ಚಿಲ್ಡ್ ಬಿಯರ್

ಚಿಲ್ಡ್ ಬಿಯರ್

ಕಥೆ  : ಹೇಮಾ ಸದಾನಂದ   ಆಮೀನ್ ,  ಮುಂಬಯಿ 

ವಿಚಾರಗಳ ಮಂಥನ ಮಾಡಿ ಸಮಯ ವ್ಯಯ ಮಾಡೋದು ಆದಿತ್ಯನ ಜಾಯಮಾನಕ್ಕೆ ಒಗ್ಗದ ವಿಷಯ. ಆದರೆ ಇಂದು ಯಾಕೋ ಅವನ  ಮನಸ್ಸು ರೋಲರ್ ಕೋಸ್ಟರದಲ್ಲಿ ಸಿಕ್ಕಿಕೊಂಡಂತಾಗಿತ್ತು.  ರಾಜುವಿಗೆ  ಇವೆಲ್ಲಾ ಹೊಸತೇನಲ್ಲ. ಒಬ್ಬ ಅಂಬ್ಯುಲೆನ್ಸ್ ಚಾಲಕನಾಗಿ ಜೀವನ್ಮರಣದ ನಡುವಿನ ಹೋರಾಟದಲ್ಲಿ ಬದುಕಿನತ್ತ ಧಾವಿಸುವುದಾಗಲಿ , ಮರಣದ ಪಯಣವನ್ನು  ಸಾಗಿಸುವುದಾಗಲಿ ದೈವಿಕತೆಯ ಕೆಲಸವೆಂದು   ಆತನ ಬಲವಾದ ನಂಬಿಕೆ .  ವೃತ್ತಿಯ ನಿಮಿತ್ತ ಸಾವಿನ ಅತೀ ಪಕ್ಕದಲ್ಲೇ  ಇದ್ದರಿಂದ ಬದುಕನ್ನು ಕ್ಷಣ ಕ್ಷಣವೂ ಅನುಭವಿಸಬೇಕೆಂಬ  ಆಸೆ ಅವನದ್ದು.  



ಬೆಳಗಾವಿಯಿಂದ ಹೊರಟ  ಅಂಬ್ಯುಲೆನ್ಸ್ ನಿಧಾನವಾಗಿಯೇ ಸಾಗಿತ್ತು. ಆ ಕ್ಷಣದ ನೋವು,  ದುಃಖ, ಧಾವಂತಗಳನ್ನು,ಹಿಂದೆ ಬಿಟ್ಟು ಬಂದ ಹಾದಿಯಲ್ಲಿ  ಆದಿತ್ಯ ಹಾಗೂ ರಾಜುವಿನ ಮಧ್ಯ ನೀರವ ಮೌನ ಕವಿದಿತ್ತು.  ನಿದ್ರೆಯಿಲ್ಲದೆ ಎರಡು ತಾಸು ಗಾಡಿ ಚಲಿಸಿ ಸುಸ್ತಾದಾಗ,  ಎದುರಿಗೆ ಕಾಣಿಸಿದ ‘ಅಮರ ಲಾಡ್ಜಿನ’ ಕೌಂಟರಿನಲ್ಲಿ ಹೆಸರು  ದಾಖಲಾಯಿಸಿ ತಮ್ಮ ರೂಮಿಗೆ ಹೋಗಿ ಕೈಕಾಲು ಮುಖ ತೊಳೆದು ಹಾಸಿಗೆ ಮೇಲೆ ಬಿದ್ದ ಅರೆಕ್ಷಣದಲ್ಲಿ ರಾಜು ಗೊರಕೆ ಹೊಡೆಯಲಾರಂಭಿಸಿದ. ಅತ್ತ  ಆದಿತ್ಯನ ಮೈ ಮನಸ್ಸಿನಲ್ಲಿ ಇನ್ನೂ ಸೂತಕದ ಛಾಯೆ ಸೋಂಕಿತ್ತು. 

 ‘ಸಾವೆಂಬುವುದು ಅದೆಷ್ಟು ನಿಗೂಢ. ಈ ದೇಹ ಇದ್ದಕ್ಕಿದಂತೆ ಇಲ್ಲದಾಗುವುದು;  ತನ್ನದೆನ್ನುವ  ಆಸೆ,ಕನಸು, ಪ್ರೀತಿ, ದ್ವೇಷ, ಅಹಂಕಾರಗಳಿಗೆ ಒಂದು ದೊಡ್ಡ ಪೂರ್ಣವಿರಾಮ ಸಿಗುವುದು ;   ತನ್ನೆಲ್ಲಾ ಜ್ಞಾನ, ಬುದ್ಧಿಶಕ್ತಿ, ಅಧಿಕಾರ ಮತ್ತು ಸಂಪತ್ತನ್ನು ಬಳಸಿದರೂ ಸಾವನ್ನು ಗೆಲ್ಲಲಾಗದ್ದು ಕಟುಸತ್ಯ.   ಬದುಕಿನ ಪಯಣದ ಅಂತಿಮ ಗಂತವ್ಯವೇ ಸಾವು , ಹಾಗಾದರೆ ಬದುಕಿನ ಈ ಪಯಣ ಹೇಗಿರಬೇಕು ?  ಆದಿತ್ಯನ ಮೈಮನ ದಣಿದಿದ್ದರೂ  ಕಣ್ಣೆವೆಗಳಿಗೆ ನಿದ್ದೆ ಸೋಂಕದೆ ನಿನ್ನೆ ನಡೆದ ಘಟನೆಗಳು  ಮನಸ್ಸಿನಲ್ಲಿಯೇ ಸ್ಕಾನಿಂಗ್  ಆಗಲಾರಂಭಿಸಿದವು. 


*****

ಸಿದ್ಧಿವಿನಾಯಕ ಚಾಳದ  ಗೇಟ್ ಹೊರಗಡೆ ಅಂಬ್ಯುಲೆನ್ಸ್  ಬಂದು ನಿಂತಿರುವುದನ್ನು ಕಂಡು  ದಿಲೀಪ್ ಬಾಯಿಯೊಳಗೆ ಬ್ರಷ್ ಸಿಕ್ಕಿಸಿ ಒಂದಿಷ್ಟು ದಂತ ಕಾಂತಿಯ ನೊರೆಯೊಂದಿಗೆ ಬ್ಯಾ..ಬ್ಯಾ..ಬ್ಯಾ ಅನ್ನೋದನ್ನು ನೋಡಿ ವಾಕರಿಕೆ ಬಂದಂತೆ ಆದಿತ್ಯ, “ಹೋಗೋ ಮೊದಲು ಬಾಯಿ ತೊಳೆದು ಬಾ“ ಎಂದು ಅಟ್ಟಿಸಿದಾಗ ಹೊರಗೆ ಗಟಾರಕ್ಕೆ ಪಿಚಿಕ್ಕ್ ಎಂದು ಉಗುಳಿ ಬಾಯಿ ಒರೆಸುತ್ತಾ ,

“ ಅರ್ರೆ ಅಣ್ಣಾ,  ಕಾಶಿನಾಥ ಕಾಕಾ ಟಪಕ್ ಗಯೇ “   ಎಂದು ಒಂದೇ ಉಸಿರಿಗೆ ಉಸುರಿಬಿಟ್ಟ.  

