ಹಾರನಹಳ್ಳಿಯ ತ್ರಿಕೂಟಾಚಲ ಭಾಗ ೧

 

ಹಾರನಹಳ್ಳಿಯ ತ್ರಿಕೂಟಾಚಲ - ಭಾಗ ೧

ಲೇಖನ - ಮೈಸೂರು ಶ್ರೀನಿವಾಸ ಪುಟ್ಟಿ


ಚಿತ್ರ ೧



ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನಲ್ಲಿರುವ ಹಾರನಹಳ್ಳಿ ಗ್ರಾಮವು ತಾಲೂಕು ಕೇಂದ್ರ ಅರಸೀಕೆರೆಯಿಂದ ಹಾಸನ ಮಾರ್ಗದಲ್ಲಿ ೧೦ ಕಿ.ಮೀ. ದೂರದಲ್ಲಿದೆ. ಶಾಸನಗಳಲ್ಲಿ ಹಿರಿಯ ಸೋಮನಾಥಪುರ ಹಾಗೂ ಹಾರುವನಹಳ್ಳಿ ಎಂದು ಕರೆಯಲ್ಪಟ್ಟಿರುವ ಈ ಗ್ರಾಮದ ಈಶಾನ್ಯ (Northeast) ದಲ್ಲಿ ಸೋಮೇಶ್ವರ ದೇವಾಲಯವೂ ಮತ್ತು ಪಶ್ಚಿಮದಲ್ಲಿ ಈ ಲೇಖನದ ವಿಷಯವಾಗಿರುವ ತ್ರಿಕೂಟಾಚಲವೂ ಇವೆ. ಈ ಎರಡು ದೇವಸ್ಥಾನಗಳೂ ಹೊಯ್ಸಳ ಶೈಲಿಯವೇ ಆಗಿದ್ದು, ಹೊಯ್ಸಳ ದೊರೆ ಇಮ್ಮಡಿ ನರಸಿಂಹನ ಕಾಲ (ಕ್ರಿ.ಶ. ೧೨೨೦-೧೨೩೫) ದಲ್ಲಿ ನಿರ್ಮಾಣಗೊಂಡವು ಎಂದು ತಿಳಿದುಬಂದಿದೆ. ಪ್ರಸ್ತುತ ಲೇಖನದಲ್ಲಿನ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿರುವುದರಿಂದ ಇದೊಂದು ತ್ರಿಕೂಟಾಚಲ. ಈ ದೇವಾಲಯದ ಪ್ರಧಾನ ದೇವತೆ ಚೆನ್ನಕೇಶವನಾಗಿರುವುದರಿಂದ ಇದನ್ನು ಕೇಶವ ದೇವಾಲಯ ಎಂದೇ ನಿರ್ದೇಶಿಸಲಾಗುತ್ತದೆ.

 

ಕೇಶವ ದೇವಾಲಯದ ಸ್ಥೂಲ ಪರಿಚಯ 

 

ಕೇಶವ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆಯೇ ಎಡಗಡೆಯಲ್ಲಿ ಶಾಸನವೊಂದು ಕಾಣುತ್ತದೆ. ಈ ಶಾಸನದ ರೀತ್ಯಾ ಈ ದೇವಾಲಯದಲ್ಲಿನ ಲಕ್ಷ್ಮೀ ನರಸಿಂಹದೇವರ ಪ್ರತಿಷ್ಠಾಪನೆಯಾದದ್ದು ಶಕವರ್ಷ ೧೧೫೬, ಜಯಸಂವತ್ಸರ, ವೈಶಾಖ ಶುದ್ಧ ಏಕಾದಶಿ ಶುಕ್ರವಾರದಂದು (ಅಂದರೆ ಕ್ರಿ.ಶ. 1234 ಏಪ್ರಿಲ್ 11 ರಂದು). ಈ ಶಾಸನದಿಂದ ತಿಳಿದುಬರುವ ಮತ್ತೊಂದು ವಿಷಯವೆಂದರೆ, ಪೆದ್ದ . . . . ಹೆಗ್ಗಡೆ, ಸೋವಣ್ಣ ಮತ್ತು ಕೇಸಣ್ಣ ಎಂಬ ಮೂವರು ಸಹೋದರರು ತಮ್ಮ ತಂದೆಯಾದ ಸಿಂದಿಗೆ ಮಠದ ಸ್ವಾಮಿಯ ಅನುಮತಿ ಪಡೆದು, ಹಾರುವನಹಳ್ಳಿಯ ಮಹಾಜನರು ಕೊಟ್ಟ ನಿವೇಶನದಲ್ಲಿ, ತಮ್ಮ ಸ್ವಂತ ಖರ್ಚಿನಲ್ಲಿ ಈ ದೇವಾಲಯವನ್ನು ನಿರ್ಮಿಸಿದರು ಎಂಬುದು. ದೇವಾಲಯ ನಿರ್ಮಾಣವಾದ ನಂತರದಲ್ಲಿ ಆಗಿನ ಹೊಯ್ಸಳ ದೊರೆಯಾಗಿದ್ದ ಇಮ್ಮಡಿ ಬಲ್ಲಾಳನು ದೇವಾಲಯಕ್ಕೆ ಕೆಲವು ದಾನಗಳನ್ನು ಮಾಡಿದನೆಂದು ಸಹಾ ಶಾಸನಗಳಿಂದ ತಿಳಿದು ಬರುತ್ತದೆ.

