ಹಳದಿ ಕರ್ಚಿಫ್

 ಹಳದಿ ಕರ್ಚಿಫ್

ಕೆಥೆ ಹೇಮಾ ಸದಾನಂದ ಅಮೀನ್

                       ದೀಪಿಕಾ ಬಸ್ಸಲ್ಲಿ ಕೂತು ಸುಮಾರು ಎರಡು ತಾಸೇ  ಆಗಿತ್ತು.  ಖಟರ್  ಖಟರ್  ಎನ್ನುತ್ತಾ ತನ್ನ ಅಂಜರು ಪಂಜರುಗಳಿಗೆ ವೆಂಟಿಲೇಟರಿನಿಂದ ಉಸಿರು ಕೊಟ್ಟಂತೆ ಬಸ್ ತೆವಳುತ್ತಾ ಸಾಗಿತ್ತು . ಮದುವೆ  ಮನೆಯಿಂದ ಹೊರಡುವಾಗಲೇ ಅಜಿತ್ ಕರೆ ಮಾಡೇ, "  ಇನ್ನು ಹಣ ವ್ಯಯವಾಗುತ್ತೆ   ಎಂದು ಕಂಜೂಸುತನ  ಮಾಡಬೇಡ. ವೋಲಾ ಇಲ್ಲವೇ ಊಬರ್ ಮಾಡಿ ಬಾ " ಎಂದು ಸಾರಿ ಸಾರಿ ಹೇಳಿದ್ದ .   ಹ್ಮ್.....  ಹ್ಮ್... ಒಪ್ಪಿಗೆ ಸೂಚಿಸಿದರೂ  ೨೦- ೨೫ ರೂಪಾಯಿಯಲ್ಲಿ ಆಗುವ ಕೆಲ್ಸಕ್ಕೆ ೭೦೦ - ೮೦೦  ಕೊಡಲು  ಅವಳ ಮನಸ್ಸು ಸುತಾರಾಂ ಒಪ್ಪಲಿಲ್ಲ .   ತನ್ನ ನಿರ್ಧಾರವೇ ಸರಿಯೆಂದು  .   “ವೋಲಾದಲ್ಲಿ  ೨ ತಾಸು ಭೂತದಂತೆ  ಕೂತಿರುವುದು ಯಾಕೋ ನನಗೆ ಬೋರ್ ಆಗುತ್ತೆ  ನನ್ನ  ಬಾಲ್ಯದ  ಗೆಳತಿ  ಕೀರ್ತಿ ಬಂದಿದ್ದಾಳೆ ಅವಳು  ಬದ್ಲಾಪುರ್ ವರೆಗೆ ನನ್ನ ಜೊತೆ ಇರ್ತಾಳೆ . ಬಹಳ  ಅಪರೂಪವಾಗಿ  ಭೇಟಿಯಾಗಿದ್ದಾಳೆ  .  ಆರಾಮಾಗಿ ಮಾತಾಡುತ್ತಾ ಬಂದ್ಬಿಡ್ತೇನೆ ಎಂದದ್ದು  ಹಸಿ ಹಸಿ ಸುಳ್ಳೆಂದು   ಅಜಿತನಿಗೆ ಚೆನ್ನಾಗಿ ಗೊತ್ತಿತ್ತು .  


