ಕರ್ನಾಟಕದ ದಾಸರು ಹಾಗು ದಾಸ ಸಾಹಿತ್ಯ

 ಕರ್ನಾಟಕದ ದಾಸರು ಹಾಗು ದಾಸ ಸಾಹಿತ್ಯ 

ಲೇಖನ - ಶ್ರೀ ರಾಘವೇಂದ್ರ 


                                   ಶ್ರೀ ಸಾಮಾನ್ಯನಿಗೂ ತಾರತಮ್ಯವಿಲ್ಲದೇ  ಭಗವದ್ಭಕ್ತಿಯ ರಸದೌತಣ, ಭಗವದಾಶ್ರಯದ ಶಾಂತಿ, ಹೃದಯಕ್ಕೆ ಸಂತೃಪ್ತಿ, ಮನಸ್ಸಿಗೆ ಆನಂದ, ದೈವೀ ಸ್ಪರ್ಶ, ಭಗವತ್  ಸಾಕ್ಶಾತ್ಕಾರ, ಆನಂದಶ್ರುವಿನ ಆರ್ದ್ರತೆ, ಹೃದಯತುಂಬಿಸಿ ಬಂದ ಉದ್ಗಾರದ ಕೀರ್ತನ, ಸಂತೋಷದ ನರ್ತನ - ಇವುಗಳನ್ನು, ಮನೆ ಮನೆಗೂ, ಮನ ಮನಕ್ಕೂ ಭಕ್ತಿ ಪಥದ ಸಂತರು ತೋರಿದರು. ಭಗವತ್ ಪ್ರೇಮವೆಂಬ ಸೂತ್ರದಿಂದ ಹೃದಯಗಳನ್ನು ಪೋಣಿಸಿ, ಮಾನವೀಯತೆಯಿಂದ ಮನಸ್ಸುಗಳನ್ನು ಜೋಡಿಸಿ, ದಿವ್ಯ ಬೆಳಕನ್ನು, ಸತ್ಯಾನಂದದ ಬಾಳ್ವೆಯನ್ನು, ವ್ಯಷ್ಟಿಯಲ್ಲಿಯೂ ಸಮಷ್ಟಿಯಲ್ಲಿಯೂ ಜೀವಿಸಿ ಸುಲಭ ಪ್ರಾಯೋಗಿಕವಾಗಿ ತೋರಿಸಿ ಭಕ್ತರೇ ದಾಸರೆಂಬ ಹೆಸರಿನಲ್ಲಿ ಕರೆಯಲ್ಪಟ್ಟರು.

ಸೃಷ್ಠಿಕರ್ತ ಬ್ರಹ್ಮನ ಮಾನಸ ಪುತ್ರರಾದ ನಾರದರಿಂದ ಭಕ್ತಿಪಥವು ಸೂತ್ರಗಳ ಸ್ವರೂಪದೊಂದಿಗೆ ಬೆಳಕಿಗೆ ಬಂದಿತು. ಶ್ರೀ ಸಾಮಾನ್ಯನಿಗೆ ಊಹಿಸಲೂ ಆಗದ ಸಂಕಷ್ಟಗಳನ್ನು ಚಿಕ್ಕಂದಿನಂದಿಲೂ  ಎದುರಿಸಿ ಭಕ್ತಿಯ ಮಹಿಮೆಯನ್ನು ಎತ್ತಿಹಿಡಿದು ಜನಮಾನಸದಲ್ಲಿ ಭಕ್ತಿಯಶಕ್ತಿಯನ್ನು ಸ್ಥಿರವಾಗಿ ನೆಟ್ಟಿದ್ದು ಪ್ರಹ್ಲಾದರಾಯರು. ಭಗವದ್ದಾಸ್ಯವನ್ನು ಮೆರೆದು 'ರಾಮ' ನಾಮಸ್ಮರಣೆಯ ಹಿರಿಮೆಯನ್ನು ತೋರಿದವರು ಹನುಮಾನ್ ದೇವರು. ಬೀದಿ ಬೀದಿಯಲ್ಲಿಯೂ 'ಕೃಷ್ಣ' ನಾಮ ಸಂಕೀರ್ತನ, ಭಜನೆ, ನರ್ತನವನ್ನು ತಂದು ಭೇದಭಾವವಿಲ್ಲದೇ ಸರ್ವರಿಗೂ ಭಗವತ್ ತಂಪು ಪರಿಚಯಿಸಿದ್ದು ಶ್ರೀ ಚೈತನ್ಯ ಮಹಾಪ್ರಭುಗಳು. 