 

ಪೂರ್ವಾಭಿಮುಖವಾಗಿರುವ ಈ ದೇವಾಲಯವು ಸುಮಾರು ನಾಲ್ಕು ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣವಾಗಿದೆ. ಜಗತಿಯು ನಕ್ಷತ್ರಾಕಾರವನ್ನು ಹೊಂದಿದೆ. ದೇವಾಲಯದಲ್ಲಿ ಮೂರು ಗರ್ಭಗುಡಿಗಳಿದ್ದು, ದಕ್ಷಿಣದ ಗರ್ಭಗುಡಿಯಲ್ಲಿ ವೇಣುಗೋಪಾಲ, ಪಶ್ಚಿಮದ ಗರ್ಭಗುಡಿಯಲ್ಲಿ ಚೆನ್ನಕೇಶವ ಮತ್ತು ಉತ್ತರದ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹರ ವಿಗ್ರಹಗಳಿವೆ. ಕೇಶವನ ಆಲಯಕ್ಕೆ ಮಾತ್ರ ಶುಕನಾಸಿ ಇದ್ದು, ಉಳಿದ ಎರಡು ಗರ್ಭಗುಡಿಗಳು ನವರಂಗಕ್ಕೆ ನೇರವಾಗಿ ತೆರೆದುಕೊಳ್ಳುತ್ತವೆ. ಈ ಮೂರೂ ಗರ್ಭಗುಡಿಗಳಿಗೆ ಒಂದೇ ದ್ವಾರವಿದ್ದು ಅದು ಪೂರ್ವಾಭಿಮುಖವಾಗಿದೆ. ಒಂದೇ ದೇವಾಲಯದೊಳಗೆ ಮೂರು ಗರ್ಭಗುಡಿಗಳು ಇರುವುದರಿಂದ ಇದು ತ್ರಿಕೂಟಾಚಲವಾಗಿದೆ. ಈ ದೇವಾಲಯದ ನವರಂಗದ ಪೂರ್ವದಲ್ಲಿ ಒಂದು ಮುಖಮಂಟಪವಿದ್ದು, ಅದರ ಗೋಡೆಗಳು  ಜಾಲಂದ್ರ (perforated screen walls) ಗಳನ್ನು ಹೊಂದಿವೆ. ಮುಖ್ಯ ಗರ್ಭಗೃಹ ಹದಿನಾರು ಕೋನದ ನಕ್ಷತ್ರಾಕಾರವನ್ನು ಹೊಂದಿದೆ. ದೇವಾಲಯದ ಹೊರಗೋಡೆಯಲ್ಲಿ ಶಿಖರಕ್ಕೆ ಆಸರೆಯಾಗಿ (acting as buttress) ದಕ್ಷಿಣ, ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಎರಡು ಅಂತಸ್ತಿನ ದೊಡ್ಡ ಗೂಡುಗಳಿವೆ.