ದೀಪಿಕಾ ಒಂದು ಮದುವೆ  ಸಮಾರಂಭಕ್ಕೆ ಹೋಗಿ ಬರುತ್ತಿದ್ದಳು .  ಅವಳ  ಶಾಲೆಯ ಗೆಳತಿ  ನಿಧಿಯ ಮದುವೆ.   ಮದುವೆ  ಗಂಡು ಉತ್ತರ ಪ್ರದ್ರೇಶದವನು . ಮದುವೆಯ ವಿಧಿ ವಿಧಾನ ಗಂಡಿನ ಕಡೆಯವರಂತೆ ನಡೆಯಿತು .  ಅದೆಲ್ಲಾ  ಚಂದ್ರೋದಯದಿಂದ ಸೂರ್ಯೋದಯದವರೆಗೂ ನಡೆಯುತ್ತಿರುವುದು.  ಮದುವೆ ನಿಶ್ಚಯವಾದಂದಿನಿಂದ ನಿಧಿ ವಾರಕ್ಕೆ ಎರಡು ಸಾರಿ ಫೋನಾಯಿಸಿ,  ನೋಡು  ದೀಪಿಕಾ ,  "  ನಮ್   ಕಡೆಯಿಂದ ಅಮ್ಮ , ತಮ್ಮ ಹಾಗೂ  ಕಾಕಾ ಕಾಕಿಯನ್ನು  ಬಿಟ್ಟರೆ ನೀವೇ  ಒಂದಿಬ್ಬರು ಗೆಳತಿಯರು.  ನಿಮ್ಮನ್ನು ಬಿಟ್ಟರೆ ಆಪ್ತರೆಂದು ಇನ್ಯಾರಿದ್ದಾರೆ ಹೇಳು ?!    ಬೇಡ ಅನ್ಬೇಡ ಕಣೆ , ಒಂದು ದಿನ ಮುಂಚಿತವಾಗಿಯೇ ಬಾರೆ "  ಎಂದು  ಇಮೋಷನ್ ಗಳನ್ನೂ  ಸೊಗಸಾಗಿ ಆಮಂತ್ರಣ ಪತ್ರಿಕೆ ಜೊತೆ  ರವಾನಿಸಿದ್ದಳು .   ಕಾಲೇಜು ದಿನಗಳಲ್ಲೂ ಡ್ರಾಮಗಳಲ್ಲಿ  " ಟ್ರೆಜೆಡಿ  ಸ್ಟಾರ್ "  ಎಂದೇ ಖ್ಯಾತಿ ಪಡೆದಿರುವ  ನಿಧಿ ಬದುಕಿನಲ್ಲೂ  ಭಾವನಾತ್ಮಕ  ಅಭಿನಯಗಳಿಂದ   ತನ್ನ ಬೇಳೆ  ಬೇಯಿಸಿಕೊಳ್ಳುತ್ತಿದ್ದಳು.  "  ಸಾಕು ಸಾಕು ನಿಮ್ಮ ಇಂಪೋಶನಲ್ ಡ್ರಾಮಾ , ನಾನು ಬರ್ತೇನೆ ಅಂದಿದ್ದಳು ದೀಪಿಕಾ.  

 ಒಂದಂತೂ ದೂರ  ಇನ್ನೊಂದು  ಈ ಬಸ್ಸಿನ  ಅಸಹಾಯಕತೆ,   ಸೋತು ಸುಣ್ಣಾವಾಗಿದ್ದ ದೀಪಿಕಾಳ ಮನಸ್ಸನ್ನು  ಸಿಡಿಮಿಡಿಗೊಳಿಸಲುಯತಿಷ್ಟಾ .  ಎರಡು ದಿನಗಳಿಂದ ಸರಿಯಾಗಿ ನಿದ್ದೆಯಿಲ್ಲದ ಅವಳ ಕಣ್ಣುಗಳು ಆಗಲೇ ಕಿರಿದಾಗುತ್ತಿತ್ತು . ಅಷ್ಟರಲ್ಲಿಯೇ ಹಿಂದಿನ ಸೀಟಿನಿಂದ        "   ಆಂಟಿ  ನಾನು ಹಿಂದೆ ಬರಬಹುದೇ?  ಜಾಗ ಇದೆಯಾ?  , "  ದೀಪಿಕಾಳ ಎದುರಿನ ಸೀಟಿನ ಕಿಟಕಿಯ ಪಕ್ಕದಲ್ಲಿ ಕೊಸರಿಕೊಂಡು  ಕೂತಿರುವ ಹದಿನೈದರ ಹರೆಯದ  ತರುಣಿಯೊಬ್ಬಳು ಕೇಳಿದಳು .  ಅದೇ ಸೀಟಿನಲ್ಲಿ ಓರ್ವ  ಹುಡುಗ  ಕೂತಿದ್ದ . ದೀಪಿಕಾ ಹ್ಞಾ  ಎನ್ನುತ್ತಿದ್ದಂತೆ , ಆ ಹುಡುಗಿ ದಬಕ್ಕನೆ ಎದ್ದು ನಿಂತಳು .   ಹುಡುಗ  ತನ್ನ ಕಾಲುಗಳನ್ನು ಮುಂದೆ ಚಾಚಿ  ತಡೆಯುತ್ತಾ ಕಿಟಕಿಯಾಚೆ  ನೋಡುವ ನಾಟಕ ಮಾಡುತ್ತಿದ್ದ .   ಇದನ್ನು ಗೋಚರಿಸಿದ  ದೀಪಿಕಾ  , " ಹೇ....  ಕಾಲು ಅತ್ತ ಸರಿಸು ,  ಕಾಣುದಿಲ್ವಾ? ಎಂದು ಗದರಿಸಿದ್ದಳು . 