ಹೀಗೇ ಮುಂದುವರೆದು ಶ್ರೀಪಾದರಾಜರು, ವ್ಯಾಸರಾಜರು, ಪುರಂದರದಾಸರು, ಕನಕದಾಸರು, ರಾಘವೇಂದ್ರ ಸ್ವಾಮಿಗಳು, ಹರಪ್ಪನಹಳ್ಳಿ ಭೀಮವ್ವನವರು, ಹೆಳೆವನಕಟ್ಟೆ ಗಿರಿಯಮ್ಮನವರು ಮತ್ತು ಹಲವಾರು ದಾಸರು ಕನ್ನಡಿಗರೊಂದಿನಲ್ಲಿ ಬಾಳಾಟವನ್ನು ನಡೆಸಿ, ಕನ್ನಡಿಗರ ಮನಸ್ಸಿನಲ್ಲಿ ಭಕ್ತಿಯ ಉಜ್ವಲ ದೀಪವನ್ನು ಸ್ಥಾಯಿಯಾಗಿ ಉಳಿಸಿ ಬೆಳೆಸಿ, ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿ, ಅದರಿಂದ ಶತಶತಮಾನಗಳಾವಾದರೂ ಭಕ್ತಿಯ ಕಂಪನ್ನು ಹೃದಯಗಳಿಗೆ ಪಸರಿಸುತ್ತಲೇ ಬಂದಿದ್ದಾರೆ. 

ಸೃಷ್ಠಿಗೆ ಮೂಲ ನಾದ. ಶಬ್ದದಿಂದ ಸೃಷ್ಠಿ ಪ್ರಕಟ. ಸೃಷ್ಠಿಯೆಂದರೇ ಶಬ್ದವೇ. ನಾದ ಹಾಗು ಶಬ್ದಗಳನ್ನು ಬಳಸಿ, ಭಕ್ತಿಯನ್ನು ಬೆಳೆಸಿ, ಹೃದಯವನ್ನು ಅರಳಿಸಿ, ಭಗವಂತನನ್ನು ಬರಮಾಡಿಕೊಂಡು ಭಗವಂತನಲ್ಲಿ ಐಕ್ಯವಾಗುವುದೇ ಭಕ್ತಿಯೋಗವು.  

ಅವರ ಶುದ್ದಾಂತರಂಗದ ಹಾಗು ಸುಶಿಕ್ಷಣ ಹಾಗು ತರಬೇತಿಯ ದೆಸೆಯಿಂದ, ಭಗವದ್ಭಕ್ತಿಯ ಆಳದಲ್ಲಿ ಮುಳುಗಿದ್ದುದರ ವತಿಯಿಂದ, ಅವರ ಹೃದಯದಿಂದ ನೈಜವಾಗಿ ಹೊರಹೊಮ್ಮಿದ ಉದ್ಗಾರಗಳೇ, ಆಕ್ರೋಷಗಳೇ, ಅಂತರಾಳದ ಕೂಗುಗಳೇ ಅವರ ಸಾಹಿತ್ಯ, ದಾಸ ಸಾಹಿತ್ಯವಾಗಿ ಸ್ವರೂಪತಾಳಿತು.

