ಒಂದು ದೋಸೆ ಆರ್ಡರ್ ಪ್ರಕರಣವು

ಒಂದು ದೋಸೆ ಆರ್ಡರ್ ಪ್ರಕರಣವು

 ಹಾಸ್ಯ ಲೇಖನ - ಅಣುಕು ರಾಮನಾಥ್ 


ಪೀಟ್ಝಾ, ಬರ್ಗರ್, ಪಾಸ್ಟಾ (ತಿಂದಾಗಲೂ ಅದು ಹಳತೋ, ಹೊಸತೋ ಎಂದು ತಿಳಿಯದ ಸಲುವಾಗಿ ಅದನ್ನು ಪಾಸ್ಟಾ, ಪ್ರೆಸೆಂಟಾ ಎಂದು ಕೇಳುವುದರ ಹ್ರಸ್ವ ರೂಪವೇಪಾಸ್ಟಾ?’ ಇರಬಹುದೆಂಬ ದಟ್ಟ ಗುಮಾನಿಯಿದೆ) ಇವನ್ನೆಲ್ಲ ಆರ್ಡರ್ ಮಾಡಿ ತರಿಸುವುದು ಬಹಳ ಕಷ್ಟದ ಕೆಲಸವೇ. ಆದರೆ ನಮ್ಮ ದಕ್ಷಿಣ ಭಾರತದ ತಿಂಡಿಗಳಿಗೂ ಅದೇ ಗತಿ ಬಂದರೆ? ಮೊನ್ನೆ ಆದದ್ದು ಅದೇ.

ಒಂದು ಮಸಾಲೆದೋಸೆ ಕೊಡಿ ಎಂದೆ.

ಯಾವ ಮಸಾಲೆ?”

ಅರೆ! ಮಸಾಲೆಯೆಂದರೆ ಮಸಾಲೆಯಷ್ಟೆ. ಅದರಲ್ಲೇನು ವ್ಯತ್ಯಾಸ? ಬಸವನಗುಡಿ ವಿದ್ಯಾರ್ಥಿಭವನ ಕೇಳದ, ಮಲ್ಲೇಶ್ವರದ ಸಿಟಿಆರ್ ಕೇಳದ, ಚಿತ್ರದುರ್ಗದ ಆನೆಬಾಗಿಲಿನ ಬಳಿಯ ದೋಸೆ ಹೋಟೆಲ್ ಕೇಳದ ಪ್ರಶ್ನೆಯನ್ನು ಮೊನ್ನೆಮೊನ್ನೆ ಹೊಟೇಲ್ ಓಪನ್ ಮಾಡಿದ ಯಃಕಶ್ಚಿತ ಕೇಳುವುದೆ? ಕಲಿಗಾಲ! ಕಲಿಗಾಲ!

ಯಾವುದಾದರೂ ಸರಿ ಎಂದೆ.

ಯಾವುದಾದರೂ ಸರಿ ಅನ್ನೋ ಹೆಸರಿನ ಮಸಾಲೆದೋಸೆ ಇಲ್ಲ ಸಾರ್

ನಿನ್ನ ಹೆಸರು ಎಡವಟ್ ಎಡವೀರಪ್ಪನೇನು?” ಎಂದು ಕೇಳಬೇಕೆನಿಸಿದರೂ ಅವನ ಕಣ್ಣಿನಲ್ಲಿನ ಅರುಣರಾಗ (ಕೆಂಪು)ವನ್ನು ನೋಡಿಯಾವ್ಯಾವ್ದಿದೆ?” ಎಂಬ ಶರಣಾಗತಿಯ ಬಾವುಟ ಹಾರಿಸಿದೆ.

