ಹೊರನಾಡಿನ ಅನ್ನಪೂರ್ಣೇಶ್ವರಿ

 ಹೊರನಾಡಿನ ಅನ್ನಪೂರ್ಣೇಶ್ವರಿ

 ಲೇಖನ - ಡಾ. ಮಂಜುಳಾ ಹುಲ್ಲಹಳ್ಳಿ,  ಚಿಕ್ಕಮಗಳೂರು


ಹೊರನಾಡು: ವಿಶ್ವಮಾತೆಯ ಮಮತೆ ವಾತ್ಸಲ್ಯಗಳ ಸಿರಿಗೂಡು.

     ಶಿವಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿಶೃಂಗಗಳು, ತೆರೆಗಳ ಮೇಲೆ ತೆರೆಯೆದ್ದು ಹರಿದು ಹೋಗುವಂತಿರುವ ಗಿರಿಪಂಕ್ತಿಗಳ ಸಾಲುಸಾಲು, ಆತ್ಮವೇ ಬಿರಿದು ಅರಳುವ ರೀತಿಯಲ್ಲಿ ಶೋಭಿಸುವ ಹಸುರಸುರು ಹಸಿರಿನಿಂದ ಕಂಗೊಳಿಸುವ ಪರ್ವತಗಳ ಏರಿಳಿತಗಳು... ಇಂತಹ ಅಪರ್ವ ಸೌಂದರ್ಯ ಮನದೊಳಗಿನ ಎಂತಹ ಕಾಡುವ ನೋವುಗಳನ್ನೂ ಹಾಡಾಗಿಸಿಬಿಡುತ್ತದೆ. 



   ಇಂತಹ ನಮ್ಮ  ಸಿರಿಬನಗಳ ಮಲೆಯ ಮಂಗಳನಾಡಿನ  ಕಟ್ಟಕಡೆಯ ತುತ್ತ ತುದಿಯಲೊಂದು ಮಮತೆ, ವಾತ್ಸಲ್ಯಗಳ ಸಿರಿಗೂಡಿನ ತಾಣವೊಂದಿದೆ. ಅದೇ ಪ್ರಕೃತಿದೇವಿ ಹರಸಿದ, ವಾತ್ಸಲ್ಯಮಯಿ  ನೆಲೆಸಿದ  ಹೊರನಾಡು!

    ನನಗೆ ಬಾಲ್ಯದಿಂದಲೇ ಎದೆಯಾಳಕ್ಕಿಳಿದಿದ್ದ ಮಧುರಾತಿಮಧುರಗೀತೆಗಳಲ್ಲಿ ಒಂದು, 'ಕಣ್ಣು ನೂರು ಸಾಲದು, ಅನ್ನಪೂರ್ಣೇಯ ನೋಡಲು, ನಾಲಗೆ ಸಾವಿರ ಸಾಲದು, ಈಶ್ವರಿ ಇವಳನು ಹೊಗಳಲು... ಚೆಲುವಿನ ತಾಣ, ಒಲವಿನ ಯಾನ, ಆಗಿದೆ ಮಂದಿರ, ಕಾಡಿನಲಿ...!' ಕೇಳುಕೇಳುತ್ತಲೇ ಈ ತಾಣಕ್ಕೆ ಓಡಿ ಹೋಗಬೇಕೆನಿಸುತ್ತಿತ್ತು. ಆ ಕ್ಷಣ ಸಾಕಾರವಾದಾಗ ಅನುಭವಿಸಿದ ಆನಂದ ವರ್ಣನಾತೀತ.