ಆತ ದಾರಿ ಬಿಟ್ಟನಾದರೂ ಕೆಟ್ಟ ನೋಟದಿಂದ ವ್ಯಂಗ್ಯವಾಗಿ ಹಲ್ಲು ಕಿರಿಯುತ್ತಾ  ,  ಯಾಕೆ ಕರೆದಿರಿ ಮೇಡಮ್ಮು ,  ಈ ಸೀಟು ಚೊಲೋ ಇರ್ಲಿಲ್ವಾ , ಇಲ್ಲಿ..ಇಲ್ಲೇನು  ಮುಳ್ಳು ಹಾಸಿತ್ತೇ... 

ದೀಪಿಕಾ  ಆ ಹುಡುಗಿ ಈಚೆ ಬರುವವರೆಗೆ ಏನೂ ಹೇಳದೆ ಮನಸ್ಸಿನಲ್ಲಿಯೇ , ಈತ ಇನ್ನೇನಾದರೂ ಒಂದು ಮಾತು ಅಂದರೂ  ಇವನ ಜಂಭ ಇಳಿಸಿಯೇ ಇಳಿಸ್ತೇನೆ  .  " ಥ್ಯಾಂಕ್ಸ್ ಆಂಟಿ  ಬಹಳ ಹೊತ್ತಿನಿಂದ ಆತ ಕಿರುಕುಳ ಕೊಡುತ್ತನೆ ಇದ್ದ.  ಹುಲಿ ಕೈ ತಪ್ಪಿ  ಜೀವ ಬಂದಾಂತಾಯಿತು ಎನ್ನುವಂತೆ ಭಯ ಹಾಗೂ  ನೆಮ್ಮದಿಯ ಮಿಶ್ರ ಛಾಯೆ ಆ ಹೆಣ್ಣಿನ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿತ್ತು .   ದೀಪಿಕಾ ಅವಳ  ಮುಖವನೊಮ್ಮೆ ಮಮತೆಯಿಂದ ನೋಡಿದಳು.    ನೋಡಿದಾಗಲೇ ಪ್ರೀತಿ ಉಕ್ಕುವಂಥ ಮುಗ್ದ ಮುಖ.  ತೆಳ್ಳಗಾಗಿ ಬೆಳ್ಳಗಾಗಿ  ಬಹುತೇಕ ನನ್ನ ಮಗಳ ಪ್ರಾಯದವಳೇ ಎಂದು ದೀಪಿಕಾ ಕಕ್ಕುಲಾತಿಯಿಂದ ಅವಳ ಕೈಯನ್ನು ತನ್ನ ಕೈಯಲ್ಲಿತ್ತು ತಟ್ಟಿದಳು.    ಒಂದು ದೀರ್ಘ ನಿಟ್ಟುರಿಸಿನ ಬಳಿಕ ಕವಿದ ಮೌನದಲ್ಲಿ ಅವಳ ದೃಷ್ಟಿ  ದೀಪಿಕಾಳ ಕೈಯಲ್ಲಿರುವ ಚಿನ್ನದ ಬಳೆಗಳ ಮೇಲೆ ಬಿತ್ತು .  ಆಕೆ  ಬೆಚ್ಚಿ ಬಿದ್ದಂತೆ. " ಅಂಟಿ  ಇಷ್ಟನ್ನೆಲ್ಲಾ  ಯಾಕೆ  ಮಡ್ಕೊಂಡಿರಿ .   ಈ ಸ್ಥಳ ಸರಿಯಿಲ್ಲ  .ಎಂದಾಗ ಬೆರಗಿನಿಂದ ಮದುವೆಗೆ ತೊಟ್ಟ ಒಡವೆಗಳನ್ನು ಹಾಗೆಯೇ ಮೈ ಮೇಲಿಟ್ಟು ಪ್ರಯಾಣಿಸಿಯುತ್ತಿರುವುದರ ಬಗ್ಗೆ ಅರಿವಾಯಿತು .  ಬಲಗೈಯಿಂದ ಎಡಗೈ ಬಳೆಗಳನ್ನು  ಮುಚ್ಚಲು ಪ್ರಯತ್ನಿಸಿದ  ಕಿವಿಯಲ್ಲಿದ್ದ  ದೊಡ್ಡ ಜುಂಕಾ ,  ಕೊರಳಿನ  ಕರಿಮಣಿ ಜೊತೆ ಒಂದು ಚೈನು ಎಲ್ಲಾವೂ ನಮ್ಮ ಗತಿ ಎನ್ನುವಂತೆ ಅನಾಥ ಭಾವ ಪ್ರಕಟಿಸಿದವು .  ಹಾಡು ಹಗಲಲ್ಲೇ ಕಳ್ಳತನವಾಗುವ ಈ ಕಾಲದಲ್ಲೂ ಬಟಾ ಬಯಲಾಗಿ  ಎಲ್ಲವನ್ನು ಹಾಗೆ ತೊಟ್ಟಿರುವ ತನ್ನ  ಪೆದ್ದುತನಕ್ಕೆ ತನ್ನ ತಲೆ ಬಡೆದು ಕೊಂಡಳು. 