ಪೇಪರ್ ಮಸಾಲೆ, ಬೆಣ್ಣೆ ಮಸಾಲೆ, ಕ್ಯಾಪ್ಸಿಕಮ್ ಮಸಾಲೆ, ಪುಡಿ ಮಸಾಲೆ...” ತಿಂಡಿಬಂಡಿಗೆ ಕೈತೋರಿಸಿ ನಿಲ್ಲಿಸಿಪೇಪರ್ ಮಸಾಲೆ ಎಂದೆ.

ಯಾವ ಪೇಪರ್?”

ಎಂದರೆ?”

ಟ್ಯಾಬ್ಲಾಯ್ಡಾ ಫುಲ್ ಷೀಟಾ?”

ನನ್ನ ಹೊಟ್ಟೆಯತ್ತ ದೃಷ್ಟಿ ಹರಿಸಿದೆ. ಫುಲ್ ಷೀಟ್ ಹಿಡಿಯಲಾರದು ಎನಿಸಿತು. “ಟ್ಯಾಬ್ಲಾಯ್ಡ್ ಎಂದೆ.

ಹಾಯ್ ಬೆಂಗ್ಳೂರಾ, ತತ್ವಸಿದ್ಧಾಂತವಾ?” 

ಇದು ನಿಜಕ್ಕೂ ಗೊಂದಲಕ್ಕೀಡು ಮಾಡಿತು. ದೋಸೆಯಲ್ಲಿ ಹಾಯ್ ಬೆಂಗ್ಳೂಳೆಂದರೇನು? ಹರಿತವಾದ ತುದಿಗಳಿದ್ದು ತಿನ್ನುವವರ ತುಟಿ, ಬಾಯಾಗಸಗಳು ಜಖಂ ಆಗುತ್ತವೇನು? ‘ಖಾಸ್ ಬಾತ್ ಅಂಕಣದಂತೆ ಸಮೃದ್ಧವಾದ ಹೂರಣ... ಅರ್ಥಾತ್ ಪಲ್ಯ ಇರುತ್ತದೇನು? ಇವೆಲ್ಲ ಪ್ರಶ್ನೆಗಳನ್ನು ಅವನತ್ತ ಎಸೆದೆ.

ಹಾಯ್ ಬೆಂಗ್ಳೂರ್ ಎಂದರೆ ಮಸಾಲೆ ಜಾಸ್ತಿ ಹಾಕಿರುವಂತಹದ್ದು, ಖಾರ ಮೆಣಸಿನಕಾಯಿ ಬಳಸಿದ್ದು. ತತ್ವ ಸಿದ್ಧಾಂತ ಪತ್ರಿಕೆಯಂತಹ ಪೇಪರ್ ದೋಸೆಯಾದರೆ ಸಪ್ಪೆಯಿದ್ದರೂ ಸತ್ವ ಇರುತ್ತದೆ

ಮನೆಯಲ್ಲಿ ತತ್ವಸಿದ್ಧಾಂತದ ದೋಸೆ ಇದ್ದದ್ದೇ. “ಹಾಯ್ ಬೆಂಗ್ಳೂರೇ ಇರಲಿ ಎಂದೆ.

ರವಿ ಬೆಳಗೆರೆ ಕಾಲಮ್ಮೋ, ಜಾನಕಿ ಕಾಲಮ್ಮೋ?”

ಇದು ನಿಜಕ್ಕೂ ಗೂಗ್ಲಿಯೇ. ವಿವರಕ್ಕಾಗಿ ಅವನನ್ನೇ ಮೊರೆಹೊಕ್ಕೆ.

ರವಿ ಬೆಳಗೆರೆ ಕಾಲಮ್ಮಿನದಾದರೆ ಗರಿಗರಿ. ಜಾನಕಿ ಕಾಲಮ್ಮಿನದಾದರೆ ಮೃದುಮೃದು

ರವಿ ಬೆಳಗೆರೆ ಕಾಲಮ್ಮಿನದೇ ಇರಲಿ

ಚಟ್ನಿ ಕಮ್ಯೂನಿಸ್ಟೋ, ಆರ್ಡಿನರಿಯೋ, ಎರಡೂನೋ?”

