ಗುರುಪೂರ್ಣಿಮೆಯೂ ಶಿಳ್ಳೇಕ್ಯಾತನೂ

 ಗುರುಪೂರ್ಣಿಮೆಯೂ ಶಿಳ್ಳೇಕ್ಯಾತನೂ

ಹಾಸ್ಯ ಲೇಖನ - ಅಣುಕು ರಾಮನಾಥ್ 


‘ಯಾಪಿ ಗುರುಪೂರ್ಣಿಮಾ ಸಾರ್’

ಧ್ವನಿ ಬಂದತ್ತ ತಿರುಗಿ ನೋಡಿ ‘ಓಹ್! ಶಿಳ್ಳೇಕ್ಯಾತ!’ ಎಂದು ಉದ್ಗರಿಸಿದೆ.

ಕ್ಲಾಸಿನಲ್ಲಿ ಮೇಷ್ಟ್ರು ಬೋರ್ಡಿನ ಕಡೆ ತಿರುಗಿದ ತಕ್ಷಣ ಕಿವಿ ಸೀಳುವಂತಹ ಶಿಳ್ಳೆ ಹಾಕುವುದರ ಮೂಲಕ ಖ್ಯಾತನಾದ್ದರಿಂದ ಶಿಳ್ಳೇಕ್ಯಾತ ಎಂಬ ಬಿರುದಿಗೆ ಭಾಜನನಾಗಿದ್ದ ಅವನ ನಿಜವಾದ ಹೆಸರು ಅವನಿಗೇ ಮರೆತಿದ್ದೀತು. ಗುರುಗಳಿಗೆ ಅಮಾವಾಸ್ಯೆಯಂತೆ ಅಡರಿಕೊಳ್ಳುವ ಅವನು ಗುರುಪೂರ್ಣಿಮೆಯಂದು ನನ್ನ ಮುಂದೆ!

‘ಏನು ಬಂದದ್ದು?’ ಎಂದೆ.

‘ಗುರುಪೂರ್ಣಿಮೆ ಬಂದರೆ ನಿಮ್ದೇ ನೆನಪು ಸಾರ್. ನೀವು ನನ್ನ ಗಣಿತದ ಗುರುಗಳು, ಕೊಡುತ್ತಿದ್ದದ್ದು ಹುಣ್ಣಿಮೆಚಂದ್ರನ್ನ ಹೋಲುವಂತಹ ಮಾರ್ಕ್ಸು. ಗುರು+ಹುಣ್ಣಿಮೆಯ ಮಾರ್ಕ್ಸ್= ಗುರುಪೂರ್ಣಿಮೆ ಅಲ್ವಾ ಸಾರ್!’ 

ಕ್ಯಾತ ಲಾಜಿಕ್ಕಿಗೂ ಖ್ಯಾತನಾಗಿದ್ದವನೇ. ಕುಲಗೆಡಿಸುವಷ್ಟು ಇಂಗ್ಲಿಷ್ ಕಲಿತಿದ್ದ ಅವನಿಂದ ಹಳೆಯ ಥಿಯರಿಗಳಿಗೆ ಹೊಸ ವ್ಯಾಖ್ಯಾನಗಳು ಮೂಡುತ್ತಿದ್ದವು. ಪೈಥಾಗೊರಸ್‌ನ ‘square on the hypotenuse is equal to sum of the squares on the other two sides’ ನಿಯಮವನ್ನು ನ್ಯೂಸ್ ಚಾನಲ್‌ಗಳಿಗೆ ಹೊಂದಾಣಿಕೆ ಮಾಡಿ ‘scare on the 9:30 news is equal to sum of the scares on the other news times’ ಎಂದಿದ್ದನವ. ರಾತ್ರಿ ಒಂಬತ್ತೂವರೆಯ ವಾರ್ತಾಪ್ರಸಾರ ದಿನದ ಎಲ್ಲ ವಾರ್ತಾಪ್ರಸಾರಗಳ ಒಟ್ಟು ಮೊತ್ತಕ್ಕಿಂತಲೂ ಹೆಚ್ಚು ಭೀತಿ ಹುಟ್ಟಿಸುತ್ತದೆ ಎನ್ನುವುದು ಅವನ ಸಂಶೋಧನೆಯ ಫಲವಂತೆ.