ನನ್ನ ಮೂರ್ಖತನದ ಪರಮಾವಧಿ ಇದು,  ಅಷ್ಟು ಅವಸರವಾಗಿದ್ದರೂ ಒಡವೆಗಳನ್ನೊಮ್ಮೆ  ಬ್ರೀಫ್ ಕೇಸಿನಲ್ಲಿ ಅಥವಾ ವ್ಯಾನಿಟಿ ಬ್ಯಾಗಲ್ಲದ್ದರೂ ಇರಿಸಬೇಕಿತ್ತು. ಪಾಪ ಈ ಹುಡುಗಿ ಹೇಳಿರದಿದ್ದಲ್ಲಿ ನನಗೆ ಅಷ್ಟು ತಲೆಗೆ ಹೋಗಿರ್ತಿರಲಿಲ್ಲ .  ವ್ಯಥಾ  ನನ್ನ ತಿಳಿವಳಿಕೆಯ ಬಗ್ಗೆ ನಾನೇ ಬಡಾಯಿ ಕೊಚ್ಚುತ್ತಿರುತ್ತೇನೆ . ಹ್ಮ್  ಇನ್ನೇನು ಮಾಡುವುದು?  ಎನ್ನುವುದರಲ್ಲಿ ಸಣ್ಣಗೆ ಭಯ ಇಣುಕಿದಂತಾಗಿತ್ತು.   

