ಒಂದು ಹರಳಿನ ಸುತ್ತಮುತ್ತ.....

ಒಂದು ಹರಳಿನ ಸುತ್ತಮುತ್ತ....

ನಾ ಶ್ರೀ ಹೆಬ್ಳೀಕರ್



ಈ ಘಟನೆ ನಡೆದದ್ದು ರಜಾಕಾರ ಹಾವಳಿ ಆಗೋವದಕಿಂತ ಮೊದ್ಲು. ಅಂದರೆ, ಸುಮಾರಾಗಿ ೧೯೪೫-೪೬ರಲ್ಲಿ. ಚಿಕ್ಕಂದಿನಲ್ಲಿ ತಾತ ಬೇರೆಯವರಿಗೆ ಹೆಳುತ್ತಿರುವಾಗ ತಿಳಿದ ಘಟನೆಗಳು. ಪ್ರಸ್ತುತ ಘಟನೆ ಮನಸ್ಸಿನಲ್ಲಿ ಇನ್ನೂ ಅಚ್ಚಾಗಿ ‌ಉಳಿದಿದೆ.

ಧಾರವಾಡದ ಲೈನ್ಬಜಾರದಾಗ ಕುಸರ ಕುಸರ ಸಕ್ಕರಿ ಮ್ಯಾಲ ಹೊರಲ್ಯಾಡಿ ನಿಂತ ಫೇಡಾ, ಅದೆ ಠಾಕೂರ್ ಫೇಡಾದ ಅಂಗಡಿ. ಅದರ ಎದರಗಡೆ ತ್ರಿಲೋಚನಲಾಲರ ಹುರಮಂಜ ಬಣ್ಣಾ ಬಳಿದ ದೊಡ್ಡ ಗೋಡಿ ಮೋಟಾರ್ ಗ್ಯಾರೇಜ್. ಸಂಜಿಮುಂದ ಊರಾಗಿನ ಗಣ್ಯರಾದ ಜಕ್ಲಿ ಭೀಮಣ್ಣ,ತಡಸ ಜಯರಾಯರು, ಪ್ರಯಾಗ ರಾಯರು ಬಂದು ಸೇರುವ ಒಂದು ಅಡ್ಡಾ. ಅವರ ಜೋತೆಗೆ ಹೆಚ್ಚಿನವರು ಆಂಗ್ಲರ ಆಳ್ವಿಕೆಯಲ್ಲಿ ಕೆಲಸಮಾಡುತ್ತಿರುವ ರೆವಿನ್ಯೂ ಆಫೀಸರ್, ತಹಶಿಲ್ದಾರ, ರೈಲ್ವೆ ಆಫೀಸರ್'ರು ಇದ್ದರು. ಆ ಕಾಲಕ್ಕ ಧಾರವಾಡ ಒಂದ ದೊಡ್ಡ ಜಿಲ್ಲಾ ಆಗಿತ್ತು. ದಿನಾಲೂ ಬರ್ತ ರೆವಿನ್ಯೂ ಸಾಹೇಬರು ಕಚೇರಿ ಒಳಗಿಂದ ಇಂಗ್ಲಿಷ್ ನ್ಯೂಸ್ ಪೆಪರ್ ತರವವರು. ಎಲ್ಲರೂ ಓದಿ ಅಂದಿನ ದಿನಗಳ ದೇಶ ವಿದೇಶಗಳ ವಿದ್ಯಮಾನಗಳ ಬಗ್ಗೆ ಚರ್ಚಿಸಿ, ಜಕಾತಿ ಚಾಳದ ಉಡಪಿ ಭಟ್ಟರ ಮನೆಯಿಂದ ಬರುವ ತಿನಿಸು ಚಾ'ದೋಂದಿಗೆ ಮುಕ್ತಾಯವಾಗುವದು.

