್ಕೆ ಸೇರಿಸಿಕೊಂಡು ಉಚ್ಚರಿಸಿದರೆ ಆಗುವ ಅವಾಂತರ ಎಷ್ಟು ವಿನೋದವೊ ಅಷ್ಟೇ ಗಂಭೀರ. 

ಇಂಥ ವಿನೋದಮಯ ಹೆಸರುಗಳನ್ನು ಹೊತ್ತ ಊರುಗಳ ಬಗ್ಗೆ ನನ್ನ ಆಸಕ್ತಿ ಮೊಳೆತದ್ದು ಆವಾಗಲೆ..

ಈ ತರಹದ ಹೆಸರುಗಳನ್ನು ಹೊತ್ತ ಊರುಗಳು ನಮ್ಮ ಕರ್ನಾಟಕದಲ್ಲಿ ಇನ್ನೂ ಎಷ್ಟು ಇವೆಯೋ ? 

ಅದಿರಲಿ, ಕೆಲ ಹಳ್ಳಿ ಗಳು ತಮ್ಮ ಹೆಸರಿನ ಜೊತೆಗೆ ಪ್ರಾಣಿಗಳ ಮತ್ತು ಪಕ್ಷಿಗಳ ಹೆಸರುಗಳನ್ನು ಸೇರಿಸಿಕೊಂಡು ವಿಶಿಷ್ಟವಾಗಿವೆ. ಗುಬ್ಬಿ, ಕಾಗಿನೆಲೆ, ಕರಡಿಗುಡ್ಡ, ಆನೆಗುಂದಿ, ಕೋಳಿವಾಡ, ನಾಗರಹೊಳೆ, ಕುದುರೆಮುಖ, ಹಂದಿಗುಂದ, ನಾಗನೂರು ಮತ್ತು ನವಿಲುತೀರ್ಥ ಇವೇ ಆ ತರಹದ ಹೆಸರನ್ನು ಹೊಂದಿರುವ ಊರುಗಳು. ಈ ಎಲ್ಲ ಊರಿನ ಜನ ನಿಜವಾಗಿಯೂ ಪ್ರಾಣಿ-ಪಕ್ಷಿ ಪ್ರಿಯರೇ ಇರಬೇಕೆನಿಸುತ್ತದೆ.!!

ಹೀಗೆ ಪ್ರಾಣಿ-ಪಕ್ಷಿ ಪ್ರಿಯರಿರುವಂತೆ ಕೆಲವು ಊರಿನ ಜನ ತಿಂಡಿಪೋತರೂ ಆಗಿದ್ದಾರೆ. ಅವರೆ ನಮ್ಮ ಸಿರಾ ಊರಿನ ಜನ!

 


ಇನ್ನೂ ಕೆಲ ಊರುಗಳ ಹೆಸರುಗಳಲ್ಲಿ  ಹಣ್ಣು-ಹೂವುಗಳನ್ನು ಒಳಗೊಂಡಿದ್ದು ಸಹಜ ಸೌಂದರ್ಯವನ್ನು ಹೊಂದಿವೆ. ಬಾಳೆಹೊನ್ನೂರು, ಹಲಸೂರು, ಹುಳಿಮಾವು, ತಾವರೆಗೆರೆ, ಚೆಂಡೂರು, ಕಮಲಾಪುರ, ಮಲ್ಲಿಗವಾಡ, ಹೂವಿನಹಡಗಲಿ ಇವೇ ಹೂವಿನೊಂದಿಗೆ ನೆಂಟನ್ನು ಹೊಂದಿರುವ ಊರುಗಳು. 


ಇನ್ನೂ ಕೆಲ ಊರುಗಳು ಉದಾ: ಬೆಂಡಿಗೇರಿ, ಅಕ್ಕಿಆಲೂರು, ಬೆಲ್ಲದ ಬಾಗೆವಾಡಿ, ಹುಣಸಿಕಟ್ಟಿ, ತೊಗರಿಕನ್ಹಾಳು, ಮತ್ತು ತೊಣಸೆ ಈ ಊರುಗಳು ಧವನ-ಧಾನ್ಯ ಕಾಯಿಪಲ್ಲೆಗಳೊಂದಿಗೆ ತಮ್ಮನ್ನು  ತಳಕು ಹಾಕಿಕೊಂಡು ತಮ್ಮ ಹೆಸರಿನಲ್ಲಿ ವಿಶಿಷ್ಟತೆ ಮೆರೆದಿವೆ.