,, ಆ ಹುಡುಗಿ ಅಂದ ಹಾಗೆ ಅವಳ ಹೆಸರು ರಶ್ಮಿ ... ದೀಪಿಕಾ  ಅವಳ ತಲೆ ಸವರುತ್ತ ಕೇಳಿದ್ದಳು . ಅಂಟಿ  ನನ್ನ  ಹೆಸರು ರಶ್ಮಿ .  ಪ್ರೀತಿಯಿಂದ ಎಲ್ಲ ನನ್ನನ್ನು ಬಬಲಿ ಎನ್ನುತ್ತಾರೆ.  ಹ... ಹ ... ಹ...  ಒಳ್ಳೆಯ ಬಬಲಿ  ತರಾನೇ ಇದ್ದೀಯ ಕಂದಾ ಎಂದು  ಆತ್ಮೀಯತೆಯಿಂದ  ಗಲ್ಲ ಚಿವುಟಿದಳು. ಮಾಡುವುದೇನು ಅಂಟಿ  ಸ್ವಲ್ಪ ಎದುರಿಗೆ ಬಗ್ಗಿ  ಎಲ್ಲಾ ಒಡವೆಗಳನ್ನೂ ನಿಧಾನವಾಗಿ  ಒಂದು  ನಿಮ್ಮ ಕರ್ಚಿಫ್ ಕಟ್ಟಿ ಬ್ಯಾಗಲ್ಲಿ ಇಟ್ಟರಾಯ್ತು  ಬಿಡಿ   "  ಅವಳ ಮಾತು ನಿಜವೇ ...  ತಡವಾಗಿಯಾದ್ರು  ಜಾಗ್ರತೆ ವಹಿಸುವುದೇ ಲೇಸೆಂದು   ಮುಂದಕ್ಕೆ ಬಾಗಿ ನಿಧಾನವಾಗಿ ತನ್ನ  ಹಳದಿ ಬಣ್ಣದ ತನ್ನ ಕರ್ಚಿಫಿನಲ್ಲಿ ಬಲೆ  ಸರ ಕಳಚಿಟ್ಟಳು.  ರಶ್ಮಿ ಯಾರಾದರೂ ನೋಡ್ತಾರಾ ಎಂದು  ಶಿಸ್ತಿನ ಸಿಪಾಯಿ ತರಹ  ಸುತ್ತಾ ತಿರುಗಿ ನೋಡುತ್ತಿದ್ದಳು .   ಸದ್ಯ ಇಷ್ಟು ಬಚಾವ್ .  ಇನ್ನೂ ಸ್ವಲ್ಪ ಉಳಿಸುವ ಆಸೆಯಿಂದ ,  ಬೆಂಡೋಲೆ  ಸಹ ತೆಗೀಲಾ ಎಂದು ಬೆರಳುಗಳನ್ನು ಕಿವಿಯತ್ತ ಕೊಂಡೊಯ್ಯುತ್ತಾ  ರಶ್ಮಿಗೆ ಕಣ್ಣ ಸನ್ನೆಯಲ್ಲಿ ವಿಚಾರಿಸಿದಳು .   ಬೇಡವೆನ್ನುವಂತೆ ,  ಹತ್ತಿರ ಬಂದು ಇದಿರಲಿ ಆಂಟಿ ಎಂದಾಗ  ಸಣ್ಣ ಗಂಟನ್ನು ಬ್ಯಾಗಿನಲ್ಲಿ ತುರುಕಿಸುತ್ತಾ ನಿರಾಳಲಾದಳು .   

ಬಸ್ಸು ತನ್ನ ವೇಗವನ್ನೇನೂ  ವೃದ್ಧಿಸಲಿಲ್ಲ. ಹೊಟ್ಟೆ ಹಳಸಿ  ಕಕ್ಕುವಷ್ಟು ಜನ ತುಂಬಿಕೊಂಡಿದ್ದರು .  ಅಷ್ಟು ಸಾಲದೆನ್ನುವಂತೆ  ಇದ್ದಕ್ಕಿದ್ದಂತೆ ಜಗಳ .  ಮೊದಲು ಮಾತಿನಿಂದ ದಿಡೀರನೇ ಪೆಟ್ಟಿಗೆ ತಿರುಗಿತು .  

ಜಗಳಕ್ಕೆ ಕಾರಣ  ಆದೇ ರಶ್ಮಿಯನ್ನು ಸತಾಯಿಸಿದ್ದ ಆ ಎದುರು ಸೀಟಿನ ರೌಡಿ ಹುಡುಗ .ಆತ ಎದ್ದು ಹೋಗುತ್ತಿದ್ದಂತೆ  ಯಾರಿಗೋ ಡಿಕ್ಕಿ ಹೊಡೆದು  ಆಡಂಬರದಿಂದ ಮೆರೆಯುತ್ತಾ  ದನಿ ಏರಿಸಿ ಮಾತನಾಡುತ್ತಿದ್ದ .  ದೀಪಿಕಾಳಿಗೆ ಇದ್ದಲ್ಲಿಯೇ ಸಿಟ್ಟು ನೆತ್ತಿಗೇರಿತು . ಇವನನ್ನು ಹೀಗೆ ಬಿಡಬಾರದು . ಇಂಥವರು ಬಸ್ಸಲ್ಲಿ ಬಂದರೆ ಇತರ ಪ್ರಯಾಣಿಕರಿಗೆ ವ್ಯಥಾ ತೊಂದರೆ .  ಕಂಡಕ್ಟರಿಗೆ ಹೇಳಿ ಆತನನ್ನು ಬಸ್ಸಿನಿಂದ ಕೆಳಗಿಸಿ ಎಂದು ದನಿಯಿತ್ತಳು. ಅವಳ ದನಿಗೆ ಮೊದಲು ದನಿಯಾದವಳು ರಶ್ಮಿ ... ಹಾಗೆಯೇ ಇನ್ನೊಂದೆರಡು ದನಿಗೂಡಿದಾಗ  ತನ್ನ ಸಾಹಸ ಚಿಗುರೊಡೆಯುವ  ಅನುಭವದಿಂದ  ಒಳಗೊಳಗೆ  ಸಣ್ಣ ಖುಷಿ ಹಾಗೂ  ಉತ್ಸಾಹ ಪುಟಿಯಿತು .  ಅಂತೂ ಇಂತೂ ಎಲ್ಲರ ದನಿ ಒಂದಾದಾಗ ಕಂಡಕ್ಟರ್ ,  ಬಸ್ ನಿಲ್ಲಿಸಿ  ಆ ಕೇಡಿಯನ್ನು  ಕೆಳಗಿಸಿದನು .  