ಗ್ಯಾರೇಜನ ಗೋಡೆಗೆ ಹತ್ತಿ ನಾಲ್ಕರಿಂದ ಐದು ಟಾಂಗಾ ಕಾಯಂ ನಿಂತಿರೊದು. ಅದರಲ್ಲಿ ಎಲ್ಲವೂ ಕಾಠೆವಾಡಿ ಕುದುರೆಗಳೇ...ಅವಕ್ಕೆಎಡ ಬಲ ಈಸು ಹಿಡಿಯಲು ಥಡಿ. ಕುದುರೆ, ಮುಂದಷ್ಟೆ ನೋಡಲು ಎಣ್ಣೆ ಮಸಿಗಟ್ಟಿದ ಮುಖವಾಡ. ಅದರ ಮೇಲೆ ಕೋಳಿ ಪುಚ್ಚದಿಂದ ಮಾಡಿದ ಹಸರು,ಹಳದಿ ಮತ್ತು ಕೆಂಪು ಬಣ್ಣದ ತುರಾಯಿ. ಕುದುರೆಗೆ ತಕ್ಕಂತೆ ಕೆಸರಿ ಬಣ್ಣದ ಟಾಂಗಾಗಳು. ರಿಬ್ಬನ್ನ,ಗಂಟಿ ಕಟ್ಟಿ ಅಲಂಕರಿಸಲ್ಪಟ್ಟವು.

ಹೀಗೆ ಒಂದು ದಿನ ಒಬ್ಬ ಆರಡಿ ಎತ್ತರದ ಸದೃಢ ಕಾಯದ ಬ್ರಿಟಿಷ್‌ ಮನುಷ್ಯ ಅಲ್ಲಿಗೆ ಬಂದು ಟಾಂಗಾಸಾಬಿಯ ಜೋತೆಗೆ ಸಂಭಾಷಣೆಯಲ್ಲಿದ್ದ. ನಿಮ್ಗೆ ಎಲ್ಲಿ ಕರಕೊಂಡ ಹೋಗಬೇಕು ಎಂದು ಸಾಬಿಗಳು ಕೆಳುತ್ತಿರುವರು. ಮತ್ತೆ ಮತ್ತೆ ಕುದುರೆಯ ಕಡೆಗೆ ಕೈ ಮಾಡಿ ಏನೋ ಹೆಳುತ್ತಿರುವ. ಒಬ್ಬರ ಮಾತು ಒಬ್ಬರಿಗೆ ಅರ್ಥವಾಗುತ್ತಿಲ್ಲ. ಆ ಗದ್ದಲವನ್ನು ನೋಡಿ ಒಳಗೆ ಕುಳಿತ ಗಣ್ಯರು ಹೊರ ಬಂದು ಕೇಳಿದಾಗ, ನಿಂತ ಟಾಂಗಾಗಳಲ್ಲಿ ಒಂದನ್ನು ತೋರಿಸಿ, ಆ ಆಂಗ್ಲನು ೮೦೦/-ರೂಪಾಯಿಗೆ ಖರೀದಿ ಮಾಡುವ ವಿಷಯ ತಿಳಿಸಿದ. ಅದರ ಬಗ್ಗೆ ಸಾಬಿಗೆ ತಿಳಿ ಹೇಳಿದಾಗ, ಅದಕ್ಕೆ ಸಾಬಿ *_'ಹಮಾರಾ ಜಿಂದಗಿ ಇಸಿಸೆ ಚಲತಾ ಹೈ ಸಾಬ, ನಹಿ ದೆಸಕತೆ'_ * ಅಂದದಕ್ಕೆ. I want this tanga. How much He wants, I am ready to pay. ಎಂದು ದುಂಬಾಲು ಬಿದ್ದ ಫಿರಂಗಿ ಮನುಷ್ಯ. ಇದನೇಲ್ಲ ಸಾಬಿಗೆ ತಿಳಿ ಹೇಳಿ. ಈ ಆಂಗ್ಲ ಖರೀದಿಸಲು ಆಗದ ಒಂದು ದರವನ್ನು ಹೇಳು ನೋಡೋಣ ಎಂದಾಗ ಸಾಬಿ ತನ್ನ ಗೆಳೆಯರೊಂದಿಗೆ ಮಾತನಾಡಿ ಒಂದು ಒಂಮತಕ್ಕೆ ಬಂದು ೨೦೦೧/-ರೂಪಾಯಿಗೆ ಕೊಡುವದಾಗಿ ಅಂದನು. ಅದನ್ನೇ ಕಾಯುತ್ತದ್ದ ತಳಮಳಕ್ಕೋಳಗಾದ ಆಂಗ್ಲ, ಏನನ್ನೂ ವಿಚಾರಿಸದೆ ಕಿಸೆಯಿಂದ ಅವರು ಹೇಳಿದಷ್ಟು ಕೊಟ್ಟು, ಇನ್ನೊಮ್ಮೆ ಕುದುರೆ, *ಕುದುರೆ ಮುಖವಾಡ ಪರಿಕ್ಷಿಸಿ, ಮುಖವಾಡ ಮತ್ತು ಥಡಿಯನ್ನು* ಒಟ್ಟಿಗೆ ತೆಗೆದುಕೊಂಡು ಬೇರೆ ಒಂದು ಟಾಂಗಾದಲ್ಲಿ ಹಾಕಿ ಎಲ್ಲರಿಗೂ ಕೈಕುಲಕಿ ಟಾಂಗಾ ಹತ್ತಿ ಸ್ಟೇಷನ್ ಕಡೆಗೆ ಕೈ ಮಾಡಿ ಹೊರಡಲು ಹೇಳಿದನು. ಅಲ್ಲಿ ನಿಂತ ಎಲ್ಲರೂ ದೀಗ್ಬ್ರಮೆಯಾಗಿ ಆಂಗ್ಲನು ಟಾಂಗಾ ಹತ್ತಿ ಹೋಗುತ್ತಿರುವದನ್ನೇ ನೋಡುತ್ತ ನಿಂತಿದ್ದರು. ವ್ಯವಹಾರ ಮಾಡಿದ ಸಾಬಿಗೆ ಖುಶಿಯೋ ಖುಶಿ.