ಸಾಮಾನ್ಯವಾಗಿ 'ದಾಸ', 'ದಾಸ್ಯ' ಪದಗಳಿಗೆ ನಿರ್ಗತಿಕನು, ನಿಶ್ಶಕ್ತನು ಎಂಬ ಅರ್ಥಗಳನ್ನು ಹೊರಿಸಿ ತಿಳಿದುಕೊಳ್ಳುತ್ತಿದ್ದಾರೆ ಇದು ನನ್ನ ವಯ್ಯಕ್ತಿಕ ಅಭಿಪ್ರಾಯವಲ್ಲ ಮತ್ತು ಸರಿಯಲ್ಲವೂ ಕೂಡ. ಪ್ರಹ್ಲಾದರಾಯರನ್ನು ನೆನೆದರೇ, ವೀರ ಹನುಮನ ನೆನೆದರೇ, ನಿರ್ಗತಿಕತೆ, ನಿಶ್ಶಕ್ತತೆ ತಿಳಿಯುತ್ತೇವೆಯೇ? ಸಾಧ್ಯವೇ ಇಲ್ಲ. ಪುರಂದರದಾಸರು ನವಕೋಟಿ ನಾರಾಯಣರಾಗಿದ್ದವರು, ನಿರ್ಗತಿಕರಾಗಿದ್ದವರಲ್ಲ. ಅವರು ಹೇಳಿದರು - "ದಾಸನ ಮಾಡಿಕೋ ಎನ್ನ, ಸ್ವಾಮೀ".  ಕನಕದಾಸರು ತಿಮ್ಮಪ್ಪ ಯೋಧರಾಗಿದ್ದವರು, ನಿಶ್ಶಕ್ತರಾಗಿದ್ದವರಲ್ಲ. ಅವರು ಹೇಳಿದರು - "ದಾಸನಾಗು ವಿಶೇಷನಾಗು". ಅಂದರೇ ಭಗವದ್ದಾಸ್ಯವು ವಿಶೇಷವಾದದ್ದು. 'ದಾಸ್ಯ' ಎಂಬ ಪದದಲ್ಲಿ ನಾವು ಗ್ರಹಿಸಬೇಕಾದ ಅರ್ಥವೆಂದರೆ - ದೇವರಲ್ಲಿನ ನಿಷ್ಠೆ. ನಿಷ್ಠೆಯೆಂದರೆ ಮನಸ್ಸು ಸದಾ ಆತನ ಕಡೆಯೇ ತಿರುಗಿರುವುದು. ಆತನಲ್ಲಿಯೇ ಐಕ್ಯತೆಗಾಗಿ ಪರಿತಾಪಿಸುವಿಕೇ, ಆತನವನು ನಾನು ಎಂಬ ಧೃಡ ನಿಶ್ಚಯ, ಆತನ ಆಜ್ಞೆಯನ್ನು ನಡೆಸುವುದೇ ನಮ್ಮ ಕರ್ತವ್ಯ ಹಾಗು ಸೇವೆ ಎಂಬ ಅರಿವು, ಸರ್ವ ಶಕ್ತನಾದ ಆತ ನನ್ನೊಟ್ಟಿಗಿದ್ದಾನೆ ಎಂಬ ನಿರ್ಭಯತ್ವ, ಮನೋ ಸ್ಥಿರತೆ, ಧೈರ್ಯ - ಈ ಅರ್ಥಗಳು ಅಲ್ಲಿ ನನಗೆ ತೋರುತ್ತವೆ. ಇಲ್ಲಿ ಪುರಂದರ ದಾಸರ ಧೈರ್ಯ ಸೂಕ್ತಿ "ಬಂದದೆಲ್ಲಾ ಬರಲಿ, ಗೋವಿಂದನ ದಯೆಯೊಂದಿರಲಿ", ಮನೋ ಸ್ಥಿರತೆಯ ಸೂಕ್ತಿಗಳಾದ: "ಮತ್ಸರಿಸುವರೆಲ್ಲ ಕೂಡಿ ಮಾಡುವುದೇನು, ಅಚ್ಯುತ ನಿನದೊಂದು ದಯೆಯಿರಲು", "ಧಾಳಿಲಿ ಕುದುರೆಯು ವೈಯಾರದಿ ಕುಣಿಯಲು ಧೂಳು ರವಿಯ ಮೇಲೆ ಮುಸುಕುವುದೇ!", "ಗಾಳಿಗೆ ಗಿರಿಯು ಅಲ್ಲಾಡಬಲ್ಲುದೇ ರಂಗ" - ಇವುಗಳನ್ನು ಸ್ಮರಿಸಬಹುದು. 