    ಚಿಕ್ಕಮಗಳೂರಿನಿಂದ ಹೊರನಾಡಿಗೆ, ಮೂಡಿಗೆರೆ ಅಥವಾ ಬಾಳೆಹೊನ್ನೂರು ಮಾರ್ಗವಾಗಿ ರಸ್ತೆ ಸಂಪರ್ಕವಿದೆ. ಸುಮಾರು ನೂರು ಕಿಮಿ ಹಾದಿ. ಗಮ್ಯದಷ್ಟೇ ಚೆಲುವು, ಅದರೆಡೆಗೆ ಕರೆದೊಯ್ಯುವ ಈ ಹಾದಿಗಳೂ! ಹಸಿರಸಿರು ಹಸಿರು ಗದ್ದೆಬಯಲುಗಳು, ಕಾಫಿತೋಟಗಳು, ಟೀ ಎಸ್ಟೇಟ್ಗಳು, ದಟ್ಟ ಕಾಡುಗಳು, ದಿಟ್ಟಝರಿಗಳು, ಕೆಟ್ಟುಕೆಟ್ಟು ಸರಿಮಾಡಿಸಿಕೊಳ್ಳುವ ರಸ್ತೆಗಳು, ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಧುಮ್ಮಿಕ್ಕಿ ಚಿಮ್ಮುವ ಜಲಪಾತಗಳು...!

  ಮುಂದೆ ಮುಂದೆ ಸಾಗಿದಂತೆ ದಟ್ಟಕಾಡುಗಳ ಬೆಟ್ಟ ಕಣಿವೆಗಳ ನಡುವಣ ಪುಟ್ಟ ಪರ್ಯಾಯ ದ್ವೀಪ, ಹೊರನಾಡಿನ ಮಂಗಳಕರ ವಾತಾವರಣ ಮನೋಗೋಚರವಾಗತೊಡಗುತ್ತದೆ. ಪುರಾಣೇತಿಹಾಸಗಳಲ್ಲಿ ಅತ್ಯಂತ ಪ್ರಭಾವೀ ಕ್ಷೇತ್ರವೆಂದು ಪರಿಗಣಿತವಾಗಿರುವ ಕಳಸವೆಂಬ ಸುಂದರ ಊರನ್ನು ಮುಟ್ಟಿ ಹೊರನಾಡಿನ ದಾರಿ ಹಿಡಿಯಬೇಕು. ಭದ್ರಾನದಿಯ ಸುಭದ್ರ ಕೃಪೆ ಪಡೆದರೆ ಮುಂದಿನ ಎರಡು ಮೈಲಿಗಳ ಹಾದಿ ಹೊರನಾಡನ್ನು ಮುಟ್ಟಿಸುತ್ತದೆ. ಒಂದುವೇಳೆ ಭದ್ರಾನದಿ ತುಂಬಿ ಹರಿಯುತ್ತಿದ್ದರೆ ಪ್ರವಾಹ ಇಳಿಯುವವರೆಗೂ ಕಾಯಲೇಬೇಕು! ಒಮ್ಮೆ ಹೊರನಾಡಿಗೆ ಕಾಲಿಟ್ಟರೆ ಸಾಕು, ರಮ್ಯರಮಣೀಯ ಬೆಟ್ಟಗಳ ನಡುವಣ ಪುಟ್ಟ ತಾಣದಲ್ಲಿ ಕಣ್ಣು ಹೋದೆಡೆಗಳಲ್ಲಿ ಅಲ್ಲ, ಮನ ಹಾಯ್ದ ಕಡೆಗಳಲೆಲ್ಲಾ ಪ್ರಕೃತಿ ಮಾತೆ ದಿವ್ಯ ಸಂಕಲ್ಪದಿಂದ ಮನತಣಿಯೇ ಬಿಡಿಸಿದ ಹಸಿರಸಿರು ರಂಗವಲ್ಲಿಗಳ ಚಿತ್ರಚಿತ್ತಾರ; ಮುಂಜಾನೆಯಿಂದ ನಡುರಾತ್ರಿಯವರೆಗೂ, ಕ್ಷಣಕ್ಷಣಕ್ಕೂ ನವನವೀನವೆನಿಸುವ ನಿಸರ್ಗದೇವತೆಯ ವರ್ಣವೈಭವಗಳು...!