ಸುಮಾರು ಹದಿನೈದು ನಿಮಿಷಗಳ ರಾದ್ದಾಂತದ ಬಳಿಕ ಎಲ್ಲವೂ  ಮೊದಲಿನಂತಾಯಿತು .  ಎದ್ದು ನಿಂತ ದೀಪಿಕಾ ಕುಳಿತು ಕೊಳ್ಳುತ್ತಿದ್ದಂತೆ ,"    ಇಂದಿನ ಸಾಹಸಕ್ಕೆ ರಶ್ಮಿಯೇ ಕಾರಣ ಎನ್ನುವಂತೆ ಧನ್ಯತಾ ಭಾವದಿಂದ ಅವಳನ್ನೊಮ್ಮೆ  ನೋಡಿ  ತಲೆ ಸವರಿದಳು .  ಏನಾಯಿತು ಆಂಟಿ ? why  you  became  so emotional ?  

no  nothing ,, ಹೀಗೆಯೇ .. ಎಂದು ನಕ್ಕಳು . 

ಸೋ  ಸ್ವೀಟಿ ಆಂಟಿ .. ಸರಿ ಇನ್ನು ನಾನು ಇಳಿಯಬೇಕು . ಎಂದು  ತಾನೇ ದೀಪಿಕಾಳ  ಕೆನ್ನೆಯಿಂದ ಮುತ್ತು ಹಾರಿಸಿ ಗಾಳಿಯನ್ನು  ಚುಂಬಿಸಿದಳು .  ಅವಳು ಕೆಳಗಿಳಿಯುವ ವರೆಗೂ  ಅವಳಲ್ಲಿಯೇ ದೃಷ್ಟಿ ನೆಟ್ಟ  ದೀಪಿಕಾ ಸಾಲದು ಎನ್ನುವುದಕ್ಕೆ ಕಿಟಕಿಯಿಂದಾಚೆ ಇಣುಕಿ ಕೈ ಚಾಚಿ   taa. taa. bye.... bye...  see  you ... take  care ... ಎಲ್ಲಾ  ಆಶಯಗಳನ್ನು ಒಂದರ ಹಿಂದೆ ರವಾನಿಸುವುದರಲ್ಲಿ ನಿರತಳಾದಳು .  ದೀಪಿಕಾಳ ಮುಖದಲ್ಲಿದ್ದ ನಗು ಉತ್ಸಾಹ ಮುಂದಿನ ಸ್ಟಾಪ್ ವರೆಗೂ ಖಾಯಂ ಇತ್ತು.  

ಬಸ್ ಇಳಿದಾಗ ಒಂದಿಷ್ಟು ಸುಸ್ತು . ಆದರೂ  ಪಕ್ಕದಲ್ಲಿಯೇ  ಶೇರ್ ಆಟೋ ಕ್ಯೂ ಕಾಣಿಸಿದಂತೆ  ಯಾಂತ್ರಿಕವಾಗಿ  ಬ್ಯಾಗನ್ನು ಎಳೆಯುತ್ತಾ ಆಟೋ ಸ್ಟ್ಯಾಂಡಿಗೆ ಬಂದಳು .  ಚಿಲ್ಲರೆ ಹಣ  ಮೊದಲೇ ತೆಗೆದಿಟ್ಟರೆ  ಸುಲಭವಾಗುತ್ತೆ ಎಂದು ವ್ಯಾನಿಟಿ ಬಾಯಿಗೆ ಕೈ ಹಾಕಿದಳು .   ಹಳದಿ ಕರ್ಚಿಫ್ ... ನನ್ನ ಹಳದಿ ಕರ್ಚಿಫ್ ....  ಎಂದು  ಹೆದರಿ ಮತ್ತೆ ಮತ್ತೆ ಹುಡುಕಿದಳು . 