 

ಮುಖ್ಯ ಗರ್ಭಗುಡಿಗೆ ಮಾತ್ರ ಶಿಖರವಿದ್ದು, ಸಾಧಾರಣವಾದ ಮಹಾದ್ವಾರದ ಮೂಲಕ ದೇವಾಲಯದ ಅಂಗಳಕ್ಕೆ ಪ್ರವೇಶವಿದೆ. ದೇವಾಲಯದ ಪೂರ್ವ, ದಕ್ಷಿಣ ಮತ್ತು ಉತ್ತರಗಳಲ್ಲಿ ಮೆಟ್ಟಿಲುಗಳಿದ್ದು, ಪೂರ್ವದಿಂದ ಮಾತ್ರ ದೇವಾಲಯವನ್ನು ಪ್ರವೇಶಿಸಬಹುದಾಗಿದೆ. ಈ ಮೆಟ್ಟಿಲುಗಳ ಪಕ್ಕದಲ್ಲಿ ಸುಂದರವಾದ ಗೋಪುರಗಳಿವೆ. ನವರಂಗದ್ವಾರದ ಇಕ್ಕೆಲಗಳಲ್ಲೂ ಗೋಪುರಗಳಿದ್ದು, ಈ ದೇವಾಲಯದಲ್ಲಿ ಒಟ್ಟು ಎಂಟು ಗೋಪುರಗಳನ್ನು ಕಾಣಬಹುದು. ಈ ಗೋಪುರದ ಕೆಳಗಿನ ಗೋಡೆಯಲ್ಲಿ ವಿಗ್ರಹಗಳಿವೆ. ನಾಲ್ಕು ಅಡಿ ಎತ್ತರದ ಜಗತಿಯಲ್ಲಿ ಐದು ಕಾರ್ನೀಸುಗಳಿದ್ದು, ಜಗತಿಯು ದೇವಾಲಯವನ್ನು ಸುತ್ತುವರಿಯುವುದರಿಂದ, ಅದು ಪ್ರದಕ್ಷಿಣಪಥವೂ ಆಗುತ್ತದೆ.

 

ನವರಂಗದ ಪಶ್ಚಿಮ ಗೋಡೆಗೆ ಅಂಟಿಕೊಂಡಂತೆ ನಾಲ್ಕು ಮಂಟಪಗಳಿವೆ ಮತ್ತು ನಾಲ್ಕೂ ಮಂಟಪಗಳಲ್ಲಿ ದೇವತಾ ಮೂರ್ತಿಗಳಿವೆ. ನವರಂಗದಲ್ಲಿ ಒಂಬತ್ತು ಅಂಕಣಗಳಿದ್ದು, ಪ್ರತಿ ಅಂಕಣದಲ್ಲೂ ಒಂದು ಮತ್ತು ಮುಖ ಮಂಟಪದಲ್ಲಿ ಒಂದು – ಅಂದರೆ, ಒಟ್ಟು ಹತ್ತು ಭುವನೇಶ್ವರಿಗಳು ದೇವಾಲಯದ ಒಳಾಂಗಣವನ್ನು ಅಲಂಕರಿಸಿವೆ. ಇದಲ್ಲದೆ ನವರಂಗದಲ್ಲಿ ಹತ್ತು ವಿವಿಧ ಬಗೆಯ ಸ್ತಂಭಗಳಿವೆ. ದೇವಾಲಯದ ಮುಖ ಮಂಟಪದ ಇಕ್ಕೆಲಗಳಲ್ಲಿ ಕಲ್ಲಿನ ಆಸನಗಳಿವೆ. ದೇವಾಲಯದ ಹೊರಗೋಡೆಯ ಮಧ್ಯಭಾಗದಲ್ಲಿ ಸುಮಾರು ೨ ಅಡಿ ಎತ್ತರದ ದೇವತಾ ವಿಗ್ರಹಗಳಿವೆ. ಬಹುತೇಕ ವಿಗ್ರಹಗಳ ಕೆಳಗೆ ಶಿಲ್ಪಿಯು ತನ್ನ ಹೆಸರನ್ನು ತಿಳಿಸಿರುವುದು ಈ ದೇವಾಲಯದ ವಿಶೇಷ.