   ಅನತಿ ದೂರದಲ್ಲೇ ಪ್ರಕೃತಿಮಾತೆಯ ಚೆಲುವು, ಒಲವು, ಔದಾರ್ಯ, ಮಮತೆ, ವಾತ್ಸಲ್ಯಗಳೆಲ್ಲ ಒಟ್ಟಾಗಿ ರೂಪುಗೊಂಡಂತೆ ಮಾತೆ ಅನ್ನಪೂರ್ಣೇಶ್ವರಿ ದೇವಾಲಯವು ಕೈಬೀಸಿ ಬರಮಾಡಿಕೊಳ್ಳುತ್ತದೆ. ಅನ್ನಪೂರ್ಣೇಶ್ವರಿ ಜಗದ ಅನ್ನದಾತೆ ಎಂಬುದು ಪರಾಂಪರಾನುಗತ ನಂಬಿಕೆ. ಅನ್ನದ ಮೂಲಕ ದೇಹದ ಹಸಿವನ್ನು ನಿವಾರಿಸುವಂತೆ ಜ್ಞಾನ ವೈರಾಗ್ಯಗಳ ಭಿಕ್ಷೆಯನ್ನೂ ನೀಡಿ ಮನದ, ಆತ್ಮದ ಹಸಿವಿನ ಕ್ಲೇಶವನ್ನೂ ಪರಿಹರಿಸುವ ನಂಬಿಕೆಯ ಹಿಂದಿನ ಮೌಲ್ಯಗಳು ಅದೆಷ್ಟು ಉದಾತ್ತ!

   ಉತ್ತರದ ವಾರಣಾಸಿ ಅನ್ನಪೂರ್ಣೇಶ್ವರಿಯ ನೆಲೆ ಎಂದು ಪ್ರಸಿದ್ಧವಾಗಿರುವಂತೆ ದಕ್ಷಿಣದ ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂಬ ಐತಿಹ್ಯವಿದೆ. ಈ ದೇಗುಲವನ್ನು ನೋಡುತ್ತಿದ್ದರೆ, ಕಡುಕಷ್ಟದಿಂದ ಮುಟ್ಟಬೇಕಾದ ನಿಸರ್ಗದೇವಿಯ ನೆಲೆಬೀಡುಗಳಲ್ಲಿ ದೇವಮಂದಿರವನ್ನು ನಿರ್ಮಿಸುವ ನಮ್ಮ ಪೂರ್ವಜರ ದಿವ್ಯ ಸಂಕಲ್ಪಕ್ಕೆ ಮನಸಾ ವಂದಿಸಬೇಕೆನಿಸುತ್ತದೆ. ಇಂತಹ ಹಲವಾರು ಸಂಕಲ್ಪಗಳು ನಮ್ಮ ಪ್ರಕೃತಿಯ ಒಡಲಿಗೆ ಮಾನವ ನೀಡುವ ಬರಸಿಡಿಲಿನ ಅಘಾತಗಳನ್ನು ಸ್ವಲ್ಪ ಮಟ್ಟಿಗಾದರೂ ತಡೆಯುತ್ತಿವೆ. ಅನ್ನಪೂರ್ಣೇಶ್ವರಿಯ ಪ್ರಾಚೀನ ಗುಡಿಗೆ ಕಾಲಕಾಲಕ್ಕೆ ಅಗತ್ಯ ಇರುವ ಸೇರ್ಪಡೆ, ಮಾರ್ಪಾಡುಗಳು ಆಗುತ್ತಲೇ ಬಂದಿರುವುದನ್ನು ದೇಗುಲದ ಸಮಗ್ರ ನೋಟ, ಪರಂಪರೆಯ ನಂಬಿಕೆಗಳು ಮತ್ತು ಇಲ್ಲಿನ ಶಾಸನಗಳು ಅಭಿವ್ಯಕ್ತಿಸುತ್ತವೆ.

  


  ಮೊದಲಿಗೆ ಶಾಸನಗಳಿಂದ ಅಭಿವ್ಯಕ್ತಿ ಆಗುವ ಕುತೂಹಲಕಾರಿ ಅಂಶವೆಂದರೆ, 'ಹೊರನಾಡು' ಗ್ರಾಮನಾಮವು 'ಹೋರಿನಾಡು' ಎಂದು ಹದಿಮೂರನೇ ಶತಮಾನದಿಂದ ಹದಿನೆಂಟನೆಯ ಶತಮಾನದವರೆಗೂ ಉಲ್ಲೇಖವಾಗಿರುವುದು. ಹೊರನಾಡಿನ ಮೂರು ಶಾಸನಗಳ ಜೊತೆಗೆ, ಕಳಸದ ಏಳು ಶಾಸನಗಳು, ಕಟ್ಟಿನಹೊಳೆಯ ಒಂದು ಶಾಸನ ಇದನ್ನು ದೃಢೀಕರಿಸುತ್ತವೆ. ಅಲ್ಲದೆ ಈ ಹೋರಿನಾಡು ಏಳುಮಲೆಯನಾಡುಗಳಲ್ಲಿ ಒಂದಾಗಿ ಪ್ರಮುಖ ಸ್ಥಾನ ಪಡೆದಿದ್ದುದೂ ದಾಖಲಾಗಿದೆ.