ಆಲ್‌ಜೀಬ್ರಾ ಆರಂಭಿಸಿದ ಮೊದಮೊದಲ ದಿನಗಳು. ಸೈನ್ ತೀಟಾ ಪ್ಲಸ್ ಕಾಸ್ ತೀಟಾ ಈಕ್ವಲ್ಸ್ ಟ್ಯಾನ್ ತೀಟಾ ಎಂದು ಹೇಳಿದೆ. ತಕ್ಷಣ ‘ನಿಜ ಸಾರ್. ಅಪ್ಪನ ಚೆಕ್‌ಗೆ ಸೈನ್ ಹಾಕುವ ತೀಟೆ, ಮಕ್ಕಳ ಕಾಸು ಖರ್ಚು ಮಾಡುವ ತೀಟೆಗಳ ಪರಿಣಾಮವಾಗಿ ಗೋಕರ್ಣದ ಬೀಚಿನಲ್ಲಿ ಟ್ಯಾನ್ ಆಗಲೆಂದು ಬಿದ್ದುಕೊಳ್ಳುವ ತೀಟೆ’ ಎಂದು ನುಡಿದಿದ್ದ.

‘ಇಸ್ ಛೋಟೀ ಉಮ್ರ್ ಮೇ ಇತನೀ ಗಂದಗೀ...!’ ಎಂದು ಗದರಿದೆ.

‘ಗಂದಗಿ ಅಲ್ಲ ಸಾರ್, ಜಿಂದಗಿ. ಪ್ರಾಕ್ಟಿಕಲ್ ಸ್ಟಡಿ ಆಫ್ ಹ್ಯೂಮನ್ ಅನಾಟಮಿ. ನಜರ್ ಸರಿಯಿದ್ದರೆ ಅಸರ್ ಸರಿಯಿರತ್ತೆ ಸಾರ್’ ಎಂದು ನನಗೇ ಟಾಂಗ್ ಕೊಟ್ಟಿದ್ದ. ಕ್ಯಾತನ ಸಾಮೀಪ್ಯ ಭೂತಕಾಲದ ಬೂತಗಳನ್ನು ಮತ್ತೊಮ್ಮೆ ಬಡಿದೆಬ್ಬಿಸಿತು.

ಕನ್ನಡ ಮೀಡಿಯಂನಿಂದ ಇಂಗ್ಲಿಷ್ ಮೀಡಿಯಂಗೆ ಬಂದ ಹೊಸ ದಿನಗಳವು. ಇಂಗ್ಲಿಷ್‌ನ ಸಣ್ಣ ಸಣ್ಣ ಪದಗಳ ಮೂಲಕ ಕನ್ನಡಿಗರನ್ನು ಆಂಗ್ಲಮಾಧ್ಯಮಕ್ಕೆ ಹಗುರಾಗಿ ವರ್ಗಾಯಿಸುವ ಇಚ್ಛೆಯಿಂದ ‘ಅಡಿಷನ್ ಎಂದರೆ ಏನು?’ ಎಂದು ಕೇಳಿದೆ.

‘ರೇಡಿಯೋಗಳಲ್ಲಿ ಧ್ವನಿ ಸರಿಯೋ ಇಲ್ಲವೋ ಅಂತ ತಿಳ್ಕೊಳಕ್ಕೆ ಮಾಡೋ ಟೆಸ್ಟು ಸಾರ್’ ಎಂದ ಕ್ಯಾತ.

‘ಸಬ್‌ಟ್ರಾಕ್ಷನ್ ಅಂದರೆ?’ 

‘ನನ್ನ ಸೋದರಮಾವ ಅನುಭವಿಸಿದ್ದು ಸಾರ್.’

ಅವನ ಸೋದರಮಾವ ಎಲ್ಲವನ್ನೂ ಕಳೆದುಕೊಂಡು ಪಾಪರ್ ಆಗಿದ್ದಾನೇನೋ, ಕಳೆಯುವುದು ಮತ್ತು ಕಳೆದುಕೊಳ್ಳುವುದರ ನಡುವಿನ ವ್ಯತ್ಯಾಸ ತಿಳಿಯದೆ ಹಾಗೆ ಹೇಳಿರಬಹುದು ಎಂದುಕೊAಡು ‘ಏನು ಅನುಭವಿಸಿದರು ಅವರು?’ ಎಂದೆ.

‘ಷೇಕ್ಸ್ಪಿಯರ್ ಅಂತೊಬ್ಬ ಇದ್ದಾನಂತೆ ಗೊತ್ತಾ ಸಾರ್?’

‘ಈಗಿಲ್ಲ. ನಾಟಕಕಾರ.’

‘ಅವರ ನಾಟಕದ ಹೀರೋ ಪಾರ್ಟ್ ಮಾಡಿದರಂತೆ ನನ್ನ ಸೋದರಮಾವ. ಮಾಡಬಾರದ ಕಡೆ ಮಾಡಿದರಂತೆ.’