 

ಕೇಶವ ದೇವಾಲಯದ ವಿವರಗಳು

 

ಅಧ್ಯಯನದ ದೃಷ್ಟಿಯಿಂದ ಈ ದೇವಾಲಯವನ್ನು ಕೆಳಗೆ ತಿಳಿಸಿರುವಂತೆ ಆರು ಭಾಗಗಳಾಗಿ ವಿಂಗಡಿಸಲಾಗಿದೆ: 

I.ಅಧಿಷ್ಠಾನ

II.ಹೊರಗೋಡೆ

III.ಮೇಲ್ಚಾವಣಿ ಮತ್ತು ಕೈಪಿಡಿ ಗೋಡೆ

IV.ಶಿಖರ

V.ನವರಂಗ, ಹಾಗೂ

VI.ಗರ್ಭಗೃಹಗಳು.

I.ಅಧಿಷ್ಠಾನ (ಚಿತ್ರ ೨)

ಚಿತ್ರ ೨


ಜಗತಿಯ ಮೇಲಿನ ಗೋಡೆಯ ಅಧಿಷ್ಠಾನದ ಭಾಗವು ನಾಲ್ಕೂವರೆ ಅಡಿ ಎತ್ತರವಾಗಿದೆ. 

ಅಧಿಷ್ಠಾನದಲ್ಲಿ ಆರು ಪಟ್ಟಿಕೆಗಳಿದ್ದು, ಅದರಲ್ಲಿ ಐದು ಪಟ್ಟಿಕೆಗಳಲ್ಲಿ ಮಾತ್ರ ಉಬ್ಬುಶಿಲ್ಪಗಳಿವೆ. ಅಧಿಷ್ಠಾನದಲ್ಲಿನ ಪಟ್ಟಿಕೆಗಳು ಕೆಳಗಿನಿಂದ ಮೇಲಕ್ಕೆ ಇಂತಿವೆ:

೧. ಆನೆಗಳು: ಈ ಪಟ್ಟಿಕೆಯ ಪೂರ್ತ ಆನೆಗಳಿದ್ದು ಅವು ಅಲಂಕಾರದ ಹೊದಿಕೆಗಳನ್ನು ಹೊಂದಿವೆ. ಬಹುತೇಕ ಆನೆಗಳ ಮೇಲೆ ಒಬ್ಬ ಅಥವಾ ಇಬ್ಬರು ಮಾವುತರನ್ನು ಕಾಣಬಹುದು. ಆನೆಗಳು ಒಂದರೊಡನೆ ಮತ್ತೊಂದು ಆಡುತ್ತಾ ಇರುವಂತೆಯೂ ಚಿತ್ರಿಸಲಾಗಿದೆ. ದೇವಾಲಯದ ಈಶಾನ್ಯ ಭಾಗದಲ್ಲಿ ಕಾಡಾನೆಗಳನ್ನು ಚಿತ್ರಿಸಲಾಗಿದೆ. ಮೂಲೆಗಳಲ್ಲಿ ಎರಡು ಆನೆಗಳಿಗೆ ಒಂದೇ ತಲೆಯನ್ನು ಹೊಂದಿಸಲಾಗಿದೆ. ಕೆಲವು ಆನೆಗಳ ಮಧ್ಯದಲ್ಲಿ ತೋರಣಗಳ ಕೆಳಗೆ ಯಕ್ಷ - ಯಕ್ಷಿಯರನ್ನು ಕಾಣಬಹುದು. 

೨. ಅಶ್ವದಳ ಹಾಗೂ ಒಂಟೆಗಳು: ಈ ಪಟ್ಟಿಕೆಯಲ್ಲಿ ಕುದುರೆಗಳು ನಾಗಾಲೋಟದಿಂದ ಮುನ್ನುಗ್ಗುತ್ತಿರುವುದನ್ನು ಕಾಣಬಹುದು. ಒಂಟೆಗಳ ಮೇಲಿನ ಸವಾರರು ಭೇರಿ ಭಾರಿಸುತ್ತಿರುವುದನ್ನು ಸಹಾ ಕಾಣುತ್ತೇವೆ.