ನಾನು ತಿನ್ನುವುದು ದೋಸೆಯನ್ನು, ರಾಜಕೀಯ ಪಕ್ಷಗಳನ್ನಲ್ಲ. ಏನಯ್ಯ ನಿನ್ನ ಅವಾಂತರ?” ರೇಗಿಯೇಬಿಟ್ಟೆ. ಮಾಣಿ ಮುಖ ಅತ್ತ ತಿರುಗಿಸಿದ. ‘ಕೋಪವನು ತೊರೆದು ದೋಸೆಯನು ಕೊಡೊ ಗುರುವೆ ಎಂದೆ. ಗುರು, ಮಚ್ಚಾ, ಮಗಾ ಎಂದರೆ ಸಂಪ್ರೀತನಾಗದ ಇಪ್ಪತ್ತೊಂದನೆಯ ಶತಮಾನದ ವ್ಯಕ್ತಿಯೂ ಉಂಟೆ? ಮಾಣಿ ತಿರುಗಿದಾಗ ಕಣ್ಣಲ್ಲಿ ಅರುಣರಾಗ ಕಳೆದು ಎಳೆಬಿಸಿಲು ಮೂಡಿತ್ತು.

ಕಮ್ಯೂನಿಸ್ಟ್ ಎಂದರೆ ಕೆಂಪು ಸಾರ್. ಕೆಲವರು ಅದರಲ್ಲಿ ಬೆಳ್ಳುಳ್ಳಿ ಇರುವುದರಿಂದಕೆಂಪ್ಚಟ್ನಿ ಬೇಡ ಎನ್ನುತ್ತಾರೆ. ನಿಮ್ಮನ್ನು ನೋಡಿದರೆ ಬೆಳ್ಳುಳ್ಳಿ ವಿರೋಧಿ ಸಂಘದವರಂತೆ ಕಂಡಿರಿ. ಅದಕ್ಕೇ ಆಪ್ಷನ್ ಕೊಟ್ಟೆ ಎಂದ.

ಆರ್ಡಿನರಿ ಎಂದರೆ ಬಿಳಿಯದೆ?”

ಹುಷ್! ಜೋರಾಗಿ ಹೇಳಬೇಡಿ ಸರ್. ‘Black lives matter ’ ಪಡೆಯವರು ಬಿಳಿ ಎಂದರೆ ಕೆಂಪಾಗುತ್ತಾರೆ ಎಚ್ಚರಿಸಿದ ಮಾಣಿ. ಕಡೆಗೂ ಟ್ಯಾಬ್ಲಾಯ್ಡ್ ಸೈಜಿನ, ಕಮ್ಯೂನಿಸಮ್ ರಹಿತವಾದ ದೋಸೆ ಬೇಕೆಂದು ಹೇಳಿದ್ದಾಯಿತು.

ನಮ್ಮ ಸಂಘಕ್ಕೆ ವಿರೋಧಿಗಳಾದಿರಿ ಸಾರ್. ನಮ್ಮ ಲೀಡರ್ಗೆ ಫೋನ್ ಮಾಡಿ ಕೇಳುತ್ತೇನೆ ಎಂದ ಮಾಣಿ.

ಅದು ಹೇಗೆ?”

ಹೋಟೆಲ್ workers union ಕಮ್ಯೂನಿಸ್ಟ್ ಪಕ್ಷದ ಬೆಂಬಲದ ಮೇಲೆ ನಡೀತಿದೆ. ಕೆಂಪು ಚಟ್ನಿ ಬೇಡ ಎಂದವರ ಮನೆಯ ಮುಂದೆ ಪಿಕೆಟಿಂಗ್ ಮಾಡುವ ಸಾಧ್ಯತೆ ಇರುತ್ತದೆ ಎಂದನವ.