‘ಎಲ್ಲಿ ಮಾಡಬೇಕಿತ್ತಂತೆ? ಎಲ್ಲಿ ಮಾಡಿದರಂತೆ?’

‘ವೇದಿಕೆಯಲ್ಲಿ ಮಾಡಬೇಕಾದ್ದನ್ನ ರೋಡಲ್ಲಿ ಮಾಡಿದರಂತೆ.’

‘ಯಾವ ಪಾತ್ರ?’

‘ರೋಮಿಯೋ ಪಾತ್ರ ಸಾರ್. ರಸ್ತೆಯಲ್ಲಿ ಆಡಿದ್ದರಿಂದ ಅವರಿಗೆ ರೋಡ್ ರೋಮಿಯೋ ಅಂತ ಬಿರುದು ಬಂದಿದೆ.’

‘ಗೊತ್ತಾಯ್ತು ಬಿಡು. ಅದಕ್ಕೂ ಸಬ್‌ಟ್ರಾಕ್ಷನ್‌ಗೂ ಏನು ಸಂಬAಧ?’

‘ರೋಡ್ ರೋಮಿಯೋ ಪಾತ್ರ ವಹಿಸಿದ್ದಕ್ಕೆ ಸಬ್ ಇನ್ಸ್ಪೆಕ್ಟರ್ ಅದೇನೋ ‘ಬಹುಮಾನ’ ಕೊಟ್ಟರಂತೆ. ಆಮೇಲೆ ಇವರು ಆಸ್ಪತ್ರೆಗೆ ಹೋಗಿ ಟ್ರಾಕ್ಷನ್ ಹಾಕಿಸಿಕೊಳ್ಳಬೇಕಾಯಿತಂತೆ. ಸಬ್ ಇನ್ಸ್ಪೆಕ್ಟರ್ ಕಾರಣದಿಂದ ಸಿಕ್ಕ ಟ್ರಾಕ್ಷನ್ ಸಬ್‌ಟ್ರಾಕ್ಷನ್ ಅಂತೆ.’

‘ನಿನ್ನ ಸೋದರಮಾವನಿಂದ ಸ್ವಲ್ಪ ದೂರ ಇರು’ ಎಂದು ಹೇಳಬೇಕೆನಿಸಿದರೂ ಸಾಮಾನ್ಯವಾಗಿ ಸೋದರಮಾವಂದಿರು ಮಣ್ಣು ತಿಂದರೂ ಕಿರಿವಯಸ್ಸಿನ ಸೋದರಳಿಯಂದರಿಗೆ ಅವರು ಪ್ರಿಯರೇ ಆಗಿರುತ್ತಾರಾದ್ದರಿಂದ ‘ನ ಬ್ರೂಯಾತ್ ಸತ್ಯಮಪ್ರಿಯಂ’ ತತ್ವವನ್ನು ಅಪ್ಪಿ, ಪಾಠವನ್ನು ಮುಂದುವರಿಸುತ್ತಾ ‘ಮಲ್ಟಿಪ್ಲಿಕೇಶನ್ ಅಂದರೆ ಏನು?’ ಅಂದೆ.

‘ಅಣ್ಣ ಹೇಳಿದ್ದಾನೆ’

‘ಡಿಗ್ರಿ ಪಾಸ್ ಮಾಡಿದ ದಿನದಿಂದ ಮಲ್ಟಿನ್ಯಾಷನಲ್ ಕಂಪನಿಗಳ ಮಲ್ಟಿ ಪೋಸ್ಟ್ಗಳಿಗೆ ಅಪ್ಲಿಕೇಶನ್ ಹಾಕಿದ್ದೀನಿ ಅಂದ. ಮಲ್ಟಿ+ಅಪ್ಲಿಕೇಶನ್=ಮಲ್ಟಿಪ್ಲಿಕೇಶನ್ ಅಲ್ವಾ ಸಾರ್?’

ಕ್ಯಾತನ ಫ್ಯಾಮಿಲಿಯವರಿಗೆ ಗುಣವೂ ಇಲ್ಲ, ಸಮಾಜದಲ್ಲಿರಬೇಕಾದ ಆಕಾರವೂ ಇಲ್ಲ ಎನಿಸಿತು. ಕಡೆಯದಾದ ‘ಡಿವಿಷನ್ ಎಂದರೇನು?’ ಎಂಬ ಪ್ರಶ್ನೆಯನ್ನೂ ಒಗಾಯಿಸಿದೆ.