೩. ಲತಾಪಟ್ಟಿಕೆ: ಈ ಪಟ್ಟಿಕೆಯಲ್ಲಿ ಲತೆಗಳ ಸುರುಳಿಯೊಳಗೆ ಮಧ್ಯದಲ್ಲಿ ಪಕ್ಷಿಗಳು, ಕಪಿಗಳು, ಬೇಟೆಗಾರರು, ನರ್ತಕರುಗಳನ್ನು ಚಿತ್ರಿಸಲಾಗಿದೆ. ಮೂಲೆಗಳಲ್ಲಿ ಸಿಂಹ ಮುಖಗಳನ್ನು ಕಾಣುತ್ತೇವೆ.

೪. ಪೌರಾಣಿಕ ಚಿತ್ರ / ಶಿಲ್ಪಗಳಿರಬೇಕಾಗಿದ್ದ ಈ ಪಟ್ಟಿಕೆಯು ಸಂಪೂರ್ಣ ಖಾಲಿ ಇದೆ. ಇದು ಖಾಲಿ ಇರುವುದಕ್ಕೆ ಕಾರಣ ತಿಳಿದುಬಂದಿಲ್ಲ.

೫. ಮಕರ ಸಾಲು

೬. ಹಂಸಗಳು : ಈ ಪಟ್ಟಿಕೆಯಲ್ಲಿ ಅನೇಕ ಹಂಸಗಳಿದ್ದು ಅಲ್ಲೊಂದು ಇಲ್ಲೊಂದು ಗರುಡ ಇತ್ಯಾದಿ ವಾಹನಗಳಿವೆ.


                               II.           ದೇವಾಲಯದ ಹೊರಗೋಡೆ

ದೇವಾಲಯದ ಹೊರಗೋಡೆಯನ್ನು ಕಾರ್ನೀಸಿನಿಂದ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕಾರ್ನೀಸಿನ ಮೇಲ್ಭಾಗದಲ್ಲಿ ಸುಮಾರು ಒಂದು ಅಡಿ ಎತ್ತರದ, ಮತ್ತು  ಒಂದು ಅಥವಾ ಎರಡು ಗೋಡೆಗಂಬ (pilaster) ಗಳನ್ನು ಹೊಂದಿರುವ ಸುಂದರವಾದ ಉಪಗೋಪುರ (turrets) ಗಳನ್ನು ಚಿತ್ರಿಸಲಾಗಿದೆ. ಈ ಸುಂದರ ಉಪಗೋಪುರಗಳು ಒಂದೊಂದೂ ಸಹಾ ಬೇರೆ ರೀತಿಯದ್ದಾಗಿವೆ.

ಕಾರ್ನೀಸಿನ ಕೆಳಗೆ ಎರಡು ಅಡಿ ಎತ್ತರದ ದೇವತಾ ಮೂರ್ತಿಗಳನ್ನು ಕಾಣಬಹುದು. ಈ ಮೂರ್ತಿಗಳ ಕೆಳಗೆ ಸರ್ವಾಲಂಕೃತ ಪೀಠಗಳು ಮತ್ತು ಮೇಲೆ ಲತಾ ತೋರಣಗಳಿವೆ. ಈ ದೇವಾಲಯದ ಉತ್ತರಗೋಡೆಯಲ್ಲಿನ ಬಹುತೇಕ ವಿಗ್ರಹಗಳ ಶಿಲ್ಪಿ ಮಲ್ಲಿತಮ್ಮ. ಈ ಶಿಲ್ಪಿಯು ತನ್ನ ಹೆಸರನ್ನು ಬಹಳಷ್ಟು ವಿಗ್ರಹಗಳ ಕೆಳಗೆ ನಮಾದಿಸಿರುವುದನ್ನು ಗುರುತಿಸಬಹುದು. ಇಲ್ಲಿನ ದಕ್ಷಿಣ ಗೋಡೆಯ ಕೆಲವು ವಿಗ್ರಹಗಳ ಕೆಳಗೆ ಪಿರಿಯಣ್ಣ ಹೆಗ್ಗಡೆ ಎಂಬ ಹೆಸರನ್ನು ಕಾಣಬಹುದು. ಇದು ಬಹುಶಃ ತೆಲುಗಿನ ಪೆದ್ದಣ್ಣ ಹೆಗ್ಗಡೆ ಎಂಬುದರ ಕನ್ನಡ ರೂಪಾಂತರವಾಗಿರಬಹುದೆಂದು ತಜ್ಞರು ಊಹಿಸುತ್ತಾರೆ (ಈ ಹೆಸರುಗಳು ಸುಮಾರು ಎಂಟುನೂರು ವರ್ಷಗಳ ಹಿಂದಿನ ಕನ್ನಡ ಲಿಪಿಯಲ್ಲಿ ಇರುವುದರಿಂದ ಸ್ವಲ್ಪ ಗಮನವಿಟ್ಟು ನೋಡಿದರೆ ಮಾತ್ರ ತಿಳಿಯುತ್ತದೆ).