ಆದಿತ್ಯನಿಗೆ ನಿಜವೆನಿಸಲಿಲ್ಲ. “ ಜಾ.......ಬೆ,  ಕುಚ್ ಭಿ ಫೇಕ್ ಮತ್ .ರಾತ್ ಕಾ ಬಿಯರ್ ಅಭೀ ಉತ್ರಾ ನಹಿ ಹೈ ಕ್ಯಾ?! 

“ ಅವನ್ಯಾಕೆ ಸುಳ್ಳು ಹೇಳೋದು? ಅವ ಹೇಳ್ತಿರೋದು ಸತ್ಯನೇ. . ನನಗೂ ಗೊತ್ತೆಂದು “ಆದಿತ್ಯನ ಹೆಂಡತಿ ಮೇಘನಾ ವಾರೆ ಕಣ್ಣಿನಿಂದ ತಣ್ಣಗೆ ತನ್ನ ಮಾತು ಮುಂದಿಟ್ಟಳು. 

“ತೆರ್ರಿSSSS ಕಿತೋ .... ನಿಮಗೆಲ್ಲ ಗೊತ್ತಿದ್ದೂ ನನಗ್ಯಾಕೆ ತಿಳಿಸಿಲ್ಲವೆಂದು  ಬಿಗಿಯಾಗಿಯೇ ಪ್ರಶ್ನಿಸಿದ. 

ನಿನ್ನೆ ರಾತ್ರಿ ಕಸ ಬಿಸಾಕಲು ಹೋದಾಗ ಅಂಜುತಾಯಿ ಹೇಳಿದ್ದಳು. ವಿಷಯವನ್ನು ಇನ್ನಷ್ಟು ಗಂಭೀರ ಮಾಡುವ ಮನಸ್ಸು ಅವಳಿಗಿರಲಿಲ್ಲ. 

“ ಮತ್ತೆ ನನಗೆ ತಿಳಿಸಲು ಏನ್ ದಾಡಿ ನಿನಗೆ ? 

ಹೇಳುವುದೇನು ? ನಿಮಗೆ ವಿಷಯ ತಿಳಿಯದೆ ಇರುತ್ತಾ ಎಂದು ಸುಮ್ಮನಿದ್ದೆ . ಹಾಗೆಯೇ  ಅವರೇನು ನಿಮ್ಮ ವಂಶದವರಲ್ಲ.. ನಿಮಗೇನು ಸೂತಕ ತಟ್ಟುವುದಿಲ್ಲ. ನಿಶ್ಚಿಂತರಾಗಿರಿ. ಎಂದು ಬಿಸಿಯಾಗಿಯೇ ಹೇಳಿದಳು. 

“ ಹಾಗಲ್ಲವೇ ..ಏನೇ ಆದರೂ ನಾವು ಒಂದೇ ಚಾಳ್ ನಲ್ಲಿ ಇರುವುದಲ್ವಾ?  “ಆದಿತ್ಯ ವಿಷಯವನ್ನು ಸ್ವಲ್ಪ ತಿಳಿ ಮಾಡಲು ಪ್ರಯತ್ನಿಸುತ್ತಾ ಮೃದುವಾಗಿ ಮಾತನಾಡಿದ. 

ಅಂದ್ರೆ ? ಏನೀಗಾ ? ಅವರ ಮನೆಗೆ ಹೋಗುವ ಅಂದಾಜಿದೆಯೋ ಏನು ?  ಹೋಗಲೇ ಬಾರದೆಂದು ಕಟ್ಟಾಜ್ಞೆಯನ್ನು ಪ್ರಶ್ನೆಯಲ್ಲಿ ಸುತ್ತಿ ಕೇಳಿದಳು. 

“ ಮತ್ತೆ , ಹೋಗದಿದ್ದರೆ ಸರಿಯಾಗದು. ಒಮ್ಮೆ ಹೋಗಿ ಬರ್ತೇನೆ. ಬೇಕಾದ್ರೆ ನೀನೂ ಬಾ. ಅಷ್ಟೇ ಶಾಂತವಾಗಿ ಆದಿತ್ಯ. 

“ ಬೇಡಪ್ಪ ..ನೀವೇ ಹೋಗಿ ನನ್ನ ಪಾಲಿನ ಪುಣ್ಯವೂ ನಿಮಗೆ ಸಿಗಲಿ. “ಎಂದು ಗೊಣಗಾಡುತ್ತಾ ಅಡುಗೆ ಕೋಣೆಗೆ ಸೇರಿಕೊಂಡಳು. 

“ ಅರ್ರೆ.. ...ಎಂದು ಅಲ್ಲೇ ನಿಲ್ಲಿಸಿದ . 

ಮೇಘನಾ ಅಲ್ಲಿಂದಲೇ ಹಾವಿನ ಹೆಡೆಯಂತೆ ಕತ್ತು ತಿರುಗಿಸಿ , ಕಣ್ಣರಳಿಸಿ “   ಅವರು ನಮ್ಮೊಂದಿಗೆ ಜಗಳಾಡಿ ಇನ್ನೂ ವರ್ಷ ಆಗಿಲ್ಲ ಆಗಲೇ ಮರೆತು ಬಿಟ್ರಾ..?  ಆ ದಿನ ಅವನ ಹೆಂಡ್ತಿ  ಭಾರತಿ ಕಾಕಿ  ನಿಮ್ಮ ಮುಖಕ್ಕೆ  ಮಂಗಳಾರತಿ ಮಾಡಿದ್ದು  ಸಾಕಾಗಿಲ್ಲವೇ ?  ಹೋಗಿ ...ಮಿಕ್ಕಿದು ಇಂದು ಮಾಡಿಬಿಡ್ಲಿ . ಹೇ .. ಪರಶುರಾಮ ನೀನೇ ಬುದ್ದಿಕೊಡಬೇಕೆಂದು ಮುಖ ಸೊಟ್ಟು ಮಾಡಿ ಅಲ್ಲೇ ಕುಳಿತಳು.  

ಆದಿತ್ಯ ಶರ್ಟ್ ಸಿಕ್ಕಿಸಿ. ದಿನೇಶನ ಹೆಗಲನ್ನು ಬಳಸುತ್ತಾ ಚಲ್ಬೆ....

ಅಣ್ಣಾ.. ನಾನು ಬರುವಂತಿಲ್ಲ.  ಮದುವೆSSS...

ಓಹ್, ಇನ್ನೆರಡು ದಿನಗಳಲ್ಲಿ ನೀನು ಮದುವೆ ಎಂಬ ಗಲ್ಲಿಗೇರ್ತಿಯ ? ಸರಿ ನೀನು ಇಲ್ಲೇ ಇರು.  ನಾನೊಬ್ಬನೇ  ಹೋಗಿ ಬರ್ತೇನೆ ಎಂದು ಹೊರಟೇ ಬಿಟ್ಟ. 