ಈ ವಿಶೇಷದಾಸನ ಗುರಿಯಾದರೂ ಏನು? ದೇವರಲ್ಲಿ ಐಕ್ಯತೆಯೇ ಗುರಿ. ಪರಮ ಗುರಿಯಿಲ್ಲದ ನಮ್ಮ ಬದುಕುಗಳಿಗೆ ಆ ದೇವರಲ್ಲಿನ ಐಕ್ಯತೆಯ ಗುರಿಯನ್ನೇ ದಾಸ ಸಹಿತ್ಯವು ನಮಗೆ ಪರಿಚಯಿಸಿ, ದಿಕ್ಸೂಚಿಯಾಗಿ ಚಿತ್ತದಲ್ಲಿ ಇಣುಕಿ, ಸ್ಮೃತಿಯಲ್ಲಿ ನಿಲ್ಲಿತ್ತದೆ. ಕೆಲವು ದಾಸ ಸಾಹಿತ್ಯದ ಸೂಕ್ತಿಗಳು ಇಲ್ಲಿದೆ. 

"ಕೃಷ್ಣಾ ನೀ ಬೇಗನೇ ಬಾರೋ, ಮುಖವನ್ನು ತೋರೋ.." - ಶ್ರೀ ವ್ಯಾಸರಾಜರು.

"ಇಂದು ಎನಗೆ ಗೋವಿಂದ, ನಿನ್ನಯ ಪಾದಾರವಿಂದವ ತೋರೋ ಮುಕುಂದನೇ" - ರಾಘವೇಂದ್ರ ಸ್ವಾಮಿಗಳು.

"ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ, ಕೂಗಿದರೂ ಧ್ವನಿ ಕೇಳಲಿಲ್ಲವೇ ನರಹರಿಯೇ" - ಕನಕದಾಸರು.

"ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀ ಹರಿ" - ವಿಜಯದಾಸರು.

ಏತಕ್ಕಾಗಿ ಈ ಗುರಿ? ದೇವನನ್ನು ಪಡೆದು ಆಗಬೇಕಾದದಾರೂ ಏನು? ಇದಕ್ಕೆ ಕನಕದಾಸರು ಹೇಳುತ್ತಾರೆ: "ನಾರಾಯಣ ಅಚ್ಯುತ ಅನಂತಾದಿ ಕೇಶವನ ಸಾರಾಮೃತವನುಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ". ಆತನನ್ನು ಪಡೆಯುದೇ ಪರಮ ಸುಖ, ಅದೇ ಅಮೃತತ್ವವು. ಅದಿಲ್ಲದಿರುವುದೇ ಲಂಡ ಹಾಗು ಭಂಡ ಜೀವನವೆಂದು ನಿರ್ದಾಕ್ಷಿಣ್ಯವಾಗಿ ನುಡಿದಿದ್ದಾರೆ. 

ಈ ಗುರಿಯನ್ನು ತಲುಪುವುದಾದರೂ ಹೇಗೆ? ಪರಮ ಸುಖವನ್ನು, ಅಮೃತತ್ವವನ್ನು ಹೊಂದುವುದಾದರು ಹೇಗೆ? ದಾಸ ಸಾಹಿತ್ಯದ ರತ್ನಗಳನ್ನು ಶೋದಿಸಿ ನೋಡೋಣ.

