ಶೃಂಗಗಿರಿ ಶೃಂಗೇರಿ

ಶೃಂಗಗಿರಿ ಶೃಂಗೇರಿ

ಲೇಖನ  -  ಡಾ. ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ: ಶಾರದೆಯ ಒಲುಮೆಯ ಉನ್ನತೋನ್ನತ ಭಾವಲಹರಿ.

ಶೃಂಗೇರಿ ಹೆಸರು ಹೇಳಿದರೇ ಸಾಕು ಮನ ಅನೇಕ ಉನ್ನತೋನ್ನತ ಭಾವಲಹರಿಯಲ್ಲಿ ಕಳೆದು ಹೋಗುತ್ತದೆ. ಚಿಕ್ಕಮಗಳೂರಿಗೆ ತೊಂಬತ್ತು ಕಿಲೋಮೀಟರ್ ದೂರವಿರುವ ಶೃಂಗೇರಿಗೆ ಎಂಟನೇ ಶತಮಾನದ ಮಹಾನ್ ಯೋಗಿಸಾಧಕ ಶ್ರೀ ಶಂಕರಾಚಾರ್ಯರು ಮತ್ತು ಕಾಶ್ಮೀರಪುರವಾಸಿನಿ ಶ್ರೀ ಶಾರದೆಯರೊಡನೆ ಅವಿನಾಭಾವ ಸಂಬಂಧದ ಬೆಸುಗೆ. ಆದರೆ, ಶೃಂಗೇರಿಯ ಪರಂಪರೆ ರಾಮಾಯಣ ಕಾಲಕ್ಕೂ ಹಿಂದೆ ಸರಿಯುತ್ತದೆ.  


     ಪುರಾಣಕಾಲದ ಕಶ್ಯಪ ಮುನಿಗಳ ಮಗ ವಿಭಾಂಡಕ ಮಹರ್ಷಿಗಳ ಆರಾಧ್ಯದೈವ ಶೃಂಗೇರಿಯ ಮಲಹಾನಿಕರೇಶ್ವರ. ಅವರ ತಪೋತಾಣವೂ ಈ ಕ್ಷೇತ್ರವೇ. ಅವರು ಈ ಲಿಂಗಸ್ವರೂಪದಲ್ಲಿಯೇ ಐಕ್ಯರಾದರೆಂಬ ಪ್ರತೀತಿಯೂ ಇದೆ. ಇವರ ಮಗ ಋಷ್ಯಶೃಂಗ ಹುಟ್ಟಿದ್ದು ಶೃಂಗೇರಿಯಲ್ಲಿಯೇ. ಇವರ ಹೆಸರಿನಿಂದಲೇ ಶೃಂಗಗಿರಿ ಶೃಂಗೇರಿಯಾಗಿ ಪ್ರಸಿದ್ಧವಾಯಿತೆಂಬುದು ನಂಬಿಕೆ. ಋಷ್ಯಶೃಂಗರು ಕಾಲಿಟ್ಟ ಕಡೆ ಕ್ಷಾಮ ಸುಳಿಯುತ್ತಿರಲಿಲ್ಲವಂತೆ. ಅಂತಹ ಮಹಾತಪಸ್ವಿ. ಅದಕ್ಕೇ ಅವರು ಮನವಿಟ್ಟು ಹರಸಿದ ಶೃಂಗೇರಿ ಪರಿಸರವೆಲ್ಲವೂ ಹಸಿರಸಿರು ಹಸಿರು! ಜೊತೆಗೆ ಈ ಕ್ಷೇತ್ರಕ್ಕೆ ಪಶ್ಚಿಮ ಘಟ್ಟಗಳು ಕೂಡ ಮನಸಾ ತಮ್ಮ ಕೊಡುಗೆ ನೀಡಿವೆ.  ಎತ್ತರೆತ್ತರದ ಬೆಟ್ಟಕೋಡುಗಳಿಂದ ಆವೃತವಾದ ಗಿರಿಶೃಂಗಗಳೇ ಸುತ್ತಮುತ್ತ. ಶೃಂಗೇರಿ ಹೆಸರಿಗೆ ಈ ನೈಸರ್ಗಿಕ ಕೊಡುಗೆಯೂ ಕಾರಣವಿರಬಹುದು. 