ಕಾಶಿನಾಥ ಕಾಕಾನಿಗೆ ಮಧ್ಯರಾತ್ರಿ ಎದೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿತ್ತು. ಅಕ್ಕ- ಪಕ್ಕದವರು ಮಲಗಿರುವುದರಿಂದ ಭಾರತಿ ಕಾಕಿ , ಹಿರಿಯ ಮಗಳು ಸ್ವಪ್ನ  ಹಾಗೂ ಅಳಿಯ ರಜತ್ ನನ್ನು  ಕರೆ ಮಾಡಿ ಕರೆಯಿಸಿಕೊಂಡಿದ್ದಳು. ಸ್ಟೇಷನ್ ಪಕ್ಕದಲ್ಲಿರುವ ದಿಶಾ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಪ್ರಾಣ ಹೋಗಿತ್ತು.  ಆದರೂ ಕಾಟಾಚಾರಕ್ಕೆ ತುರ್ತು ಚಿಕಿತ್ಸಾ ವಿಭಾಗಕ್ಕೆ ಕೊಂಡೊಯ್ದು  ಚಿಕಿತ್ಸೆಯ ನಾಮ ಎಳೆದಿದ್ದರು. ಬೆಳಿಗ್ಗೆ ಅಂಬ್ಯುಲೆನ್ಸಿನಲ್ಲಿ  ಕಾಕಾನ ಶವ ಬಂದಾಗ  ನೆರೆ ಹೊರೆಯ ಜನರು ಸೇರಿ ಕೊಂಡರು. ಮನೆಯವರ ರೋದನೆ ಮುಗಿಲು ಮುಟ್ಟಿತು. ಕಾಕಾನ ಜೊತೆ ಕೆಲಸ ಮಾಡುವವರು ಪಾರ್ಥಿವ ದೇಹವನ್ನು ತಂದು ಕೋಣೆಯ ಮಧ್ಯದಲ್ಲಿಟ್ಟು ದೂರ ಹೋಗಿ  ನಿಂತಿದ್ದರು. ಆದಿತ್ಯ ಒಳಗೆ ಹೋದವನೆ, “ಏ..ಕಾಕಾ ..ಹೇ.. ದೋಸ್ತ್... ನೋಡಿ ಆದಿತ್ಯ ಬಂದಿದ್ದಾನೆ. ಏಳಿ.. ಎದ್ದೇಳಿ. ಏನಿಷ್ಟು ಮುನಿಸು. ಮಾಫ್ ಕರ್ದೋ ಬಾಸ್ “  ಎನ್ನುತ್ತಿದ್ದಂತೆ ಮನೆಯವರು ಬಾಯಿಕೊಟ್ಟು ಅಳಲಾರಂಭಿಸಿದರು.  “ಕಾಕೂ ಅಳಬೇಡ ನಾವಿದ್ದೇವಲ್ಲ. ಧೈರ್ಯದಿಂದಿರಿ.” ಎಂದು ಆಕೆಯ ತಲೆ ನೇವರಿಸುತ್ತಾ ಸಮಾಧಾನ ಪಡಿಸಲು ಪ್ರಯತ್ನಿಸಿದ. 

ಎರಡು ತಾಸು ಕಳೆದರು ಅಳುವುದೊಂದು ಬಿಟ್ಟು ಬೇರೆ ಯಾರೂ ಮುಂದೆ ಬಂದು  ಅಂತಿಮ ಕಾರ್ಯಕ್ಕೆ ನೇರವಾಗಲಿಲ್ಲ.  ಸುಮಾರು ಹೊತ್ತು ಕಾದು ಆದಿತ್ಯ  ಹೊರಡಲು ಅನುವಾದರೂ ,  ಅವನೊಳಗಿನ ಸೈತಾನ ಬರಲು ಬಿಡಬೇಕಲ್ಲ? 

ವಾಡಿಯ ಜನರು ಅವನನ್ನು “ ಆಪತ್ಬಾಂಧವ ಎನ್ನುವುದು ಸುಳ್ಳಲ್ಲ. ಯಾರನ್ನೇ ಆಸ್ಪತ್ರೆ ಸೇರಿಸುವುದಾಗಲಿ,  ನೀರಿನ ಸಮಸ್ಯೆಯಾಗಲಿ,  ಯಾರದಾದ್ರೂ ತುರ್ತು ಅಂಬ್ಯುಲೆನ್ಸ್ ಬೇಕಾದರೆ ಪಟ್ಟನೆ ಆದಿತ್ಯನ ಹೆಸರೇ  ನೆನಪಾಗುವುದು. ಇನ್ನು ಕಾಕಿ ಈತನನ್ನು ಕರೆಯದಿರಲು  ಕಳೆದ ವರ್ಷ ನಡೆದ ಆ ಭೀಕರ ಜಗಳವೇ ಕಾರಣ  .  ಜಗಳವೇನೋ ಭಯಂಕರವಾಗಿದ್ದರೂ ,     ವಿಷಯ ಮಾತ್ರ ಬಲು ಚಿಕ್ಕದು.  ಕಾಕಿ ವರಾಂಡದಲ್ಲಿ ನೀರಿನ ಪಿಪಾಯಿ ಇಟ್ಟದ್ದು  ಚಾಳ್ ನಲ್ಲಿರುವರಿಗೆ  ತೊಂದರೆಯಾಗುತ್ತಿತ್ತು.  ಆದರೆ ಹೇಳುವವರ್ಯಾರು?  ಆದಿತ್ಯನ ಕಿವಿಗೆ ಈ ವಿಷಯ ಬಿದ್ದಂತೆ,  ಆತ ಕಾಕಿಗೆ ಮೊದಲು ಹೋಗಿ -ಬರುವವರಿಗಾಗುವ ಕಷ್ಟದ ಬಗ್ಗೆ ಅರ್ಥವಾಗುವ ಹಾಗೆ ಸೌಮ್ಯವಾಗಿ ಹೇಳಿದ.  ಕಾಕಿ  ತನ್ನ ಗಂಡನ ಪೋಲಿಸ್ ಗತ್ತು ತೋರಿಸುತ್ತಾ , ತೆಗೆಯದಿದ್ರೆ ಏನ್ ಮಾಡ್ತೀಯಾ? ಎಂಬ ಪ್ರಶ್ನೆಗೆ ಉತ್ತರ, ಪೀಪಾಯಿಯ ನೀರನ್ನು ಮಗುಚಿ, ಇನ್ನು ಮುಂದೆ ಈ ಪೀಪಾಯಿ ಇಲ್ಲಿದ್ದರೆ ಇದೇ ತರಹ ನಿಮ್ಮನ್ನೂ... ಎಂದು ಕತ್ತು ತಿರುಗಿಸಿ ಚಿಟಕಿ ಹೊಡೆದು ನೇರವಾಗಿ ಪೋಲಿಸ್ ಠಾಣೆಗೆ ಹೋಗಿದ್ದ. ಅಲ್ಲಿಯೂ  ಎಲ್ಲರೆದುರಿಗೆ, ಕಾಕಾ,  ಚಾಳ  ಅಂದರೆ ನಮ್ಮಪ್ಪನ ಆಸ್ತಿ ಆಗಿರೋದಿಲ್ಲ . ಚಾಳ್ ಅಂದ ಮೇಲೆ ಎಲ್ಲರೂ ಎಲ್ಲರೊಂದಿಗೆ ಹೊಂದಿಕೊಂಡು ಬಾಳ ಬೇಕಲ್ವಾ”. ಆ ವೇಳೆಗೆ ತಲೆಕೆಳಗೆ ಮಾಡಿ ನಿಂತ ಕಾಕನ ಒಳಗೊಳಗೆ ಸ್ಪೋಟವೊಂದು ಸಿಡಿಯಲು ಹಾತೊರೆಯುತ್ತಿತ್ತು . ಸಂಜೆ ಮನೆಗೆ ಬಂದವನೇ, ಬಟ್ಟೆ ಬದಲಾಯಿಸಿ ಹೊರಗೆ ನಿಂತು  “ ಬೋಸಡಿಕೆ ಇನ್ನು ಮುಂದೆ ಯಾರ ಪಿಪಾಯಿಯೂ ಹೊರಗೆ ಕಾಣಿಸಕೂಡದು . ಪಿಪಾಯಿ ಅಷ್ಟೇ ಅಲ್ಲ ನಿಮ್ಮ ಕಕ್ಕಸಿನ ಬಾಲ್ದಿಯನ್ನೂ ಹೊರಗೆ ಇಡುವಂತಿಲ್ಲ. ಎಂದು ಅಲ್ಲಿದ್ದ ಬಾಲ್ದಿಗಳನ್ನೆಲ್ಲ ತುದಿಗಾಲಿಂದ ಒದ್ದು ಬಿಸಾಕಿದ. ಮೈಮೇಲೆ ಆವೇಶ ಬಂದವನಂತೆ   ಕಾಕಿಯನ್ನು ಹೊರಗೆ ಕರೆದು,”  ಇಂದೇ ಆಯಿತು,  ಮಧ್ಯಾಹ್ನ ನೀನು ಹೊರಗೆ ವಠಾರದಲ್ಲಿ ಕುಳಿತು ಪಟ್ಟಂಗ ಹೊಡೆಯುದಾಗಲಿ, ಒಬ್ಬರ ಮನೆಯಿಂದ ಏನ್ನನ್ನು ತರುವುದಾದರೂ ಕಂಡರೆ ನೋಡು,ಹುಷಾರ್ ಎಂದು ತಾಕೀತು ಮಾಡಿದನು.  ಆದಿತ್ಯ  ಶರ್ಟಿನ ತೋಳನ್ನು ಮೇಲಕ್ಕೆ ಮಡುಚಿ,  ಇಂದು ಒಂದು ಕೈ ನೋಡಿಯೇ ಬಿಡಬೇಕೆಂದು ಪಂದ್ಯಕ್ಕಿಳಿದಂತೆ ಮುಗ್ಗುರಿಸಿ ಬರಲು ಹಿಂದಿನಿಂದ ಮೇಘನಾ, ದಿಲೀಪ್ ಎಲ್ಲಾ ಅವನ ಕೈ ಹಿಡಿದು ಎಳೆದು ಮನೆಯೊಳಗೆ ಹಾಕಿ ಹೊರಗಿನಿಂದ ಕೀಲಿ ಹಾಕಿಬಿಟ್ಟರು. ಆ ದಿನ ನಿಂತ ಮಾತು ಬರೋಬ್ಬರಿ ಒಂದು ವರುಷ ನಿಂತಿತ್ತು. 