 

ಹೊರಗೋಡೆಯಲ್ಲಿನ ವಿಗ್ರಹಗಳು

ದೇವಾಲಯದ ಪೂರ್ವಮುಖದ ದಕ್ಷಿಣ ಭಾಗದಿಂದ‌ ಪ್ರಾರಂಭ ಮಾಡಿ ಪ್ರದಕ್ಷಿಣಾಕಾರವಾಗಿ ಚಲಿಸಿದರೆ ಸುಮಾರು ೧೫೦ ವಿಗ್ರಹಗಳನ್ನು ಕಾಣಬಹುದು. ಈ ವಿಗ್ರಹಗಳಲ್ಲಿ ಚತುರ್ವಿಂಶತಿ ಮೂರ್ತಿಗಳನ್ನೂ ಕಾಣಬಹುದು. ಲೇಖನದ ಉಳಿದ ಭಾಗದಲ್ಲಿ ಚತುರ್ವಿಂಶತಿ ಮೂರ್ತಿಗಳನ್ನು ಚಮೂ ಎಂದು ನಿರ್ದೇಶಿಸಲಾಗಿದೆ. ಈ ಮೂರ್ತಿಗಳು ಹಿಡಿದಿರುವ ಆಯುಧಗಳನ್ನು ಕ್ರಮವಾಗಿ ಅವುಗಳ ಬಲಮೇಲುಗೈ, ಎಡಮೇಲುಗೈ, ಎಡಕೆಳಗೈ ಮತ್ತು ಬಲಕೆಳಗೈಗಳಲ್ಲಿ ಇರುವಂತೆ ನಿರ್ದೇಶಿಸಲಾಗಿದೆ. ಆ ಆಯುಧಗಳು: ಶಂಖ(ಶಂ), ಚಕ್ರ(), ಗದಾ(), ಪದ್ಮ(). ಇತರ ಮೂರ್ತಿಗಳು ಹಿಡಿದಿರುವ ಆಯುಧಗಳನ್ನು ಮೂರ್ತಿಯ ಬಲಭಾಗದ ಕೆಳಗಡೆಯ ಕೈನಿಂದ ಪ್ರಾರಂಭಿಸಿ ಮೇಲಕ್ಕೆ ಹೋಗುತ್ತಾ, ಮೂರ್ತಿಯ ಎಡಭಾಗದ ಮೇಲೆಗಡೆಯ ಕೈ ಮತ್ತು  ಅದರ ಕೆಳಗಡೆಯ ಕೈ ಗಳಲ್ಲಿ ಇರುವಂತೆ,  ಅಂದರೆ ಮೂರ್ತಿಯ ಬಲಗಡೆಯ ಕೆಳಕೈನಿಂದ ಮೇಲಕ್ಕೆ ಪ್ರದಕ್ಷಿಣಾಕಾರವಾಗಿ  ನಿರ್ದೇಶಿಸಲಾಗಿದೆ. 