ಇನ್ನೂ ಕೆಲ ಊರುಗಳಿಗೆ ಗೊಬ್ಬರಗುಂಪಿ, ಕೆಮ್ಮಣ್ಣು ಗುಂಡಿ, ತಿಪ್ಪಾರಹಳ್ಳಿ ತಮ್ಮ ಹೆಸರಿನ ಅರ್ಥವೇ ಗೊತ್ತಿರಲಿಕ್ಕಿಲ್ಲ ಅನಿಸುತ್ತದೆ. ಗೊತ್ತಿದ್ದರೆ ಇಂತಹ ಗುಂಡಿ-ತಿಪ್ಪಿ-ಗೊಬ್ಬರಗಳನ್ನೊಳಗೊಂಡ  ಹೆಸರುಗಳನ್ನೇಕೆ ಇಟ್ಟುಕೊಳ್ಳುತ್ತಿದ್ದವು.?!!  


ಇನ್ನೂ ಒಂದು ಊರಿನ ಹೆಸರು ನನಗೆ ಬಹಳ ಸೋಜಿಗ ತರಿಸುತ್ತದೆ. ಅದೇ ರಾಣೆಬೆನ್ನೂರು. ಯವದೋ ರಾಣಿಯ ಬೆನ್ನಿಗೂ ಈ ಊರಿಗೂ ಏನು ಸಂಬಂದ ಎನ್ನುವದು ಗೊತ್ತಿಲ್ಲ!! ಹಾಗೇಯೇ ಈ ರಾಣೆಬೆನ್ನೂರಿಗೂ ಆಸ್ಟ್ರೇಲಿಯಾದ  ನಮ್ಮ ಪಕ್ಕದ ರಾಜ್ಯ ಕ್ವೀನ್ಸ್ ಲ್ಯಾಂಡ್ (ರಾಣಿ ನೆಲ)ಕ್ಕೂ ಇರುವ ಹೆಸರಿನ ಸಾಮ್ಯತೆಯ ಬಗ್ಗೆ ಆಸಕ್ತರು ಸಂಶೋಧನೆಗೆ ತೊಡಗಬಹುದು!!!


ಬ್ರಿಸ್ಬೇನ್ನಲ್ಲಿರುವ ಇನ್ನೊಂದು ಬಡಾವಣೆಯೂ ನನಗೆ ನಗೆ ಬರಿಸುವಂತಿದೆ, ಅದೆ Slacks Creek  (ಸೋಮಾರಿಗಳ ಕಟ್ಟೆ ಎಂದು ಇದನ್ನು ನಾವು  ಭಾಷಾಂತರಿಸಬಹುದೇನೊ!). ನನ್ನ ಗೆಳೆಯನೊಬ್ಬ ಅಲ್ಲಿ ಇರಲು ಮನೆ ನೋಡಬೇಕಾದರೆ ನಾನು ಅವನನ್ನು ಏನೋ ನೀನು ಸೋಮಾರಿ ಆಗುತ್ತಿದ್ದಿಯಾ? ಅಂತ ತಮಾಷೆಯಾಗಿ ಕಿಚಾಯಿಸಿದ್ದಿದೆ. ಹಾಗೆಯೆ ಸಿಡ್ನಿಯ ಬ್ಲ್ಯಾಕ್  ಟೌನ್ ಹೆಸರೂ ಸೋಜಿಗ ತರಿಸುತ್ತದೆ. ಜನರನ್ನು ಜನಾಂಗದ ಮೂಲಕ ಗುರುತಿಸುವದು, ನಿಂದಿಸುವದು ತಪ್ಪು ಎಂದು ತಿಳಿದಿರುವ ಸಮಾಜದಲ್ಲಿ ಇನ್ನು ಈ ತರಹದ ಹೆಸರುಗಳು ಉಳಿದಿರುವದು ಸೋಜಿಗವೇ ಸರಿ. ಆದರೆ ಎಷ್ಟೋ ಶಬ್ದಗಳು ಅಂಕಿತನಾಮಗಳಾದಾಗ ತಮ್ಮ ಅರ್ಥವನ್ನು ಕಳೆದುಕೊಳ್ಳುತ್ತವೆ ಅನಿಸುತ್ತದೆ. ಆದರಿಂದ  ಆ ಹೆಸರುಗಳಲ್ಲಿನ ಅರ್ಥದ ಬಗ್ಗೆ ಸಿನಿಕರಾಗದೆ ಸ್ವಾರಸ್ಯವನ್ನು ಊಳಿಸಿಕೊಳ್ಳೋಣ. 