ಪೋಲೀಸ್ ಕೌನ್ ಸ್ಟೇಬಲ್ ಆಗಿದ್ದ ಕಾಶಿನಾಥ ಈ ಚಾಳ್ ಗೆ ಬಂದು ಹತ್ತು ವರುಷಗಳೇ ಆಗಿತ್ತು. ಅವನ ನೌಕರಿಯ ದರ್ಪ ಅವನಲ್ಲಿ ಎದ್ದು ಕಾಣುತಿತ್ತು. ತನ್ನ ವೈಯಕ್ತಿಕ ಖುಷಿ ,ತಮ್ಮ ಬದುಕನ್ನೇ ಮುಖ್ಯವೆಂದು ಭಾವಿಸುವ ಮನೋಭಾವ ಅವನಲ್ಲಿ. ಅವನಿಂದಾಗಿ ಅವಳ ಹೆಂಡತಿಯಲ್ಲೂ ಅದೇ ಸ್ವಭಾವ ಬೇರು ಬಿಟ್ಟಿತ್ತು. ಆದ್ದರಿಂದಲೇ ಇಡೀ ವಠಾರದಲ್ಲಿ ಅವರು  ಅಯ್ಸೋಲೆಟ್ ಆಗಿ ಬದುಕುತ್ತಿದ್ದರು. 

******

ಯಾರೂ ಏನೂ ಹೇಳದ್ದನ್ನು ನೋಡಿ  ಆದಿತ್ಯನೇ ಮುಂದೆ ಬಂದು,  “ಕಾಕಿ ಇನ್ನು ಮುಂದಿನ ಕೆಲಸ ಮಾಡಬೇಕಲ್ಲ ?”  

“ ನಿನ್ನ ಕಾಕಾ ಯಾವಾಗ್ಲೂ  ನಾನ್  ಸತ್ತರೆ ಬೆಳಗಾವಿಯಲ್ಲೇ ಅಂತಿಮ ಕಾರ್ಯ  ಮಾಡಬೇಕೆಂದು ಹೇಳುತ್ತಿದ್ದರು. ಇದನ್ನು ಕೇಳಿ  ಇನ್ನು ಈ ವಿಷಯ ನನ್ನ ತಲೆಗೆ ಬೀಳೋದು ಬೇಡವೆಂದು ಮೆಲ್ಲನೆ ಅಲ್ಲಿಂದ ಜಾರಿಕೊಳ್ಳಲು ಹೊರಬಂದ.  ಆಗಲೇ ಎದುರಿಗಿದ್ದ  ಹಿರಿಯ ಪೋಲಿಸ್ ಅಧಿಕಾರಿ ಪುರುಷೋತ್ತಮ ನಾಯಕ್,  “ ಏನ್  ಆದಿತ್ಯ ಏನಂತೆ ವಿಷಯ ? ಕಳೇಬರ ಸುಡೋದು ಬೇಡವಾ ?  ಆ ಅಂಬುಲೆನ್ಸ್ ಡ್ರೈವರ್ ಆಗಿಂದ ಒದರಾಡುತ್ತಿದ್ದಾನೆ”. ಶವವನ್ನು ಊರಿಗೆ ಕೊಂಡೊಯ್ಯ ಬೇಕಾಗುವುದು ಎಂದು ತಿಳಿದಾಕ್ಷಣ  ಅವನೂ ಮುಖ ಸಪ್ಪಗೆ ಮಾಡಿ ಪಾನ್ ತಿಂದು ಬರ್ತ್ತೇನೆ ಎಂದು ಹೇಳಿ ಹೋದವನ ಪತ್ತೆ ಇಲ್ಲ. ಇನ್ನು ಅಕ್ಕ ಪಕ್ಕದವರು ಮಕ್ಕಳು ಶಾಲೆಯಿಂದ ಬರುವ  ಹೊತ್ತಾಯಿತು ಎಂದು ಬಿಡಿ ಬಿಡಿಯಾದರು.  ಯಾರೇ ಅದ್ರೂ ಬರುವುದಾದರು ಹೇಗೆ? ಕಾಕಾ ಆ ಕನೆಕ್ಷನೇ ಇಟ್ಟಿರಲಿಲ್ಲ. ಎಲ್ಲಾ ಬಿಟ್ಟು ಅಲ್ಲಿದ್ದ ನಾಲ್ಕೈದು ಕನ್ನಡಿಗರೊಂದಿಗೂ ಸರಿಯಾದ ಮಾತುಕತೆ ಇದ್ದಿರಲಿಲ್ಲ. 