    ಈ ದಿವ್ಯಸೌಂದರ್ಯದ ಸಾತ್ವಿಕ ಶಕ್ತಿ, ಕ್ರೌರ್ಯವನ್ನು ಮಣಿಸಿ ಪ್ರೇಮವನ್ನು ಬೆಳೆಸಬೇಕೆಂಬ ಸಂಕಲ್ಪ ಪ್ರೀತಿಗಳು  ಶ್ರೀ ಆದಿಶಂಕರಾಚಾರ್ಯರನ್ನು ಇಲ್ಲಿ ಬರಮಾಡಿಕೊಂಡಿತು. ಕಾಶ್ಮೀರದ ಶಾರದೆಯ ಪ್ರತೀಕವಾಗಿ  ಶ್ರೀಚಕ್ರದಲ್ಲಿ ಶಾರದೆಯ ಚಂದನದ ಪ್ರತಿಮೆಯನ್ನು ಮತ್ತು ವಿದ್ಯೆ, ಜ್ಞಾನ, ಸಂಸ್ಕೃತಿಯ ಪ್ರತೀಕವಾಗಿ ಮಾತೆ ಉಭಯ ಭಾರತಿಯರನ್ನು ಶೃಂಗೇರಿಯಲ್ಲಿ ನೆಲೆನಿಲ್ಲಿಸಿ ದಕ್ಷಿಣಾಮ್ನಾಯದ ಯಜುರ್ವೇದ ಪೀಠವನ್ನಾಗಿ ಶೃಂಗೇರಿಯನ್ನು ರೂಪುಗೊಳಿಸಿದ್ದು ಶ್ರೀ ಆದಿಶಂಕರಾಚಾರ್ಯರ ಸತ್ ಸಂಕಲ್ಪಗಳು. ಶಂಕರಾಚಾರ್ಯರು ತಾವು ಸ್ಥಾಪಿಸಿದ ಶೃಂಗೇರಿ ಪೀಠಕ್ಕೆ ಮೊದಲ ಪೀಠಾಧಿಪತಿಗಳನ್ನಾಗಿ  ಅಪೂರ್ವ ಜ್ಞಾನಪೂರ್ಣಶಿಷ್ಯರಾದ ಮಂಡನಮಿಶ್ರರನ್ನು ಸುರೇಶಾಚಾರ್ಯರೆಂಬ ಹೆಸರಿನಿಂದ ನೆಲೆನಿಲ್ಲಿಸಿದರು.  ಅಂದಿನ ಶಾರದೆಯ ದಾರುವಿಗ್ರಹ  ಕ್ರಮೇಣ ಪಂಚಲೋಹದ ಮೂರ್ತಿಯಾಗಿ ಬದಲಾಗಿದೆ. ಅಂತೆಯೇ ಶ್ರೀ ಶಾರದೆಯ ಚೈತನ್ಯ ಚೇತೋಹಾರಿಯಾದ ವೃದ್ಧಿಯನ್ನು ಪಡೆಯುತ್ತಲೇ ಇದೆ. 

          ಶ್ರೀ ಶಾರದಾ ದೇಗುಲ ಇಂದು ಮಕ್ಕಳಿಗೆ ಅಕ್ಷರಾಭ್ಯಾಸದ ಕೇಂದ್ರವಾಗಿ; ಹದಿಹರೆಯದವರಿಗೆ ಸಂಸ್ಕಾರ, ಸುಸಂಸ್ಕೃತಿಯ ನೆಲೆಗಟ್ಟಾಗಿ; ವಯಸ್ಕರಿಗೆ  ಮನಶ್ಯಾಂತಿಯ ಆಕರವಾಗಿ; ನಿತ್ಯ ಅನ್ನಪ್ರಸಾದ, ಜ್ಞಾನ ಪ್ರಸಾದ ವಿನಿಯೋಗ ನಿಲಯವಾಗಿ; ಸುತ್ತ ಮುತ್ತಲಿನ ಹತ್ತಾರು ಊರುಗಳ ಶಾಲೆಗಳಿಗೆ ಬಿಸಿಯೂಟ ನೀಡುವ ಕಾಳಜಿಕೇಂದ್ರವಾಗಿ; ಸಹಸ್ರಾರು ಜನ ಆಗಮಿಸಿದರೂ ವಾಸ್ತವ್ಯದ ನೆಲೆ ಕಲ್ಪಿಸಿಕೊಡುವ ನಿಲಯವಾಗಿ ಕನ್ನಡದ ನಾಡಿನಲ್ಲಿ ಅಪೂರ್ವ ಸ್ಥಾನ ಪಡೆದಿದೆ. 