೮೦೦/-ರೂಪಾಯಿಗೆ ಯೋಗ್ಯವಾದ ಟಾಂಗಾಕ್ಕೆ ೨೦೦೧/- ಗಳಿಸಿಯಾಗಿತ್ತು. ಕುದುರೆಯ ಜೋತೆಗೆ ಟಾಂಗಾನೂ ತಿರುಗಿ ಬಂದಾಗಿತ್ತು. ಅಲ್ಲಿ ಇದ್ದ ಎಲ್ಲರಿಗೂ ಸಾಬಿಯಿಂದ ಚಾಹಾ ಪಾಣಿಯದ ವ್ಯವಸ್ಥೆಯೂ ಆಗಿತ್ತು.

ದಿನಗಳು ಹೀಗೆ ಉರುಳುತ್ತಿದ್ದವು. ಸಾಬಿ ಕುದುರೆಯ ಹೊಸ ಥಡಿ ಮುಖವಾಡದೊಂದಿಗೆ ತಾನೂ ಹೊಸ ಪಠಾಣಿ ಅರಬಿಯೊಂದಿಗೆ ಟಾಂಗಾ ನಡೆಸುತ್ತಿದ್ದ. ದಿನವೂ ಎಲ್ಲರೂ ಗ್ಯಾರೇಜ್ ನಲ್ಲಿ ಸೇರುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಏಳೆಂಟು ತಿಂಗಳುಗಳ ನಂತರ ಒಂದು ದಿನ ಸಂಜೆ ಇಂಗ್ಲೆಂಡ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಅಲ್ಲಿ ಬರುವ ಒಬ್ಬ ಅಧಿಕಾರಿಯ ಕೈಯಲ್ಲಿತ್ತು.

ಅದರಲ್ಲಿ ವಿಷಯ ಹೀಗಿತ್ತು, ಡೇವಿಡ್ ಕ್ಯಾಮರೂನ್ ಎಂಬ ಇತಿಹಾಸಕಾರ ಹಾಗೂ ನಿಧಿ ಶೋಧಕನ ಕೈಗೆ ಕರ್ನಾಟಕದ ರಾಜಮನೆತನದ ಪಟ್ಟದ ಕುದುರೆಯ ಹಣೆಪಟ್ಟಿಯಲ್ಲಿ *ಅತ್ಯಮೂಲ್ಯವಾದ ಮುಷ್ಟಿ ಆಕಾರದ ಪಚ್ಚೆ* ಸಿಕ್ಕಿರುವ ಬಗ್ಗೆ ವಿವರಣೆ ಇತ್ತು. ಯಾವುದೇ ದೋಷವಿರದ ಸ್ಪಟಿಕದಷ್ಟೆ ಸ್ವಚ್ಚ ಅತೀ ವಿರಳ ಪಚ್ಚ ಅದಾಗಿತ್ತು. ಹಣಿಪಟ್ಟಿಯ ಹಾಗೂ ಅಮೂಲ್ಯ ಪಚ್ಚೆಯ ಛಾಯಾಚಿತ್ರದೊಂದಿಗೆ ಲೇಖನ ಪ್ರಕಟಗೊಂಡಿತ್ತು.