ಕರ್ಚಿಫ್ ತನ್ನ  ರುಜುವಾತೂ ಬಿಡದೆ ಮಾಯವಾಗಿತ್ತು . ಅಷ್ಟರಲ್ಲಿಯೇ  ದೀಪಿಕಾಳ ಮೈಯೆಲ್ಲಾ ಬೆವತು ಮಾತು ತೊದಲುತಿತ್ತು .  ಅವಳ ಚರ್ಯೆಯಿಂದ ಅಕ್ಕ ಪಕ್ಕದವರಿಗೆ  ಪಿಕ್ ಪಾಕೆಟಿಂಗ್ ಆಗಿದೆ ಎನ್ನುವುದರ ಅರಿವಾಯಿತು .   ಆಗಲೇ ಆಶ್ಚರ್ಯದೊಂದಿಗೆ ಒಂದೆರಡು ಉಚಿತ ಸಲಹೆಗಳೂ ಬರಲಾರಂಬಿಸಿದವು .  ಪರ್ಸ್  ಕಳವಾಗುತ್ತಿದ್ದರೂ ನಡೆಯುತ್ತಿತ್ತು. ಒಂದೆರಡು ಸಾವಿರ  ಹೋಗ್ತಿತ್ತು ಆದರೆ ಇಲ್ಲಿ ಕಳವಾದದ್ದು  ಸರ ಬಳೆಗಳು .   

ದೀಪಿಕಾಳ  ಚಿತ್ತ ಪತ್ತೇದಾರಿ  ಅನ್ವೇಷಣೆಗೆ ಒಳಗಾಯಿತು .  " ನಾನು ಬಸ್ ಇಳಿಯುವಾಗ ನನ್ನ ಹಿಂದಿದ್ದ  ಆ ಮುದುಕ .... ಆದರೆ ಅವನ ಎರಡೂ  ಕೈಯಲ್ಲಿ  ಚೀಲಗಳಿದ್ದವು .  ನಾನು ದೀಪಿಕಾಳಿಗೆ  ಬೀಳ್ಕೊಡುವ ಸಂದರ್ಭದಲ್ಲಿಯೇ ಯಾರೋ ಕದ್ದಿರಬೇಕು .  ಆದರೆ ಲೇಡಿಸ್ ಸೀಟ್ ಅಂತ ಯಾರೂ  ಕೂತಿರಲಿಲ್ಲ .!

ಮೊಬೈಲ್ ರಿಂಗಾದಾಗ,  ಬಸ್ಸಲ್ಲಿ  ಬಿದ್ದಿರಬೇಕು . ಯಾರಿಗೋ ಸಿಕ್ಕಿ  ಕರೆ ಮಾಡ್ತೀರಬಹುದೆಂದು ಲಗುಬಗನೇ ಫೋನ್ ಎತ್ತಿದಳು .   ರಜತ್ ಆಚೆ ಬದಿಯಿಂದ  ಏನಾಯಿತು ರೋಹಿಣಿ  ಯಾಕೆ ಅಳುತ್ತಿದ್ದೀಯಾ ?  ಎಂದಾಗ ಒಂದೇ ಉಸಿರಿಗೆ  ಚಿನ್ನ ಕಳವಾದದ್ದನ್ನು  ಹೇಳಿದಳು .  


ನೀನೀಗ ಎಲ್ಲಿದ್ದೀಯಾ ? 

ಘಾಟ್ಕೋಪರ್ ಹೈವೇ ಬಳಿ 

ಅಕ್ಕ ಪಕ್ಕದ ಗುರುತು ಹೇಳೇ ... 