“ಗುರುವಿನ ಗುಲಾಮವಾಗುವ ತನಕ ದೊರೆಯದಣ್ಣ ಮುಕುತಿ"

"ಅಂಬಿಗ ನಾ ನಿನ್ನ ನಂಬಿದೆ, ಜಗದಂಬಾ ರಮಣ ನಿನ್ನ ನಂಬಿದೆ" 

"ನೀನ್ಯಾಕೊ ನಿನ್ನ ಹಂಗ್ಯಾಕೊ, ನಿನ್ನ ನಾಮದ ಬಲ ಒಂದಿದ್ದದರೇ ಸಾಕೋ",

"ನಿನ್ನ ನಾಮಕೆ ಸರಿ ಕಾಣೆನು ಜಗದೊಳು"

"ಕರುಣಿಸೋ ರಂಗ, ಕರುಣಿಸೋ, ಹಗಲು ಇರಳು ನಿನ್ನ ಸ್ಮರಣೆ ಮರೆಯದಂತೆ ಕರುಣಿಸೋ"

"ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕ್ತಿಯನ್ನು ಬೇಡುಕಂಡ್ಯ ನೀ ನೋಡುಕಂಡ್ಯ"

"ಕೃಷ್ಣನ ಎಲ್ಲಿ ನೋಡಿದಿರಿ? ... ಶ್ರೀ ಗುರೂಕ್ತ ಸದಾ ಸುಮಂಗಳ ಯೋಗ ಯೋಗದಲಿ!, ಭಾಗವತರು ಬಾಗಿ ಹಾಡುವ ರಾಗ ರಾಗದಲಿ!, ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ"

"ನಂಬಿ ಕೆಟ್ಟವರಿಲ್ಲವೊ"

"ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ"

"ಭಕ್ತಿ ಬೇಕು ವಿರಕ್ತಿ ಬೇಕು ಸರ್ವಶಕ್ತಿ ಬೇಕು ಮುಕ್ತಿಯ ಬಯಸುವಗೆ"

"ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀ ಹರಿ"

ಸಂಗ್ರಹಿಸಿ ಹೇಳುವುದಾದರೇ - ಗುರುವಿನ ಆಶ್ರಯ ಸಿಗಬೇಕು, ಧೃಡವಾದ ನಂಬಿಕೆ ಅಥವ ಶ್ರದ್ಧೆ ಬೆಳೆಸಿಕೊಳ್ಳಬೇಕು, ದೇವರಿಗಾಗಿ ಹಂಬಲವಿರಬೇಕು, ಪ್ರೇಮವಿರಬೇಕು, ಅಂತರಾಳದಿಂದ ಆತನಲ್ಲಿ ಐಕ್ಯವಾಗಲು ಕೂಗು ಇರಬೇಕು, ಸತ್ಸಂಗದಲ್ಲಿ ಇರಬೇಕು, ಆತನ ನಾಮಸ್ಮರಣೆ ಹಾಗು ಗುರುವಿನ ಮಾರ್ಗದರ್ಶನದಲ್ಲಿನ ಧ್ಯಾನಯೋಗದ ಸಹಾಯದಿಂದ ದೇವರನ್ನು ಹೊಂದಬಹುದು.

ಹೀಗೆ ದಾಸರು ತಮ್ಮ ಹೃದಯಸಿರಿಯನ್ನು ಸಾಹಿತ್ಯದ ಮೂಲಕ ಧಾರೆಯೆರೆದು, ನಮ್ಮೆಲ್ಲರಿಗೆ ಜೀವನದ ಗುರಿಯೇನು? ಅದನ್ನು ಪಡೆಯುವುದು ಹೇಗೆ? ಎಂಬುದನ್ನು ಭಗವದ್ ಭಾಸವನ್ನು ನಮ್ಮಲ್ಲಿ ಉದಯಿಸಿ, ಸರಳ ಭಾವದ ಹಾಡಿನ ಮುಖೇನ ನಮ್ಮ ಚಿತ್ತದಲ್ಲಿ ಭಗವತ್ ಪ್ರೇಮದ ಬೇಜವನ್ನು ಬಿತ್ತಿರುತ್ತಾರೆ. ನಾವುಗಳು ಭಕ್ತಿ ಕೀರ್ತನೆಗಳಿಂದ ಅದರ ಮೊಳಕೆಯೊಡಿಸಿ, ವಿನಮ್ರನಾಗಿ ಗುರುವಿನಾಶ್ರಯವನ್ನು ಪಡೆದು, ಪ್ರೇಮದಿಂದ, ಭಗವದ್ಧ್ಯಾನದಿಂದ, ಭಗವಂತನ ನಾಮಸ್ಮರಣೆಯಿಂದ, ಭಗವಂತನನ್ನು ಹೊಂದಿ ಭಾಗವತರಾಗಿ ಸಾರ್ಥಕವಾಗಿ ಬಾಳೋಣ.