ಆದಿತ್ಯನ ಮುಂದಿಟ್ಟ  ಹೆಜ್ಜೆಯನ್ನು ಹಿಂದಿಡಲು ಒತ್ತಾಯಿಸಿದ್ದು, ಮತ್ತದೇ  ಅವನೊಳಗಿನ  ಸೈತಾನ.  ಆ ಸೈತಾನನಿಗೆ ಯಾರ ಅನುಮತಿ, ಮದುಮತಿ, ಬಾನುಮತಿ  ಎಂಬ ಲೆಕ್ಕವಿಲ್ಲ. ಒಂದು ಕೆಲಸ ಆಗಬೇಕೆಂದರೆ. ಮತ್ತೆ ಯಾರ ಅಪ್ಪನ ಗಂಟು ಹೋದ್ರು  ಅವನಿಗೆ ಲೆಕ್ಕಕ್ಕಿಲ್ಲ. ಮನೆಗೆ ಬಂದವನೆ  ಕಪಾಟಿನ ಮೇಲೆ ತನ್ನ ಬ್ಯಾಗನ್ನು ತಡಕಾಡಿದ. ಅದು ಸಿಗದಾಗ ತನ್ನ ಒಂದು ಶರ್ಟು ಪ್ಯಾಂಟ್ ಹಾಗೂ ಟಾವೆಲನ್ನು ಬಟ್ಟೆಯ ಚೀಲದಲ್ಲಿ ತುರುಕಿಸಿ, “ಕಾಕಾನ ಶವವನ್ನು  ಬೆಳಗಾವಿ, ಅವರ ಊರಿಗೆ ಕೊಂಡು ಹೋಗುತ್ತಿದ್ದಾರೆ. ಯಾರೂ ಜೊತೆಗೆ ಹೋಗಲು ತಯಾರಿಲ್ಲ. 

ಪ್ರಶ್ನೆಗಳ ಸರಮಾಲೆಗಳನ್ನು ಬಿಚ್ಚುತ್ತಾ  ಮೇಘನಾ “ ಅದಕ್ಕೇ ?”   ಎನ್ನುವಷ್ಟರಲ್ಲಿ 

“ಅದಕ್ಕೆಂದೇ  ನಾನು ಹೋಗ್ತಿರೋದು”.

ಸಿಡಿಮಿಡಿಗೊಂಡ ಆಕೆ ,  “ ನನಗೇನೂ ಗೊತ್ತಿಲ್ಲ. ನೀವು ನಿಮ್ಮ ಅಮ್ಮನಲ್ಲಿ ಕೇಳಿ..

ಅಮ್ಮನಿಗೆ ನೀನೇ ಹೇಳು ಚಿನ್ನಾ…….. ಎನ್ನುತ್ತಾ ತುಂಟ ನಗುವಿನಿಂದ ತುಟಿಯನ್ನು ಕೊಳಲು ಮಾಡಿ ಮೇಘನಾಳ ಬಳಿ ಬಂದು ಸಿಟ್ಟನ್ನು ಕುಗ್ಗಿಸುವಂತೆ ನಟಿಸಿ ರಂಗಾಗಿ ಒಂದೆರಡು ಮುತ್ತನ್ನಿಡಿ   ಮನೆಯಿಂದ ಹೊರ ಬಂದ. ಪ್ರತಿ ಬಾರಿಯಂತೆ ಈ ಬಾರಿಯೂ ಮೇಘನಾ ಅವನ ಮಾತಲ್ಲಿ ಕರಗಿಹೋದಳು. ಇನ್ನು ಅಮ್ಮನೆದುರು ಯಾವ ಹೊಸ ಕತೆ ಹೇಳೋದು ಎಂಬ ಚಿಂತೆಯಲ್ಲಿ ಆಕಾಶ ನೋಡುತ್ತಾ ನಿಂತಳು. 

ಬೊಲ್ಯರೋ ಅಂಬುಲೆನ್ಸ್ ಡ್ರೈವೆರ್ ರಾಜು ಮಂಡೆ ಬಿಸಿಯಲ್ಲಿ ಮಾಣಿಕ್ ಚಂದ್  ಜಗಿಯುತ್ತಾ  ಗೇಟ್ ಬಳಿಯಿರುವ ಆಲದ ಮರದ ಕೆಳಗೆ ಮನಸ್ಸಲ್ಲಿ ಶಾಪಯಿಡುತ್ತಿದ್ದ.  ಅಂತು ಇಂತೂ ದೇಹ ಹೊರಗೆ ಬಂತು. ಅಲ್ಲೂ ಶಾಸ್ತ್ರ ಕೈಬಿಡಲಿಲ್ಲ.  ಹೊರಡುವ ಸಮಯ, ಬೀಳ್ಕೊಡುವ ಜನರ ದುಃಖ , ನಿರಾಳತೆ , ನಿರ್ಜಿವವಾಗಿರುವ ಕಾಕಾನ  ದೇಹವನ್ನಿಡುವಾಗ ಉತ್ತರ ಮುಖ ದಕ್ಷಿಣ ಮುಖ ಎಂಬ ತರ್ಕ ವಿತರ್ಕಗಳನ್ನು  ಮುಗಿಸಿ ಒಂಬತ್ತು ಗಂಟೆಗೆ ಗಾಡಿ ಹೊರಟಿತು. ಆದಿತ್ಯ ರಾಜುವಿನ ಜೊತೆ ಎದುರಿಗೆ ಕೂತರೆ ಉಳಿದವರು ಹಿಂದೆ ಕುಳಿತರು.  ದೇಹವನ್ನು ಸೀಟಿನ ಎಡಬದಿಗಿರುವ ಶವದ ಪೆಟ್ಟಿಗೆಯಲ್ಲಿಟ್ಟಿದ್ದರು. ಶುಭ್ರತೆಯನ್ನು ಹಾಸಿ,  ತಂಪನ್ನು ಹೊದ್ದು ಮಲಗಿದ್ದ ಕಾಕ.  ಜತೆಗಿದ್ದವರ ಮನದ ನೂರಾರು ಪ್ರಶ್ನೆಗಳಿಗೆ ಉತ್ತರವಿಲ್ಲದ ಮೌನ. 