   ಈಗಿನ ಅನ್ನಪೂರ್ಣೇಶ್ವರಿ ದೇಗುಲದ ಒಳಭಾಗದಲ್ಲಿ ಈಶಾನ್ಯ ಮತ್ತು ಆಗ್ನೇಯ ಮೂಲೆಯಲ್ಲಿರುವ ಶಿಲಾಶಾಸನಗಳು ಕ್ರಿಶ 1675 ಅಕ್ಟೋಬರ್ ಹತ್ತನೇ ದಿನಾಂಕಕ್ಕೆ ಸೇರಿವೆ.  ಬೇಲೂರು ಸಂಸ್ಥಾನದ ಒಡೆಯರಾದ ಕೃಷ್ಣಪ್ಪನಾಯಕರ ಮಗ ವೆಂಕಟಾದ್ರಿ ನಾಯಕರು ಕಳಸದಸೀಮೆಯ ಹೋರಿನಾಡಿನ ಅನ್ನಪೂರ್ಣೇಶ್ವರಿ ದೇವಸ್ತಾನದಲ್ಲಿ ಅನ್ನಪೂರ್ಣೇಶ್ವರಿ ಅಮ್ಮನವರಿಗೆ, ಅಮೃತಪಡಿ, ಅಕ್ಕಿ, ನಂದಾದೀಪ, ಪಂಚಪರ್ವ ಅಲ್ಲದೇ ಅಮ್ಮನವರ ಸನ್ನಿಧಿಯಲ್ಲಿ ನಡೆವ ಸತ್ರಕ್ಕೆ ಬರುವ ಅತಿಥಿಗಳು, ಪರದೇಶಿಗರು, ಬ್ರಾಹ್ಮಣರು ಸೇರಿದಂತೆ ದಿನಕ್ಕೆ ಇಪ್ಪತ್ತು ಜನರಿಗೆ ಊಟದ ವ್ಯವಸ್ಥೆಗೆ, ಅಡುಗೆ ಮಾಡಿ ಬಡಿಸುವವನ ಸಂಬಳಕ್ಕೆ ಬೇಕಾದ  ಗದ್ಯಾಣಗಳನ್ನು ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಕೃಷ್ಣಾರ್ಪಣ ಮಾಡಿ ತೇರಿನ ಕೆಳಗೆ ಬರೆಸಿದ ಶಿಲಾಶಾಸನವಾಗಿದೆ.  ಇದೇ ವರ್ಷದಲ್ಲಿ, ನವೆಂಬರ್ 19ರಲ್ಲಿ ನೀಡಿದ ತಾಮ್ರಶಾಸನದಲ್ಲಿ ಇದೇ ಅರಸರು ಹೋರಿನಾಡಗ್ರಾಮದ ಅನ್ನಪೂರ್ಣೇಶ್ವರಿ ನೈವೇದ್ಯ, ದೀಪಾರಾಧನೆ, ಅನ್ನಸತ್ರಕ್ಕೆ ನೀಡಿದ ಕಾಣಿಕೆಯ ವಿವರಗಳಿವೆ.  ಅನ್ನಪೂರ್ಣೇಶ್ವರಿ ದೇವಾಲಯವು ಈ ಕಾಲಕ್ಕಿಂತಲೂ ಪ್ರಾಚೀನ ಮತ್ತು ಇಲ್ಲಿ ಅನ್ನದಾಸೋಹ ಅಂದಿನಿಂದಲೂ ನೆಡೆದು ಬರುತ್ತಿದೆ ಎಂಬುದನ್ನು ಈ ಶಾಸನಗಳು ಸಾಕ್ಷೀಕರಿಸುತ್ತವೆ.