“ಇಟ್ಹಾಂಗೆ ಇರುವೆನೊ ಹರಿಯೇ, ಎನ್ನ ದೊರೆಯೇ" - ಶ್ರೀಪಾದರಾಜರು. 

ಅತ್ಯಂತ ಕಠಿಣವೆನ್ನುವ ಅಧ್ಯಾತ್ಮ ಪಥದಲ್ಲಿ ಅತ್ಯಂತ ಸುಲಭವಾಗಿ ವಾತ್ಸಲ್ಯದಿಂದ ನನ್ನನ್ನು ಎತ್ತಿಕೊಂಡು ನಡೆಯುತ್ತಾ, ಧ್ಯಾನಾಭ್ಯಾಸದ ವತಿಯಿಂದ ದೈವೀ ಬೆಳಕು ಅವರಿಸಿಕೊಳ್ಳುವ ಹಾಗೆ ತರಬೇತಿ ನೀಡುತ್ತಾ, ಭಕ್ತಿಯ ಪರಿಮಳವನ್ನು ಹಾಗು ದಾಸರ ಜೀವನಮೌಲ್ಯಗಳನ್ನು ನನಗೆ ಭಾಸಮಾಡಿಸಿ, ಅದರ ಬೆಳಕನ್ನು ಈ ಶಬ್ದಗಳಲ್ಲಿ ಉಸಿರಿಸಿದ ಆಚಾರ್ಯವರ್ಯರಾದ ಶ್ರೀ ಸುರೇಶಕುಮಾರ ಮಾಕಮ್ (ಬೆಂಗಳೂರು) ರವರ ಚರಣರವಿಂದಗಳಲ್ಲಿ ಸಾಷ್ಟಾಂಗ ಪ್ರಣಾಮಗಳು.

ಲೇಖಕರು  - ಶ್ರೀ ರಾಘವೇಂದ್ರ 

Brisbane, Australia

Ph +61 434 972 953

raghavendra.kaundinya@gmail.com




Comments

  1. ಅತ್ಯುತ್ತಮ ಲೇಖನ ದಾಸ ಸಾಹಿತ್ಯದ ಬಗ್ಗೆ.

    ReplyDelete
  2. ಈ ಲೇಖನವೇ ಒಂದು ಶ್ರೇಷ್ಠ ದಾಸ ಕೃತಿಯಂತಿದೆ.

    ReplyDelete
  3. One of the quality article about Haridasa Sahithya. Probably you can write about each Haridasaru. Good narration and collection of dasarapadagalu

    ReplyDelete
  4. ಶ್ರೀ ರಾಘವೇಂದ್ರ ರವರೇ ಲೇಖನ ಸೊಗಸಾಗಿ ಮೂಡಿಬಂದಿದೆ. ಹಾಡುಗಳ ಸಂಗ್ರಹ, ಮಾಹಿತಿ ವಿವರಣೆ ಬಹಳ ಇಷ್ಟವಾಯಿತು. ದಾಸ ಮತ್ತು ಗುರಿ ಶಬ್ದಗಳ ವಿವರಣೆ ಚೆನ್ನಾಗಿದೆ. ತಾವು ದಾಸ ಸಾಹಿತ್ಯದಲ್ಲಿ ಇಷ್ಟು ಆಸಕ್ತಿ ತೋರಿರುವುದು ನೋಡಿದರೆ ದಾಸರ ಸುಳಾದಿ ಮತ್ತು ಮುಂಡಿಗೆಗಳ ಬಗ್ಗೆ ಬರೆಯಲು ಕೋರುತ್ತೇನೆ.

    ReplyDelete

Post a Comment