    ಶೃಂಗೇರಿ ಶಾರದೆ ವಿದ್ಯಾಧಿದೇವತೆ ಎಂದು ವೈವಿಧ್ಯಮಯವಾಗಿ ಆರಾಧನೆ ಪಡೆಯುವ ಜೊತೆಗೆ ಶ್ರೀ ದೇವಿಯ ಅಲಂಕಾರ ಉತ್ಸವಗಳೂ ಅಪಾರ ಜನಮನ್ನಣೆ ಪಡೆದಿವೆ. ಸಾಧಾರಣ ದಿನಗಳಲ್ಲೇ ಅಪೂರ್ವ ಜನಸಂದಣಿ ಇರುವ ಗುಡಿಯಲ್ಲಿ ನವರಾತ್ರಿ ಅಂತಹ ವಿಶೇಷ ಸಂದರ್ಭಗಳಲ್ಲಿ ಸಾಸಿವೆ ಎರಚಿದರೆ ನೆಲ ಮುಟ್ಟಲಾರದೆನ್ನುವಷ್ಟು ಜನದಟ್ಟಣೆ! 

      ಶರನ್ನವರಾತ್ರಿಯ ಈ ದಿನಗಳಲ್ಲಿ ಉತ್ಸವಾದಿ ಅಲಂಕಾರಗಳು ಲಕ್ಷಾಂತರ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅಮಾವಾಸ್ಯೆ ಇಂದ ಆರಂಭವಾಗಿ ವಿಜಯದಶಮಿಯವರೆಗೂ ಮಾಡುವ ಜಗತ್ಪ್ರಸೂತಿಕಾಲಂಕಾರ, ಹಂಸವಾಹಿನಿ, ವೃಷಭವಾಹಿನಿ, ಮಯೂರವಾಹಿನಿ, ವೀಣಾಶಾರದೆ, ಗರುಡವಾಹನೆ, ಜಗನ್ಮೋಹಿನಿ, ರಾಜರಾಜೇಶ್ವರಿ ಸಿಂಹವಾಹನೆ, ಗಜಲಕ್ಷ್ಮಿ ಅಲಂಕಾರಗಳ ಮೋಹಕತೆ ಮನಮುಗ್ಧವಾಗಿಸುತ್ತವೆ. ಸಾಧಾರಣವಾಗಿ ಈ ದಿನಗಳಲ್ಲಿ ಶೃಂಗೇರಿಗೆ ಕಾಲಿಡಲೂ ಅಸಾಧ್ಯ ಎನಿಸುವಷ್ಟು ಜನಜಂಗುಳಿ ಇರಬೇಕಿತ್ತು. ಆದರೆ, ಕೋವಿಡ್ ಆತಂಕದ ಕಾರಣದಿಂದಾಗಿ ಜನಸಾಮಾನ್ಯರು ಹೆಚ್ಚು ಸೇರದಂತೆ ಅತ್ಯಂತ ನಿಯಂತ್ರಣದಲ್ಲಿ ನವರಾತ್ರಿ ಉತ್ಸವಗಳನ್ನು ಆಚರಿಸಲಾಗುತ್ತಿದೆ. 