ಗಾಡಿ ಪುಣೆಯ ಹೈವೇಯತ್ತ   ಬರುತ್ತಿದ್ದಂತೆ ಕಾಕಿಗೆ ಮುಗ್ಗುರಿಸಿ ಬರುವ ವಾಂತಿಯಿಂದಾಗಿ ಗಾಡಿ ನಿಲ್ಲಿಸಲು ಹೇಳಿದಾಗ ಆದಿತ್ಯ ಆಕೆಯನ್ನು ಕೈ ಹಿಡಿದು ರಸ್ತೆಯ ಪಕ್ಕಕ್ಕೆ ಕರೆದು ಹೋಗಿದ್ದ.  ಹಾಗೆಯೇ ಹೊಟ್ಟೆ ತಣ್ಣಗಾಗಲು ಐಸ್ಕ್ರೀಮ್ ಕೊಡಿಸಿ ಉಳಿದವರಿಗೂ ತಂದಿದ್ದ. ಮೂರ್ನಾಲ್ಕು ಬಿಸ್ಲೇರಿ ನೀರಿನ ಬಾಟಲಿ ತಂದು ಆಗಾಗ ಕುಡಿಸಿ ಎಂದು ಹೇಳಿದನು. 

ಇದೆಲ್ಲವನು ನೋಡಿ ರಾಜು , ಏನಾಗಿತ್ತು ನಿಮ್ಮ ತಂದೆಯವರಿಗೆ ? ಎನ್ನಲು, “ ಅವರಿಗೆ ತನ್ನ ನೌಕರಿಯ ಬಗ್ಗೆ  ಸ್ವಲ್ಪ ಅಹಂ ಹೆಚ್ಚಾಗಿತ್ತು”   ಅವರು ನನ್ನ ಅಪ್ಪನ್ನಲ್ಲ . ನಾವು ಒಂದೇ ಚಾಳ್ ನಲ್ಲಿರೋರು. ಅಂದಾಗ ರಾಜುವಿಗೆ ಸಣ್ಣ ಆಶ್ಚರ್ಯ ಹಾಗೂ ಆಪ್ತತೆ. ಆ ಬಳಿಕ ದಾರಿ ಉದ್ದಕ್ಕೂ ಅವರಿಬ್ಬರ ಎಡೆಬಿಡದ ಮಾತು .  ಆದಿತ್ಯ ಎಲ್ಲೆಲ್ಲಿ ಗಾಡಿ ನಿಲ್ಲಿಸಲು ಹೇಳಿದರೂ ಚಾ...ಚೂ  ಅನ್ನದೆ ನಿಲ್ಲಿಸುತ್ತಿದ್ದ. ಮಧ್ಯಾಹ್ನ  ಊಟಕ್ಕೆ ಒಳ್ಳೆಯ ಧಾಬಾಕ್ಕೆ ಹೋಗೋಣವೆಂದಾಗ  ರಾಜುನಿಗೆ ಗೊತ್ತಿರುವಲ್ಲಿ ಕರೆದುಕೊಂಡು ಹೋದ.   ಗಾಡಿಯನ್ನು ಮಾತ್ರ ಸ್ವಲ್ಪ ಅಂತರದಲ್ಲೇ ನಿಲ್ಲಿಸಿ  ಒಳಹೊಕ್ಕರು.  ರಾಜು ಆದಿತ್ಯನಲ್ಲಿ " ಅಣ್ಣ ಮೂಡ್ ಲೈಟ್ ಮಾಡ್ಲಿಕ್ಕಿದ್ರೆ ಹೇಳಿ,  ನನ್ನ ಬಳಿ ಬಿಯರ್ ಇದೆ.  ಬೆರಗು ಕಣ್ಣುಗಳಿಂದ ಆದಿತ್ಯ,  “ಕುಡಿಯಬಹುದಿತ್ತು, ಆದ್ರೆ ಈಗ ಸರಿ ಕಾಣಲಿಕ್ಕಿಲ್ಲ ಬಿಡು ಎಂದು ದಾಲ್  ರೊಟ್ಟಿ  ಪಲ್ಯ ತಿಂದು ಕೈ ತೊಳೆದಿದ್ದ. ಆದರೆ ಮಧ್ಯಾಹ್ನ ಮಾತ್ರ ತಾನೇ ಕೇಳಿ ಫ್ರೆಶ್ ಆಗಲೆಂದು ಒಂದು ಕಡೆ  ಗಾಡಿ ನಿಲ್ಲಿಸಿದಲ್ಲಿ ಒಂದು ಬಾಟಲಿ ಬೀಯರ್ ಒಡೆದು ಗಟ - ಗಟನೆ  ಕೊರಳಿಗೆ ಇಳಿಸಿದ್ದ.   ಅಂಬುಲೆನ್ಸಿನಲ್ಲಿರುವ ದೇಹಕ್ಕೆ  ಇದ್ಯಾವುದಕ್ಕೂ ಯಾವ ಸಂಬಂಧವಿಲ್ಲದಂತೆ ನಿರ್ಲಿಪ್ತತೆ.

ಮಧ್ಯ ಜಿಟಿ ಜಿಟಿ ಮಳೆಯಿಂದಾಗಿ ರಾಜು ಹದವಾಗಿ ಗಾಡಿ ನಡೆಸಿದ.  ಬೆಳಗಾವಿ ಹೋಗಿ ಮುಟ್ಟುವಷ್ಟರಲ್ಲಿ  ಕತ್ತಲಾಗಿತ್ತು. ಊರಲ್ಲಿ ಲೈಟು ಬೇರೆ ಇಲ್ಲ. ಅಲ್ಲಿ ದೇಹವನ್ನು ನೆಲದೊಳಗೆ ಹೂಳುವ ತಯಾರಿ ಮಾಡಿಟ್ಟಿದ್ದರು. ಅಲ್ಲಿಯ ನಿಯಮಗಳೇ ಬೇರೆ. ಅದಕ್ಕೊಂದೆರಡು ತಾಸು ಕಳೆಯಿತು. ರಾಜು ಬದಿ ಬದಿ  ಸರಿಯುತ್ತಾ  ಅದಿತ್ಯನಲ್ಲಿ   “ಇನ್ನು ನಾನು ಹೊರಡುವುದೇ ಸರಿ”  ಎಂದು ಅಲ್ಲಿಂದ ಜಾರಲು ನೋಡಿದ . 

ಅಂತಿಮ ಸಂಸ್ಕಾರದ ವಿಧಿ ವಿಧಾನ ಇನ್ನೂ ಮುಗಿದಿರಲಿಲ್ಲ. ಅಲ್ಲಿಯೇ ಉಳಿದರೆ ಈ ರಾತ್ರಿ ಬೇರೆ ಗಾಡಿ ಸಿಗುವುದು ಕಷ್ಟ. ಅದಲ್ಲದೆ ಇಲ್ಲಿ ಬೇರೆ ಯಾರ ಪರಿಚಯವಿಲ್ಲ ಪರಿಚಯವಿದ್ದವರು ದುಃಖದ ಮಡುವಿನಲ್ಲಿ ಮುಳುಗಿ ಅವರಿಗೆ ಅವರ ಶುದ್ದಿ ಇಲ್ಲ. ಎಂದು ತಿಳಿದ ಆದಿತ್ಯ,“  ಹೇಗೂ ಬಂದಿದ್ದೇವೆ ಸ್ವಲ್ಪ ನಿಂತು ಹೋಗೋಣ ”  ಎಂದು ಕೈ ಹಿಡಿದು ಒತ್ತಾಯಿಸಿದಾಗ ರಾಜುವಿಗೆ ಏನೂ ಹೇಳಲಾಗಲಿಲ್ಲ..