‘ನಮ್ಮಜ್ಜನಿಗೆ ಆಗಿದೆ ಸಾರ್’

‘ಏನಾಗಿದೆಯೋ?’

‘ಕಣ್ಣು ಮಬ್ಬಾಗೋದು. ಡಿಮ್ ವಿಷನ್ನೇ ಡಿವಿಷನ್ ಅಂತ ಪಕ್ಕದ ಮನೆ ಅಂಕಲ್ ಹೇಳ್ಕೊಟ್ಟಿದ್ದಾರೆ.’

ಕ್ಯಾತನ ಖಾನ್‌ದಾನ್ ಅಲ್ಲದೆ ಕಾಲೋನಿಯೂ ಒಂದೇ ಮಟ್ಟದ್ದೆಂದು ಸಾಬೀತಾಯಿತು. ಕ್ಯಾತನ ಹೋಪ್‌ಲೆಸ್‌ನೆಸ್ ನೋಡಿ ‘ದಯವಿಟ್ಟು ಕನ್ನಡದ ಡಿಂಡಿಮವನ್ನೇ ಎಸ್‌ಎಸ್‌ಎಲ್‌ಸಿಯವರೆಗೆ ಬಾರಿಸು’ ಎಂದು ಕಿವಿಮಾತು ಹೇಳಿದೆ.  ಹುಡುಗರ ಉತ್ತರಪತ್ರಿಕೆಗಳ ಉತ್ತರಕ್ರಿಯೆಗೆ ಕುಳಿತೆ.

‘ಹತ್ತು ಬಾಳೆಹಣ್ಣುಗಳಿಗೆ ಒಂದು ರೂಪಾಯಿ ಎಂಬತ್ತು ಪೈಸೆ ಆದರೆ ಒಂದು ಬಾಳೆಹಣ್ಣಿನ ಬೆಲೆ ಎಷ್ಟು?’ ಎಂಬ ಪ್ರಶ್ನೆಗೆ ‘ಇಷ್ಟು ಕಡಿಮೆ ಬೆಲೆಗೆ ಸಿಕ್ಕರೆ ನನಗೂ ಒಂದು ಗೊನೆ ಕೊಡಿಸಿ ಸಾರ್’ ಎಂದು ಒಬ್ಬ ಬರೆದಿದ್ದರೆ ‘ಪ್ರಶ್ನೆ ಅಪೂರ್ಣ. ಹತ್ತೂ ಬಾಳೆಹಣ್ಣುಗಳು ಒಂದೇ ಸೈಜ್ ಇದ್ದವೆ ಅಥವಾ ಬೇರೆಬೇರೆ ಸೈಜ್ ಇದ್ದವೆ ಎಂದು ತಿಳಿಸಿದರೆ ಅಷ್ಟೂ ಬಾಳೆಹಣ್ಣಿನ ಒಟ್ಟಾರೆ ಉದ್ದವನ್ನು ಕೂಡಿ, ಬಾಳೆಹಣ್ಣಿನ ಸರಾಸರಿ ಉದ್ದವನ್ನು ಲೆಕ್ಕ ಹಾಕಿದ ನಂತರ ಬಾಳೆಹಣ್ಣಿನ ಒಂದು ಇಂಚಿನ ಬೆಲೆಯನ್ನು ಕಂಡುಹಿಡಿದು, ನಂತರ ನಿಮಗೆ ಬೇಕಾದ ಬಾಳೆಹಣ್ಣಿನ ಬೆಲೆ ನಿರ್ಧರಿಸಬಹುದು. ಮುಂದಿನ ಬಾರಿಯಾದರೂ ಪ್ರಶ್ನೆಗಳು ಸ್ಪಷ್ಟವಾಗಿರಲೆಂದು ವಿನಂತಿ’ ಎಂದು ಮತ್ತೊಬ್ಬ ಬರೆದಿದ್ದ.