ಗ್ಯಾರೇಜ್'ನಲ್ಲಿ ಕುಳಿತು ಕೇಳುತ್ತಿರುವ ಎಲ್ಲರೂ ಹೌ'ಹಾರಿ ಕುಳಿತ್ತಿದ್ದರು. ಹಿಂದೆ ಸಾಬಿಯ ಜೋತೆಗೆ ನಡೆದ ಸನ್ನಿವೇಶ ಮನದಲ್ಲಿ ಮರುಕಳಿಸಹತ್ತಿತು. *_ಮಸಿ ಎಣ್ಣೆ ಗಟ್ಟಿದ ಹಣಿಪಟ್ಟಿಯ ಮಧ್ಯದಲ್ಲಿ ಎಲ್ಲೋ ಸ್ವಲ್ಪ ಹಸಿರು ಬಣ್ಣದ ಗಾಜಿನ ತುಂಡಿನಂತಿರುವ ಪಚ್ಚೆ ಹರಳು_* ಬ್ರಿಟಿಷರ ಕೈಗೆ ಸೇರಿ ಬಿಟ್ಟಿತ್ತು. ಸಾಬಿಯೊಂದಿಗೆ ತಾವು ಸಹ ಕಳೆದು ಹೋದ ಪರಿಕಲ್ಪನೆಯ ಸುಳಿವು ಸಿಗದೆ ಮೋಸ ಹೋಗಿದ್ದರು.

ತಮ್ಮೊಳಗೆ ತಾವೂ ಪ್ರಶ್ನೆಗಳ ಸುಳಿಯಲ್ಲಿ ಸಿಲುಕತೊಡಗಿದ್ದರು. ಈ ಸನ್ನಿವೇಶ ತಮ್ಮ ಜೋತೆಗೆ ಆಗಿ ಹೋದ ಹಳೆಯ ಘಟನೆಗಳು ಮನದಲ್ಲಿ ಮರುಕಳಿಸ ತೋಡಗಿದವು.

ವಿದ್ಯಾರ್ಥಿಯಾಗಿದ್ದಾಗ ಅತ್ಯುತ್ತಮ ಗುರುಗಳು ಎಷ್ಟೋ ವಿಷಯಗಳನ್ನು ಮನದಟ್ಟಾಗುವಂತೆ ಗಣಿತದ ಕಲನಶಾಸ್ತ್ರ, ವಿಜ್ಞಾನದ ಮಹತ್ವ ಕಲಿಸಿದ್ದರು. ಆ ದಿನಗಳಲ್ಲಿ ನಿರ್ಲಕ್ಷಿಸಿ, ಜೀವನದ ಪ್ರತಿ ಘಟ್ಟದಲ್ಲೂ ಅದರ ಅವಶ್ಯಕತೆ ಕಂಡಾಗ, ಅತ್ಯಮೂಲ್ಯವಾದ ವಜ್ರ ವೈಡೂರ್ಯಗಳಂತಿದ್ದ ಗುರುಗಳ ಕಲಿಕೆ, ಉಪದೇಶ ಹಾಗೂ ಗುರುಗಳನ್ನು ಕಳೆದುಕೊಂಡ ಭಾಸವಾಗಿತ್ತು... *ರೇವ್ಯನು ಸಾಹೆಬರಿಗೆ.*