   ಶಾರದೆಯ ಗುಡಿಯ ಸನಿಹದಲ್ಲೇ ರೂಪು ಪಡೆದಿರುವ ವಿದ್ಯಾಶಂಕರ ಆಲಯ ನಮ್ಮ ಶಿಲ್ಪಲೋಕದ ಅಪರೂಪದ ವಿಸ್ಮಯ ವಿನ್ಯಾಸಕ್ಕೆ ಮತ್ತೊಂದು ಸೇರ್ಪಡೆ. ಈ ದೇಗುಲವನ್ನು ಶೃಂಗೇರಿ ಸಂಸ್ಥಾನದ  ಪೀಠಾಧಿಪತಿಗಳಾದ, ಗುರು ವಿದ್ಯಾರಣ್ಯರ ಗುರುಗಳ ಗುರುಗಳಾದ ಗುರು ವಿದ್ಯಾತೀರ್ಥರ ಸಂಸ್ಮರಣೆಯಲ್ಲಿ ರೂಪಿಸಲಾಗಿದೆ. ಚಾಲುಕ್ಯ, ಹೊಯ್ಸಳ, ವೇಸರ ಶೈಲಿಗಳ ಸಮೀಕೃತವಾಗಿ ವಿಜಯನಗರ ಕಾಲದ  ವಾಸ್ತುಶಿಲ್ಪಿಗಳಿಂದ ಕ್ರಿ. ಶ  ಸುಮಾರು  1333ರ ನಂತರ 1346 ರ ಒಳಗೆ ನಿರ್ಮಾಣ ಮಾಡಿರಬಹುದಾದ ಈ ದೇಗುಲದ ತಲವಿನ್ಯಾಸದಲ್ಲಿ ಕುದುರೆ ಲಾಳಾಕಾರದ ಎರಡು ಭಾಗಗಳನ್ನು ಮುಖಾಮುಖಿಯಾಗಿ ಕೂಡಿಸಿದಂತೆ ಕಾಣುವ ತಳಕಟ್ಟು ಇದೆ. ಕೂರ್ಮಾಕೃತಿಯನ್ನು ನೆನಪಿಗೆ ತರುವ ಈ ವಿನ್ಯಾಸ ದೇಗುಲಶಿಲ್ಪಗಳಲ್ಲೇ ಅತ್ಯಂತ ಅಪರೂಪದ್ದು! 


    ನಾಲ್ಕು ಗರ್ಭಗುಡಿಗಳ ಅಪರೂಪದ ವಿನ್ಯಾಸ ಇರುವ ಗುಡಿಯ ಮಹಾಮಂಟಪ ಅಥವಾ ನವರಂಗವೆಂದು ಗುರುತಿಸಲ್ಪಡುವ ವಿಶಾಲ ಆವರಣದಲ್ಲಿ ಇರುವ ಹನ್ನೆರಡು ಅಪೂರ್ವ ಕೆತ್ತನೆಯ ಕಂಬಗಳು ಖಗೋಳಶಾಸ್ತ್ರದ ವಿಸ್ಮಯಗಳೇ! ರಾಶಿಕಂಬಗಳು ಎಂದೂ ಕರೆಯುವ ಈ ಕಂಬಗಳಲ್ಲಿ ಮೇಷ, ವೃಷಭ ಮುಂತಾದ ಹನ್ನೆರಡು ರಾಶಿಗಳ ಸುಸ್ಪಷ್ಟ ಕೆತ್ತನೆಗಳಿದ್ದು ಆಯಾ ರಾಶಿಗಳಲ್ಲಿ ಸೂರ್ಯಕಿರಣಗಳು ಆಯಾ ಕಂಬಗಳನ್ನು ಸ್ಪರ್ಶಿಸಿಹೋಗುತ್ತವೆಂಬುದು ನಮ್ಮ ಪೂರ್ವಜರ ವೈಜ್ಞಾನಿಕ ಮನೋಭಾವಕ್ಕೆ ಹಿಡಿದ ಕನ್ನಡಿ. ಇದಕ್ಕಾಗಿ ದೇಗುಲ ಪ್ರವೇಶಕ್ಕೆ ಆರು ಮಹಾದ್ವಾರಗಳೂ ಇವೆ.

     ಈ ಗುಡಿಯ ಭಿತ್ತಿಯಲ್ಲಿ ಏಳು ಪಟ್ಟಿಕೆಗಳಲ್ಲಿ ಹಲವು ವೈವಿಧ್ಯಮಯ  ದೇವಾನುದೇವತೆಗಳ ಉಬ್ಬು ಶಿಲ್ಪಗಳು ಗಮನ ಸೆಳೆಯುತ್ತವೆ. ಅವುಗಳಲ್ಲಿ ಯೋಗದ ವೈಶಿಷ್ಟ್ಯ ಸಾರುವ ಕೆಲವು ಮಹತ್ವದ ಚಿತ್ರಗಳನ್ನು ಗಮನಿಸಬಹುದು. ಕೆಲವು ಉಬ್ಬು ಶಿಲ್ಪಗಳನ್ನು ವಿಜಯನಗರದ ಹಕ್ಕ, ಬುಕ್ಕರೇ ಮೊದಲಾದ ಏಳು ಜನ ಸೋದರರು, ಆಳುಪ ರಾಜ್ಯದ ಚಿಕ್ಕಾಯಿ ತಾಯಿ ಮತ್ತು ಆ ಕಾಲದ ಇತರ ಪ್ರಮುಖ ಸಾಧಕರಿಗೆ ಸಮೀಕರಿಸಬಹುದು. 