   ಹೊರನಾಡನ್ನು ಸೇರುವ ಹಾದಿಯು ಏನೆಲ್ಲಾ ಸೌಲಭ್ಯಗಳು ಇರುವ ಇಂದಿನ ದಿನಗಳಲ್ಲಿ ಕೂಡ ಸವಾಲಿನದೇ. ಇನ್ನು ಏನೇನೂ ಸೌಕರ್ಯಗಳಿಲ್ಲದ ಹಿಂದಿನ ದಿನಗಳಲ್ಲಿ ಇಲ್ಲಿಗೆ ಬಂದ ಮೇಲೆ ಒಂದು ದಿನ ಉಳಿಯಲೇಬೇಕಾಗುತ್ತಿತ್ತು.  ಹಾಗೆ ಉಳಿಯಲು ಕನಿಷ್ಠ ಸೌಕರ್ಯಗಳನ್ನು ದೇವಾಲಯದ ವತಿಯಿಂದ ಕಲ್ಪಿಸಿಕೊಡುವುದೂ ಅನಿವಾರ್ಯವಾಯಿತು. ಈ ಅನಿವಾರ್ಯತೆಯನ್ನೇ ಒಂದು ಮನೋಹರ ಸವಾಲನ್ನಾಗಿ ಸ್ವೀಕರಿಸಿದ ಶ್ರೀದೇಗುಲದ ವತಿಯಿಂದ ನಿತ್ಯವೂ ಸಹಸ್ರಾರು ಜನರಿಗೆ ವ್ಯವಸ್ಥಿತವಾಗಿ ನೀಡುತ್ತಿರುವ ಉಚಿತ ಊಟ, ಕನಿಷ್ಟ ದರದ ವಸತಿ ಸೌಲಭ್ಯ ಒಂದು ಅಪೂರ್ವ ದಾಖಲೆಯೇ ಹೌದು.

  ಅತ್ಯಂತ ಶಿಥಿಲವಾದ ದೇವಾಲಯಕ್ಕೆ ದೇಗುಲವಾಸ್ತುವಿನ ಅನ್ವಯ ವಿಶಿಷ್ಟವಾದ ಶಿಲಾಮಯ ರೂಪರೇಷೆಗಳನ್ನು 1973 ರಲ್ಲಿ ಶ್ರೀ ವೆಂಕಟಸುಬ್ಬಾಜೋಯಿಸರ ಉಸ್ತುವಾರಿ, ಮಾರ್ಗದರ್ಶನ, ನೇತೃತ್ವದಲ್ಲಿ ನೀಡಲಾಯಿತು. ಇಡೀ ದೇಗುಲವನ್ನೇ ಬಳಸಿ ದೇವಿಯ ಶಿರೋಭಾಗದಲ್ಲಿ ಐದು ಹೆಡೆಗಳನ್ನೆತ್ತಿ ಹಿಡಿದಿರುವ ಸರ್ಪಬಂಧದ ವಿನ್ಯಾಸ ವಿಶಿಷ್ಟ.  ಆ ಸಮಯದಲ್ಲೇ ಪುನರ್ ಪ್ರತಿಷ್ಠಾಪಿಸಲಾದ ಅನ್ನಪೂರ್ಣೇಶ್ವರಿ ದೇವಿಯ ಶಿಲಾವಿಗ್ರಹ ಸರ್ವಾಂಗಸುಂದರವಾಗಿದೆ. ಕಾಂತಿಯುತ ವದನಾರವಿಂದ. ಕಣ್ಣುಗಳಿಂದ ಮಮತೆ ವಾತ್ಸಲ್ಯಗಳ ಪ್ರವಾಹ ಹರಿದು ಬರುತ್ತಿದೆಯೇನೋ ಎನ್ನುವಷ್ಟು ಭಾವಪೂರ್ಣ. ಮಹಾಮಂಗಳಾರತಿಯ ಸಮಯದಲ್ಲಿ ದೇವಿಯ ತೇಜೋಮೂರ್ತಿಯನ್ನು ನೋಡಿಯೇ ಮನ ತಣಿಯಬೇಕು.

ಇದಕ್ಕಾಗಿ ಜನ ಹಾತೊರೆದು ಇಲ್ಲಿಗೆ ಆಗಮಿಸುತ್ತಾರೆ.