ಮನಸ್ಸು ಚೇಂಜ್ ಮಾಡಿದೆ. ಪೇಪರ್ ದೋಸೆ ಬೇಡ. ಬೆಣ್ಣೆ ಮಸಾಲೆ ಕೊಡಿ ಎಂದೆ.

ಹಸುವಿನ ಬೆಣ್ಣೆಯೋ, ಎಮ್ಮೆಯ ಬೆಣ್ಣೆಯೋ?”

ಹಸುವಿನದೇ ಕೊಡಿ

ಸೀಮೆ ಹಸುವಿನದೋ, ವಿದೇಶಿ ತಳಿಯದೋ?”

ಮೇಕ್ ಇನ್ ಇಂಡಿಯಾಗೆ ಜೈ. ಸೀಮೆ ಹಸುವಿನದೇ ಕೊಡಿ.”

ಯಾಕೆ?”

ವಿದೇಶಿ ತಳಿಯ ಹಸುವಿನ ಬೆಣ್ಣೆಯಲ್ಲಿ ರೂಪಾಂತರಿ ಬೆಣ್ಣೆ ಕೊರೊನಾ ಸೇರಿದ್ದರೆ ಎಂಬ ಆತಂಕ ಎಂದೆ.

ಗುಡ್ ಚಾಯ್ಸ್. ಬಯಲುಸೀಮೆಯದೋ, ರಾಯಲ್ಸೀಮಾದೋ?”

ಬಯಲುಸೀಮೆಯದೇ ಇರಲಿ. ಸಿರಿಗನ್ನಡ ದನಂ ಗೆಲ್ಗೆ

ಗೋಮಾಳದ್ದೋ ಖಾಸಗಿ ಜಮೀನಿನದೋ?”

ಏನು ವ್ಯತ್ಯಾಸ?”

ಗೋಮಾಳದಲ್ಲಿ ಪೌಷ್ಟಿಕ ಮೇವು ಸಿಗುವುದಿಲ್ಲ. ಹಾಲಿನ ಕ್ವಾಲಿಟಿ ಕಡಿಮೆ, ಆದ್ದರಿಂದ ಬೆಣ್ಣೆಯಲ್ಲಿ ಕೊಬ್ಬಿನಂಶ ಕಡಿಮೆ ಇರತ್ತೆ. ಸ್ಲಿಮ್ಮೂ ಆಗ್ಬೇಕು, ಬೆಣ್ಣೇನೂ ತಿನ್ಬೇಕು ಅನ್ನೋ ಮೌರ್ನಿಂಗ್ ಜಾಗರ್ಸ್ಗೆ... ಕ್ಷಮಿಸಿ... ಮಾರ್ನಿಂಗ್ ಜಾಗರ್ಸ್ಗೆ  ನಾವು ಅದನ್ನೇ ಕೊಡೋದು.”

ರುಚಿ?”

ಎರಡಕ್ಕೂ ಫ್ಲೇವರ್ ಹಾಕಿರ್ತೀವಿ. ವ್ಯತ್ಯಾಸ ಗೊತ್ತಾಗಲ್ಲ.”

ಎರಡು ನಿಮಿಷದ ಕಾಲಾವಕಾಶ ಕೇಳಿ ಪಡೆದು ಗೂಗಲಮ್ಮನನ್ನು ಯಾವ ಬೆಣ್ಣೆ ಉತ್ತಮ ಎಂದು ಕೇಳಿದೆ. “ನಿಮ್ಮ ಎತ್ತರ ತೂಕಗಳ ಮಾಹಿತಿ ಕೊಡಿರಿ ಎಂದಳು ಕನ್ನಡ ಗೂಗಲತಿ.

ಐದು ಅಡಿ. ಎಪ್ಪತ್ತು ಕೆಜಿ ಎಂದೆ.