‘ಅಪವರ್ತನ ಎಂದರೇನು?’ ಎಂಬ ಪ್ರಶ್ನೆಗೆ ‘ಅ ಇಂದ ಪ ವರೆಗೂ, ಅಂದರೆ ಅಕ್ಕಿ, ಉದ್ದಿನಬೇಳೆ, ಕಡಲೆಬೇಳೆಯಿಂದ ಹಿಡಿದು ಪಾನ್‌ಪರಾಗ್‌ವರೆಗೂ ವರ್ತನೆಯಲ್ಲಿ ತೆಗೆದುಕೊಳ್ಳುವವನನ್ನು ಅಪವರ್ತನ ಎನ್ನುತ್ತಾರೆ. ನಮ್ಮ ಮನೆಯ ಮುಂದಿನ ಶೆಟ್ಟರಂಗಡಿಯಲ್ಲಿ ತುಂಬಾ ಜನ ಅಪವರ್ತನ ಇಟ್ಟುಕೊಂಡಿದ್ದಾರೆ’ ಎಂದು ಒಬ್ಬ ಬರೆದಿದ್ದರೆ ಪುರೋಹಿತರ ಮಗನೊಬ್ಬ ‘ಅಪ ಎಂದರೆ ನೀರು; ವರ್ತನ ಎಂದರೆ ವೃತ್ತಿ; ಅಪವರ್ತನ ಎಂದರೆ ಪ್ಲಂಬರ್ ಎಂದು ಬರೆದಿದ್ದ. ದಶಮಾಂಶ ಪದ್ಧತಿಯ ಲೆಕ್ಕಗಳಂತೂ ರಂಗೋಲಿ ಪುಸ್ತಕವನ್ನು ಕಂಡಂತಾಗುತ್ತಿತ್ತು. ೨.೦೨.೮೪ ಎಂದೆಲ್ಲ ಎರಡೆರಡು ಮರ‍್ಮೂರು ಪಾಯಿಂಟುಗಳನ್ನಿಟ್ಟು ಮಾಡುತ್ತಿದ್ದ ಲೆಕ್ಕಗಳು ಯಾವುದೇ ಪುರಾತನ ಗಣಿತಜ್ಞನಿಗೂ ಸೂಪರ್ ಸವಾಲುಗಳಾಗುವಂತಿದ್ದವು. ಈಗಿನ ಕಾಲದಲ್ಲೇನಾದರೂ ಅದೇ ವಿದ್ಯಾರ್ಥಿಗಳನ್ನು ‘ದಶಮಾಂಶ ಎಂದರೇನು?’ ಎಂದು ಕೇಳಿದ್ದಿದ್ದರೆ ‘ದನ ಮತ್ತು ಹಸ ಎರಡರ ಕೊಲಾಬೊರೇಷನ್ನೇ ದಸ ಅಥವಾ ದಶ; ಮಾಂಶ ಅಂದರೆ ಮಾಂಸ. ದನದ ಮಾಂಸದ ಬಗ್ಗೆ ಕೇಳುವ ಮೇಷ್ಟ್ರಿಗೆ ಧಿಕ್ಕಾರ! ಗೋಸಂರಕ್ಷಣೆಗೆ ಜೈ’ ಎಂದು ಘೇರಾವ್ ಮಾಡಿಬಿಡುತ್ತಿದ್ದರೋ ಏನೋ.

‘ಏನು ಮಾಡ್ತಿದ್ದೀರ ಕ್ಯಾತ?’ ಎಂದೆ.

‘ಪೇಪರ್ ಓದಲ್ವಾ ಸಾರ್ ನೀವು? ಟಿವಿನೂ ನೋಡಲ್ವಾ?’

‘ಕೋವಿಡ್ ಬಂದಾಗಿಂದ ಅವೆರಡೂ ಡೈಲಿ ಸ್ಕೋರ್‌ಬೋರ್ಡ್ ಆಗ್ಬಿಟ್ಟಿವೆ. ಆದ್ದರಿಂದ ನೋಡ್ತಿಲ್ಲ.’

‘ಸಂಪುಟ ರಚನೆ ಆಯ್ತಲ್ಲ ಸಾರ್... ಈಗ ನಾನು ಸ್ಟೇಟ್ ಅಕೌಂಟ್ಸ್ ಡಿಫಾಲ್ಟ್ಮೆಂಟಿನ ಹೆಡ್ಡು.’

‘ಈಗಲಾದರೂ ಅಪವರ್ತನ ಅಂದರೆ ಗೊತ್ತೇನು?’

‘ಗೊತ್ತು ಸಾರ್. ಆಪ್‌ಗಳು ಹೇಗೆ ನಡೆಯತ್ವೆ ಅಂತ ತಿಳ್ಕೊಳೋದೇ ಅಪವರ್ತನ’ ಎಂದ ಕ್ಯಾತ.

ಬದಲಾವಣೆ ಜಗದ ನಿಯಮ ಎನ್ನುವುದು ಇಂತಹ ತಲೆಗಳಿಗೆ ಅನ್ವಯಿಸುವುದೇ ಇಲ್ಲವೇನೋ!

Comments

  1. Teta becaoming theete, road romeo, covid score all these are excellent comparisons & apt for the humor article about Guru poornima. your article is excellent as usual

    ReplyDelete

Post a Comment