ಆಕೆ ಸುರದ್ರುಪಿ. ಸ್ಟೇಷನ್ ಮಾಸ್ತರಗೆ ಮದುವೆಯಾಗಿ ಧಾರವಾಡಕ್ಕೆ ಬಂದು ರೈಲ್ವೆ ಕ್ವಾರ್ಟರ್ಸದಲ್ಲಿ ಸಂಸಾರ ಹೂಡಿ ಆಗಲೇ ಹನ್ನೆರಡು ವರ್ಷ ಕಳೆದಾಗಿತ್ತು. ಸಹೃದಯಿ, ನಾಲ್ಕು ಮಕ್ಕಳ ತಾಯಿಯು ಆಗಿದ್ದಳು. ಧಾರವಾಡದ ಜಡಿ ಮಳೆಯಲ್ಲಿ ಸಿಕ್ಕು ನಾಲ್ಕು ದಿನದಿಂದ ಚಳಿ ಜ್ವರದಿಂದ ನರಳುತ್ತ ಮನೆ ಕೆಲಸ ಸರಾಗವಾಗಿ ನಡೆಸಿದ್ದಳು. ಕಡೆಗೊಂದಿನ ಮಗನ ಕಡೆಯಿಂದ ಸ್ಟೇಷನ್'ಗೆ ಗಂಡನನ್ನು ಬರ ಹೇಳಿ ಕಳುಹಿಸಿದಾಗ, ರೈಲ್ವೆ ಉದ್ಯೋಗವೇ ಸರ್ವಸ್ವ ಎನ್ನುವ ಮಟ್ಟಿಗೆ ವರ್ತಿಸಿದ್ದು. ನಡುರಾತ್ರಿ ಮನೆಗೆ ಬಂದಾಗ ಮುರ್ಚಾವಸ್ತೆಯ ಮಡದಿಯನ್ನು ನೋಡಿ, ಏನು ಮಾಡಬೇಕೆಂದು ತಿಳಿಯದೆ, ಕೆಲವೇ ಘಳಿಗೆಯಲ್ಲಿ ಕಣ್ಣು ಮುಚ್ಚುವದನ್ನು ಕಣ್ಣಾರೆ ನೋಡಿದ್ದ ನೆನಪು. ಘಟ್ಟದ ಕೆಳಗಿರುವ ಹೆಂಡತಿಯ ತಮ್ಮನ ತೋಟದ ಮನೆಗೆ ನಾಲ್ಕು ಮಕ್ಕಳನ್ನು ಬಿಟ್ಟು ಬಂದು ಎರಡು ವರ್ಷಗಳೇ ಕಳೆದಾಗಿತ್ತು. ಬಂಗಾರದಂತಹ ಸುಂದರವಾದ ತನ್ನ ಸಂಸಾರ ಇದ್ದಾಗ ಅದರ ಮಹತ್ವ ಅರಿಯದೆ, ಮೂಲೆ ಗುಂಪಾದ ಜೀವನ ನೆನಪು ತಂದಿತ್ತು ಸಾಬಿಯ ಪಚ್ಚೆ.... *ಈ ವಿಧುರ ರೈಲ್ವೆ ಸಾಹೇಬನಿಗೆ.*

ಶತ ಶತಮಾನಗಳಿಂದ ಜೀವನದ ಮೌಲ್ಯತೆಗಳು ಹೊರಗಣ್ಣು ಮತ್ತ ಒಳಗಣ್ಣಿನಿಂದ ಮರೆಮಾಚಿದಂತು ನಿಜ. ಭರತಖಂಡ ಪರದೇಶದವರ ಆಳ್ವಿಕೆಯಲ್ಲಿ ಮೊದಲೇ ಯೊಚಿಸಿ ವ್ಯವಸ್ತಿತವಾಗಿ ಭಗ್ನಗೊಳಿಸುವ ಹುನ್ನಾರವಿತ್ತು. ಅದನ್ನು ಭಾಷೆಯಲ್ಲಿ, ಧರ್ಮದಲ್ಲಿ, ಆಚಾರ-ವಿಚಾರಗಳಲ್ಲಿ, ಪ್ರತಿಯೊಂದರಲ್ಲಿ ಸಾಮ, ವೇದ, ದಂಡ ಗಳಿಂದೊಡಗೂಡಿ ಆಮೂಲಾಗ್ರಹ ಬದಲಿಸಲಾಗಿತ್ತು.