ಬೆಣ್ಣೆಯಷ್ಟೇ ಅಲ್ಲ, ತುಪ್ಪದ ದೋಸೆಯೂ ಕ್ಯಾನ್ಸಲ್. ತಿಂದರೆ ಕೂಡಲೆ ಕ್ಲಿನಿಕ್, ಕ್ಲಿನಿಕ್ಕಿನಿಂದ ಲ್ಯಾಬ್, ಲ್ಯಾಬ್ ರಿಪೋರ್ಟಿನಿಂದ ನರ್ಸಿಂಗ್ ಹೋಂ, ನರ್ಸಿಂಗ್ ಹೋಮ್ನಲ್ಲಿ ಕೋವಿಡ್...” ಎಂದಳವಳು. ಮನೆಯವರ ಮಾತನ್ನು ಮೀರಬಹುದು, ಗೂಗಲಮ್ಮನ ಮಾತನ್ನು ಮೀರುವವರುಂಟೇ?

ಬೆಣ್ಣೆ ಮಸಾಲೆ ಕ್ಯಾನ್ಸಲ್ ಎಂದೆ.

ಮುಖ್ಯಮಂತ್ರಿಗಳ ಪೀಠ ಗಟ್ಟಿ ಎಂದು ಒಂದು ದಿನ, ಅಲುಗಾಡುತ್ತಿದೆ ಎಂದು ಮರುದಿನ ಹೇಳುವ ಪಕ್ಷದವರೇನು ನೀವು? ಒಂದು ಗಟ್ಟಿ ತೀರ್ಮಾನ ಮಾಡದೆ ಇಲ್ಲೇಕೆ ಬಂದಿರಿ?” ಎಳೆಬಿಸಿಲು ಮಾಯವಾಗಿ ಕಮ್ಯುನಿಸಮ್ ಮತ್ತೆ ಕಂಡಿತ್ತು ಕಣ್ಣಲ್ಲಿ.

ಜೀವನದಲ್ಲಿ ಒಂದೇ ಒಂದು ಬಾರಿ ದೃಢ ನಿರ್ಧಾರ ತೊಗೊಂಡು ತುಂಬಾ ಅನುಭವಿಸಿಬಿಟ್ಟೆ ಕಣಯ್ಯಾ...” ದನಿಯಲ್ಲಿ ಮಾರ್ಕೆಟ್ ದ್ವಾರದ ಮುಂದಿನ ಭಿಕ್ಷುಕನ ದೈನ್ಯತೆಯನ್ನು, ಕಣ್ಣಿನಲ್ಲಿ ಸಿಗ್ನಲ್ ಲೈಟ್ ಮುಂದೆ ಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುವವಳ ದೀನಭಾವವನ್ನೂ ಪ್ರಕಟಿಸಿದೆ.

ಯಾವ ನಿರ್ಧಾರವದು?” ಕುತೂಹಲಿಯಾದ ಮಾಣಿ.

ಮದುವೆ ಕಣಪ್ಪಾ... ಆಹಾ ಎನ್ನುವಂತಿದ್ದಾಳೆಂದು ಒಂದೇ ಕ್ಷಣದಲ್ಲಿ ಓಹೋ ಎಂದೆ. ಈಗ!’ ಹೊರಟುಹೋಗಿಹೋ ಎಂದು ಹೊಯ್ದುಕೊಳ್ಳುವುದು ಮಾತ್ರ ಉಳಿದಿದೆ ಎಂದೆ. ಹಿಟ್ಲರ್ ಹೃದಯವನ್ನು ಕರಗಿಸುವಂತಹ ಸಂಗತಿಗೆ ಮಾಣಿ ಕರಗದಿರುವನೆ?

ಕ್ಯಾಪ್ಸಿಕಮ್ ಮಸಾಲೆ ಕೊಡಲಾ?” ಎಂದನವ. ಸಮ್ಮತಿಸಿದೆ.

ಯಾವ ಬಣ್ಣದ್ದು?”