 

ಈ ದೇವಾಲಯದ ಹೊರಗೋಡೆಯಲ್ಲಿನ ಶಿಲ್ಪಗಳು ನೋಡುಗರ ಬಲಗಡೆಯಿಂದ ಎಡಗಡೆಗೆ ಇಂತಿವೆ:


 ಪೂರ್ವ ಮುಖ (ಚಿತ್ರ ೩)


ಚಿತ್ರ ೩ 

 

01

ಹನುಮಂತ

2, 3, 4

ಎಡಗಡೆಯಲ್ಲಿ ಹಿರಣ್ಯಾಕ್ಷ ಮತ್ತು ಬಲಗಡೆಯಲ್ಲಿ ಲಕ್ಷ್ಮಿಯು ನಡುವೆ ಧರಣೀವರಾಹ

5, 6

ದಕ್ಷಿಣಾಮೂರ್ತಿ ಮತ್ತು ನೃತ್ಯ ಮೋಹಿನಿ

7, 8

ಕೇಶವ (ಚಮೂ ) ( ಶಂ- -- ) ಮತ್ತು ಲಕ್ಷ್ಮೀ

9

ನೃತ್ಯ ಸರಸ್ವತೀ

 

ದಕ್ಷಿಣ ಗರ್ಭಗುಡಿಯ ಹಿಂಭಾಗ (ಚಿತ್ರ ೪)

ಚಿತ್ರ ೪

  

10, 11

ವೈಕುಂಠನಾರಾಯಣ, ಗರುಡ 

12, 13

ನಾರಾಯಣ ( ಚಮೂ ೨) ( - ಶಂ), ಲಕ್ಷ್ಮೀ

14 – 18

ಇಕ್ಕೆಲಗಳಲ್ಲಿ ಇಬ್ಬರು ಸ್ತ್ರೀಪರಿಚಾರಿಕೆಯರ ನಡುವೆ ಆಸೀನ ಲಕ್ಷ್ಮೀ ನಾರಾಯಣ. ಈ ವಿಗ್ರಹದ ಕೆಳಗೆ ನಂದಿ-ನಾಗರಿ ಅಕ್ಷರಗಳಲ್ಲಿ ಷಣ್ಮುಖದಾಸ ಎಂದು ಬರೆದಿರುವುದನ್ನು ಕಾಣಬಹುದು.

19, 20

ಮಾಧವ ( ಚಮೂ ೩ ) ( ಶಂ - ), ಎಡಗಡೆಯಲ್ಲಿ ಲಕ್ಷ್ಮೀ

21, 22

ಬೇತಾಳ ನೃತ್ಯ, ವಾದ್ಯಗಾರ (drummer)

 


ಚಿತ್ರ ೫

23

ಭೈರವ

24

ದಕ್ಷಿಣಾಮೂರ್ತಿ

25, 26

ಗೋವಿಂದ (ಚಮೂ ) ( ಶಂ - ). ಬಲಗಡೆಯಲ್ಲಿ ಲಕ್ಷ್ಮೀ

27-31

ಇಕ್ಕೆಲಗಳಲ್ಲಿ ಪರಿಚಾರಿಕೆಯರು ಮತ್ತು ದೇವಿಯರ ನಡುವೆ 

ಕಾಳಿಂಗಮರ್ದನ. ಕೆಳಗೆ ಪೆರಿಯಾಂಡ ಹೆಗ್ಗಡೆ ಎಂದು ಬರೆಯಲಾಗಿದೆ

32, 33

ರತಿ, ಮನ್ಮಥ


ಮುಂದಿನ ಅಂಕಣದಲ್ಲಿ ಮುಂದುವರೆಯುಯುದು....... 

Comments

  1. ಸ್ವಾರಸ್ಯಕರ ವಿಷಯಗಳ ತಿಳಿಸಿದ್ದೀರಿ. ಧನ್ಯವಾದಗಳು. 🙏

    ReplyDelete
  2. thanks for introducing Interesting and beautiful unknown place. Pictures are amazing collections

    ReplyDelete
  3. ಪ್ರತಿಬಾರಿ ಆಕರ್ಷಣೀಯ ಶಾಲಾ ಪರಿಚಯ ಮಾಡಿಸುತ್ತಿರುವ ತಮಗೆ ಹೊರನಾಡ ಚಿಲುಮೆ ಸಮಿತಿಯ ಪರವಾಗಿ ಧನ್ಯವಾದಗಳು ಸಾರ್. ಕೆತ್ತನೆಯ ಸೂಕ್ಷ್ಮ ವಿವರಣೆ, ಸುಂದರ ಚಿತ್ರಗಳು ಮನ ಸೂರೆ ಮಾಡುತ್ತದೆ. ಧನ್ಯವಾದಗಳು

    ReplyDelete

Post a Comment