ನಮ್ಮವರ ಒಳ ಜಗಳದಿಂದಾಗಿಯೋ ಅಥವಾ ಸಾಬಿಯಂತೆ ಅಮೂಲ್ಯ ಪಚ್ಚೆಯ ಅರಿವಿಲ್ಲದೆಯೇ ಕೆಲವರ ಜುಜುಬಿ ಆಸೆಗೆ ತಮ್ಮನ್ನು ತಾವು ಮಾರಿಕೊಂಡು, ಸಂಪತ್ತಿನ ಆಗರದಂತಿದ್ದ ನಮ್ಮ ಸನಾತನ ಧರ್ಮ, ಸುಸಂಸ್ಕೃತಿ, ಸಂಸ್ರೃತ ಭಾಷೆ ಪರರಿಗೆ ಕೊಟ್ಟು, ಅವರನ್ನು ಸಂತೋಷಿಸಲು ಅವರ ಭಾಷೆ, ತಳಬುಡವಿಲ್ಲದ ಅವರ ನಡವಳಿಕೆ ಅನುಕರಿಸುವತ್ತಿರುವೆವಲ್ಲ? ಶಮಂತಕ ಮಣಿಯಂತಿರುವ ನಮ್ಮ ತನವೆಂಬ (Individual identity) ಸತ್ಯವನ್ನು ಅರಿಯದೆ, ಮರೆತು ಗುಂಪಿನಲ್ಲಿ ಗೋವಿಂದವಾದರೆ ನಮ್ಮ ಅಸ್ತಿತ್ವವೇ ಇಲ್ಲದಾಗುವದು, ಎಂದು ಅಲ್ಲಿರುವ ಪ್ರಯಾಗ ರಾಯರ ಮನದಲ್ಲಿ ಈ ಸನ್ನಿವೇಶ ನೆನಪಾಗಿ ಖೇದದ ತುಡಿತವಿತ್ತು.ಅದನ್ನು ಎಲ್ಲರೊಂದಿಗೆ ಹಂಚಿಕೊಂಡಾಗ, ತಡಸ ಜಯರಾಯರು, ಹಾಗಾದರೆ ಈ ವ್ಯೂಹ ದಿಂದ ನಮ್ಮವರನ್ನು ಹೊರತರುವದು ಮರೆಮಾಚಿದ ಪಚ್ಚೆ'ಯಂತಿರುವ ಸನಾತನ ಧರ್ಮ ಸಂಘಟನೆ'ಯಿಂದಲೇ ಸಾದ್ಯ ಎನ್ನುವ ನಿರ್ಣಯಕ್ಕೆ ಬಂದರು. ಆರೋಗ್ಯ, ಸಂಪತ್ತು, ನಡೆ, ನುಡಿ, ಆಚಾರ, ವಿಚಾರ, ಧರ್ಮ, ಭಾಷೆ, ಸಾಂಪ್ರದಾಯಗಳಂತ ನವರತ್ನಗಳನ್ನು ಕ್ರೋಢೀಕರಿಸಿ ಮತ್ತೆ ರಾಮ ರಾಜ್ಯವನ್ನಾಗಿ ಮಾಡುವ ಹಸಿವು ಅಲ್ಲಿದ್ದ ಎಲ್ಲರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಎಲ್ಲಿಯ ಸಾಬಿಯ ಕುದುರೆ ಮುಖವಾಡ, ಎಲ್ಲಿಯ ರಾಮ ರಾಜ್ಯದ ಪರಿಕಲ್ಪನೆ. ಅಂತರಾತ್ಮದ ಅಗ್ನಿ ಪುಟಗೊಂಡಿತ್ತು. ಅದಕ್ಕೆ ತುಪ್ಪ ಹಾಕುತ್ತ ನಿರಂತರ ಪ್ರಜ್ವಲಿಸುವಂತೆ ಮಾಡುವ ಅವಶ್ಯಕತೆ ಎದುರಿಗಿತ್ತು.

ಅದಾಗಲೇ ಶ್ರೀಯುತ ಬಾಳಗಂಗಾಧರ ಟೀಳಕರಿಂದ ೧೮೯೩ರಲ್ಲಿ *ಸಾರ್ವಜನಿಕ ಗಣೇಶೋತ್ಸವ* ಸಂಸ್ಕೃತಿ ಸಂಘಟನೆಯ ಉದ್ದೇಶವಿಟ್ಟು ನಾಂದಿ ಹಾಡಿ ಆಗಿತ್ತು.