ಉಸಿರು ಬಿಟ್ಟ ದೇಹ ಸುಮಾರು ಇಪ್ಪತ್ತು ತಾಸಿನಿಂದ  ಕೊರಡಿನಂತಾಗಿತ್ತು . ಇನ್ನು ನೆಲದೊಳಗೆ ಕೂತ ಭಂಗಿಯಲ್ಲೇ ಹೂಳುವ ಸಂಪ್ರದಾಯಅವರದ್ದು. ಸತ್ತ ಕೆಲವೇ ಸಮಯದಲ್ಲಿ ಕಾಲು ಮಡುಚಬೇಕಾಗಿತ್ತು.  ಹಿಮದ ಪೆಟ್ಟಿಗೆಯಲ್ಲಿ ಮಲಗಿಸಿದ ಶವ ಸೆಟೆದುಕೊಂಡಿತ್ತು.  ಕಾಲನ್ನು ಮಡುಚಬೇಕಾದರೆ,   ಮುರಿಯದೆ ಬೇರೆ ದಾರಿಯಿರಲಿಲ್ಲ. ಮನೆಯವರಿಗೆ ಅದೊಂದು ವ್ಯಕ್ತಿಯಾದರೂ, ಉಳಿದವರಿಗೆ ಅದೊಂದು ದೇಹ ಮಾತ್ರ.  ಆಗಲೇ ನೆಲದಡಿಯಲ್ಲಿ  ಕೂರಿಸುವ ಪ್ರಯತ್ನ ಶುರುವಾಯಿತು. ಒಬ್ಬ ಧಡೂತಿ ವ್ಯಕ್ತಿ  ಕಾಕಾನ ಶವದ ಸೊಂಟವನ್ನು ಕಾಲಿನಿಂದ ಊರಿ ತೋಳುಗಳನ್ನು ಬಿಗಿಹಿಡಿದು ತನ್ನೆಲ್ಲಾ ಶಕ್ತಿಯಿಂದ ಎಳೆದು ಸೊಂಟವನ್ನು  ಲಟಲಟನೆ ಮುರಿದು ತುಂಡರಿಸಿದಾಗ ಕಸಾಯಿ ಖಾನೆಯಲ್ಲಿಯ ಮೇಕೆ, ಕುರಿಯ ರಕ್ತ ಸೋರುವ ಮಾಂಸದ  ರಾಶಿಯನ್ನೇ   ಹೂತಂತೆ ಕಾಣಿಸಿತು. ಆದಿತ್ಯನಿಗೆ ಇವೆಲ್ಲ ವಿಲಕ್ಷಣವಾಗಿ ಕಂಡಿತು.  ‘ ಮನುಷ್ಯನ ಅಸ್ತಿತ್ವ ಇಷ್ಟೇನಾ?! ಜೀವಂತವಾಗಿದ್ದಾಗ ನಾನು ಎಂಬ ಅಹಂಕಾರ ಹೊತ್ತ ,  ದೇಹ ‘ ಈ ರೀತಿ ಚೂರು ಚೂರಾಗುವುದನ್ನು ಕಂಡು ಇದ್ದಲ್ಲಿಯೇ  ತತ್ತರಿಸಿದ್ದ . ಅವನ ಮನಸ್ಸು ತಲ್ಲಣಗೊಂಡಿತ್ತು.  ರಾತ್ರಿ ಸುಮಾರು ಒಂದೂವರೆ ಗಂಟೆಗೆ ಎಲ್ಲಾ ವಿಧಿ ವಿಧಾನ ಮುಗಿಯಿತು. ಅಷ್ಟೊತ್ತರಲ್ಲಿ   ಎಲ್ಲರ ದೇಹದ ಬ್ಯಾಟರಿಯ ಚಾರ್ಜೂ  ಮುಗಿದಿತ್ತು . 

 ಕಾಕಿ ಬಿಕ್ಕಳಿಕೆಯ ಜತೆ ಕೈಯಲ್ಲಿ ಸೋಪು - ಟಾವೆಲು ಕೊಡುತ್ತಾ“, ಕೆಳಗೆ ಬಾವಿ ಇದೆ. ಸ್ನಾನ ಮಾಡಿ ಬರುವಿರಂತೆ. ‘ ಈ ಮೈ ಕೊರೆಯುವ ಚಳಿಗೆ  ಇಪ್ಪತ್ತು ಮೂವತ್ತು ಮೆಟ್ಟಿಲು  ಕೆಳಗಿಳಿದು ಸ್ನಾನ ಮಾಡುವುದು ಒಂದೇ, ಇಲ್ಲಿಂದಲೇ  ದಬಕ್ಕನೆ ಬಾವಿಗೆ ಬಿದ್ದು ಸಾಯೋದು  ಒಂದೇ.’   ಹಾಗಾಗಿ ಒಂದು ತಂಬಿಗೆಯಲ್ಲಿ ನೀರು ತುಂಬಿ ತನಗೆ ತಾನೇ ಸಿಂಪಡಿಸಿ “ಮನ ಶುದ್ದವಾದರೆ ತನು ಶುದ್ದ“ವೆಂದು ಮೆಲ್ಲಗೆ ಹೇಳಿಕೊಂಡನು. ಈ ಸ್ನಾನಕ್ಕಿಂತ  ಒಂದು ಕಪ್ ಚಹಾ ಕುಡಿಸ್ತಿದ್ರೆ ಚೆನ್ನಾಗಿರ್ತಿತ್ತೆಂದು ಆಲೋಚಿಸುವಷ್ಟರಲ್ಲಿ , “ಜಳಕ ಮಾಡಿರ್ತಿದ್ರೆ ಚಹಾದ್ರೂ ಕುಡಿದು ಹೋಗಬಹುದಿತ್ತು ಎಂದು ಕಾಕಿ ರಾಗವಾಗಿ ಅವರ ಆಸೆಗೆ ಅಲ್ಪವಿರಾಮ ಕೊಟ್ಟಂತಾಯಿತು. ಇನ್ನಿಲ್ಲಿ ನಿಂತರೆ ರಾಜು ತನ್ನನ್ನು ಬಿಟ್ಟು ಹೋಗುವುದು ಗ್ಯಾರಂಟಿ . ಅವನಿಗೆ ಕೊಡಬೇಕಾದ ಹಣಕೊಟ್ಟು ಬಿಳ್ಕೊಡುವಾಗ ಕಾಕಿ ಗದ್ಗತಳಾಗಿದ್ದಳು. ಅವಳ ಕಣ್ಣಿನಲ್ಲಿ ಅಹಂ , ಭ್ರಮೆ ಕರಗಿ ಒಂದೇ ಸವನೆ ಹರಿಯಲಾರಂಭಿಸಿತು. ಅವಳನ್ನು ಸಮಾಧಾನಿಸಿ ಹೊರಟ ಆದಿತ್ಯನನ್ನು ಹಿಂದೆ ನೋಡಲು ಬಿಡದ ಅವನೊಳಗಿನ ಸೈತಾನನಿಗೂ ದುಃಖ ಉಮ್ಮಳಿಸಿ ಬಂದಿತ್ತು. 