ಅದೆಲ್ಲಾ ಇರಲಿ ಈಗ ನಿಮೆಗೆಲ್ಲಾ ನಿಮ್ಮ ಊರಿನ ಹೆಸರಿನ ಸ್ವಾರಸ್ಯಗಳೆಲ್ಲ ನೆನಪಗಿರಬೇಕಲ್ಲ. ಹಾಗಾದರೆ ಅವುಗಳನ್ನು ಹೊರನಾಡ ಚಿಲುಮೆಯೊಂದಿಗೆ ಹಂಚಿಕೊಳ್ಳಬಹುದು,    



Comments

  1. ಒಳ್ಳೆಯ ಸ್ವಾರಸ್ಯವಾದ ಲೇಖನ. ನಮ್ಮ ಕನ್ನಡ ನಾಡಿನ ಅನೇಕ ಊರಿನ ಹೆಸರುಗಳ ಹಿನ್ನೆಲೆ ಏನು ಎಂಬುದು ಇತರರಿಗೆ ಇರಲಿ, ಅಲ್ಲಿನ ನಿವಾಸಿಗಳಿಗೂ, ತಿಳಿಯದು. ಚಾರಿತ್ರಿಕ ಸಂಶೋಧನೆಕಾರರಿಗೆ ಬೇಕಾದಷ್ಟು ಅವಕಾಶವಿದೆ. ಅಂದ ಹಾಗೆ USA ನಲ್ಲಿ ಕೇವಲ ಸಂಖ್ಯೆಗಳೇ ಹೆಸರಾಗಿ ಉಳ್ಳ ಎಂಟು ಊರಿಗಳಿವೆ ಎಂಬ
    ಮಾಹಿತಿ Google ಮಾಡಿದರೆ ತಿಳಿಯುತ್ತದೆ.

    ReplyDelete
  2. ಹೊರನಾಡ ಚಿಲುಮೆಗೆ ತಮ್ಮ ಮೊದಲ ಲೇಖನ ಚೆನ್ನಾಗಿ ಮೂಡಿಬಂದಿದೆ. ಎಷ್ಟೊಂದು ಊರ ಹೆಸರುಗಳನ್ನೂ ನೆನಪಿಸಿದ್ದೀರಿ, ಒಂದು ಕಡೆ ನಗು ಮತ್ತೊಂದು ಕಡೆ ಸೋಜಿಗ ಅನಿಸುತ್ತದೆ ನಿಜ. ನಮ್ಮೂರಿನಲ್ಲಿ ನಾವು ಕಂಡ ಸ್ಪೆಷಲ್ ಹೆಸರುಳ್ಳ ಊರುಗಳು ಎಂದರೆ ಹ್ಯಾಡ್ಯಾಳು, ಕೊಂಗರಹಳ್ಳಿ , ಚಿನಕುರುಳಿ, ಮಂಗಿಪಚ್ಚನ ಹುಂಡಿ, ಹೆಮ್ಮಿಗೆ, ಕೊಳತೂರು, ಡಿಂಕಾ ಶೆಟ್ಟಿಹಳ್ಳಿ ಹೇಳ್ತಾ ಹೋದರೆ ಸಥಿಲಾವಕಾಶ ಸಾಲದು.

    ReplyDelete
  3. ಲೇಖನ ಚೆನ್ನಾಗಿ ಮೂಡಿಬಂದಿದೆ. ಸ್ವಾರಸ್ಯಕರವಾಗಿದ್ದು ವಿಭಿನ್ನವಾಗಿದೆ.

    ReplyDelete
  4. ತುಂಬಾ ಆಸಕ್ತಿದಾಯಕ ಮಾಹಿತಿ, ಅಂತಹವುಗಳಿಗಾಗಿ ಎದುರುನೋಡಬಹುದು

    ReplyDelete
  5. Ha ha good article with lots of humor and info too

    ReplyDelete

Post a Comment