ಹೀಗೆ ಮುಂದೆ ಸ್ವಾತಂತ್ರ್ಯ ಸಿಕ್ಕ ನಂತರ ಹೊಸ ಹೊಸ ಸಮಸ್ಯೆಗಳು ಎದುರಾದವು. ಸ್ವಾತಂತ್ರ ಗಳಿಸದ ಕೈಗಳಲ್ಲಿ, ದೇಶ ಕೊಟ್ಟಾಗಿತ್ತು. ಬಲಹೀನರ ಕೈ'ಸೆರಿಯಾಗಿತ್ತು. ಅಖಂಡ ಭರತಖಂಡವನ್ನು ಖಂಡ ಖಂಡವಾಗಿ ತುಂಡರಿಸುವ ಕಾರ್ಯ ಸುರುಆಗಿತ್ತು. ಅದರಲ್ಲಿ ದಕ್ಷಿಣ ಭಾರತದಲ್ಲಿ ಪ್ರಮುಖ ವಾದದ್ದು ರಜಾಕಾರರ ಹಾವಳಿ. ಹೈದರಾಬಾದ್ ತುರಕರಿಂದ ಘೋರ ಹತ್ಯೆಗಳಾದವು. ಆ ಸಮಯದಲ್ಲಿ ಮನೆ ಮಠ ಬಿಟ್ಟ ಎಷ್ಟೋ ಸಂಸಾರಗಳಿಗೆ ಧಾರವಾಡ ಆಶ್ರಯ ಕೋಟ್ಟಿತ್ತು. ಹೀಗೆ ಎಷ್ಟೋ ವಿಷಯಗಳನ್ನು ನಮ್ಮ ತಾತ ಮೇಲಿಂದ ಮೇಲೆ ಹೇಳುತ್ತಿದ್ದರು.

*ಕಳೆದುಕೊಂಡದ್ದಂತು ಆಯಿತು. ಇನ್ನೂ ಉಳದದ್ದನ್ನು ಬೆಳೆಸಿಕೊಂಡು ಹೋಗುವ ಚಿಂತನೆ ಪ್ರತಿಯೊಬ್ಬರಲ್ಲಿ ನೆಲೆಸಬೇಕಾಗಿದೆ...* ಪಾಶ್ಚಾತ್ಯರ ಭಾಷೆ ನಡೆ ನುಡಿ ಮಿಶನರಿಗಳಿಂದ ಪಚ್ಚೆಯ ಮೇಲೆ ಎಣ್ಣೆ'ಮಸಿ ಕೂಡಿಸುವ ಕಾರ್ಯ ಶತಮಾನಗಳಿಂದ ನಡೆದು ಬಂದಿದೆ. ಮೊದಲು ಕುದುರೆ ತಲೆ ಪಟ್ಟಿಯಲ್ಲಿರುವ ಗಾಜು", ಗಾಜಾಗಿರದೆ ಮಸಿಗಟ್ಟಿದ ಅಮೂಲ್ಯ ಪಚ್ಚವೆಂಬ ಅರಿವು ಬಂದಾಗ ಮಾತ್ರ, ಅದನ್ನು ಪಡೆಯುವ ಛಲ ಜಾಗ್ರತವಾಗುತ್ತದೆ.

_ಶ್ರೀರಾಮ ಮಂದಿರದ ಭೂಮಿ ಪೂಜೆಯ ಶುಭ ಸಂದರ್ಭದಲ್ಲಿ ಹಳೆಯ ನೆನಪುಗಳನ್ನು ನೆನೆದು ಬರೆದ ಲೇಖನ._

ನಾ ಶ್ರೀ ಹೆಬ್ಳೀಕರ್*

ಸನ್ನಿವೇಲ್, ಕ್ಯಾಲಿಫೋರ್ನಿಯಾ.

ಅಗಸ್ಟ ೫, ಲಾಕ್ ಡೌನ್ ವರ್ಷ, ೨೦೨೦

Comments

  1. ಅಜ್ಜ ಹೇಳಿದ್ದು ನೆನಪಿನಲ್ಲಿಟ್ಟು ಇಷ್ಟು ಚೆನ್ನಾಗಿ ಬರೆದಿದ್ದೀರಿ. ಹಿಂದಿನ ಸವಿ ನೆನಪುಗಳೇ ಅದೆಷ್ಟು ಸೊಗಸು.ಲೇಖನದಲ್ಲಿ ತಮ್ಮ ವಿವರಣೆ ಚೆನ್ನ

    ReplyDelete

Post a Comment