      ಈ ಅಂಗಳದಲ್ಲಿಯೇ ಶ್ರೀಶಂಕರಾಚಾರ್ಯ, ತೋರಣ ಗಣಪತಿ, ವೆಂಕಟರಮಣ, ಸುಬ್ರಹ್ಮಣ್ಯ ಮುಂತಾದ ದೇಗುಲಗಳ ಸಂಕೀರ್ಣವೇ ಇದೆ. ಒಂದೊಂದು ದೇಗುಲದ ವೈಶಿಷ್ಟ್ಯವೂ ಅದರದೇ ರೀತಿಯಲ್ಲಿ ಮಹತ್ವಪೂರ್ಣವೇ. ಬೃಹತ್ ಪ್ರಸಾದ ಮಂದಿರ ಜಗದ ಹಸಿವನ್ನು ತಣಿಸಲು ಸಿದ್ಧ ಎನ್ನುವ ಮಾದರಿಯಲ್ಲಿ ಸದಾ ಸಜ್ಜುಗೊಂಡಿರುತ್ತದೆ. ಮಂಜುಳ ಕಲರವದ ಸಂಗೀತವನ್ನು ಸದಾ ಶ್ರೀ ಶಾರದೆಗೆ, ವಿದ್ಯಾಶಂಕರರಿಗೆ ನೈವೇದ್ಯ ನೀಡುತ್ತಿರುವ ತಾಯಿ ತುಂಗೆಯನ್ನು ದಾಟಿ ಮತ್ತೊಂದು ತೀರ, ನರಸಿಂಹವನಕ್ಕೆ ನೆಡೆದು ಸೇರಲು ಕಬ್ಬಿಣದ ತೂಗುಸೇತುವೆಯ ಸಹಕಾರವಿದೆ. ಇದು ಶೃಂಗೇರಿ ಶ್ರೀಮಠದ ಪರಂಪರೆಯ ಶ್ರೀಗುರುಗಳ ನಿವಾಸ ಕ್ಷೇತ್ರವಾಗಿ ಅದ್ವೈತ ಸಿದ್ಧಿಯ ಮಾರ್ಗದರ್ಶಕ ಕೇಂದ್ರವಾಗಿದೆ. ವೇದಾಧ್ಯಯನ ಶಾಲೆ, ಸಂಸ್ಕೃತ ಪಾಠಶಾಲೆ, ಗೋಶಾಲೆ ಮುಂತಾದ ಸಹಾಯಕ ಕೇಂದ್ರಗಳಿವೆ.  ಆದಿ ಶಂಕರಾಚಾರ್ಯರ ನೇರ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರಿಂದ ಮೊದಲಾಗಿ ಇಲ್ಲಿಯವರೆಗೂ ವೈವಿಧ್ಯಮಯ ಶಕ್ತಿಸ್ವರೂಪಗಳ ಯತಿವರೇಣ್ಯರು ಪೀಠಾಧಿಪತಿಗಳಾಗಿ ಶೃಂಗೇರಿ ಶ್ರೀಕ್ಷೇತ್ರವನ್ನು ಮುನ್ನೆಡೆಸಿಕೊಂಡು ಬಂದಿದ್ದಾರೆ. ಇಂದಿನ ಜಗದ್ಗುರು ಶ್ರೀ  ಭಾರತಿ ತೀರ್ಥ ಗುರುಗಳು ಈ ಪವಿತ್ರ ಪರಂಪರೆಯ ಅಪೂರ್ವ ಪೀಠಾಧಿಪತಿಗಳಾಗಿ ಪೀಠವನ್ನು ಮುನ್ನೆಡೆಸುತ್ತಿದ್ದಾರೆ. 