ಹೌದಲ್ಲವೇ. ನನ್ನ ಚಿಕ್ಕಂದಿನಲ್ಲಿ ಇದ್ದದ್ದು ವೈಜಯಂತಿಮಾಲಾಳ ಕೆನ್ನೆಯಷ್ಟೇ ಮೃದು, ಹೇಮಮಾಲಿನಿಯ ಕೆನ್ನೆಯಷ್ಟೇ ಹೊಳಪು ಇದ್ದಂತಹ ಹಸಿರುಬಣ್ಣದ ದಪ್ಪಮೆಣಸಿನಕಾಯಿ ಒಂದೇ. ಈಗ ಅದೆಲ್ಲೆಲ್ಲಿಂದಲೋ ಯಾವ್ಯಾವುದೋ ಬಣ್ಣಗಳು.

ಹಳದಿ?” ಎಂದೆ.

ಚೀನಾದವರ ಮೈಬಣ್ಣ. ಕೋವಿಡ್ ಕಾಲದಲ್ಲಿ ನಾನೇ ಅದನ್ನು ಬ್ಯಾನ್ ಮಾಡಿದ್ದೇನೆ.”

ನೀಲಿ?”

ಆಕಾಶದ ನೀಲಿಯೋ, ಸಮುದ್ರದ ನೀಲಿಯೋ?”

ಸಮುದ್ರದ ನೀಲಿ.”

ಅರಬ್ಬೀ ಸಮುದ್ರದ ನೀಲಿಯೋ ಹಿಂದೂ ಮಹಾಸಾಗರದ ನೀಲಿಯೋ?”

ಕೈಯಲ್ಲಿದ್ದ ಮೊಬೈಲ್ ಥರಗುಟ್ಟಿತು. “ಟಿಫನ್ ರೆಡಿ. ಸ್ಟಾರ್ಟ್ ಇಮ್ಮೀಡಿಯೆಟ್ಲಿ ಎಂದು ಮನೆಯಿಂದ ಬಂದ ಮೆಸೇಜ್ ಹೇಳಿತು. “ಜಸ್ಟ್ ಮಿನಿಟ್. ಹ್ಯಾಂಡ್ ವಾಷ್ ಮಾಡಿಕೊಂಡು ಬರ್ತೀನಿ ಎನ್ನುತ್ತಾ ವಾಷ್ಬೇಸಿನ್ನಿನ ಬಳಿಯಿಂದ ಹೊರಬಾಗಿಲಿನತ್ತ ಸಾಗಿ ಪ್ರಶ್ರನಕ್ಷತ್ರಿಕನಿಂದ ಬಿಡುಗಡೆಗೊಂಡೆ.

 

Comments

  1. ಬಹಳ ನಗು ಬರಿಸಿತು, ನಿಮ್ಮ ದೋಸೆ ಆರ್ಡರ್ ಪ್ರಕರಣ! ನಿಮ್ಮ ಕಲ್ಪನಾ ಶಕ್ತಿಗೆ ಎಲ್ಲೆಯೇ ಇಲ್ಲ!

    ReplyDelete
  2. Looks like back on track, excellent article. Liked he varieties of butter ha ha ha super humor

    ReplyDelete
  3. ಹಾಸ್ಯದ ಹಸಿವಿನಲ್ಲಿ ಮಸಾಲೆ ದೋಸೆ ಎರಡೂ ಕೈಯಲ್ಲಿ ಹರಿದರಿದು ಜಮಾಯಿಸಿದ್ದೀರಿ . ದೋಸೆ ಬಗ್ಗೆ ಯಾಕೆ ಬರೆದಿಲ್ಲ ಅಂದ್ಕೋತಿದ್ವಿ ಬಂತು ಒಂದು ಒಳ್ಳೆ ಹಾಸ್ಯ ಲೇಖನ super humor

    ReplyDelete
  4. ಮಸಾಲಾ ದೋಸೆ ತಿನ್ನಲು ಪ್ರಶ್ನೆಗಳ ಸಾಲು :)

    ReplyDelete

Post a Comment