******

ದಣಿದ ದೇಹ ಹಾಗೆಯೇ ನಿದ್ದೆಗೆ ಜಾರಿದ್ದು ಆದಿತ್ಯನಿಗೆ ಗೊತ್ತೇ ಆಗಿರಲಿಲ್ಲ ಇಬ್ಬರಿಗೂ ಎಚ್ಚರವಾದಾಗ ಬೆಳಗಿನ  ೧೦:೩೦ ಹೊಟ್ಟೆ ಚುರು ಚುರು ಅನ್ನುತಿತ್ತು. ವಾಶ್ ರೂಮಿನ ನಲ್ಲಿ ತಿರುಗಿಸಿದಾಗ ಬಿಸಿ ನೀರು ಬರುತ್ತಿದ್ದದ್ದನ್ನು ನೋಡಿ ಸ್ನಾನ ಮುಗಿಸಿ ಇಬ್ಬರೂ ಕೆಳಗಡೆಯಿರುವ ರೆಸ್ಟೋರೆಂಟಿಗೆ ಹೋಗಿ ಆಮ್ಲೇಟ್ ಪಾವ್  ಆರ್ಡರ್ ಕೊಟ್ಟಾಗ , ಮಂಗಳವಾರ ಸಿದ್ದಿವಿನಾಯಕ ಹೋಗುವುದರಿಂದಾಗಿ ಶುದ್ಧ ಶಾಖಾಹಾರಿ ಅನುಷ್ಠಾನ ಪಾಲನೆ ಮಾಡಲೆಂದು ಬರೆ ವಡಾ ಸಾಂಬಾರ ಕಾಫಿಯಿಂದಲೇ ಹೊಟ್ಟೆ ತಣ್ಣಗಾಗಿಸಿ,  ಎಲ್ಲಾ ಬಿಲ್ ಚುಕ್ತಾ ಮಾಡಿ ಸಿಗರೇಟಿನ ಒಂದು ಪ್ಯಾಕೇಟನ್ನು ಜೇಬಿನಲ್ಲಿಟ್ಟನು.  ನಿನ್ನೆಯ ದೇಹದ ಅಂತಿಮ ಯಾತ್ರೆ ಮುಗಿಸಿ ಗಾಡಿಯನ್ನು ಪಕ್ಕದ ಸರ್ವಿಸ್ ಸೆಂಟರ್ಗೆ ಕೊಂಡ್ಹೋಗಿ  ಒಳಗೆ ಸರಿಯಾಗಿ ಸ್ವಚ್ಛಗೊಳಿಸಿದ ಬಳಿಕ ದೇವರ ಪಟಕ್ಕೆ ದುಂಡು ಮಲ್ಲಿಗೆಯ ಹಾರ ತೂಗು ಬಿಟ್ಟು. ಅಗರಬತ್ತಿ ಹೊತ್ತಿಸಿದ ಬಳಿಕ ಅವರಿಬ್ಬರು ಮುಂದೆ ಸಾಗಿದರು. 

ಆದಿತ್ಯ ಒಂದೇ ದಿನದಲ್ಲಿ ರಾಜುವಿನ ಖಾಸ್ ಆದ.   ಕಾರಣ ಅವನ ಉದಾರತೆಯೇ ?  ಅವನಲ್ಲಿರುವ ಖಡಕ್ ಮಾನವೀಯತೆಯೇ ?  ಅಥವಾ ಎಲ್ಲಿಯೂ ಅವನಿಗೆ ಜೇಬಿಗೆ ಕೈ ಹಾಕಲು ಬಿಡಲಿಲ್ಲದ್ದೇ ಕಾರಣವೋ ಏನೋ?     ಮಾತಲ್ಲಿ ಏಕವಚನ ,ಹಾಸ್ಯ ಚಟಾಕಿಯೊಂದಿಗೆ ಮುಂಬಯಿ  ಬೈಗುಳಗಳು ಆಶ್ಚರ್ಯ ಮೂಡಿಸದೆ ಅವರಿಬ್ಬರ ನಾಲಗೆಗಳಲ್ಲಿ ನಲಿದಾಡುತ್ತಿದ್ದವು.  

ಒಂದು ಪಯಣ ಮುಗಿಯದೇ ಇನ್ನೊಂದು ಹೊಸ ಟೂರಿಗೆ ಹೋಗುವ ಯೋಜನೆಯನ್ನೂ ಕೈಗೊಂಡರು.  ಅದಕ್ಕೆ ಒಳ್ಳೆಯ ಮೈಲೇಜು ಕೊಡಬಲ್ಲ ಈ  ಯಮಧರ್ಮನ ರಥವನ್ನೇ ಬಳಸುವುದಾಗಿ ನಿರ್ಣಯಿಸಿದ ,   ಆದಿತ್ಯನಿಗೆ ವಿಚಿತ್ರ ವಿಶೇಷವೆನಿಸಿತು.  ಹೌದು ದೋಸ್ತ್ ಈ ನನ್ನ ರಥ   ಆರಾಮದಾಯಕ  ಸವಲತ್ತಿನೊಂದಿಗೆ ಬಿಯರ್ ಬಾಟಲಿಗಳನ್ನು ದಿನವಿಡಿ ತಂಪಾಗಿಡುವುದೂ ಸುಲಭ." ಎಂದು ರಾಜು ಸಹಜವಾಗಿ ಹೇಳಿದ . 



ಮುಂದೆ ವೈನ್ ಶಾಪ್ ಕಂಡಾಗಲೇ ಪಕ್ಕ ಗಾಡಿ ನಿಲ್ಲಿಸಿ, ಐದು ಬಾಟಲಿ ಚಿಲ್ದ್ ಬಿಯರ್ ಖರೀದಿಸಿ ಗಾಡಿಯಲ್ಲಿಟ್ಟು  ಆದಿತ್ಯನತ್ತ ಕಣ್ಣು ಮಿಟುಕಿಸಿ  ಒಂದು ಕಿರುನಗು ಚೆಲ್ಲಿ ಗಾಡಿ  ಹತ್ತಿದ. ರಾಜುವಿನ ಮಾತು ಒಂದೊಂದೇ ಒಗಟುಗಳನ್ನು ಬಿಡಿಸಿದಂತೆ ಸರಳವಾಗಿ  ಮುಂದುವರಿಯುತ್ತಿತ್ತು.



 

 


Comments

  1. ಬಹಳ ಚೆಂದ ಇದೆ ಬರಹ. ಇಷ್ಟವಾಯಿತು.

    ReplyDelete
  2. ಬಹಳ ಚೆಂದ ಇದೆ ಬರಹ. ಇಷ್ಟವಾಯಿತು.

    ReplyDelete
  3. Nice humor and good narration for a simple incident

    ReplyDelete
  4. ಶ್ರೀಮತಿ ಹೇಮಾರವರೇ ಲೇಖನಕ್ಕೆ ಧನ್ಯವಾದಗಳು, ಲೇಖನ ಚೆನ್ನಾಗಿ ಮೂಡಿ ಬಂದಿದೆ

    ReplyDelete

Post a Comment