 ಶೃಂಗೇರಿ ಪಟ್ಟಣದಲ್ಲಿನ ಕಾಳಿಕಾಂಬ, ದುರ್ಗಾದೇವಿ, ಕೆರೆ ಆಂಜನೇಯ, ಕಾಲಭೈರವ ಗುಡಿಗಳೇ ಅಲ್ಲದೆ, ಮಲ್ಲಿಕಾರ್ಜುನ ಎಂದೂ ಕರೆಯುವ ಬೆಟ್ಟದ ಮಲಹಾನಿಕರೇಶ್ವರ, ಛಪ್ಪರದಾಂಜನೇಯ,  ವೆಂಕಟರಮಣ ಮುಂತಾದ ದೇಗುಲಗಳು, ಪಾರ್ಶ್ವನಾಥ ತೀರ್ಥಂಕರರ ಬಸದಿಗಳು, ಮಸೀದಿ, ಚರ್ಚುಗಳು ಸಾಮರಸ್ಯದ ಒರತೆಯಾಗಿ ರೂಪುಗೊಂಡಿವೆ. 

ಶೃಂಗೇರಿ ಪಟ್ಟಣದಲ್ಲಿ ದೊರೆತಿರುವ 42 ಶಾಸನಗಳು ಐತಿಹಾಸಿಕವಾಗಿಯೂ ಶೃಂಗೇರಿ ಪಡೆದಿದ್ದ ಮಹತ್ವವನ್ನು ಬೆಳಕಿಗೆ ತರುತ್ತವೆ. ಈ ಶಾಸನಗಳಲ್ಲಿ ಐದು ಶಾಸನಗಳು ಜೈನ ಧರ್ಮದ ಶಾಸನಗಳಾದರೆ ಉಳಿದುವೆಲ್ಲಾ ಶೃಂಗೇರಿ ಶ್ರೀಮಠಕ್ಕೆ ಸೇರಿದವಾಗಿದ್ದು ಮಠದ ರಾಜಮಾನ್ಯತೆಗೆ ತೋರುಬೆರಳಾಗಿವೆ. ಈ ಶಾಸನಗಳಲ್ಲಿ ಅತ್ಯಂತ ಪ್ರಾಚೀನವಾದುದು ಶೃಂಗೇರಿಯ ಶಂಕರಮಠದಲ್ಲಿರುವ ಕ್ರಿ.ಶ. 470 ರ ತಾಮ್ರ ಶಾಸನ. ಗಂಗರ ಅವಧಿಯ ಈ ಶಾಸನದ ಜೊತೆಗೆ ಹೊಯ್ಸಳರು, ವಿಜಯನಗರ ಅರಸರು, ಕೆಳದಿ ಪ್ರಭುಗಳು, ಮೈಸೂರು ಒಡೆಯರು ಹೀಗೆ ವಿವಿಧ ರಾಜಮನೆತನಗಳು ಶೃಂಗೇರಿ ಪೀಠಕ್ಕೆ ಸಲ್ಲಿಸಿದ ರಾಜಮರ್ಯಾದೆಗಳು ಈ ಶಾಸನಗಳಲ್ಲಿ ಸುವ್ಯಕ್ತವಾಗಿವೆ.