    ದೇಗುಲದ ವತಿಯಿಂದ ಅನ್ನದಾನ ನೆಡೆಯುವಂತೆ, ಈ ಸುತ್ತಲಿನ ರೈತರು, ಭಕ್ತರು ತಾವು ಬೆಳೆದ ದವಸ ಧಾನ್ಯಗಳಲ್ಲಿ ಒಂದು ಭಾಗವನ್ನು ದೇವಿಗೆ ಸಮರ್ಪಿಸುತ್ತಾರೆ. ಈ ರೀತಿಯ ಕೊಳುಕೊಡುಗೆಗಳು ಇಲ್ಲಿ ನಿರಂತರವಾಗಿ ನೆಡೆಯುತ್ತಿರುವುದನ್ನು ಕಾಣಬಹುದು. ಇಂದಿನ ದಿನಗಳಲ್ಲಿ ದೇಗುಲದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವರ ವ್ಯವಸ್ಥಿತ ಮಾರ್ಗದರ್ಶನ, ನೇತೃತ್ವದಲ್ಲಿ ಎಷ್ಟೇ ಜನರು ಆಗಮಿಸಿದರೂ ಯಾವುದೇ ಕೊರತೆಯಾಗದಂತೆ ಹಗಲಿರುಳೂ ಅತ್ಯಂತ ಪ್ರೀತಿ, ವಿಶ್ವಾಸ, ಆತ್ಮೀಯ ಭಾವಗಳಿಂದ ನಿರ್ವಹಿಸುವ ಪರಿ ನಿಜಕ್ಕೂ ಅಪೂರ್ವ.

   ಹೊರನಾಡಿನಿಂದ ದಟ್ಟ ಕಾಡಿನ ಬೆಟ್ಟಗುಡ್ಡಗಳ ದುರ್ಗಮ ಹಾದಿಯ ಪ್ರಯಾಣದಲ್ಲಿ ಶೃಂಗೇರಿಗೆ ಸುಮಾರು ನಲವತ್ತು ಕಿಲೋಮೀಟರ್ ನಲ್ಲೇ ತಲುಪಬಹುದಂತೆ. ಆದರೆ ಸಾಮಾನ್ಯವಾಗಿ ಪ್ರವಾಸಿಗರು ಮುಖ್ಯ ದಾರಿಯನ್ನೇ ಆರಿಸಿಕೊಳ್ಳುತ್ತಾರೆ. ಶಾಲಾ ಮಕ್ಕಳ ಪ್ರವಾಸದ ಪಟ್ಟಿಯಲ್ಲಿ ಸಾಧಾರಣವಾಗಿ ಹೊರನಾಡು, ಶೃಂಗೇರಿ ಇದ್ದೇ ತೀರಬೇಕು. ಇದಕ್ಕೆ ಒಂದು ಮುಖ್ಯ ಕಾರಣ, ಈ ತಾಣಗಳಲ್ಲಿ ದೊರೆಯುವ ಊಟ, ವಸತಿ ಸೌಕರ್ಯಗಳು.

    ಹೊರನಾಡಂಬ ಸಿರಿಗೂಡಿನ ನಿಸರ್ಗ ಸೌಂದರ್ಯ, ಊಟೋಪಚಾರದ ಔದಾರ್ಯ, ಅನ್ನಪೂರ್ಣೇಶ್ವರಿ ತಾಯ  ಮಮತೆಯ ಮಾಧುರ್ಯ ಸವಿಯಬೇಕೆನ್ನುವವರು ಒಮ್ಮೆ ಹೊರನಾಡಿಗೆ ಹೋಗಿಯೇ ಬರಬೇಕು!!!

ಲೇಖಕಿ  - ಡಾ. ಮಂಜುಳಾ ಹುಲ್ಲಹಳ್ಳಿ




Comments

  1. ಬಹಳ ಚೆಂದದ ಬರವಣಿಗೆ ಹೊರನಾಡಿಗೆ ಹೋಗಿ ಬಂದಷ್ಟೇ ಖುಷಿ ಕೊಟ್ಟಿತು ಲೇಖನ

    ReplyDelete
    Replies
    1. ಹಾರ್ದಿಕ ಧನ್ಯವಾದಗಳು.