 ವಿಜಯ್ ಪಾನ್  ಬೀಡಿ  ಅಂಗಡಿಯೊಂದಿದೆ .  

ಸರಿ ಸರಿ ನೀನು ಅಲ್ಲೇ ನಿಲ್ಲು ನಾನು ಬರ್ತೇನೆ . 

ಹ್ಮ್ ಎಂದು ಮೊಬೈಲ್ ಕಟ್ ಮಾಡಿ ಒಳ ಸುತ್ತು ತಿರುಗಿ ಅಂಗಡಿಯ ಬದಿಗೆ ಬಂದು ನಿಂತಳು.  

ಊರ್ದಾರೆ ... (ಊರಿನವರ ) ಎಂದು ಎಲೆಗೆ ಸುಣ್ಣ ಹಚ್ಚುತ್ತಾ ಅಂಗಡಿಯವ ಕೇಳಿದ 

  ಹೌದು ...  ಎನ್ನ ಬ್ಯಾಗಿಡಿತ್ತಿನ  ಬಂಗಾರ ಲಕ್ಕಾದ್ ಪೊಂಡುಯೇ ... ( ನನ್ನ ಬ್ಯಾಗಿನಲ್ಲಿದ್ದ ಚಿನ್ನ ಕಳವಾಯಿತು ) ಎಂದು ಕಣ್ಣು ತುಂಬಿದ್ದರು ಒರೆಸಲು ಕರ್ಚಿಫ್ ಇಲ್ಲ. 

 ಬಸ್ಸಿನಲ್ಲಿ ಒಂದು ಗಂಡು ಹೆಣ್ಣು ನಿಮ್ಮ ಸಂಪರ್ಕಕ್ಕೆ ಬಂದಿದ್ರಾ ?  

ಯೋಚನಿಗೆ ಸ್ವಲ್ಪ ಜೋರು ಕೊಟ್ಟಾಗ  ಸಂಶಯಾಸ್ಪದವಾಗಿ ಬಂದವರು ಯಾರೂ ಇಲ್ಲ. ಆದರೆ ಎದುರು ಸೀಟಿನಿಂದ ಬಂದ  ರಶ್ಮಿ .....   ಮತ್ತೆ ಆ ರೌಡಿ ಹುಡುಗ...   

ಅವರಿಬ್ಬರು ಜೊತೆಆಟಗಾರರೂ ಪಬ್ಲಿಕನ್ನು   ಮಾತಿನಲ್ಲೇ ಬಲೆಗೆ ಹಾಕಿ ತನ್ನ ಕಾರ್ಯ ಸಾಧಿಸುತ್ತಾರೆ      ಈಗ ಅರ್ಧ ತಾಸು ಮುಂಚೆ ತನ್ನ ಮಗಳಂತೆ ಎಂದು ಸ್ವೀಕರಿಸಿದ ರಶ್ಮಿ ... 


ಅಂಗಡಿಯವನ ಮುಂದಿನ ಮಾತು ಅವಳ ಕಿವಿಗೆ ಕೇಳಿಸಲೇ ಇಲ್ಲ .   


ಲೇಖಕಿ - ಹೇಮಾ ಸದಾನಂದ ಅಮೀನ್


Comments

  1. Bahala channagi barediddiri ������

    ReplyDelete
  2. ಬಹಳ ಚೆಂದ ಇದೆ, ಒಬ್ಬರಲ್ಲಿನ ನಂಬಿಕೆಯ ಬಗ್ಗೆ ಎರಡನೆಯ ಸಲ ಯೋಚಿಸುವ ಕಾಲ ಎಂಬುದ ನೆನಪಿಸುತ್ತೆ.

    ReplyDelete
  3. very good narration of the incident. keeps the reader engaged

    ReplyDelete
  4. ಲೇಖನ ಪ್ರಸಂಗ ಚೆನ್ನಾಗಿ ವರ್ಣಿಸಿದ್ದೀರಿ. ಕುತೂಹಲಕಾರಿಯಾಗೂ ಇದೆ. ಧನ್ಯವಾದಗಳು

    ReplyDelete
  5. ಕಥೆ ಮತ್ತು ಹೇಳಿರುವ ರೀತಿ ಚೆನ್ನಾಗಿದೆ.

    ReplyDelete

Post a Comment