ವಿದ್ಯಾಶಂಕರ ದೇಗುಲದ ಒಳಗೆ ಇರುವ ಕ್ರಿ. ಶ. 1346 ರ ಶಾಸನದಲ್ಲಿ ಗುರು ವಿದ್ಯಾತೀರ್ಥರನ್ನು 'ವೇದವ್ಯಾಸ, ಚತುರ್ಮುಖ ಬ್ರಹ್ಮ ಗುರುವೇ ನಮಃ' ಎಂದು ಸ್ತುತಿಸಿರುವಲ್ಲಿ ಶೃಂಗೇರಿಯ ಶೈಕ್ಷಣಿಕ ಮೌಲ್ಯ ಮತ್ತೊಮ್ಮೆ ವಿದಿತವಾಗುತ್ತದೆ. ಜೊತೆಗೆ ಶೃಂಗೇರಿಯ ಪೀಠಾಧಿಪತಿಗಳಾದ ವಿದ್ಯಾರಣ್ಯ ಗುರುಗಳನ್ನು 'ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನಾಚಾರ್ಯ' ಎಂದು ಗುರುತಿಸಿರುವುದಕ್ಕೆ ಪ್ರಮುಖ ಸಾಕ್ಷಿಯೂ ಆಗಿದೆ. ಆಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ವಿಜಯನಗರ ಸಾಮ್ರಾಜ್ಯದ ಏಳು ಜನ ರಾಜಕುಮಾರರ ಹೆಸರು ಹೇಳುವ ಈ ಶಾಸನ ಆ ನಿಟ್ಟಿನಲ್ಲಿ ಕೂಡ ಮಹತ್ವದ್ದೇ ಆಗಿದೆ. ಮೊದಲನೇ ಬುಕ್ಕರಾಯ ಸಿಂಹಾಸನ ಏರಿದ ಕೂಡಲೇ ಸ್ವತಃ ಶೃಂಗೇರಿಗೆ ಆಗಮಿಸಿ ಗುರುಗಳಾದ ವಿದ್ಯಾತೀರ್ಥರಿಂದ ಆಶೀರ್ವಾದ ಪಡೆದು ದತ್ತಿಗಳನ್ನು ನೀಡಿದುದನ್ನು ಕ್ರಿ. ಶ. 1356ರ (ಎ.ಕ. ಶೃ.9) ಶಾಸನ ತಿಳಿಸುತ್ತದೆ. ಇದು ಶೃಂಗೇರಿ ಪೀಠದ ಮತ್ತು ವಿಜಯನಗರ ಸಾಮ್ರಾಜ್ಯದ ಭಾವಪೂರ್ಣ ಸಂಬಂಧಗಳ ಮಧುರ ಎಳೆಗಳಿಗೆ ಮತ್ತೊಂದು ಸಾಕ್ಷಿಯಾಗಿದೆ. ಮುಂದಿನ ಅರಸರ ಅನೇಕ ತಾಮ್ರಶಾಸನಗಳು ಈ ಬಾಂಧವ್ಯವನ್ನು ಗಟ್ಟಿಗೊಳಿಸುವ ಯತ್ನಗಳನ್ನು ದೃಢೀಕರಿಸುತ್ತವೆ. ವಿಜಯನಗರ ಸಾಮ್ರಾಜ್ಯದ ಪತನಾನಂತರ ಪ್ರಬಲರಾದ ಕೆಳದಿಯ ನಾಯಕರೂ ಕೂಡ ಧಾರ್ಮಿಕ ಸ್ಫೂರ್ತಿಗಾಗಿ ಶೃಂಗೇರಿ ಮಠವನ್ನು ಅವಲಂಬಿಸಿದ್ದುದಕ್ಕೆ ಕೆಲವು ಶಾಸನಗಳು ಸಾಕ್ಷಿ ನುಡಿದರೆ, ಮೈಸೂರು ಒಡೆಯರು ಅದರಲ್ಲೂ ಮುಮ್ಮಡಿ ಕೃಷ್ಣರಾಜ ಒಡೆಯರ ಅವಧಿಯಲ್ಲಿ ಹೇರಳವಾಗಿ ದಾನ ಕೊಟ್ಟಿರುವ ದಾಖಲೆಯನ್ನು ಹಲವಾರು ಶಾಸನಗಳು ಬಿಚ್ಚಿಡುತ್ತವೆ. ಅಲ್ಲದೇ ಸುತ್ತ ಮುತ್ತಲಿನ ಅನೇಕ ಊರುಗಳಲ್ಲಿ ಶೃಂಗೇರಿಯ ಬಗೆಗಿನ ನೂರಾರು ಶಾಸನಗಳು, ನಾಡಿನಾದ್ಯಂತ, ರಾಷ್ಟ್ರದಾದ್ಯಂತ ಹರಡಿರುವ ಶೃಂಗೇರಿ ಬಗೆಗಿನ ಭಾವ ಮೌಲ್ಯಗಳು ಶೃಂಗೇರಿಯ ಮಹತ್ವವನ್ನು ಮತ್ತೆ ಮತ್ತೆ ಎತ್ತಿ ಹಿಡಿಯುತ್ತಿವೆ.