      Delete
  2. ಚೆನ್ನಾಗಿದೆ, ಖುದ್ದು ಅಲ್ಲಿಯೇ ಇದ್ದು ನೋಡುತ್ತಿರುವಂತಿದೆ.

    ReplyDelete
    Replies
    1. ಧನ್ಯವಾದಗಳು.
      ನಾನು ಈ ಲೇಖನ ಬರೆಯುವಾಗಲೂ ಇದೇ ಅನುಭೂತಿ ಆಗಿತ್ತು!

      Delete
  3. One of the wonderful article I read these days. No one can forget Horanadu. You took me to good old days.Nice info too

    ReplyDelete
    Replies
    1. ತಮ್ಮ ಅಭಿಮಾನಪೂರ್ವಕ ನುಡಿಗಳು ಬರೆಯುವ ಉತ್ಸಾಹ ಹೆಚ್ಚಿಸುತ್ತವೆ. ಹಾರ್ದಿಕ ಧನ್ಯವಾದಗಳು.

      Delete
  4. ಸ್ಥಳ ಪುರಾಣ, ನಿಸರ್ಗ ವರ್ಣನೆ, ಇತಿಹಾಸ ಪುರಾವೆ ಎಲ್ಲವೂ ಒಂದೇ ಲೇಖನದಲ್ಲಿ ತಿಳಿಸಿಕೊಟ್ಟಿರುವ ತಮ್ಮ ವಿಸ್ತಾರ ಜ್ಞಾನ ಭಂಡಾರ ಲೇಖನಗಳಲ್ಲಿ ತಿಳಿಯುತ್ತದೆ. ನಮ್ಮ ನಾಡಿನ ಮತ್ತಿತರ ಸ್ಥಳ ಪರಿಚಯಕ್ಕಾಗಿ ತಮ್ಮ ಮುಂದಿನ ಲೇಖನಗಳಲ್ಲಿ ಕಾಯುತ್ತಿರುವೆವು. ತಮ್ಮ ಬರವಣಿಗೆಯ ಶೈಲಿ ಬಹಳ ಸೊಗಸಾಗಿದೆ. ಲೇಖನಕ್ಕೆ ಧನ್ಯವಾದಗಳು

    ReplyDelete
  5. ಲೇಖನಗಳನ್ನು ಮನಃಪೂರ್ವಕವಾಗಿ ಓದಿ, ಆನಂದಿಸಿ, ಭಾವಗಳನ್ನು ವ್ಯಕ್ತಪಡಿಸುವ ತಮ್ಮ ಸಹೃದಯತೆಗೆ ಹಾರ್ದಿಕ ಧನ್ಯವಾದಗಳು.

    ReplyDelete
  6. ಲೇಖನಗಳನ್ನು ಓದಿ, ಆನಂದಿಸಿ, ಮನಃಪೂರ್ವಕವಾಗಿ ತಮ್ಮ ಮನದ ಭಾವಗಳನ್ನು ವ್ಯಕ್ತಪಡಿಸುವ ತಮ್ಮ ಸಹೃದಯತೆಗೆ ಹಾರ್ದಿಕ ಅಭಿನಂದನೆಗಳು.

    ReplyDelete
  7. ನಾವು ಬಹಳ ಹಿಂದೆಯೇ ಈ ಸ್ಥಳಕ್ಕೆ ಭೇಟಿ ನೀಡಿದ್ದೆವು. ಇಂದಿಗೂ ಕೂಡ ದೇವಸ್ಥಾನ ನಿರ್ವಹಣಾ ಸಿಬ್ಬಂದಿಗಳು ನಾವು ಆಯ್ಕೆ ಮಾಡಿದ ದಿನಾಂಕಕ್ಕಾಗಿ ಪ್ರತಿ ವರ್ಷ ನಮಗೆ ಪ್ರಸಾದವನ್ನು ಕಳುಹಿಸುತ್ತಾರೆ.
    ಅಷ್ಟು ಒಳ್ಳೆಯ ದೇವಸ್ಥಾನ ಮತ್ತು ಒಳ್ಳೆಯ ಲೇಖನ ಬರೆದಿದ್ದಕ್ಕೆ ಧನ್ಯವಾದಗಳು

    ReplyDelete

Post a Comment