      ಹೌದು, ಶೃಂಗೇರಿ ಎಂದರೆ ಭಕ್ತಿ, ಜ್ಞಾನ, ವೈರಾಗ್ಯ, ಶಾಂತಿ, ತೃಪ್ತಿ, ಆನಂದ, ಮಾಧುರ್ಯ, ಸೌಂದರ್ಯಗಳ ದಿವ್ಯ ಸಂಗಮ. ತಾಯಿ ತುಂಗೆಯ  ಪ್ರಶಾಂತ ಕಲರವ ಹಗಲಿರುಳೂ ಶೃಂಗೇರಿಯನ್ನು ತನ್ನ ಮಡಿಲಿನಲ್ಲಿ ಕಾಪಿಟ್ಟುಕೊಂಡಿದೆ. ಆಗಾಗೊಮ್ಮೆ ಮೇರೆ ಮೀರಿ ಜನಜೀವನವನ್ನು ಅಸ್ತವ್ಯಸ್ತ ಮಾಡಿದರೂ ತುಂಗಾಮಾತೆಯ ಸದೊಲುಮೆ ಶೃಂಗೇರಿಯ ಹಿರಿಯ ಭಾಗ್ಯವಾಗಿ ಸದಾ ಮಂಗಳಪೂರ್ಣವಾಗಿ ಹರಿವಿನಲ್ಲಿದೆ. ತುಂಗೆಯ ಒಡಲಿನಲ್ಲಿ ಆಡಾಡುವ ಬೃಹತ್ ಮಷೀರ್ ಕಪ್ಪು ಮೀನುಗಳು ಸದಾಕಾಲವೂ ಅನುಭವಿಸುತ್ತಿರುವ ಶ್ರೀರಕ್ಷೆಯಂತೆ ಶೃಂಗೇರಿಯ ಹಸಿರು ಮಡಿಲು ಜನಮನಗಳಿಗೆ ಸಿರಿ ಸಮೃದ್ಧಿಯ ಆಕರವಾಗಿ ಸದಾ ಬೆಚ್ಚಗಿನ ಹಿತಭಾವವನ್ನು ನೀಡುತ್ತಿದೆ. ನೀಡುತ್ತಲೇ ಇರುತ್ತದೆ!!!!

 ಲೇಖಕಿ - ಡಾ. ಮಂಜುಳಾ ಹುಲ್ಲಹಳ್ಳಿ



Comments

  1. ಬಹಳ ಚೆಂದ ಇದೆ ಬರಹ. ಎಷ್ಟೋ ತಿಳಿಯದ ಮಾಹಿತಿಗಳ ಉಣಬಡಿಸಿದ್ದೀರಿ. ಧನ್ಯವಾದಗಳು.

    ReplyDelete
  2. Thanks for a wonderful article about my favorite place in Karnataka. well explained with history, references, dates and evidences.

    ReplyDelete
  3. ಶೃಂಗೇರಿಯ ಶ್ರೀ ಶಾರದಾ ದೇವಸ್ಥಾನಕ್ಕೆ ಹೋಗಿ ಅಲ್ಲಿ ಮೌನವಾಗಿ ಕುಳಿತು ಧ್ಯಾನಿಸಿದಾಗ ಆಗುವ ಅನುಭೂತಿ ಅವರ್ಣನೀಯ. ಇಂಥಹ ದಿವ್ಯ ಕ್ಷೇತ್ರದ ಬಗೆಗಿನ ಲೇಖನ ಬಹಳ ಸೊಗಸಾಗಿ ಮೂಡಿಬಂದಿದೆ.

    ReplyDelete
  4. NAMASTE MADAM ,HOUDU THUNGA NADI TIRADALI PRAKRUTIYA NADUVE KULITHU AA SOUNDARYAVANU SAVIYUVA ANUBAVA VARANNISOKE ASADYA.ANTHA PUNYA KSHETHRA BAGE ADUBHUTAVADA MAHITI KOTIDAKE DANYAVADAGALU.

    ReplyDelete
  5. ಪ್ರವಾಸಿಗರ ನೆಚ್ಚಿನ ತಾಣ ಶೃಂಗೇರಿ, ಮಲೆನಾಡಿನ ಸೊಬಗು, ಶಾಸನಗಳ ಪುರಾವೆ, ಇತಿಹಾಸ ಎಲ್ಲ ಮಾಹಿತಿಯೊಂದಿಗೆ ಒಂದು ಉತ್ತಮ ಬರಹ ನೀಡಿದ್ದೀರಿ ಶ್ರೀಮತಿ ಮಂಜುಳಾ ಹುಲ್ಲಹಳ್ಳಿಯವರೇ

    ReplyDelete

Post a Comment